Desi Swara: UAE-ಚಿಮ್ಮುವ ಕಾರಂಜಿಯ ಸೊಗಸ ನೋಡಿರೇನು…ಆಕರ್ಷಣೆಯ ದುಬೈ ಫೌಂಟೇನ್
ಕಾರಂಜಿ ಐದು ವಿಭಿನ್ನ ಗಾತ್ರದ ವಲಯಗಳು ಹಾಗೂ ಎರಡು ಆರ್ಕ್‌ಗಳನ್ನು ಹೊಂದಿದೆ.
Team Udayavani, Sep 30, 2023, 12:10 PM IST
ಬರೀ ಮರಳುಗಾಡಾಗಿದ್ದ ಭೂಮಿಯು ಇಂದು ವಿಶಿಷ್ಟ ವಿನ್ಯಾಸಗಳಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಹೌದು ಇಂದಿಗೂ ಅಚ್ಚರಿಯಾಗಿ ಕಾಣುವುದು ದುಬೈನ ನಗರಗಳು. ಅಸಾಧ್ಯವೆನಿಸುವ ಗಗನಚುಂಬಿ ಕಟ್ಟಡಗಳು ಇಲ್ಲಿ ತಲೆಯೆತ್ತಿವೆ. ಎಲ್ಲರೂ ಹುಬ್ಬೇರಿಸಿ ನೋಡುವಂತಹ ವಿಭಿನ್ನ, ವಿಶೇಷ ವಿನ್ಯಾಸಗಳನ್ನು ಹೊಂದಿರುವ ಇಲ್ಲಿನ ಆಕೃತಿ, ಕಟ್ಟಡಗಳು ನೋಡಿದಷ್ಟು ಬೆರಗೇ ಮೂಡಿಸುತ್ತದೆ. ಅಂತಹದ್ದೇ ಅಚ್ಚರಿ ದುಬೈನ ಬಣ್ಣ ಬಣ್ಣದ ಕಾರಂಜಿ…
ರಂಗುರಂಗಿನ ಬಣ್ಣಗಳಿಂದ ಆಕಾಶದೆತ್ತರಕ್ಕೆ ಚಿಮ್ಮುವ ನೀರು, ಅದಕ್ಕೆ ಸರಿಯಾಗಿ ಕೇಳಿಸುವ ಸಂಗೀತದ ಸ್ವರ, ಇದನ್ನು ನೋಡುತ್ತಿದ್ದರೆ ಎರಡು ಕಣ್ಣುಗಳು ಸಾಲದು. ಇದು ವಿಶ್ವದ ಅತೀ ಎತ್ತರದ ಕಾರಂಜಿಯ ದೃಶ್ಯ. ಯುಎಇ ದೇಶದ ದುಬೈ ತನ್ನ ಹಲವು ವಿಶಿಷ್ಟ ವಿನ್ಯಾಸ, ವಿಸ್ಮಯಗಳಿಗೆ ಹೆಸರುವಾಸಿ. ಇದರ ಹೃದಯ ಭಾಗದಲ್ಲಿರುವ ವಿಶ್ವದ ಅತೀ ಎತ್ತರದ ಗಗನಚುಂಬಿ ಕಟ್ಟಡವಾದ ಬುರ್ಜ್ ಖಲೀಫಾ ಹಾಗೂ ಅದರ ಪಕ್ಕದಲ್ಲಿರುವ ವಿಶ್ವದ ಅತೀ ದೊಡ್ಡ ಶಾಪಿಂಗ್ ಮಾಲ್ ಎಂದು ಖ್ಯಾತಿ ಪಡೆದ ದುಬೈ ಮಾಲ್ ಇವರೆಡರ ಬುಡಕ್ಕೆ ತಾಗಿಕೊಂಡಿರುವುದೇ ಅತ್ಯುನ್ನತ ಆಕರ್ಷಣೆಯ “ದುಬೈ ಫೌಂಟೇನ್ ! ವಿಶ್ವದ ಅತೀ ದೊಡ್ಡ ಸಂಗೀತ ಕಾರಂಜಿ ಎಂದು ಕರೆಯಲ್ಪಡುವ ಈ ದುಬೈ ಕಾರಂಜಿಯು ( ದುಬೈ ಫೌಂಟೇನ್) ನೂರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಬುರ್ಜ್ ಖಲೀಫಾ ಮತ್ತು ದುಬೈ ಮಾಲ್‌ನ ಪಕ್ಕದಲ್ಲಿರುವ ಈ ಸಂಗೀತ ಕಾರಂಜಿ 30 ಎಕ್ರೆಯಷ್ಟಿರುವ ಬುರ್ಜ್ ಖಲೀಫಾದ ಸರೋವರದಲ್ಲಿ ನೆಲೆಗೊಂಡಿದೆ. ಇದನ್ನು ವೇಟ್ ಕಂಪೆನಿಯು ವಿನ್ಯಾಸಗೊಳಿಸಿದ್ದೂ, ಎಮಾರ್ ಸಂಸ್ಥೆ ಅಭಿವೃದ್ಧಿಪಡಿಸಿದೆ. 2009ರಲ್ಲಿ ದುಬೈ ಮಾಲ್ ಜತೆಗೆ ದುಬೈ ಫೌಂಟೇನ್ ಅನ್ನು ಉದ್ಘಾಟಿಸಲಾಯಿತು. ಸುಮಾರು 900 ಅಡಿ ಎತ್ತರಕ್ಕೆ ಈ ಕಾರಂಜಿಯು ನೀರು ಚಿಮ್ಮಿ ನೃತ್ಯ ಮಾಡಬಲ್ಲದು. ಆಕರ್ಷಣೀಯ ಬಣ್ಣಗಳ ವಿದ್ಯುತ್ ದೀಪಗಳಿಂದ ಅಲಂಕರಿಸಿದಂತೆ ಕಾಣುವ ನೀರು, ಅದ್ಭುತ ರಂಜನೀಯ ಸಂಗೀತ ಮತ್ತು ಬೆಳಕಿನ ಚಮತ್ಕಾರದೊಂದಿಗೆ ದುಬೈ ಫೌಂಟೇನ್ ವಿಶ್ವದ ಅತೀ ಎತ್ತರ ಮತ್ತು ವಿಭಿನ್ನ ದೃಶ್ಯವನ್ನು ಪ್ರದರ್ಶಿಸುತ್ತದೆ.
ಈ ಕಾರಂಜಿಯು ವಿಶಿಷ್ಟ ವಿನ್ಯಾಸಗಳನ್ನು ಒಳಗೊಂಡಿದ್ದು, ಐದು ವಿಭಿನ್ನ ಗಾತ್ರದ ವಲಯಗಳು ಹಾಗೂ ಎರಡು ಆರ್ಕ್‌ಗಳನ್ನು ಹೊಂದಿದೆ. ಗಗನದೆತ್ತರಕ್ಕೆ ನೀರನ್ನು ಚಿಮ್ಮುವಂತೆ ಮಾಡಬಲ್ಲ ಶಕ್ತಿಯುತ ನೀರಿನ ನಳಿಕೆಗಳನ್ನು ಇದು ಹೊಂದಿದೆ.
ನೀರಿನ ಕಾರಂಜಿಯು ಸುಮಾರು 6,600ಕ್ಕೂ ಹೆಚ್ಚು ಸೂಪರ್ ಲೈಟ್‌ಗಳು ಮತ್ತು 25 ಕಲರ್ ಪ್ರೊಜೆಕ್ಟ್ರ್‌ಗಳ ನೆರವಿನೊಂದಿಗೆ 1,000ದಷ್ಟು ವಿವಿಧ ರೀತಿಯ ದೃಶ್ಯ ವರ್ಣಪಟಲವನ್ನು ರಚಿಸುತ್ತದೆ. ಕಾರಂಜಿಗೆ ಇನ್ನಷ್ಟು ಮೆರುಗನ್ನು ನೀಡುವ ಸಂಗೀತವು ಶಾಸ್ತ್ರೀಯದಿಂದ ಹಿಡಿದು ಈಗಿನ ಅರೇಬಿಕ್ ಹಾಗೂ ವಿಶ್ವವಿಖ್ಯಾತ ಹೊಂದಿರುವ ಹಲವು ಹಾಡುಗಳನ್ನು ಹೊಂದಿದೆ. ಈ ಕಾರಂಜಿಗಳು ಕ್ಷಣಮಾತ್ರದಲ್ಲಿ ಗಾಳಿಯಲ್ಲಿ 22,000 ಗ್ಯಾಲನ್‌ಗಳಿಗಿಂತ ಅಂದರೆ 83 ಸಾವಿರ ಲೀಟರ್‌ನಗಿಂತ ಹೆಚ್ಚು ನೀರನ್ನು ಹೊರಸೂಸುತ್ತದೆ. ಈ ಕಾರಂಜಿಯನ್ನು ದಿನವೂ ಕಾಣಬಹುದು. ಪ್ರತೀ ದಿನ ಸಂಜೆ 6:30ರಿಂದ ರಾತ್ರಿ 11 ಗಂಟೆ ತನಕ ಪ್ರತೀ 30 ನಿಮಿಷಗಳಿಗೊಮ್ಮೆ ಕಾರಂಜಿಗಳು ಜೀವ ಪಡೆದುಕೊಳ್ಳುತ್ತದೆ.
ಪಕ್ಕದಲ್ಲಿರುವ ಬುರ್ಜ್ ಖಲೀಫಾ ಕಟ್ಟಡವೂ ಸಹಾ ಅದೇ ಸಮಯದಲ್ಲಿ ಕಲರ್‌ಫುಲ್ ಲೈಟ್‌ಗಳೊಂದಿಗೆ ಜಗಮಗಿಸುತ್ತದೆ. ಕಾರಂಜಿಯನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಲು ಸಣ್ಣ ಸಣ್ಣ ಬೋಟ್ ಆಕೃತಿಯಂತಿರುವ ಅಬ್ರಾದಲ್ಲಿ ಲೇಕ್ ರೈಡ್ ಸಹ ಇದೆ. ಸುಮಾರು 30 ನಿಮಿಷಗಳ ಕಾಲ ಈ ರೈಡ್ ಅನ್ನು ನಡೆಸಲಾಗುತ್ತದೆ. ಸಾವಿರಾರು ಪ್ರವಾಸಿಗರು ದಿನ ನಿತ್ಯ ಇದನ್ನು ಆಸ್ವಾದಿಸುತ್ತಾರೆ. ಉಚಿತ ಪ್ರವೇಶವಾಗಿದ್ದೂ, ಕಣ್ಮನ ಸೆಳೆಯುವ ಈ ಸಂಗೀತ ಕಾರಂಜಿಯನ್ನು ದುಬೈಗೆ ಬಂದವರು ಮಿಸ್ ಮಾಡದೇ ಭೇಟಿ ನೀಡಿ ಕಣ್ತುಂಬಿಕೊಳ್ಳಬಹುದು.
*ಶಿವಕುಮಾರ್ ಹೊಸಂಗಡಿ, ದುಬೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.