Explainer: kachchatheevu-ತಮಿಳುನಾಡಿನ ಮೀನುಗಾರರಿಗೆ ಮಗ್ಗುಲ ಮುಳ್ಳಾದ ಕಚ್ಚತೀವು…
ಮೀನುಗಾರಿಕೆಯ ಹಕ್ಕಿನ ಕುರಿತಂತೆ ಒಂದಷ್ಟು ಗೊಂದಲಗಳನ್ನು ಹಾಗೆಯೇ ಉಳಿಸಿತ್ತು
Team Udayavani, Apr 2, 2024, 6:57 PM IST
ಸೋಮವಾರದಂದು ಪ್ರಧಾನಿ ನರೇಂದ್ರ ಮೋದಿಯವರು ಡಿಎಂಕೆ ಪಕ್ಷ ಕಚ್ಚತೀವು ದ್ವೀಪದ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ಸ್ಥಿರವಾದ ನಿಲುವು ಹೊಂದಿಲ್ಲ ಎಂದು ಆರೋಪಿಸಿದರು. ದ್ವೀಪಕ್ಕೆ ಸಂಬಂಧಿಸಿದಂತೆ ಲಭಿಸಿರುವ ಹೊಸ ಮಾಹಿತಿಗಳು ಡಿಎಂಕೆ ಪಕ್ಷದ ನೈಜ ಬಣ್ಣವನ್ನು ಬಯಲು ಮಾಡಿವೆ ಎಂದು ಮೋದಿ ಹೇಳಿದರು. ಇದಕ್ಕೆ ಮುನ್ನ, 1970ರ ದಶಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಕಚ್ಚತೀವು ದ್ವೀಪವನ್ನು ಶ್ರೀಲಂಕಾಗೆ ಹಸ್ತಾಂತರಿಸಿತು ಎಂದು ಮೋದಿ ನೇರವಾಗಿ ಆರೋಪಿಸಿದ್ದರು.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದಿದ್ದ ಪ್ರಧಾನ ಮಂತ್ರಿಯವರು, “ಮಾತನಾಡುವುದನ್ನು ಹೊರತುಪಡಿಸಿ, ಡಿಎಂಕೆ ಪಕ್ಷ ತಮಿಳುನಾಡಿನ ಹಿತರಕ್ಷಣೆ ನಡೆಸುವಂತಹ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಕಚ್ಚತೀವು ದ್ವೀಪಕ್ಕೆ ಸಂಬಂಧಿಸಿದಂತೆ ಲಭ್ಯವಾಗಿರುವ ನೂತನ ಮಾಹಿತಿಗಳು ಡಿಎಂಕೆಯ ಅಸ್ಥಿರ ಕ್ರಮಗಳ ಕುರಿತು ಬೆಳಕು ಚೆಲ್ಲಿವೆ” ಎಂದು ಬರೆದಿದ್ದರು.
ಮೋದಿಯವರು ಕಾಂಗ್ರೆಸ್ ಮತ್ತು ಡಿಎಂಕೆ ಪಕ್ಷಗಳೆರಡನ್ನೂ ತೀವ್ರವಾಗಿ ಖಂಡಿಸಿ, ಅವೆರಡೂ ‘ಕುಟುಂಬ ಆಧಾರಿತ ಗುಂಪುಗಳಷ್ಟೇ’ ಎಂದು ದೂಷಿಸಿದರು. ಕಾಂಗ್ರೆಸ್ ಮತ್ತು ಡಿಎಂಕೆ ಪಕ್ಷಗಳು ಕೇವಲ ತಮ್ಮ ಸ್ವಾರ್ಥ ಹಿತಾಸಕ್ತಿಗಳಿಗೆ ಮಾತ್ರವೇ ಬೆಲೆ ನೀಡುತ್ತಿದ್ದು, ಜನತೆಯ ಹಿತರಕ್ಷಣೆಯನ್ನು ಮೂಲೆಗುಂಪು ಮಾಡಿವೆ ಎಂದಿದ್ದಾರೆ. ಕಚ್ಚತೀವು ದ್ವೀಪಕ್ಕೆ ಸಂಬಂಧಿಸಿದಂತೆ ಯಾವುದೇ ಸ್ಥಿರವಾದ ಕ್ರಮ ಕೈಗೊಳ್ಳದಿರುವುದರಿಂದ, ತಮಿಳುನಾಡಿನ ಮೀನುಗಾರ ಪುರುಷರು ಮತ್ತು ಮಹಿಳೆಯರು ಸಾಕಷ್ಟು ತೊಂದರೆಗೊಳಗಾಗಿದ್ದಾರೆ ಎಂದು ಮೋದಿಯವರು ಆರೋಪಿಸಿದ್ದಾರೆ.
ತಮಿಳುನಾಡಿನ ಮೀನುಗಾರರು ಕಚ್ಚತೀವು ದ್ವೀಪವನ್ನು ಮೀನುಗಾರಿಕೆಗೆ ಬಳಸುತ್ತಾರಾದರೂ, ಕೆಲವೊಂದು ಬಾರಿ ದ್ವೀಪವನ್ನು ತಲುಪುವಾಗ ಶ್ರೀಲಂಕಾದ ಸಮುದ್ರ ಗಡಿ ಪ್ರವೇಶಿಸಿದ್ದಾರೆಂದು ಶ್ರೀಲಂಕಾದ ನೌಕಾಪಡೆಯಿಂದ ಬಂಧನಕ್ಕೆ ಒಳಗಾಗುವುದಿದೆ.
ಮಾಹಿತಿ ಹಕ್ಕಿನಡಿ ಕೇಳಲಾದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆಯಾಗಿ, 1974ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ಕಚ್ಚತೀವು ದ್ವೀಪದ ಮೇಲಿನ ಹಕ್ಕನ್ನು ಶ್ರೀಲಂಕಾಗೆ ಬಿಟ್ಟುಕೊಟ್ಟರು ಎಂಬ ಮಾಹಿತಿಯ ಆಧಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮಾತುಗಳನ್ನು ಆಡಿದ್ದಾರೆ. ಇಂದಿರಾ ಗಾಂಧಿಯವರು ಕೈಗೊಂಡ ನಿರ್ಧಾರ, ಭಾರತದ ಹಿತಾಸಕ್ತಿಗಳು ಮತ್ತು ಏಕತೆಯ ಮೇಲೆ ಪರಿಣಾಮ ಬೀರಿವೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಇಂದಿರಾ ಗಾಂಧಿಯವರ ಆಡಳಿತದ ಅವಧಿಯಲ್ಲಿ ಭಾರತ ಕಚ್ಚತೀವು ದ್ವೀಪವನ್ನು ಶ್ರೀಲಂಕಾದ ಆಡಳಿತಕ್ಕೆ ಒಪ್ಪಿಸಿದ್ದು ವ್ಯಾಪಕವಾಗಿ ತಿಳಿದಿರುವ ವಿಚಾರ. ಆದರೆ, ತಮಿಳುನಾಡು ರಾಜಕೀಯದಲ್ಲಿ ಹೆಚ್ಚಿನ ಪ್ರಚಾರ ನಡೆಸಲು ಪ್ರಯತ್ನಿಸುತ್ತಿರುವ ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ಕ್ರಮಗಳಿಂದಾಗಿ, ಕಚ್ಚತೀವು ದ್ವೀಪದ ವಿಚಾರ ಇತ್ತೀಚೆಗೆ ತಮಿಳುನಾಡಿನ ರಾಜಕೀಯ ವಾತಾವರಣದಲ್ಲಿ ಹೆಚ್ಚಿನ ಪ್ರಾಧಾನ್ಯತೆ, ವಿವಾದಾತ್ಮಕತೆ ಪಡೆದುಕೊಂಡಿದೆ.
ಕಚ್ಚತೀವು ಒಂದು ಸಣ್ಣದಾದ, ಮಾನವ ರಹಿತವಾದ, 285 ಎಕರೆ ವ್ಯಾಪ್ತಿ ಹೊಂದಿರುವ ದ್ವೀಪವಾಗಿದ್ದು, ಭಾರತ ಮತ್ತು ಶ್ರೀಲಂಕಾ ನಡುವಿನ ಪಾಕ್ ಜಲಸಂಧಿಯಲ್ಲಿದೆ. ಈ ದ್ವೀಪದ ಗರಿಷ್ಠ ಉದ್ದ 1.6 ಕಿಲೋಮೀಟರ್ ಆಗಿದ್ದು, ಇದರ ಅತ್ಯಂತ ಅಗಲವಾದ ಪ್ರದೇಶ 300 ಮೀಟರ್‌ಗಿಂತ ಕೊಂಚ ಹೆಚ್ಚಿದೆಯಷ್ಟೇ.
ಕಚ್ಚತೀವು ದ್ವೀಪ ರಾಮೇಶ್ವರಂನಿಂದ ಈಶಾನ್ಯ ದಿಕ್ಕಿನಲ್ಲಿ, ಭಾರತದ ಕಡಲ ತೀರದಿಂದ ಅಂದಾಜು 33 ಕಿಲೋಮೀಟರ್‌ಗಳಷ್ಟು ದೂರದಲ್ಲಿದೆ. ಶ್ರೀಲಂಕಾದ ಉತ್ತರದ ತುತ್ತ ತುದಿಯ ಜಾಫ್ನಾದಿಂದ 62 ಕಿಲೋಮೀಟರ್ ನೈಋತ್ಯಕ್ಕೂ, ಜನವಸತಿ ಹೊಂದಿರುವ, ಶ್ರೀಲಂಕಾದ ಡೆಲ್ಫ್ಟ್ ದ್ವೀಪದಿಂದ 24 ಕಿಲೋಮೀಟರ್ ದೂರದಲ್ಲಿಯೂ ಇದೆ.
ಕಚ್ಚತೀವು ದ್ವೀಪದಲ್ಲಿರುವ ಕೇವಲ ಒಂದು ಕಟ್ಟಡವೆಂದರೆ, 1900ರ ಆಸುಪಾಸಿನಲ್ಲಿ ನಿರ್ಮಿಸಿರುವ ಸೈಂಟ್ ಆ್ಯಂಟನಿಸ್ ಚರ್ಚ್. ಪ್ರತಿವರ್ಷವೂ ಈ ಚರ್ಚ್‌ನಲ್ಲಿ ನಡೆಯುವ ಹಬ್ಬದಲ್ಲಿ ಭಾರತ ಮತ್ತು ಶ್ರೀಲಂಕಾದ ಕ್ರೈಸ್ತ ಪಾದ್ರಿಗಳು ಸೇವೆ ಸಲ್ಲಿಸುತ್ತಾರೆ. ಎರಡು ದೇಶಗಳಿಂದಲೂ ಈ ಉತ್ಸವಕ್ಕಾಗಿ ಭಕ್ತರು ದ್ವೀಪಕ್ಕೆ ಆಗಮಿಸುತ್ತಾರೆ. ಉದಾಹರಣೆಗೆ, 2023ರಲ್ಲಿ, ಉತ್ಸವದಲ್ಲಿ ಪಾಲ್ಗೊಳ್ಳುವ ಸಲುವಾಗಿ 2,500 ಭಾರತೀಯ ಭಕ್ತಾದಿಗಳು ಕಚ್ಚತೀವು ದ್ವೀಪಕ್ಕೆ ಭೇಟಿ ನೀಡಿದ್ದರು.
ಕಚ್ಚತೀವು ದ್ವೀಪದಲ್ಲಿ ಕುಡಿಯುವ ನೀರಿನ ಮೂಲವಿಲ್ಲದ ಕಾರಣದಿಂದ, ಅಲ್ಲಿ ದೀರ್ಘಕಾಲ ಮಾನವರು ನೆಲೆಸಲು ಸಾಧ್ಯವಿಲ್ಲ. ಕಚ್ಚತೀವು ದ್ವೀಪ 14ನೇ ಶತಮಾನದಲ್ಲಿ ನಡೆದ ಒಂದು ಜ್ವಾಲಾಮುಖಿ ಸ್ಫೋಟದ ಪರಿಣಾಮವಾಗಿ ರೂಪುಗೊಂಡಿದ್ದು, ಭೂಮಿಯ ಸುದೀರ್ಘ ಇತಿಹಾಸಕ್ಕೆ ಹೋಲಿಸಿದರೆ, ಈ ದ್ವೀಪ ಅತ್ಯಂತ ಹೊಸದಾಗಿದೆ.
ಹಿಂದೆ ಮಧ್ಯಯುಗದ ಕಾಲದಲ್ಲಿ, ಶ್ರೀಲಂಕಾದ ಜಾಫ್ನಾ ಸಾಮ್ರಾಜ್ಯ ಕಚ್ಚತೀವು ದ್ವೀಪದ ಆಡಳಿತ ನಡೆಸುತ್ತಿತ್ತು. ಬಳಿಕ 1600ರ ಸಂದರ್ಭದಲ್ಲಿ, ರಾಮೇಶ್ವರಂನ 55 ಕಿಲೋಮೀಟರ್ ವಾಯುವ್ಯ ದಿಕ್ಕಿನಲ್ಲಿರುವ, ರಾಮನಾಡ್ ಜಮೀನ್ದಾರಿ ಎಂಬ ಊಳಿಗಮಾನ್ಯ ಆಡಳಿತಕ್ಕೆ ಒಳಪಟ್ಟಿತು.
ಮುಂದೆ ಬ್ರಿಟಿಷ್ ಆಡಳಿತದ ಕಾಲದಲ್ಲಿ, ಕಚ್ಚತೀವು ಮದ್ರಾಸ್ ಪ್ರೆಸಿಡೆನ್ಸಿಯ ಭಾಗವಾಯಿತು. ಆದರೆ, 1921ರಲ್ಲಿ, ಬ್ರಿಟಿಷ್ ಆಡಳಿತಕ್ಕೆ ಒಳಪಟ್ಟಿದ್ದ ಭಾರತ ಮತ್ತು ಶ್ರೀಲಂಕಾಗಳೆರಡೂ ತಮ್ಮ ಮೀನುಗಾರಿಕೆಯ ಗಡಿಯನ್ನು ನಿಗದಿಪಡಿಸುವ ಸಲುವಾಗಿ ಕಚ್ಚತೀವು ದ್ವೀಪದ ಮೇಲೆ ತಮ್ಮ ಹಕ್ಕು ಸ್ಥಾಪಿಸಲು ಪ್ರಯತ್ನಿಸಿದವು. ಒಂದು ಸಮೀಕ್ಷೆ ದ್ವೀಪವನ್ನು ಶ್ರೀಲಂಕಾದ ಭಾಗವಾಗಿ ಗುರುತಿಸಿದರೂ, ಭಾರತೀಯ ಬ್ರಿಟಿಷ್ ನಿಯೋಗ ಅದನ್ನು ಪ್ರಶ್ನಿಸಿ, ಕಚ್ಚತೀವು ದ್ವೀಪ ರಾಮನಾಡ್ ಸಾಮ್ರಾಜ್ಯದ ಭಾಗವಾಗಿತ್ತು ಎಂದು ವಾದಿಸಿತು. ಈ ಭಿನ್ನಾಭಿಪ್ರಾಯ 1974ರ ತನಕವೂ ಹಾಗೆಯೇ ಸಾಗಿಬಂತು.
1974ರಲ್ಲಿ, ಇಂದಿರಾ ಗಾಂಧಿ ಈ ನಿಟ್ಟಿನಲ್ಲಿ ಕಾರ್ಯಾಚರಿಸಿ, ಅಂತಿಮವಾಗಿ ಭಾರತ ಮತ್ತು ಶ್ರೀಲಂಕಾ ನಡುವಿನ ಗಡಿ ಗುರುತಿಸಲು ಕಾರಣವಾದರು.’ಇಂಡೋ – ಶ್ರೀಲಂಕನ್ ಸಾಗರ ಒಪ್ಪಂದ’ ಎಂಬ ಹೆಸರಿನ ಈ ಒಪ್ಪಂದದ ಮೂಲಕ, ಇಂದಿರಾ ಗಾಂಧಿಯವರು ಕಚ್ಚತೀವು ದ್ವೀಪವನ್ನು ಶ್ರೀಲಂಕಾಗೆ ಹಸ್ತಾಂತರಿಸಿದರು. ಈ ದ್ವೀಪ ಕಾರ್ಯತಂತ್ರದ ದೃಷ್ಟಿಯಿಂದ ಅಷ್ಟೊಂದು ಮಹತ್ವವುಳ್ಳ ದ್ವೀಪವಾಗಿರಲಿಲ್ಲ ಎನ್ನುವುದು ಇಂದಿರಾ ಗಾಂಧಿಯವರ ನಂಬಿಕೆಯಾಗಿತ್ತು. ಈ ದ್ವೀಪವನ್ನು ಹಸ್ತಾಂತರಿಸುವುದರಿಂದ ದಕ್ಷಿಣದ ನೆರೆಯ ರಾಷ್ಟ್ರ ಶ್ರೀಲಂಕಾದೊಡನೆ ಸಂಬಂಧ ವೃದ್ಧಿಸಬಹುದು ಎಂದು ಇಂದಿರಾ ಗಾಂಧಿ ಭಾವಿಸಿದ್ದರು.
ಅದರೊಡನೆ, ಈ ಒಪ್ಪಂದದ ಪ್ರಕಾರ, ಭಾರತೀಯ ಮೀನುಗಾರರು ಮೊದಲಿನ ಹಾಗೆಯೇ ಕಚ್ಚತೀವು ದ್ವೀಪಕ್ಕೆ ತೆರಳಲು ಅನುಮತಿ ನೀಡಿತ್ತು. ಆದರೆ, ಈ ಒಪ್ಪಂದದ ಮೂಲಕ ಮೀನುಗಾರಿಕೆಯ ಹಕ್ಕನ್ನು ಸಮರ್ಪಕವಾಗಿ ಪರಿಹರಿಸಲು ಸಾಧ್ಯವಾಗಿರಲಿಲ್ಲ. ಶ್ರೀಲಂಕಾ ಈ ಒಪ್ಪಂದದ ಅನುಸಾರವಾಗಿ, ಭಾರತೀಯ ಮೀನುಗಾರರು ವೀಸಾ ಇಲ್ಲದೆ ವಿಶ್ರಾಂತಿ ಪಡೆಯಲು, ಮೀನಿನ ಬಲೆಗಳನ್ನು ಒಣಗಿಸಲು, ಮತ್ತು ಕ್ಯಾಥೋಲಿಕ್ ಚರ್ಚ್‌ಗೆ ತೆರಳಲು ಮಾತ್ರವೇ ಕಚ್ಚತೀವು ದ್ವೀಪಕ್ಕೆ ತೆರಳಬಹುದು ಎಂದು ಅನುಮತಿ ನೀಡಿತ್ತು.
1976ರಲ್ಲಿ, ಭಾರತದಲ್ಲಿನ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇನ್ನೊಂದು ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದರ ಅನುಸಾರವಾಗಿ, ಭಾರತ ಮತ್ತು ಶ್ರೀಲಂಕಾಗಳು ಪರಸ್ಪರರ ವಿಶೇಷ ಆರ್ಥಿಕ ವಲಯದಲ್ಲಿ (ಎಕ್ಸ್‌ಕ್ಲೂಸಿವ್ ಎಕನಾಮಿಕ್ ಜೋ಼ನ್ – SEZ) ಇನ್ನೊಂದು ರಾಷ್ಟ್ರ ಮೀನುಗಾರಿಕೆ ನಡೆಸದಂತೆ ನಿರ್ಬಂಧಿಸಿತು. ಕಚ್ಚತೀವು ದ್ವೀಪ ಎರಡೂ ರಾಷ್ಟ್ರಗಳ ಇಇಜೆಡ್ ಗಡಿಗೆ ಸರಿಯಾಗಿ ಹೊಂದಿಕೊಂಡಿದ್ದು, ಮೀನುಗಾರಿಕೆಯ ಹಕ್ಕಿನ ಕುರಿತಂತೆ ಒಂದಷ್ಟು ಗೊಂದಲಗಳನ್ನು ಹಾಗೆಯೇ ಉಳಿಸಿತ್ತು.
1983ರಿಂದ 2009ರ ತನಕ, ಶ್ರೀಲಂಕಾದಲ್ಲಿ ನಡೆಯುತ್ತಿದ್ದ ತೀವ್ರ ಅಂತರ್ಯುದ್ಧದ ಕಾರಣದಿಂದಾಗಿ ಈ ಗಡಿ ಉದ್ವಿಗ್ನತೆಗೆ ಹೆಚ್ಚಿನ ಗಮನ ಲಭಿಸಿರಲಿಲ್ಲ.
ಈ ಅವಧಿಯಲ್ಲಿ, ಶ್ರೀಲಂಕಾದ ನೌಕಾಪಡೆಯ ಹೆಚ್ಚಿನ ಗಮನ ಜಾಫ್ನಾದಲ್ಲಿದ್ದ ಎಲ್‌ಟಿಟಿಇ ನೆಲೆಗಳಿಗೆ ಪೂರೈಕೆ ಸರಪಳಿಯನ್ನು ತಪ್ಪಿಸುವ ಕಡೆಗೇ ಕೇಂದ್ರಿತವಾಗಿತ್ತು. ಇದೇ ವೇಳೆಗೆ, ಭಾರತೀಯ ಮೀನುಗಾರರು ಹಲವು ಬಾರಿ ಶ್ರೀಲಂಕಾದ ಸಮುದ್ರಕ್ಕೆ ಪ್ರವೇಶಿಸುತ್ತಿದ್ದರು. ಭಾರತದ ದೊಡ್ಡ ಮೀನುಗಾರಿಕೆಯ ಬೋಟುಗಳು ಹೆಚ್ಚಿನ ಪ್ರಮಾಣದಲ್ಲಿ ಮೀನುಗಾರಿಕೆ ನಡೆಸುವ ಜೊತೆಗೆ, ಶ್ರೀಲಂಕಾದ ಮೀನುಗಾರರ ಉಪಕರಣಗಳು ಮತ್ತು ಸಣ್ಣ ನೌಕೆಗಳಿಗೆ ಹಾನಿ ಉಂಟುಮಾಡುತ್ತಿದ್ದವು.
2009ರಲ್ಲಿ ಎಲ್‌ಟಿಟಿಇ ಜೊತೆಗಿನ ಯುದ್ಧ ಕೊನೆಗೊಂಡ ಬಳಿಕ, ಪರಿಸ್ಥಿತಿ ಸಾಕಷ್ಟು ಬದಲಾವಣೆ ಹೊಂದಿತು. ಕೊಲಂಬೋ ತನ್ನ ನೌಕಾಪಡೆಯ ಗಸ್ತನ್ನು ಇನ್ನಷ್ಟು ಕಟ್ಟುನಿಟ್ಟಾಗಿಸಿ, ಭಾರತೀಯ ಮೀನುಗಾರರ ಮೇಲೆ ಹೆಚ್ಚಿನ ಕಣ್ಣಿಡಲು ಆರಂಭಿಸಿತು. ಭಾರತೀಯ ಕಡಲ ತೀರದಲ್ಲಿ ಮೀನಿನ ಪ್ರಮಾಣ ಕಡಿಮೆಯಾಗುತ್ತಿದ್ದ ಕಾರಣದಿಂದ, ಭಾರತೀಯ ಮೀನುಗಾರರು ತಮ್ಮ ಹಿಂದಿನ ಅಭ್ಯಾಸದಂತೆ ಆಗಾಗ ಶ್ರೀಲಂಕಾದ ಸಮುದ್ರದೊಳಗೆ ಪ್ರವೇಶಿಸುತ್ತಿದ್ದರು. ಆದರೆ, ಈಗ ಹಿಂದಿನಂತಲ್ಲದೆ, ಭಾರತೀಯ ಮೀನುಗಾರರು ಈ ಅಕ್ರಮ ಪ್ರವೇಶದ ಪರಿಣಾಮವನ್ನು ಎದುರಿಸಬೇಕಾಗಿ ಬಂದಿತ್ತು.
ಇಂದಿಗೂ ಶ್ರೀಲಂಕಾ ನೌಕಾಪಡೆ ಭಾರತೀಯ ಮೀನುಗಾರರನ್ನು ನಿರಂತರವಾಗಿ ತನ್ನ ವಶಕ್ಕೆ ತೆಗೆದುಕೊಳ್ಳುತ್ತಿದ್ದು, ಬಂಧನದ ಅವಧಿಯಲ್ಲಿ ಅವರನ್ನು ಅತ್ಯಂತ ಕಠಿಣವಾಗಿ ಶಿಕ್ಷಿಸುವ ಮತ್ತು ಭಾರತೀಯ ಮೀನುಗಾರರ ಸಾವುನೋವುಗಳಾಗುವ ಆರೋಪಗಳೂ ಕೇಳಿ ಬಂದಿವೆ. ಇಂತಹ ಘಟನೆಗಳು ಸಂಭವಿಸಿದಾಗೆಲ್ಲ ಕಚ್ಚತೀವು ದ್ವೀಪವನ್ನು ಭಾರತಕ್ಕೆ ಮರಳಿಸಬೇಕು ಎನ್ನುವ ಕೂಗುಗಳು ಹೆಚ್ಚಾಗತೊಡಗುತ್ತವೆ.
ಭಾರತ ಸರ್ಕಾರ ತಮಿಳುನಾಡು ರಾಜ್ಯ ಸರ್ಕಾರ ಮತ್ತು ವಿಧಾನಸಭೆಯ ಅಭಿಪ್ರಾಯವನ್ನೇ ಪಡೆದುಕೊಳ್ಳದೆ ಕಚ್ಚತೀವು ದ್ವೀಪವನ್ನು ಶ್ರೀಲಂಕಾದ ಕೈಗೆ ಒಪ್ಪಿಸಿದೆ ಎಂಬುದು ತಮಿಳುನಾಡಿನ ವಾದವಾಗಿದೆ. ಆರಂಭದಿಂದಲೂ, ಇಂದಿರಾ ಗಾಂಧಿಯವರ ಈ ನಿರ್ಧಾರದ ಕುರಿತಂತೆ ಸಾಕಷ್ಟು ಗಂಭೀರ ಪ್ರಮಾಣದ ವಿರೋಧಗಳು ಎದುರಾಗಿದ್ದವು. ವಿರೋಧ ಅಭಿಪ್ರಾಯ ಉಳ್ಳವರು ಈ ಹಿಂದೆ ಕಚ್ಚತೀವು ದ್ವೀಪ ರಾಮನಾಡ್ ಜಮೀನ್ದಾರರ ವಶದಲ್ಲಿತ್ತು ಮತ್ತು ಭಾರತೀಯ ಮೀನುಗಾರರು ಅಲ್ಲಿ ಹಕ್ಕು ಹೊಂದಿದ್ದರು ಎಂಬ ವಾದ ಮಂಡಿಸುತ್ತಿದ್ದರು.
2008ರಲ್ಲಿ, ಎಐಎಡಿಎಂಕೆ ಮುಖ್ಯಸ್ಥೆ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಈ ವಿಚಾರದಲ್ಲಿ ಕಾನೂನು ಕ್ರಮಕ್ಕೆ ಮುಂದಾದರು. ಅವರು ಭಾರತದ ಸಂವಿಧಾನದಲ್ಲಿ ಬದಲಾವಣೆ ಆಗದ ಹೊರತು ಕಚ್ಚತೀವು ದ್ವೀಪವನ್ನು ಇನ್ನೊಂದು ದೇಶದ ವಶಕ್ಕೆ ನೀಡಲು ಸಾಧ್ಯವಿಲ್ಲ ಎಂದು ವಾದಿಸಿದ್ದರು. 1974ರ ಒಪ್ಪಂದ ಭಾರತೀಯ ಮೀನುಗಾರರ ಸಾಂಪ್ರದಾಯಿಕ ಮೀನುಗಾರಿಕಾ ಅಭ್ಯಾಸಗಳು ಮತ್ತು ಅವರ ಜೀವನ ಶೈಲಿಯ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದಿದ್ದರು.
2011ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡ ಬಳಿಕ, ಅವರು ತಮಿಳುನಾಡು ವಿಧಾನಸಭೆಯ ಮೂಲಕ ಒಂದು ಪರಿಹಾರವನ್ನು ಮಂಡಿಸಿದರು. ಆ ಬಳಿಕ, 2012ರಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ, ಶ್ರೀಲಂಕಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಮೀನುಗಾರರು ಸೆರೆಯಾಗುತ್ತಿರುವುದರಿಂದ, ಈ ಅರ್ಜಿಯನ್ನು ಕ್ಷಿಪ್ರವಾಗಿ ಪರಿಹರಿಸುವಂತೆ ಮನವಿ ಮಾಡಿದರು.
ಕಳೆದ ವರ್ಷ, ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ಭಾರತ ಭೇಟಿಗೂ ಮುನ್ನ, ತಮಿಳುನಾಡಿನ ಮುಖ್ಯಮಂತ್ರಿ ಮತ್ತು ಡಿಎಂಕೆ ಪಕ್ಷದ ಮುಖ್ಯಸ್ಥರಾದ ಎಂಕೆ ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದರು. ಆ ಪತ್ರದಲ್ಲಿ, ಕಚ್ಚತೀವು ದ್ವೀಪದ ವಿವಾದ ಸೇರಿದಂತೆ, ಇತರ ಪ್ರಮುಖ ವಿಚಾರಗಳನ್ನು ಶ್ರೀಲಂಕಾ ಪ್ರಧಾನಿಯೊಡನೆ ಚರ್ಚಿಸುವಂತೆ ಅವರು ಆಗ್ರಹಿಸಿದ್ದರು.
ಆ ಪತ್ರದಲ್ಲಿ, ಸ್ಟಾಲಿನ್ ಅವರು ತಮಿಳುನಾಡಿನ ಅನುಮತಿ ಪಡೆಯದೆ, ಕೇಂದ್ರ ಸರ್ಕಾರ ಕಚ್ಚತೀವು ದ್ವೀಪವನ್ನು ಶ್ರೀಲಂಕಾಗೆ ನೀಡಿರುವುದು ತಮಿಳುನಾಡಿನ ಮೀನುಗಾರರ ಹಕ್ಕನ್ನು ಕಿತ್ತುಕೊಂಡಿದ್ದು, ಅವರ ಜೀವನ ನಿರ್ವಹಣೆಯ ಮೇಲೂ ಗಂಭೀರ ಪರಿಣಾಮ ಬೀರಿದೆ ಎಂದಿದ್ದರು. ಈ ವಾದವನ್ನೇ 1974ರಲ್ಲೂ ತಮಿಳುನಾಡು ಸರ್ಕಾರ ಮಂಡಿಸಿತ್ತು.
2006ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಎಂ ಕರುಣಾನಿಧಿಯವರು ಪ್ರಧಾನಿಯವರನ್ನು ಸಂಪರ್ಕಿಸಿ, ಕಚ್ಚತೀವು ದ್ವೀಪವನ್ನು ಮರಳಿ ಪಡೆಯುವಂತೆ ಆಗ್ರಹಿಸಿದ್ದನ್ನು ಸ್ಟಾಲಿನ್ ಮರಳಿ ಮೋದಿಯವರಿಗೆ ನೆನಪಿಸಿದ್ದಾರೆ. ಈ ಪ್ರಯತ್ನದ ಹಿಂದೆ ತಮಿಳುನಾಡಿನ ಮೀನುಗಾರರ ಪರಿಸ್ಥಿತಿಯನ್ನು ಉತ್ತಮಗೊಳಿಸಿ, ಅವರು ಶಾಂತಿಯುತವಾಗಿ ಜೀವನ ನಡೆಸುವಂತೆ ಮಾಡುವ ಉದ್ದೇಶವಿದೆ ಎಂದು ಸ್ಟಾಲಿನ್ ವಿವರಿಸಿದ್ದಾರೆ.
ಬಿಜೆಪಿ, ಅದರಲ್ಲೂ ಪಕ್ಷದ ತಮಿಳುನಾಡು ಘಟಕವಂತೂ ಕಚ್ಚತೀವು ದ್ವೀಪವನ್ನು ಮರಳಿ ಭಾರತಕ್ಕೆ ಸೇರಿಸಿಕೊಳ್ಳುವಂತೆ ಬಲವಾಗಿ ಆಗ್ರಹಿಸುತ್ತಾ ಬಂದಿದೆ. ಆದರೆ, ಪ್ರಧಾನಿ ಮೋದಿಯವರ ಆಡಳಿತ ತಮಿಳುನಾಡಿನ ರಾಜಕಾರಣಿಗಳ ಬೇಡಿಕೆಯನ್ನು ಕೇಳಿಸಿಕೊಳ್ಳುತ್ತಾ ಬಂದಿದ್ದರೂ, ಈ ಕುರಿತು ಹೆಚ್ಚಿನ ಕ್ರಮವನ್ನೇನೂ ತೆಗೆದುಕೊಂಡಿಲ್ಲ. ವಾಸ್ತವಿಕವಾಗಿ ಗಮನಿಸಿದರೆ, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೆಚ್ಚೇನೂ ಮಾಡಲು ಸಾಧ್ಯವೂ ಇಲ್ಲ.
2014ರಲ್ಲಿ, ಸುಪ್ರೀಂ ಕೋರ್ಟ್‌ನಲ್ಲಿ ಮಾತನಾಡಿದ ಅಟಾರ್ನಿ ಜನರಲ್ ಮುಕುಲ್ ರೋಹಟಗಿಯವರು, “ಕಚ್ಚತೀವು ದ್ವೀಪವನ್ನು 1974ರ ಒಪ್ಪಂದದ ಅನುಸಾರವಾಗಿ ಶ್ರೀಲಂಕಾಗೆ ಹಸ್ತಾಂತರಿಸಲಾಗಿದೆ. ಈಗ ಸಂಘರ್ಷ ರಹಿತವಾಗಿ ಕಚ್ಚತೀವು ದ್ವೀಪವನ್ನು ಭಾರತ ಮರಳಿ ಪಡೆಯಲು ಸಾಧ್ಯವಿಲ್ಲ. ಕಚ್ಚತೀವು ದ್ವೀಪವನ್ನು ಮರಳಿ ಭಾರತದ ವಶಕ್ಕೆ ಪಡೆದುಕೊಳ್ಳಬೇಕಾದರೆ, ಯುದ್ಧ ಮಾಡುವುದು ಅನಿವಾರ್ಯವಾಗಲಿದೆ” ಎಂದು ವಿವರಿಸಿದ್ದರು.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Border Gavaskar Trophy: ಕಾಂಗರೂ ಚಾಲೆಂಜ್ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ
Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…
Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್: 21 ವರ್ಷದ ಹಿಂದೆ ನಡೆದಿದ್ದೇನು?
ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Border Gavaskar Trophy: ಕಾಂಗರೂ ಚಾಲೆಂಜ್ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.