ಉಭಯ ಜಿಲ್ಲೆಗಳಲ್ಲಿ ಎಸೆಸೆಲ್ಸಿ ಪರೀಕ್ಷೆ ಸುಗಮ ಆರಂಭ
Team Udayavani, Apr 1, 2023, 5:46 AM IST
ಮಂಗಳೂರು: ಬಹುನಿರೀಕ್ಷಿತ ಎಸೆಸೆಲ್ಸಿ ಪರೀಕ್ಷೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಸಾಂಗವಾಗಿ ನಡೆದಿದೆ. 98 ಕೇಂದ್ರಗಳ 523 ಶಾಲೆಗಳ 1,458 ಕೊಠಡಿಗಳಲ್ಲಿ ಪರೀಕ್ಷೆ ಯಶಸ್ವಿಯಾಗಿ ನಡೆಯಿತು.
ಪ್ರಥಮ ಭಾಷೆ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದ 29,299 ವಿದ್ಯಾರ್ಥಿಗಳ ಪೈಕಿ 29,090 ಮಂದಿ ಪರೀಕ್ಷೆ ಬರೆದಿದ್ದಾರೆ. 209 ಮಂದಿ ವಿವಿಧ ಕಾರಣಗಳಿಂದ ಗೈರು ಹಾಜರಾಗಿದ್ದಾರೆ.
ಪ್ರವೇಶದ್ವಾರದಲ್ಲಿಯೇ ಮೇಲ್ವಿ ಚಾರಕರು ವಿದ್ಯಾರ್ಥಿಗಳ ಪರೀಕ್ಷಾ ನೋಂದಣಿ ಪತ್ರಗಳನ್ನು ಪರಿಶೀಲಿಸಿ ಕೇಂದ್ರದೊಳಕ್ಕೆ ತೆರಳಲು ಅವಕಾಶ ಕಲ್ಪಿಸಿದರು. ಬಹುತೇಕ ವಿದ್ಯಾರ್ಥಿಗಳ ಪೋಷಕರು ಕೂಡ ಆಗಮಿಸಿ ಮಕ್ಕಳನ್ನು ಪ್ರೋತ್ಸಾಹಿಸಿ ಕೇಂದ್ರದೊಳಕ್ಕೆ ಕಳುಹಿಸುವುದು ಕಂಡುಬಂತು. ದ.ಕ. ಜಿ.ಪಂ. ಸಿಇಒ ಡಾ| ಕುಮಾರ್ ಅವರು ಮಾಣಿಯ ಎಸೆಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
98 ಮುಖ್ಯ ಅಧೀಕ್ಷಕರು, 28 ಉಪಮುಖ್ಯ ಅಧೀಕ್ಷಕರು, 28 ಕಸ್ಟೋಡಿಯನ್, 98 ಸ್ಥಾನಿಕ ಜಾಗೃತ ದಳದ ಕಾರ್ಯ ಅಧಿಕಾರಿಗಳು, 98 ಮೊಬೈಲ್ ಫೋನ್ ಸ್ವಾಧೀನಾಧಿಕಾರಿಗಳು, 98 ಮಾರ್ಗಾಧಿಕಾರಿಗಳು, 35 ಕೊಠಡಿ ಮೇಲ್ವಿಚಾರಕರು ಸೇರಿದಂತೆ ಸುಮಾರು 1,458 ಮಂದಿ ಪರೀಕ್ಷಾ ಕರ್ತವ್ಯದಲ್ಲಿದ್ದಾರೆ.
ಉಡುಪಿ: ಜಿಲ್ಲಾದ್ಯಂತ ಎಸೆಸೆಲ್ಸಿ ಪರೀಕ್ಷೆ ಶುಕ್ರವಾರ ಯಾವುದೇ ಗೊಂದಲಗಳಿಲ್ಲದೆ ಸುಸೂತ್ರವಾಗಿ ನಡೆದಿದೆ. ಶೇ. 99ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಪ್ರಥಮ ಭಾಷೆ ವಿಷಯಗಳಾದ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಇಂಗ್ಲಿಷ್ (ಎನ್‌ಸಿಇಆರ್‌ಟಿ), ಸಂಸ್ಕೃತ ಪರೀಕ್ಷೆಗೆ ಜಿಲ್ಲೆಯ ಐದು ವಲಯಗಳ 270 ಪ್ರೌಢಶಾಲೆಗಳ 13,310 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. 75 ವಿದ್ಯಾರ್ಥಿಗಳು ಗೈರುಹಾಜರಾಗಿದ್ದು, 13,235 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಬೈಂದೂರು ವಲಯದಲ್ಲಿ 4, ಕುಂದಾಪುರ ವಲಯದಲ್ಲಿ 12, ಕಾರ್ಕಳ ವಲಯದಲ್ಲಿ 2, ಉಡುಪಿ ದಕ್ಷಿಣ ವಲಯದಲ್ಲಿ 13 ಮತ್ತು ಉಡುಪಿ ಉತ್ತರ ವಲಯದಲ್ಲಿ 18 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ. ಯಾವುದೇ ಡಿಬಾರ್ ಅಥವಾ ಪರೀಕ್ಷೆ ಅಕ್ರಮ ದಾಖಲಾಗಿಲ್ಲ.
ಜಿಲ್ಲಾಧಿಕಾರಿ ಕೂರ್ಮಾ ರಾವ್, ಡಿಡಿಪಿಐ ಗಣಪತಿ ಕೆ., ಡಯಟ್ ಉಪಪ್ರಾಂಶುಪಾಲ ಡಾ| ಅಶೋಕ್ ಕಾಮತ್ ಅವರು ಬೋರ್ಡ್ ಹೈಸ್ಕೂಲ್‌ನ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಎಲ್ಲ ಪರೀಕ್ಷೆ ಕೇಂದ್ರದಲ್ಲೂ ಅಗತ್ಯ ಭದ್ರತೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.