ಇಂಜಿನಿಯರ್ ಡೇ; ಸರ್.ಎಂ.ವಿ.ಯವರ162ನೇ ಜನ್ಮ ದಿನಾಚರಣೆ
ಬೃಂದಾವನ' ನಿರ್ಮಾಣವಾದಾಗ ಇದು ಅಂತಾರಾಷ್ಟ್ರೀಯ ಪ್ರವಾಸಿತಾಣದ ದರ್ಜೆಗೇರಿತು
Team Udayavani, Sep 15, 2022, 10:25 AM IST
ಇಂದು ಸರ್.ಎಂ.ವಿ. ಅವರ 162ನೇ ವರ್ಷದ ಜನ್ಮದಿನ. ಎಂ. ವಿಶ್ವೇಶ್ವರಯ್ಯನವರು ಹುಟ್ಟಿದ್ದು ಸೆ. 15, 1860ರಂದು. ಬಡತನದಲ್ಲಿ ಹುಟ್ಟಿ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿದರೂ, ತಮ್ಮ ಬುದ್ಧಿಮತ್ತೆ, ಪರಿಶ್ರಮ, ಗುರಿಯ ಕಡೆಗೆ ನಿಚ್ಚಳ ದೃಷ್ಟಿ ಹಾಗೂ ಅವಿಚಲತೆಯ ನಡೆಯಿಂದಾಗಿ ಉತ್ತಮ ಶಿಕ್ಷಣ ಪಡೆದು ಸಿವಿಲ್ ಎಂಜಿನಿಯರಿಂಗ್ ನಲ್ಲಿ ಪದವೀಧರರಾದರು. ಅವರು ಮುಂಬಯಿ ಸರಕಾರದ ಸೇವೆಗೆ ಸೇರಿ ಭಾರತೀಯ ಮತ್ತು ಐರೋಪ್ಯ ಎಂಜಿನಿಯರ್‌ಗಳಿಗೂ
ಮಾದರಿಯಾದರು.
ಎಂಜಿನಿಯರ್-ದಿವಾನರಾಗಿ ಪ್ರಸಿದ್ಧಿ
ಮುಂದೆ ಮೈಸೂರು ಸಂಸ್ಥಾನದಲ್ಲಿ ಪ್ರಧಾನ ಎಂಜಿನಿಯರ್ ಮತ್ತು ದಿವಾನರಾಗಿ ಸಮಗ್ರ ಭಾರತವೇ ತಮ್ಮತ್ತ ನೋಡುವಂತಹ ಯೋಜನೆಗಳನ್ನು, ಆಡಳಿತ ಸುವ್ಯವಸ್ಥೆಯನ್ನು ಜಾರಿಗೆ ತಂದರು. ಸಮಯ ಪಾಲನೆ ಶಿಸ್ತು, ಕೆಲಸದಲ್ಲಿ ಅಚ್ಚುಕಟ್ಟು ಇವೆಲ್ಲ ಆಧುನಿಕ ಜಗತ್ತಿನಲ್ಲಿ ಒಂದು ರಾಷ್ಟ್ರ-ವ್ಯಕ್ತಿ ಮುಂದೆ ಬರಬೇಕಾದರೆ ಅತ್ಯಗತ್ಯ ಲಕ್ಷಣಗಳಾಗಿರಬೇಕೆಂದು ಸಾರಿ ಬದುಕಿ ತೋರಿಸಿದ ಮಹಾನುಭಾವರು ಸರ್ ಎಂ.ವಿ.. ಅವರನ್ನು ಎಂಜಿನಿಯರಾಗಿ, ಆಡಳಿತಗಾರರಾಗಿ, ಆರ್ಥಿಕತಜ್ಞರಾಗಿ, ಪ್ರತಿಭಾ ಸಂಪನ್ನರಾಗಿ, ದೇಶಭಕ್ತರಾಗಿ ಶಿಸ್ತಿನ ಸಿಪಾಯಿಯಾಗಿ, ಪ್ರಾಮಾಣಿಕರಾಗಿ, ಸೇವಾಕರ್ತರಾಗಿ, ತ್ಯಾಗಶೀಲರಾಗಿ, ಕೈಗಾರಿಕಾವಾದಿಯಾಗಿ ಮತ್ತು ರಾಷ್ಟ್ರ ಧುರೀಣರಾಗಿ -ಹೀಗೆ ಹತ್ತು ಹಲವು ಮುಖಗಳಿಂದ ನೋಡಿದಾಗ್ಯೂ ಅವರು ಪ್ರತಿಯೊಂದರಲ್ಲೂ ಬಹು ಎತ್ತರದ ವ್ಯಕ್ತಿಯಾಗಿ ಕಾಣುತ್ತಾರೆ.
ಸಾಧನಾಶೀಲ ವ್ಯಕ್ತಿತ್ವ
ಕೋಲಾರ ಜಿಲ್ಲೆ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯಲ್ಲಿ ಶ್ರೀನಿವಾಸ ಶಾಸ್ತ್ರೀ ಮತ್ತು ವೆಂಕಟಲಕ್ಷ್ಮೀ ದಂಪತಿಯ ಎರಡನೆಯ ಮಗನಾಗಿ ಅವರು ಜನಿಸಿದ್ದರು. ಪ್ರಾಥಮಿಕ ಶಿಕ್ಷಣವನ್ನು ಚಿಕ್ಕಬಳ್ಳಾಪುರದಲ್ಲಿ ಮುಗಿಸಿ, ಬೆಂಗಳೂರಿಗೆ ಬಂದು ಪ್ರಸಿದ್ಧ ನೆಸ್ಲಿಯನ್ ಮಿಶನ್ ಪ್ರೌಢಶಾಲೆಯಿಂದ ಶಿಕ್ಷಣ ಪಡೆದು ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಮೈಸೂರು ಸಂಸ್ಥಾನದಲ್ಲೇ ಮೊದಲಿಗನಾಗಿ ತೇರ್ಗಡೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಮುಂದೆ ಪ್ರತಿಭಾವಂತ ವಿದ್ಯಾರ್ಥಿಯಾಗಿ ಸೆಂಟ್ರಲ್ ಕಾಲೇಜನ್ನು ಸೇರಿ ಬಿಎ ಪದವಿ ವ್ಯಾಸಂಗವನ್ನು ಮುಗಿಸಿ ಸಂಸ್ಥಾನದಲ್ಲೇ ಪದವಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾದರು.ಅಂತವರಿಗೆ ಮೈಸೂರು ಸರಕಾರದಲ್ಲಿ ಉದ್ಯೋಗ ಸಿಗುವುದು ಖಚಿತವಿದ್ದಿತು. ಆದರೆ ಅವರಿಗೆ ಎಂಜಿನಿಯರಿಂಗ್‌ನಲ್ಲಿ ಹೆಚ್ಚಿನ ವ್ಯಾಸಂಗ ಮಾಡಿ ಆ ಕ್ಷೇತ್ರದಲ್ಲಿ ಮಹತ್ತಾದುದನ್ನು ಸಾಧಿಸಬೇಕೆಂಬ ಹೆಬ್ಬಯಕೆಯಾಯಿತು. ದೂರದ ಪೂನಾದಲ್ಲಿ ಎಂಜಿನಿಯರಿಂಗ್ ಕಾಲೇಜು ಪ್ರವೇಶ ಪಡೆದು ಎರಡೇ ವರ್ಷದಲ್ಲಿ ಪದವಿ ಪರೀಕ್ಷೆ ಪೂರೈಸಿ ಇಡೀ ಮುಂಬಯಿ ಪ್ರಾಂತ್ಯದಲ್ಲಿ ಪ್ರಥಮ ಸ್ಥಾನ ಪಡೆದರು. ಈ ಕಾರಣದಿಂದ ಮುಂಬಯಿ ಸರಕಾರ ಅವರನ್ನು 1884ರಲ್ಲಿ
ಸಹಾಯಕ ಎಂಜಿನಿಯರ್ ಆಗಿ ಸರಕಾರಿ ವ್ಯವಸ್ಥೆಯಲ್ಲಿ ನೇಮಿಸಿತು.
ಎಂಜಿನಿಯರ್ ಆಗಿ ಕಾರ್ಯ ಸಾಧನೆ
ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿ ಸೇವೆಗೆ ಸೇರಿದ ವಿಶ್ವೇಶ್ವರಯ್ಯನವರು ತಮ್ಮ 24 ವರ್ಷಗಳ ಸೇವಾವಧಿಯಲ್ಲಿ ದೇಶದ ಅಭಿವೃದ್ಧಿಯ ಬಗ್ಗೆ ಮಾಡಿದ ಮಹತ್ಕಾರ್ಯದಿಂದಾಗಿ, ಅಭಿವೃದ್ಧಿ ಯೋಜನೆಯ ಹರಿಕಾರರಲ್ಲೊಬ್ಬರಾಗಿ ಹೊರಹೊಮ್ಮಿದರು. ಈ ಅವಧಿಯಲ್ಲಿ ಮುಂಬಯಿ ಸರಕಾರದ ಅಧಿಕಾರ ವ್ಯಾಪ್ತಿಯಲ್ಲಿದ್ದ ಸಿಂಧ್ ಪ್ರಾಂತ್ಯದ ಸುಕ್ಕೂರು ಪಟ್ಟಣಕ್ಕೆ 1894ರಿಂದ 1895ರ ವರೆಗೆ ಶುದ್ಧ ನೀರು ಪೂರೈಸುವ ಕಾಮಗಾರಿಯನ್ನು ಮುಗಿಸಿದರು. ಪೂನಾದಲ್ಲಿ ಖಡಕ್‌ವಾಸ್ಲದ ಜಲಾಶಯದಿಂದ ನಗರಕ್ಕೆ ನೀರು ಸರಬರಾಜಾಗುತ್ತಿತ್ತು. ಮಳೆಗಾಲದಲ್ಲಿ ನೀರನ್ನು ನಿಯಂತ್ರಿಸಲು ಜಲಾಶಯಕ್ಕೆ ಅಪಾಯವಾಗದಂತೆ ಸ್ವಯಂಚಾಲಿತ ಬಾಗಿಲುಗಳ ಅನ್ವೇಷಣೆ ಮಾಡಿ ಇದನ್ನು ಜಲಾಶಯಕ್ಕೆ ಅಳವಡಿಸಿದರು. ಇದನ್ನೇ ಮುಂದೆ ಮೈಸೂರಿನ ಕೃಷ್ಣರಾಜಸಾಗರ ಜಲಾಶಯಕ್ಕೂ ಅಳವಡಿಸಿದರು.ವಿಶ್ವೇಶ್ವರಯ್ಯನವರು 1908ರಲ್ಲಿ ಸ್ವಯಂ ಇಚ್ಛೆಯ ಮೇರೆಗೆ ನಿವೃತ್ತಿ ಪಡೆದು, ಸ್ವಂತ ಖರ್ಚಿನಲ್ಲಿ ಯುರೋಪ್, ಅಮೆರಿಕ ಪ್ರವಾಸ ಮಾಡಲು ಇಚ್ಛಿಸಿದರು. 1909ರ ಎಪ್ರಿಲ್‌ನಲ್ಲಿ ಭಾರತಕ್ಕೆ ಹಿಂದಿರುಗಿದಾಗ ಹೈದರಾಬಾದ್ ಪ್ರಾಂತ್ಯದ ಸರಕಾರದಿಂದ ವಿಶ್ವೇಶ್ವರಯ್ಯನವರಿಗೆ ನಗರದಲ್ಲಿ ನೆರೆಯಿಂದ ಆಗುವ ವಿಪತ್ತುಗಳನ್ನು ಹೋಗಲಾಡಿಸಲು ಅವರ ಸೇವೆಯನ್ನು ಕೋರಲಾಯಿತು.ನಗರವನ್ನು ಪ್ರವಾಹದಿಂದ ರಕ್ಷಿಸಲು, ನಗರದ ಒಳಚರಂಡಿ ವ್ಯವಸ್ಥೆ ಮತ್ತು ನಗರ ಸೌಂದರ್ಯ ಹೆಚ್ಚಿಸುವ ಕಾರ್ಯಗಳ ಯೋಜನೆಯನ್ನು ವಿಶ್ವೇಶ್ವರಯ್ಯನವರು ಕೈಗೆತ್ತಿಕೊಂಡರು. ಇದರಿಂದ “ಆಧುನಿಕ ಹೈದರಾಬಾದ್ ಮತ್ತು ಸಿಕಂದರಾಬಾದ್ ನಗರ ಯೋಜನೆಯ ಪಿತಾಮಹ’ರಾದರು.
ವಿಶ್ವೇಶ್ವರಯ್ಯನವರಿಗೆ ಆಗ ಕೇವಲ 49 ವರ್ಷಗಳು. ಅವರ ಕಾರ್ಯಕುಶಲತೆ, ಸಾಮರ್ಥ್ಯವನ್ನು ನೋಡಿ ಐರೋಪ್ಯರೂ ಹೊಗಳಿದ್ದಾರೆ. ಮುಂದೆ ಮೈಸೂರು ಮಹಾರಾಜರಿಂದ ಆಹ್ವಾನ ಬಂದಿದ್ದರಿಂದ ವಿಶ್ವೇಶ್ವರಯ್ಯನವರು ಮೈಸೂರು ಪ್ರಾಂತ್ಯದ ಪ್ರಧಾನ ಎಂಜಿನಿಯರ್ ಆಗಿ ಸೇವೆಗೆ ಸೇರಿದರು. (1909-1912) 3 ವರ್ಷಗಳ ಕಾಲ ಅನೇಕ ಯೋಜನೆಗಳನ್ನು ತಯಾರಿಸಿದರು. ಅವುಗಳಲ್ಲಿ ಕಾವೇರಿ ನದಿಗೆ ಕನ್ನಂಬಾಡಿ ಬಳಿ ಜಲಾಶಯ ನಿರ್ಮಾಣ, ರೈಲು ಮಾರ್ಗಗಳ ವಿಸ್ತರಣೆ, ತಾಂತ್ರಿಕ ಶಿಕ್ಷಣದ ಅಭಿವೃದ್ಧಿಗೆ ಯೋಜನೆ, ಸಣ್ಣ ನೀರಾವರಿ ವ್ಯವಸ್ಥೆ, ಸಂಸ್ಥಾನದಲ್ಲಿ ಶಿಸ್ತಿನ ಆಡಳಿತ ಇತ್ಯಾದಿ. ಮುಂದೆ 1912ರಿಂದ ಮಹಾರಾಜರೇ
ವಿಶ್ವೇಶ್ವರಯ್ಯರನ್ನು ಮುಂದಿನ ದಿವಾನರಾಗಲು ಯೋಗ್ಯ ಎಂದು ನಿಶ್ಚಯಿಸಿದರು. ದಿವಾನ್ ಹುದ್ದೆಯು ಭಾರತೀಯ ಆಡಳಿತ ವ್ಯವಸ್ಥೆಯಲ್ಲಿನ ಸ್ಥಾನಮಾನವನ್ನು ಸೂಚಿಸುವ ಪ್ರಧಾನಮಂತ್ರಿಗಳಿಗೆ ಸಮನಾದ ಹುದ್ದೆ ಆಗಿತ್ತು.
ಬ್ಯಾಂಕಿಂಗ್, ಶಿಕ್ಷಣ,ಉದ್ಯಮ, ಕೃಷಿ ಸುಧಾರಣೆಯಿಂದ ಪ್ರಗತಿ
1913ರಲ್ಲಿ ರಾಜ್ಯದಲ್ಲಿ ಸರಕಾರ ಹಣಕಾಸು ವ್ಯವಹಾರ ನಡೆಸುವುದಕ್ಕೆ ಮತ್ತು ಆರ್ಥಿಕ ಚಟುವಟಿಕೆ ನಡೆಸಲು “ಮೈಸೂರು ಬ್ಯಾಂಕ್’ನ್ನು ಸ್ಥಾಪಿಸಿ ಸರಕಾರದ ಬ್ಯಾಂಕ್ ಆಗಿ ಆದೇಶ ಹೊರಡಿಸಿದರು. ಇದರಿಂದ ಸಾರ್ವಜನಿಕರಿಗೆ ಉಳಿತಾಯ ಬ್ಯಾಂಕ್‌ಗಳಾಗಿಯೂ ಅನುಕೂಲವಾದುವು. ಅನೇಕ ಮುಖ್ಯ ಕಾರ್ಖಾನೆಗಳ ಸ್ಥಾಪನೆಯನ್ನು ವಿಶ್ವೇಶ್ವರಯ್ಯನವರು ಈ ಅವಧಿಯಲ್ಲಿ ಕೈಗೆತ್ತಿಕೊಂಡರು.ಸಕ್ಕರೆ ಕಾರ್ಖಾನೆ, ಔಷಧ ತಯಾರಿಕಾ ಘಟಕಗಳು, ಗಂಧದ ಎಣ್ಣೆ ಕಾರ್ಖಾನೆ, ಕಾಗದದ ಕಾರ್ಖನೆ ಮುಖ್ಯವಾಗಿ ನೆಲೆಗೊಂಡವು. ಬೆಂಗಳೂರಿನಲ್ಲಿ ಸೋಪು ತಯಾರಿಕಾ ಕಾರ್ಖಾನೆಯನ್ನು ಸರಕಾರ ಸ್ಥಾಪಿಸಿತು. ವಿಶ್ವೇಶ್ವರಯ್ಯನವರು ಕನ್ನಂಬಾಡಿ ಜಲಾಶಯದ ರೂವಾರಿಯಾಗಿಯೂ ಸಂಸ್ಥಾನದಲ್ಲಿ ಕೃಷಿ ಅಭಿವೃದ್ಧಿಗಾಗಿ ಅನೇಕ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡರು. ಸಾವಿರಾರು ಸಣ್ಣ ಕೆರೆ, ದೊಡ್ಡಕೆರೆ, ಕಾಲುವೆಗಳನ್ನು ವಿಸ್ತರಿಸಿ ಮೈಸೂರು ಸಂಸ್ಥಾನದಲ್ಲಿ ಕಬ್ಬು, ಭತ್ತದ ಬೆಳೆಗೆ ಪ್ರೋತ್ಸಾಹ ನೀಡಿದರು. ಕನ್ನಂಬಾಡಿ ಜಲಾಶಯದ ಕೆಳ ಗೆ ಸುಂದರವಾದ “ಬೃಂದಾವನ’ ನಿರ್ಮಾಣವಾದಾಗ ಇದು ಅಂತಾರಾಷ್ಟ್ರೀಯ ಪ್ರವಾಸಿತಾಣದ ದರ್ಜೆಗೇರಿತು. ಅರಣ್ಯಗಳನ್ನು ಸಂರಕ್ಷಿಸಿ, ಅರಣ್ಯ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಿದ ಅನೇಕ ಉದಾಹರಣೆಗಳಿವೆ. ಅವುಗಳಲ್ಲಿ ಬಿದಿರು ಉಪಯೋಗಿಸಿ ಕಾಗದ ಕಾರ್ಖಾನೆ, ಶ್ರೀಗಂಧದ ಮರಗಳನ್ನು ಬೆಳೆಸಿ ಎಣ್ಣೆ ತೆಗೆದು, ಗಂಧದ ಎಣ್ಣೆ ಕಾರ್ಖಾನೆಗಳನ್ನು ಸ್ಥಾಪಿಸಿದರು.
ಸತ್ಕಾರ್ಯಕ್ಕೆ ರಾಷ್ಟ್ರ ಪ್ರಶಸ್ತಿ-“ಭಾರತರತ್ನ’
ಸ್ವಾತಂತ್ರ್ಯಾನಂತರವೂ ಭಾರತ ಸರಕಾರ ಸರ್.ಎಂ.ವಿ. ಎಂಜಿನಿಯರಾಗಿ, ಆಡಳಿತಗಾರರಾಗಿ ಮತ್ತು ಯೋಜಕರಾಗಿ, ವಿಜ್ಞಾನಿಯಾಗಿ ಮಾಡಿದ ಅಗಾಧ ಸಾಧನೆಗಳನ್ನು ಮೆಚ್ಚಿ 1955ರಲ್ಲಿ ರಾಷ್ಟ್ರದ ಅತ್ಯುನ್ನತ ಬಿರುದಾದ “ಭಾರತ ರತ್ನ’ ಪ್ರಶಸ್ತಿಯನ್ನು ಪ್ರದಾನ ಮಾಡಿತು.1960ರಲ್ಲಿ ಶತಾಯುಷಿಗಳಾದ ಸರ್ ಎಂ.ವಿ.ಯವರಿಗೆ ಅವರ ಶತಮಾನೋತ್ಸವ ಆಚರಿಸಲು ರಾಷ್ಟ್ರಮಟ್ಟದ ಸಮಿತಿ ರಚನೆಯಾಯಿತು. ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಅಂದಿನ ಪ್ರಧಾನಮಂತ್ರಿ ಪಂಡಿತ ಜವಾಹರಲಾಲ್ ನೆಹರು ಅವರನ್ನು ವಿನೀತ ಭಾವನೆಯಿಂದ ಭಾರತದ ಜನರ ಪರವಾಗಿ ಗೌರವವನ್ನು ಸಲ್ಲಿಸಿದರು ಮತ್ತು ಅವರು ಮಾಡಿದ ಅನೇಕ ಕೆಲಸಗಳ ಸ್ಮಾರಕಗಳೇ ಇವೆ ಎಂದು ಕೊಂಡಾಡಿದರು. ಮುಂದೆ 1962 ಎಪ್ರಿಲ್ 14ರಂದು ದೈವಾಧೀನರಾದರು.
ಪ್ರೊ| ಬಿ.ಜಿ.ಎಸ್. ಪ್ರಭು, ಮಣಿಪಾಲ
ನಿವೃತ್ತ ಪ್ರಾಂಶುಪಾಲ, ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು, ಪುತ್ತೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.