![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, May 15, 2024, 7:20 AM IST
ಕುಂದಾಪುರ: ಕೊರೊನಾ ಕಾಲಘಟ್ಟದಲ್ಲಿ 5 ಲಕ್ಷ ಲೀಟರ್‌ಗೆ ತಲುಪಿದ್ದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಹಾಲು ಉತ್ಪಾದನೆ ಈಗ 3.5 ಲಕ್ಷ ಲೀ. ಗೆ ಇಳಿದಿದೆ. ಉಭಯ ಜಿಲ್ಲೆಗಳಿಗೆ ನಿತ್ಯವೂ2 ಲಕ್ಷ ಲೀ. ಹಾಲು ನೆರೆಯ ಹಾಲು ಒಕ್ಕೂಟಗಳಿಂದ ಖರೀದಿಸಿ ಪೂರೈಸಲಾಗು ತ್ತಿದೆ. ಹೈನೋದ್ಯಮದಿಂದ ರೈತರು ವಿಮುಖರಾಗುತ್ತಿರುವುದು ಪ್ರಮುಖ ಕಾರಣ ಎನ್ನುತ್ತಾರೆ ಪರಿಣಿತರು.
ಪ್ರತೀ ಬೇಸಗೆಯಲ್ಲಿ ಹಸುರು ಮೇವಿನ ಕೊರತೆಯಿಂದ ಹಾಲು ಉತ್ಪಾದನೆ ಇಳಿಕೆಯಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಹೈನುಗಾರರ ಸಂಖ್ಯೆ ಯಲ್ಲಿ ಇಳಿಮುಖವಾಗಿದ್ದು, ಭತ್ತದ ಗದ್ದೆಗಳನ್ನು ವಾಣಿಜ್ಯ ಬೆಳೆಗಳು ಆಕ್ರ ಮಿಸಿರುವುದು ಹಾಲಿನ ಪ್ರಮಾಣ ಕಡಿಮೆಯಾಗಲು ಕಾರಣ. ಬೇರೆಡೆಯಿಂದ ಮೇವು ಖರೀದಿಸಿ ಹಸುಗಳಿಗೆ ನೀಡುವುದು ಲಾಭ ವಲ್ಲ. ಸ್ವಂತ ಜಾಗದ ಅಲಭ್ಯತೆ ಇತ್ಯಾದಿ ಕಾರಣದಿಂದ ದಿನೇದಿನೆ ಹಾಲಿನ ಪ್ರಮಾಣ ಇಳಿಕೆಯಾಗುತ್ತಿದೆ.
ಒಕ್ಕೂಟ ಕ್ರಮ: ಹೈನುಗಾರರಿಗೆ ಸಮಸ್ಯೆಯಾಗದಂತೆ, ಹಸುರು ಮೇವು ಕಡಿಮೆ ಇದ್ದಾಗ ದಕ್ಷಿಣ ಕನ್ನಡ ಹಾಲು ಒಕ್ಕೂಟದಿಂದ 12 ರೂ.ಗೆ ದೊರೆಯುವ ಮೇವನ್ನು 6.5 ರೂ.ಗೆ ದೊರೆಯುವಂತೆ ಮೇವಿಗೆ ಮಾಸಿಕ 10 ಲಕ್ಷ ರೂ.ಗಳಂತೆ 40 ಲಕ್ಷ ರೂ. ಸಬ್ಸಿಡಿ ನೀಡಲಾಗಿದೆ ಎಂದರು ಒಕ್ಕೂಟ ನಿರ್ದೇಶಕ ನರಸಿಂಹ ಕಾಮತ್ ಸಾಣೂರು. ಹಾಲು ಕಡಿಮೆ ಇರುವ ಸೊಸೈಟಿಗೆ ಪಶುವೈದ್ಯರು, ಮೇಲ್ವಿಚಾರಕರು ಭೇಟಿ ನೀಡಿ ರೈತರಿಗೆ ತರಬೇತಿ ನೀಡಿದ್ದಾರೆ. ಗುಣಮಟ್ಟದ ಹಾಲು ದೊರೆಯದೇ ಇದ್ದಲ್ಲಿಯೂ ಮಾರ್ಗದರ್ಶನ ನೀಡಲಾಗಿದೆ. ರೈತರಲ್ಲಿ ಹೈನುಗಾರಿಕೆಗೆ ಜುಗುಪ್ಸೆ ಬರದಂತೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಮಿಶ್ರ ತಳಿ ಯೋಜನೆಗೆ ಪ್ರೋತ್ಸಾಹ ನೀಡಲಾಗಿದೆ.
ಹಸುರು ಮೇವು ಬೆಳೆಸುವವರಿಗೆ ಎಕ್ರೆಗೆ 10 ಸಾವಿರ ರೂ. ಪ್ರೋತ್ಸಾಹಧನ, ಮಿನಿಡೈರಿ ಯೋಜನೆ, ಹೊಸದಾಗಿ ಹೈನೋದ್ಯಮ ಮಾಡುವುದಾದರೆ ಜಾನುವಾರು ಖರೀದಿಗೆ ಸಾಗಾಟ ವೆಚ್ಚ ನೀಡುವುದಾಗಿ ನಿಗಮದ ವ್ಯವಸ್ಥಾಪನ ನಿರ್ದೇಶಕ ವಿವೇಕ್ ವಿವರಿಸಿದರು.
ಜತೆಗೆ ಕಳೆದ 7 ತಿಂಗಳಿನಿಂದ ಹೈನು ಗಾರರಿಗೆ ಸರಕಾರದ ಪ್ರೋತ್ಸಾಹ ಧನ ಬಂದಿಲ್ಲ. ಈ ಬಗ್ಗೆ ಒಕ್ಕೂಟ ಸರಕಾರಕ್ಕೆ ಪತ್ರ ಬರೆದಿದ್ದರೂ ಸ್ಪಂದನೆ ಸಿಕ್ಕಿಲ್ಲ.
ಎಷ್ಟು ಸಂಘ?
ದ.ಕ., ಉಡುಪಿ ಜಿಲ್ಲೆಯಲ್ಲಿ 744 ಹಾಲಿನ ಸೊಸೈಟಿಗಳಿವೆ. 53 ಸಾವಿರ ಸದಸ್ಯರು ಸೊಸೈಟಿಗೆ ಹಾಲು ನೀಡುತ್ತಿದ್ದಾರೆ.
ಎಲ್ಲಿಂದ ಖರೀದಿ?
ಹೆಚ್ಚುವರಿ 2 ಲಕ್ಷ ಲೀಟರ್ ಹಾಲನ್ನು ಅಗತ್ಯವಿರುವ ಹೆಚ್ಚುವರಿ 2 ಲಕ್ಷ ಲೀ. ಹಾಲನ್ನು ಮಂಡ್ಯ, ಶಿವಮೊಗ್ಗ, ಮೈಸೂರು, ಹಾಸನ ಒಕ್ಕೂಟಗಳಿಂದ ಅಂತರ್ ಡೈರಿ ದರದಲ್ಲಿ ಖರೀದಿಸಲಾಗುತ್ತದೆ. ಒಕ್ಕೂಟ ಇಲ್ಲಿ ಹೈನುಗಾರರಿಂದ ಖರೀದಿ ಸುವ ದರಕ್ಕಿಂತಲೂ 48 ಪೈಸೆಗಳಷ್ಟು ಇದು ಕಡಿಮೆ. ಸಾಗಾಟ ವೆಚ್ಚ ಪ್ರತ್ಯೇಕ.
ಎಷ್ಟು ಹಾಲು?
ಮೇ 13ರಂದು 3.57 ಲಕ್ಷ ಲೀ. ಹಾಲು ಸಂಗ್ರಹವಾಗಿದ್ದು ಮೇ 7ರಂದು 3.45 ಲಕ್ಷ ಲೀ.ನಲ್ಲಿತ್ತು. ಅದಕ್ಕೂ ವಾರದ ಹಿಂದೆ 3.3 ಲಕ್ಷ ಲೀ.ಗಳಲ್ಲಿದ್ದ ಹಾಲಿನ ಪ್ರಮಾಣ 4 ತಿಂಗಳಿನಿಂದ ಏರಿಕೆಯಾಗಿ ಈ ಹಂತ ತಲುಪಿದೆ. 2020ರಲ್ಲಿ 5 ಲಕ್ಷ ಲೀ., 2018ರಲ್ಲಿ 4.8 ಲಕ್ಷ ಲೀ., 2017ರಲ್ಲಿ 3.96 ಲಕ್ಷ ಲೀ., 2015ರಲ್ಲಿ 3.76 ಲಕ್ಷ ಲೀ., 2014ರಲ್ಲಿ 3.6 ಲಕ್ಷ ಲೀ.ಗಳಷ್ಟಿತ್ತು. ಪ್ರತೀ ದಿನ 4.24 ಲಕ್ಷ ಲೀ. ಹಾಲು ಮಾರಾಟಕ್ಕೆ ಬೇಕು. ಜತೆಗೆ ಹಾಲಿನ ಇತರ ಉತ್ಪನ್ನಗಳಿಗೂ ಹಾಲಿನ ಅಗತ್ಯವಿದೆ.
ನಿರೀಕ್ಷಿತ ಪ್ರಮಾಣದಲ್ಲಿ ಅಲ್ಲದಿದ್ದರೂ ಕಳೆದ 4 ತಿಂಗಳಿನಿಂದ 27 ಸಾವಿರ ಲೀ. ಹಾಲು ಉತ್ಪಾದನೆ ಏರಿಕೆಯಾಗಿದೆ. ಒಕ್ಕೂಟದಿಂದ ಅನೇಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
– ಕೆ.ಪಿ. ಸುಚರಿತ ಶೆಟ್ಟಿ,
ಅಧ್ಯಕ್ಷ, ದ.ಕ. ಹಾಲು ಒಕ್ಕೂಟ
You seem to have an Ad Blocker on.
To continue reading, please turn it off or whitelist Udayavani.