Ghat Road: ಭೂಕುಸಿತ ಅಪಾಯ ಸಾಧ್ಯತೆಯ ವಿವಿಧೆಡೆ ಡಾ.ಸೆಲ್ವಕುಮಾರ್ ನಿಯೋಗದಿಂದ ಪರಿಶೀಲನೆ
ಗಂಭೀರ ಸನ್ನಿವೇಶ ಹೊರತುಪಡಿಸಿ ಬೇರೆ ಕಾರಣಕ್ಕೆ ಸಂಚಾರ ಸ್ಥಗಿತಗೊಳಿಸಬಾರದು: ಯು.ಟಿ.ಖಾದರ್
Team Udayavani, Jul 30, 2024, 6:20 AM IST
ಮಂಗಳೂರು: ಶಿರಾಡಿ ಮತ್ತು ಚಾರ್ಮಾಡಿ ಘಾಟಿಯಲ್ಲಿ ಸಂಚಾರ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ| ಎಸ್. ಸೆಲ್ವಕುಮಾರ್ ಹಾಗೂ ರಾ.ಹೆ. ವಿಭಾಗದ ಮುಖ್ಯ ಅಭಿಯಂತ ಕೆ.ಜಿ.ಜಗದೀಶ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸಹಿತ ಜಿಲ್ಲಾಡಳಿತದ ವಿವಿಧ ಸ್ತರದ ಅಧಿಕಾರಿಗಳ ತಂಡ ಸೋಮವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಶೀಲನೆ ನಡೆಸಿದೆ.
ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಉಪಸ್ಥಿತಿಯಲ್ಲಿ ಬೆಳಗ್ಗೆ ಮಂಗಳೂರಿನಲ್ಲಿ ಮಹತ್ವದ ಸಭೆ ನಡೆಸಿದ ಅಧಿಕಾರಿಗಳ ತಂಡ ನಂತೂರು, ಸುರತ್ಕಲ್ ಹೆದ್ದಾರಿ, ಕೂಳೂರು ಸೇತುವೆ ಕುರಿತಾದ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಿತು. ಜತೆಗೆ ತುಂಬೆ ಡ್ಯಾಂನ ಪರಿಸ್ಥಿತಿಯನ್ನು ಅವಲೋಕಿಸಲಾಯಿತು. ಮಳೆಯ ಸಂದರ್ಭ ಸಮಸ್ಯೆ ಸೃಷ್ಟಿಸಿರುವ ಬೆಳ್ತಂಗಡಿ-ಚಾರ್ಮಾಡಿ ರಸ್ತೆಯ ಬಗ್ಗೆಯೂ ಚರ್ಚಿಸಲಾಯಿತು. ಬಳಿಕ, ಗುರುಪುರ ಸಮೀಪದ ಭೂಕುಸಿತ ಆಗುವ ಅಪಾಯದ ಕೆತ್ತಿಕಲ್ ಗುಡ್ಡ, ಹೆದ್ದಾರಿ ಸಮಸ್ಯೆ ಇರುವ ಬಂಟ್ವಾಳ, ಕಲ್ಲಡ್ಕ, ಮಾಣಿ, ಉಪ್ಪಿನಂಗಡಿ ಹಾಗೂ ಶಿರಾಡಿ ಭಾಗದ ಸಮಸ್ಯೆಗಳ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಸಂಚಾರ ಸ್ಥಗಿತ ಪರಿಹಾರವಲ್ಲ: ಖಾದರ್
ಸುದ್ದಿಗಾರರ ಜತೆಗೆ ಮಾತನಾಡಿದ ಯು.ಟಿ.ಖಾದರ್, ಶಿರಾಡಿ ಹಾಗೂ ಚಾರ್ಮಾಡಿಗಳಲ್ಲಿ ಪದೇಪದೆ ಮಣ್ಣು ಕುಸಿಯುತ್ತಿದ್ದು, ಸಂಚಾರಕ್ಕೆ ಆತಂಕವಾಗುತ್ತಿದೆ. ಗಂಭೀರ ಸನ್ನಿವೇಶವನ್ನು ಹೊರತುಪಡಿಸಿ ಬೇರೆ ಯಾವುದೇ ಕಾರಣಕ್ಕೂ ಸಂಚಾರ ಸ್ಥಗಿತಗೊಳಿಸಬಾರದು. ಸಂಚಾರ ಸ್ಥಗಿತದಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ ಎಂಬುದನ್ನು ಅಧಿಕಾರಿಗಳಿಗೆ ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ದ.ಕ, ಕೊಡಗು, ಉಡುಪಿ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲಾಡಳಿತ ಸೇರಿ ಒಮ್ಮತದ ತೀರ್ಮಾನ ತೆಗೆದುಕೊಳ್ಳಬೇಕು. ಶಿರಾಡಿ, ಚಾರ್ಮಾಡಿ ಹಾಗೂ ಮಂಗಳೂರಿನ ಕೆತ್ತಿಕಲ್ ಪ್ರದೇಶಗಳಲ್ಲಿ ಆಗಾಗ ಭೂಕುಸಿತ ಉಂಟಾಗುತ್ತಿರುವ ಬಗ್ಗೆ ಏನು ಮುಂಜಾಗ್ರತಾ ಕ್ರಮ ಏನು ಕೈಗೊಳ್ಳಬೇಕು ಎಂಬ ಬಗ್ಗೆಯೂ ತಂಡ ಪರಿಶೀಲಿಸಿ ವರದಿ ನೀಡಲಿದೆ ಎಂದರು.
ಶಿರಾಡಿ ಘಾಟಿಯಲ್ಲಿ ಸುರಂಗ ರಚನೆಗೆ ರೈಲ್ವೇ, ಅರಣ್ಯ, ಪರಿಸರ ಇಲಾಖೆಗಳ ನಿರಾಕ್ಷೇಪಣೆ ಬೇಕು. ಇದಕ್ಕೂ ಮುನ್ನ ಹೆದ್ದಾರಿಯನ್ನು ಸುಸ್ಥಿತಿಯಲ್ಲಿ ಇರಿಸುವ ಬಗ್ಗೆ ಚಿಂತನೆ ನಡೆಸಬೇಕು. ಮಾರನಹಳ್ಳಿ-ಸಕಲೇಶಪುರ ನಡುವಿನ ಹೆದ್ದಾರಿ ಕಾಮಗಾರಿ ತುರ್ತಾಗಿ ಪೂರ್ಣಗೊಳ್ಳಬೇಕು. ಘಾಟಿ ಪ್ರದೇಶದಲ್ಲಿ ಕಾಮಗಾರಿ ವೇಳೆ ಒಂದೇ ಕಡೆ ನೀರು ಹರಿದು ಹೋಗುವಂತೆ ರಚನೆ ಮಾಡಬೇಕು ಎಂದು ಹೇಳಿದರು.
ಹೆದ್ದಾರಿ ಕಾಮಗಾರಿಗೆ ಈಶಾನ್ಯ ಭಾರತ ಮಾದರಿ: ಖಾದರ್
ಯು.ಟಿ.ಖಾದರ್ ಮಾತನಾಡಿ, ಈಶಾನ್ಯ ಭಾರತದಲ್ಲಿ ಹೆದ್ದಾರಿ ಕಾಮಗಾರಿ ಸಂದರ್ಭದಲ್ಲೇ ತಡೆಗೋಡೆಯನ್ನೂ ಮಾಡುತ್ತಾರೆ. ಆದರೆ ಇಲ್ಲಿ ಹೆದ್ದಾರಿ ಕಾಮಗಾರಿ ಬಳಿಕ ತಡೆಗೋಡೆ ಪ್ರತ್ಯೇಕವಾಗಿ ಮಾಡುತ್ತಾರೆ. ಗುಡ್ಡಗಾಡು ಪ್ರದೇಶವಾದ ಇಲ್ಲಿ ಇದು ಸರಿಯಾದ ಕ್ರಮವಲ್ಲ. ಹಾಗಾಗಿ ಈಶಾನ್ಯ ಭಾರತ ಮಾದರಿಯನ್ನು ಅನುಸರಿಸುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಸೂಚನೆ ನೀಡಬೇಕಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.