Government Ready: ಲೋಕಾ ದಾಳಿಗೊಳಗಾದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗೆ ಭಡ್ತಿ?
Team Udayavani, Aug 26, 2024, 2:37 AM IST
ಬೆಂಗಳೂರು: ಲೋಕಾಯುಕ್ತ ದಾಳಿ ಹಿನ್ನೆಲೆಯಲ್ಲಿ ಅಮಾನತುಗೊಳ್ಳಬೇಕಾದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗೆ ಹೆಚ್ಚುವರಿ ಭಡ್ತಿ ನೀಡಲು ಸರಕಾರ ಸಿದ್ಧತೆ ನಡೆಸಿದೆ.
ವಾಣಿಜ್ಯ ತೆರಿಗೆ ಇಲಾಖೆ ಬೆಂಗಳೂರು ಜಂಟಿ ಆಯುಕ್ತರ ಮೇಲೆ ಕಳೆದ ತಿಂಗಳಷ್ಟೇ ಲೋಕಾಯುಕ್ತ ದಾಳಿ ನಡೆಸಿದ್ದರು. ಅವರ ವಿರುದ್ಧ ಅಕ್ರಮ ಆಸ್ತಿ ಪ್ರಕರಣ ಕೂಡ ದಾಖಲಾಗಿತ್ತು. ಅಕ್ರಮ ಆಸ್ತಿ ಹೊಂದಿದ ಆರೋಪದ ಹಿನ್ನೆಲೆಯಲ್ಲಿ ಸರಕಾರಕ್ಕೆ ಲೋಕಾಯುಕ್ತ ವರದಿ ನೀಡಿದೆ. ಅದರಂತೆ ಕ್ರಮ ಕೈಗೊಳ್ಳುವ ಮೊದಲು ಅವರಿಗೆ ಸರಕಾರ “ಭಡ್ತಿ’ ನೀಡಲು ಮುಂದಾಗಿದೆ. ಇದು ಸ್ವತಃ ಇಲಾಖೆಯಲ್ಲಿ ಹುಬ್ಬೇರಿಸುವಂತೆ ಮಾಡಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ಕಳೆದ ಜುಲೈ 19ರಂದು ವಿವಿಧ ಇಲಾಖೆಗಳ 12 ಅಧಿಕಾರಿಗಳ ವಿರುದ್ಧ ರಾಜ್ಯದ 55 ಕಡೆ ಲೋಕಾಯುಕ್ತರು ದಾಳಿ ನಡೆಸಿ, ಅಂದಾಜು 50 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ ಮಾಡಿದ್ದರು. ಆ 12 ಅಧಿಕಾರಿಗಳಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿ ಕೂಡ ಒಬ್ಬರಾಗಿದ್ದು ಅವರಿಂದ ಸುಮಾರು 5.5 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕ್ರಮಕ್ಕೆ ಶಿಫಾರಸು ಕೂಡ ಆಗಿತ್ತು.
ಇದಕ್ಕೂ ಮುನ್ನ ಅಂದರೆ ಜೂನ್‌ನಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಇಲಾಖಾ ಮುಂಭಡ್ತಿ ಸಮಿತಿ (ಡಿಪಿಸಿ)ಯು ಅಧಿಕಾರಿಗಳಿಗೆ ಸೇವಾನುಭವ ಮತ್ತಿತರ ಅಂಶಗಳ ಆಧಾರದಲ್ಲಿ ಭಡ್ತಿ ನೀಡುವ ಸಂಬಂಧ ಸರಕಾರಕ್ಕೆ ಶಿಫಾರಸು ಮಾಡಿದೆ. ಆ ಪಟ್ಟಿಯಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿಯ ಹೆಸರು ಕೂಡ ಉಲ್ಲೇಖವಾಗಿತ್ತು. ಇದಾದ ಬಳಿಕ ತಿಂಗಳ ಅಂತರದಲ್ಲಿ ಅವರ ವಿರುದ್ಧ ದಾಳಿ ನಡೆದಿದೆ. ಹಾಗಾಗಿ, ಇಲಾಖೆಯು ಅವರ ಭಡ್ತಿ ಬಗ್ಗೆ ಮರು ಪರಿಶೀಲಿಸುವಂತೆ ಪತ್ರ ಬರೆದಿದೆ. ಈ ನಡುವೆ ಹಣಕಾಸು ಇಲಾಖೆಯು ವಾಣಿಜ್ಯ ತೆರಿಗೆ ಅಧಿಕಾರಿಗೆ ಭಡ್ತಿ ನೀಡುವ ತರಾತುರಿಯಲ್ಲಿದೆ.
ಸರಕಾರ ತೀರ್ಮಾನ
ಡಿಪಿಸಿಯಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿಯ ಹೆಸರು ಉಲ್ಲೇಖೀಸಿದ್ದೂ ನಿಜ ಹಾಗೂ ಅವರ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದೂ ನಿಜ. ಈ ಬಗ್ಗೆ ಪರಿಶೀಲಿಸುವಂತೆ ಇಲಾಖೆಯಿಂದ ಸರಕಾರಕ್ಕೆ ಪತ್ರ ಹೋಗಿದೆ. ಆದರೆ ಸರಕಾರದ ಮಟ್ಟದಲ್ಲಿ ಇನ್ನೂ ಯಾವುದೇ ತೀರ್ಮಾನ ಆಗಿಲ್ಲ. ಏನಾದರೂ ನಿರ್ಧಾರ ಕೈಗೊಳ್ಳಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ಉದಯವಾಣಿ’ಗೆ ಮಾಹಿತಿ ನೀಡಿದರು.
ಅಧಿಕಾರಿಗಳು ನಿರಾತಂಕ
ಒಬ್ಬ ಅಧಿಕಾರಿಗಾಗಿ ಲೋಕಾಯುಕ್ತ ದಾಳಿಗೊಳಗಾದ ವಿವಿಧ ಇಲಾಖೆಯ ಉಳಿದ 11 ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಆ ಅಧಿಕಾರಿಗಳೂ ನಿರಾತಂಕವಾಗಿದ್ದಾರೆ. ಒಟ್ಟಾರೆ 12 ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಈ ಪೈಕಿ ವಾಣಿಜ್ಯ ತೆರಿಗೆ ಅಧಿಕಾರಿಗೆ ಮೊದಲು ಭಡ್ತಿ ನೀಡಬೇಕೋ ಅಥವಾ ಕ್ರಮ ಕೈಗೊಳ್ಳಬೇಕೋ ಎಂಬ ಜಿಜ್ಞಾಸೆ ನಡೆದಿದೆ. ಇದು ನಿರ್ಧಾರ ಆಗುವವರೆಗೂ ಉಳಿದವರ ವಿರುದ್ಧವೂ ಕ್ರಮ ಕೈಗೊಳ್ಳುವಂತಿಲ್ಲ. ಹಾಗಾಗಿ, ಅವರೆಲ್ಲ ನಿರಾತಂಕವಾಗಿ ಅಧಿಕಾರ ಅನುಭವಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು
NABARD ಸಾಲ ಮಿತಿ ಹೆಚ್ಚಿಸಿ: ನಿರ್ಮಲಾಗೆ ಸಿಎಂ ಮನವಿ
Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ
Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ
Congress: ಜಮೀರ್ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.