ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಚ್1ಎನ್1 ಸೋಂಕು ಪ್ರಕರಣ
Team Udayavani, Apr 27, 2019, 5:00 AM IST
ಬೆಂಗಳೂರು: ಎಚ್1ಎನ್1 ಸೋಂಕಿತರ ಪ್ರಮಾಣ ಕರ್ನಾಟಕ ಸೇರಿ ದೇಶದೆಲ್ಲೆಡೆ ಹೆಚ್ಚಳವಾಗುತ್ತಿದೆ. ರಾಜ್ಯದಲ್ಲಿ ಜನವರಿಯಿಂದ ಈವರೆಗೆ 1,428 ಪ್ರಕರಣಗಳು ದೃಢಪಟ್ಟಿದ್ದು, 39 ಮಂದಿ ಸಾವಿಗೀಡಾಗಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ ವೇಳೆ ರಾಜ್ಯದಲ್ಲಿ ತೀವ್ರತೆ ಪಡೆದಿದ್ದ ಎಚ್1ಎನ್1, ಡಿಸೆಂಬರ್ ವೇಳೆಗೆ ಒಂದಿಷ್ಟು ಹತೋಟಿಗೆ ಬಂದಿತ್ತು. ನಂತರ 2019ರಲ್ಲಿ ನಿರಂತರವಾಗಿ ವಾರಕ್ಕೆ 100ರಿಂದ 110 ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿತ್ತು. ಕರ್ನಾಟಕ-39, ಮಹಾರಾಷ್ಟ್ರ-120, ರಾಜಸ್ಥಾನ-196, ಗುಜರಾತ್-143, ಮಧ್ಯಪ್ರದೇಶ-134, ಮಂದಿ ಮೃತಪಟ್ಟಿದ್ದಾರೆ.
ತಂಪನೆ ವಾತಾವರಣಕ್ಕೆ ಹೆಚ್ಚಾಗುವ ಎಚ್1ಎನ್1 ವೈರಾಣುಗಳು ರಾಜ್ಯದ ಮಲೆನಾಡು ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚು ವ್ಯಾಪ್ತಿಸಿವೆ. ಬೇಸಿಗೆ ಹಿನ್ನೆಲೆ ಬಿಸಿಲು ಹೆಚ್ಚಿದ್ದ ಪ್ರದೇಶಗಳಲ್ಲಿ ಒಂದಿಷ್ಟು ಹತೋಟಿಗೆ ಬಂದಿದೆ. ಈಗ ರಾಜ್ಯದ ವಿವಿಧೆಡೆ ಮಳೆ ಬೀಳುತ್ತಿರುವ ಕುರಿತು ವರದಿ ಬರುತ್ತಿದ್ದು, ಸೋಂಕು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ, ಸಾರ್ವಜನಿಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸಾವಿನ ಸಂಖ್ಯೆ ಹೆಚ್ಚು: ಕಳೆದ ವರ್ಷದ ಈ ವೇಳೆಗೆ ಕೇವಲ 16 ಮಂದಿಗೆ ರೋಗದ ಸೋಂಕಿತ್ತು, ಯಾರೂ ಮೃತಪಟ್ಟಿರಲಿಲ್ಲ. 2018ರ ವರ್ಷಾಂತ್ಯಕ್ಕೆ ಒಟ್ಟು 1,733 ಮಂದಿಗೆ ಸೋಂಕು ತಗುಲಿ, 87 ಮಂದಿ ಸಾವಿಗೀಡಾಗಿದ್ದರು. ಆದರೆ, ಈ ಬಾರಿ ವರ್ಷದ ಮೊದಲ ಮೂರೂವರೆ ತಿಂಗಳಲ್ಲಿಯೇ 1,427 ಮಂದಿಗೆ ಸೋಂಕಿದ್ದು, 39 ಮಂದಿ ಮೃತರಾಗಿದ್ದಾರೆ. ಪ್ರಸಕ್ತ ಸಾಲಿನಲ್ಲಿ 5,518 ಮಂದಿ ಶಂಕಿತರ ಗಂಟಲು ದ್ರಾವಣದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, ಆ ಪೈಕಿ 1,427 ಮಂದಿಯಲ್ಲಿ ಸೋಂಕಿರುವುದು ದೃಢಪಟ್ಟಿದೆ.
ಮಲೆನಾಡು, ಕರಾವಳಿಯಲ್ಲಿಯೇ ಹೆಚ್ಚು: ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಎಚ್1ಎನ್1 ಸೋಂಕಿನ ಪ್ರಮಾಣ ಹೆಚ್ಚಿದೆ. ಇದಕ್ಕೆ ಮಲೆನಾಡಿನ ಭಾಗದ ತಂಪನೆ ವಾತಾವರಣ ಹಾಗೂ ಕರಾವಳಿಗೆ ಹೊರ ರಾಜ್ಯಗಳಿಂದ ಬಂದು ಹೋಗುವವರ ಸಂಖ್ಯೆ ಹೆಚ್ಚಿರುವುದೇ ಕಾರಣ ಎಂದು ವೈದ್ಯರು ಹೇಳುತ್ತಾರೆ.
ಶಿವಮೊಗ್ಗದಲ್ಲಿ ಈವರೆಗೆ 136 ಮಂದಿಗೆ ಸೋಂಕು ತಗುಲಿದ್ದು, 6 ಮಂದಿ ಮೃತಪಟ್ಟಿದ್ದಾರೆ. ಉತ್ತರ ಕನ್ನಡದಲ್ಲಿ 25 (5 ಸಾವು) ಮೈಸೂರಿನಲ್ಲಿ 120 (4 ಸಾವು)ಉಡುಪಿಯಲ್ಲಿ 196, ದಕ್ಷಿಣ ಕನ್ನಡದಲ್ಲಿ 146 ಮಂದಿಗೆ ಸೋಂಕು ತಗುಲಿದೆ. ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 227, ಬೆಂಗಳೂರು ನಗರ ವ್ಯಾಪ್ತಿಯಲ್ಲಿ 77 (2 ಸಾವು), ಬೆಂಗಳೂರು ಗ್ರಾಮಾಂತರ 6 (1 ಸಾವು) ದೃಢಪಟ್ಟಿದೆ.
ಸೋಂಕಿನ ಲಕ್ಷಣಗಳೇನು?: ಶ್ವಾಸಕೋಶದ ಸೋಂಕು, ನೆಗಡಿ, ಕೆಮ್ಮು, ಜ್ವರದ ಜತೆಗೆ ಉಸಿರಾಟದ ತೊಂದರೆ, ತೀವ್ರ ಮೈ-ಕೈ ನೋವು ಕಾಣಿಸಿಕೊಳ್ಳುವುದು, ವಾಂತಿ, ಅತಿಸಾರ, ವಾಕರಿಕೆ ಮತ್ತು ಬಾಯಿ ಅಥವಾ ಗಂಟಲಿನಲ್ಲಿ ಗುಳ್ಳೆಗಳು ಏಳುತ್ತವೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳ ಸಭೆ ಕರೆದು ಅಗತ್ಯ ಕ್ರಮಕ್ಕೆ ಸೂಚಿಸಲಾಗಿದೆ. ಜನರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ರೋಗ ಲಕ್ಷಣ ಪತ್ತೆಯಾಗುವ ವ್ಯಕ್ತಿಗಳಿಗೆ ರಕ್ತ ಪರೀಕ್ಷೆಯ ವರದಿ ಬರುವವರೆಗೆ ಕಾಯದೆ ನೇರವಾಗಿ ಟ್ಯಾಮಿ ಫೋ ಮಾತ್ರೆ ನೀಡಿ ಯಾವುದೇ ಕೊರತೆಯಾಗದಂತೆ ಆರೈಕೆ ಮಾಡಲು ತಿಳಿಸಿದ್ದೇವೆ. ಸಾರ್ವಜನಿಕರು ಮುಂಜಾಗೃತಿ ವಹಿಸಬೇಕು. ರೋಗ ಲಕ್ಷಣ ಕಂಡ ಕೂಡಲೇ ಆಸ್ಪತ್ರೆಗೆ ತೆರಳಿ ಪರೀಕ್ಷಿಸಿಕೊಳ್ಳಬೇಕು.
-ಶಿವರಾಜ್ ಸಜ್ಜನ್ ಶೆಟ್ಟಿ, ಜಂಟಿ ನಿರ್ದೇಶಕರು, ಸಾಂಕ್ರಾಮಿಕ ರೋಗ ವಿಭಾಗ, ಆರೋಗ್ಯ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.