Exception: ಇನ್ನು ಮುಂಬೈ ಪ್ರವೇಶಿಸುವ ಲಘು ವಾಹನಗಳಿಗೆ ಟೋಲ್ ಶುಲ್ಕ ಇರಲ್ಲ
ಕಾರು, ಜೀಪು, ಮಿನಿ ಗೂಡ್ಸ್ ವಾಹನಕ್ಕೆ ವಿನಾಯ್ತಿ: ಮಹಾ ಸರ್ಕಾರ ಘೋಷಣೆ
Team Udayavani, Oct 15, 2024, 7:25 AM IST
ಮುಂಬೈ: ಮಹಾರಾಷ್ಟ್ರ ಸರ್ಕಾರ ಮುಂಬೈಗೆ ಪ್ರವೇಶಿಸುವ ಎಲ್ಲಾ 5 ಟೋಲ್‌ಗಳಲ್ಲಿ ಲಘು ವಾಹನಗಳಿಗೆ ಟೋಲ್ ಶುಲ್ಕದಿಂದ ಸಂಪೂರ್ಣ ವಿನಾಯಿತಿ ಘೋಷಿಸಿದೆ. ಸೋಮವಾರ ಮಧ್ಯರಾತ್ರಿಯಿಂದಲೇ ಇದು ಜಾರಿಯಾಗಿದೆ.
ರಾಜ್ಯ ಸಂಪುಟ ಸಭೆಯ ಈ ನಿರ್ಧಾರವನ್ನು ಸಿಎಂ ಏಕನಾಥ ಶಿಂಧೆ ಘೋಷಿಸಿದ್ದು, ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಮಹತ್ವ ಪಡೆದಿದೆ. ದಹಿಸಾರ್, ಎಲ್‌ಬಿಎಸ್ ರಸ್ತೆ-ಮುಲುಂದ್, ಈಸ್ಟರ್ನ್ ಎಕ್ಸ್‌ಪ್ರೆಸ್ ಹೈವೇ-ಮುಲುಂದ್, ಐರೋಲಿ ಕ್ರೀಕ್ ಸೇತುವೆ ಹಾಗೂ ವಾಶಿಯಲ್ಲಿ ಈ ವಿನಾಯಿತಿ ಸಿಗಲಿದೆ. ಕಾರು(ಸೆಡಾನ್, ಹ್ಯಾಚ್‌ಬ್ಯಾಕ್ ಹಾಗೂ ಎಸ್‌ಯುವಿ), ಜೀಪು, ಮಿನಿ ಗೂಡ್ಸ್ ವಾಹನಗಳು ಲಘುವಾಹನಗಳ ಅಡಿಯಲ್ಲಿ ಬರುತ್ತವೆ. ಸರ್ಕಾರದ ಈ ಕ್ರಮದಿಂದ ಸರಾ ಸರಿ 2.8 ಲಕ್ಷ ಲಘು ವಾಹನಗಳಿಗೆ ಅನುಕೂಲ ಆಗಲಿದೆ ಎಂದು ಹೇಳಲಾಗಿದೆ.
ಕೌಶಲ ವಿವಿಗೆ ರತನ್ ಟಾಟಾ ಹೆಸರು:
ಇದೇ ವೇಳೆ, ಮಹಾರಾಷ್ಟ್ರದ ಕೌಶಲ ವಿಶ್ವವಿದ್ಯಾಲಯಕ್ಕೆ ಉದ್ಯಮಿ ರತನ್ ಟಾಟಾ ಹೆಸರನ್ನು ಮರುನಾಮಕರಣ ಮಾಡಲು ಸಚಿವ ಸಂಪುಟ ನಿರ್ಧರಿಸಿದೆ. ಇದೇ ವೇಳೆ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್ ಟಿಕೆಟ್ ದರದಲ್ಲಿ ಶೇ.10 ಏರಿಕೆ ಮಾಡಬೇಕೆಂಬ ಪ್ರಸ್ತಾವವನ್ನು ಹಿಂದಕ್ಕೆ ಪಡೆದಿದೆ.
ಎಷ್ಟು ಉಳಿತಾಯ?
– ನಿತ್ಯ ಕಚೇರಿಗೆ ಕಾರಲ್ಲಿ ಪ್ರಯಾಣಿಸುವ ವ್ಯಕ್ತಿ ದಿನಕ್ಕೆ 45 ರೂ. ಟೋಲ್ ಶುಲ್ಕ ಪಾವತಿಸುತ್ತಾನೆ. ವಾರದಲ್ಲಿ 5 ದಿನ ಸಂಚಾರ ಎಂದು ಲೆಕ್ಕ ಹಾಕಿದರೆ, ಅವನಿಗೆ ವಾರಕ್ಕೆ 225 ರೂ., ವರ್ಷಕ್ಕೆ 11,700 ರೂ. ಉಳಿತಾಯವಾಗುತ್ತದೆ.
– ಇತರೆ ಲಘು ಮೋಟಾರು ವಾಹನಗಳ ಚಾಲಕರಿಗೆ (75 ರೂ. ಟೋಲ್ ಶುಲ್ಕ) ವಾರಕ್ಕೆ 375 ರೂ. ಮತ್ತು ವರ್ಷಕ್ಕೆ 19,500 ರೂ. ಉಳಿತಾಯವಾಗುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.