Watch: ಫ್ಲೈಯಿಂಗ್ ಎಲಿಫೆಂಟ್ಸ್ : ವನ್ಯಜೀವಿ ಸಂರಕ್ಷಣೆಯ ಪರಿಣಾಮಕಾರಿ ಕಿರುಚಿತ್ರ
ಇನ್ನೊಂದು-ಪೀಳಿಗೆ ಅವನತಿಯಾಗದಿರಲಿ ಎಂಬುದು. ಈ ಎಲ್ಲ ಹೊಣೆಗಾರಿಕೆ ನಮ್ಮದೇ.
Team Udayavani, Aug 12, 2021, 5:39 PM IST
ವನ್ಯಜೀವಿಗಳ ಬದುಕಿಗೆ ಬಂದಿರುವ ಆಪತ್ತು ಒಂದಲ್ಲ, ಎರಡಲ್ಲ. ವಿಪರ್ಯಾಸವೆಂದರೆ, ಇವೆಲ್ಲವನ್ನೂ ಮನುಷ್ಯರಾದ ನಾವೇ ನಿರ್ಮಿಸಿರುವುದು ಎಂದರೆ ದೋಷವೇನೂ ಇಲ್ಲ. ಇಂದು ವಿಶ್ವ ಆನೆಗಳ ದಿನ. ಈ ಸಂದರ್ಭದಲ್ಲಿ ಆನೆಗಳ ಮೂಲಕ ವನ್ಯಜೀವಿಗಳ ಸಂಕಟವನ್ನು ಅರಿಯೋಣ. ’ ಫ್ಲೈಯಿಂಗ್ ಎಲಿಫೆಂಟ್ಸ್ ’ ಕಿರುಚಿತ್ರ ನಮ್ಮ ತಿಳಿವಿಗೆ ಸಹಾಯ ಮಾಡಬಲ್ಲದು. ಫ್ಲೈಯಿಂಗ್ ಎಲಿಫೆಂಟ್ ಕಿರುಚಿತ್ರ 2020ರ ವೈಲ್ಡ್ ಸ್ಕ್ರೀನ್ ಫಿಲ್ಮ್ ಫೆಸ್ಟಿವಲ್ ಗೆ ಆಯ್ಕೆಯಾಗಿತ್ತು. ಈ ಕಿರು ಚಿತ್ರ ನಿರ್ಮಾಣ ಮಾಡಲು ಎರಡು ವರ್ಷ ಕಾಲಾವಧಿ ತೆಗೆದುಕೊಳ್ಳಲಾಗಿತ್ತು.
*ಅರವಿಂದ ನಾವಡ
ವೈಲ್ಡ್ ಲೈಫ್ ಫಿಲ್ಮ್ ಮೇಕರ್ ಪ್ರಕಾಶ್ ಮಠದ ನಿರ್ದೇಶಿಸಿ, ಚಿತ್ರೀಕರಿಸಿರುವ ‘ ಫ್ಲೈಯಿಂಗ್ ಎಲಿಫೆಂಟ್ಸ್ ’ ವಿಶ್ವ ಆನೆಗಳ ದಿನವಾದ ಇಂದಿಗೆ [ಆಗಸ್ಟ್ 12) ಒಳ್ಳೆಯ ಕಿರುಚಿತ್ರ. ಅರೂವರೆ ನಿಮಿಷಗಳ ಕಿರುಚಿತ್ರದಲ್ಲಿ ಹಾರುವ ಆನೆಗಳು ಮಾತನಾಡುತ್ತವೆ.
ಎಷ್ಟು ವಿಚಿತ್ರವಲ್ಲವೇ? ಆನೆಗಳು ಹಾರುವುದು ಎಂದರೆ ಒಂದು ವಿಚಿತ್ರ. ಇನ್ನು ಅವುಗಳು ಮಾತನಾಡುತ್ತವೆ, ವಿನಂತಿ ಮಾಡುತ್ತವೆ ಎಂದರೆ ಮತ್ತೂ ವಿಚಿತ್ರ. ಆದರೆ ಪ್ರಕಾಶ್ ಅವರ ಕಿರುಚಿತ್ರದಲ್ಲಿ ಇವೆರಡೂ ನಿಜವಾಗುತ್ತವೆ.
ಕಿರುಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ
ಚಿತ್ರದ ಹೆಸರಿಗೆ ನೀಡಿರುವ ಅಡಿ ಟಿಪ್ಪಣಿಯೆಂದರೆ ’ತಾಯಿಯ ಭರವಸೆ’. ಅದರಂತೆಯೇ ಕಿರುಚಿತ್ರ ಆರಂಭವಾಗುವುದು ತಾಯಿಯೊಬ್ಬಳು ತನ್ನ ಪೂರ್ವಜರ ಬದುಕನ್ನು ಕಟ್ಟಿಕೊಡುತ್ತಾ, ತನ್ನ ಮಕ್ಕಳ [ಭವಿಷ್ಯದ ಪೀಳಿಗೆಗಳ] ಬದುಕಿನ ಬಗೆಯನ್ನು ಕಣ್ಣೆದುರು ಗ್ರಹಿಸಿಕೊಂಡು, ಕಲ್ಪಿಸಿಕೊಂಡು ಆತಂಕಗೊಳ್ಳುತ್ತಾಳೆ.
ಭೂತ, ವರ್ತಮಾನ ಹಾಗೂ ಭವಿಷ್ಯ-ಮೂರೂ ಕಾಲಕ್ಕೆ ಧ್ವನಿಸುವ ಚಿತ್ರವಿದು ಎನ್ನುವುದು ವಿಶೇಷ. ಕಥೆ ಆರಂಭವಾಗುವುದೇ ಆನೆಗಳು ಹಾರುತ್ತಿವೆ ಎಂಬ ಕಲ್ಪನೆಯಲ್ಲಿ. ತಾಯಿ ಆನೆಯೊಂದು ತನ್ನ ಪೂರ್ವಜರ ಬದುಕನ್ನು ವಿವರಿಸುತ್ತಾಳೆ. ಒಂದಾನೊಂದು ಕಾಲದಲ್ಲಿ ನಮ್ಮ ಪೂರ್ವಜರು ಹಾರುತ್ತಿದ್ದರಂತೆ. ಒಂದು ದಿನ ಆಲದ ಮರದ ಮೇಲೆ ಸಂತೋಷದಿಂದ ನಮ್ಮದೇ ಖುಷಿ, ಗೌಜಿಯಲ್ಲಿದ್ದಾಗ ಏನಾಯಿತು? ಹೇಗೆ ಭೂಮಿಗೆ ಬಂದೆ ಎಂದು ವಿವರಿಸುತ್ತಾಳೆ ತಾಯಿ. ಕಥೆಯ ಪೂರ್ವಾರ್ಧದ ಪ್ರಕಾರ ತಪೋಭಂಗವಾದ ಮುನಿ ಶಾಪ ಕೊಟ್ಟು ಆನೆಯ ರೆಕ್ಕೆಯನ್ನು ಕಿತ್ತುಕೊಂಡನಂತೆ.
ಆ ಬಳಿಕ ವರ್ತಮಾನಕ್ಕೆ ಕಥೆಯನ್ನು ಅನ್ವಯಿಸಿ, ಇಂದು ನಡೆಯುತ್ತಿರುವ ಆನೆಗಳ ಹತ್ಯೆ, ದಂತಗಳಿಗಾಗಿ ಆನೆಗಳ ಹನನ, ನಗರೀಕರಣ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಕಾಡು ಸೇರಿದಂತೆ ಎಲ್ಲವನ್ನೂ ಆಪೋಶನ ತೆಗೆದುಕೊಳ್ಳುತ್ತಿರುವ ನಮ್ಮ [ಮನುಷ್ಯರ] ಹಪಾಹಪಿತನ, ಆದರಿಂದ ವನ್ಯಜೀವಿಗಳಿಗಾಗುತ್ತಿರುವ ಸಂಕಷ್ಟ, ದಂತ ಕಳ್ಳಸಾಗಣೆ-ಎಲ್ಲವನ್ನೂ ಸ್ಥೂಲವಾಗಿ ವಿವರಿಸಲಾಗುತ್ತದೆ. ಭವಿಷ್ಯಕ್ಕೆ ಸಂಬಂಧಿಸಿ, ನಿಮ್ಮ [ಮಕ್ಕಳ] ಬದುಕು ಹೇಗೋ? ಇಂಥ ಪರಿಸ್ಥಿತಿಯಲ್ಲಿ ಹೇಗೆ ಬದುಕುತ್ತೀರೋ? ಎಂಬ ಆತಂಕವನ್ನು ತಾಯಿ ವ್ಯಕ್ತಪಡಿಸುತ್ತಾಳೆ. ಕಥೆಯ ಒಂದು ಸಾಲು ’ನಮ್ಮ ದಂತ ಕೊಡುತ್ತೇವೆ, ನಮ್ಮ ರೆಕ್ಕೆಗಳು ಕೊಟ್ಟು ಬಿಡಿ’ ಎನ್ನುವ ವಾಕ್ಯ ವನ್ಯಜೀವಿಗಳು ಬಯಸುವ ಸ್ವಾತಂತ್ರ್ಯದ ಬಯಕೆಯನ್ನು ವ್ಯಕ್ತಪಡಿಸುತ್ತದೆ. ದಂತಗಳಿಗಿಂತ ನಮಗೂ ನಮ್ಮ ಸ್ವಾತಂತ್ರ್ಯ ಮುಖ್ಯ ಎಂಬ ಒಳಧ್ವನಿ ಇಡೀ ಚಿತ್ರದ ಆಶಯವನ್ನು ಹಿಡಿದುಕೊಡುತ್ತದೆ.
ಇಡೀ ಚಿತ್ರ ಒಂದು ವಿಷಾದ ಕಾವ್ಯದ ವಾಚನವೆನ್ನುವಂತೆ ಸಾಗುತ್ತದೆ. ಕಪ್ಪುಬಿಳುಪಿನಲ್ಲಿ ಚಿತ್ರವನ್ನು ಕಡೆದುಕೊಟ್ಟಿರುವುದು ವಿಷಾದದ ತೀವ್ರತೆಯನ್ನು ಹೆಚ್ಚಿಸಿ ನಮ್ಮೊಳಗೆ ಸಣ್ಣದೊಂದು ಯೋಚನೆಯ ಹಣತೆಯನ್ನು ಹಚ್ಚುತ್ತದೆ. ಅದೇ ಸಂದರ್ಭದಲ್ಲಿ ನಮ್ಮ [ಮನುಷ್ಯರ] ಸ್ವಾರ್ಥತನದ ಅರಿವು ಮಾಡಿಕೊಡುತ್ತದೆ.
ನಿರೂಪಣೆಗೆ ಬಳಸಿರುವ ಭಾಷೆಯೂ ಬೆಟ್ಟ ಕುರುಬ ಬುಡಕಟ್ಟು ಜನಾಂಗದ ಭಾಷೆಯನ್ನು ಬಳಸಿರುವುದು ಕಾಡುಜೀವಿಗಳ [ಕಾಡಿನಲ್ಲಿ ವಾಸಿಸುವ ವಿವಿಧ ಬುಡಕಟ್ಟು ಜನಾಂಗಗಳು] ಧ್ವನಿಯಾಗಿಯೂ ಧ್ವನಿತವಾಗುತ್ತದೆ. ಅಂದರೆ ಕೇವಲ ಆನೆ ಸೇರಿದಂತೆ ವನ್ಯಜೀವಿಗಳಷ್ಟೇ ಅಲ್ಲ, ಕಾಡಿನಲ್ಲಿರುವ ವಿವಿಧ ಬುಡಕಟ್ಟು ಜನಾಂಗಗಳೂ ನಮಗೆ ನಮ್ಮ ಬದುಕನ್ನು ಕೊಡಿ ಎನ್ನುವಂತಿದೆ ಚಿತ್ರದ ನಿರೂಪಣೆ. ‘ಮತ್ತೆ ನೀನು ಹಾರುವಂತಾಗಲಿ’ ಎಂಬ ಆಶಾವಾದದೊಂದಿಗೆ ಅಂತ್ಯಗೊಳ್ಳುವ ಕಥೆ ತಾಯಿಯ ಭರವಸೆಯನ್ನು ಈಡೇರಿಸುವ ಹೊಣೆಗಾರಿಕೆಯನ್ನು ನಮಗೆ [ಮನುಷ್ಯರಿಗೆ] ವಹಿಸುತ್ತದೆ. ಇಲ್ಲಿ ಹಾರಲಿ ಎಂಬ ಆಶಯದಡಿ ಎರಡು ಧ್ವನಿಗಳಿವೆ. ಒಂದು ರೆಕ್ಕೆ ಪಡೆದು ಸ್ವತಂತ್ರವಾಗುವುದು. ಇದರರ್ಥ ಬಂಧಮುಕ್ತಗೊಳ್ಳುವುದು. ಇನ್ನೊಂದು-ಪೀಳಿಗೆ ಅವನತಿಯಾಗದಿರಲಿ ಎಂಬುದು. ಈ ಎಲ್ಲ ಹೊಣೆಗಾರಿಕೆ ನಮ್ಮದೇ.
75 ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿರುವ ಹೊತ್ತಿನಲ್ಲಿ ನಾವು ವನ್ಯಜೀವಿಗಳ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದ್ದೇವೆ. 1947 ರಲ್ಲಿ ಬ್ರಿಟಿಷರಿಂದ ನಮಗೆ ಮುಕ್ತಿ ಸಿಕ್ಕಿತು. ಸ್ವಾತಂತ್ರ್ಯ ಪಡೆದ ನಾವು ಅಭಿವೃದ್ಧಿಯ ಹೆಸರಿನಲ್ಲಿ ವನ್ಯಜೀವಿಗಳ ಸ್ವಾತಂತ್ರ್ಯವನ್ನು ಹರಣ ಮಾಡಿ ಸಂಭ್ರಮಿಸುತ್ತಿದ್ದೇವೆ. ನಮ್ಮ ಹಿರಿಯರು ಹೇಗೆ ಬ್ರಿಟಿಷರೊಂದಿಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದರೋ ಹಾಗೆಯೇ ಆನೆಯಂಥ ವನ್ಯಜೀವಿಗಳು ತಮ್ಮ ಬದುಕಿಗಾಗಿ ನಮ್ಮೊಂದಿಗೆ ಹೋರಾಡುವ ಪರಿಸ್ಥಿತಿಯನ್ನು ನಿರ್ಮಿಸಿದ್ದೇವೆ. ಕಾಡಿನ ನಾಶ ಮತ್ತು ಆನೆ-ಮನುಷ್ಯರ ನಡುವಿನ ಸಂಘರ್ಷ ಆನೆಗಳ ಸಂತತಿ ಕ್ಷೀಣಿಸಲು ಕಾರಣವಾಗುತ್ತಿದೆ. ಕಥೆಯ ಆರಂಭದಲ್ಲಿ ಬರುವಂತೆ ಮುನಿಯು ಶಾಪ ಕೊಟ್ಟು ರೆಕ್ಕೆಯನ್ನು ಕಿತ್ತುಕೊಂಡ. ಹಾಗೆಯೇ ನಾವೀಗ ಅವುಗಳ ರೆಕ್ಕೆಯನ್ನು ಕಿತ್ತುಕೊಂಡಿದ್ದೇವೆ. ಕಥೆಯ ಮುನಿ ನಮ್ಮ ಪ್ರತಿನಿಧಿಯಂತೆ ತೋರುತ್ತಾನೆ [ತನ್ನ ತಪೋಭಂಗಕ್ಕೆ ರೆಕ್ಕೆಯನ್ನೇ ಕಿತ್ತುಕೊಂಡು ಅಸಹಾಯಕಗೊಳಿಸುವ ಮನಸ್ಥಿತಿಯಂತೆಯೇ ನಾವೂ ನಮ್ಮ ಬದುಕಿಗಾಗಿ ಆವುಗಳ ರೆಕ್ಕೆಯನ್ನು ಕಿತ್ತುಕೊಂಡಿದ್ದೇವೆ].
ಅವುಗಳ ಅಸಹಾಯಕತೆ ಆಕ್ರೋಶವಾಗಿ ಮಾರ್ಪಡುತ್ತಿರುವ ಹೊತ್ತಿದು. ಅದಕ್ಕೇ ಪ್ರತಿ ವರ್ಷ ನಾಡಿನಲ್ಲಿ ವನ್ಯಜೀವಿಗಳು ನಗರಗಳಿಗೆ ನುಗ್ಗುತ್ತಿರುವ ಪ್ರಕರಣಗಳು, ಬೆಳೆ ನಾಶದ ಪ್ರಕರಣಗಳೆಲ್ಲಾ ಹೆಚ್ಚಾಗುತ್ತಿರುವುದು. ಆದರೆ ಅವುಗಳ ಹೋರಾಟ ಆರಂಭವಾಗುವ ಮುನ್ನ ಆವುಗಳ ಬದುಕು [ರೆಕ್ಕೆ] ವಾಪಸು ಕೊಡುವುದು [ಸ್ವಾತಂತ್ರ್ಯವೆಂಬ ರೆಕ್ಕೆ ಕೊಟ್ಟು] ಶರಣಾಗುವುದು ಒಳ್ಳೆಯದು.
ಕಿರುಚಿತ್ರದಲ್ಲಿನ ಕಾಡು ಬೆಟ್ಟ ಇತ್ಯಾದಿ ದೃಶ್ಯಾವಳಿಗಳು ನಾವು ಕಳೆದುಕೊಂಡ ಮತ್ತು ಕಳೆದುಕೊಳ್ಳುತ್ತಿರುವ ಅಮೂಲ್ಯ ಸಂಪತ್ತನ್ನು ನೆನಪಿಸುತ್ತದೆ. ಕಪ್ಪು ಬಿಳುಪು ಇಡೀ ಕಿರುಚಿತ್ರವನ್ನು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ. ಒಂದುವೇಳೆ ಬಣ್ಣದಲ್ಲಾಗಿದ್ದರೆ, ಹಸಿರು ವನ್ಯ ರಾಶಿಗೆ ಮನಸೋತು ವನ್ಯಜೀವಿಗಳ ಸಂಕಟವನ್ನು ಮರೆತು ಬಿಡುತ್ತಿದ್ದೇವೆನೋ? ಅಂದರೆ ಆ ಧ್ವನಿ ಕ್ಷೀಣಿಸುತ್ತಿತ್ತೇನೋ? ಡಾ. ಕೃತಿ ಕಾರಂತ್ ನಿರ್ಮಿಸಿರುವ ಚಿತ್ರಕ್ಕೆ ಅದಿತಿ ರಾಜಗೋಪಾಲ್ ಕಥೆಯನ್ನು ಒದಗಿಸಿದ್ದಾರೆ. ವಿಶ್ವ ಆನೆಗಳ ದಿನಕ್ಕೆ ಒಂದು ಒಳ್ಳೆಯ ಕೊಡುಗೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನೆಮಾ ಪೋಸ್ಟರ್ ಗಳ ಕೋಣೆಯಲ್ಲಿ-ಹಾಲಿವುಡ್ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ
IFFI 2024; ಟಾಕ್ಸಿಕ್ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್ ಮಸ್ಸೆಗೆ ವಾರ್ಷಿಕ ಪುರಸ್ಕಾರ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Legislative House: ಶಾಸನಸಭೆಯೊಳಗೆ ಪೊಲೀಸ್ ಪ್ರವೇಶಕ್ಕಿಲ್ಲ ಅವಕಾಶ: ತಜ್ಞರು
Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು
Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Koteshwara: ಟಯರ್‌ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋ*ಟಗೊಂಡು ಯುವಕ ಗಂಭೀರ; ಕಾರಣಗಳೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.