Independence Day ರಾಜ್ಯಗಳಿಗೆ ಅನುದಾನ ಕೇಂದ್ರದ ಕರ್ತವ್ಯ: ಸಿಎಂ ಸಿದ್ದರಾಮಯ್ಯ
ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಕೇಂದ್ರದ ವಿರುದ್ಧ ಮತ್ತೆ ವಾಗ್ಧಾಳಿ
Team Udayavani, Aug 16, 2024, 1:03 AM IST
ಬೆಂಗಳೂರು: ಕೇಂದ್ರ ಸರ ಕಾರದ ವಿರುದ್ಧ ಪದೇ ಪದೆ ಧ್ವನಿ ಎತ್ತುತ್ತಲೇ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 78ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ವೇದಿಕೆಯನ್ನೂ ಇದಕ್ಕೆಬಳಸಿಕೊಂಡರು. ಅನುದಾನ ಹಂಚಿಕೆ ಬಗ್ಗೆ ಕೇಂದ್ರದಿಂದ ತಾರತಮ್ಯ ಎಸಗಲಾಗಿದೆ. ಜನಕಲ್ಯಾಣ ಕಾರ್ಯಕ್ಕೆ ಸಂಪನ್ಮೂಲ ಒದಗಿಸುವುದು ಕೇಂದ್ರದ ಕರ್ತವ್ಯ ಎಂದು ಚಾಟಿ ಬೀಸಿರುವ ಸಿಎಂ, ನಮ್ಮ ಪಾಲಿನ ಅನುದಾನ ಪಡೆಯಲು ಕೋರ್ಟ್ ಮೊರೆ ಹೋಗುವಂತೆ ಮಾಡಿರುವುದು ದುರಂತ ಎಂದಿದ್ದಾರೆ.
ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯಗಳ ಸಂಬಂಧವನ್ನು ಸಂವಿಧಾನ ಸ್ಪಷ್ಟಪಡಿಸಿದೆ. ಅದರಂತೆ ಜನಕಲ್ಯಾಣ ಕಾರ್ಯಗಳನ್ನು ಅನುಷ್ಠಾನಗೊಳಿಸು ವುದು ರಾಜ್ಯಗಳ ಜವಾಬ್ದಾರಿಯಾಗಿದ್ದರೆ, ಅವುಗಳಿಗೆ ಪೂರಕ ಸಂಪನ್ಮೂಲ ಒದಗಿಸುವುದು ಕೇಂದ್ರದ ಹೊಣೆಗಾರಿಕೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರಕಾರ ಈ ಆಶಯದಿಂದ ದೂರ ಸರಿಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಗಳಿಗೆ ಅನುದಾನ ಹಂಚಿಕೆಯಲ್ಲಿ ತಾರ ತಮ್ಯವಾಗುತ್ತಿದೆ. ಸಂವಿಧಾನದ ಆಶಯ ಗಳನ್ನು ಧಿಕ್ಕರಿಸಿ ರಾಜ್ಯಗಳಿಗೆ ದೊರೆಯ ಬೇಕಾದ ಹಣಕಾಸಿನ ಪಾಲು ನೀಡಲು ಮೀನಮೇಷ ಎಣಿಸಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಸಾರ್ವತ್ರಿಕ ಚುನಾವಣೆ ಎಚ್ಚರಿಕೆ ಘಂಟೆ
ಕೇಂದ್ರದಿಂದ ನ್ಯಾಯಯುತವಾಗಿ ಬರಬೇಕಾದ ಪರಿಹಾರದ ಮೊತ್ತ ಪಡೆಯಲು ನ್ಯಾಯಾಲಯದ ಮೊರೆಹೋಗುವ ಅನಿವಾರ್ಯ ಎದುರಾಗಿರುವುದು ಜನಹಿತಕ್ಕೆ ಒಳ್ಳೆಯದಲ್ಲ. ಈ ರೀತಿಯ ಧೋರಣೆಯ ವಿರುದ್ಧ ಕಳೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ರಾಜಕೀಯ ಪ್ರಬುದ್ಧತೆ ಮೆರೆದಿರುವ ಮತದಾರರು ಪ್ರಜಾಪ್ರಭುತ್ವ ಯಾರ ಕೈಗೊಂಬೆಯಾಗಲು ಸಾಧ್ಯವಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ ಎಂದು ಸಿದ್ದರಾಮಯ್ಯ ತೀಕ್ಷ್ಣವಾಗಿ ಹೇಳಿದರು.
ಮುಂದಿನ ದಿನಗಳಲ್ಲಾದರೂ ಕೇಂದ್ರ ಸರಕಾರವು ರಾಜ್ಯಗಳು ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬುದನ್ನು ಮನಗಂಡು ರಾಜ್ಯಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ನಾಡಿನ ಜನತೆ ಪರವಾಗಿ ಆಗ್ರಹಿಸುತ್ತೇನೆ ಎಂದು ಸೂಚ್ಯವಾಗಿ ಹೇಳಿದ ಸಿಎಂ ಸಿದ್ದರಾಮಯ್ಯ, ದೇಶದ ಚಲನಶೀಲ, ಸ್ಪಂದನಾಶೀಲ ಪ್ರಜಾಪ್ರಭುತ್ವಕ್ಕೆ ನಮ್ಮ ಸಂವಿಧಾನವೇ ಶ್ರೀರಕ್ಷೆಯಾಗಿದೆ. ಜಾತಿ-ಮತದ ಆಧಾರದಲ್ಲಿ ರಾಜಕಾರಣ ಮಾಡುವ ವಿಚ್ಛಿದ್ರಕಾರಿ ಶಕ್ತಿಗಳನ್ನು ಹಾಗೂ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುವ ಮನಃಸ್ಥಿತಿಯ ವ್ಯಕ್ತಿಗಳನ್ನು ಮುಲಾಜಿಲ್ಲದೆ ದೂರ ಇಡುವಂತೆ ಡಾ| ಅಂಬೇಡ್ಕರ್ ಆಗಲೇ ಹೇಳಿದ್ದರು ಎಂದು ಮೆಲುಕು ಹಾಕಿದರು.
ಸರಕಾರ ಅಸ್ಥಿರ
ಯತ್ನಕ್ಕೂ ಚಾಟಿ
ರಾಜ್ಯ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಇದೇ ವೇಳೆ ಚಾಟಿ ಬೀಸಿದರು. ಜನತೆಯ ತೀರ್ಪು ಧಿಕ್ಕರಿಸಿ ನಡೆಸುವ ಹಿಂಬಾಗಿಲಿನ ರಾಜಕಾರಣವನ್ನು ಇತಿಹಾಸದಲ್ಲಿ ಜನತೆ ಎಂದಿಗೂ ಕ್ಷಮಿಸಿಲ್ಲ. ಪ್ರಜಾಪ್ರಭುತ್ವದಡಿ ಜನತೆ ನೀಡಿದ ತೀರ್ಪು ಗೌರವಿಸಿ, ಸಂವಿಧಾನದ ಆಶಯಗಳ ಪ್ರಕಾರ ವಿಪಕ್ಷಗಳು ಜವಾಬ್ದಾರಿಯುತವಾಗಿ ನಡೆಯಬೇಕು ಎಂದರು.
ಸಂದೇಶದ
ಮೂಲಕ ಎಚ್ಚರಿಕೆ
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ತನಿಖೆಗೆ ಸಂಬಂಧಿಸಿ ಸಿಎಂ ಮತ್ತು ಮಾಜಿ ಸಚಿವರ ಹೆಸರು ಎಳೆದುತರುವ ಯತ್ನ, ಆ ಮೂಲಕ ಸರಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ನಡೆಯುತ್ತಿದೆ ಎಂದು ಆಡಳಿತಾರೂಢ ಕಾಂಗ್ರೆಸ್ ನಾಯಕರು ಅಧಿವೇಶನ ಸಂದರ್ಭದಲ್ಲೇ ಗಮನಸೆಳೆದಿದ್ದರು. ಈಗ ಅದರ ಮುಂದುವರಿದ ಭಾಗವಾಗಿ ಅಂತಹ ಪ್ರಯತ್ನ ಸಲ್ಲದು ಎಂದು ಸ್ವಾತಂತ್ರ್ಯ ದಿನಾಚರಣೆ ಸಂದೇಶದಲ್ಲೇ ಸಿಎಂ ಎಚ್ಚರಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.