Dharmasthla: ಕನ್ನಡ ಸಾಹಿತ್ಯ ಸದ್ಯ ಒಡವೆ ಇದ್ದರೂ ಬಡವಿ: ಶತಾವಧಾನಿ ಡಾ| ರಾ.ಗಣೇಶ
ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ ಸಾಹಿತ್ಯ ಸಮ್ಮೇಳನದ 92ನೇ ಅಧಿವೇಶನ
Team Udayavani, Dec 1, 2024, 2:04 AM IST
ಬೆಳ್ತಂಗಡಿ: ಕನ್ನಡದ ಗದ್ಯ ಸಾಹಿತ್ಯ ವಿಶಿಷ್ಟವಾಗಿ ಬೆಳೆದಿದೆ. ಕಲಿಕೆ ಇಲ್ಲದಿದ್ದರೂ ಗದ್ಯವಿದೆ. ಅದು ಕರಾವಳಿಯ ಗಂಡುಕಲೆ ಯಕ್ಷಗಾನ ಸಾಹಿತ್ಯದಲ್ಲಿ ಸ್ಪಷ್ಟವಾಗಿ ತಿಳಿಯ ಬಹುದು. ಜಗತ್ತಿನ ಯಾವುದೇ ಛಂದೋ ಸಾಹಿತ್ಯದ ಜತೆ ಕನ್ನಡದಲ್ಲಿ ಪ್ರತಿಸ್ಪಂದನೆ ನೀಡಬಹುದು. ಆದರೆ ಒಡವೆ ಇದ್ದರೂ ಬಡವೆ ಎಂಬಂತೆ ಶ್ರಮ ಸಂಸ್ಕೃತಿಗೆ ಲೋಪವಾಗಿದೆ. ಆಳವಾಗಿ ಅಧ್ಯಯನ ಮಾಡುವವರ ಕೊರತೆ ಕಾಡಿದೆ. ಸಾಹಿತ್ಯದ ವ್ಯಾಪ್ತಿ ಬೆಳೆದರೆ ಸಾಲದು ಅದರ ಮೌಲ್ಯ ಮಾಪನವಾಗಬೇಕು ಎಂದು ಬೆಂಗಳೂರಿನ ಬಹುಶ್ರುತ ವಿದ್ವಾಂಸ ಶತಾವಧಾನಿ ಡಾ| ರಾ.ಗಣೇಶ ವಿಶ್ಲೇಷಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ ಪ್ರಯುಕ್ತ ನ.30ರಂದು ಅಮೃತವರ್ಷಣಿ ಸಭಾಂಗಣದಲ್ಲಿ ಜರಗಿದ ಸಾಹಿತ್ಯ ಸಮ್ಮೇಳನದ 92ನೇ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು. ಯಾವುದೇ ಭಾಷೆಗೆ ವಿಚಾರ ಹೇಳ ಬಲ್ಲ, ಭಾವನೆ ತಿಳಿಸಬಲ್ಲ, ವ್ಯವಹಾರ ಮಾಡಬಲ್ಲ ಶಕ್ತಿ ಬೇಕು. ಅದು ಕನ್ನಡಕ್ಕಿದೆ. ಕನ್ನಡ ಪದಸಂಪತ್ತಿಗೆ ಕೊರತೆಯೇ ಇಲ್ಲ. ಆದರೇನು? ರಾಜ್ಯ ರಾಜಧಾನಿಯಲ್ಲೇ ಕನ್ನಡ ಸೊರಗುತ್ತಿದೆ. ತರುಣ ಪೀಳಿಗೆಯಲ್ಲಿ ಓದುವುದು ಬರೆಯಲು ತಿಳಿದಲ್ಲ ಎಂಬುದು ನನ್ನ ಕಳವಳ ಎಂದರು.
ಕನ್ನಡ ಯಜಮಾನರು ನಾವಲ್ಲ
ಅಧ್ಯಕ್ಷತೆ ವಹಿಸಿದ್ದ ಲೇಖಕ ಡಾ| ಪಾದೆಕಲ್ಲು ವಿಷ್ಣು ಭಟ್ಟ ಅವರು, ಸಾಹಿತ್ಯ ಧರ್ಮವನ್ನು ಪೋಷಿಸುತ್ತದೆ, ನಿರ್ದೇಶಿಸಿ ಕೈಹಿಡಿದು ಮುನ್ನಡೆಸುತ್ತದೆ. ಸಾಹಿತ್ಯ ಮತ್ತು ಧರ್ಮದ ನಡುವೆ ಅಂತರವಿಲ್ಲ. ಕನ್ನಡ ಭಾಷೆಯನ್ನು ಉಪಯೋಗಿಸುವ ಹಕ್ಕು ಮಾತ್ರ ನಮಗಿದೆ ಹೊರತು ಅದರ ಯಜಮಾನರು ನಾವಲ್ಲ. ಆದರೆ ಅದನ್ನು ಸೊಗಸುಗೊಳಿಸುವ ಅವಕಾಶ ನಮಗಿದೆ. ಇದಕ್ಕೆ ಶಾಸ್ತ್ರಾಧ್ಯಯನ ಅವಶ್ಯ. ಯಕ್ಷಗಾನ ಗೀತೆಯಲ್ಲಿ ವೈವಿಧ್ಯವಿದೆ. ಆದರೆ ಸಂಶೋಧಕರಿಗೂ ಯಕ್ಷಗಾನ ಸಾಹಿತ್ಯದ ಕಡೆಗೆ ಅವಗಣನೆಯಿದೆ. ಪ್ರಾಚೀನ ಗ್ರಂಥ ಪುನಃ ಪರಿಶೀಲಿಸುವ ಅಗತ್ಯವಿದೆ. ಕನ್ನಡ ಕಸು ಅದರಲ್ಲಿದೆ, ಆ ಮೂಲಕ ಕನ್ನಡದ ಸೇವೆ ಮುಂದುವರಿಸೋಣ ಎಂದರು. ಕನ್ನಡ ಉಳಿವಿಗೆ ವ್ಯಾಕರಣ, ಛಂದಸ್ಸು, ಅಲಂಕಾರ ಶಾಸ್ತ್ರ, ಕಾವ್ಯಾಲಂಕಾರ, ಭಾಷಾ ಶಾಸ್ತ್ರ, ನಿಘಂಟು ಶಾಸ್ತ್ರ, ಗ್ರಂಥ ಸಂಪಾದನೆ ಶಾಸ್ತ್ರ, ಹಸ್ತಪ್ರತಿ ಶಾಸ್ತ್ರ ಇದನ್ನು ಅಧ್ಯಯನ ಮಾಡುವ ಆವಶ್ಯಕತೆಯಿದೆ ಎಂದರು.
ಉಪನ್ಯಾಸ ವೇದಿಕೆಯಲ್ಲಿ:
ಸ್ತ್ರೀಯರ ಸ್ವಂತ ಸುಖಕ್ಕೆ ಸಾಹಿತ್ಯದ ಅರಿವಿನ ಆವಶ್ಯಕತೆ ಕುರಿತು ನಿವೃತ್ತ ಉಪನ್ಯಾಸಕಿ ಡಾ| ಪ್ರಮೀಳಾ ಮಾಧವ, ಜನಪದ ಸಾಹಿತ್ಯವನ್ನು ಉಳಿಸಿ ಬೆಳೆ ಸುವ ಮಾರ್ಗೋಪಾಯಗಳು ಬಗ್ಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ನಿಕಟ ಪೂರ್ವ ಅಧ್ಯಕ್ಷ ಡಾ| ಬಿ.ವಿ. ವಸಂತಕುಮಾರ್, ಇಂದಿನ ತಾಂತ್ರಿಕ ಯುಗದಲ್ಲಿ ಸಾಹಿತ್ಯದ ಅಗತ್ಯ ಮತ್ತು ಅದನ್ನು ಜನಪ್ರಿಯಗೊಳಿಸುವ ಮಾರ್ಗೋಪಾಯಗಳು ಕುರಿತು ಮೈಸೂರು ಜೆ.ಎಸ್.ಎಸ್.ಮಹಾ ವಿದ್ಯಾ ಪೀಠದ ಪ್ರಕರಣ ವಿಭಾಗದ ನಿರ್ದೇಶಕ ಪ್ರೊ| ಮೊರಬದ ಮಲ್ಲಿಕಾರ್ಜುನ ಉಪನ್ಯಾಸ ನೀಡಿದರು. ಸ್ವಾಗತ ಸಮಿತಿ ಖಜಾಂಚಿ ಡಿ.ಹರ್ಷೇಂದ್ರ ಕುಮಾರ್ ಉಪನ್ಯಾಸಕರನ್ನು ಗೌರವಿಸಿದರು.
ಡಾ| ಹೇಮಾವತಿ ವೀ.ಹೆಗ್ಗಡೆ, ಡಿ.ಸುರೇಂದ್ರ ಕುಮಾರ್, ಡಿ.ರಾಜೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ನೀತಾ ರಾಜೇಂದ್ರ ಕುಮಾರ್, ಅಮಿತ್ ಕುಮಾರ್, ಶ್ರದ್ಧಾ ಅಮಿತ್ ಮೊದಲಾದವರು ಉಪಸ್ಥಿತರಿದ್ದರು. ಸೋನಿಯಾ ಯಶೋವರ್ಮ ಸಂಪಾದಕತ್ವದ ಗುಣಗಣಿ-ಗುಣರತ್ನಗಳ ಧಣಿ ಹಾಗೂ ಪುಷ್ಪದಂತ ಸಂಪಾದಕತ್ವದ ಉಪರತ್ನಗಳು ಮತ್ತು ನವರತ್ನಗಳು ಎಂಬ ಪುಸ್ತಕಗಳು ಬಿಡುಗಡೆಗೊಂಡವು.
ಉದ್ಘಾಟಕರ ಸಮ್ಮಾನ ಪತ್ರವನ್ನು ಎಸ್. ಡಿ.ಎಂ. ಸೊಸೈಟಿ ಯೋಜನಾ ನಿರ್ದೇಶಕ ಡಿ.ಶ್ರೇಯಸ್ ಕುಮಾರ್, ಅಧ್ಯಕ್ಷರ ಸಮ್ಮಾನ ಪತ್ರವನ್ನು ಎಸ್.ಡಿ.ಎಂ.ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ| ಸತೀಶ್ಚಂದ್ರ ಎಸ್. ವಾಚಿಸಿದರು. ಎಸ್.ಡಿ.ಎಂ. ಕಾಲೇಜು ಉಪನ್ಯಾಸಕ ಡಾ| ದಿವಾ ಕೊಕ್ಕಡ ಕಾರ್ಯಕ್ರಮ ನಿರ್ವಹಿಸಿ, ಉಜಿರೆ ಎಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ| ಅಶೋಕ್ ಕುಮಾರ್ ವಂದಿಸಿದರು.
ಭಕ್ತರಿಂದ ಅನ್ನ ಪ್ರಸಾದ:
ಅನ್ನಪೂರ್ಣ ಛತ್ರದ ಹಿಂಭಾಗದಮೈದಾನದಲ್ಲಿ ನಾಡಿನ ನಾನಾ ಭಾಗದ ಭಕ್ತರ ತಂಡ ಲಕ್ಷಾಂತರ ಮಂದಿಗೆ ಸುಮಾರು 22 ಕೌಂಟರ್‌ಗಳಲ್ಲಿ ಅನ್ನ ಪ್ರಸಾದ ವಿತರಿಸಿದರು.
ಪದವಿ ಪಠ್ಯದಲ್ಲಿ ಭಾಷೆ ತೆಳುವಾಗಿದೆ
ಎಂ.ಎ. ಪದವಿ ಪಠ್ಯದಲ್ಲೂ ಇಂದು ವ್ಯಾಕರಣ, ಗ್ರಂಥ ಸಾಹಿತ್ಯ, ಕಾವ್ಯ ಮೀಮಾ ಂಸೆಯನ್ನು ತೆಳುಗೊಳಿಸಲಾಗಿದೆ. ಹಳೆಗನ್ನಡವನ್ನೂ ಪಠ್ಯ ಭಾಗದಲ್ಲಿ ಕಡಿಮೆ ಮಾಡಲಾಗಿದೆ. ಭಾಷಾ ಪದ ಸಂಪತ್ತು ಹೆಚ್ಚಿಸಲು ಹಳೆಗನ್ನಡ ಅಗತ್ಯ. ಇದರೆಡೆಗೆ ಆಸಕ್ತಿ ಮೂಡಿಸುವ ಕೆಲಸ ಶಿಕ್ಷಕರಿಂದ ಆಗಬೇಕು. ಒಬ್ಬ ಅಧ್ಯಾಪಕ ವಿದ್ಯಾರ್ಥಿ ಮೇಲೆ ಬಹಳ ಪರಿಣಾಮ ಬೀರಬಲ್ಲವರು. ಭಾಷೆ ನಾವು ಸೃಷ್ಟಿಸಿದ್ದಲ್ಲ, ಪರಂಪರೆಯಿಂದ ಬಂದಿದೆ. ಈ ಭಾಷೆಯನ್ನು ಯೋಗ್ಯವಾಗಿ ನಿರ್ವಹಿಸುವುದು ನಮ್ಮ ಹೊಣೆ. ಒಳ್ಳೆಯ ರೀತಿಯಲ್ಲಿ ಬಳಸಿ, ಅಭಿವ್ಯಕ್ತಿ ಸಾಮರ್ಥ್ಯ ಹೆಚ್ಚಿಸುವ ಸ್ವಾತಂತ್ರ್ಯವಿದೆ. ಮುಂದಿನವರಿಗೆ ಒದಗಿಸುವ ಜವಾಬ್ದಾರಿಯಿದೆ ಎಂದು ಡಾ| ಪಾದೇಕಲ್ಲು ವಿಷ್ಣು ಭಟ್ಟ ಹೇಳಿದರು.
ಉದಯವಾಣಿ ಬೆಳೆ ಕನ್ನಡಕ್ಕೆ ಪ್ರಶಂಸೆ
ನವೆಂಬರ್ ತಿಂಗಳು ಪೂರ್ಣ ಕನ್ನಡ ರಾಜ್ಯೋತ್ಸವ ಆಚರಿಸುವವರಿದ್ದಾರೆ. ಆದರೆ ಆಡಂಬರದ ಜತೆಗೆ ವಿಚಾರ, ಆಲೋಚನೆ, ಹೊಸ ಹೊಸ ವಿಷಯ ಗಮನಿಸಬೇಕು. ಕರಾವಳಿಯ ಪ್ರಧಾನ ಪತ್ರಿಕೆ ಉದಯವಾಣಿ ಬೆಳೆಕನ್ನಡ ಎಂಬ ಲೇಖನ ಪ್ರಕಟಿಸುತ್ತಿದೆ. ಇದರಿಂದ ಯುವ ಪೀಳಿಗೆಗೆ ಅವಕಾಶ ಕಲ್ಪಿಸುವ ಕೆಲಸ ಮಾಡಿದೆ ಎಂದು ಡಾ| ಪಾದೇಕಲ್ಲು ವಿಷ್ಣು ಭಟ್ಟ ಪ್ರಶಂಸಿಸಿದರು.
ಸಾಹಿತ್ಯ ಕೃಷಿ ಇಲ್ಲದ ಸಮಾಜ ಸತ್ವಹೀನ : ಡಾ.ಹೆಗ್ಗಡೆ
ಸ್ವಾಗತಿಸಿ ಮಾತನಾಡಿದ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು, ಯುನೆಸ್ಕೋ ವರದಿ ಪ್ರಕಾರ ಅಳಿವಿನ ಅಂಚಿನಲ್ಲಿರುವ ನೂರಾರು ಪ್ರಾದೇಶಿಕ ಭಾಷೆಗಳ ಪೈಕಿ ಕನ್ನಡವೂ ಇದೆ ಎಂಬುದು ಆತಂಕದ ಸಂಗತಿ. ಭಾಷೆ ನಾಶವಾದರೆ ಸಾಹಿತ್ಯವೂ ನಾಶ ಎಂಬುದನ್ನು ಪ್ರತ್ಯೇಕ ಹೇಳಬೇಕಿಲ್ಲ. ಕೃಷಿಯಿಲ್ಲದ ದೇಶ ದುಃಸ್ಥಿತಿ ಹೊಂದುತ್ತದೆ ಎಂಬ ಮಾತು ಸ್ಮತಿಯಲ್ಲಿದೆ. ಅಂತೆಯೇ ಸಾಹಿತ್ಯ ಕೃಷಿಯೂ ಇಲ್ಲದ ಸಮಾಜ ಸತ್ವಹೀನವಾದೀತು ಎಂದು ಕಳವಳ ವ್ಯಕ್ತಪಡಿಸಿದರು.
ಸಾಹಿತ್ಯವನ್ನು ಬರೆಯುವ ಓದುವ ಮತ್ತು ಚಿಂತನ ಮಂಥನ ಮಾಡುವ ಕೆಲಸಗಳು ನಿರಂತರ ನಡೆಯುಬೇಕು. ಹಲವು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದು ಕನ್ನಡ ಸಾಹಿತ್ಯ ಶ್ರೀಮಂತವಾಗಿದೆ. ದೀಪ ಯಾವತ್ತೂ ಮಾತನಾಡುವುದಿಲ್ಲ. ಆದರೆ ಬೆಳಕು ಮಾತನಾಡುತ್ತದೆ. ಸಾಹಿತ್ಯ ಪುಸ್ತಕಗಳು ಮೌನವಾಗಿದ್ದು, ನಮ್ಮ ಜ್ಞಾನವನ್ನು ಹೆಚ್ಚಿಸುತ್ತದೆ ಎಂದರು.
ಸೇವಾರೂಪದಲ್ಲಿ 4330ಕ್ಕೂ ಮಿಕ್ಕಿ ಕಲಾವಿದರು
ಲಕ್ಷ ದೀಪೋತ್ಸವದಲ್ಲಿ ವಿವಿಧೆಡೆಗಳಿಂದ ಕಲಾವಿದರು ಶ್ರೀ ಕ್ಷೇತ್ರಕ್ಕೆ ಆಗಮಿಸಿ, ಶ್ರೀ ಮಂಜುನಾಥಸ್ವಾಮಿಗೆ ಸೇವೆಯ ರೂಪದಲ್ಲಿ ಸೇವೆ ಸಲ್ಲಿಸಿದರು. ಈ ಬಾರಿ ಕರ್ನಾಟಕ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯ ಗಳ ವಾಲಗ-285 ತಂಡ (1000 ಮಂದಿ), ಬ್ಯಾಂಡ್- 85 ತಂಡ (750 ಮಂದಿ), ಶಂಖ-97, ಜಾಗಟೆ-21 ತಂಡ, ಡೊಳ್ಳು ಕುಣಿತ-161 ತಂಡ, ಇತರ-163 ತಂಡ ಸೇರಿದಂತೆ ಒಟ್ಟು 4,330ಕ್ಕೂ ಹೆಚ್ಚು ಕಲಾವಿದರು ಸೇವೆಯಲ್ಲಿ ಭಾಗಿಯಾದರು.
ಶ್ರೀ ಮಂಜುನಾಥ ಸ್ವಾಮಿಗೆ ಗೌರಿಮಾರುಕಟ್ಟೆ ಉತ್ಸವ ನೆರವೇರುವ ಮೂಲಕ ಲಕ್ಷದೀಪೋತ್ಸವ ಸಮಾಪನಗೊಂಡಿತು. ರಾಜೇಶ್ ಕೃಷ್ಣನ್ ಮತ್ತು ತಂಡವು ಸಂಗೀತ ಪ್ರಸ್ತುತಿ ಪಡಿಸಿತು. ಡಿ.1ರಂದು ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜಾ ಕಾರ್ಯಕ್ರಮ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.