ಸೇರಿಗೆ ಸವ್ವಾಸೇರು ತಂತ್ರ: ದೋಸ್ತಿಗಳಿಗೆ ಇಕ್ಕಟ್ಟಾದ ಮೈತ್ರಿ ಧರ್ಮ ಪಾಲನೆ ಮಂತ್ರ
ಆಟವಾಡಿದ ನಾಯಕರ ವಿರುದ್ಧ ಕ್ರಮಕ್ಕೆ ಮಿತ್ರರ ಆಗ್ರಹ
Team Udayavani, May 5, 2019, 6:15 AM IST
ಬೆಂಗಳೂರು: ಮೈತ್ರಿ ಧರ್ಮ ಉಲ್ಲಂಘನೆ ಈಗ ದೋಸ್ತಿಗಳ ಪಾಲಿಗೆ ಸವಾಲಾಗಿ ಕುಳಿತಿದೆ! “ಆಟ’ವಾಡಿದ ನಾಯಕರ ವಿರುದ್ಧ ಕ್ರಮಕ್ಕೆ ಎರಡೂ ಪಕ್ಷಗಳು ಆಗ್ರಹಿಸಲಾರಂಭಿಸಿವೆ.
ಮೈತ್ರಿ ಪರವಾಗಿ ಕೆಲಸ ಮಾಡದ ಮಂಡ್ಯ, ತುಮಕೂರು ಮತ್ತು ಹಾಸನದ ಕಾಂಗ್ರೆಸ್ ನಾಯಕರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಜೆಡಿಎಸ್ ಆಗ್ರಹಿಸುತ್ತಿರುವ ಬೆನ್ನಲ್ಲೇ, ಕಾಂಗ್ರೆಸ್ ಕೂಡ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಮೈಸೂರಿನಲ್ಲಿ ದೋಸ್ತಿ ವಿರುದ್ಧವಾಗಿ ಕೆಲಸ ಮಾಡಿರುವ ಜೆಡಿಎಸ್ ನಾಯಕರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಲು ನಿರ್ಧರಿಸಿದೆ. ಈ ಮೂಲಕ ದೋಸ್ತಿಗಳು “ಸೇರಿಗೆ ಸವ್ವಾಸೇರು’ ತಂತ್ರಗಾರಿಕೆಯ ಮೊರೆ ಹೋಗಿದ್ದಾರೆ.
ಪ್ರಮುಖವಾಗಿ ಮಂಡ್ಯ ವಿಚಾರದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತೀವ್ರ ಬೇಸರಗೊಂಡು ಅಲ್ಲಿ ಮೈತ್ರಿ ಧರ್ಮ ಪಾಲನೆ ಮಾಡದಿರುವ ಮಾಜಿ ಶಾಸಕರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹಾಕುತ್ತಿದ್ದಾರೆ. ಹೀಗಾಗಿಯೇ ಮಂಡ್ಯದ ಮಾಜಿ ಶಾಸಕರನ್ನು ಕರೆಸಿ ಸ್ಪಷ್ಟನೆ ಪಡೆಯಲಾಗಿದೆ. ಆದರೆ ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಈಗಾಗಲೇ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರೇ ಹೇಳಿದ್ದಾರೆ.
ಇದೀಗ ಅವರೇ ಒಂದು ಹೆಜ್ಜೆ ಮುಂದೆ ಹೋಗಿ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಮೈಸೂರಿನಲ್ಲಿ ಜೆಡಿಎಸ್‌ನವರು ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡಿಲ್ಲ ಎಂಬ ದೂರುಗಳ ಬಗ್ಗೆಯೂ ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ.
ಜೆಡಿಎಸ್ ನಾಯಕರ ಒತ್ತಡಕ್ಕೆ ಮಣಿದು ಕಾಂಗ್ರೆಸ್‌ನವರ ವಿರುದ್ಧ ಕ್ರಮ ಕೈಗೊಂಡರೆ ಮುಂದಿನ ದಿನಗಳಲ್ಲಿ ಪಕ್ಷದ ಭವಿಷ್ಯಕ್ಕೆ ಕುತ್ತು ಬರುವ ಸಾಧ್ಯತೆಯಿದೆ. ಎರಡೂ ಪಕ್ಷಗಳ ಕಡೆಯಿಂದಲೂ ತಪ್ಪು ನಡೆದಿದೆ. ಹೀಗಾಗಿ ಫಲಿತಾಂಶ ಹೊರಬೀಳುವವರೆಗೂ ಕಾದು ನೋಡಿ ಅನಂತರ ಅಗತ್ಯವಾದರೆ ಕ್ರಮ ಕೈಗೊಳ್ಳಬಹುದು ಎಂದು ದಿನೇಶ್ ಗುಂಡೂರಾವ್ ಅವರು ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರಿಗೆ ಹೇಳಿದ್ದಾರೆ.
ಹೀಗಾಗಿ ಮೇ 23ರ ವರೆಗೆ ಯಾರ ವಿರುದ್ಧವೂ ಕ್ರಮ ಕೈಗೊಳ್ಳದಿರಲು ತೀರ್ಮಾನಿಸಲಾಗಿದೆ. ಜತೆಗೆ ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು ಕ್ಷೇತ್ರಗಳಲ್ಲಿ ಜೆಡಿಎಸ್ ಮುಖಂಡರು ಬಿಜೆಪಿ ಪರ ಕೆಲಸ ಮಾಡಿರುವ ಬಗ್ಗೆ ದಾಖಲೆ ಸಂಗ್ರಹಿಸಿ ಹೈಕಮಾಂಡ್‌ಗೆ ಕಳುಹಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.
ದೋಸ್ತಿ ಒಡಕು ಲಾಭಕ್ಕೆ ಬಿಜೆಪಿ ತಂತ್ರ
ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಮೈತ್ರಿ ಧರ್ಮ ಪಾಲನೆ ಬಗ್ಗೆ ಅಪಸ್ವರ ಕೇಳಿಬಂದಿರುವ ಹೊತ್ತಲ್ಲೇ, ಇದರ ಲಾಭ ಪಡೆಯಲು ಬಿಜೆಪಿ ಮುಂದಾಗಿದೆ. ಸದ್ಯದಲ್ಲೇ ನಡೆಯಲಿರುವ ಎರಡೂ ಉಪಚುನಾವಣೆಗಳಲ್ಲಿ ಗೆದ್ದು ವಿಧಾನಸಭೆಯಲ್ಲಿ ಸಂಖ್ಯಾಬಲ ಹೆಚ್ಚಿಸಿಕೊಳ್ಳುವ ಬಗ್ಗೆ ತಂತ್ರಗಾರಿಕೆ ರೂಪಿಸುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರ ಹೆಸರಿನಲ್ಲಿ ಅಭ್ಯರ್ಥಿಗಳು ಸಹಿತ ರಾಜ್ಯ ಬಿಜೆಪಿ ನಾಯಕರು ಮತ ಯಾಚಿಸಿದ್ದರು. ಈಗ ವಿಧಾನಸಭೆ ಉಪಚುನಾವಣೆ ಎದುರಾಗಿರುವುದರಿಂದ ಇತ್ತೀಚಿನ ಮೈತ್ರಿ ತಿಕ್ಕಾಟವನ್ನೇ ಚುನಾವಣ ವಿಚಾರವಾಗಿಟ್ಟುಕೊಂಡು ಪ್ರಚಾರ ನಡೆಸಲು ಮುಂದಾಗಿದ್ದಾರೆ. ಜತೆಗೆ ರವಿವಾರದಿಂದಲೇ ಯಡಿಯೂರಪ್ಪ ಕುಂದಗೋಳ ಮತ್ತು ಚಿಂಚೋಳಿಯಲ್ಲಿ ಪ್ರಚಾರ ನಡೆಸಲಿದ್ದಾರೆ.
ಲೋಕಲ್‌ನಲ್ಲಿ ಜೆಡಿಎಸ್ ಏಕಾಂಗಿ ಸ್ಪರ್ಧೆ
ರಾಜ್ಯದ 22 ಜಿಲ್ಲೆಗಳ 63 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜಾಗುವಂತೆ ಜೆಡಿಎಸ್, ಎಲ್ಲ ಜಿಲ್ಲಾ ಮತ್ತು ತಾಲೂಕು ಘಟಕಗಳಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಸೂಚನೆ ನೀಡಿದ್ದು, ಬಹುತೇಕ ಏಕಾಂಗಿಯಾಗಿಯೇ ಸ್ಪರ್ಧೆಗೆ ತೀರ್ಮಾನಿಸಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮೈತ್ರಿ ಕಷ್ಟವಾಗಿರುವುದರಿಂದ ಕಾಂಗ್ರೆಸ್ ಪಕ್ಷವು ಈ ಬಗೆಗಿನ ನಿರ್ಧಾರವನ್ನು ಜಿಲ್ಲಾ ಮತ್ತು ತಾಲೂಕು ಘಟಕಗಳ ನಿರ್ಧಾರಕ್ಕೆ ಬಿಟ್ಟಿದೆ. ಅದೇ ರೀತಿ ಜೆಡಿಎಸ್ ಸಹ ಸ್ಥಳೀಯವಾಗಿ ಬಿಜೆಪಿ ಹೊರತುಪಡಿಸಿ
ಇತರ ಪಕ್ಷಗಳ ಜತೆ ಅನಿವಾರ್ಯ ಮತ್ತು ಅಗತ್ಯ ಇದ್ದರೆ ಹೊಂದಾಣಿಕೆ ಮಾಡಿಕೊಳ್ಳಿ ಎಂದು ಮೌಖೀಕವಾಗಿ ಹೇಳಿದೆ ಎಂದು ತಿಳಿದುಬಂದಿದೆ.
ಬಿಜೆಪಿಗೆ ಹೆಚ್ಚು ಸ್ಥಾನ ಬಂದರೆ “ಆಪರೇಷನ್ ಕಮಲ’
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಿದರೆ ಮೈತ್ರಿ ಸರಕಾರ ಅಸ್ಥಿರಗೊಳಿಸಲು ಮತ್ತೆ ಬಿಜೆಪಿ ನಾಯಕರು ಪ್ರಯತ್ನ ಮಾಡುವುದು ನಿಶ್ಚಿತ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಒಂದು ವೇಳೆ ಕಡಿಮೆ ಸ್ಥಾನ ಬಂದರೆ ಆಪರೇಷನ್ ಕಮಲದ ಆಟ ನಡೆಯುವ ಸಾಧ್ಯತೆ ಇಲ್ಲ. ಆದರೆ ಮೋದಿ ಸರಕಾರದ ಅವಧಿಯಲ್ಲಿ ರಾಜ್ಯ ಸರಕಾರಗಳನ್ನು ಅಸ್ಥಿರಗೊಳಿಸುವ ಹುನ್ನಾರ ಸಾಮಾನ್ಯವಾಗಿದೆ. ಇಂತಹ ಬೆಳವಣಿಗೆಗಳು ಪ್ರಜಾಪ್ರಭುತ್ವಕ್ಕೆ ಮಾರಕ ಎಂದರು. ಲೋಕಸಭೆ ಚುನಾವಣೆ ವೇಳೆ ರಾಜ್ಯದ ಹಲವು ಕಡೆಗಳಲ್ಲಿ ಮೈತ್ರಿ ಧರ್ಮ ಸರಿಯಾಗಿ ಪಾಲನೆ ಆಗಿಲ್ಲ. ಮುಂದಿನ ದಿನಗಳಲ್ಲಿ ಇದನ್ನು ಸರಿ ಮಾಡುವ ಪ್ರಯತ್ನ ಮಾಡಬೇಕು. ಚಿಂಚೋಳಿ ಮತ್ತು ಕುಂದಗೋಳ ಉಪಚುನಾವಣೆಗಳಲ್ಲಿ ಗೆಲ್ಲಲು ಎಲ್ಲ ರೀತಿಯ ಯೋಜನೆ ರೂಪಿಸಲಾಗಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.