Explainer: ಭಾರತ – ಯುಎಇ ಸಂಬಂಧ ವೃದ್ಧಿ: ಕಾರ್ಯತಂತ್ರದ ಸಹಯೋಗಕ್ಕೆ ದಶಕ
ಸಹಿ ಹಾಕಲಾದ ಯೋಜನೆಗಳು ಗ್ರೀನ್ ಹೈಡ್ರೋಜನ್ ಯೋಜನೆಗಳಿಗೆ ಪೂರಕವಾಗಲಿವೆ
Team Udayavani, Feb 15, 2024, 12:40 PM IST
ಭಾರತದ ವಿದೇಶಾಂಗ ಕಾರ್ಯದರ್ಶಿ, ವಿನಯ್ ಕ್ವಾತ್ರ ಅವರು ಯುಎಇ ಜೊತೆಗಿನ ಸಂಬಂಧವನ್ನು ಆರ್ಥಿಕ ಚಟುವಟಿಕೆಗಳ ಎಲ್ಲಾ ವಲಯಗಳನ್ನೂ ಒಳಗೊಂಡಿರುವ, ಭಾರತದ ಅತ್ಯಂತ ಸಮಗ್ರವಾದ ಮತ್ತು ವಿಸ್ತಾರವಾದ ಸಹಯೋಗ ಎಂದು ಬಣ್ಣಿಸಿದ್ದಾರೆ.
ತಜ್ಞರು ಈ ಸಂಬಂಧದಲ್ಲಿನ ವೃದ್ಧಿಯನ್ನು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ ವಿದೇಶಾಂಗ ನೀತಿಗೆ ಲಭಿಸಿದ ಯಶಸ್ಸು ಎಂದು ಪರಿಗಣಿಸಿದ್ದಾರೆ. ಗಲ್ಫ್ ರಾಷ್ಟ್ರವಾದ ಯುಎಇಗೆ ಪ್ರಧಾನಿ ನರೇಂದ್ರ ಮೋದಿಯವರು ಮೊದಲ ಬಾರಿಗೆ 2015ರಲ್ಲಿ ಭೇಟಿ ಕೊಟ್ಟ ಬಳಿಕ, ಈ ಸಂಬಂದಲ್ಲಿನ ವೃದ್ಧಿ ಆರಂಭಗೊಂಡಿತು. ಪ್ರಧಾನಿಯವರ ಇತ್ತೀಚಿನ ಏಳನೇ ಯುಎಇ ಭೇಟಿ ಇದರ ಮಹತ್ವವನ್ನು ಬಣ್ಣಿಸುತ್ತಿದ್ದು, ಮೋದಿಯವರು ತನ್ನ ಅಧಿಕಾರಾವಧಿಯಲ್ಲಿ ಅತಿಹೆಚ್ಚು ಬಾರಿ ಭೇಟಿ ನೀಡಿದ ದೇಶ ಯುಎಇ ಆಗಿದೆ.
ಇತ್ತೀಚಿನ ಭೇಟಿಯಲ್ಲಿ ಪ್ರಧಾನಿ ಮೋದಿ ಮತ್ತು ಯುಎಇ ಅಧ್ಯಕ್ಷರಾದ ಮೊಹಮದ್ ಬಿನ್ ಜಾ಼ಯೆದ್ ಅಲ್ ನಹ್ಯಾನ್ ಅವರು ಸಾಗಾಣಿಕೆ, ಶಕ್ತಿ ಸಂಪನ್ಮೂಲಗಳ ವ್ಯಾಪಾರ, ಇಂಧನ ಭದ್ರತೆಯಿಂದ ಆರ್ಥಿಕ ತಂತ್ರಜ್ಞಾನ ಸಹಯೋಗದ ತನಕ ಹತ್ತು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದರು. ಇಬ್ಬರು ನಾಯಕರ ನಡುವೆ ನಡೆದಿರುವ ಒಂದು ಹೂಡಿಕೆ ಒಪ್ಪಂದ ಭಾರತದಲ್ಲಿ ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿರುವ ಯುಎಇಯ ಹೂಡಿಕೆಯನ್ನು ಇನ್ನಷ್ಟು ಉತ್ತೇಜಿಸುವ ನಿರೀಕ್ಷೆಗಳಿವೆ. ಯುಎಇ ಪ್ರಸ್ತುತ ಭಾರತದಲ್ಲಿ ನಾಲ್ಕನೇ ಅತಿದೊಡ್ಡ ಹೂಡಿಕೆದಾರ ರಾಷ್ಟ್ರವಾಗಿದೆ.
ಭಾರತದ ಪ್ರಧಾನಿಯವರ ಮಾಜಿ ಸಲಹೆಗಾರರಾದ ಸುಧೀಂದ್ರ ಕುಲಕರ್ಣಿಯವರು ಕಳೆದ ಒಂದು ದಶಕದಲ್ಲಿ ನವದೆಹಲಿ ಮತ್ತು ಅಬು ಧಾಬಿಯ ನಡುವಿನ ಸಂಬಂಧ ವೃದ್ಧಿಗೆ ಕಾರಣವಾಗಿರುವ ಐದು ಪ್ರಮುಖ ಅಂಶಗಳನ್ನು ಗುರುತಿಸಿದ್ದಾರೆ. ಈ ಸಂಬಂಧದಲ್ಲಿ ಪ್ರಮುಖ ಅಂಶವೆಂದರೆ ಯುಎಇಯಲ್ಲಿರುವ 35 ಲಕ್ಷ ಭಾರತೀಯರು. ಅಲ್ಲಿನ ಅನಿವಾಸಿ ಭಾರತೀಯರು ಯುಎಇ ಜನಸಂಖ್ಯೆಯ 40%ರಷ್ಟಿದ್ದು, ಯುಎಇಯ ಅತಿದೊಡ್ಡ ವಲಸಿಗ ಸಮುದಾಯವಾಗಿದ್ದಾರೆ. ಈ ಸಮುದಾಯದಲ್ಲಿ ಬಹುಪಾಲು ಕಾರ್ಮಿಕ ವರ್ಗದವರೇ ಆಗಿದ್ದರೂ, ಇದರಲ್ಲಿ ಯುಎಇಯ ಅತ್ಯಂತ ಶ್ರೀಮಂತ ನಿವಾಸಿಗಳೂ ಇದ್ದು, ಅವರು ಸಂಪತ್ತಿನ ದೃಷ್ಟಿಯಲ್ಲಿ ಎಮಿರಾತಿ ಪ್ರಜೆಗಳಿಗೆ ಸನಿಹದಲ್ಲಿದ್ದಾರೆ.
ಯುಎಇಯ ಭಾರತೀಯ ಸಮುದಾಯ 2022ರಲ್ಲಿ ಭಾರತಕ್ಕೆ 20 ಬಿಲಿಯನ್ ಡಾಲರ್ ಹಣ ರವಾನೆ ನಡೆಸಿದ್ದು, ಅವರ ಆರ್ಥಿಕ ಪ್ರಭಾವವನ್ನು ಪ್ರದರ್ಶಿಸಿದ್ದಾರೆ. ಭಾರತೀಯರು ಕಾನೂನು ಪಾಲಿಸುವ ನಾಗರಿಕರು, ಸ್ಥಳೀಯ ಕಾನೂನನ್ನು ಗೌರವಿಸುವವರು ಎಂಬ ಕಾರಣದಿಂದ ಯುಎಇಯಲ್ಲಿ ಭಾರತೀಯರಿಗೆ ಹೆಚ್ಚಿನ ಆದ್ಯತೆಯೂ ಇದೆ.
ಭಾರತ ಯುಎಇ ನಡುವೆ ಹೆಚ್ಚುತ್ತಿರುವ ಭಯೋತ್ಪಾದನಾ ವಿರೋಧಿ ಸಹಕಾರಕ್ಕೆ ಭಯೋತ್ಪಾದನೆಗೆ ಸಂಬಂಧಿಸಿದಂತೆ ಎರಡೂ ರಾಷ್ಟ್ರಗಳಿಗಿರುವ ಸಮಾನ ಕಳವಳಗಳು ಕಾರಣವಾಗಿದೆ. ಎರಡೂ ರಾಷ್ಟ್ರಗಳು, ಅದರಲ್ಲೂ ಯುಎಇ ಮತ್ತು ಅದರ ನೆರೆಯ ತೈಲ ಸಂಪದ್ಭರಿತ ಪಶ್ಚಿಮ ಏಷ್ಯಾದ ರಾಷ್ಟ್ರಗಳು ಆಂತರಿಕ ಭದ್ರತೆಯನ್ನು ಅಸ್ಥಿರಗೊಳಿಸುವ ಮೂಲಭೂತವಾದಿ ಸಿದ್ಧಾಂತಗಳನ್ನು ವಿರೋಧಿಸುತ್ತವೆ.
ಈ ಮೊದಲು, ಯುಎಇಯ ನೀತಿ ಭಾರತ ಮತ್ತು ಪಾಕಿಸ್ತಾನಗಳನ್ನು ಒಂದೇ ಗುಂಪಿನಲ್ಲಿ ನೋಡುತ್ತಿತ್ತು. ಆದರೆ, ಈಗ ಯುಎಇಯ ನೀತಿಗಳು ಬದಲಾಗಿದ್ದು, ಭಾರತದೊಡನೆ ಉತ್ತಮ ದ್ವಿಪಕ್ಷೀಯ ಸ್ನೇಹ ಸಂಬಂಧ ಹೊಂದಲು ಬಯಸುತ್ತಿದೆ. ಯುಎಇ ಭಾರತವನ್ನು ಬೆಳೆಯುತ್ತಿರುವ ಏಷ್ಯಾದ ಶಕ್ತಿ ಎಂದು ಪರಿಗಣಿಸಿದ್ದು, ಭಾರತವನ್ನು ಒಂದು ಉತ್ತಮ ಮಾರುಕಟ್ಟೆ ಎಂದು ಅರ್ಥ ಮಾಡಿಕೊಂಡಿದೆ. ಆದ್ದರಿಂದ ಭಾರತದೊಡನೆ ಉತ್ತಮ ದ್ವಿಪಕ್ಷೀಯ ಸಂಬಂಧ ಸಾಧಿಸಲು ಪ್ರಯತ್ನ ನಡೆಸುತ್ತಿದೆ.
ಯುಎಇ ಅಂತರ್ ಧರ್ಮೀಯ ಸಂವಹನ ಮತ್ತು ಸಹಬಾಳ್ವೆಯಲ್ಲಿ ನಂಬಿಕೆ ಇಟ್ಟಿದೆ. ನಾಲ್ಕು ವರ್ಷಗಳ ಹಿಂದೆ, ಯುಎಇ ಅಧ್ಯಕ್ಷ ಮೊಹಮದ್ ಬಿನ್ ಜಾ಼ಯೆದ್ ಅಲ್ ನಹ್ಯಾನ್ ಅವರು ಪೋಪ್ ಫ್ರಾನ್ಸಿಸ್ ಅವರಿಗೆ ಐತಿಹಾಸಿಕ ಆಹ್ವಾನ ನೀಡಿದ್ದರು. ಅದು ಅರಬ್ ರಾಷ್ಟ್ರಗಳಿಗೆ ಪೋಪ್ ಅವರ ಪ್ರಥಮ ಭೇಟಿ ಎಂದು ಗುರುತಿಸಲ್ಪಟ್ಟಿತ್ತು.
ಅಬು ಧಾಬಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಬೋಚಸನ್‌ವಾಸಿ ಶ್ರೀ ಅಕ್ಷರ ಪುರುಷೋತ್ತಮ್ ಸ್ವಾಮಿನಾರಾಯಣ ಸಂಸ್ಥೆಯ (ಬಿಎಪಿಎಸ್) ಹಿಂದೂ ದೇವಾಲಯವನ್ನು ಉದ್ಘಾಟಿಸಿರುವುದು ಯುಎಇಯ ಧಾರ್ಮಿಕ ಸಹಿಷ್ಣುತೆಗೆ ಕೈಗನ್ನಡಿಯಾಗಿದೆ. ಸ್ವಾಮಿನಾರಾಯಣ ದೇವಾಲಯ ಮಧ್ಯ ಪೂರ್ವ ಪ್ರದೇಶದ ಪ್ರಥಮ ಸಾಂಪ್ರದಾಯಿಕ ಹಿಂದೂ ದೇವಾಲಯವಾಗಿದ್ದು, ಭಾರತ ಮತ್ತು ಯುಎಇಗಳ ನಡುವಿನ ಸಾಂಸ್ಕೃತಿಕ ಕೊಡು ಕೊಳ್ಳುವಿಕೆಗಳನ್ನೂ ವಿಸ್ತರಿಸುತ್ತಿದೆ.
ಭಾರತದ ಅಭಿವೃದ್ಧಿಗೆ ಮುಖ್ಯವಾಗಲಿದೆ ಯುಎಇ ಹೂಡಿಕೆ
2022ರಲ್ಲಿ ಭಾರತ ಮತ್ತು ಯುಎಇ ನಡುವೆ ಕಾಂಪ್ರಹೆನ್ಸಿವ್ ಎಕಾನಾಮಿಕ್ ಪಾರ್ಟ್‌ನರ್ಶಿಪ್ ಅಗ್ರಿಮೆಂಟ್ (ಸಿಇಪಿಎ) ಸಹಿ ಹಾಕಿದ ಬಳಿಕ, ದ್ವಿಪಕ್ಷೀಯ ವ್ಯಾಪಾರ ಸಾಕಷ್ಟು ಅಭಿವೃದ್ಧಿ ಹೊಂದಿದ್ದು, 85 ಬಿಲಿಯನ್ ಡಾಲರ್ ತಲುಪಿದೆ. ವ್ಯಾಪಾರದಲ್ಲಿನ ಈ ಹೆಚ್ಚಳ, ಯುಎಇಯನ್ನು ಭಾರತದ ಮೂರನೇ ಪ್ರಮುಖ ವ್ಯಾಪಾರ ಸಹಯೋಗಿಯಾಗಿಸಿದೆ.
ಯುಎಇಯ ಶ್ರೀಮಂತ ರಾಜ ಪ್ರಭುತ್ವ ಭಾರತದ ಮೂಲಭೂತ ಸೌಕರ್ಯಗಳ ವಲಯಕ್ಕೆ ದೀರ್ಘಾವಧಿಯಲ್ಲಿ ಬಹುತೇಕ 75 ಬಿಲಿಯನ್ ಡಾಲರ್‌ಗಳಷ್ಟು ಮೊತ್ತವನ್ನು ಒದಗಿಸಲು ನಿರ್ಧರಿಸಿದೆ. ಈ ಹೂಡಿಕೆ, ಭಾರತದ ಗುರಿಯಾದ ಸಮಗ್ರ ಮತ್ತು ಪರಿಣಾಮಕಾರಿ ಸಂಪರ್ಕ ಯೋಜನೆಗಳಿಗೆ ನೆರವಾಗಲಿದ್ದು, ಆ ಮೂಲಕ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು ಎಂಬ ಭಾರತದ ಗುರಿಗೆ ನೆರವಾಗಲಿದೆ.
ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡೋ ಪೆಸಿಫಿಕ್ ಸ್ಟಡೀಸ್ (ಕೆಐಐಪಿಎಸ್) ಎಂಬ ಭಾರತೀಯ ನೀತಿಯ ಸಂಸ್ಥೆಯಲ್ಲಿ ಸಂಶೋಧಕರಾಗಿರುವ ನಿರಂಜನ್ ಮಾರ್ಜಾನಿ ಅವರು ಭಾರತದಲ್ಲಿ ಹೆಚ್ಚುತ್ತಿರುವ ಎಮಿರಾತಿ ಹೂಡಿಕೆಯನ್ನು ವಿವರಿಸಿದ್ದಾರೆ. ಎರಡೂ ರಾಷ್ಟ್ರಗಳು ತಮ್ಮ ಸಾಂಪ್ರದಾಯಿಕವಾದ ಯುಎಇಯಿಂದ ಇಂಧನ ಆಮದಿನ ಹೊರತಾಗಿಯೂ, ವಿವಿಧ ರೀತಿಯಲ್ಲಿ ತಮ್ಮ ಸಹಯೋಗವನ್ನು ವಿಸ್ತರಿಸುವ ಗುರಿ ಹೊಂದಿರುವುದರಿಂದ, ಇಂತಹ ಹೂಡಿಕೆಗಳು ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತಿವೆ ಎಂದಿದ್ದಾರೆ.
ಯುಎಇ ಭಾರತದ ಅತಿದೊಡ್ಡ ಕಚ್ಚಾ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲದ (ಎಲ್ಎನ್‌ಜಿ) ಪೂರೈಕೆದಾರ ರಾಷ್ಟ್ರಗಳಲ್ಲಿ ಒಂದಾಗಿದೆ. ನಿರಂಜನ್ ಅವರ ಪ್ರಕಾರ, ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರತ – ಯುಎಇ ನಡುವಿನ ಜಂಟಿ ಯೋಜನೆಗಳು ಎರಡು ರಾಷ್ಟ್ರಗಳ ನಡುವಿನ ಸಹಯೋಗಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಇದಕ್ಕೆ ಪೂರಕವಾಗಿ, ಮೋದಿಯವರ ಭೇಟಿಯ ಸಂದರ್ಭದಲ್ಲಿ ಸಹಿ ಹಾಕಲಾದ ಯೋಜನೆಗಳು ಗ್ರೀನ್ ಹೈಡ್ರೋಜನ್ ಯೋಜನೆಗಳಿಗೆ ಪೂರಕವಾಗಲಿವೆ ಎನ್ನಲಾಗಿದೆ.
ಹವಾಮಾನ ಬದಲಾವಣೆಯನ್ನು ಗುರುತಿಸಿರುವುದು ಸಹ ಎರಡು ರಾಷ್ಟ್ರಗಳ ನಡುವಿನ ಜಂಟಿ ಪ್ರಯತ್ನಕ್ಕೆ ಸಾಕ್ಷಿಯಾಗಿದೆ. ಭಾರತ ಮತ್ತು ಯುಎಇಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಸಿರು ಇಂಧನ ಬಳಕೆಯ ಕುರಿತು ಹೆಚ್ಚು ಮಹತ್ವದ ಪಾತ್ರ ನಿರ್ವಹಿಸುವ ನಿರೀಕ್ಷೆಗಳಿವೆ.
ಸಮಾನವಾದ ಅಂತಾರಾಷ್ಟ್ರೀಯ ದೃಷ್ಟಿಕೋನಗಳ ಕಾರಣದಿಂದಾಗಿ ಭಾರತ ಮತ್ತು ಯುಎಇಗಳು ಸಮಗ್ರ ಕಾರ್ಯತಂತ್ರದ ಸಹಯೋಗ ಹೊಂದಲು ಸಾಧ್ಯವಾಗಿದೆ. ಯುಎಇಯೂ ಭಾರತದ ರೀತಿಯಲ್ಲೇ ಸ್ವಾಯತ್ತವಾದ, ಮತ್ತು ಹೊಂದಿಕೊಳ್ಳುವ ವಿದೇಶಾಂಗ ನೀತಿಯನ್ನು ಅಳವಡಿಸಿಕೊಂಡಿದೆ.
ಪ್ರಸ್ತುತ ಭಾರತ ಮತ್ತು ಯುಎಇಗಳು ಬ್ರಿಕ್ಸ್ ಒಕ್ಕೂಟ ಮತ್ತು ಐ2ಯು2 ಸದಸ್ಯರಾಗಿವೆ. ಯುಎಇ ಜೊತೆಗೆ ಭಾರತದ ಸಂಬಂಧ ಅತ್ಯುತ್ತಮವಾಗಿರುವುದರಿಂದ ಮತ್ತು ಅಬ್ರಹಾಂ ಒಪ್ಪಂದಗಳ ಮೂಲಕ ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧ ಸಹಜ ಸ್ಥಿತಿಗೆ ಬಂದಿರುವುದರಿಂದ, ಹಿಂದಿನ ಕಾಲಕ್ಕೆ ಹೋಲಿಸಿದರೆ ಭಾರತಕ್ಕೆ ಮಧ್ಯ ಪೂರ್ವದೊಡನೆ ರಾಜತಾಂತ್ರಿಕ ಸಂವಹನ ನಡೆಸುವುದನ್ನು ಸರಳಗೊಳಿಸಿದೆ.
ಐ2ಯು2 ಎನ್ನುವುದು ಇಂಡಿಯಾ, ಇಸ್ರೇಲ್, ಯುನೈಟೆಡ್ ಸ್ಟೇಟ್ಸ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಎಂಬುದರ ಹೃಸ್ವರೂಪವಾಗಿದ್ದು, ಜಂಟಿ ಸಹಯೋಗವನ್ನು ವಿಸ್ತರಿಸುವ ಸಲುವಾಗಿ ರೂಪಿತವಾಗಿರುವ ಆರ್ಥಿಕ ವೇದಿಕೆಯಾಗಿದೆ. ಇದು ಮೂಲಭೂತ ವ್ಯವಸ್ಥೆ, ತಂತ್ರಜ್ಞಾನ, ಮತ್ತು ಸಾಗಾಣಿಕಾ ವಲಯಕ್ಕೆ ಗಮನ ಹರಿಸಿ, ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ಮತ್ತು ಸದಸ್ಯ ರಾಷ್ಟ್ರಗಳಲ್ಲಿ ಸಮೃದ್ಧಿ ಸಾಧಿಸಿ, ಅವುಗಳ ಸಂಪನ್ಮೂಲ ಮತ್ತು ಸಾಮರ್ಥ್ಯಗಳನ್ನು ಬಳಸಿಕೊಳ್ಳುವ ಗುರಿ ಹೊಂದಿದೆ.
ನಿರಂಜನ್ ಮಾರ್ಜಾನಿ ಅವರು ಇರಾನ್ ಮತ್ತು ಸೌದಿ ಅರೇಬಿಯಾಗಳ ನಡುವೆ ಚೀನಾ ಪ್ರೇರಿತ ವೈಷಮ್ಯವೂ ಸಹ ಮಧ್ಯ ಪೂರ್ವ ಪ್ರದೇಶದಲ್ಲಿ ಭಾರತದ ರಾಜತಾಂತ್ರಿಕ ಪ್ರಯತ್ನಗಳಿಗೆ ನೆರವಾಗುತ್ತದೆ. ಭಾರತದ ಇಂಧನ ಭದ್ರತೆಗೆ ಮಧ್ಯ ಪೂರ್ವ ಪ್ರದೇಶ ಅತ್ಯಂತ ಮಹತ್ವದ್ದಾಗಿದ್ದು, ವಿದೇಶೀ ಹೂಡಿಕೆಗಳು, ರವಾನೆ ರಶೀದಿಗಳು ಅಲ್ಲಿನ ಆರ್ಥಿಕತೆಯ ಸ್ತಂಭಗಳಾಗಿವೆ.
*ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.