Desi Swara: ಎಲೆಗಳು ಹೂವಾಗುವ ಕನಸಿನ ಋತು:ಶರತ್ಕಾಲದ ರಂಗುರಂಗಿನ ಮಧುರ ನೋಟ
ಬಣ್ಣ ಬಣ್ಣದ ಎಲೆಗಳಿಂದ ದಾರಿಯಲ್ಲೆಲ್ಲ ಹೂ ಹಾಸಿದೆಯೇನೋ ಎಂಬಂತೆ ಕಾಣಿಸುತ್ತಿತ್ತು.
Team Udayavani, Oct 14, 2023, 1:00 PM IST
ಪ್ರತಿಯೊಂದು ಕಾಲವು ಅದರದ್ದೇ ಸೌಂದರ್ಯವನ್ನು ಹೊತ್ತು ತರುತ್ತದೆ. ವಸಂತದ ಆಗಮನದ ಸೊಬಗೇ ಬೇರೆ. ಹಾಗೆಯೇ ಶ್ರಾವಣದ ಸಂಭ್ರಮದ ಸಂತೋಷವು ವರ್ಣಿಸಲಸಾಧ್ಯ. ಇನ್ನೇನು ಮಳೆಯ ಸಿಂಚನ ಕಡಿಮೆಯಾಗಿ ಚಳಿಯು ಆವರಿಸಿಕೊಳ್ಳುತ್ತಿದೆ. ಶರತ್ಕಾಲವು ರಂಗಿನಿಂದ ಆವೃತವಾಗುವ ಸಮಯವಿದು. ಮೈ ನಡುಗಿಸುವ ಚಳಿಯ ನಡುವೆ ಹೂವುಗಳಂತೆ ಬಣ್ಣಬಣ್ಣಗಳಲ್ಲಿ ಎಲೆಗಳು ಪ್ರತೀ ದಿನ ನಮ್ಮನ್ನು ಸ್ವಾಗತಿಸುತ್ತವೆ. ಹೂವುಗಳೇ ಸೌಂದರ್ಯವೆಂದು ಭಾವಿಸುವಾಗ ಈ ಎಲೆಗಳು ಸುಂದರತೆಯ ಅಗಾಧ ಗುತ್ಛವನ್ನೇ ನಮ್ಮೆದುರು ತೆರೆದು ಕಂಗೊಳಿಸುತ್ತಿರುತ್ತವೆ. ಅಮೆರಿಕದಲ್ಲಿ ಶರತ್ಕಾಲದ ಸಮಯದಲ್ಲಿನ ವಿವಿಧ ಸ್ಥಳಗಳಿಗೆ ಪ್ರವಾಸಿಗರ ದಂಡೇ ಬರುತ್ತದೆ.
ಚಳಿಗಾಲ ಆರಂಭವಾದರೆ ಸಾಕು ಒಂದು ತರಹದ ಆಲಸ್ಯ ಆವರಿಸಿಕೊಳ್ಳತೊಡಗುತ್ತದೆ. ಚಳಿಗೆ ಮನಸ್ಸು ಸಹ ಮರಗಟ್ಟಿ ಮೈಯೆಲ್ಲಾ ಜಡವಾಗಿ ಏನು ಮಾಡಲಿಕ್ಕೂ ಸಹ ಚೈತನ್ಯವಿಲ್ಲದೇ, ಕುಳಿತಲ್ಲಿಂದ ಮೇಲೇಳದೇ ವಸಂತಕಾಲದ ಹೊತ್ತಿಗೆ ನಾಲ್ಕೈದು ಕಿಲೋ ತೂಕ ಹೆಚ್ಚಾಗಿ ಬಿಟ್ಟಿರುತ್ತದೆ. ಮನುಷ್ಯನಷ್ಟೇ ಅಲ್ಲ….ಮರಗಳಿಗೂ ಸಹ ಚಳಿಗಾಲವೆಂದರೆ ಆಗಿ ಬರದು. ಚಳಿಗೆ ಎಲೆಗಳೆಲ್ಲ ಶುಷ್ಕವಾಗಿ ಒಣಗಿ ಉದುರಿ ಮರಗಳೆಲ್ಲ ಬೋಳಾಗಿ ಹಸುರೆಲ್ಲ ಸೋರಿ ಲವಲವಿಕೆಯೇ ಇಲ್ಲದಂತಾಗುತ್ತದೆ. ಆದರೆ ಅದರ ಮೊದಲಿನ ಒಂದು ಕಾಲ ಇದೆಯಲ್ಲ…ಅದೇ ಶರತ್ಕಾಲ…ಅದು ಬಹಳ ಚೆಂದ. ಹೋಗಲೊಲ್ಲದ ಬಿಸಿಲನ್ನು ನೂಕುತ್ತ ನುಗ್ಗುವ ಚಳಿ ಮೆಲ್ಲನೆ ಮೈ ಮನಸ್ಸನ್ನು ಆವರಿಸುತ್ತ ಬಿಸಿ ಕಾಫಿಯನ್ನು ನೆನಪಿಸುತ್ತ ಹಾಯಾದ ಸಂಜೆಗಳನ್ನು ಹೊತ್ತು ತರುತ್ತದೆ. ಕೆಲವು ಮರಗಳ ಎಲೆಗಳು ಹಸುರಿನಿಂದ ಹಳದಿ, ಕೆಂಪು, ಕೇಸರಿ ಬಣ್ಣಕ್ಕೆ ತಿರುಗಿ ಮರದ ತುಂಬ ಹೂಗಳೇ ತುಂಬಿವೆಯೆನೋ ಎನ್ನುವಷ್ಟರ ಮಟ್ಟಿಗೆ ರಂಗುರಂಗಾಗಿ ಕಂಗೊಳಿಸುತ್ತವೆ.
ಮರಗಳಿಂದಲೇ ತುಂಬಿರುವ ಜಾಗಗಳು ಹೀಗೆ ಬಣ್ಣಮಯವಾಗಿ ಕಂಗೊಳಿಸಿದರೆ ನೋಡಲಿಕ್ಕೆ ಹಬ್ಬ ಅಲ್ಲವೇ… ಅಮೆರಿಕದಲ್ಲಿ ಶರತ್ಕಾಲದ ಬಣ್ಣಗಳನ್ನು ನೋಡಲೆಂದೇ ಬಹಳಷ್ಟು ಜಾಗಗಳಿವೆ. ಅಕ್ಟೋಬರ್ ಬಂತೆಂದರೆ ಸಾಕು ಜನ ಈ ಜಾಗಗಳನ್ನು ನೋಡಲು ಹೊರಡುತ್ತಾರೆ. ಪೀಕ್ ಕಲರ್ಸ್ ಅಂದರೆ ಗಾಢವಾದ ಬಣ್ಣ ಎಲೆಗಳೊಳಗೆ ಹೆಚ್ಚೆಂದರೆ ಒಂದು ವಾರವಿರುತ್ತದೆಯಷ್ಟೇ.. ತಡವಾಗಿ ಹೋದರೆ ಒಣಗಿ ಉದುರುವ ಎಲೆಗಳನ್ನು ನೋಡಬೇಕಾಗುತ್ತದೆ. ಅವಧಿಗೂ ಮೊದಲೇ ಹೋದರೆ ಎಲೆಗಳಿನ್ನು ಹಸುರು ಬಣ್ಣದಲ್ಲೇ ಇರುತ್ತದೆ. ಹೀಗೆ ಈ ಬಣ್ಣಗಳನ್ನು ನೋಡಲು ಸರಿಯಾದ ಸಮಯಕ್ಕೇ ಹೋಗಬೇಕು!
ಮರಗಳು ಹೀಗೆ ಬಣ್ಣ ಬದಲಾಯಿಸುವುದಕ್ಕೆ ಕಾರಣ ವರ್ಷದ ಕೊನೆಗೆ ಅಂದರೆ ಅಕ್ಟೋಬರ್ ಸಮಯಕ್ಕೆ ಹಗಲು ಚಿಕ್ಕದಾಗಿ ರಾತ್ರಿಗಳು ದೊಡ್ಡದಾಗುತ್ತ ಹೋಗುವುದು. ಆಗ ಸೂರ್ಯನ ಕಿರಣಗಳ ಅಭಾವದಿಂದ ದ್ಯುತಿಸಂಶ್ಲೇಷಣೆ ಕಡಿಮೆಯಾಗುತ್ತ ಹೋಗಿ ಮರಗಳಲ್ಲಿನ ಹಸುರು ಬಣ್ಣ ಕಳೆದು ಹೋಗುತ್ತದೆ. ಸೂರ್ಯನೇ ಇಲ್ಲದ ಘೋರ ಚಳಿಗಾಲದ ದಿನಗಳಿಗೆ ಮರಗಳು ಸನ್ನದ್ಧವಾಗ ತೊಡಗುತ್ತವೆ. ತಮ್ಮನ್ನು ತಾವು ಬದುಕಿಸಿಕೊಳ್ಳಲು ಎಲೆಗಳನ್ನೆಲ್ಲ ಉದುರಿಸಿ ಬರಡಾಗಿ ಸುಮಾರು ಮೂರ್ನಾಲ್ಕು ತಿಂಗಳುಗಳ ಕಾಲ ಮರಗಟ್ಟಿದವರಂತಾಗಿ ಶೇಖರಿಸಿಕೊಂಡ ಆಹಾರವನ್ನೇ ಜೀವಾಳವನ್ನಾಗಿಸಿಕೊಳ್ಳುತ್ತವೆ. ಇದು ಶರತ್ಕಾಲದ ಅನಂತರ. ಆದರೆ ಶರತ್ಕಾಲದ ಸಮಯದಲ್ಲಿ ಮಾತ್ರ ಇಡೀ ಪ್ರಕೃತಿ ಒಂದು ಸುಂದರ ಕವಿತೆಯಂತೆ ಕಾವ್ಯಮಯವಾಗಿ ಕಾಣಿಸುತ್ತದೆ. ಎತ್ತರದ ಪರ್ವತದ ಮಧ್ಯದಲ್ಲಿ ಕಡೆದ ರಸ್ತೆಯ ಮೇಲೆ ಸಾಗುತ್ತ ಒಂದು ಬದಿಯಲ್ಲಿರುವ ಬಣ್ಣ ತುಂಬಿದ ದಟ್ಟನೆಯ ಕಾಡನ್ನು ನೋಡುತ್ತ ಸಾಗುವುದು ಒಂದು ಅದ್ಭುತ ಅನುಭವ.
ಅಮೆರಿಕದಲ್ಲಿ ಶರತ್ಕಾಲದ ಬಣ್ಣಗಳನ್ನು ನೋಡಲು ಪ್ರಸಿದ್ಧವಾದ ಜಾಗಗಳು ಯಾವುವು ಎಂದು ಗೂಗಲ್‌ನಲ್ಲಿ ಹುಡುಕಿದರೆ ಸಾಕಷ್ಟು ಸ್ಥಳಗಳು ಕಾಣಿಸುತ್ತವೆ. ಅವುಗಳಲ್ಲಿ ಪ್ರಸಿದ್ಧವಾಗಿರುವುದು ವೆಸ್ಟ್ ವರ್ಜಿನಿಯಾ. ಈ ರಾಜ್ಯದಲ್ಲಿ ಯಾವುದೇ ಸ್ಥಳಕ್ಕೆ ಹೋದರೂ ಅಲ್ಲಿ ರಂಗಾಗಿರುವ ಎಲೆಗಳನ್ನು ನೋಡಬಹುದು. ಒಂದಿಡೀ ಕಾಡು ಬಣ್ಣ ಬದಲಾಯಿಸಿಕೊಂಡು ಅರಶಿನ ಕುಂಕುಮ ಚೆಲ್ಲಿದವರಂತೆ ಹಳದಿ ಕೆಂಪು ಬಣ್ಣದಲ್ಲಿ ಕಂಗೊಳಿಸಿದರೆ ಎಷ್ಟು ಚೆಂದವೆನ್ನಿಸಬೇಡ? ಅಂತಹದೇ ಅನೇಕ ಜಾಗಗಳು ಈ ರಾಜ್ಯದಲ್ಲಿವೆ. ಹಾಗಾಗಿಯೇ ಇದು ಶರತ್ಕಾಲದ ಬಣ್ಣಗಳನ್ನು ತೋರಿಸುವ ಸ್ವರ್ಗ ಎಂಬ ಮಾತಿದೆ. ನಾವು ಸಹ ಈ ಜಾಗಕ್ಕೆ ಹೋಗಬೇಕೆಂದುಕೊಂಡು ಅನೇಕ ಬಾರಿ ಅಂದುಕೊಂಡಿದ್ದರು ಅದು ಕೈಗೂಡಲೇ ಇಲ್ಲ. ಶಿಕಾಗೋ ಪಕ್ಕದಲ್ಲಿರುವ ಬ್ಲೂಮಿಂಗ್ಟನ್ ಎಂಬ ಊರಿನಲ್ಲಿ ವಾಸವಿರುತ್ತಿದ್ದಾಗ “ಡೋರ್ ಕೌಂಟಿ’ ಎಂಬ ಜಾಗಕ್ಕೆ ಶರತ್ಕಾಲದ ಬಣ್ಣಗಳನ್ನು ನೋಡಲಿಕ್ಕೆ ಹೋಗಿದ್ದೇವು. ಇದು ಸಹ ಮೊದಲ ಹತ್ತು ಜಾಗಗಳ ಪಟ್ಟಿಯಲ್ಲಿಯೇ ಇದೆಯಾದ್ದರಿಂದ ನಮ್ಮೊಳಗೆ ಉತ್ಸಾಹ ತುಂಬಿಕೊಂಡಿತ್ತು.
ಮೂರು ಬದಿಗಳಿಂದ ನೀರಿನಿಂದ ಆವೃತವಾದ, ಸುಮಾರು ಮುನ್ನೂರು ಮೈಲಿಗಳಷ್ಟು ಉದ್ದದ ತೀರವನ್ನು ಹೊಂದಿದ ಜಾಗ ವಿಸ್ಕಾನ್ಸಿನ್ ರಾಜ್ಯದಲ್ಲಿರುವ ಈ ಡೋರ್ ಕೌಂಟಿ, ಉತ್ತರ ಮತ್ತು ಪೂರ್ವ ದಿಕ್ಕುಗಳಲ್ಲಿ ಸಮುದ್ರ ಗಾತ್ರದ ಕೆರೆ, ಲೇಕ್ ಮಿಷಿಗನ್ ಮತ್ತು ಪಶ್ಚಿಮ ಭಾಗದಲ್ಲಿ ಗ್ರೀನ್ ಬೇಯಿಂದ ಆವೃತವಾಗಿದೆ. ಇಲ್ಲಿ ಸುಮಾರು 34 ದ್ವೀಪಗಳಿದ್ದು ಅದರಲ್ಲಿ ವಾಷಿಂಗ್ಟನ್ ದ್ವೀಪ ಗಾತ್ರದಲ್ಲಿ ದೊಡ್ಡದು.
ಮಿಡ್ವೆಸ್ಟನ್‌ನ ಪ್ರಮುಖ ಪ್ರವಾಸೋದ್ಯಮ ತಾಣಗಳಲ್ಲಿ ಒಂದಾದ ಡೋರ್ ಕೌಂಟಿಯು ವರ್ಷಕ್ಕೆ ಸುಮಾರು 2 ಮಿಲಿಯನ್ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪೆನ್ನಿನ್ಸುಲಾ, ಪೊಟಾವಟೋಮಿ, ಮತ್ತು ನ್ಯೂಪೋರ್ಟ್‌ಗಳಂತಹ ಪ್ರಸಿದ್ಧ ರಾಜ್ಯ ಉದ್ಯಾನವನ (ಸ್ಟೇಟ್ ಪಾರ್ಕ್)ಗಳಲ್ಲಿ ಬಣ್ಣ ಬದಲಾಯಿಸುವಂತಹ ಓಕ್ ಮತ್ತು ಮೇಪಲ್ಮರಗಳನ್ನು ದಟ್ಟವಾಗಿ ಹೊಂದಿರುವ ಕಾರಣದಿಂದ ಈ ಪ್ರದೇಶಗಳಲ್ಲಿ ಶರತ್ಕಾಲದ ದಿನಗಳು ರಂಗಪಂಚಮಿಯನ್ನು ನೆನಪಿಸುತ್ತವೆ. ಪೀಕ್‌ಫಾಲ್ ಅಂದರೆ ಗಾಢ ಹಳದಿ ಕೆಂಪು ಬಣ್ಣ ಮೇಳೈಸುವುದು ಅಕ್ಟೋಬರ್‌ನ ಎರಡನೇ ಅಥವಾ ಮೂರನೇ ವಾರ.
ನಾವು ಡೋರ್ ಕೌಂಟಿ ಸಮೀಪಿಸುತ್ತಿದ್ದಂತೆ ನಿಧಾನವಾಗಿ ಹಸುರು ಎಲೆಯ ಮರಗಳು ಮಾಯವಾಗತೊಡಗಿ ಮರಗಳಲ್ಲಿ ಬಣ್ಣ ತುಂಬಿಕೊಳ್ಳಲು ಆರಂಭವಾಗಿತ್ತು. ಎಂತಹ ಚೆಲುವು! ಎತ್ತ ನೋಡಿದರೂ ಹೂವಿನಂತಹ ಬಣ್ಣ. ಕಣ್ಣಿಗೆ ಮುದವಾಗುವಂತಹ ಬಣ್ಣ. ನೆಲದ ಮೇಲೆ ಬಿದ್ದ ಬಣ್ಣ ಬಣ್ಣದ ಎಲೆಗಳಿಂದ ದಾರಿಯಲ್ಲೆಲ್ಲ ಹೂ ಹಾಸಿದೆಯೇನೋ ಎಂಬಂತೆ ಕಾಣಿಸುತ್ತಿತ್ತು. ಮರಗಳಿಂದ ಉದುರುತ್ತಿದ್ದ ಎಲೆಗಳು ಗಾಳಿಯಲ್ಲಿ ಮೆಲುವಾಗಿ ಜೀಕುತ್ತ ಕೆಳಗೆ ಬೀಳುತ್ತಿದ್ದವು. ಜೋರಾಗಿ ಬೀಸಿದರೆ ಈ ನಿಸರ್ಗದ ರಮಣಿಯತೆಗೆ ಧಕ್ಕೆಯಾದಿತೆನೋ ಎಂಬಂತೆ ಗಾಳಿಯೂ ಸಹ ಮಂದವಾಗಿ ಬೀಸುತ್ತಿತ್ತು. ತಣ್ಣಗೆ ಮೈಗಪ್ಪುತ್ತಿತ್ತು. ಒಳಗಿನ ನರಗಳನ್ನು ಮೆಲ್ಲನೆ ನಡುಗಿಸುತ್ತಿತ್ತು. ಜತೆಗೆ ಸೋನೆ ಮಳೆ. ನೀರ ಹನಿಗಳು ಮುಖಕ್ಕೆ ಮೆಲ್ಲನೆ ಮುತ್ತಿಡುತ್ತಿದ್ದವು. ನೆಲದ ಮೇಲೆ ಬಿದ್ದ ಎಲೆಗಳ ಮೇಲೆ ದುಂಡು ನಕ್ಷತ್ರಗಳಂತೆ ಹೊಳೆಯುತ್ತಿದ್ದ ನೀರ ಹನಿಗಳು ಎಲೆಯ ಬಣ್ಣಕ್ಕೆ ಹೊಸ ಹೊಳಪನ್ನಿತ್ತಿದ್ದವು. ಚಳಿಯ ಕಾರಣಕ್ಕೋ ಅಥವಾ ನಾವು ಪೀಕ್ ಟೈಮಿಗಿಂತ ತಡವಾಗಿ ಹೋಗಿದ್ದಕ್ಕೋ ಜನರ ದಟ್ಟಣೆಯಿರಲಿಲ್ಲ.
ಪೆನ್ನಿನ್ಸುಲಾ ಕಾಡು ಬಹಳ ದೊಡ್ಡ ದಾಗಿರುವುದರಿಂದ ಮತ್ತು ಯಾವ ಜಾಗದಲ್ಲಿ ಅತೀ ಸುಂದರವಾಗಿ ಬಣ್ಣಗಳು ಕಾಣಿಸುತ್ತವೆ ಎಂಬ ಮಾಹಿತಿ ನಮಗೆ ಇಲ್ಲವಾಗಿದ್ದರಿಂದ ನಾವು ಕಾಡಿನೊಳಗೆ ಸುತ್ತು ಹಾಕಲಿಕ್ಕೆ ಬಸ್ಸೊಂದನ್ನು ಬುಕ್ ಮಾಡಿದ್ದೇವು. ನಾವು ಬಸ್ಸಿನೊಳಗೆ ಕೂತ ಸ್ವಲ್ಪ ಸಮಯಕ್ಕೆ ಮಂಜುಮಳೆ ಶುರುವಾಯಿತು. ಮಂಜುಮಳೆ ಎಂದರೆ ಐಸ್ ರೈನ್. ವಾತಾವರಣ ಅದೆಷ್ಟು ತಂಪಾಗಿತ್ತೆಂದರೆ ಮಳೆಯ ಹನಿ ಭೂಮಿಯನ್ನು ತಲುಪುವ ಹೊತ್ತಿಗೆ ಮಂಜುಗಡ್ಡೆಯಾಗಿ ಬಿಡುತ್ತಿತ್ತು. ಅಷ್ಟು ಚಳಿ! ಸುಮಾರು ನಾಲ್ಕೈದು ನಿಮಿಷಗಳ ಮಳೆಯ ಅನಂತರ ಬಸ್ಸು ಹೊರಟಿತು.
ಇಡೀ ಕಾಡಿನೊಳಗೆ ಒಂದು ಸುತ್ತು ಹಾಕಿ ಅಲ್ಲಲ್ಲಿ ನಿಲ್ಲಿಸುತ್ತ ಜಾಗಗಳನ್ನು ತೋರಿಸುತ್ತ ಹೋಗುವುದು ಈ ಬಸ್ಸಿನ ಕೆಲಸ. ಅದರ ಡ್ರೈವರ್ ತಾನೇ ಟೂರ್ ಗೈಡ್ ಆಗಿ ನಮಗೆ ಗೊತ್ತಿಲ್ಲದ ಮಾಹಿತಿಯನ್ನು ತಿಳಿಸುತ್ತ ಬಸ್ ಓಡಿಸುತ್ತಿದ್ದ. ಮರಗಳಿಂದ ನಿಧಾನವಾಗಿ ನೀರು ತೊಟ್ಟಿಕ್ಕುತ್ತಿತ್ತು. ಸುಮಾರು ತೊಂಬತ್ತು ನಿಮಿಷಗಳ ಈ ಬಸ್ ಪ್ರಯಾಣದಲ್ಲಿ ಡ್ರೈವರ್ ಆ ಊರಿನಲ್ಲಿ ಬೆಸ್ಟ್ ಪಿಜ್ಜಾ ತಿನ್ನುವ ಜಾಗ, ವೈನ್ ಇತಿಹಾಸ, ಲೇಕ್ ಮಿಷಿಗನ್‌ನಲ್ಲಿರುವ ದ್ವೀಪಗಳು ಇತ್ಯಾದಿಗಳ ಬಗ್ಗೆ ಹೇಳುತ್ತ ಸಾಗುತ್ತಿದ್ದ. ಬಸ್ಸು ನಿಂತಲ್ಲೆಲ್ಲ ಇಳಿದು ಸುತ್ತಲೂ ನೋಡಿದರೆ ವಾವ್ ಎಂದೆನ್ನಿಸುವಂತಹ ದೃಶ್ಯ. ಬಣ್ಣ ಬಣ್ಣದ ಸನಗ್ಲಾಸ್ ಹಾಕದೆನೇ ಎಲ್ಲವೂ ಬಣ್ಣಮಯವಾಗಿ ಅದೂ ಒಂದಲ್ಲ, ಎರಡಲ್ಲ, ನಾನಾ ನಮೂನೆಯ ಬಣ್ಣದ ಛಾಯೆ ಕಾಣಿಸುತ್ತಿತ್ತು.
ಮಾರನೇ ದಿನ ಬಣ್ಣ ತುಂಬಿದ ಕಾಡಿನ ಮಧ್ಯದಲ್ಲಿ ಮಾಡಿದ ಹೈಕ್ ಸ್ವರ್ಗದ ಬೀದಿಯಲ್ಲಿ ನಡೆದಂತಿತ್ತು. ಚಳಿಯಿಂದ ಹಲ್ಲುಗಳೆಲ್ಲ ಅಕಟಕಟವೆನ್ನಿಸಿದರೂ ಎದುರಿದ್ದ ಚೆಲುವಿಗೆ ಮನಸೋತು ಹೆಜ್ಜೆ ಹಾಕುತ್ತಿದ್ದೇವು. ಈ ಬಣ್ಣಗಳೆಲ್ಲ ಅವಿರತವಾಗಿ ಹೀಗೆ ಇರಲಿ ಸದಾ ವರ್ಣಮಯವಾಗಿರಲಿ ಎಂದು ಮನಸ್ಸು ಕೂಗುತ್ತಿತ್ತು. ಆದರೆ ಋತು ಬದಲಾಗಲೇ ಬೇಕಲ್ಲವೇ…. ಒಮ್ಮೆ ಬಣ್ಣ ತುಂಬಿದ ಎಲೆಗಳು ಮತ್ತೂಮ್ಮೆ ಬರಡು ಕೊಂಬೆಗಳು. ನಮ್ಮ ಬದುಕಿನ ಹಾಗೆ. ಋತು ಬದಲಾಗುವಂತೆಯೇ ನಮ್ಮ ಸುಖ ದುಃಖಗಳು ಸಹ ಬದಲಾಗುತ್ತಿರುತ್ತವೆ ಎಂಬ ಜೀವನಪಾಠ ಆ ಸಮಯದಲ್ಲಿ ಯಾರೂ ಹೇಳಿ ಕೊಡದೆಯೇ ಅರಿವಾಗಿತ್ತು. ಅದೇನೇ ಇರಲಿ…ಪ್ರವಾಸ ಮುಗಿದಾಗ ನಮ್ಮ ಕಣ್ಣೊಳಗೂ ಬಣ್ಣ ಇಳಿದಿತ್ತು.
*ಸಂಜೋತಾ ಪುರೋಹಿತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.