ಕೈ ಅಧ್ಯಕ್ಷ ಚುನಾವಣೆ; ಕೇಸರಿಗೆ ಅವಮಾನ-ಅಂದು ಸೋನಿಯಾ ವಿರುದ್ಧ ಪೈಲಟ್, ಪ್ರಸಾದ್ ರಣಕಹಳೆ…
ಇಟಲಿ ಮೂಲ…ಸೋನಿಯಾ ವಿರುದ್ಧ ತಿರುಗಿಬಿದ್ದ ಪವಾರ್, ಸಂಗ್ಮಾ
Team Udayavani, Sep 30, 2022, 6:34 PM IST
1991ರಲ್ಲಿ ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ತಮಿಳುನಾಡಿನ ಶ್ರೀಪೆರುಂಬುದೂರ್ ಗೆ ತೆರಳಿದ್ದ ಸಂದರ್ಭದಲ್ಲಿ ಎಲ್ ಟಿಟಿಇ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಹತ್ಯೆಗೀಡಾಗಿದ್ದರು. ನಂತರ ನಡೆದ 10ನೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಗಳಿಸಿತ್ತು. ಆದರೆ ಪೂರ್ಣ ಬಹುಮತ (ಕಾಂಗ್ರೆಸ್ 244 ಸ್ಥಾನಗಳಲ್ಲಿ ಜಯಗಳಿಸಿತ್ತು) ಸಿಗಲಿಲ್ಲವಾಗಿತ್ತು. ಈ ಸಂದರ್ಭದಲ್ಲಿ ಸೋನಿಯಾ ಗಾಂಧಿ ರಾಜಕೀಯ ಪ್ರವೇಶಿಸಲು ನಿರಾಕರಿಸಿದ್ದರು. ಕೊನೆಗೆ ಇತರ ಪಕ್ಷಗಳ ಬೆಂಬಲದೊಂದಿಗೆ ಪಿವಿ ನರಸಿಂಹ ರಾವ್ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿತ್ತು.
1996ರಲ್ಲಿ ಪಿವಿ ನರಸಿಂಹ ರಾವ್ ಸರ್ಕಾರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರದಿಂದ ಹೊರಗುಳಿದುಬಿಟ್ಟಿತ್ತು. ಕಾಂಗ್ರೆಸ್ 140 ಸ್ಥಾನಗಳಲ್ಲಿ ಜಯಗಳಿಸಿದ್ದು, ಬಿಜೆಪಿ 161 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಈ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಪಕ್ಷದ ಪರ ಪ್ರಚಾರಕ್ಕೆ ಹೋಗಿರಲಿಲ್ಲವಾಗಿತ್ತು.
ದಿಢೀರ್ ರಾಜಕೀಯ ಪ್ರವೇಶಿಸಿದ್ದ ಸೋನಿಯಾ:
1997ರಲ್ಲಿ ಸೋನಿಯಾ ಗಾಂಧಿ ದಿಢೀರನೆ 1998ರ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ಮಾಡುವುದಾಗಿ ಘೋಷಿಸಿಬಿಟ್ಟಿದ್ದರು. ಆ ಸಂದರ್ಭದಲ್ಲಿ ಸೀತಾರಾಮ್ ಕೇಸರಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು. 1997ರ ಡಿಸೆಂಬರ್ ನಲ್ಲಿ ಕೋಲ್ಕತದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಇದಾದ ನಂತರ ಪತಿ ರಾಜೀವ್ ಗಾಂಧಿ ಹತ್ಯೆಗೀಡಾಗಿದ್ದ ತಮಿಳುನಾಡಿನಲ್ಲಿ ಮೊದಲ ಚುನಾವಣಾ ಪ್ರಚಾರ ರಾಲಿಯನ್ನು ಉದ್ದೇಶಿಸಿ ಮಾತನಾಡಿದ್ದರು.
ಏತನ್ಮಧ್ಯೆ ಸೋನಿಯಾ ಗಾಂಧಿ ಪಕ್ಷಕ್ಕೆ ಸೇರ್ಪಡೆಯಾದ ನಿರ್ಧಾರವನ್ನು ಸೀತಾರಾಮ್ ಕೇಸರಿ ಸ್ವಾಗತಿಸಿದ್ದರು. 1998ರ ಮಾರ್ಚ್ 14ರಂದು ಸೀತಾರಾಮ್ ಕೇಸರಿಗೆ ಅಧ್ಯಕ್ಷ ಸ್ಥಾನವನ್ನು ಸೋನಿಯಾ ಗಾಂಧಿಗೆ ಬಿಟ್ಟುಕೊಡುವಂತೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸೂಚನೆ ನೀಡಿತ್ತು.
ಸೀತಾರಾಮ್ ಕೇಸರಿಗೆ ಅವಮಾನ ಮಾಡಿ ಹೊರಹಾಕಿದ್ರು!
ಕಾಂಗ್ರೆಸ್ ಅಧ್ಯಕ್ಷ ಪಟ್ಟದಿಂದ ಕೆಳಗಿಳಿಯಲು ಸೀತಾರಾಮ್ ಕೇಸರಿ ನಿರಾಕರಿಸಿಬಿಟ್ಟಿದ್ದರು. ಆದರೆ ಕೇಸರಿಯನ್ನು ಸಿಡಬ್ಲ್ಯುಸಿ ಅಧ್ಯಕ್ಷಗಾದಿಯಿಂದ ವಜಾಗೊಳಿಸಿತ್ತು. ಸೀತಾರಾಮ್ ಕೇಸರಿಯನ್ನು ಕಾಂಗ್ರೆಸ್ ಅದ್ಯಾವ ಪರಿ ಅವಮಾನಗೊಳಿಸಿತ್ತು ಅಂದರೆ, ಕಾಂಗ್ರೆಸ್ ಕಚೇರಿಯಲ್ಲಿದ್ದ ಕೇಸರಿ ಅವರ ವಸ್ತುಗಳನ್ನು ಜೀಪಿನಲ್ಲಿ ತುಂಬಿ ಕಳುಹಿಸಿಕೊಡಲಾಗಿತ್ತು. ಇನ್ಯಾವತ್ತೂ ಕಾಂಗ್ರೆಸ್ ಕಚೇರಿಯತ್ತ ಮುಖ ತೋರಿಸಬೇಡಿ ಎಂಬ ಪರೋಕ್ಷ ಸಂದೇಶವನ್ನು ರವಾನಿಸಿತ್ತು. ಮತ್ತೊಂದೆಡೆ ಸೋನಿಯಾ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಪಟ್ಟ ಕಟ್ಟಲು ಸಿದ್ಧತೆ ನಡೆಸಿತ್ತು. ಅಂದು ಸೋನಿಯಾ ಗಾಂಧಿ ಕಾಂಗ್ರೆಸ್ ಕಚೇರಿಗೆ ಆಗಮಿಸುವ ದಿನದಂದು ಸೀತಾರಾಮ್ ಕೇಸರಿಯನ್ನು ಬಲವಂತವಾಗಿ ಕೋಣೆಯೊಳಗೆ ಕೂಡಿ ಹಾಕಲಾಗಿತ್ತು. ನಂತರ ಸೋನಿಯಾ ಕಚೇರಿಯೊಳಗೆ ಆಗಮಿಸುತ್ತಿದ್ದಂತೆಯೇ ಆಕೆಯ ಬೆಂಬಲಿಗರು ಘೋಷಣೆ ಕೂಗಿದ್ದರು. ಕೊನೆಗೂ ಸೋನಿಯಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ್ದರು. ಸೋನಿಯಾ ಗಾಂಧಿ ಪಕ್ಷದ ನೇತೃತ್ವ ವಹಿಸಿದ ಮೇಲೆ ಎಲ್ಲವೂ ಸುಲಲಿತವಾಗಿ ನಡೆಯಲಿದೆ ಎಂದು ಹಲವು ಕಾಂಗ್ರೆಸ್ಸಿಗರು ಭಾವಿಸಿದ್ದರು, ಆದರೆ ಕಾಂಗ್ರೆಸ್ ಆ ಬಳಿಕ ದೊಡ್ಡ ಸಮಸ್ಯೆಯನ್ನೇ ಎದುರಿಸಲು ನಾಂದಿ ಹಾಡಿತ್ತು!
ಇಟಲಿ ಮೂಲ…ಸೋನಿಯಾ ವಿರುದ್ಧ ತಿರುಗಿಬಿದ್ದ ಪವಾರ್, ಸಂಗ್ಮಾ:
1999ರ ಮೇನಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಇಟಲಿ ಮೂಲದ ಸೋನಿಯಾ ಗಾಂಧಿಯನ್ನು ಆಯ್ಕೆ ಮಾಡಬಾರದು ಎಂದು ಕಾಂಗ್ರೆಸ್ ಹಿರಿಯ ಮುಖಂಡರಾದ ತಾರಿಖ್ ಅನ್ವರ್, ಶರದ್ ಪವಾರ್ ಮತ್ತು ಪಿಎ ಸಂಗ್ಮಾ ಬಂಡಾಯ ಎದ್ದುಬಿಟ್ಟಿದ್ದರು. ರಾಜಕೀಯ ಅನುಭವ ಮತ್ತು ಸಾರ್ವಜನಿಕ ಜೀವನದ ಬಗ್ಗೆ ಇರುವ ತಿಳಿವಳಿಕೆಯನ್ನು ಪ್ರಶ್ನಿಸಿ ಮೂವರು ಸೋನಿಯಾಗೆ ಪತ್ರ ಬರೆದಿದ್ದರು. ಇದರ ಪರಿಣಾಮ ಮೂವರು ಮುಖಂಡರನ್ನು ಕಾಂಗ್ರೆಸ್ ಪಕ್ಷದಿಂದ ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಪಕ್ಷದಿಂದ ಉಚ್ಛಾಟಿಸಲ್ಪಟ್ಟ ಪವಾರ್, ಅನ್ವರ್ ಮತ್ತು ಸಂಗ್ಮಾ ಸೇರಿಕೊಂಡು ನೂತನ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷವನ್ನು ರಚಿಸಿದ್ದರು.
ಸೋನಿಯಾ 2000ನೇ ಇಸವಿಯಲ್ಲಿ ಸೀತಾರಾಮ್ ಕೇಸರಿ ಅವರ ಉಳಿದ ಅವಧಿಯನ್ನು ಪೂರ್ಣಗೊಳಿಸುವುದರೊಂದಿಗೆ, ಕಾಂಗ್ರೆಸ್ ಪಕ್ಷಕ್ಕೆ ನೂತನ ಅಧ್ಯಕ್ಷರ ಆಯ್ಕೆ ಮಾಡುವ ಪ್ರಸಂಗ ಎದುರಾಗಿತ್ತು. ಈಗಾಗಲೇ ಸೀತಾರಾಮ್ ಕೇಸರಿ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿತ್ತು. ಅಲ್ಲದೇ ಮೂವರು ಬಂಡಾಯ(ಪವಾರ್, ತಾರಿಖ್, ಸಂಗ್ಮಾ) ಮುಖಂಡರನ್ನು ಪಕ್ಷದಿಂದ ಉಚ್ಛಾಟಿಸಿರುವುದರಿಂದ ಸೋನಿಯಾ ಅವರನ್ನು ಅವಿರೋಧವಾಗಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಬಹುದು ಎಂಬುದು ಆಪ್ತ ವಲಯದ ಲೆಕ್ಕಾಚಾರವಾಗಿತ್ತು.
ಪೈಲಟ್, ಪ್ರಸಾದ್ ಸೋನಿಯಾ ವಿರುದ್ಧ ರಣಕಹಳೆ:
ಸೋನಿಯಾ ಇಟಲಿ ಮೂಲ ಪ್ರಶ್ನಿಸಿದ್ದ ಪವಾರ್, ಸಂಗ್ಮಾ ಮತ್ತು ತಾರಿಖ್ ಅವರನ್ನು ಪಕ್ಷದಿಂದ ಉಚ್ಛಾಟಿಸಿದ್ದ ನಂತರ ಯಾವ ಅಪಸ್ವರವೂ ಇಲ್ಲ ಅಂತ ಭಾವಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ಆಘಾತ ಕಾದಿತ್ತು. ಯಾಕೆಂದರೆ ರಾಜೇಶ್ ಪೈಲಟ್ ಮತ್ತು ಜಿತೇಂದ್ರ ಪ್ರಸಾದ್ ವಂಶಾಡಳಿತ ಹಾಗೂ ಸೋನಿಯಾ ಕೈಯಿಂದ ಪಕ್ಷದ ಅಧ್ಯಕ್ಷ ಪಟ್ಟ ಕಸಿದುಕೊಳ್ಳುವ ನಿಟ್ಟಿನಲ್ಲಿ ಬಹಿರಂಗವಾಗಿ ಸಮರ ಸಾರಿ ಬಿಟ್ಟಿದ್ದರು.
ಸೋನಿಯಾ ಗಾಂಧಿಗೆ ಅಧ್ಯಕ್ಷ ಪಟ್ಟ ಸಿಗಬಾರದು ಎಂದು ಪೈಲಟ್ ಮತ್ತು ಪ್ರಸಾದ್ ಭರ್ಜರಿ ಪ್ರಚಾರ ಹಾಗೂ ರಾಲಿಯನ್ನು ನಡೆಸಿದ್ದರು. ಆದರೆ ಸೋನಿಯಾ ಆಪ್ತ ವಲಯ ನೆಹರು ಮತ್ತು ಗಾಂಧಿ ಕುಟುಂಬದ ಕೊಡುಗೆ ಮತ್ತು ತ್ಯಾಗದ ಬಗ್ಗೆ ಹೇಳುವ ಮೂಲಕ ಬಾಯ್ಮುಚ್ಚಿಸುವ ಕೆಲಸ ಮಾಡಿದ್ದರು. ಇಷ್ಟೆಲ್ಲಾ ಜಟಾಪಟಿ ನಡೆಯುತ್ತಿದ್ದರೂ ಪೈಲಟ್ ತಾನು ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂಬುದನ್ನು ಬಹಿರಂಗವಾಗಿ ಹೇಳಿರಲಿಲ್ಲವಾಗಿತ್ತು. ದುರಂತವೆಂದರೆ 2,000ನೇ ಇಸವಿ ಜೂನ್ ನಲ್ಲಿ ಪೈಲಟ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇದರ ಪರಿಣಾಮ ಕಾಂಗ್ರೆಸ್ ಅಧ್ಯಕ್ಷ ಪಟ್ಟದ ವಿಚಾರದಲ್ಲಿ ಸೋನಿಯಾ ವಿರುದ್ಧ ಪ್ರಸಾದ್ ಏಕಾಂಗಿಯಾಗಿ ಹೋರಾಟಕ್ಕಿಳಿಯಬೇಕಾದ ಪ್ರಸಂಗ ಎದುರಾಗಿಬಿಟ್ಟಿತ್ತು.
ಬಂಡಾಯ ನಾಯಕ ಜಿತೇಂದ್ರ ಪ್ರಸಾದ್ ಅವರು ಪಕ್ಷದೊಳಗಿಂದಲೇ ಬದಲಾವಣೆ ತರಬೇಕೆಂದು ಬಯಸಿದ್ದರು. ಈ ಕಾರಣದಿಂದಲೇ 1999ರಲ್ಲಿ ಗೆಳೆಯ ಪವಾರ್ ಹೊಸ ಪಕ್ಷ ಸ್ಥಾಪಿಸಿದ್ದ ವೇಳೆ ಕಾಂಗ್ರೆಸ್ ತೊರೆಯಲು ನಿರಾಕರಿಸಿದ್ದರು. ನನಗೆ ಸೋನಿಯಾ ಗಾಂಧಿ ವಿರುದ್ಧ ಯಾವುದೇ ವೈಯಕ್ತಿಕ ದ್ವೇಷವಿಲ್ಲ, ಆದರೆ ಭಿನ್ನಾಭಿಪ್ರಾಯ ಮತ್ತು ಆಂತರಿಕ ಪ್ರಜಾಪ್ರಭುತ್ವದ ಹಕ್ಕನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ ಎಂದು ಪ್ರಸಾದ್ ತಿಳಿಸಿದ್ದರು.
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರಸಾದ್ ಕಾಂಗ್ರೆಸ್ ಘಟಕದಿಂದ ಹೆಚ್ಚು ಬೆಂಬಲ ದೊರಕದಿದ್ದರು ಕೂಡಾ ದೇಶಾದ್ಯಂತ ಪ್ರವಾಸ ಕೈಗೊಂಡಿದ್ದರು. ಪ್ರಸಾದ್ ಉತ್ತರಪ್ರದೇಶದ ಲಕ್ನೋಗೆ ಹೋಗಿದ್ದ ವೇಳೆ ಕಾಂಗ್ರೆಸ್ ಕಚೇರಿಗೆ ಬೀಗ ಹಾಕಲಾಗಿತ್ತು. ಅಲ್ಲಿ ಯಾರೊಬ್ಬರೂ ಇರಲಿಲ್ಲವಾಗಿತ್ತು. ಅಂದರೆ ಕಾಂಗ್ರೆಸ್ ಪಕ್ಷ ಹೇಗೆ ಕಾರ್ಯನಿರ್ವಹಿಸುತ್ತಿತ್ತು ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ಇಫ್ತಿಕರ್ ಗಿಲಾನಿ ಇಂಡಿಯಾ ಟುಡೇಗೆ ತಿಳಿಸಿದ್ದಾರೆ.
22 ವರ್ಷಗಳ ಹಿಂದೆಯೂ ಅದೇ ಬೇಡಿಕೆ ಬಂದಿತ್ತು!
ಇದೀಗ ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ 20 ವರ್ಷ ಕಳೆದಿದೆ, ಏತನ್ಮಧ್ಯೆ ರಾಹುಲ್ ಗಾಂಧಿ ಎರಡು ವರ್ಷ ಅಧ್ಯಕ್ಷರಾಗಿದ್ದು, ಇದರೊಂದಿಗೆ ಕಳೆದ 22 ವರ್ಷಗಳಿಂದ ಕಾಂಗ್ರೆಸ್ ಅಧ್ಯಕ್ಷ ಪಟ್ಟ ಗಾಂಧಿ ಕುಟುಂಬದ ಬಳಿಯೇ ಇತ್ತು. ಇದೀಗ ಮತ್ತೆ ಅಧ್ಯಕ್ಷ ಚುನಾವಣೆ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ. ಆದರೆ ಇತ್ತೀಚೆಗಷ್ಟೇ ಶಶಿ ತರೂರ್ ಮತ್ತು ಮನೀಶ್ ತಿವಾರಿ ಮುಕ್ತ ಮತ್ತು ಪಾರದರ್ಶಕ ಚುನಾವಣೆ ನಡೆಸುವಂತೆ ಕರೆ ನೀಡಿದ್ದರು. ಅಷ್ಟೇ ಅಲ್ಲ ಕಾಂಗ್ರೆಸ್ ಹೈಕಮಾಂಡ್ ಮತದಾರರ ಪಟ್ಟಿ ಮತ್ತು ಅವರ ಮೊಬೈಲ್ ನಂಬರ್ ಅನ್ನು ಪ್ರಕಟಿಸಬೇಕು ಎಂದು ಒತ್ತಾಯಿಸಿದ್ದರು. ಕುತೂಹಲದ ವಿಚಾರವೆಂದರೆ ಇದೇ ಬೇಡಿಕೆಯನ್ನು ಜಿತೇಂದ್ರ ಪ್ರಸಾದ್ 22 ವರ್ಷಗಳ ಹಿಂದೆ ಬೇಡಿಕೆ ಇಟ್ಟಿದ್ದರು.
ಈ ಕಾರಣದಿಂದ ಪ್ರಸಾದ್ ದೆಹಲಿಯ ಎಐಸಿಸಿ ಕಚೇರಿಗೆ ತೆರಳಿ ಮತದಾರರ ವಿವರಗಳನ್ನು ಕೊಡುವಂತೆ ಕೇಳಿದ್ದರು. ಆದರೆ ಅಲ್ಲಿ ಯಾರೊಬ್ಬರೂ ಪ್ರಸಾದ್ ಗೆ ಸಹಕಾರವನ್ನೇ ನೀಡಲಿಲ್ಲ. ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ವಾಪಸ್ ಆಗಿದ್ದರು ಎಂದು ಗಿಲಾನಿ ನೆನಪಿಸಿಕೊಂಡಿದ್ದಾರೆ.
ಸೋನಿಯಾ V/S ಪ್ರಸಾದ್ ನಡುವಿನ ಚುನಾವಣೆಯಲ್ಲಿ ಏನಾಯಿತು?
ನಿರೀಕ್ಷೆಯಂತೆ 2000ನೇ ಇಸವಿ ನವೆಂಬರ್ ನಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸೋನಿಯಾ ಗಾಂಧಿಗೆ 7,448 ಮತ ಗಳಿಸಿದ್ದು, ಪ್ರಸಾದ್ ಕೇವಲ 94 ಮತ ಪಡೆದು ಮುಖಭಂಗ ಅನುಭವಿಸಿದ್ದರು. ಆದರೂ ಪಟ್ಟು ಬಿಡದ ಪ್ರಸಾದ್ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಪಕ್ಷದ ಚುನಾವಣಾ ಅಧಿಕಾರಿಗಳಿಗೆ ಹಲವಾರು ಪತ್ರಗಳನ್ನು ಬರೆದಿದ್ದರು. ಹೀಗೆ ಸೋನಿಯಾ ವಿರುದ್ಧ ಬಂಡಾಯ ಸಾರಿದ್ದ ಪ್ರಸಾದ್ 2001ರಲ್ಲಿ ದೆಹಲಿಯ ಆಸ್ಪತ್ರೆಯಲ್ಲಿ ಮೆದುಳು ರಕ್ತಸ್ರಾವದಿಂದಾಗಿ ಸಾವನ್ನಪ್ಪಿದ್ದರು. ಜಿತೇಂದ್ರ ಪ್ರಸಾದ್ ಅವರ ಪುತ್ರ ಜಿತಿನ್ ಪ್ರಸಾದ್ ಬಿಜೆಪಿ ಪಾಳಯದಲ್ಲಿದ್ದು, ಉತ್ತರಪ್ರದೇಶ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
22 ವರ್ಷಗಳ ಬಳಿಕ ಮತ್ತೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ:
ಬರೋಬ್ಬರಿ 22 ವರ್ಷಗಳ ಬಳಿಕ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲು ಸಿದ್ಧತೆ ನಡೆದಿದೆ. ಗಾಂಧಿ ಕುಟುಂಬದಿಂದ ಯಾರೂ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಎಂದು ರಾಹುಲ್ ಗಾಂಧಿ ಘೋಷಿಸಿದ್ದು, ಈ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕತ್ವದ ವಿರುದ್ಧ ಧ್ವನಿ ಎತ್ತಿದ್ದ ಜಿ-23 ಮುಖಂಡರ ಗುಂಪಿನ ಶಶಿ ತರೂರ್ ನಾಮಪತ್ರ ಸಲ್ಲಿಸಿದ್ದಾರೆ. ಗಾಂಧಿ ಕುಟುಂಬಕ್ಕೆ ನಿಷ್ಠರಾಗಿರುವ ಹಿರಿಯ ಕಾಂಗ್ರೆಸ್ಸಿಗ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಸುವ ಮೂಲಕ 22 ವರ್ಷಗಳ ಹಿಂದಿನ ಇತಿಹಾಸ ಮರುಕಳಿಸಲಿದೆಯಾ ಎಂಬುದನ್ನು ಕಾದು ನೋಡಬೇಕಾಗಿದೆ.
ನಾಗೇಂದ್ರ ತ್ರಾಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿಮ ಬಂಗಾಲ ಗವರ್ನರ್
Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್: ನದಿಗೆ ಬಿದ್ದು ಮೂವರ ಸಾವು
Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.