Desi Swara@100: ಮನಃ ಪಟಲದಿಂದ ಎಂದೂ ಅಳಿಯದ ನೆನಪುಗಳ ಗುಚ್ಛ

ಬಾಲ್ಯದ ಆಟ...ಆ ಹುಡುಗಾಟ...

Team Udayavani, Nov 27, 2023, 2:55 PM IST

Desi Swara@100: ಮನಃ ಪಟಲದಿಂದ ಎಂದೂ ಅಳಿಯದ ನೆನಪುಗಳ ಗುಚ್ಛ

ಬಾಲ್ಯ ಜೀವನದ ಅತ್ಯಂತ ಅತ್ಯಮೂಲ್ಯ ಕ್ಷಣ. ದೊಡ್ಡವರಾದ ಮೇಲೆ ನಮ್ಮ ಬಾಲ್ಯವೇ ಚೆಂದವಿತ್ತು ಎಂದು ಎಲ್ಲರೂ ನೆನಪಿಸಿಕೊಳ್ಳುವುದುಂಡು. ಚಿಕ್ಕವರಿದ್ದಾಗ ಬಹುತೇಕ ಸಮಯವನ್ನು ಎಲ್ಲರು ಆಟ, ತುಂಟಾಟಗಳಲ್ಲೇ ಕಳೆದುಬಿಡುತ್ತಿದ್ದೇವು. ಈಗಿನ ಮಕ್ಕಳ ಆಟದ ವೈಖರಿ ಬದಲಾಗಿದೆ. ಎಲ್ಲವೂ ತಾಂತ್ರಿಕ. ಎಲ್ಲ ಆಟಗಳೂ ಕಂಪ್ಯೂಟರ್‌ನಲ್ಲೇ ಬಂದುಬಿಟ್ಟಿವೆ. ಹಾಗಾಗಿ ಈಗಿನ ಮಕ್ಕಳಿಗೆ ನೆಲದಲ್ಲಿ, ಮೈದಾನದಲ್ಲಿ ಗುಂಪಿನೊಡನೆ ಬಿದ್ದು, ಎದ್ದು, ಗೆದ್ದು ಪಡುತ್ತಿದ್ದ ಸಂಭ್ರಮ, ಖುಷಿಯ ಪರಿಚಯವಿಲ್ಲ. ಬಾಲ್ಯದ ಕೆಲವು ಆಟಗಳನ್ನು ನೆನೆಪಿಸುವ ಪ್ರಯತ್ನ ಇಲ್ಲಿ ಮಾಡಲಾಗಿದೆ….

ಬಹಳ ದಿನಗಳ ಬಳಿಕ ಯೂಟ್ಯೂಬ್‌ ಅಲ್ಲಿ ಹಳೆಯ ಚಿತ್ರಗೀತೆಗಳನ್ನ ಕೇಳುತ್ತಾ ಇದ್ದಾಗ, ಪ್ಲೇಲಿಸ್ಟ್‌ ಅಲ್ಲಿ ಅಣ್ಣಾವ್ರು, ವಿಷ್ಣುವರ್ಧನ್‌, ರಾಜೇಶ್‌ ಹೀಗೆ ಮೊದಲಾದ ಘಟಾನುಘಟಿಗಳ ಚಿತ್ರದ ಇಂಪಾದ ಹಾಡುಗಳು ಒಂದಾದ ಮೇಲೆ ಒಂದು ಬರ್ತಾ ಇದ್ವು. ಅವುಗಳ ಎಡೆಯಲ್ಲಿ ಶ್ರೀನಾಥರ ಶುಭಮಂಗಳ ಚಿತ್ರದ ಹಾಡಿನ ಒಂದು ಸಾಲು ಮನಸ್ಸನ್ನು ಅಲ್ಲೇ ಕಟ್ಟಿ ಹಾಕಿತ್ತು. “ಬಾಲ್ಯದ ಆಟ ಆ ಹುಡುಗಾಟ ಇನ್ನೂ ಮಾಸಿಲ್ಲ, ಆಟದಿ ಸೋತು ರೋಷದಿ ಕಚ್ಚಿದ ಗಾಯವ ಮರೆತಿಲ್ಲ’ ಎಂಬ ಸಾಲುಗಳು ಕಿವಿಯ ಮೇಲೆ ಬೀಳ್ತಾ ಇದ್ರೆ, ಮನಸ್ಸು ಇದ್ದಕ್ಕಿದ್ದ ಹಾಗೆ ಇಪ್ಪತ್ತು ಇಪ್ಪತ್ತೈದು ವರ್ಷಗಳ ಹಿಂದೆ ಓಡಿತ್ತು. ಎಂತಹ ಸುಂದರ ದಿನಗಳವು. ಯಾವುದೇ ಚಿಂತೆ, ಜಂಜಾಟಗಳ ತಲೆಬಿಸಿ ಇಲ್ಲದೆ, ತೋಚಿದ ಆಟ ಆಡಿಕೊಂಡು, ಮೈ ಕೈಗಳಿಗೆ ನೋವು ಗಾಯ ಮಾಡಿಕೊಂಡು, ಅತ್ತು ಕರೆದು ರಂಪಾಟ ಮಾಡಿದ ದಿನಗಳಿಗೆ ಮರಳಿ ಹೋಗಲಿಕ್ಕೆ ಆಗದೇ..? ಎಂಬ ಸಣ್ಣ ನೋವು ಹಾಗೆ ಮೂಡಿ ಬಂತು.

ಬಾಲ್ಯದ ದಿನಗಳೇ ಮಧುರವಾದ ದಿನಗಳು. ವಾರದ ಏಳೂ ದಿನಗಳು, ದಿನದ ಇಪ್ಪತ್ತನಾಲ್ಕು ಗಂಟೆಗಳೂ ಆಟಕ್ಕೆ ಸಾಲದು. ದಿನಕ್ಕೊಂದು ಆಟದಂತೆ ಒಂದೊಂದನ್ನು ಆಡುತ್ತಾ ಹೊರಟರೂ ಬರಿದಾಗದ ಗಣಿ, ನಮ್ಮ ಬಾಲ್ಯದ ಆಟಗಳು. ಮಳೆ ಬರಲಿ, ಬಿಸಿಲೇ ಇರಲಿ ಆಡುವ ಆಟಕ್ಕೆ ಮಾತ್ರ ಯಾವತ್ತೂ ಬರಗಾಲ ಇಲ್ಲ. ಅಂತಹ ಒಂದಷ್ಟು ನನ್ನ ಬಾಲ್ಯದ ವಿಶೇಷ ಆಟಗಳು ಹಾಗೇ ನೆನಪನ್ನು ಚೆಲ್ಲುತ್ತಾ ಹೋದವು…

ಗುಂಪಿನಾಟಗಳಲ್ಲಿ “ಹುಲಿ ದನ….’ ಆಗೆಲ್ಲ ಬಹಳ ಜನಪ್ರಿಯ. ಶಾಲೆಯಲ್ಲಿ ಪಿಟಿ ಸಮಯದಲ್ಲಿ ಎಲ್ಲರೂ ಒಟ್ಟಿಗೆ ಸೇರಿ ಗುಂಪು ಕಟ್ಟಿಕೊಂಡು ಆಟವಾಡುತ್ತಿದ್ದೇವು. ಇಲ್ಲಿ ಒಬ್ಬ ದನವಾಗಿಯೂ, ಇನ್ನೊಬ್ಬ ಹುಲಿಯಾಗಿಯೂ ಆಯ್ಕೆ ಆದರೆ, ಉಳಿದ ಎಲ್ಲ ಹುಡುಗರು ಕೈ ಕೈ ಹಿಡಿದು ಕೋಟೆಯಾಗುತ್ತಿದ್ದೇವು. ಕೋಟೆಯ ಹೊರಗೆ ಇರುವ ಹುಲಿ, “ಕೋಟೆಯಲ್ಲಿ ದನ ಉಂಟಾ…’ ಅಂತ ಕೇಳ್ತಾ ಸುತ್ತು ಬರುತ್ತಾ ಇದ್ರೆ, ಉಳಿದ ಮಕ್ಕಳು ಇಲ್ಲ ಇಲ್ಲ ಎಂದು ಹೇಳ್ತಾ, ಮೂರನೇ ಬಾರಿ ಇದೆ ಅಂತ ಹೇಳಬೇಕು. ಹೊರಗಿರುವ ಹುಲಿ ತನ್ನ ಬುದ್ಧಿಯನ್ನೆಲ್ಲ ಉಪಯೋಗಿಸಿ ಕೋಟೆಯಣ್ಣ ಭೇದಿಸಿ ಒಳನುಗ್ಗಿ ಅಲ್ಲಿರುವ ಹಸುವನ್ನು ಅಟ್ಟಾಡಿಸಿ ಹಿಡಿಯಬೇಕು. ಒಟ್ಟಿನಲ್ಲಿ ಮೈಯ ಕಸುವನ್ನು ಹಾಗೂ ಕೋಟೆ ಮುರಿಯುವ ಉಪಾಯವನ್ನು ಮಾಡುವ ಅದ್ಭುತ ಆಟ.

“ಮರಕೋತಿ…’ ಹೆಸರೇ ಹೇಳಿದಂತೆ ಈ ಆಟವನ್ನು ಮರದ ಮೇಲೆ ಹತ್ತಿ ಆಡುವಂಥಾದ್ದು. ಮತ್ತೊಮ್ಮೆ ಇದು ಗುಂಪಿನಲ್ಲಿ ಆಡುವ ಆಟ. ಒಂದು ಮಗು ಕೋತಿ ಹಿಡಿಯುವ ಬೇಟೆಗಾರನಾಗಿ ಆಯ್ಕೆಯಾದರೆ, ಉಳಿದವರೆಲ್ಲ ಕೋತಿಗಳಾಗಿ ಮರ ಹತ್ತುತ್ತಾವೆ. ಮಕ್ಕಳು ಚೇಷ್ಟೆ ಮಾಡಿದರೆ ” ಮಂಗನಾಟ ‘ ಮಾಡಬೇಡಿ ಎಂದು ಬೈಯಿಸಿಕೊಳ್ಳುವಾಗಲೆಲ್ಲ ಈ ಆಟ ನೆನಪಿಗೆ ಬರುತ್ತದೆ. ಮೊದಲಿಗೆ ಒಂದು ವೃತ್ತ ಬರೆದು, ಅದರಲ್ಲಿ ಒಂದು ಕೋಲನ್ನು ಇಡಬೇಕು. ಎಲ್ಲ ಕೋತಿಗಳು ಮರ ಹತ್ತಿದಾಗ, ನಾಯಕ ಕೋತಿ ಆ ಕೋಲನ್ನು ವೃತ್ತದಿಂದ ಸಾಧ್ಯವಾದಷ್ಟು ದೂರ ಬೀಸಿ ಒಗೆದು ಬೇಗನೆ ಮರ ಹತ್ತಬೇಕು. ಬೇಟೆಗಾರ ಆ ಬಿಸಾಡಿದ ಕೋಲನ್ನು ಹೆಕ್ಕಿ ತಂದು ಆ ವೃತ್ತದಲ್ಲಿ ಇಟ್ಟು ಕೋತಿಗಳಲ್ಲಿ ಯಾವುದಾದರೂ ಒಂದನ್ನು ಹಿಡಿಯಲು ಮರ ಹತ್ತಿ ಹೋಗಬೇಕು. ಈ ಸಮಯ ಉಳಿದ ಕೋತಿಗಳಲ್ಲಿ ಯಾವುದಾದರೂ ಒಂದು ಕೆಳಗಿಳಿದು, ವೃತ್ತದಲ್ಲಿರುವ ಕೋಲನ್ನು ಮತ್ತೆ ದೂರ ಒಗೆದರೆ, ಬೇಟೆಗಾರ ಎಲ್ಲಿದ್ದರೂ ಮತ್ತೆ ಆ ಕೋಲನ್ನು ತಂದು ವೃತ್ತದಲ್ಲಿಟ್ಟು ಪುನಃ ಬೇಟೆಗೆ ಹೊರಡಬೇಕು. ಕೋಲು ವೃತ್ತದಲ್ಲಿರದೆ ಯಾವುದೇ ಬೇಟೆ ಮಾಡುವಂತಿಲ್ಲ.

ಹೀಗೆ ಆಟ ಸಾಗುವಾಗ ಯಾವುದಾದರೂ ಒಂದು ಕೋತಿಯನ್ನು ಹಿಡಿದರೆ, ಆ ಮಗು ಮುಂದಿನ ಆಟಕ್ಕೆ ಬೇಟೆಗಾರ ಆಗ್ತಾನೆ. ಈ ಆಟದ ಸಮಯದಲ್ಲಿ ಮರ ಹತ್ತುವ ಕಲೆ ಮಗುವಿಗೆ ಇದ್ದಿರಬೇಕು. ಮರದಿಂದ ಮರಕ್ಕೆ ದಾಟುತ್ತ, ಹಾರುತ್ತ ಮಕ್ಕಳೆಲ್ಲ ಸಾಕ್ಷಾತ್‌ ಕೋತಿಗಳೇ ಆಗಿ ಹೋಗುತ್ತಾರೆ. ಬಾಲ್ಯದಲ್ಲಿ ಈ ಆಟವನ್ನು ಆಡುವ ವೇಳೆ, ಬಿದ್ದು ಕಾಲು ಉಳುಕಿಸಿಕೊಂಡಿದ್ದು ಈಗಲೂ ನೆನಪಿದೆ. ಕಾಲು ಉಳಿಕಿಸಿಕೊಂಡು ಮುಂದಿನ ಮೂರು ದಿನಗಳವರೆಗೆ ನಡೆಯಲಿಕ್ಕೆ ಆಗದೆ ಮನೆಯಲ್ಲಿ ಮಂಗಳಾರತಿ ಎತ್ತಿಸಿಕೊಂಡ ನೆನೆಪು ಈಗಲೂ ಹಸುರು.

“ಟೊಂಕಾಲು…’ ಈ ಆಟವು ಸಹ ಶಾಲೆಯಲ್ಲಿ ಆಡಿದ ಮತ್ತೊಂದು ಅದ್ಭುತವಾದ ಆಟ. ಹುಡುಗ ಹುಡುಗಿಯರ ಎರಡು ಗುಂಪುಗಳಲ್ಲಿ ಒಂದು ಗುಂಪು ಕೈ ಕೈ ಹಿಡಿದು ದೊಡ್ಡ ವೃತ್ತಾಕಾರದಲ್ಲಿ ನಿಂತರೆ, ಇನ್ನೊಂದು ಗುಂಪಿನ ಮಕ್ಕಳು ವೃತ್ತದ ಒಳಗೆ ಜಮಾಯಿಸುತ್ತಾರೆ. ವೃತ್ತದಲ್ಲಿ ಇರುವ ಒಂದೊಂದೇ ಮಗು ಕಾಲನ್ನು ಕುಂಟುತ್ತಾ, ವೃತ್ತದ ಒಳಗೆ ಓಡುವ ಮಕ್ಕಳನ್ನು ಹಿಡಿಯಬೇಕು. ಕುಂಟುವ ಮಗು ಕಾಲು ಇಳಿಸಿ ನೆಲಕ್ಕೆ ತಾಗಿಸಿದರೆ ಆ ಮಗು ಆಟದಿಂದ ಹೊರಗೆ. ಮತ್ತೆ ಮುಂದಿನ ಮಗು ಕುಂಟಲು ಆರಂಭಿಸಬೇಕು. ವೃತ್ತದ ಒಳಗೆ ಓಡುವ ಮಕ್ಕಳಲ್ಲಿ ಸಹ ಯಾವುದಾದರೂ ಒಂದು ಮಗು ವೃತ್ತದಿಂದ ಹೊರಗೆ ಬಂದರೆ ಕೂಡ ಔಟು. ಹೀಗೆ ಯಾವ ತಂಡ ಆದಷ್ಟು ಬೇಗ ಎಲ್ಲರನ್ನೂ ಔಟು ಮಾಡತ್ತೋ, ಆ ತಂಡ ವಿಜಯಿ. ನಾವು ಇದನ್ನು ಆಡುವಾಗ ಹುಡುಗರು ಹುಡುಗಿಯರ ತಂಡದ ನಡುವೆ, ಈ ಆಟಕ್ಕಾಗಿ ಪ್ರತಿಷ್ಠೆಯ ಯುದ್ಧವೇ ನಡೆದು ಹೋಗುತ್ತಿತ್ತು. ಆಟದ ನಡುವೆ ವೃತ್ತದ ಒಳಗಿರುವ ಮಕ್ಕಳು “ಕೂತು ಕೂತು ಸಾಕಾಯ್ತು ಅಜ್ಜಿ/ಅಜ್ಜ ಇನ್ನು ಬರ್ಲಿಲ್ಲ’ ಅಂತ ರಾಗವಾಗಿ ಹೇಳ್ತಾ ಇದ್ರೆ, ಕುಂಟುತ್ತ ಹಿಡಿಯ ಹೊರಟ ಮಗುವಿಗೆ ಧುತ್ತನೆ ಎಲ್ಲಿಂದ ರೋಸ್‌ ಬರ್ತಿತ್ತೋ, ಆ ದೇವರೇ ಬಲ್ಲ.

“ಲಾಕ್‌ ಯಾಂಡ್‌ ಕೀ…’ ಇದು ಕಳ್ಳ ಪೊಲೀಸ್‌ ಆಟದಲ್ಲೇ ಸ್ವಲ್ಪ ಸುಧಾರಿತ ಆಟ. ಈ ಆಟದಲ್ಲಿ ಒಬ್ಬ ಮಗು ಪೊಲೀಸ್‌ ಆಗಿ ಉಳಿದವರನ್ನು ಹಿಡಿಯ ಹೊರಟರೆ, ಉಳಿದವರು ತಪ್ಪಿಸಿಕೊಳ್ಳಬೇಕು. ಈ ತಪ್ಪಿಸಿಕೊಳ್ಳುವ ಭರದಲ್ಲಿ, ಲಾಕ್‌ ಎಂದು ಹೇಳಿ ಅಲ್ಲೇ ನಿಂತರೆ, ಪೊಲೀಸ್‌ ಆದವನು ಆ ಮಗುವನ್ನು ಹಿಡಿದರೆ ಔಟೆಂದು ಲೆಕ್ಕಕ್ಕೆ ಬರುವುದಿಲ್ಲ. ಇನ್ನೊಬ್ಬ ಮಗು ಬಂದು ಲಾಕ್‌ ಹೇಳಿದ ಮಗುವನ್ನು ಮುಟ್ಟಿ ಕೀ ಕೊಟ್ಟರೆ ಮಾತ್ರ ಮತ್ತೆ ಆ ಮಗು ಓಡಬಹುದು. ಓಡುವ ಮಕ್ಕಳನ್ನು ಹಿಡಿಯಲು ಆಗದೆ ಹೋದರೆ ಪೊಲೀಸಾದವನು ಲಾಕ್‌ ಹೇಳಿ ಕೂತರೆ, ಯಾವ ಮಗು ಕೊನೆಯದಾಗಿ ಬಂದು ಪೊಲೀಸನ್ನು ಮುಟ್ಟತ್ತದೆಯೋ, ಆ ಮಗು ಔಟಾದಂತೆ ಲೆಕ್ಕ. ಇದು ನಮ್ಮಲ್ಲಿ ಓಡುವ ತಾಕತ್ತು ಎಷ್ಟಿದೆ ಎಂದು ನಮಗೆ ತೋರಿಸುತ್ತಿತ್ತು. ತಪ್ಪಿಸಿಕೊಳ್ಳುವ ಭರದಲ್ಲಿ ಓಡಿ ಓಡಿ, ಸುಸ್ತಾಗಿ ಕೆಲವೊಮ್ಮೆ ಕಾಲೆಲ್ಲ ನೋವು ಬರೆಸಿಕೊಳ್ಳುತ್ತಿದ್ದೆವು.

“ಕ್ರಿಕೆಟ್‌…’ ಈ ಆಟದ ಬಗ್ಗೆ ವಿವರಿಸುವ ಅಗತ್ಯವೇ ಇಲ್ಲ, ಆದರೆ ಬಾಲ್ಯದಲ್ಲಿ ಒಂದು ಬ್ಯಾಟ್‌ ಹಾಗೂ ಬಾಲಿಗಾಗಿ ಪಟ್ಟ ಪಡಿಪಾಟಲು ಆ ಭಗವಂತನಿಗೆ ಪ್ರೀತಿ. ಹಣಕೊಟ್ಟು ಬ್ಯಾಟ್‌ ಕೊಳ್ಳಲು ಆಗದೆ ಇದ್ದ ಸಂದರ್ಭದಲ್ಲಿ ತೆಂಗಿನ ಮರದ ಹೆಡೆಯನ್ನು ಕತ್ತರಿಸಿ ಬ್ಯಾಟ್‌ ಮಾಡಿ ಆಡಿದ ನೆಮ್ಮದಿ, ಇಂದು ಸಾವಿರ ರೂಪಾಯಿ ಕೊಟ್ಟು ಖರೀದಿಸಿದ ಬ್ಯಾಟ್‌ನಲ್ಲಿ ಸಿಗದು. ಬಾಲ್‌ ಖರೀದಿಸಲು ದುಡ್ಡಿಲ್ಲದಿದ್ದಾಗ, ಊರ ಜಾತ್ರೆಯಲ್ಲಿ ಹಠ ಮಾಡಿ ಕೊಂಡದ್ದು, ಇಲ್ಲದಿದ್ದಲ್ಲಿ ಬಾಲ್‌ ಐಸ್‌ಕ್ರೀಮ್‌ ತಿಂದು, ಅದರ ಪ್ಲಾಸ್ಟಿಕ್‌ ಬಾಲನ್ನು ತೊಳೆದು, ಒಳಗೆ ಕಾಗದ – ಮಣ್ಣು ತುಂಬಿ ಆಡಿದ್ದು, ಇಂದು ಕಾರ್ಕ್‌ ಬಾಲ್‌ನಲ್ಲಿ ಆಡುವ ಸುಖಕ್ಕಿಂತ ಸಾವಿರ ಪಟ್ಟು ದೊಡ್ಡದಾದದ್ದು. ಇದಾವುದೂ ಇಲ್ಲದಿದ್ದಾಗ ಶಾಲೆಯ ಪರೀಕ್ಷೆ ಬರೆಯುವ ರಟ್ಟನ್ನು ಬ್ಯಾಟ್‌ ಆಗಿ, ಕಾಗದದ ಉಂಡೆಗೆ ದಾರ ಕಟ್ಟಿ ಮಾಡಿದ ಬಾಲ್‌ನಲ್ಲಿ ಆಡಿದ ಕ್ರಿಕೆಟ್‌ ಬಾಳಿನುದ್ದಕ್ಕೂ ಬಾಳುತ್ತದೆ.

ಇವೆಲ್ಲ ಆದಮೇಲೆ ಖೊ ಖೋ, ಕಬಡ್ಡಿ, ಲಗೋರಿ, ಚಿನ್ನಿಕೊಲು, ತೂ ಚೆಂಡು, ಚೆಂಡೆಸೆಯೋ ಆಟ, ಕುಂಟೆಬಿಲ್ಲೆ, ಕೆರೆ ದಡ, ಕಣ್ಣ ಮುಚ್ಚೆ, ಸೈಕಲ್‌ ಟೈರ್‌ ಅನ್ನು ಕೋಲಲ್ಲಿ ಬಾರಿಸುತ್ತ ಓಡುವುದು, ಬುಗುರಿ ತಿರುಗಿಸುವುದು, ಗೋಲಿಯಾಟ, ಅಪ್ಪಾಲೇ ತಿಪ್ಪಾಲೇ, ಅವ್ವ ಅಪ್ಪಚ್ಚಿ ಹೀಗೆ ಆಟಗಳ ಸರಮಾಲೆಯೇ ಎದುರಿಗೆ ಬಂದು ನಿಲ್ಲುತ್ತದೆ. ಇವೆಲ್ಲ ಹೊರಾಂಗಣ ಆಟಗಳಾದರೆ, ಮನೆಯ ಒಳಗೆ ಆಡುವ ಆಟಗಳೂ ಬಹಳ. ಅವುಗಳಲ್ಲಿ, ಚೌಕಬಾರ, ಗುಡ್ನ, ಲೂಡೋ, ಚೆಸ್‌, ಅವಲಕ್ಕಿ ಪವಲಕ್ಕಿ, ರತ್ತೋ ರತ್ತೋ ರಾಯನ ಮಗಳೇ, ಪೆನ್‌ ಫೈಟಿಂಗ್‌ ಮೊದಲಾದವೂ ಫೇಮಸ್ಸು. ಕ್ಲಾಸಿನಲ್ಲಿ ಪಾಠ ನಡೆಯುತ್ತಿದ್ದಾಗ, ಕದ್ದುಮುಚ್ಚಿ ಆಡಿದ ಪುಸ್ತಕದ ಕ್ರಿಕೆಟ್‌ ಹಾಗೂ ಅಲ್ಲಿ ಬ್ಯಾಟೇ ಇಲ್ಲದೆ ಮಾಡಿದ ಸೆಂಚುರಿ ಅವಿಸ್ಮರಣೀಯ.

ಇನ್ನೂ ಕೆಲವು ಆಟಗಳು ಹಾಡಿನೊಂದಿಗೆ ಇದ್ದು ಆ ಆಟವನ್ನು ಇನ್ನೂ ಸುಂದರಗೊಳಿಸುತ್ತಿದ್ದವು. ದೊಡ್ಡವರಾಗುತ್ತಿದ್ದ ಹಾಗೆ ಆ ಹಾಡಿನ ಅರ್ಥ ತಿಳಿದು, ಎಂಥ ತತ್ತ್ವಗಳನ್ನು ನಮ್ಮ ಹಿರಿಯರು ನಮ್ಮ ನಿತ್ಯದ ಆಟಗಳಲ್ಲಿ ಅಳವಡಿಸಿದ್ದರು ಎಂದು ಅರಿತು ಈಗಲೂ ಮೂಗಿನ ಮೇಲೆ ಬೆರಳಿಡುವಂತಾಗುತ್ತದೆ. ಅವುಗಳಲ್ಲಿ “ಕಣ್ಣ ಮುಚ್ಚೆ ಕಾಡೇ ಗೋಡೆ, ಉದ್ದಿನ ಮೂಟೆ ಉರುಳೇ ಹೋಯ್ತು, ನಮ್ಮಯ ಹಕ್ಕಿ ಬಿಟ್ಟೆ ಬಿಟ್ಟೆ, ನಿಮ್ಮಯ ಹಕ್ಕಿ ಅಡಗಿಸಿಕೊಳ್ಳಿ’ ಎಂಬ ಆಟದಲ್ಲಿ ಇಡೀ ರಾಮಾಯಣದ ಚಿತ್ರಣವಿರುವುದನ್ನು ತಿಳಿದು ಪಟ್ಟ ಅಚ್ಚರಿ ಅಷ್ಟಿಷ್ಟಲ್ಲ. ಹಾಗೆಯೇ “ಅವಲಕ್ಕಿ ಪವಲಕ್ಕಿ, ಕಾಂಚಣ ಮಿಣ ಮಿಣ, ಡಾಂ ಡೂಂ, ಡಸ್‌ ಬುಸ್‌, ಕೊಯ್‌ ಕೋಟಾರ್‌’ ಎಂಬ ಪದ್ಯದಲ್ಲಿ ಮನುಷ್ಯನ ಬಾಲ್ಯದಿಂದ ಮರಣದವರೆಗಿನ ಚಿತ್ರಣ ಕೊಟ್ಟ ನಮ್ಮ ಜನಪದರ ಜ್ಞಾನಕ್ಕೆ ಒಮ್ಮೆ ನಮಸ್ಕರಿಸಲೇಬೇಕು.
“ವಾರಕೆ ಏಳೇ ಏಳು ದಿನ
ಆದಿತ್ಯವಾರವೇ ರಜದ ದಿನ
ಸೋಮವಾರಕೆ ಚಿನ್ನೀ ಕೋಲು
ಮಂಗಳವಾರಕೆ ವಾಲೀಬಾಲು
ಬೇಟೆಯ ಆಟವು ಬುಧವಾರ
ಗರಡಿಯ ಮನೆಯಲಿ ಗುರುವಾರ
ಶುಕ್ರವಾರಕೆ ಬುಗರೀ ಚೆಂಡು
ಶನಿವಾರಕ್ಕೆ ಕ್ರಿಕೆಟ್ಟು ದಾಂಡು
ವಾರಕೆ ಏಳೇ ಏಳು ದಿನ
ಆಟಕೆ ಸಾಲದು ರಜಾ ದಿನ…’
ಜಿ.ಪಿ.ರಾಜರತ್ನಂ ಅವರ ಮೇಲಿನ ಮಕ್ಕಳ ಹಾಡು ಸದಾ ಶಾಶ್ವತ. ಆ ಬಾಲ್ಯ, ಅದರ ಆಟಗಳು ನಮ್ಮ ಮನಃ ಪಟಲದಿಂದ ಎಂದೂ ಅಳಿಯದೆ ಸದಾ ಹಸುರಾಗಿರುತ್ತದೆ, ಹಸುರಾಗಿರಲಿ ಎಂದು ಆಶಿಸುತ್ತ,

“ಚಿಕ್ಕವರಾಗೋಣ ಮತ್ತೆ ಬಾಲ್ಯಕೆ ಮರಳೋಣ,
ದುಗುಡದ ಬದುಕಿಗೆ ವಿರಾಮಹೇಳಿ
ಚಿಣ್ಣರಾಗೋಣ, ಮತ್ತೆ ಬಾಲಕರಾಗೋಣ…”

ಗುರುರಾಜ ಹೇರ್ಳೆ, ಬಹ್ರೈನ್‌

 

ಟಾಪ್ ನ್ಯೂಸ್

Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ

Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ

Sullia: ಕಾರಿಗೆ ಡೀಸೆಲ್‌ ತುಂಬಿಸಿ ಹಣ ನೀಡದೆ ಪರಾರಿ

Sullia: ಕಾರಿಗೆ ಡೀಸೆಲ್‌ ತುಂಬಿಸಿ ಹಣ ನೀಡದೆ ಪರಾರಿ

Uppinangady: ಚಿನ್ನ, ನಗದು ಕಳ್ಳತನ: ದೂರು ದಾಖಲು

Uppinangady: ಚಿನ್ನ, ನಗದು ಕಳ್ಳತನ: ದೂರು ದಾಖಲು

Manipur: 2 ಗುಂಪುಗಳ ನಡುವೆ ಗುಂಡಿನ ಚಕಮಕಿ

Manipur: 2 ಗುಂಪುಗಳ ನಡುವೆ ಗುಂಡಿನ ಚಕಮಕಿ

Fake News: ಕೇಂದ್ರ ಸಚಿವ ಅಮಿತ್‌ ಶಾ ನಿಧನ ಎಂದು ಸುಳ್ಳು ಸುದ್ದಿ: ವ್ಯಕ್ತಿ ಸೆರೆ

Fake News: ಕೇಂದ್ರ ಸಚಿವ ಅಮಿತ್‌ ಶಾ ನಿಧನ ಎಂದು ಸುಳ್ಳು ಸುದ್ದಿ: ವ್ಯಕ್ತಿ ಸೆರೆ

Karnataka ಸೇರಿ ವಿವಿಧ ರಾಜ್ಯದ ಸಾಧಕರ ಜತೆ ರಾಷ್ಟ್ರಪತಿ ಭೇಟಿ

Karnataka ಸೇರಿ ವಿವಿಧ ರಾಜ್ಯದ ಸಾಧಕರ ಜತೆ ರಾಷ್ಟ್ರಪತಿ ಭೇಟಿ

ISRO: ಡಿ.30ಕ್ಕೆ ಇಸ್ರೋದ ಬಾಹ್ಯಾಕಾಶ ಡಾಕಿಂಗ್‌ ಪ್ರಯೋಗISRO: ಡಿ.30ಕ್ಕೆ ಇಸ್ರೋದ ಬಾಹ್ಯಾಕಾಶ ಡಾಕಿಂಗ್‌ ಪ್ರಯೋಗ

ISRO: ಡಿ.30ಕ್ಕೆ ಇಸ್ರೋದ ಬಾಹ್ಯಾಕಾಶ ಡಾಕಿಂಗ್‌ ಪ್ರಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಸಂತೆಕಟ್ಟೆಯಲ್ಲಿ ಲಾರಿ ಪಲ್ಟಿ: ಸಂಚಾರ ದಟ್ಟಣೆ

Udupi: ಸಂತೆಕಟ್ಟೆಯಲ್ಲಿ ಲಾರಿ ಪಲ್ಟಿ: ಸಂಚಾರ ದಟ್ಟಣೆ

Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ

Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ

Sullia: ಕಾರಿಗೆ ಡೀಸೆಲ್‌ ತುಂಬಿಸಿ ಹಣ ನೀಡದೆ ಪರಾರಿ

Sullia: ಕಾರಿಗೆ ಡೀಸೆಲ್‌ ತುಂಬಿಸಿ ಹಣ ನೀಡದೆ ಪರಾರಿ

Uppinangady: ಚಿನ್ನ, ನಗದು ಕಳ್ಳತನ: ದೂರು ದಾಖಲು

Uppinangady: ಚಿನ್ನ, ನಗದು ಕಳ್ಳತನ: ದೂರು ದಾಖಲು

Manipur: 2 ಗುಂಪುಗಳ ನಡುವೆ ಗುಂಡಿನ ಚಕಮಕಿ

Manipur: 2 ಗುಂಪುಗಳ ನಡುವೆ ಗುಂಡಿನ ಚಕಮಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.