Desi Swara: “ಕಾಲ’ ಎಂಬ ಮಾಯಾ ಬಜಾರು !

ಅವಿರತವಾಗಿ ಉರುಳುವ ಕುತೂಹಲ, ಅಚ್ಚರಿ

Team Udayavani, Dec 9, 2023, 11:22 AM IST

Desi Swara: “ಕಾಲ’ ಎಂಬ ಮಾಯಾ ಬಜಾರು !

ಕಾಲ ಎನ್ನುವುದು ಅತೀದೊಡ್ಡ ಮಾಯೆ. ಈಗಿದ್ದಂತೆ ಮರುಕ್ಷಣವಿರುವುದಿಲ್ಲ. ನಮಗಿದ್ದಂತೆ ಇನ್ನೊಬ್ಬರಿಗಿರುವುದಿಲ್ಲ. ಇವತ್ತು ಯಾವುದು ದೊಡ್ಡ ವಿಚಾರವೋ ನಾಳೆಗೆ ಅದು ಬರೇ ಚರಿತ್ರೆ. ಇದೊಂದು ವಿಸ್ಮಯ.  ಮನುಷ್ಯ ಅದಕ್ಕೆಂದೇ ಕಾಲವನ್ನು ಅಳೆಯುವ ಹಲವು ಮಾಪನಗಳನ್ನು ಸೃಷ್ಟಿಸಿಕೊಂಡಿದ್ದಾನೆ. ತಾನು ಸೃಷ್ಟಿಸಿದ ಸಮಯದ ಘಟಕಗಳಿಗೆ ಕ್ಷಣ, ನಿಮಿಷ, ಗಂಟೆ, ದಿನ, ವಾರ, ತಿಂಗಳು, ವರ್ಷ ಎಂದೆಲ್ಲ ಹೆಸರಿಸಿದ್ದಾನೆ.

ಇವತ್ತು ಹುಟ್ಟು, ನಾಳೆ ಮರಣ. ಇವೆಲ್ಲಕ್ಕೂ ನಡುವೆ ನಾವು ಈ ರೀತಿ ಕಳೆಯುವ, ಕೂಡುವ ಕಾಲ ಒಂದು ರೀತಿಯ ವಿಡಂಬನೆ, ಅಳತೆಗೆ ಸಿಗದ ಅಗಾಧತೆ, ಅಚ್ಚರಿ, ಮಾಯೆ, ನೆನಪು ಏನೆಲ್ಲ ಆಗಿಬಿಡುತ್ತದೆ. ವಿಜ್ಞಾನಿಗಳಿಗೆ, ದಾರ್ಶನಿಕರಿಗೆ, ಚಿಂತಕರಿಗೆ, ಗಣಿತಜ್ಞರಿಗೆ, ಕವಿಗಳಿಗೆ, ಜನಸಾಮಾನ್ಯರಿಗೆ, ಖಭೌತಜ್ಞರಿಗೆ ಕೂಡ ಕಾಲದ ಆದಿಯಾಗಲಿ, ಅಂತ್ಯವಾಗಲಿ ಇದುವರೆಗೆ ಎಟುಕಿಲ್ಲ. ಕಾಲದ ಆಳ ಮತ್ತು ಹರವುಗಳ ಬಗ್ಗೆ ಪೂರ್ತಿ ತಿಳಿದಿಲ್ಲ.

ವಾಸ್ತವದಲ್ಲಿ ಕಾಲದ ಇರುವಿನ ಬಗ್ಗೆಯೇ ಯಾರಿಗೂ ಖಾತರಿಯಿಲ್ಲ. ದೇವರಂತೆ ಕಾಲವೂ ಮನುಷ್ಯ ಸೃಷ್ಟಿ ಅಥವಾ ಕಾಲದ ಅಗಾಧತೆಯಲ್ಲಿ ಮನುಷ್ಯ ಒಂದು ಸಣ್ಣ ದಾಳ ಅಥವಾ ಈ ಕಾಲವೇ ನಿಜವಾದ ದೇವರೇ? ಒಂದು “ಜೀವನ ಕಾಲ’ದಲ್ಲಿ ನಾವು ಪಡುವ ಸಂತಸ, ದುಃಖಗಳ ಯಾವ ಭಾವನೆಗಳನ್ನು ಬೇಕಾದರೂ ನಾವು ದಾಖಲಿಸಬಹುದು. ಆ ನೆನಪುಗಳನ್ನು ಬರಹದಲ್ಲಿ, ಚಿತ್ರಗಳಲ್ಲಿ ಹಿಡಿದಿಡಬಹುದು. ಆದರೆ ಕಾಲಕ್ಕೆ ಮಾಪನ ಇರಲಿಲ್ಲವೆಂದರೆ, ಆ ಚಿತ್ರ ಅಥವಾ ನೆನಪು ಕಾಲಕ್ಕೆ ಸಂದ ಸಾಕ್ಷಿಯಾಗಿ ಮಾತ್ರ ಆಗಿ ಉಳಿಯುತ್ತಿತ್ತು. ಆಕಾರವಿಲ್ಲದ ಈ ಕಾಲ ಹಾಗೆಯೇ ಜಾರಿಬಿಡುತ್ತಿತ್ತು. ಈಗಲೂ ಜಾರುತ್ತದೆ. ಆದರೆ ಕಾಲಮಾಪನದ ಕಾರಣ ಆ ಅವಧಿಗೊಂದು ಹೆಸರಿದೆ. ಹೀಗಾಗಿ ಕಾಲದ ಗಣನೆಗೆ ಎಲ್ಲವೂ ದಕ್ಕುತ್ತವೆ, ಎಲ್ಲರೂ ಸಿಲುಕುತ್ತಾರೆ.

ಮನುಷ್ಯ ಬಹಳ ಜಾಣ. ತನಗೆಟುಕದ್ದನ್ನ ತನಗೆ ತಿಳಿದ ರೀತಿಯಲ್ಲಿ ನಂಬುತ್ತಾನೆ. ಆ ನಂಬಿಕೆಯಲ್ಲೇ ಅದರ ಉಪಸ್ಥಿತಿಯನ್ನು ಅನುಭವಿಸುತ್ತಾನೆ. ಅದನ್ನು ಗುಣಿಸುತ್ತಾನೆ. ಇಲ್ಲವೇ ಸೃಷ್ಟಿಸಿಕೊಳ್ಳುತ್ತಾನೆ. ಅದಕ್ಕೂ ಮೀರಿದ್ದೇನಾದರೂ ಇದ್ದರೆ ಅದನ್ನು ಪೂಜಿಸಿಬಿಡುತ್ತಾನೆ. ಸಂಭ್ರಮಿಸುತ್ತಾನೆ.

ಅನುಕೂಲಕ್ಕೆ ತಕ್ಕಂತೆ ದಿನ – ರಾತ್ರಿಗಳು
ಚಳಿಗಾಲದಲ್ಲಿ ಪಾಶ್ಚಾತ್ಯ ದೇಶದ ದಿನದ ಬಹುತೇಕ ಕಾಲ ಕತ್ತಲೆಯಿರುತ್ತದೆ. ಈ ಹಿಂದೆ ದೀರ್ಘ‌ ರಾತ್ರಿಗಳು ಮತ್ತು ಸಣ್ಣ ಹಗಲುಗಳು ದೇಶದ ಉತ್ಪನ್ನಕ್ಕೇ ಅಡ್ಡಗಾಲು ಹಾಕಿದ್ದನ್ನು ಕಂಡು ಇವರು ಗಾಬರಿಬಿದ್ದರು. ಗಡಿಯಾರವನ್ನು ವರ್ಷಕ್ಕೆರಡು ಬಾರಿ ತಾವೇ ಹಿಂದಕ್ಕಿಟ್ಟು, ಮುಂದಕ್ಕಿಟ್ಟು ಹಗಲು ಮತ್ತು ರಾತ್ರಿಗಳ ಮಾಪನವನ್ನು ತಮಗೆ ಬೇಕಾದಂತೆ ಸರಿಪಡಿಸಿಕೊಂಡರು. ಅದು ಇಂದಿಗೂ ಚಾಲ್ತಿಯಲ್ಲಿದೆ.

ಇದೇ ಅಕ್ಟೋಬರ್‌ 29ರಂದು ಇಂಗ್ಲೆಂಡಿನ ಗಡಿಯಾರಗಳು ಒಂದು ಗಂಟೆ ಹಿಂದಕ್ಕೆ ಹೋದವು. 26 ಮಾರ್ಚ್‌ನಲ್ಲಿ ಅವು ಮುಂದಕ್ಕೆ ಹೋಗುತ್ತವೆ. ದಿನದ 24 ಗಂಟೆಗೆ ಇದರಿಂದ ಚ್ಯುತಿ ಬರದಿದ್ದರೂ, ಹಗಲು ಮತ್ತು ರಾತ್ರಿಯ ಕಾಲ ಕಿರಿದು-ಹಿರಿದಾಗುತ್ತವೆ.

ಪ್ರತೀ ಬಾರಿಯಂತೆ ಮತ್ತೆ ಇನ್ನೊಂದು ಹೊಸವರ್ಷ ಆರಂಭವಾಗಲಿದೆ. ಹೊಸವರ್ಷದ ಆಗಮನವನ್ನು ಎದುರು ನೋಡುವ ಮನುಷ್ಯ ಕಾಲದ ಹೊಸತಿನ ಬಗ್ಗೆ ತನ್ನ ನಂಬಿಕೆಯನ್ನು ಆಚರಿಸಲು ತಯಾರಾಗುತ್ತಿದ್ದಾನೆ. ಕುಚೋದ್ಯವೆಂದರೆ, ಪಾಶ್ಚಾತ್ಯರಿಗೆ ಬರುವ ಅದೇ ಹೊಸ ವರ್ಷ ಪೇಗನ್ನರಿಗೆ, ಚೀನಿಯರಿಗೆ, ಭಾರತೀಯರಿಗೆ, ಆಫ್ರಿಕನ್ನರಿಗೆ ಅವರವರ ಕ್ಯಾಲೆಂಡರಿನ ಪ್ರಕಾರ ಬೇರೆ ಬೇರೆ ದಿನ ಮತ್ತು ಋತುಗಳಲ್ಲಿ ಬರುತ್ತದೆ. ಆಯಾ ನೆಲದ, ಪ್ರಕೃತಿಯ, ನಂಬಿಕೆಗಳು, ಭೌಗೋಳಿಕತೆ, ಸಾಂಸ್ಕೃತಿಕತೆಯ ಜತೆ ತಳುಕುಹಾಕಿಕೊಂಡು ಕಾಲವನ್ನು ಹೊಸವರ್ಷವನ್ನಾಗಿ ಆಚರಿಸುವುದರಿಂದಲೇ ಈ ವ್ಯತ್ಯಾಸಗಳಿರುವುದು. ಅವರವರ ಅಳತೆಗೆ ತಕ್ಕಂತೆ ಹೊಸವರ್ಷಗಳು ಆರಂಭವಾಗುವುದು. ಕಾಲವೆನ್ನುವುದನ್ನು ನಾವು ಹೇಗೆ ಬೇಕಾದರೂ ಅಳವಡಿಸಿಕೊಳ್ಳಲು ಕಲಿತಿರುವುದನ್ನು ನೋಡಬಹುದು. ಹಾಗಾಗಿ ಕಾಲದ ಮಾಪನವೆನ್ನುವುದು ಸಂದೇಹವಿಲ್ಲದಂತೆ ಮನುಷ್ಯ ಸೃಷ್ಟಿ.

ಆದರೆ ಇದು ನಿಜವೇ?
ಮನುಷ್ಯ ಕ್ಷಣಗಳನ್ನು, ನಿಮಿಷಗಳನ್ನು, ಗಂಟೆಗಳನ್ನು, ವರ್ಷಗಳನ್ನು ಸೃಷ್ಟಿಸುವ ಮೊದಲೇ ಪ್ರಕೃತಿದತ್ತ ಋತುಗಳು ಇಂತದೇ ಯಾವುದೋ ಒಂದು ನಿಯಮವನ್ನು ಅನುಸರಿಸಿಯೇ ಸೃಷ್ಟಿಯಾದವಲ್ಲವೇ? ಅವುಗಳಿಗೆ ಮನುಷ್ಯ ಕಾಲಗಣನೆಯ ನಿಖರತೆ ಇಲ್ಲದಿದ್ದರೂ ಒಂದು ನಿಯಮಬದ್ಧತೆ ಇದೆಯಲ್ಲವೇ? ಭೂಮಿಯ ಸುತ್ತುವಿಕೆ, ಸೂರ್ಯನು ಬೆಳಗುವ ಕಾಲ, ರಾತ್ರಿಗಳಿಗೂ ಇದೇ ರೀತಿ ಕರಾರುವಕ್ಕುತನಗಳಿಲ್ಲದಿದ್ದರೂ ಮನುಷ್ಯ ನಿರ್ಮಿಸಿ ನಂಬಿದ ಕಾಲದಂತೆ ನಿಯಮಕ್ಕೆ ಬದ್ಧವಾಗಿ ನಡೆಯುತ್ತಿರುವ ನೈಸರ್ಗಿಕ ಕ್ರಿಯೆಯಲ್ಲವೇ? ಅದನ್ನು ನಾವು ಅಳೆಯುವುದಾಗಲೀ, ಅದು ಕರಾರುವಕ್ಕಾಗಿಲ್ಲ ಎನ್ನುವುದಾಗಲೀ ಮನುಷ್ಯ ಸೃಷ್ಟಿಸಿದ ಕಾಲಗಣನೆಯ ನಿಯಮಗಳ ಮಾಪನದಿಂದಲೇ ಅಲ್ಲವೇ? ಹೆಣ್ಣು ಋತುಮತಿಯಾಗುವುದು, ಗರ್ಭಧಾರಣೆಯ ಕಾಲ ಇವೆಲ್ಲ ಮನುಷ್ಯ ಕಾಲವನ್ನು ಅಳೆಯುವುದನ್ನು ಕಲಿಯುವ ಮೊದಲೇ ಸೃಷ್ಟಿಯಾದ ಬಹುತೇಕ ನಿಗದಿತ ಅವಧಿಗಳು.

ಜಾಣ ಮನುಷ್ಯರಾದ ನಾವು ಪ್ರಕೃತಿ ಈಗಾಗಲೇ ಜಾರಿಯಲ್ಲಿಟ್ಟ ಈ ಎಲ್ಲ ಋತುಚಕ್ರಗಳನ್ನು, ಭೂಮಿ ಸೂರ್ಯನ ಸುತ್ತ ಸುತ್ತಿ ಬರುವ ಕ್ರಿಯೆಯನ್ನು, ಚಂದಿರ ಭೂಮಿಯಿಂದ ಕಾಣುವ ರೀತಿಯನ್ನು ಎಲ್ಲವನ್ನೂ ಈ ಕಾಲಸೃಷ್ಟಿಯಲ್ಲಿ ಸೇರಿಸಿ ಕಾಲ ಅಸ್ತಿತ್ವದಲ್ಲಿ ಇರುವುದಕ್ಕೆ ಸಾಕ್ಷಿಗಳನ್ನು ಸೃಷ್ಟಿಸಿಕೊಂಡಿದ್ದೇವೆ. ಹಾಗಾಗಿ ಮನುಷ್ಯ ಸೃಷ್ಟಿಗೆ ಕಾಲ ಅತೀತ. ಕಾಲವೇ ಆದಿ, ಕಾಲವೇ ಅಂತ್ಯ. ಹಾಗಾಗಿ ಈ ಕಾಲದ ಬಗ್ಗೆ ಮನುಷ್ಯನಿಗೆ ಇನ್ನಿಲ್ಲದ ಕಾಳಜಿ. ಯಾವಾಗಲು ನಮ್ಮ ನಡುವೆಯೇ ಇರುವ ಕಾಲವನ್ನು ಹೊಸವರ್ಷದಂದು ಮನಸಾ ಸಂಭ್ರಮಿಸುವ ಭ್ರಮೆ.

ಒಂದು ಘಟ್ಟದಲ್ಲಿ ಈ ಹೊಸವರ್ಷಕ್ಕೆ ಬೇರೆಯೇ ಅರ್ಥವಿದ್ದುದು ನಿಜ. ಹೊಸವರ್ಷ ಆರಂಭವಾಗುತ್ತಿದ್ದುದು ಹೊಸ ಫ‌ಸಲು ಕೈಗೂಡುತ್ತಿದ್ದ ಚೈತ್ರಮಾಸದಲ್ಲಿ. ಪೇಗನ್ನರ ಕಾಲದಲ್ಲಿ ಹೊಸ ತಲೆಮಾರಿನ ಮೊಲ, ಕುರಿ, ಕೋಳಿಗಳು ಹುಟ್ಟಲು ಆರಂಭಿಸುತ್ತಿದ್ದುದು ಫೆಬ್ರವರಿ ತಿಂಗಳಲ್ಲಿ. ಅಂತೆಯೇ ಜನವರಿಯಲ್ಲಿ ಬರುವ ನಮ್ಮ ಸಂಕ್ರಾಂತಿ, ಎಪ್ರಿಲ್‌ನಲ್ಲಿ ಬರುವ ಪಾಶ್ಚಾತ್ಯರ ಈಸ್ಟರ್‌ ಹಬ್ಬಗಳು, ಎಲ್ಲ ಜಯಂತಿಗಳು, ಪುಣ್ಯ ತಿಥಿಗಳು, ವಾರ್ಷಿಕೋತ್ಸವಗಳ ಸಂಭ್ರಮೆಗಳೆಲ್ಲವೂ ಕಾಲದ ಆರಾಧನೆಗಳೇ. ಆದರೆ ಇಂದಿನ ಜಾಗತಿಕ ಮಟ್ಟದ ಜನವರಿ ಒಂದರ ಹೊಸವರ್ಷದ ಆಚರಣೆಗೆ ಪ್ರಕೃತಿಯ ಹಂಗಿಲ್ಲ.
ಈ ಹೊಸವರ್ಷದ ಆಚರಣೆಯ ವಿಜೃಂಭಣೆಗಾಗಿ ಇಡೀ ಜಾಗತಿಕ ಮಾರುಕಟ್ಟೆಯೇ ಟೊಂಕಕಟ್ಟಿ ನಿಲ್ಲುತ್ತದೆ.

ಇವತ್ತು ಪ್ರಪಂಚದಾದ್ಯಂತ ಹೊಸ ವರ್ಷದ ಆಚರಣೆ ವಾಣಿಜ್ಯ ವಾರ್ತೆಯಾಗಿ ಪ್ರತೀ ವರ್ಷ ಬೆಳೆಯುತ್ತಿರುವ ದೊಡ್ಡ ಉದ್ಯಮವಾಗಿದೆ. ಪೂರ್ವಭಾಗದಲ್ಲಿ ಹಣಕಾಸಿನ ವಿಚಾರದಲ್ಲಿ ಮುಂದೆ ಬರುತ್ತಿರುವ ಅಪಾರ ಜನಸಂಖ್ಯೆಯಿರುವ ದೇಶಗಳು ಇವರಿಗೆ ಇದೀಗ ಹೊಸ ಮಾರುಕಟ್ಟೆಗಳು.

ಭಾರತದ ಆರ್ಥಿಕ ಬೆಳವಣಿಗೆ ಹಲವಾರು ವರ್ಷಗಳಿಂದ ಏರುಮುಖವಾಗಿದೆ. ಹೀಗೇ ಬೆಳೆದರೆ 2025ರ ವೇಳೆಗೆ ಪ್ರಪಂಚದ 5ನೇ ಅತೀದೊಡ್ಡ ವಾಣಿಜ್ಯ ದೇಶವಾಗುತ್ತದೆ ಎನ್ನುವ ಅಂದಾಜಿದೆ. ಭಾರತದ ಇಂದಿನ ಜನಸಂಖ್ಯೆಯಲ್ಲಿ ಶೇ.50 ಜನರು ಮೂವತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಇವರ ಸಂಖ್ಯೆ 440 ಮಿಲಿಯನ್ನುಗಳನ್ನೂ ಮೀರಿದೆ. ಬೆಳೆಯುತ್ತಲೇ ಇದೆ. ಇವರಲ್ಲಿ 390 ಮಿಲಿಯನ್‌ ಜನರು 2000ನೇ ಇಸವಿಯ ಅನಂತರ ಹುಟ್ಟಿದವರು. ಇಂತವರು ಈ ಉದ್ದಿಮೆಗಳನ್ನು ಬೆಳೆಸುತ್ತಿರುವ ಹೊಸ ಗ್ರಾಹಕರು. ಆದರೆ ಹೊಸವರ್ಷದ ಆಚರಣೆ ನಿಜಕ್ಕೂ ಮನುಷ್ಯರಿಗೆ ನೀಡುವುದು ಮನುಷ್ಯ ಸೃಷ್ಟಿಯ ಈ ಕಾಲಗಣನೆಯನ್ನು ಸಂಭ್ರಮಿಸುವ ಅವಕಾಶವನ್ನೇ. ನಮ್ಮ ಬದುಕಿನ, ನಮ್ಮ ದಿನಗಳ ನಮ್ಮದೇ ಅನುಭಾವಕ್ಕೆ ತಕ್ಕಂತೆ ಈ ಆಚರಣೆ.

ಮೇಲೆ ಹೇಳಿದಂತೆ ಹುಟ್ಟಿದ ಹಬ್ಬಗಳು, ಸಾವಿನ ದಿನಗಳು, ಮದುವೆಯ ವಾರ್ಷಿಕೋತ್ಸವಗಳು, ಹಬ್ಬ ಹರಿದಿನಗಳು, ನೆನಪುಗಳ ಆಚರಣೆಗಳು ಎಲ್ಲಕ್ಕೂ ಕಾಲವೇ ಮೂಲಸ್ಥಂಭ. ಕಾಲದ ಲೆಕ್ಕಾಚಾರವಿಲ್ಲದೆ ಬದುಕಿಲ್ಲ ಎನ್ನುವ ಸ್ಥಿತಿ. ನಮ್ಮದೇ ಸೃಷ್ಟಿಯಲ್ಲಿ ನಾವೀಗ ಖುಷಿಯಾಗಿ ಬಂಧಿಗಳಾಗಿದ್ದೇವೆ. ನಮ್ಮ ಪೂರ್ವಜರು ಕಾಲದ ಟಿಕ್ಕು, ಟಿಕ್ಕುಗಳಿಲ್ಲದೆ ಬದುಕನ್ನು ದಿನ ರಾತ್ರಿಗಳ ಲೆಕ್ಕದಲ್ಲಿ ಕಳೆಯಿತ್ತಿದ್ದದನ್ನು ನಾವು ಮರೆತೇಬಿಡುತ್ತೇವೆ.

ಜತೆಗೆ ಸಮಯಕ್ಕೆ ಸದಾ ಅಭಾವ. ವೇಗದ ಬದುಕಿನ ಧಾವಂತವೇ ನಮ್ಮ ಬದುಕಿನ ಕಾಲವನ್ನು ಕಡಿಮೆಮಾಡುತ್ತಿರುವುದು , ಒತ್ತಡವನ್ನು ಸೃಷ್ಟಿಸುತ್ತಿರುವುದು. ಇದು ಹೇಗೆಂದರೆ ಕಾಲವೆನ್ನುವ ಮಾಯೆಗೆ ಬದುಕನ್ನು ಒಪ್ಪಿಸಿ ಅದರಂತೆ ಬದುಕು ನಡೆಸುವ ಮನುಜನಿಗೆ ಕೆಲವೊಮ್ಮೆ ಕಾಲದ ಬಗ್ಗೆ ಯೋಚಿಸಲು ಕೂಡ ಸಮಯವಿಲ್ಲ. ಹಲವರಿಗೆ ಹೊಸವರ್ಷದ ಸಂದರ್ಭ “ರಜೆ ತರುತ್ತದೆ’ ಎನ್ನುವ ಕಾರಣಕ್ಕೆ ಸಂತಸ ತರಿಸಬಹುದು. ಹೊಸತಿನ ಭಾವನೆಗಳನ್ನು ಇಷ್ಟಪಡುವ ಮನುಷ್ಯನಿಗೆ ಹೊಸತಾಗಿ ಕಾಲವನ್ನು ಸಂಭ್ರಮಿಸಲು ಅವಕಾಶ ಸಿಗುತ್ತದೆ. ಮತ್ತೆ ಕೆಲವರಿಗೆ ಇದು ತಮ್ಮ ಬದುಕಿನ ಒಂದು ಅವಧಿಯಲ್ಲಿ ತಾವು ಸಾಧಿಸಿದ ಸಾಧನೆಗಳ ಗಣನೆಯಾಗಬಹುದು. ಒಟ್ಟಾರೆ ಹೊಸವರ್ಷ ಎನ್ನುವುದು ಪ್ರತೀ ದಿನ-ರಾತ್ರಿಗಳ ಉರುಳುವಿಕೆಯಲ್ಲಿ ಮನುಷ್ಯ ಒಂದು ಬ್ರೇಕ್‌/ವಿರಾಮ ತೆಗೆದುಕೊಂಡು ನಿಂತು ಹಳತನ್ನು ಮುಗಿಸುವ, ಹೊಸತನ್ನು ಆರಂಭಮಾಡುವ ಅವಕಾಶವಾಗಿ ಮಸ್ತಿಷ್ಕದಲ್ಲೊಂದು ಗುರುತಾಗಬಹುದು.

ಒಟ್ಟಾರೆ ಹೊಸವರ್ಷ ಅನ್ನುವ ಗುರುತಿಲ್ಲದಿದ್ದಲ್ಲಿ, ಏಕತಾನವಾಗಿ ಉರುಳುತ್ತಲೇ ಇರುವ “ಕಾಲ’ ಎನ್ನುವ ಮಾಯೆ ಕೂಡ ಮನುಷ್ಯನಿಗೆ ಬೋರಾಗಿ ಬಿಡುವುದು ನಿಜ. ಆಕಾರ, ವಾಸನೆ, ರೂಪು ಇಂತಹ ಸಾಕ್ಷಿಗಳೇ ಇಲ್ಲದ ಕಾಲದ ಬೆರಗನ್ನು ಸಂಭ್ರಮಿಸದಿರಲು ನಮ್ಮಿಂದ ಸಾಧ್ಯವಿಲ್ಲ ಅಲ್ಲವೇ? ಆದರೆ ಅವಿರತ ಉರುಳುವ ಈ ಕಾಲ ಎನ್ನುವ “ಕುತೂಹಲ’ಕ್ಕೆ ಮಾತ್ರ ಅದಕ್ಕಾಗಿ ಅರೆಗಳಿಗೆ ನಿಂತು, ನಕ್ಕು, ಪೋಸು ಕೊಡಲು ಸಮಯವಿಲ್ಲ ಎನ್ನಬಹುದೇ?

*ಡಾ| ಪ್ರೇಮಲತಾ ಬಿ., ಲಿಂಕನ್‌

ಟಾಪ್ ನ್ಯೂಸ್

lakxmi

Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್

Kalaburagi: Shigavi result unexpected; We do not agree: C.T. Ravi

Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

11-kambala

Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!

Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ

Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

ಹೊಸ ಸೇರ್ಪಡೆ

lakxmi

Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್

13-uv-fusion

Childhood Days: ಮರಳಿ ಬಾರದ ಬಾಲ್ಯ ಜೀವನ

Kalaburagi: Shigavi result unexpected; We do not agree: C.T. Ravi

Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ

12-uv-fusion

UV Fusion: ಅಂದು ಇಂದು- ಮಕ್ಕಳೆಲ್ಲ ಈಗ ಮಾಡ್ರನೈಸ್ಡ್‌

ಖಂಡ್ರೆ

By Polls Result: ಪ್ರತಿಪಕ್ಷಗಳ ಸುಳ್ಳು ಆರೋಪಕ್ಕೆ ಜನಾದೇಶದ ಉತ್ತರ: ಖಂಡ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.