Ettinahole Drinking Water Project: ದಶಕದ ಬಳಿಕ ಎತ್ತಿನಹೊಳೆ ಯೋಜನೆ ಸಾಕಾರ
2014ರಲ್ಲಿ ಸಿಎಂ ಸಿದ್ದು ಶಂಕುಸ್ಥಾಪನೆ, 2024ರ ಸೆ.6ಕ್ಕೆ ಲೋಕಾರ್ಪಣೆ, ಬರಪೀಡಿತ 7 ಜಿಲ್ಲೆ ಜನರಿಗೆ ಕುಡಿಯುವ ನೀರು ಸಮಸ್ಯೆ ನೀಗುವ ಆಶಯ
Team Udayavani, Sep 6, 2024, 7:40 AM IST
ಎತ್ತಿನಹೊಳೆ ಪಂಪಿಂಗ್ ಪಾಯಿಂಟ್‌ನ ಚೆಕ್ ಡ್ಯಾಂನಿಂದ ಹೆಚ್ಚುವರಿ ನೀರು ಹೊರ ಹರಿಯುತ್ತಿದೆ.
ರಾಜ್ಯದ ಬಯಲುಸೀಮೆ 7 ಜಿಲ್ಲೆಗಳ ಲಕ್ಷಾಂತರ ಜನರಿಗೆ ಕುಡಿಯುವ ನೀರು ಪೂರೈಸುವ ಬೃಹತ್ ಎತ್ತಿನಹೊಳೆ ಯೋಜನೆಯ ಮೊದಲ ಹಂತವು ಇಂದು ಲೋಕಾರ್ಪಣೆಗೊಳ್ಳಲಿದೆ. ಬಹಳಷ್ಟು ಅಡ್ಡಿ, ಆತಂಕಗಳ ನಡುವೆಯೇ ರಾಜ್ಯ ಸರಕಾರದ ಈ ಮಹತ್ವಾಕಾಂಕ್ಷಿ ಯೋಜನೆಯು ಈಗ ಸಾಕಾರಗೊಂಡಿದೆ. ಈ ಹಿನ್ನೆಲೆಯಲ್ಲಿ ಎತ್ತಿನಹೊಳೆ ಯೋಜನೆಯ ಪೂರ್ಣ ಮಾಹಿತಿ ಇಲ್ಲಿದೆ.
ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆಯು ದಶಕದ ವಾದ – ವಿವಾದಗಳನ್ನು ದಾಟಿ ಇದೀಗ ನಿಜವಾಗುತ್ತಿದೆ. ಯೋಜನೆಯ ಮೊದಲ ಹಂತ ಇಂದು (ಶುಕ್ರವಾರ) ಲೋಕಾರ್ಪಣೆ ಯಾಗುತ್ತಿದ್ದು, ಪೂರ್ಣ ಪ್ರಮಾಣದ ಯೋಜನೆಯು 2017ಕ್ಕೆ ಮುಕ್ತಾಯವಾಗಲಿದೆ. ಈ ಮೂಲಕ ಕುಡಿಯುವ ನೀರಿಗೂ ಪರದಾಡುವ ಬಯಲು ಸೀಮೆಯ 7 ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಸಿಗಲಿದೆ.
ಪರಿಸರದ ನಾಶ, ತಾಂತ್ರಿಕ ಸಮಸ್ಯೆ ಸೇರಿ ವಿವಿಧ ಅಡ್ಡಿ – ಆತಂಕಗಳಿಂದ ಯೋಜನೆ ಜಾರಿ ಕಷ್ಟ ಎಂಬ ಪರಿಸ್ಥಿತಿ 5 ವರ್ಷಗಳ ಹಿಂದೆ ಇತ್ತು. ಆದರೆ 2019 ರಿಂದೀಚೆಗೆ ಹಸುರು ನ್ಯಾಯಮಂಡಳಿ ಯಲ್ಲಿ ಪರಿಸರ ಸಂಬಂಧ ವಿವಾದ ಬಗೆಹರಿದ ಅನಂತರ ಯೋಜನೆಯ ಕಾಮಗಾರಿ ವೇಗ ಪಡೆದುಕೊಂಡು ಎತ್ತಿನಹೊಳೆ ಯೋಜನೆ 3 ಹಂತಗಳ ಪೈಕಿ ಮೊದಲ ಹಂತದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, 8 ಒಡ್ಡು (ಚೆಕ್ ಡ್ಯಾಂ) ಗಳಲ್ಲಿ ಸಂಗ್ರಹವಾಗಿರುವ ನೀರೆತ್ತಲು ಸೆ.6ರಂದು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಸಕಲೇಶಪುರದ ಬಳಿ ನಡೆಯುವ ಬೃಹತ್ ಸಮಾರಂಭದಲ್ಲಿ ಚಾಲನೆ ನೀಡಲಿದ್ದಾರೆ. ಸಿದ್ದರಾಮಯ್ಯ ಅವರು 2014ರ ಮಾರ್ಚ್‌ನಲ್ಲಿ ಎತ್ತಿನಹೊಳೆ ಯೋಜನೆಗೆ ಚಿಕ್ಕಬಳ್ಳಾಪುರ ದಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು. ಇದೀಗ 10 ವರ್ಷಗಳ ನಂತರ ಸಕಲೇಶಪುರದಲ್ಲಿ ಯೋಜನೆಯ ಮೊದಲ ಹಂತವನ್ನು ಅವರೇ ಉದ್ಘಾಟಿಸುತ್ತಿರುವುದು ವಿಶೇಷ.
2010ರಲ್ಲೇ ಎತ್ತಿನಹೊಳೆ ಪ್ರಸ್ತಾವನೆ
ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ 80ರ ದಶಕದಲ್ಲೇ ನೇತ್ರಾವತಿ ತಿರುವು ಯೋಜನೆಯನ್ನು ಪ್ರಸ್ತಾವಿಸಿ, ಬರಪೀಡಿತ ಜಿಲ್ಲೆಗಳಿಗೆ ನೀರು ಹರಿಸಬೇಕು ಎಂದು ಪ್ರತಿಪಾದಿಸುತ್ತಾ ಬಂದಿ ದ್ದರು. 2010ರಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಎತ್ತಿನಹೊಳೆ ಯೋಜನೆಯ ಪ್ರಸ್ತಾವನೆಯನ್ನು ಸರಕಾರದ ಮುಂದಿಟ್ಟಿದ್ದರು.
2012ರಲ್ಲಿ ಡಿ.ವಿ.ಸದಾನಂದ ಗೌಡ ನೇತೃತ್ವದ ಸರಕಾರ 8,323 ಕೋಟಿ ರೂ. ನಿಗದಿಪಡಿಸಿ ಎತ್ತಿನ ಹೊಳೆ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿತ್ತು. 2014 ಫೆ.17ರಂದು ಸಿದ್ದರಾಮಯ್ಯ ನೇತೃತ್ವದ ಸರಕಾರ 12,912 ಕೋಟಿ ರೂ. ಪರಿಷ್ಕೃತ ಎತ್ತಿನಹೊಳೆ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ನೀಡಿ, ಅದೇ ವರ್ಷ ಮಾರ್ಚ್ 4ರಂದು ಚಿಕ್ಕಬಳ್ಳಾಪುರದಲ್ಲಿ ಬೃಹತ್ ಸಮಾರಂಭದಲ್ಲಿ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿತ್ತು. ಇದೀಗ ಯೋಜನಾ ವೆಚ್ಚ 23,252 ಕೋಟಿ ರೂ.ಗೆ ಏರಿದೆ.
ನೇತ್ರಾವತಿ ಬದಲು ಎತ್ತಿನಹೊಳೆ ಹೆಸರೇಕೆ?
ಪ್ರಾರಂಭದಲ್ಲಿ ನೇತ್ರಾವತಿ ತಿರುವು ಯೋಜನೆ ಅಥವಾ ಸಕಲೇಶಪುರ ತಾಲೂಕಿನಲ್ಲಿ ಮಳೆಗಾಲದ ಪ್ರವಾಹದ ನೀರು ತಿರುವು ಯೋಜನೆ ಎಂದಿತ್ತು. ಈ ಯೋಜನೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಅನುಮತಿ ದೊರೆಯುವುದು ಕಷ್ಟ ಎಂಬುದನ್ನುರಿತ ಸರಕಾರ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಎಂದು ಯೋಜನೆಯ ಹೆಸರು ಮಾರ್ಪಡಿಸಿತ್ತು. ಅನಂತರ ಕೇಂದ್ರದಲ್ಲಿ ಪರಿಸರ ಮತ್ತು ಅರಣ್ಯ ಸಚಿವರಾಗಿದ್ದ ವೀರಪ್ಪ ಮೊಯ್ಲಿ ಅವರಿಂದಾಗಿ ಯೋಜನೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಅನುಮೋದನೆ ದೊರೆಯಿತು.
ಇಷ್ಟಾದರೂ ಯೋಜನೆಗೆ ಪರಿಸರವಾದಿಗಳ ವಿರೋಧವಿತ್ತು. ಯೋಜನೆ ವಿರೋಧಿಸಿ 2017 ರಲ್ಲಿ ರಾಷ್ಟ್ರೀಯ ಹಸುರು ನ್ಯಾಯಮಂಡಳಿ (ಎನ್‌ಜಿಟಿ) ಚೆನ್ನೈ ಪೀಠದಲ್ಲಿ ಪರಿಸರವಾದಿಗಳು ಪ್ರಕರಣ ದಾಖಲಿಸಿ, ತಡೆಯಾಜ್ಞೆ ತರಲಾಯಿತು. ಇದರಿಂದ ಕಾಮಗಾರಿ ವಿಳಂಬವಾಯಿತು. 2019 ರಲ್ಲಿ ದಿಲ್ಲಿಯ ಪ್ರಧಾನ ಹಸುರು ನ್ಯಾಯಮಂಡಳಿಯು ಪರಿಸರವಾದಿಗಳ ಅರ್ಜಿ ವಜಾ ಮಾಡಿ, ಎತ್ತಿನಹೊಳೆ ಯೋಜನೆಗೆ ಹಸುರು ನಿಶಾನೆ ತೋರಿತು.
24.01 ಟಿಎಂಸಿ ನೀರೆತ್ತುವ ಗುರಿ
ಸಕಲೇಶಪುರ ತಾಲೂಕಿನಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ನೇತ್ರಾವತಿಯ ಉಪ ನದಿಗಳಾದ ಹೊಂಗಡಹಳ್ಳ, ಎತ್ತಿನಹೊಳೆ, ಕಾಡುಮನೆ ಹೊಳೆ, ಕೇರಿಹೊಳೆಗಳಲ್ಲಿ ಲಭ್ಯವಾಗುವ 34.26 ಟಿಎಂಸಿ ನೀರಿನ ಪೈಕಿ 24.01 ಟಿಎಂಸಿ ನೀರನ್ನು ಒಟ್ಟು 8 ಒಡ್ಡು (ಚೆಕ್‌ಡ್ಯಾಂ )ಗಳಲ್ಲಿ ಸಂಗ್ರಹಿಸಿ, ಮುಂಗಾರು ಮಳೆ ಅವಧಿಯ 139 ದಿನಗಳಲ್ಲಿ ಒಟ್ಟು 24.01 ಟಿಎಂಸಿ ನೀರನ್ನು ಸಮುದ್ರಮಟ್ಟದಿಂದ 940 ಅಡಿ ಎತ್ತರಕ್ಕೆ ಮೇಲೆತ್ತಿ ಹಾಸನ, ಚಿಕ್ಕಮಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಿಗೆ ಕುಡಿಯುವ ನೀರು ಮತ್ತು ಅಂತರ್ಜಲ ವೃದ್ಧಿಗೆ ಕೆರೆ ತುಂಬಿಸು ವುದು ಎತ್ತಿನಹೊಳೆ ಯೋಜನೆಯ ಉದ್ದೇಶ.
ಅಲ್ಲಲ್ಲಿ ನಾಲೆ ಕಾಮಗಾರಿ ಬಾಕಿ
ಎತ್ತಿನಹೊಳೆ 274 ಕಿ.ಮೀ. ನಾಲೆ ನಿರ್ಮಾಣ ಕಾಮಗಾರಿ ಶೇ.50ಕ್ಕಿಂತ ಪೂರ್ಣಗೊಂಡಿದೆ. ಭೂ ಸ್ವಾಧೀನ ವಿವಾದದ ಹಿನ್ನೆಲೆಯಲ್ಲಿ ಅಲ್ಲಲ್ಲಿ ಕಾಮಗಾರಿ ಸ್ಥಗಿತಗೊಂಡಿದೆ. ಬೇಲೂರು ತಾಲೂಕು ಐದಳ್ಳ ಕಾವಲಿನಲ್ಲಿ ಅರಣ್ಯ ಇಲಾಖೆಯ ಅಕ್ಷೇಪದಿಂದ 5 ಕಿ.ಮೀ. ನಾಲೆ ನಿರ್ಮಾಣ ಅರ್ಧಕ್ಕೆ ನಿಂತಿದೆ. ಅದು ಪೂರ್ಣಗೊಂಡರೆ ಬೇಲೂರು ತಾಲೂಕು ಮತ್ತು ಅರಸೀಕೆರೆ ತಾಲೂಕಿನ ಕೆರೆಗಳಿಗೆ ಎತ್ತಿನಹೊಳೆ ನೀರು ಹರಿಯಲಿದೆ.
ಬಯಲು ಸೀಮೆ ಜಿಲ್ಲೆಗಳಿಗೆ ಎತ್ತಿನಹೊಳೆ ನೀರು ಬರುವ ಬಗೆ!
ನೇತ್ರಾವತಿ ನದಿಯ ಉಪನದಿಗಳಾದ ಹೊಂಗಡಹಳ್ಳಕ್ಕೆ 1, ಎತ್ತಿನಹೊಳೆ – 4, ಕಾಡುಮನೆ ಹೊಳೆ – 2 ಮತ್ತು ಕೇರಿಹೊಳೆಗೆ 2 ಚೆಕ್‌ಡ್ಯಾಂ ಸೇರಿ ಒಟ್ಟು 8 ಚೆಕ್ ಡ್ಯಾಂ ನಿರ್ಮಾಣ ಪೂರ್ಣಗೊಂಡಿದೆ. ಈ ಚೆಕ್ ಡ್ಯಾಂನಿಂದ ನೀರೆತ್ತಿ ಪೈಪ್‌ಲೈನ್‌ಗಳ ಮೂಲಕ ಎತ್ತಿನಹೊಳೆ, ಹೆಬ್ಬನಹಳ್ಳ ಮತ್ತು ದೊಡ್ಡನಾಗರ ಪಂಪಿಂಗ್ ಸ್ಟೇಷನ್‌ಗಳಿಗೆ ನೀರು ಹರಿದು ಬರಲಿದೆ. ಈ 3 ಪಂಪಿಂಗ್ ಸ್ಟೇಷನ್‌ನಿಂದ ಹರುವನಹಳ್ಳಿ ವಿತರಣ ತೊಟ್ಟಿಗೆ ನೀರು ತುಂಬಲಿದೆ.
ಅಲ್ಲಿಂದ ಗುರುತ್ವಾರ್ಷಣೆಯಲ್ಲಿ 274 ಕಿ.ಮೀ. ತೆರೆದ ನಾಲೆಯಲ್ಲಿ ನೀರು ಸರಾಗವಾಗಿ ಹರಿದು ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಬೈರಗೊಂಡ್ಲು ಬಳಿ ಜಲಾಶಯಕ್ಕೆ ಸೇರಲಿದೆ. 5.7 ಟಿಎಂಸಿ ಸಂಗ್ರಹ ಸಾಮರ್ಥಯದ ಈ ಜಲಾಶಯದಿಂದ ನೀರನ್ನು ಕುಂದಣ ಎಂಬಲ್ಲಿ ಮತ್ತೆ 70 ರಿಂದ 80 ಮೀ. ಮೇಲೆಕ್ಕೆ ನೀರೆತ್ತಿ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಕೆರೆಗಳಿಗೆ ಪೈಪ್‌ಲೈನ್ ಮೂಲಕ ನೀರು ಹರಿಸಲಾಗುತ್ತದೆ.
ಯೋಜನೆಯ ಮೊದಲ ಹಂತ ಸಕಲೇಶಪುರ ತಾಲೂಕು ವ್ಯಾಪ್ತಿಗೆ ಸೇರುತ್ತದೆ. ಅಂದರೆ ಚೆಕ್‌ಡ್ಯಾಂಗಳ ನಿರ್ಮಾಣದಿಂದ, ಪಂಪಿಂಗ್ ಸ್ಟೇಷನ್ ಮತ್ತು ಹರುವನಹಳ್ಳಿ ಬಳಿ ಕೊನೆ ಹಂತದ ವಿತರಣ ತೊಟ್ಟಿಯವರೆಗಿನ ಕಾಮಗಾರಿ ಮುಗಿದಿದೆ. ನೀರೆತ್ತಲು ಒಟ್ಟು 274.65 ಮೆಗಾವ್ಯಾಟ್ ವಿದ್ಯುತ್ಛಕ್ತಿ ಅಗತ್ಯವಿದ್ದು, ಈಗಾಗಲೇ ದೊಡ್ಡನಾಗರ ಬಳಿ ವಿದ್ಯುತ್ ವಿತರಣ ಉಪ ಕೇಂದ್ರದ ನಿರ್ಮಾಣವೂ ಆಗಿದೆ. 1500 ಕ್ಯುಸೆಕ್‌ನ್ನು ಪ್ರಾಯೋಗಿಕವಾಗಿ ನೀರೆತ್ತಿ ವಿತರಣ ತೊಟ್ಟಿಯಿಂದ ನಾಲೆಗೆ ಹರಿಸಲಾಗುತ್ತಿದೆ.
ಇನ್ನು ಮೂರೇ ವರ್ಷದಲ್ಲಿ ಎತ್ತಿನಹೊಳೆ ಯೋಜನೆ ಪೂರ್ಣ
ಎತ್ತಿನಹೊಳೆ ಯೋಜನೆಯಿಂದ 7 ಜಿಲ್ಲೆಗಳ 527 ಕೆರೆಗಳಿಗೆ ಅವುಗಳ ಸಂಗ್ರಹ ಸಾಮರ್ಥಯದ ಶೇ.50 ರಷ್ಟು ನೀರು ತುಂಬಿಸಲು 9.95 ಟಿಎಂಸಿ ಬಳಕೆ ಹಾಗೂ ಈ 7 ಜಿಲ್ಲೆಗಳ ವ್ಯಾಪ್ತಿಯ 29 ತಾಲೂಕುಗಳ 38 ಪಟ್ಟಣ ಪ್ರದೇಶ ಹಾಗೂ 6,657 ಗ್ರಾಮಗಳ 75.59 ಲಕ್ಷ ಜನ – ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸುವ ಪೂರ್ಣ ಯೋಜನೆಯನ್ನು 2027ರ ಮಾರ್ಚ್ ವೇಳೆಗೆ ಪೂರ್ಣಗೊಳಿಸಲು ಸರಕಾರ ಗುರಿ ನಿಗದಿಪಡಿಸಿದೆ.
ಪ್ರಾಯೋಗಿಕವಾಗಿ ನೀರೆತ್ತಿ ಹರಿಯುತ್ತಿರುವ ನೀರಿನಿಂದ ಬೇಲೂರು ತಾಲೂಕಿನ ಹಳೆಬೀಡು ದ್ವಾರಸಮುದ್ರ ಕೆರೆ, ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿ ಕೆರೆಗಳು ಭರ್ತಿಯಾಗಿವೆ. ಮೊದಲ ಹಂತದಲ್ಲಿ ಹೆಚ್ಚುವರಿಯಾಗುವ ನೀರನ್ನು ವೇದಾವತಿ ಕೊಳ್ಳದ ಮೂಲಕ ಹಿರಿಯೂರಿನ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಹರಿಸಲಾಗುತ್ತಿದೆ. ಯೋಜನೆ ಮುಗಿದ ಬಳಿಕ ಪೂರ್ಣ ಪ್ರಮಾಣದ ನೀರು 7 ಜಿಲ್ಲೆಗಳಿಗೆ ಕಡೆಗೆ ತಿರುಗಿಸಲಾಗುತ್ತದೆ.
ಯೋಜನೆ ಮೈಲುಗಲ್ಲುಗಳು
2010: ಮೊದಲ ಬಾರಿಗೆ ರಾಜ್ಯ ಸರಕಾರದ ಮುಂದೆ ಎತ್ತಿನಹೊಳೆ ಯೋಜನೆ ಪ್ರಸ್ತಾವನೆ.
2012: ಆರಂಭದಲ್ಲಿ ಎತ್ತಿನಹೊಳೆಗೆ 8,323 ಕೋಟಿ ರೂ.ಗೆ ಅನುಮೋದನೆ ಒಪ್ಪಿಗೆ.
2014: ಯೋಜನೆ ವಿಳಂಬವಾದಂತೆ 2ನೇ ಬಾರಿಗೆ 12,912 ಕೋಟಿ ರೂ.ಗೆ ಪರಿಷ್ಕರಣೆ.
2022: 3ನೇ ಬಾರಿಗೆ ಎತ್ತಿನಹೊಳೆ ಯೋಜನೆ 23,252 ಕೋಟಿ ರೂ.ಗೆ ಪರಿಷ್ಕರಣೆ.
2024: ಎತ್ತಿನಹೊಳೆ ಯೋಜನೆ 1ನೇ ಹಂತ ಪೂರ್ಣ. 2027ಕ್ಕೆ ಯೋಜನೆ ಸಂಪೂರ್ಣ.
ಬಯಲು ಸೀಮೆ 7 ಜಿಲ್ಲೆಗಳಿಗೆ ಲಾಭ
ಹಾಸನ, ಚಿಕ್ಕಮಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ರಾಮನಗರ.
ಯಾವ ನದಿಗಳಿಂದ ನೀರು?
ನೇತ್ರಾವತಿಯ ಉಪ ನದಿಗಳಾದ ಹೊಂಗಡಹಳ್ಳ, ಎತ್ತಿನಹೊಳೆ, ಕಾಡುಮನೆ ಹೊಳೆ , ಕಾಡುಮನೆ ಹೊಳೆ, ಕೇರಿಹೊಳೆಯಿಂದ 940 ಅಡಿ ಎತ್ತರಕ್ಕೆ ನೀರೆತ್ತುವುದು. ನೀರೆತ್ತಲು 274.86 ಮೆಗಾವ್ಯಾಟ್ ವಿದ್ಯುತ್ ಬಳಕೆ.
-ಎನ್.ನಂಜುಂಡೇಗೌಡ, ಹಾಸನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!
Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ
“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ
Balipadyami: ಅನ್ನದಾತೆ ಆರಾಧನೆಯ ಬಲಿಪಾಡ್ಯಮಿ… ಇಂದು ಬಲಿಪಾಡ್ಯಮಿ, ಗೋಪೂಜೆ
Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.