![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, May 14, 2021, 8:30 AM IST
ಮಂಗಳೂರು: ನಗರದ ಕೊಟ್ಟಾರದ ಒಂದೇ ಕುಟುಂಬದ ಮಗು ಸಹಿತ 11 ಮಂದಿಗೆ ಕೊರೊನಾ ಬಾಧಿಸಿದರೂ ಯಾರೂ ಧೃತಿಗೆಡದೆ ಮನೆಯಲ್ಲೇ ಇದ್ದು ವೈದ್ಯರ ಸಲಹೆಯಂತೆ ಔಷಧ, ಆಹಾರ ಸೇವಿಸಿ ಗುಣಮುಖರಾಗಿದ್ದಾರೆ.
54 ವರ್ಷದ ಪೂರ್ಣಿಮಾ ಮತ್ತು 58 ವರ್ಷದ ರಾಜ್‌ಗೋಪಾಲ್ ರೈ ದಂಪತಿ, ಅವರ 27 ಮತ್ತು 25 ವರ್ಷದ ಮಕ್ಕಳು ಹಾಗೂ ಮುಂಬಯಿ ಯಿಂದ ಬಂದಿದ್ದ 68 ವರ್ಷ, 62 ವರ್ಷ, 58 ವರ್ಷ, 32 ವರ್ಷ, 30 ವರ್ಷ, 26 ವರ್ಷದ ಅವರ ಸಂಬಂಧಿಕರು ಹಾಗೂ 2 ವರ್ಷದ ಒಂದು ಮಗು ಕೂಡ ಸೋಂಕಿಗೆ ಒಳಗಾಗಿದ್ದರು. ಮೊದಲು ರಾಜ್‌ಗೋಪಾಲ್ ಗೆ ಜ್ವರ ಬಂದಾಗ ಕುಟುಂಬ ವೈದ್ಯರಿಗೆ ಕರೆ ಮಾಡಿ ಅವರ ಸಲಹೆಯಂತೆ ರಕ್ತಪರೀಕ್ಷೆ ಮಾಡಿಸಿ ಮಾತ್ರೆ ಸೇವಿಸಿದರು. ಬಳಿಕ ಕಷಾಯ ಸೇವಿಸಿದರು. ಅಷ್ಟರಲ್ಲಿ ಉಳಿದವರನ್ನೂ ಸೋಂಕು ಬಾಧಿಸಿತು. ವೈದ್ಯರ ಸಲಹೆಯಂತೆ ದ್ರವಾಹಾರಕ್ಕೆ ಆದ್ಯತೆ ನೀಡಿದ್ದು ವರದಾನವಾಯಿತು.
ಪೂರ್ಣಿಮಾ ಜಾಣ ನಡೆ
ಪೂರ್ಣಿಮಾ ಮನೆಮಂದಿಯಲ್ಲಿ ಧೈರ್ಯ ತುಂಬಿದರು. ಅವರೇ ಸ್ವತಃ ಕೊರೊನಾ ಬಾಧಿತರಾಗಿ ಸ್ವಯಂ ಅನುಭವದಿಂದ ಇತರರಿಗೂ ಸಲಹೆ ನೀಡಲಾರಂಭಿಸಿದರು. ಅಗತ್ಯವೆನಿಸಿದಾಗಲೆಲ್ಲ ವೈದ್ಯರ ಸಲಹೆ ಪಡೆಯುತ್ತಿದ್ದರು. ಮನೆ ಮಂದಿಗೆ ದಿನಕ್ಕೊಂದು ಮೊಟ್ಟೆ, ನೇಂದ್ರ ಬಾಳೆಹಣ್ಣು, ಕಿತ್ತಳೆ ಹಣ್ಣು ನೀಡುತ್ತಿದ್ದರು. ಜತೆಗೆ ಲಿಂಬೆ ಹಣ್ಣಿನ ಜ್ಯೂಸ್, ಒಬ್ಬರಿಗೆ 3ರಿಂದ 4 ಲೀಟರ್ ನೀರು ಕುಡಿಸುತ್ತಿದ್ದರು. ಕುಟುಂಬದ ಎಲ್ಲ ಸದಸ್ಯರ ಜತೆ ಗುಣಮುಖರಾದ ಪೂರ್ಣಿಮಾ ಶೆಟ್ಟಿ ಅವರು ಕುಟುಂಬ, ಕಚೇರಿ ಕೆಲಸ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಿದ್ದಾರೆ.
ಸೋಂಕು ದೃಢಪಟ್ಟ ಕೂಡಲೇ ಆಸ್ಪತ್ರೆಗೆ ಹೋಗುವುದು ಸರಿಯಲ್ಲ. ಅದರಿಂದ ಆಸ್ಪತ್ರೆಯಲ್ಲಿ ವೈದ್ಯರು, ದಾದಿಯರಿಗೆ ಒತ್ತಡ ಉಂಟಾಗುತ್ತದೆ. ಸರಿಯಾದ ಚಿಕಿತ್ಸೆ ದೊರೆಯದೆ ಸಮಸ್ಯೆಯೂ ಆಗಬಹುದು. ವೈದ್ಯರ ಸಲಹೆ ಪಡೆದು ಮನೆಯಲ್ಲಿಯೇ ಸಾಧ್ಯವಾದಷ್ಟು ಚಿಕಿತ್ಸೆ, ಆರೈಕೆ ಮಾಡಿಕೊಳ್ಳುವುದು ಉತ್ತಮ ಎನ್ನುತ್ತಾರೆ ಪೂರ್ಣಿಮಾ ಮತ್ತು ಅವರ ಮಕ್ಕಳು.
ಪತಿ ಹಾಗೂ ಮನೆಯಲ್ಲಿದ್ದ ಎಲ್ಲರಿಗೂ ಕೊರೊನಾ ಬಂದಾಗಲೂ ಗಾಬರಿಯಾಗಲಿಲ್ಲ. ಯಾವುದೇ ಕಾರಣಕ್ಕೂ ಭಯಪಡಬಾರದು ಎಂದು ನಿರ್ಧರಿಸಿದ್ದೆ. ಅದೇ ಮನಸ್ಥೈರ್ಯವನ್ನು ಎಲ್ಲರಲ್ಲೂ ತುಂಬಿದೆ. ಕೊರೊನಾ ಬಂದರೆ ಯಾರೂ ಭಯಪಡಬೇಕಾಗಿಲ್ಲ. ಆಕ್ಸಿಮೀಟರ್‌ನಲ್ಲಿ ದೇಹದ ಆಮ್ಲಜನಕದ ಪ್ರಮಾಣ ನಿಯಮಿತವಾಗಿ ಪರಿಶೀಲಿಸುತ್ತಿದ್ದು, ನಿಗದಿತ ಮಿತಿಗಿಂತ ಕಡಿಮೆಯಾದರೆ ಮಾತ್ರ ಆಸ್ಪತ್ರೆಗೆ ಹೋದರೆ ಸಾಕು. ಗರಿಷ್ಠ ನೀರು ಸೇರಿದಂತೆ ದ್ರವಾಹಾರ ಸೇವನೆ ಅಗತ್ಯ ಎಂಬುದು ನನ್ನ ಅನುಭವ.
– ಪೂರ್ಣಿಮಾ ಶೆಟ್ಟಿ , ಕೊಟ್ಟಾರ, ಮಂಗಳೂರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್.ಡಿ.ದೇವೇಗೌಡ
You seem to have an Ad Blocker on.
To continue reading, please turn it off or whitelist Udayavani.