ಯೋಗಾಭ್ಯಾಸದಿಂದ ಆರೋಗ್ಯ ಸಿದ್ಧಿ
Team Udayavani, Apr 21, 2021, 2:00 AM IST
ಭಾರತೀಯ ಪರಂಪರೆಯ ಅಂಗವಾದ ಯೋಗಕ್ಕೆ ಇಂದು ಜಾಗತಿಕ ಮನ್ನಣೆ ದೊರಕಿದೆ. ಅಂದು ಯೋಗವನ್ನು ಆಧ್ಯಾತ್ಮಿಕ ಸಾಧನೆಗಳಿಗಾಗಿ ಅನು ಷ್ಠಾನ ಮಾಡುತ್ತಿದ್ದರೆ ಇಂದು ಯೋಗವನ್ನು ಆರೋಗ್ಯ ಸಾಧನೆಗಾಗಿ ಅಭ್ಯಾಸ ಮಾಡುತ್ತಿದ್ದೇವೆ. ಯೋಗದಿಂದ ಆರೋಗ್ಯ ಸಾಧನೆ ಹೇಗೆ ಸಾಧ್ಯ? ಎಂದು ತಿಳಿಯುವ ಮೊದಲು ಸಮಗ್ರ ಆರೋಗ್ಯದ ಪರಿಕಲ್ಪನೆ ಇರುವುದು ಮುಖ್ಯ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಆರೋಗ್ಯ ಎಂದರೆ ಕೇವಲ ಶಾರೀರಿಕ ರೋಗಗಳಿಲ್ಲದಿರುವುದು ಮಾತ್ರವಲ್ಲ, ಅದು ದೈಹಿಕ, ಮಾನಸಿಕ, ಮತ್ತು ಸಾಮಾಜಿಕ ಸಮತೋಲನದ ಸ್ಥಿತಿ. ಭಾರತೀಯ ವಿಜ್ಞಾನ ಶಾಸ್ತ್ರಗಳ ಪ್ರಕಾರ ಯಾರಲ್ಲಿ ತ್ರಿದೋಷಗಳು (ವಾತ- ಪಿತ್ತ-ಕಫಗಳೆಂಬ ಮೂಲಭೂತ ಘಟಕ ಗಳು), ಜಠರಾಗ್ನಿ(ಜೀರ್ಣಕ್ರಿಯೆ), ಸಪ್ತಧಾತುಗಳು (ಅಂಗಾಂಶಗಳು) ಮತ್ತು ಅವುಗಳ ಮಲಗಳು (ತ್ಯಾಜ್ಯಗಳು) ಹಾಗೂ ಪ್ರಸನ್ನವಾದ ಆತ್ಮ, ಇಂದ್ರಿಯ ಮತ್ತು ಮನಸ್ಸುಗಳಿವೆಯೋ ಅವನನ್ನು ಆರೋಗ್ಯವಂತ ಎನ್ನುತ್ತಾರೆ. ಇವೆಲ್ಲವೂ ದೇಹದ ಆರೋಗ್ಯವಷ್ಟೆ ಪೂರ್ಣ ಆರೋಗ್ಯವೆನಿಸದು, ಅದರೊಂದಿಗೆ ಮಾನಸಿಕ ಸುಸ್ಥಿತಿಯೂ ಬಹಳ ಮುಖ್ಯ ಎಂದು ಪ್ರತಿಪಾದಿಸುತ್ತವೆ. ಇಂತಹ ಪರಿಪೂ ರ್ಣ ಆರೋಗ್ಯವನ್ನು ಪಡೆಯುವಲ್ಲಿ, ಇರುವ ಆರೋಗ್ಯವನ್ನು ಉತ್ತಮಗೊಳಿಸುವಲ್ಲಿ, ಆರೋಗ್ಯ ಸಮಸ್ಯೆಗಳು ಬರದಂತೆ ತಡೆಗಟ್ಟಲು ಮತ್ತು ಬಂದ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸಲು ಯೋಗದ ಸರಿಯಾದ ಅಭ್ಯಾಸದಿಂದ ಮಾತ್ರ ಸಾಧ್ಯ. ವಿವಿಧ ರೋಗಗಳಿಗೆ ರಾಸಾಯನಿಕಯುಕ್ತ ಔಷಧಗಳನ್ನು ಸೇವಿಸಿ ಅವುಗಳ ದುಷ್ಪರಿಣಾಮಗಳನ್ನು ಅನುಭವಿಸಿ ಸೊರಗಿರುವ ಜನತೆಯಲ್ಲಿ ಯಾವುದೇ ಔಷಧಗಳ ಬಳಕೆಯಿಲ್ಲದೆ ಅಥವಾ ಪ್ರಸ್ತುತ ತೆಗೆದುಕೊಳ್ಳುತ್ತಿರುವ ಔಷಧಗಳೊಂದಿಗೆ ಮಾಡಬಹುದಾದ ಯೋಗಚಿಕಿತ್ಸೆ ಆಶಾಕಿ ರಣವನ್ನು ಮೂಡಿಸಿದೆ. ಯೋಗದಿಂದ ಗುಣಪಡಿಸಬಹುದಾದ ಹಲವು ರೋಗಗಳ ಬಗೆಗಿನ ಸಂಶೋಧನೆಗಳು ಇದನ್ನು ದೃಢಪಡಿಸಿವೆ.
ಇಂದು ನಾವು ಎದುರಿಸುತ್ತಿರುವ ಹೆಚ್ಚಿನ ರೋಗ ಗಳು ಮನೋದೈಹಿಕ ರೋಗಗಳು, ಅಂದರೆ ಮನಸ್ಸಿನ ವಿಕ್ಷೇಪ ಯಾ ಒತ್ತಡಗಳಿಂದ ಹುಟ್ಟಿ ದೇಹದ ಮೇಲೆ ಪರಿಣಾಮ ಉಂಟುಮಾಡುವಂತಹ ರೋಗಗಳು. ಆಧುನಿಕ ಜೀವನ ಶೈಲಿ ಮತ್ತು ಆಹಾರ ಕ್ರಮಗಳು ಇಂತಹ ತೊಂದರೆಗಳನ್ನು ಹೆಚ್ಚಿಸುತ್ತಿವೆ. ಅಧಿಕ ರಕ್ತದೊತ್ತಡ, ಮಧುಮೇಹ, ಬೊಜ್ಜು, ಹಲವು ರೀತಿಯ ಉಸಿರಾಟದ ತೊಂದರೆಗಳು, ವಿವಿಧ ರೀತಿಯ ತಲೆನೋವುಗಳು, ವಿಧ ವಿಧದ ಜೀರ್ಣಾಂಗ ಸಂಬಂಧಿ ತೊಂದರೆಗಳು, ಮುಟ್ಟಿನ ತೊಂದರೆಗಳು, ಲೈಂಗಿಕ ತೊಂದರೆಗಳು, ನಿದ್ರಾಹೀನತೆ ಇತ್ಯಾದಿಗಳೆಲ್ಲ ಹೆಚ್ಚಿನ ಸಂದರ್ಭಗಳಲ್ಲಿ ಮನೋದೈಹಿಕ ರೋಗಗಳೇ ಆಗಿವೆ. ಈ ರೋಗಗಳ ಚಿಕಿತ್ಸಾ ವಿಧಾನವೂ ರೋಗ ಲಕ್ಷಣಗಳನ್ನು ಗುಣಪಡಿಸುವುದರೊಂದಿಗೆ ರೋಗದ ಮೂಲವನ್ನು ದೇಹ ಹಾಗೂ ಮನಸ್ಸಿನಿಂದ ಹೋಗಲಾ ಡಿಸುವಂತಿರಬೇಕು.ಮನಸ್ಸನ್ನು ನಿಯಂತ್ರಿ ಸಲು ಉಸಿರಾಟ ನಿಯಂತ್ರಣವೊಂದೇ ನೇರ ಮಾರ್ಗ. ಆದುದರಿಂದ ಸರಿಯಾದ ಉಸಿರಾಟದೊಂದಿಗೆ ಮಾಡುವ ಯೋಗದ ಅಭ್ಯಾಸ ಕ್ರಮದಿಂದ ಮನಸ್ಸಿನ ನಿಯಂತ್ರಣ ಸಾಧಿಸುವುದರೊಂದಿಗೆ ರೋಗಗಳ ಮೂಲ ಕಾರಣಗಳನ್ನು ನಿಯಂತ್ರಿಸಬಹುದು.
ಯೋಗವನ್ನು ವ್ಯಾಯಾಮದಂತೆ ಅಭ್ಯಾಸ ಮಾಡುವುದರಿಂದ ಸರಿಯಾದ ಪ್ರಯೋಜನ ಸಿಗಲಾ ರದು. ಉದಾಹರಣೆಗಾಗಿ ಕೆಲವೇ ದಿನಗಳಲ್ಲಿ ಬಹಳಷ್ಟು ಪರಿಣಾಮಕಾರಿಯಾಗಿ ಕಡಿಮೆ ಮಾಡಬಹುದಾದ ವಿವಿಧ ರೀತಿಯ ಬೆನ್ನುನೋವುಗಳು ತಪ್ಪಾದ ಅಭ್ಯಾಸ ದಿಂದ ಹೆಚ್ಚಾಗಬಹುದು. ಆದುದರಿಂದ ಯೋಗವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಅಗತ್ಯಕ್ಕೆ ತಕ್ಕಂತೆ ಬಳಸಿದರೆ ಮಾತ್ರ ಪರಿಣಾಮಕಾರಿಯಾದ ಯೋಗ ಚಿಕಿತ್ಸೆ ನೀಡಲು ಸಾಧ್ಯ. ಯೋಗದ ಕ್ರಮಬದ್ಧವಾದ ಅಭ್ಯಾಸದಿಂದ ದೇಹ ಮತ್ತು ಮನಸ್ಸನ್ನು ಶುದ್ಧಿ ಮಾಡಿ ಮನೋದೈಹಿಕ ರೋಗಗಳನ್ನು ಹೋಗಲಾಡಿಸಬಹುದು ಯಾ ನಿಯಂತ್ರಿಸಬಹುದು. ಇಂದು ವಿಶ್ವಕ್ಕೆ ಕಂಟಕವಾ ಗಿರುವ ಕೋವಿಡ್-19 ಬರದಂತೆ ತಡೆಗ ಟ್ಟಲು ಬೇಕಾದ ರೋಗ ನಿರೋಧಕ ಶಕ್ತಿಯನ್ನು ಬೆಳೆಸಲು ಮತ್ತು ಕೊರೊನಾ ಬಂದ ವ್ಯಕ್ತಿಗೆ ಬೇಕಾದ ಮಾನಸಿಕ ಸ್ಥೈರ್ಯವನ್ನು ಒದಗಿಸಲು ಹಾಗೂ ಉಸಿರಾಟದ ತೊಂದರೆಗಳೇ ಮೊದಲಾದ ಆರೋಗ್ಯ ಸಮಸ್ಯೆಗಳನ್ನು ಹೋಗಲಾಡಿಸಲು ಯೋಗದಿಂದ ಸಾಧ್ಯ.
ಯೋಗ ಶಾಸ್ತ್ರಗಳು ವಿವಿಧ ರೀತಿಯ ಮನೋ ದೈಹಿಕ ರೋಗಗಳು, ಅವುಗಳ ಲಕ್ಷಣ ಮತ್ತು ಅವುಗಳನ್ನು ನಿಯಂತ್ರಿಸುವ ವಿಧಾನಗಳನ್ನು ವಿವರವಾಗಿ ನಿರೂಪಿಸಿವೆ. ಅಂತಹ ರೋಗಗಳನ್ನು ವಿವಿಧ ಹಂತಗಳಲ್ಲಿ (ರೋಗದ ಆರಂಭದ ಹಂತದಲ್ಲಿ, ಉಲ್ಬಣ ಗೊಳ್ಳುತ್ತಿರುವ ಹಂತದಲ್ಲಿ, ಉಲ್ಬಣಗೊಂಡ ಅನಂತರ), ಅವುಗಳ ಕಾರಣಗಳನ್ನು ಪತ್ತೆಹಚ್ಚಿ ಸೂಕ್ತ ಯೋಗಚಿಕಿತ್ಸೆ ನೀಡಿದಲ್ಲಿ ಪರಿಣಾಮಕಾರಿಯಾದ ಪ್ರಯೋಜನವನ್ನು ಕಾಣಬಹುದು. ಉದಾಹರಣೆಗಾಗಿ ಅಧಿಕ ರಕ್ತದೊತ್ತಡ ಉಂಟಾಗಲು ರಕ್ತನಾಳಗಳು ಗಡುಸಾಗುವುದು, ಮನಸ್ಸಿನ ಒತ್ತಡ, ಶರೀರದಲ್ಲಿನ ಅಧಿಕ ಕೊಬ್ಬು ಯಾ ಕೊಲೆಸ್ಟ್ರಾಲ್, ಧೂಮಪಾನ ಅಥವಾ ಇತರ ಯಾವುದೇ ಜೀವನ ಶೈಲಿಗೆ ಸಂಬಂಧಪಟ್ಟ ಕಾರಣಗಳಿರಬಹುದು. ಮೇಲಿನ ಬೇರೆ ಬೇರೆ ಕಾರಣಗಳಿಂದ ಉಂಟಾದ ಅಧಿಕ ರಕ್ತದೊತ್ತಡಕ್ಕೆ ಒಂದೇ ರೀತಿಯ ಯೋಗಾಭ್ಯಾಸಗಳಿಂದ ಸರಿಯಾದ ಪ್ರಯೋಜನ ಸಿಗಲು ಸಾಧ್ಯವಿಲ್ಲ. ಅವರವರ ಕಾರಣಕ್ಕನುಸಾರವಾಗಿ ಯೋಗದ ಅಭ್ಯಾಸಗಳನ್ನು ಅಳವಡಿಸಿಕೊಂಡು ಯೋಗಚಿಕಿತ್ಸೆಯನ್ನು ನೀಡಿದರೆ ತತ್‌ಕ್ಷಣದ ಹಾಗೂ ಸರಿಯಾದ ಪರಿಣಾಮ ಸಾಧ್ಯ. ಇದರೊಂದಿಗೆ ಪ್ರತಿಯೊಬ್ಬರ ದೇಹ ಮತ್ತು ಮನಸ್ಸಿನ ಪ್ರಕೃತಿಗನುಗುಣವಾಗಿ ಯೋಗವನ್ನು ಅಳವಡಿಸಿಕೊಂಡರೆ ಯಾವುದೇ ವಿಧಾನದಿಂದ ದೊರೆಯದ ಆರೋಗ್ಯಸಿದ್ಧಿಯನ್ನು ಯೋಗದಿಂದ ಗಳಿಸಲು ಸಾಧ್ಯ. ಇದಲ್ಲದೆ ಯೋಗ ಶಾಸ್ತ್ರದಲ್ಲಿ ವಿವರಿಸಿರುವ ಆಹಾರ-ವಿಹಾರಗಳ ಸೂಕ್ಷ್ಮತೆಯನ್ನು ಸರಿಯಾಗಿ ಅಳವಡಿಸಿಕೊಳ್ಳುವುದು ಅಷ್ಟೇ ಪ್ರಾಮುಖ್ಯ. ಇವೆಲ್ಲ ಸೂಕ್ಷ್ಮಗಳನ್ನು ಸರಿಯಾಗಿ ಅವಲೋಕಿಸದೆ ಬಲಪ್ರಯೋಗ ಅಥವಾ ಗುಂಪಿನಲ್ಲಿ ಯೋಗಾಭ್ಯಾಸ ನಡೆಸಿದರೆ ಸರಿಯಾದ ಪ್ರಯೋಜನ ಸಿಗಲಾರದು, ಅಲ್ಲದೆ ಕೆಲವೊಮ್ಮೆ ರೋಗ ಉಲ್ಬಣಗೊಳ್ಳುವ ಸಾಧ್ಯತೆಯೂ ಇದೆ.
– ಡಾ| ಉದಯಕುಮಾರ ಕೆ., ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.