Gurantee Scheme: ಬಾಡಿಗೆದಾರರಿಗೆ ಡಿ-ಲಿಂಕ್ ಹೊಡೆತ; ತಟ್ಟುತ್ತಿದೆ ಗೃಹಜ್ಯೋತಿ ಬಿಸಿ!
ಬಾಡಿಗೆ ಮನೆ ಬದಲಾಯಿಸಿದವರಿಗೆ ಡಿ-ಲಿಂಕ್ ತಾಪತ್ರಯ, ಆ ಮನೆಯಲ್ಲಿ ವಾಸವಿದ್ದವರ ಹೆಸರಲ್ಲೇ ಬಳಕೆ ಅನಿವಾರ್ಯ
Team Udayavani, Jul 10, 2024, 7:52 AM IST
ಬೆಂಗಳೂರು: ಉಚಿತ ವಿದ್ಯುತ್ ಕಲ್ಪಿಸುವ ಸರಕಾರದ ಗ್ಯಾರಂಟಿ ಯೋಜನೆ “ಗೃಹಜ್ಯೋತಿ’ಯು ಮನೆ ಬದಲಾಯಿಸುತ್ತಿರುವ ಬಾಡಿಗೆದಾರರಿಗೆ ತಲೆನೋವು ತಂದಿದೆ.
ಹಳೇ ಮನೆಯಲ್ಲಿ ನೋಂದಣಿಯಾದ ಆಧಾರ್ ಸಂಖ್ಯೆ ಡಿ-ಲಿಂಕ್ ಆಗದೇ ಇರುವುದು ಹೊಸ ಫಜೀತಿಯನ್ನು ಹುಟ್ಟುಹಾಕಿದೆ. ಹೀಗಾಗಿ ಈಗ ಒಂದೇ ಕುಟುಂಬದಲ್ಲಿ ಹಲವು ಫಲಾನುಭವಿಗಳಾಗುತ್ತಿದ್ದಾರೆ. ಇದರಿಂದ ಒಂದೆಡೆ ಸರಕಾರದ ಲೆಕ್ಕವೂ ತಪ್ಪುತ್ತಿದೆ. ಜತೆಗೆ ನೂತನ ಮನೆಗೆ ಹೋದ ಬಾಡಿಗೆದಾರರರಿಗೆ “ಸರಾಸರಿ’ ಹೊಡೆತವನ್ನು ಕೊಡತೊಡಗಿದೆ.
ಈಗಾಗಲೇ ಬಾಡಿಗೆ ಮನೆಯಲ್ಲಿದ್ದು, ಶೂನ್ಯ ಬಿಲ್ ಪಡೆಯುತ್ತಿದ್ದವರು ಈಗ ಇನ್ನೊಂದು ಕಡೆ ಬಾಡಿಗೆಗೆ ಮನೆಗೆ ಹೋದಾಗ ಸಮಸ್ಯೆಯಾಗುತ್ತಿದೆ. ಉದ್ದೇಶಿತ ಗ್ಯಾರಂಟಿ ಯೋಜನೆ ಅಡಿ ಆರ್.ಆರ್. ಸಂಖ್ಯೆಯೊಂದಿಗೆ ಒಮ್ಮೆ ಆಧಾರ್ ಜೋಡಣೆ ಮಾಡಿಕೊಂಡರೆ, ಅದನ್ನು ಮತ್ತೆ ಕಡಿತಗೊಳಿಸಿ (ಡಿ-ಲಿಂಕ್) ಹೊಸದಾಗಿ ಬಾಡಿಗೆಗೆ ಹೋದ ಮನೆಯ ಆರ್.ಆರ್. ಸಂಖ್ಯೆಗೆ ಲಿಂಕ್ ಮಾಡಲು ಅವಕಾಶ ನೀಡಿಲ್ಲ.
ಸಮಸ್ಯೆ ಏನಾಗುತ್ತಿದೆ?
ಹೊಸದಾಗಿ ಬಾಡಿಗೆಗೆ ಹೋಗುವವರು ಈ ಹಿಂದಿನ ಗ್ರಾಹಕ ಬಳಕೆ ಮಾಡುತ್ತಿದ್ದ ಸರಾಸರಿ ಮಿತಿಯನ್ನೇ ಅನುಸರಿಸಬೇಕಾಗಿದೆ. ಒಂದು ವೇಳೆ ಆ ಮಿತಿ ಮೀರಿದರೆ ಫಲಾನುಭವಿಗೆ ಶೂನ್ಯ ಬಿಲ್ ಬರುವುದಿಲ್ಲ. ಉದಾಹರಣೆಗೆ ನೀವು ಕಳೆದೊಂದು ವರ್ಷದಿಂದ ಒಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಿರಿ ಅಂದುಕೊಳ್ಳೋಣ. ಅಲ್ಲಿನ ಆರ್.ಆರ್. ಸಂಖ್ಯೆಗೆ ನಿಮ್ಮ ಆಧಾರ್ ಸಂಖ್ಯೆ ಲಿಂಕ್ ಮಾಡಿಕೊಂಡಿರುತ್ತೀರಿ. ನಿಮ್ಮ ಸರಾಸರಿ ವಿದ್ಯುತ್ ಬಳಕೆ 150 ಯೂನಿಟ್ ಎನ್ನೋಣ.
ಈಗ ಕಾರಣಾಂತರದಿಂದ ಮನೆ ಬದಲಾಯಿಸುತ್ತೀರಿ. ಆ ಹೊಸ ಬಾಡಿಗೆ ಮನೆಯಲ್ಲಿ ಮೊದಲೇ ಮತ್ತೂಬ್ಬರು ಇದ್ದು ಹೋಗಿರುತ್ತಾರೆ. ಹಾಗಾಗಿ ಆ ವ್ಯಕ್ತಿಯ ಆಧಾರ್ ಸಂಖ್ಯೆಯು ಆರ್.ಆರ್. ಸಂಖ್ಯೆಗೆ ಜೋಡಣೆ ಆಗಿರುತ್ತದೆ. ಅವರ ಸರಾಸರಿ ಬಳಕೆ ಪ್ರಮಾಣ 100 ಯೂನಿಟ್ ಅಂದುಕೊಳ್ಳೋಣ. ಆಗ ಅನಿವಾರ್ಯವಾಗಿ ನೀವೂ ಬಳಕೆಯನ್ನು 100 ಯೂನಿಟ್‌ಗೆ ಸೀಮಿತಗೊಳಿಸಬೇಕಾಗುತ್ತದೆ. ಅದನ್ನು ಮೀರಿದಾಗ, ಹೆಚ್ಚುವರಿ ಬಳಕೆಯ ಬಿಲ್ ಬರುತ್ತದೆ. ಬೇಸಗೆಯಲ್ಲಿ ಬೆಂಗಳೂರು ಸೇರಿದಂತೆ ಹಲವು ಮಹಾನಗರಗಳಲ್ಲಿ ಮಕ್ಕಳ ಶಾಲೆ, ಪೋಷಕರ ವರ್ಗಾವಣೆ ಹಿನ್ನೆಲೆಯಲ್ಲಿ ಸಾಕಷ್ಟು ಅದಲು-ಬದಲು ಆಗಿವೆ. ಅವರೆಲ್ಲರಿಗೂ ಈಗ ಇದರ ಬಿಸಿ ತಟ್ಟುತ್ತಿದೆ.
10 ಲಕ್ಷ ಕುಟುಂಬಕ್ಕೆ ಶೂನ್ಯ ಬಿಲ್ ಖೋತಾ!
ಡಿ-ಲಿಂಕ್ ಸಮಸ್ಯೆಯಿಂದಾಗಿ ಶೂನ್ಯ ಬಿಲ್ ಫಲಾನುಭವಿಗಳಿಗೆ ಖೋತಾ ಆಗುತ್ತಿರುವುದು ಸ್ವತಃ ಅಂಕಿ-ಅಂಶಗಳು ಪುಷ್ಟೀಕರಿಸುತ್ತವೆ. ಕಳೆದ ಡಿಸೆಂಬರ್‌ನಲ್ಲಿ ಉದ್ದೇಶಿತ ಗೃಹಜ್ಯೋತಿ ಯೋಜನೆಗೆ ಸೇವಾಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡವರ ಸಂಖ್ಯೆ 1.65 ಕೋಟಿ ಇದ್ದು, ಶೂನ್ಯ ಬಿಲ್ ಪಡೆದವರು 95.50 ಲಕ್ಷ ಮಂದಿ. 2024ರ ಮೇ ಅಂತ್ಯಕ್ಕೆ ನೋಂದಾಯಿತರ ಸಂಖ್ಯೆ ಅಷ್ಟೇ ಇದೆ. ಆದರೆ ಶೂನ್ಯಬಿಲ್ 85 ಲಕ್ಷಕ್ಕೆ ಇಳಿಕೆಯಾಗಿದೆ ಎಂದು ಇಂಧನ ಇಲಾಖೆ ತಿಳಿಸಿದೆ.
ಮತ್ತೊಂದು ಸಮಸ್ಯೆಯೆಂದರೆ ನೂತನ ಸಂಪರ್ಕ ಇರುವ ಮನೆಗೆ ಹೋದರೂ ಈ ಹಿಂದೆ ವಾಸವಿದ್ದ ಮನೆಗೆ ಆಧಾರ್ ಸಂಖ್ಯೆ ಲಿಂಕ್ ಆಗಿರುವುದರಿಂದ ಆ ವ್ಯಕ್ತಿಯ ಆಧಾರ್ ಲಿಂಕ್ ಸಾಧ್ಯವಿಲ್ಲ. ಹೀಗಾಗಿ ಕುಟುಂಬದ ಇನ್ನೊಬ್ಬ ಸದಸ್ಯರ ಆಧಾರ್ ಕಾರ್ಡ್ ಅನ್ನು ಕೊಡಬೇಕಾಗುತ್ತದೆ.
ಡಿ-ಲಿಂಕ್‌ಗೆ ಸಿದ್ಧತೆ
ಈ ಮಧ್ಯೆ ಸರಕಾರ ಡಿ-ಲಿಂಕ್‌ಗೆ ಅವಕಾಶ ಮಾಡಿಕೊಡುವಂತೆ ಆಯಾ ಎಸ್ಕಾಂಗಳಿಗೆ ಸೂಚನೆ ನೀಡಿದೆ. ಆದರೆ ಎಸ್ಕಾಂಗಳು ಈ ನಿಟ್ಟಿನಲ್ಲಿ ಮನಸ್ಸು ಮಾಡುತ್ತಿಲ್ಲ. ಈ ಮೂಲಕ ಈಗಾಗಲೇ ನೋಂದಣಿ ಮಾಡಿಸಿಕೊಂಡವರಿಗೆ ಹೊಸದಾಗಿ ಆಧಾರ್ ಜೋಡಣೆಗೆ ಅವಕಾಶ ಇಲ್ಲದಂತಾಗಿದೆ ಎಂಬ ಆರೋಪವೂ ಕೇಳಿಬರುತ್ತಿದೆ.
-ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.