Yahya Sinwar:ಕೊನೆಯಾದ ಹಮಾಸ್ ಮುಖ್ಯಸ್ಥನ ತಂತ್ರ: ಸೋಲಿನಲ್ಲಿ ಅಂತ್ಯ ಕಂಡ ಸಿನ್ವರ್ ಜೀವನ
ಡಿಎನ್ಎ ಪರೀಕ್ಷೆಗಳ ಮೂಲಕ ಆತನ ಗುರುತಿನ ಖಾತರಿಗೆ ಕಾಯುತ್ತಿತ್ತು...
Team Udayavani, Oct 18, 2024, 2:45 PM IST
ಅಕ್ಟೋಬರ್ 17, ಗುರುವಾರದಂದು ಇಸ್ರೇಲಿ ಸೇನಾ ಪಡೆಯಾದ ಇಸ್ರೇಲ್ ಡಿಫೆನ್ಸ್ ಫೋರ್ಸಸ್ (ಐಡಿಎಫ್) ಗಾಜಾದ ರಾಫಾ ಪ್ರದೇಶದ ಟೆಲ್ ಸುಲ್ತಾನ್ ಎಂಬಲ್ಲಿ ಅನಿರೀಕ್ಷಿತ ಕಾರ್ಯಾಚರಣೆ ನಡೆಸಿತು. ಈ ದಾಳಿಯ ಸಂದರ್ಭದಲ್ಲಿ, ಹಮಾಸ್ ಸಂಘಟನೆಯ ಉನ್ನತ ನಾಯಕ, ಯಾಹ್ಯಾ ಸಿನ್ವರ್ ಸಾವನ್ನಪ್ಪಿದ್ದಾನೆ. ಗುರುವಾರ ಇಡೀ ದಿನ ಆತನ ಸಾವಿಗೆ ಸಂಬಂಧಿಸಿದ ಸುದ್ದಿ ಹರಿದಾಡುತ್ತಿದ್ದರೂ, ಮೂಲಗಳು ಸಿನ್ವರ್ ಸಾವಿನ ಸುದ್ದಿಯನ್ನು ಸಂಜೆಯ ವೇಳೆಗೆ ಖಚಿತಪಡಿಸಿದವು.
ಅದಾದ ಕೆಲ ಸಮಯದ ಬಳಿಕ, ಸಂಜೆ 7:45ರ ಸುಮಾರಿಗೆ, ಐಡಿಎಫ್, ಶಿನ್ ಬೆಟ್, ಇಸ್ರೇಲ್ ವಿದೇಶಾಂಗ ಸಚಿವ ಯಿಸ್ರೇಲ್ ಕ್ಯಾಟ್ಜ್ ಹಾಗೂ ಇತರ ಅಧಿಕಾರಿಗಳು ಯಾಹ್ಯಾ ಸಿನ್ವರ್ ಹತ್ಯೆಯಾಗಿರುವುದನ್ನು ಖಾತ್ರಿಪಡಿಸಿದರು.
ಸಿನ್ವರ್ 2011ರಲ್ಲಿ ಇಸ್ರೇಲಿ ಜೈಲಿನಿಂದ ಬಿಡುಗಡೆಯಾಗುವ ಮುನ್ನ ಸಂಗ್ರಹಿಸಿದ್ದ ಆತನ ಹಲ್ಲಿನ ಅಚ್ಚು ಮತ್ತು ಬೆರಳಚ್ಚಿನ ಸಹಾಯದಿಂದ ಆತನ ಸಾವನ್ನು ಖಚಿತಪಡಿಸಲಾಯಿತು.
ಈ ಅನಿರೀಕ್ಷಿತ ಕಾರ್ಯಾಚರಣೆಯ ಸಂದರ್ಭದಲ್ಲಿ, ಸಿನ್ವರ್ ಹೊರತುಪಡಿಸಿ ಬೇರೆ ಯಾರಿಗೂ ಹಾನಿಯಾಗಿಲ್ಲ ಎನ್ನಲಾಗಿದೆ.
ಗುರುವಾರ ಬೆಳಗ್ಗೆ, ಐಡಿಎಫ್ ಮತ್ತು ಶಿನ್ ಬೆಟ್ (ಐಎಸ್ಎ) ಜಂಟಿ ಹೇಳಿಕೆಯೊಂದನ್ನು ನೀಡಿದ್ದು, ಅದರಲ್ಲಿ ‘ಆರಂಭಿಕ ವರದಿ ಗಾಜಾ ಪಟ್ಟಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೂವರು ಭಯೋ*ತ್ಪಾದಕರು ಹ*ತ್ಯೆಯಾಗಿದ್ದಾರೆ’ ಎಂದು ತಿಳಿಸಿತ್ತು. ಹತ್ಯೆಯಾದ ಉಗ್ರರಲ್ಲಿ ಯಾಹ್ಯಾ ಸಿನ್ವರ್ ಸಹ ಸೇರಿದ್ದಾನೆಯೇ ಎಂಬ ಕುರಿತು ಪರಿಶೀಲನೆ ನಡೆಸುತ್ತಿರುವ ವರದಿಗಳು ಬಂದಿದ್ದವು. ಆದರೆ ಐಡಿಎಫ್ ಸತ್ತ ಭಯೋತ್ಪಾದಕರನ್ನು ಇನ್ನೂ ಯಾರೆಂದು ಖಾತ್ರಿಪಡಿಸಲಾಗಿಲ್ಲ ಎಂದಿತ್ತು.
ಇನ್ನು ಭಯೋತ್ಪಾದಕರ ಹತ್ಯೆ ನಡೆದ ಕಟ್ಟಡದಲ್ಲಿ ಒತ್ತೆಯಾಳುಗಳು ಇದ್ದುದರ ಯಾವುದೇ ಕುರುಹುಗಳು ಕಂಡು ಬರಲಿಲ್ಲ. ಆ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಪಡೆಗಳು ಅವಶ್ಯಕ ಎಚ್ಚರಿಕೆಯೊಡನೆ ತಮ್ಮ ಕಾರ್ಯಾಚರಣೆ ಮುಂದುವರಿಸಿವೆ ಎಂದಿತ್ತು.
ಗುರುವಾರ ಸಂಜೆ ಲಭಿಸಿದ ಮಾಹಿತಿಯ ಪ್ರಕಾರ, ಡಿವಿಶನ್ 162 ಮತ್ತು 828 ಬಿಸ್ಲಾಚ್ ಬ್ರಿಗೇಡ್‌ಗಳು ಸಿನ್ವರ್‌ನನ್ನು ಗುರುತಿಸಿ, ಹತ್ಯೆ ನಡೆಸಿದ್ದವು. ಬಟಾಲಿಯನ್ 195ರ ಒಂದು ಟ್ಯಾಂಕ್ ಹಾಗೂ ಬಟಾಲಿಯನ್ 450ರ ಕಾಲಾಳು ಪಡೆಗಳು ಈ ಕಾರ್ಯಾಚರಣೆಯ ಭಾಗವಾಗಿದ್ದವು.
ಸಿನ್ವರ್ ಹತ್ಯೆಯಾದ ತಕ್ಷಣವೇ ಆತನ ದೇಹದಿಂದ ಒಂದು ಬೆರಳನ್ನು ಕತ್ತರಿಸಿ, ಕ್ಷಿಪ್ರ ಗುರುತು ಪತ್ತೆಗಾಗಿ ಇಸ್ರೇಲ್‌ಗೆ ಕಳುಹಿಸಲಾಯಿತು. ಐಡಿಎಫ್ ಪಡೆಗಳು ತಾವು ಗುರಿಯಾಗಿಸಿದ ಕಟ್ಟಡದೊಳಗೆ ಹಮಾಸ್ ಸದಸ್ಯರಿದ್ದಾರೆ ಎಂಬ ಅನುಮಾನ ಹೊಂದಿದ್ದವು. ಆ ಸ್ಥಳದತ್ತ ಗುಂಡು ಹಾರಿಸಿ ದಾಳಿ ನಡೆಸಿದ ಬಳಿಕ, ಅವರಿಗೆ ಒಳಗಡೆ ಸಿನ್ವರ್‌ನ ಮೃತದೇಹ ಲಭಿಸಿತು.
ಐಡಿಎಫ್ ದಾಳಿಯಲ್ಲಿ ಹತ್ಯೆಯಾದ ಇನ್ನೊಬ್ಬ ಉಗ್ರನನ್ನು ಹಮಾಸ್‌ನ ಖಾನ್ ಯೂನಿಸ್ ವಿಭಾಗದ ಕಮಾಂಡರ್ ಎಂದು ಗುರುತಿಸಲಾಗಿದೆ. ಆತ ಯುದ್ಧ ಆರಂಭವಾದ ಬಳಿಕ ಸಿನ್ವರ್ ಜೊತೆಗೇ ಇದ್ದ ಎನ್ನಲಾಗಿದೆ.
ರಾಫಾದಲ್ಲಿ ಆರು ಇಸ್ರೇಲಿ ಒತ್ತೆಯಾಳುಗಳಾದ ಹೆರ್ಶ್ ಗೋಲ್ಡ್‌ಬರ್ಗ್ ಪೋಲಿನ್, ಈಡನ್ ಯೆರುಶಾಲ್ಮಿ, ಕಾರ್ಮೆಲ್ ಗ್ಯಾಟ್, ಆಲ್ಮಗ್ ಸಾರುಸಿ, ಅಲೆಕ್ಸಾಂಡರ್ ಲೊಬಾನೊವ್, ಹಾಗೂ ಓರಿ ಡಾನಿನೊ ಇದ್ದ ಸುರಂಗ ಸಂಕೀರ್ಣದಿಂದ ಕೆಲವೇ ನೂರು ಮೀಟರ್‌ಗಳಷ್ಟು ದೂರದಲ್ಲಿ ಸಿನ್ವರ್ ಅಡಗಿದ್ದ ಎಂದು ಐಡಿಎಫ್ ಭಾವಿಸಿತ್ತು.
ಆಗಸ್ಟ್ ತಿಂಗಳಲ್ಲಿ ಒತ್ತೆಯಾಳುಗಳು ಹತ್ಯೆಯಾದ ಬಳಿಕ, ಸಿನ್ವರ್ ಇತರ ಒತ್ತೆಯಾಳುಗಳನ್ನು ಮಾನವ ಗುರಾಣಿಗಳನ್ನಾಗಿ ಬಳಸಿಕೊಳ್ಳದೆ ಓಡಾಡಲು ಆರಂಭಿಸಿದ ಎಂದು ಐಡಿಎಫ್ ವರದಿಗಳು ಹೇಳಿವೆ.
ಮೂಲಗಳ ಪ್ರಕಾರ, ಆಗಸ್ಟ್ ತಿಂಗಳಲ್ಲಿ ಟೆಲ್ ಸುಲ್ತಾನ್‌ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಸಿನ್ವರ್ ಬಹುತೇಕ ಸಾವಿಗೀಡಾಗಿದ್ದ. ಇದು ಐಡಿಎಫ್‌ಗೆ ತಾನು ಸಿನ್ವರ್‌ನನ್ನು ಸರಿಯಾಗಿ ಹಿಂಬಾಲಿಸುತ್ತಿದ್ದೇನೆ ಎಂಬ ಭರವಸೆ ನೀಡಿತ್ತು.
ಸಿನ್ವರ್ ಎಲ್ಲಿದ್ದಾನೆ ಎಂದು ತಿಳಿಯಲು ಮತ್ತು ಇಸ್ರೇಲಿ ಒತ್ತೆಯಾಳುಗಳನ್ನು ಪತ್ತೆಹಚ್ಚಲು ತಾನು ಇಸ್ರೇಲ್‌ಗೆ ನಿರಂತರವಾಗಿ ಗುಪ್ತಚರ ಮಾಹಿತಿಗಳನ್ನು ಒದಗಿಸುತ್ತಿದ್ದೆ ಎಂದು ಅಮೆರಿಕಾ ಹೇಳಿದೆ.
ಅಕ್ಟೋಬರ್ 16, ಬುಧವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ಬಿಸ್ಲಾಚ್ ಫೋರ್ಸಸ್ ಕಣ್ಣಿಗೆ ಅನುಮಾನಾಸ್ಪದ ವ್ಯಕ್ತಿಗಳು ಕಟ್ಟಡದ ಒಳಗೆ ಹೊರಗೆ ತೆರಳುತ್ತಿರುವುದು ಕಾಣಿಸಿತು. ತಕ್ಷಣವೇ ಕಾರ್ಯಾಚರಣೆಗಿಳಿದ ಪಡೆಗಳು ಆ ಕಟ್ಟಡದತ್ತ ದಾಳಿ ನಡೆಸಿದವು.
ಸಂಜೆ 3 ಗಂಟೆಯ ಸುಮಾರಿಗೆ ಒಂದು ಡ್ರೋನ್ ಮೂವರು ವ್ಯಕ್ತಿಗಳು ಮನೆಯಿಂದ ಮನೆಗೆ ಸಂಚರಿಸುತ್ತಿರುವುದನ್ನು ಗುರುತಿಸಿತು. ಇಬ್ಬರು ವ್ಯಕ್ತಿಗಳು ಮುಂದಿನ ಪ್ರದೇಶವನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಸಾಗುತ್ತಿದ್ದರೆ, ಇನ್ನೊಬ್ಬ ಅವರನ್ನು ಹಿಂಬಾಲಿಸುತ್ತಿದ್ದ.
ಅವರು ಆಗಾಗ ಗುಂಡು ಹಾರಿಸುತ್ತಾ, ಒಂದಷ್ಟು ಜನರನ್ನು ಗಾಯಗೊಳಿಸಿದ್ದರು. ಅವರಲ್ಲಿ ಇಬ್ಬರು ವ್ಯಕ್ತಿಗಳು ಒಂದು ಕಟ್ಟಡದೊಳಗೆ ಓಡಿದರೆ, ಮೂರನೇ ವ್ಯಕ್ತಿ ಬೇರೊಂದು ಕಟ್ಟಡದೊಳಗೆ ನುಗ್ಗಿದ್ದ. ಆ ಮೂರನೇ ವ್ಯಕ್ತಿಯನ್ನು ಬಳಿಕ ಸಿನ್ವರ್ ಎಂದು ಗುರುತಿಸಲಾಯಿತು.
ಸಿನ್ವರ್ ಆ ಕಟ್ಟಡದ ಎರಡನೇ ಮಹಡಿಗೆ ಹೋಗುತ್ತಿದ್ದ. ಒಂದು ಐಡಿಎಫ್ ಟ್ಯಾಂಕ್ ಆ ಕಟ್ಟಡದೆಡೆಗೆ ದಾಳಿ ನಡೆಸಿದರೆ, ಗುರಿಯನ್ನು ಗಮನಿಸಲು ಡ್ರೋನ್‌ಗಳನ್ನು ಬಳಸಲಾಯಿತು. ಮುಖ ಮುಚ್ಚಿಕೊಂಡಿದ್ದ ಆತ ಡ್ರೋನ್ ಮೇಲೆ ದಾಳಿ ನಡೆಸಲು ಪ್ರಯತ್ನಿಸುತ್ತಿದ್ದ. ಅಷ್ಟರಲ್ಲಿ ಟ್ಯಾಂಕ್ ಮತ್ತೊಂದು ಬಾರಿ ಅವನೆಡೆಗೆ ದಾಳಿ ಮಾಡಿತು. ಐಡಿಎಫ್ ಬಳಿಕ ಮುಖ ಗುರುತಿಸುವಿಕೆ, ಹಲ್ಲಿನ ದಾಖಲೆ, ಬೆರಳಚ್ಚು ಮತ್ತು ಡಿಎನ್ಎ ಪರೀಕ್ಷೆಗಳ ಮೂಲಕ ಆತನ ಗುರುತಿನ ಖಾತರಿಗೆ ಕಾಯುತ್ತಿತ್ತು.
ವರದಿಗಳ ಪ್ರಕಾರ, ಸಿನ್ವರ್ ಮೃತ ದೇಹದಲ್ಲಿ ಮೆಂಟೋಸ್ (ಒಂದು ಬಗೆಯ ಕ್ಯಾಂಡಿ), ನಗದು, ಎಕೆ47, ಒಂದು ಲೈಟರ್, ಹಾಗೂ ಯುಎನ್ಆರ್‌ಡಬ್ಲ್ಯುಎ ಸಿಬ್ಬಂದಿ ಎಂದು ಗುರುತಿಸುವ ಒಂದು ಗುರುತಿನ ಚೀಟಿಗಳಿದ್ದವು.
ಈ ವರದಿ ಬಂದ ಕೆಲವು ಗಂಟೆಗಳ ಬಳಿಕ, ಇಸ್ರೇಲ್ ಪೊಲೀಸರು ಹೇಳಿಕೆ ಬಿಡುಗಡೆಗೊಳಿಸಿ, “ಯಾಹ್ಯಾ ಸಿನ್ವರ್ ಹತ್ಯೆ ಆಗಿದೆ ಎಂದು ವರದಿಯಾದ ಬಳಿಕ, ಇಸ್ರೇಲ್ ಪೊಲೀಸ್, ಐಡಿಎಫ್ ಹಾಗೂ ಶಿನ್ ಬೆಟ್‌ಗಳು ಆತನ ಗುರುತನ್ನು ಖಾತ್ರಿಪಡಿಸಲು ಜಂಟಿಯಾಗಿ ಕಾರ್ಯಾಚರಿಸುತ್ತಿವೆ. ಒಂದು ಬಾರಿ ಈ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ, ಹತ್ಯೆಯ ಕುರಿತು ಖಚಿತ ಮಾಹಿತಿ ನೀಡಲು ಸಾಧ್ಯವಾಗುತ್ತದೆ. ಹೆಚ್ಚಿನ ಮಾಹಿತಿಗಳು ಲಭ್ಯವಾದ ಬಳಿಕ, ಅವುಗಳನ್ನು ಹಂಚಿಕೊಳ್ಳಲಾಗುತ್ತದೆ” ಎಂದಿದ್ದರು.
ಆ ಬಳಿಕ ಐಡಿಎಫ್ ಚೀಫ್ ಆಫ್ ಸ್ಟಾಫ್ ಲೆಫ್ಟಿನೆಂಟ್ ಜನರಲ್ ಹೆರ್ಜಿ ಹಲೇವಿ ಅವರು ಹೇಳಿಕೆ ಹತ್ಯೆಯನ್ನು ಖಚಿತಪಡಿಸಿದ್ದು, “ನಾವು ಕಳೆದ ವರ್ಷ ನಾವು ಅತ್ಯಂತ ಕರಾಳ ದಿನವನ್ನು ನೋಡುವಂತೆ ಮಾಡಿದ ಸಿನ್ವರ್ ಲೆಕ್ಕ ಚುಕ್ತಾ ಮಾಡಿದ್ದೇವೆ” ಎಂದರು.
ಶಿನ್ ಬೆಟ್ ಮುಖ್ಯಸ್ಥ ರೊನೆನ್ ಬಾರ್ ಮತ್ತು ಐಡಿಎಫ್ ದಕ್ಷಿಣ ಕಮಾಂಡ್ ಮುಖ್ಯಸ್ಥ ಮೇಜರ್ ಜನರಲ್ ಯಾರೊನ್ ಫಿಂಕಲ್‌ಮ್ಯಾನ್ ಜೊತೆ ಇದ್ದ ಹಲೇವಿ ಅವರು, “ಸಿನ್ವರ್‌ನನ್ನು ಗುರಿಯಾಗಿಸಿ ಐಡಿಎಫ್ ಹಲವಾರು ದಾಳಿಗಳನ್ನು ನಡೆಸುತ್ತಾ ಬಂದಿತ್ತು. ಅದೆಲ್ಲದರ ಫಲಿತಾಂಶ ಇಂದು ಲಭಿಸಿದೆ” ಎಂದಿದ್ದರು.
ಸಿನ್ವರ್‌ನನ್ನು ಹತ್ಯೆಗೈದ ಅಂತಿಮ ಕಾರ್ಯಾಚರಣೆ ಪೂರ್ವಯೋಜಿತವಾಗಿರಲಿಲ್ಲ, ಮತ್ತು ನಿಖರ ಗುಪ್ತಚರ ಮಾಹಿತಿಯನ್ನೂ ಆಧರಿಸಿರಲಿಲ್ಲ. ಹಲೇವಿ ಅವರು ಈ ಯಶಸ್ಸು ಗಾಜಾದಾದ್ಯಂತ, ಅದರಲ್ಲೂ ರಾಫಾದಲ್ಲಿ ಕಾರ್ಯಾಚರಣೆ ನಡೆಸುವಲ್ಲಿ ಇಸ್ರೇಲಿ ಸೇನೆಯ ನಿರಂತರ ಕಾರ್ಯಾಚರಣೆಗಳ ಫಲ ಎಂದಿದ್ದಾರೆ. ಇಸ್ರೇಲಿ ಸೇನೆ ಹಮಾಸ್ ಸದಸ್ಯರನ್ನು ಗುರುತಿಸುವ ಗುರಿಯೊಂದಿಗೆ ಕಾರ್ಯಾಚರಣೆ ನಡೆಸುತ್ತಿತ್ತು.
ಇಸ್ರೇಲ್ ರಕ್ಷಣಾ ಸಚಿವರಾದ ಯೊವಾವ್ ಗ್ಯಾಲಂಟ್ ಅವರು ಹತ್ಯೆಯ ಬಳಿಕ ಹೇಳಿಕೆ ನೀಡಿದ್ದಾರೆ. “ಸಿನ್ವರ್ ಜೀವನ ಸೋಲಿನೊಂದಿಗೆ ಕೊನೆಗೊಂಡಿದೆ. ತಪ್ಪಿಸಿಕೊಂಡು ಓಡುತ್ತಿದ್ದ ಆತನನ್ನು ಬೇಟೆಯಾಡಲಾಗಿದೆ. ಕಮಾಂಡರ್ ರೀತಿಯಲ್ಲಿ ತನ್ನ ಸೇನೆಯನ್ನು ಮುನ್ನಡೆಸುವ ಬದಲು, ಆತ ತನ್ನ ಪ್ರಾಣ ರಕ್ಷಿಸಿಕೊಳ್ಳುವತ್ತಲೇ ಗಮನ ಹರಿಸಿದ್ದ” ಎಂದು ಸಚಿವರು ಹೇಳಿದ್ದಾರೆ.
“ಇದು ಪ್ರಾಣ ಕಳೆದುಕೊಂಡವರ ಮತ್ತು ಒತ್ತೆಯಾಳುಗಳಾಗಿರುವವರ ಕುಟುಂಬಗಳಿಗೆ ಮತ್ತು ಗಾಜಾದ ಜನರಿಗೆ ಸ್ಪಷ್ಟ ಸಂದೇಶ ನೀಡುತ್ತಿದೆ. ಈ ದುರಂತಕ್ಕೆ ಕಾರಣವಾಗಿದ್ದ ವ್ಯಕ್ತಿ ಈಗ ಸತ್ತುಹೋಗಿದ್ದಾನೆ. ಈಗ ಹಮಾಸ್ ಸದಸ್ಯರು ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿ, ಶರಣಾಗುವ ಸಮಯ ಬಂದಿದೆ” ಎಂದು ಗ್ಯಾಲಂಟ್ ಹೇಳಿದ್ದಾರೆ.
ಸಿನ್ವರ್ ಯೋಜಿಸಿದ್ದ ಅಕ್ಟೋಬರ್ 7ರ ದಾಳಿಯಲ್ಲಿ ಇಸ್ರೇಲಿಗರು, ವಿದೇಶೀಯರು ಸೇರಿದಂತೆ, 1,200ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು. 250ಕ್ಕೂ ಹೆಚ್ಚು ಜನರನ್ನು ಒತ್ತೆಯಾಳುಗಳನ್ನಾಗಿ ಗಾಜಾಗೆ ಒಯ್ಯಲಾಗಿತ್ತು. ಅವರಲ್ಲಿ 101 ಜನರು ಇನ್ನೂ ಗಾಜಾದಲ್ಲೇ ಸೆರೆಯಾಗಿದ್ದಾರೆ.
ಜನರನ್ನು ಮಾನವ ಗುರಾಣಿಗಳಾಗಿ ಬಳಕೆ
ಸಿನ್ವರ್ ಖಾನ್ ಯೂನಿಸ್ ಮತ್ತು ರಾಫಾಗಳಲ್ಲಿದ್ದ ನೆಲದಾಳದ ಹಮಾಸ್ ಸುರಂಗಗಳಲ್ಲಿ ಬಚ್ಚಿಟ್ಟುಕೊಂಡಿದ್ದ ಎನ್ನಲಾಗಿತ್ತು. ತನ್ನನ್ನು ಪತ್ತೆಹಚ್ಚುವುದನ್ನು ತಪ್ಪಿಸುವ ಸಲುವಾಗಿ, ಆತ ಆಗಾಗ್ಗೆ ತನ್ನ ಸ್ಥಳವನ್ನು ಬದಲಾಯಿಸುತ್ತಾ, ನಿರಂತರವಾಗಿ ಚಲಿಸುತ್ತಿರುತ್ತಿದ್ದ. ಅವನು ಡಿಜಿಟಲ್ ಸಂವಹನ ಜಾಲವನ್ನು ಬಳಸದೆ, ತನ್ನ ಸಂದೇಶಗಳನ್ನು ರವಾನಿಸಲು ನಂಬಿಕಾರ್ಹ ಜನರನ್ನು ಬಳಸುತ್ತಿದ್ದ. ಆ ಮೂಲಕ ತನ್ನನ್ನು ಪತ್ತೆಹಚ್ಚಲು ಸಾಧ್ಯವಾಗದಂತೆ ನೋಡಿಕೊಳ್ಳುತ್ತಿದ್ದ.
ಮೇಜರ್ ಜನರಲ್ ಡ್ಯಾನ್ ಗೋಲ್ಡ್‌ಫಸ್ ಅವರು ತಾನು ಮಾರ್ಚ್ ತಿಂಗಳಲ್ಲಿ ಸಿನ್ವರ್‌ನನ್ನು ಬಂಧಿಸಲು ಬಹುತೇಕ ಯಶಸ್ವಿಯಾಗಿದ್ದೆ ಎಂದಿದ್ದರು. ತನ್ನ ಪಡೆ ಸಿನ್ವರ್ ಹಲವಾರು ಒತ್ತೆಯಾಳುಗಳನ್ನು ಇಟ್ಟುಕೊಂಡಿದ್ದ ಆತನ ದೊಡ್ಡ ಅಡಗುತಾಣವನ್ನು ತಲುಪಿತ್ತು ಎಂದಿದ್ದರು.
ಹಮಾಸ್ ಮುಖಂಡ ಸಿನ್ವರ್ ತನ್ನನ್ನು ತಾನು ರಕ್ಷಿಸಿಕೊಳ್ಳಲು ಬಾಕಿ ಉಳಿದ ಇಸ್ರೇಲಿ ಒತ್ತೆಯಾಳುಗಳನ್ನು ಗುರಾಣಿಗಳಾಗಿ ಬಳಸಿಕೊಳ್ಳುತ್ತಿದ್ದ ಎನ್ನಲಾಗಿದೆ. ಈ ಕಾರಣದಿಂದಾಗಿ ಐಡಿಎಫ್ ಪಡೆಗಳು ಆತನನ್ನು ಹತ್ಯೆಗೈಯಲು ತೀವ್ರ ದಾಳಿ ನಡೆಸಲು ಹಿಂದೇಟು ಹಾಕುತ್ತಿದ್ದವು. ಅವರು ಒತ್ತೆಯಾಳುಗಳಿಗೆ ಯಾವುದೇ ಪ್ರಾಣಾಪಾಯ ಉಂಟಾಗದಂತೆ ಕಾರ್ಯಾಚರಣೆ ನಡೆಸುವ ಗುರಿ ಹೊಂದಿದ್ದರು.
ಇಸ್ರೇಲ್ ಹಮಾಸ್ ಯುದ್ಧದ ಸಂದರ್ಭದಲ್ಲಿ ಸಿನ್ವರ್ ಸುರಂಗಗಳಿಂದ ಹೊರ ಬಂದಿದ್ದನೇ ಎಂಬ ಕುರಿತು ಎರಡೂ ರೀತಿಯ ವರದಿಗಳು ಬಂದಿದ್ದವು. ಆದರೆ, ಈ ವರ್ಷ ಫೆಬ್ರವರಿ ತಿಂಗಳಲ್ಲಿ ಸಿನ್ವರ್ ಸುರಂಗಗಳಲ್ಲಿ ಸಾಗುವ ದೃಶ್ಯಾವಳಿಗಳನ್ನು ಐಡಿಎಫ್ ಸಂಗ್ರಹಿಸಿತ್ತು.
ಇಸ್ರೇಲ್ ಈಗಾಗಲೇ ಹಲವಾರು ಪ್ರಮುಖ ಹಮಾಸ್ ಮುಖಂಡರನ್ನು ಹತ್ಯೆಗೈದಿದೆ. ಈ ಪಟ್ಟಿಯಲ್ಲಿ, ಜುಲೈ ತಿಂಗಳಲ್ಲಿ ಟೆಹರಾನ್‌ನಲ್ಲಿ ಹತ್ಯೆಯಾದ ಹಮಾಸ್ ರಾಜಕೀಯ ವಿಭಾಗದ ಮುಖ್ಯಸ್ಥ ಇಸ್ಮಾಯಿಲ್ ಹಾನಿಯೆ ಮತ್ತು ಅದೇ ತಿಂಗಳು ಗಾಜಾದಲ್ಲಿ ಕೊಲೆಯಾದ ಮಿಲಿಟರಿ ಕಮಾಂಡರ್ ಮೊಹಮ್ಮದ್ ದೀಫ್ ಸಹ ಸೇರಿದ್ದಾರೆ. ಇನ್ನುಳಿದ ಮೃತರಲ್ಲಿ ದೀಫ್‌ನ ಉಪ ಮುಖ್ಯಸ್ಥ ಮಾರ್ವನ್ ಇಸ್ಸಾ, ಹಾಗೂ ಹಾನಿಯೆ ಉಪ ಮುಖ್ಯಸ್ಥ ಸಲಾಹ್ ಅಲ್ ಅರೌರಿ ಸೇರಿದ್ದಾರೆ.
*ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Paperless Era: ಪೇಪರ್ ಲೆಸ್ ಯುಗ…ಬರೆಯುವುದೇ ಮರೆತು ಹೋಗಿದೆ!
25 ಬಿಲಿಯನ್ ಕಿ.ಮೀ ದೂರದ ಅಂತರತಾರಾ ಬಾಹ್ಯಾಕಾಶದಲ್ಲಿ ಸಮಸ್ಯೆಗೆ ಸಿಲುಕಿದ ವೊಯೇಜರ್ 1
ಕದನಾವರಣ: ಆಕ್ರಮಣಕ್ಕೆ ಪ್ರತಿಕಾರ.. ಇರಾನ್ ಮತ್ತು ಸಿರಿಯಾ ಮೇಲೆ ದಾಳಿ ನಡೆಸಿದ ಇಸ್ರೇಲ್!
United States: ಜಗತ್ತಿನ ಅಣ್ಣ ಗೊರೂರು: ನಮ್ಮೂರೇ ನಮಗೇ ಶಾಶ್ವತ
Brics Summit 2024:ಬ್ರಿಕ್ಸ್ ಸಮಾವೇಶಕ್ಕೆ ಮುನ್ನುಡಿ ಬರೆದ ಭಾರತ -ಚೀನಾ ಸಂಘರ್ಷ ಶಮನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.