![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, May 4, 2020, 5:30 AM IST
ಸಾಂದರ್ಭಿಕ ಚಿತ್ರ.
ಮಂಗಳೂರು: ಜ್ವರ ಬಂದರೆ ಕೋವಿಡ್-19 ಪರೀಕ್ಷೆ ಮಾಡಿಸಲೇಬೇಕೆಂಬ ಸರಕಾರದ ನಿಯಮ ಇದೀಗ ಇತರ ಕಾಯಿಲೆಗಳಿಂದ ಬಳಲುತ್ತಿರುವವರ ಅದರಲ್ಲಿಯೂ ತುರ್ತಾಗಿ ಚಿಕಿತ್ಸೆ ಅಥವಾ ಶಸ್ತ್ರ ಚಿಕಿತ್ಸೆಗೆ ಒಳಪಡಿಸಬೇಕಾದ ರೋಗಿಗಳು ತಮ್ಮ ಗಂಟಲ ದ್ರವ ಮಾದರಿ ವರದಿ ಬರುವವರೆಗೆ ಕಾಯಬೇಕಾದ ಚಿಂತಾಜನಕ ಪರಿಸ್ಥಿತಿ ನಿರ್ಮಾಣವಾಗಿದೆ.
ದೇಹದ ಯಾವುದೇ ಭಾಗಗಳಲ್ಲಿ ಸಹಿಸಲಾರದ ನೋವಿದ್ದರೆ ಆ ವ್ಯಕ್ತಿಗೆ ಸಾಮಾನ್ಯವಾಗಿ ಜ್ವರ ಬರುವುದು ಸಹಜ. ಆದರೆ ಜ್ವರ ಕೂಡ ಕೋವಿಡ್-19 ಲಕ್ಷಣವಾಗಿರುವುದರಿಂದ ಇದಕ್ಕೂ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿ ಪರೀಕ್ಷೆ ಮಾಡಿಸಿಕೊಳ್ಳ ಬೇಕು. ಅಲ್ಲದೆ ಇದು ನೋವಿನಿಂದ ಬರುವ ಜ್ವರವೆಂದು ಗೊತ್ತಿದ್ದರೂ ಖಾಸಗಿ ಕ್ಲಿನಿಕ್, ಖಾಸಗಿ ಆಸ್ಪತ್ರೆ ವೈದ್ಯರು ರೋಗಿಯನ್ನು ಮುಟ್ಟಲು ಕೂಡ ಮುಂದಾಗುವುದಿಲ್ಲ. ಏಕೆಂದರೆ ಆ ರೋಗಿಗೆ ಕೊರೊನಾವಿದ್ದಲ್ಲಿ ಅಥವಾ ಜ್ವರವಿದ್ದೂ ಚಿಕಿತ್ಸೆ ಮುಂದುವರಿಸಿದಲ್ಲಿ ಮುಂದೆ ಚಿಕಿತ್ಸೆ ನೀಡಿದ ಆಸ್ಪತ್ರೆ, ವೈದ್ಯರ ಮೇಲೆಯೂ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ.
ಉಳ್ಳಾಲ ಕುಂಪಲದ ವ್ಯಕ್ತಿಯಲ್ಲಿ ಅತಿಯಾದ ಬೆನ್ನುನೋವು ಕಾಣಿಸಿಕೊಂಡ ಕಾರಣ ನಗರದ ಖಾಸಗಿ ಕ್ಲಿನಿಕ್‌ವೊಂದಕ್ಕೆ ಶುಕ್ರವಾರ ಕರೆದೊಯ್ಯಲಾಗಿತ್ತು. ಎಂಆರ್‌ಐ ಸ್ಕ್ಯಾನ್ ಮಾಡಿಸಿದಾಗ ಅವರ ಸೊಂಟದ ಭಾಗದಲ್ಲಿರುವ ನರದ ಸಮಸ್ಯೆಯನ್ನು ತುರ್ತು ಶಸ್ತ್ರಚಿಕಿತ್ಸೆಯ ಮುಖಾಂತರ ಸರಿಪಡಿಸಬೇಕೆಂದು ವೈದ್ಯರು ಹೇಳಿದ್ದರು. ಬಳಿಕ ಅವರನ್ನು ತಪಾಸಣೆ ಮಾಡಿ ಜ್ವರ ಇರುವ ಕಾರಣಕ್ಕೆ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ವೈದ್ಯರು ಶಿಫಾರಸು ಮಾಡಿದ್ದರು. ಕೋವಿಡ್ ಆಸ್ಪತ್ರೆಗೆ ಕರೆ ತಂದು ಸುಮಾರು ಎರಡು ಗಂಟೆ ಕಾಯಿಸಿ ಬಳಿಕ ಗಂಟಲು ದ್ರವ ಮಾದರಿಯನ್ನು ತೆಗೆಯಲಾಗಿದೆ. ತೀವ್ರ ಬೆನ್ನುನೋವಿನಿಂದ ಬಳಲುತ್ತಿರುವ ಆ ವ್ಯಕ್ತಿಯು ಅತ್ತ ನೋವಿನಿಂದ ಕುಳಿತುಕೊಳ್ಳಲು; ನಿಲ್ಲಲು ಸಾಧ್ಯ ವಾಗದೆ ನರಳಾಡುತ್ತಿದ್ದರು. ಅವರ ಪತ್ನಿಯು ಶೀಘ್ರ ಕೋವಿಡ್ -19 ವರದಿ ನೀಡಬೇಕೆಂದು ಎಷ್ಟೇ ಮನವಿ ಮಾಡಿದರೂ ಯಾರೂ ಸ್ಪಂದಿಸಲಿಲ್ಲ. ರವಿವಾರ ಸಂಜೆಯಾದರೂ ಅವರಿಗೆ ವರದಿ ಸಿಕ್ಕಿರಲಿಲ್ಲ. ಹೀಗಾಗಿ, ಸದ್ಯ ನೋವಿನಲ್ಲಿಯೇ ನರಳಾಡಿಕೊಂಡು ಆ ವ್ಯಕ್ತಿ ಕೋವಿಡ್ ಆಸ್ಪತ್ರೆಯಲ್ಲಿ ಮೂರು ದಿನ ಕಳೆಯುವಂತಾಗಿದೆ ಎಂಬುದು ಅವರ ಪತ್ನಿ ಆರೋಪ. ಈ ಬಗ್ಗೆ ವೆನ್ಲಾಕ್ ಜಿಲ್ಲಾಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಸದಾಶಿವ ಅವರಲ್ಲಿ ಮಾತನಾಡಲು “ಉದಯವಾಣಿ’ ಸಂಪರ್ಕಿಸುವ ಪ್ರಯತ್ನ ಮಾಡಿದ್ದರೂ ಅವರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ.
ಸಮಸ್ಯೆಯ ಮೇಲೆ ಸಮಸ್ಯೆ
ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಕನ್ಯಾನದ ವ್ಯಕ್ತಿಯೋರ್ವರಿಗೆ ಕಳೆದ ವಾರ ಕೋವಿಡ್-19 ಪರೀಕ್ಷೆ ಮಾಡಬೇಕೆಂದು ವಿಟ್ಲದ ಆಸ್ಪತ್ರೆಯಿಂದ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ಶಿಫಾರಸು ಮಾಡಿಲಾಗಿತ್ತು. ಕೋವಿಡ್ ಆಸ್ಪತ್ರೆಯಲ್ಲಿ ತುಂಬಾ ಕಾಯಬೇಕಾಗಿ ಬಂದು, ಅವರ ನಿಜವಾದ ಸಮಸ್ಯೆಗೆ ಸಕಾಲದಲ್ಲಿ ಔಷಧ ಸಿಗದೆ ಮೃತಪಟ್ಟಿದ್ದಾರೆ ಎಂಬುದು ಮನೆಯವರ ಆರೋಪ. ಇದೇ ರೀತಿ ತುರ್ತು ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ಅಸಹಾಯಕರಾಗಿ ಸಂಕಷ್ಟ ಅನುಭವಿಸುತ್ತಿರುವ ಬೆಳಕಿಗೆ ಬರದ ಪ್ರಕರಣಗಳು ಹಲವೆಡೆ ಇದ್ದು, ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ಇಂತಹವರಿಗೆ ಸ್ಥಳೀಯವಾಗಿಯೇ ತುರ್ತು ಚಿಕಿತ್ಸೆ ಕೊಡಿಸುವುದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ.
ಒತ್ತಡದಲ್ಲಿ ವೈದ್ಯರು
ಈಗಾಗಲೇ 600ಕ್ಕೂ ಹೆಚ್ಚು ಗಂಟಲ ದ್ರವ ಮಾದರಿ ಪರೀಕ್ಷೆಗೆ ಬಾಕಿ ಇರುವುದರಿಂದ ಮತ್ತು ಆ ಎಲ್ಲ ಮಾದರಿಗಳೂ ಅಗತ್ಯವಾಗಿ ಪರೀಕ್ಷಿಸಲೇಬೇಕಾದ ಒತ್ತಡ ವೈದ್ಯರಿಗೆ ಇರುವುದರಿಂದ ಯಾವುದನ್ನು ಮೊದಲು ಮಾಡುವುದು, ಯಾವುದನ್ನು ಅನಂತರ ಪರೀಕ್ಷಿಸುವುದು ಎಂಬ ಒತ್ತಡ-ಗೊಂದಲ ಕೂಡ ವೈದ್ಯರಲ್ಲಿದೆ.
ಎಲ್ಲ ರೋಗಿಗಳ ಮಾಹಿತಿ ಇರುವುದಿಲ್ಲ
ಸಾರ್ವಜನಿಕ ಆರೋಗ್ಯ ನಿರ್ವಹಣೆ ಜಿಲ್ಲಾ ಆರೋಗ್ಯಾಧಿಕಾರಿ ವ್ಯಾಪ್ತಿಗೆ ಬರುತ್ತದೆ. ಪ್ರತಿ ರೋಗಿಗಳ ಬಗ್ಗೆ ನಮಗೆ ಮಾಹಿತಿ ಇರುವುದಿಲ್ಲ. ವೆನ್ಲಾಕ್ ಆಸ್ಪತ್ರೆಗೆ ಸಂಬಂಧಿಸಿದ ಮಾಹಿತಿಗಳನ್ನು ಅಲ್ಲಿನ ವೈದ್ಯಕೀಯ ಅಧೀಕ್ಷಕರಲ್ಲಿ ಕೇಳಬೇಕು.
-ಡಾ| ರಾಮಚಂದ್ರ ಬಾಯರಿ,
ದ.ಕ. ಜಿಲ್ಲಾ ಆರೋಗ್ಯಾಧಿಕಾರಿ
You seem to have an Ad Blocker on.
To continue reading, please turn it off or whitelist Udayavani.