ಗ್ರಾ.ಪಂ. ಲೈಬ್ರರಿಯಲ್ಲಿ ವಿದ್ಯಾರ್ಥಿಗಳ ಕಲಿಕೆ : ಆನ್‌ಲೈನ್ ಶಿಕ್ಷಣ ವಂಚಿತರಿಗೆ ವ್ಯವಸ್ಥೆ
Team Udayavani, Jul 13, 2021, 6:45 AM IST
ಬೆಂಗಳೂರು: ಆನ್‌ಲೈನ್ ಬೋಧನೆಯಿಂದ ವಂಚಿತರಾಗುತ್ತಿರುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯತ್ ಗ್ರಂಥಾಲಯಗಳಲ್ಲಿ ಕಲಿಕೆಗೆ ವ್ಯವಸ್ಥೆ ಕಲ್ಪಿಸಲು ಸರಕಾರ ಚಿಂತನೆ ನಡೆಸುತ್ತಿದೆ.
ಮೊಬೈಲ್, ಟಿ.ವಿ. ಮೂಲಕ ಕಲಿಕೆ ಪ್ರಕ್ರಿಯೆ ಆರಂಭವಾಗಿದೆ. ಆದರೆ ಎಷ್ಟೋ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ವಿಲ್ಲ. ಇದನ್ನು ಸರಿದೂಗಿಸಲು ಗ್ರಾ.ಪಂ. ಗ್ರಂಥಾಲಯಗಳನ್ನು ಬಳಸಿಕೊಳ್ಳಲು ಸರಕಾರ ಉದ್ದೇಶಿಸಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದಾರೆ.
ರಾಜ್ಯದಲ್ಲಿ 5,766 ಗ್ರಂಥಾಲಯಗಳಿವೆ. ಅವುಗಳನ್ನು ಬಳಸಿಕೊಂಡು, ಗ್ರಾಮೀಣ ಮಕ್ಕಳಿಗೆ ಪಾಠ ಮತ್ತು ಪರ್ಯಾಯ ಕಲಿಕೆಯನ್ನು ಒದಗಿಸಲು ಚರ್ಚೆ ನಡೆಯುತ್ತಿದೆ. ಗ್ರಂಥಾಲಯಗಳಲ್ಲಿ ಕಲಿಕಾ ಸಲಕರಣೆಗಳನ್ನು ಅಳವಡಿಸಿ ದೂರದರ್ಶನ, ಮೊಬೈಲ್ ವಂಚಿತ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಸಂಬಂಧ ಚರ್ಚಿಸಲಾಗಿದೆ ಎಂದು ಸಚಿವರು ಹೇಳಿದರು.
ಸಿಎಸ್ ಜತೆಗೆ ಚರ್ಚೆ
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಎದುರಿಸುತ್ತಿರುವ ನೆಟ್‌ವರ್ಕ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಶಿಕ್ಷಣ ಸಚಿವರು ಸೋಮವಾರ ರಾಜ್ಯದ ಮುಖ್ಯ ಕಾರ್ಯದರ್ಶಿ (ಸಿಎಸ್) ಪಿ. ರವಿಕುಮಾರ್ ಜತೆಗೆ ಮಾತುಕತೆ ನಡೆಸಿದ್ದಾರೆ. ಮಾಹಿತಿ ತಂತ್ರಜ್ಞಾನ ಸಚಿವ ಡಾ| ಅಶ್ವತ್ಥ ನಾರಾಯಣ ಮತ್ತು ಸಿಎಸ್ ಸೂಚನೆಯಂತೆ ನೆಟ್‌ವರ್ಕ್ ಪೂರೈಕೆದಾರ ಕಂಪೆನಿಗಳೊಂದಿಗೆ ಚರ್ಚಿಸಲಾಗಿದ್ದು, ಸಕಾರಾತ್ಮಕ ಸ್ಪಂದನೆ ಲಭಿಸಿದೆ ಎನ್ನಲಾಗಿದೆ.
ಎಸೆಸೆಲ್ಸಿ ಪರೀಕ್ಷೆಗೆ ಅಸ್ತು
ಜು. 19 ಮತ್ತು 22ರಂದು ಎಸೆಸೆಲ್ಸಿ ಪರೀಕ್ಷೆ ನಿರಾತಂಕವಾಗಿ ನಡೆಯಲಿದೆ. ಈ ಬಗೆಗಿನ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಪಿಯುಸಿ ಪರೀಕ್ಷೆಯಂತೆ 10ನೇ ತರಗತಿ ಪರೀಕ್ಷೆ ರದ್ದುಗೊಳಿಸಬೇಕು ಎಂದು ಅರಿಕೆ ಮಾಡಲಾಗಿತ್ತು. ಅರ್ಜಿದಾರರು ಮತ್ತು ಸರಕಾರದ ವಾದ- ಪ್ರತಿವಾದ ಆಲಿಸಿದ ನ್ಯಾಯಪೀಠ, ರಾಜ್ಯದಲ್ಲಿ ಸೋಂಕು ತಗ್ಗಿದೆ. ಹಾಗಾಗಿ ಪರೀಕ್ಷೆ ನಡೆಸುವುದು ಸೂಕ್ತ. ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ಪರೀಕ್ಷೆ ನಡೆಯಬೇಕಿದೆ. ಹಾಗಾಗಿ ಎಸೆಸೆಲ್ಸಿ ಪರೀಕ್ಷೆಗಳನ್ನು ರದ್ದುಪಡಿಸಬೇಕು ಎಂಬ ಮನವಿಯನ್ನು ಪರಿಗಣಿಸಲು ಅಸಾಧ್ಯ ಎಂದು ಅಭಿಪ್ರಾಯಪಟ್ಟಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.