ಪಕ್ಷ ಬಿಟ್ಟು ಹೋದವರು ಮತ್ತೆ ಪಕ್ಷಕ್ಕೆ ಸೇರಿಕೊಳ್ಳಲು ಮುಕ್ತ ಅವಕಾಶ : ಡಿ.ಕೆ.ಶಿವಕುಮಾರ್
ಪಕ್ಷಾಂತರ ಪರ್ವಕ್ಕೆ ತೆರೆದ ಕಾಂಗ್ರೆಸ್ ಬಾಗಿಲು
Team Udayavani, Nov 2, 2022, 5:29 PM IST
ಬೆಂಗಳೂರು : ಪಕ್ಷ ಬಿಟ್ಟು ಹೋದವರನ್ನು ಮತ್ತೆ ಸೇರಿಸಿಕೊಳ್ಳುವ ವಿಚಾರದಲ್ಲಿ ಮುಕ್ತ ಅವಕಾಶ ನೀಡಿದ್ದೇವೆ. ಅದಕ್ಕಾಗಿ ಒಂದು ಸಮಿತಿ ಇದೆ. ಪಕ್ಷದ ಸಿದ್ಧಾಂತ ಒಪ್ಪಿಕೊಳ್ಳುವ ಯಾರು ಬೇಕಾದರೂ ಅರ್ಜಿ ಹಾಕಬಹುದು ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಕ್ಷಾಂತರ ಪರ್ವಕ್ಕೆ ಮುನ್ಸೂಚನೆ ನೀಡಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ನಾವು ಎಲ್ಲ ನಾಯಕರ ಜತೆ ಚರ್ಚೆ ಮಾಡಿ, ಪಕ್ಷದ ಅಧ್ಯಕ್ಷನಾಗಿ ಈ ವಿಚಾರ ತಿಳಿಸುತ್ತಿದ್ದೇನೆ. ಯಾರನ್ನು ಸೇರಿಸಿಕೊಳ್ಳಬೇಕು ಯಾರನ್ನು ಸೇರಿಸಿಕೊಳ್ಳಬಾರದು ಎಂಬ ನಿರ್ಧಾರವನ್ನು ಸಮಿತಿ ಕೈಗೊಳ್ಳಲಿದೆ’ ಎಂದರು.
ಪಕ್ಷದ ಟಿಕೆಟ್ ಗೆ ಹಣ ಯಾವ ಮಾನದಂಡದಲ್ಲಿ ನೀಡಬೇಕು ಎಂಬ ಪ್ರಶ್ನೆಗೆ, ‘ಯಾವುದೇ ಮಾನದಂಡವಿಲ್ಲ. ನಾವು ಪಕ್ಷದ ಕಟ್ಟಡ, ಪಕ್ಷದ ನಿಧಿ, ಚುನಾವಣಾ ಪ್ರಚಾರ, ಜಾಹೀರಾತು ನೀಡಲು ಹಣ ಬೇಕಿದೆ. ಪತ್ರಕರ್ತರಿಗೆ ಹಣ ನೀಡುವುದಿಲ್ಲ. ಮುಖಪುಟದ ಜಾಹೀರಾತು ನೀಡಲು ನಮ್ಮ ಬಳಿ ಸರ್ಕಾರ ಇಲ್ಲ. ಪಕ್ಷಕ್ಕೆ 20 ಸಾವಿರಕ್ಕಿಂತ ಹೆಚ್ಚಿನ ನಗದು ಪಡೆಯುವಂತಿಲ್ಲ. ನಮಗೆ ಯಾವುದೇ ಚುನಾವಣಾ ಬಾಂಡ್ ಬರುತ್ತಿಲ್ಲ. ಎಲ್ಲ ಬಿಜೆಪಿಗೆ ಹೋಗುತ್ತಿದೆ. ಹೀಗಾಗಿ ಕಾರ್ಯಕರ್ತರಾದರೂ ಪಕ್ಷಕ್ಕೆ ಹಣ ನೀಡಲಿ’ ಎಂದು ತಿಳಿಸಿದರು.
ಅರ್ಜಿ ಹಾಕಲು ವಯೋಮಿತಿ ಇದೆಯೇ ಎಂಬ ಪ್ರಶ್ನೆಗೆ, ‘ನಮ್ಮಲ್ಲಿ ವಯೋಮಿತಿ ಇಲ್ಲ. ನಮ್ಮಲ್ಲಿ ಮಾರ್ಗದರ್ಶಕ ಮಂಡಲಿ ಇಲ್ಲ. ನಾವು 92 ವರ್ಷದ ಶಾಮನೂರು ಶಿವಶಂಕರಪ್ಪ ಅವರನ್ನು ಇಟ್ಟುಕೊಂಡಿದ್ದೇವೆ. ಅವರು ಬೇರೆಯವರಿಗಿಂತ ಹೆಚ್ಚು ಓಡಾಡುತ್ತಿದ್ದಾರೆ. ಕ್ಷೇತ್ರದ ಎಲ್ಲ ಬೂತ್ ಗಳಿಗೂ ಭೇಟಿ ನೀಡುತ್ತಿದ್ದಾರೆ. ನಮ್ಮ ತಂದೆ ತಾಯಿಗಳನ್ನು ನಾವು ಮನೆಯಿಂದ ಆಚೆ ಹಾಕುವುದಿಲ್ಲ. ಅದಕ್ಕೆ ನಾನು ಅವಕಾಶ ನೀಡುವುದಿಲ್ಲ’ ಎಂದರು.
ಬಿಜೆಪಿಯವರು ಸಮುದಾಯಗಳ ಸಮಾವೇಶ ಮಾಡುತ್ತಿರುವ ಬಗ್ಗೆ ಕೇಳಿದಾಗ, ‘ಅವರಿಗೆ ಜಾತಿ ಇಲ್ಲ. ಹೀಗಾಗಿ ಜಾತಿಗಳ ಬೆಂಬಲ ಹುಡುಕಿಕೊಂಡು ಹೋಗುತ್ತಿದ್ದಾರೆ. ನಾವು ಸರ್ವೋದಯ ಸಮಾವೇಶ ಮಾಡುತ್ತಿದ್ದೇವೆ. ಗಾಂಧಿ ಅವರು ಆರಂಭಿಸಿದ ಸರ್ವೋದಯವನ್ನೇ ಮಲ್ಲಿಕಾರ್ಜುನ ಖರ್ಗೆ ಅವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ’ ಎಂದರು.
ಶ್ರೀರಾಮುಲು ಅವರ ಧರಣಿ ಬಗ್ಗೆ ಕೇಳಿದಾಗ, ‘ಸರ್ಕಾರ ಎಷ್ಟು ವೇಗವಾಗಿದೆ ಎಂಬುದಕ್ಕೆ ಶ್ರೀರಾಮುಲು ಅವರ ಧರಣಿ ಸಾಕ್ಷಿ. ಶ್ರೀರಾಮ ಮಲಗಿರುವುದು ರಾಮ ರಾಜ್ಯ ಏನಾಗುತ್ತಿದೆ ಎಂಬುದಕ್ಕೆ ಸಾಕ್ಷಿ’ ಎಂದರು.
ಇದನ್ನೂ ಓದಿ : ಇಡಿ, ಸಿಬಿಐ ಎಲ್ಲಿದೆ?: ಸೇತುವೆ ಅವಘಡದ ನ್ಯಾಯಾಂಗ ತನಿಖೆಗೆ ಮಮತಾ ಆಗ್ರಹ
ಟಿಕೆಟ್ ಆಕಾಂಕ್ಷಿಗಳಿಗೆ ಅರ್ಜಿ ಆಹ್ವಾನ :
ಕಾಂಗ್ರೆಸ್ ಪಕ್ಷ ಮುಂದಿನ ಚುನಾವಣೆಗೆ ಸಜ್ಜಾಗುತ್ತಿದೆ. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಬಯಸಿರುವವರು ಅರ್ಜಿ ಹಾಕಲು ಅವಕಾಶ ಕಲ್ಪಿಸಲಾಗಿದೆ. ನವೆಂಬರ್ 5 ರಿಂದ 15 ರವರೆಗೆ ಅರ್ಜಿ ಹಾಕಬಹುದು. ಅರ್ಜಿಗೆ 5 ಸಾವಿರ ರು. ಶುಲ್ಕ. ಅರ್ಜಿ ಸಲ್ಲಿಸುವಾಗ ಸಾಮಾನ್ಯ ವರ್ಗದವರು 2 ಲಕ್ಷ ರು ಡಿಡಿ, ಕಾಂಗ್ರೆಸ್ ಸದಸ್ಯತ್ವ ವಿವರ ಲಗತ್ತಿಸಬೇಕು. ಪರಿಶಿಷ್ಟ ವರ್ಗದವರಿಗೆ ಶೇ. 50 ರಷ್ಟು ವಿನಾಯಿತಿ ನೀಡಲಾಗಿದೆ. ಈ ಹಣ ಪಕ್ಷದ ಕಟ್ಟಡ ಕಾಮಗಾರಿ ನಿಧಿಗೆ ಜಮೆ ಆಗಲಿದೆ.
2023 ರ ಚುನಾವಣೆಯಲ್ಲಿ ಹಾಲಿ ಶಾಸಕರ ಸಮೇತ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದು. ನಾನು ಕೂಡ ಚುನಾವಣೆಯಲ್ಲಿ ಸ್ಪರ್ಧಿಸಲು ಈ ಅರ್ಜಿ ಹಾಕಬೇಕು. ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ ಎಂದರು.
ಮತ್ತೆ ಸದಸ್ಯತ್ವ ನೋಂದಣಿ ಆರಂಭ:
ಹಲವು ಮಂದಿ ಕಾಂಗ್ರೆಸ್ ಸದಸ್ಯತ್ವ ಪಡೆಯಲು ಉತ್ಸುಕರಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಆನ್ ಲೈನ್ ಮೂಲಕ ನೋಂದಣಿ ಆರಂಭಿಸಿದ್ದೇವೆ. ಕೆಲವು ನಾಯಕರು ಕಾಂಗ್ರೆಸ್ ಸೇರಲು ಬಯಸಿದ್ದು, ನನ್ನ ಸಂಪರ್ಕದಲ್ಲಿದ್ದಾರೆ. ಅವರ ಹೆಸರನ್ನು ಈಗ ಬಹಿರಂಗ ಪಡಿಸುವುದಿಲ್ಲ. ಕಾಂಗ್ರೆಸ್ ಪಕ್ಷದ ಸಿದ್ಧಾಂತ, ಮಲ್ಲಿಕಾರ್ಜುನ್ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ನಾಯಕತ್ವ ಒಪ್ಪಿ ಬೇಷರತ್ತಾಗಿ ಪಕ್ಷ ಸೇರಲು ಬಯಸುವವರು ಅರ್ಜಿ ಹಾಕಬಹುದು. ಅವರಿಗೆ ಮುಕ್ತ ಅವಕಾಶ ನೀಡಲಾಗಿದೆ. ಅರ್ಜಿ ಹಾಕಿದ ನಂತರ ಅಲ್ಲಂ ವೀರಭದ್ರಪ್ಪ ಅವರ ನೇತೃತ್ವದ ಸಮಿತಿ ಯಾರನ್ನು ಸೇರಿಸಿಕೊಳ್ಳಬೇಕು ಎಂದು ತೀರ್ಮಾನಿಸಲಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.