Government Proposal: ಕಪ್ಪೆಗೂ ಬರಲಿದೆ ರಾಜ್ಯಯೋಗ?
"ಮಲೆನಾಡು ಮರ ಗಂತಿಕಪ್ಪೆ'ಯನ್ನು "ರಾಜ್ಯ ಕಪ್ಪೆ' ಎಂದು ಘೋಷಿಸಲು ಪ್ರಸ್ತಾವನೆ
Team Udayavani, Aug 8, 2024, 7:43 AM IST
ಕರ್ನಾಟಕದಲ್ಲಿ ರಾಜ್ಯ ಪ್ರಾಣಿ, ಮರ, ಹೂವು, ಹಣ್ಣು ಹೀಗೆ ಹಲವು ಸಂಕೇತಗಳಿವೆ. ಈ ಸಾಲಿಗೆ ಉಭಯಜೀವಿ “ಕಪ್ಪೆ’ಯನ್ನೂ ಸೇರಿಸಬೇಕೆಂಬ ಬೇಡಿಕೆ ಬಂದಿದೆ. ವಿಜ್ಞಾನಿ ಡಾ| ಗುರುರಾಜ ಕೆ.ವಿ. ಸೇರಿದಂತೆ ಹಲವು ತಜ್ಞರು “ಮಲೆನಾಡು ಮರ ಗಂತಿಕಪ್ಪೆ’ಯನ್ನು ರಾಜ್ಯ ಕಪ್ಪೆಯನ್ನಾಗಿ ನಾಮ ನಿರ್ದೇಶಿಸಲು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಮರ ಗಂತಿಕಪ್ಪೆಗೇ ಯಾಕೆ ರಾಜ್ಯ ಮನ್ನಣೆ, ಅದರ ಹಿಂದಿರುವ ಕಾರಣಗಳು ಇತ್ಯಾದಿ ಮಾಹಿತಿ ಇಲ್ಲಿದೆ.
ಜಗತ್ತಿನ ಪರಿಸರ ವ್ಯವಸ್ಥೆಯಲ್ಲಿ ಪ್ರತಿಯೊಂದು ಜೀವಿಯೂ ತನ್ನದೇ ಆದ ಮಹತ್ವ ಹೊಂದಿದೆ. ಅದೇ ರೀತಿ ಉಭಯಜೀವಿಗಳೂ ಪರಿಸರ ವ್ಯವಸ್ಥೆಯ ಜೈವಿಕ ಸೂಚಕಗಳಾಗಿವೆ. ನೀರು-ನೆಲ ಎರಡರಲ್ಲೂ ಜೀವಿಸುವ ಇವು ಪ್ರಕೃತಿಯಲ್ಲಾಗುವ ಬದಲಾವಣೆಗಳನ್ನು ಬಹುಬೇಗ ಗ್ರಹಿಸುತ್ತವೆ. ಹಾಗಾಗಿ ಇವುಗಳನ್ನು “ಅಪಾಯದ ಮುನ್ಸೂಚನೆಯ ಜೀವಿಗಳು’ ಎಂದೂ ಕರೆಯಲಾಗುತ್ತದೆ. ಕೀಟಗಳನ್ನು ನಿಯಂತ್ರಿಸುವಲ್ಲಿ ಬಹು ಮುಖ್ಯ ಪಾತ್ರವಹಿಸುವ ಉಭಯಜೀವಿಗಳು, ಪರಭಕ್ಷಕ ಪ್ರಾಣಿಗಳ ಪ್ರಮುಖ ಆಹಾರದ ಮೂಲವೂ ಹೌದು.
ಉಭಯ ಜೀವಿಗಳಲ್ಲಿ ಕಪ್ಪೆಯೂ(ಮಂಡೂಕ) ಒಂದು ವಿಧ. ಅದರಲ್ಲಿ ಸಾಕಷ್ಟು ಪ್ರಭೇದಗಳಿವೆ. ಈ ಎಲ್ಲ ಪ್ರಭೇದಗಳ ನಡುವೆ “ಮಲೆ ನಾಡು ಮರ ಗಂತಿಕಪ್ಪೆ’ ವಿಶಿಷ್ಟವಾಗಿ ಗುರುತಿಸಿಕೊಳ್ಳುತ್ತದೆ. ಜನ ಸಾಮಾನ್ಯರಲ್ಲಿ ಕಪ್ಪೆ ಸೇರಿ ಉಭಯಜೀವಿಗಳ ಸಂರಕ್ಷಣೆ ಹಾಗೂ ಮಹತ್ವದ ಅರಿವು ಮೂಡಿಸಲು ನಾನಾ ಪ್ರಯತ್ನಗಳಲ್ಲಿ ತೊಡಗಿ ಕೊಂಡಿರುವ ಪ್ರಕೃತಿ ವಿಜ್ಞಾನಿಗಳು ಈಗ ರಾಜ್ಯ ಕಪ್ಪೆಯನ್ನು ಘೋಷಿಸುವುದಕ್ಕೆ ಸರಕಾರದ ವನ್ಯ ಜೀವಿ ಮಂಡಳಿಗೆ ಮನವಿ ಸಲ್ಲಿಸಿದ್ದಾರೆ.
ರಾಜ್ಯ ಕಪ್ಪೆಯ ಪ್ರಸ್ತಾವವೇಕೆ?
ಪ್ರಸ್ತುತ ಕರ್ನಾಟಕದಲ್ಲಿ ರಾಜ್ಯ ಮರ, ಹೂ, ಪ್ರಾಣಿ, ಪಕ್ಷಿ, ಚಿಟ್ಟೆ ನಾಮ ನಿರ್ದೇಶನಗೊಂಡಿವೆ. ಇದರಿಂದ ಅವುಗಳ ಪ್ರಾಮುಖ್ಯ ಹೆಚ್ಚಾಗಿದ್ದು, ಅವುಗಳ ಸಂರಕ್ಷಣೆಗೆ ಸರಕಾರ ಸೇರಿ ಸಂಘ- ಸಂಸ್ಥೆಗಳು ಕಾರ್ಯೋನ್ಮುಖವಾಗಿವೆ. ಅದೇ ರೀತಿ “ರಾಜ್ಯ ಕಪ್ಪೆ’ ಎಂದು ಗುರುತಿಸಿದರೆ ಆ ಸಣ್ಣ ಜೀವಿಗಳತ್ತ ಜನರ ಗಮನ ತಿರುಗಿ, ಅದರ ಸಂರಕ್ಷಣೆ ಹೆಚ್ಚಲಿದೆ. ಅವುಗಳ ಅಧ್ಯಯನ, ಸಂಶೋಧನೆ ಹೆಚ್ಚಾಗಲಿವೆ. ಈ ಮೂಲಕ ಕಪ್ಪೆ ಸೇರಿ ಉಭಯಜೀವಿಗಳಿಗೆ ಪ್ರಾಶಸ್ತ್ಯ ದೊರೆಯುವುದಲ್ಲದೇ ಅವುಗಳ ಸಂರಕ್ಷಣೆಯೂ ಆಗುತ್ತದೆ.
ಮರ ಗಂತಿಕಪ್ಪೆ ವಿಶೇಷಗಳು
ಸಾಮಾನ್ಯ ಕಪ್ಪೆ ಹಾಗೂ ಗಂತಿಕಪ್ಪೆಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಸಾಮಾನ್ಯ ಕಪ್ಪೆಯ ಚರ್ಮ ಲೋಳೆಯಾಗಿದ್ದು, ಹೆಚ್ಚಾಗಿ ನೀರಿನ ಪ್ರದೇಶದಲ್ಲಿ ವಾಸಿಸುತ್ತದೆ. ನೆಲದಲ್ಲಿ ವಾಸಿಸುವ ಗಂತಿಕಪ್ಪೆಗಳ ಚರ್ಮ ಸ್ಯಾಂಡ್ ಪೇಪರ್ ರೀತಿ ಒರಟಾಗಿರುತ್ತದೆ. ಅವುಗಳ ಕಣ್ಣಿನ ಹಿಂಭಾಗದಲ್ಲಿ ವಿಷಕಾರಿ ಗ್ರಂಥಿಯಿದ್ದು, ಇದು ಸಾಮಾನ್ಯ ಕಪ್ಪೆಗಳಲ್ಲಿ ಇರುವುದಿಲ್ಲ.
ಮಲೆನಾಡಿನಲ್ಲಿ ಕಂಡುಬರುವ ಈ ವಿಶಿಷ್ಟ ಪ್ರಭೇದಕ್ಕೆ ಗ್ರಂಥಿ ಇರುವುದರಿಂದ ಹಾಗೂ ಮರದಲ್ಲಿ ವಾಸಿಸುವುದರಿಂದ ಇದಕ್ಕೆ “ಮಲೆನಾಡು ಮರ ಗಂತಿಕಪ್ಪೆ’ ಎಂಬ ಹೆಸರು ಬಂದಿದೆ. ಸಾಮಾನ್ಯ ಕಪ್ಪೆಗಳು ಮಳೆಗಾಲದಲ್ಲಿ ಕೂಗಿದರೆ, ಇವು ಮಳೆಗಾಲಕ್ಕಿಂತ ಮೊದಲೇ ಕೂಗುತ್ತವೆ. 3.6ರಿಂದ 3.8 ಸೆಂ.ಮೀ.ವರೆಗೆ ಬೆಳೆಯುತ್ತವೆ. ಜೂನ್ ಆರಂಭದ ವಾರಗಳಲ್ಲಿ ಈ ಕಪ್ಪೆಗಳು ನೆಲಕ್ಕೆ ಬಂದು ಸಂತಾನೋತ್ಪತ್ತಿ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತವೆ.
ಮರ ಗಂತಿಕಪ್ಪೆ ಆಯ್ಕೆಯೇ ಏಕೆ?
ಮಲೆನಾಡು ಮರ ಗಂತಿಕಪ್ಪೆಯನ್ನು ರಾಜ್ಯ ಕಪ್ಪೆಯನ್ನಾಗಿ ನಾಮ ನಿರ್ದೇಶಿಸಲು ಪ್ರಮುಖ ಕಾರಣಗಳಿವೆ. ಇವು ಸದ್ಯ ಮಲೆನಾಡಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದು, ಅವಸಾನದ ಅಂಚಿನಲ್ಲಿಲ್ಲ. ಜಿನಸ್ ಪಿಡೊಸ್ಟೈಬ್ ವರ್ಗಕ್ಕೆ ಸೇರಿದ ಏಕೈಕ ಜೀವಿ ಇದಾಗಿದ್ದು, 6.5ರಿಂದ 7 ಕೋಟಿ ವರ್ಷಗಳ ಹಿಂದೆ ವಿಕಾಸಗೊಂಡಿವೆ ಎನ್ನಲಾಗಿದೆ.
1972ರ ಭಾರತೀಯ ವನ್ಯ ಜೀವಿ ಕಾಯ್ದೆಯ 2ನೇ ಪರಿಚ್ಛೇದದಲ್ಲಿ ಸೇರ್ಪಡೆಗೊಂಡ ಏಕೈಕ ಗಂತಿಕಪ್ಪೆ ಇದಾಗಿದೆ. ಪ್ರಸ್ತುತ ಭಾರತದಲ್ಲಿರುವ ಎಲ್ಲ ಗಂತಿಕಪ್ಪೆ ಜಾತಿಗಳಿಗೆ ಇದುವೇ ಆಧಾರ ಜೀವಿ. ಮುರಕಲ್ಲು ಪ್ರದೇಶ, ಪಶ್ಚಿಮ ಘಟ್ಟ, ಹರಿದ್ವರ್ಣ, ಮಿರಿಸ್ಟಿಕಾ ಜೌಗು (ಬೇರು) ಕಾಡು ಹಾಗೂ ಇತರ ಸಂರಕ್ಷಿತ ವನ್ಯ ಪ್ರದೇಶಗಳು ಇವುಗಳ ಆವಾಸ ಸ್ಥಾನವಾಗಿದ್ದು, ಇವುಗಳ ಸಂರಕ್ಷಣೆಯಿಂದ ಕಾಡುಗಳೂ ಉಳಿಯಲಿವೆ. ರಾಜ್ಯದಲ್ಲಿರುವ 115 ಉಭಯಜೀವಿಗಳಲ್ಲಿ ಮಲೆನಾಡು ಮರಗಂತಿ ಕಪ್ಪೆ ಹೊಂದಿರುವ ವೈಶಿಷ್ಟ್ಯತೆ ಮತ್ತೆ ಯಾವ ಉಭಯಜೀವಿಯೂ ಹೊಂದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಈ ಕಪ್ಪೆಗಳು ನೈಸರ್ಗಿಕ ಪರಂಪರೆಯ ಭಾಗವಾಗಿವೆ.
ಕಪ್ಪೆಗಾಗಿ 4ನೇ ಸಲ ಮನವಿ!
ಮಲೆನಾಡು ಮರ ಗಂತಿಕಪ್ಪೆಯನ್ನು ರಾಜ್ಯ ಕಪ್ಪೆಯಾಗಿ ಘೋಷಿಸಲು, 2020 ರಲ್ಲಿ ವನ್ಯಜೀವಿ ಮಂಡಳಿಗೆ ಮೊದಲ ಬಾರಿ ಅರ್ಜಿ ಸಲ್ಲಿಕೆಯಾಗಿತ್ತು. ಆದರೆ ಕಾರಣಾಂತರಗಳಿಂದ ಮನವಿ ಮುಂದಿನ ಹಂತಕ್ಕೆ ಹೋಗಿರಲಿಲ್ಲ. 2021ರಲ್ಲಿ ಮತ್ತೆ ಅರ್ಜಿ ಸಲ್ಲಿಸಲಾಗಿತ್ತು. ಕೋವಿಡ್ ಇದ್ದ ಕಾರಣ ಮನವಿ ನನೆಗುದಿಗೆ ಬಿತ್ತು. ಹೊಸ ಸರಕಾರ, ಹೊಸ ವನ್ಯಜೀವಿ ಮಂಡಳಿ ರಚನೆಯಾದ ಬಳಿಕ 2023ರಲ್ಲಿ ಸಲ್ಲಿಸಿದ ಮತ್ತೂಂದು ಅರ್ಜಿಯೂ ಪರಿಗಣನೆಗೆ ಬಂದಿರಲಿಲ್ಲ. ಈಗ ಮತ್ತೆ ಜುಲೈಯಲ್ಲಿ ಹೊಸ ಅರ್ಜಿ ಸಲ್ಲಿಕೆಯಾಗಿದೆ.
ಈ ಕಪ್ಪೆಯನ್ನು ಗುರುತಿಸಿದ್ದು ಯಾರು?
ಬ್ರಿಟಿಷ್ ಪ್ರಕೃತಿ ವಿಜ್ಞಾನಿ ಗುಂಥರ್ ಮೊದಲ ಬಾರಿಗೆ 1875ರಲ್ಲಿ ಮರ ಗಂತಿಕಪ್ಪೆಯನ್ನು ಮಲಬಾರ್ ಪ್ರದೇಶದಲ್ಲಿ ಪತ್ತೆ ಮಾಡಿ, ಅದಕ್ಕೆ “ಪಿಡೊಸ್ಟೈಬ್ ಟ್ಯುಬರ್‌ಕುಲೊಸಸ್’ ಎಂಬ ವೈಜ್ಞಾನಿಕ ಹೆಸರಿಟ್ಟರು. 1980ರಲ್ಲಿ ಕೇರಳದ ಸೈಲೆಂಟ್ ವ್ಯಾಲಿ ಅಭಯಾರಣ್ಯದಲ್ಲಿ ಮತ್ತೆ ಈ ಕಪ್ಪೆಯನ್ನು ಶೋಧಿಸಲಾಗಿತ್ತು. ಕಾಲ ಕ್ರಮೇಣ ಕೇರಳ, ಗೋವಾ, ಮಹಾರಾಷ್ಟ್ರದಲ್ಲಿ ಈ ಕಪ್ಪೆಯನ್ನು ವಿಜ್ಞಾನಿಗಳು ಪತ್ತೆ ಹಚ್ಚಿದರು.
ಅಲ್ಲಿಯವರೆಗೂ ಕರ್ನಾಟಕದಲ್ಲಿ ಮರ ಗಂತಿಕಪ್ಪೆ ಪತ್ತೆಯಾದ ವರದಿ ಇರಲಿಲ್ಲ. 2004 ರಲ್ಲಿ ಶಿವಮೊಗ್ಗದ ಹೊಸನಗರ ತಾಲೂಕಿನ ಜಕ್ಕನಗ¨ªೆಯಲ್ಲಿ ವಿಜ್ಞಾನಿ ಡಾ| ಗುರುರಾಜ ಕೆ.ವಿ. ಈ ಕಪ್ಪೆಯನ್ನು ನೋಡಿ, ಅದರ ಧ್ವನಿ ರೆಕಾರ್ಡ್ ಮಾಡಿ ಮಾಡಿದ್ದರು. ಆ ವೇಳೆಗೆ ಇಂಟರ್‌ನ್ಯಾಶನಲ್ ಯುನಿ ಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ ಸಂಸ್ಥೆ ನಡೆಸಿದ ಜಾಗತಿಕ ಉಭಯಜೀವಿಗಳ ಸಮೀಕ್ಷೆಯಲ್ಲಿ ಮರ ಗಂತಿಕಪ್ಪೆಯನ್ನು ಅಳಿವಿನಂಚಿನ ಪ್ರಭೇದವೆಂದು ಗುರುತಿಸಿತ್ತು.
358 ಸ್ಥಳಗಳಲ್ಲಿ ಗಂತಿಕಪ್ಪೆಗಳು
ಮಲೆನಾಡು ಮರ ಗಂತಿಕಪ್ಪೆಗಳ ದಾಖಲೆಗೆ “ಮ್ಯಾಪಿಂಗ್ ಟ್ರೀ ಟೋಡ್’ ಎಂಬ ಯೋಜನೆ, “ಜನಸಾಮಾನ್ಯ ವಿಜ್ಞಾನ’ ಎಂಬ ಪರಿಕಲ್ಪನೆಯೊಂದಿಗೆ ರೂಪಗೊಂಡಿತು. 2014ರಲ್ಲಿ ಡಾ| ಗುರುರಾಜ ಕೆ.ವಿ. ಈ ಯೋಜನೆ ಆರಂಭಿಸಿದರು. ಸಾಮಾನ್ಯ ಜನರಿಗೆ ಈ ಕಪ್ಪೆಯ ಬಗ್ಗೆ ಮಾಹಿತಿ ನೀಡಿ, ಇದು ಪತ್ತೆಯಾದಾಗ ಅದರ ಫೋಟೋ, ಧ್ವನಿ ಸಂಗ್ರಹ, ಸ್ಥಳದ ಮಾಹಿತಿಯನ್ನು “ಫ್ರಾಗ್ ವಾಚ್’ ಜಾಲತಾಣದಲ್ಲಿ ದಾಖಲಿಸಲು ತಿಳಿಸಿದರು.
ಅಲ್ಲಿವರೆಗೆ ಕೇವಲ 3-4 ಪ್ರದೇಶಗಳಿಂದ ಕಪ್ಪೆ ಇರುವಿಕೆ ಬಗ್ಗೆ ದಾಖಲಾಗಿದ್ದ ಮಾಹಿತಿಗಳು, ಈ ಯೋಜನೆಯ ಪರಿಣಾಮ, ಕೇರಳದಿಂದ ಮಹಾರಾಷ್ಟ್ರದ ವರೆಗೆ 358 ಸ್ಥಳಗಳಲ್ಲಿ ಮರ ಗಂತಿಕಪ್ಪೆ ಇರುವಿಕೆಯನ್ನು ಪತ್ತೆ ಹಚ್ಚಿ ದಾಖಲಿಸಲಾಯಿತು. ಈ ಮಹತ್ವದ ಬೆಳವಣಿಗೆ ಮೂಲಕ 2020ರಲ್ಲಿ ಜಾಗತಿಕ ಉಭಯಜೀವಿಗಳ ಸಮೀಕ್ಷೆಯಲ್ಲಿ ಮಲೆನಾಡು ಮರ ಗಂತಿಕಪ್ಪೆ ಅವಸಾನದ ಅಂಚಿ ನಲ್ಲಿಲ್ಲ ಎಂಬುದನ್ನು ಸಾಬೀತು ಮಾಡಲಾಯಿತು. ಈ ಕಪ್ಪೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಸಾಧ್ಯವಾಯಿತು.
ಕರ್ನಾಟಕವೇ ಮೊದಲ ರಾಜ್ಯ?
ವಿಶ್ವದಲ್ಲೇ ಅಮೆರಿಕದ ಟೆಕ್ಸಾಸ್ ಹಾಗೂ ನ್ಯೂ ಮೆಕ್ಸಿಕೊ ರಾಜ್ಯಗಳು ಮಾತ್ರ “ರಾಜ್ಯ ಕಪ್ಪೆ’ಯನ್ನು ಘೋಷಿಸಿವೆ. ಕೇರಳ ರಾಜ್ಯದಲ್ಲೂ ಅಲ್ಲಿನ ಪರಿಸರ ವಿಜ್ಞಾನಿಗಳು “ಮಹಾಬಲಿ ಕಪ್ಪೆ’ ಪ್ರಬೇಧವನ್ನು ರಾಜ್ಯ ಕಪ್ಪೆಯನ್ನಾಗಿ ಘೋಷಿಸಲು ಪ್ರಸ್ತಾಪಿಸಿದ್ದು, ಅದು ಪರಿಶೀಲನೆ ಹಂತದಲ್ಲಿದೆ. ಈ ವಿಷಯದಲ್ಲಿ ಕರ್ನಾಟಕ ಸರಕಾರ ಶೀಘ್ರ ನಿರ್ಧಾರ ತೆಗೆದುಕೊಂಡರೆ, ರಾಜ್ಯ ಕಪ್ಪೆ ಎಂದು ನಾಮ ನಿರ್ದೇಶಿಸಿದ ಭಾರತದ ಮೊದಲ ಹಾಗೂ ವಿಶ್ವದ ಮೂರನೇ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಕರ್ನಾಟಕದ ರಾಜ್ಯ ಸಂಕೇತಗಳು
ರಾಜ್ಯ ಪ್ರಾಣಿ: ಏಷ್ಯನ್ ಆನೆ ರಾಜ್ಯ ಮರ: ಶ್ರೀಗಂಧ ರಾಜ್ಯ ಹೂವು: ಕೆಂದಾವರೆ ರಾಜ್ಯ ಹಣ್ಣು: ಮಾವು ರಾಜ್ಯ ಪಕ್ಷಿ: ನೀಲಕಂಠ ರಾಜ್ಯ ಚಿಟ್ಟೆ: ಸದರ್ನ್ ಬರ್ಡ್‌ವಿಂಗ್ ರಾಜ್ಯ ಮೀನು: ಕರ್ನಾಟಿಕ್ ಕಾರ್ಪ್
– ನಿತೀಶ ಡಂಬಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.