ಅಕ್ಷಯ ತೃತೀಯಾ-ಒಳಿತು ಅಕ್ಷಯವಾಗಲಿ
Team Udayavani, Apr 22, 2023, 7:42 AM IST
ನಮ್ಮ ಸನಾತನ ಸಂಸ್ಕತಿಯಲ್ಲಿ ಹಬ್ಬಗಳಿಗೆ, ಹರಿದಿನಗಳಿಗೆ ವಿಶಿಷ್ಟವಾದ ಸ್ಥಾನವಿದೆ. ಇವು ನಮ್ಮ ಪರಂಪರೆಯ ಹಿನ್ನೆಲೆ ಮತ್ತು ಮಹತ್ವವನ್ನು ನೆನಪಿಸಿಕೊಡುವ ದಿನಗಳು. ಪಾಪವನ್ನು ಕಳೆದುಕೊಳ್ಳಲು ಜತೆಗೆ ಪುಣ್ಯವನ್ನು ಸಂಪಾದಿಸಿಕೊಳ್ಳಲು ಮೀಸಲಾದ ದಿನಗಳು. ಗುರು ಹಿರಿಯರನ್ನು ಕಂಡು ಅವರ ಆಶೀರ್ವಾದವನ್ನು ಪಡೆದುಕೊಳ್ಳಲು, ಮನೆಮಂದಿಯೆಲ್ಲರೂ ಬೆರೆತು ಸಿಹಿಯುಂಡು ಸಂಭ್ರಮವನ್ನು ಅನುಭವಿಸಲು ನಿಗದಿಯಾದ ದಿನಗಳು. ಇವೆಲ್ಲವುಗಳಿಗಿಂತಲೂ ಮಿಗಿಲಾಗಿ ಇವು ದೇವರ ಆರಾಧನೆಗೆ ಪ್ರಶಸ್ತವಾದ ದಿವ್ಯದಿನಗಳು.
ಇಂದು ಅಕ್ಷಯ ತೃತೀಯಾ. ಆಡುಮಾತಿನಲ್ಲಿ ಅಕ್ಷಯ ತದಿಗೆ. ವೈಶಾಖ ಮಾಸದ ಮೂರನೇ ದಿನ. ಅಕ್ಷಯವಾದುದನ್ನು ಸಂಪಾದಿಸಿಕೊಡುವ ಪರ್ವದಿನ. ಸಂಪತ್ತನ್ನು ಸಂಪಾದಿಸುವ ಮತ್ತು ಅದನ್ನು ಉಳಿಸಿಕೊಳ್ಳಲು ಅನುಕೂಲಕರವಾದ ದಿನವೇ ಅಕ್ಷಯ ತೃತೀಯಾ. ಹಿಂದೆ ಪಾಂಚಾಲ ದೇಶದ ಅಧಿಪತಿಯಾದ ಪುರುಯಶನು ತನಗೆ ಒದಗಿದ ಆಪತ್ತನ್ನು ನಿವಾರಿಸಿಕೊಳ್ಳಲು ಭಗ ವಂತನನ್ನು ಅನನ್ಯ ಭಕ್ತಿಯಿಂದ ಆರಾಧಿಸಿದನು. ಸುಪ್ರೀತನಾದ ಭಗವಂತನು ವೈಶಾಖ ಮಾಸದ ತೃತೀಯ ದಿನದಂದು ಪ್ರತ್ಯಕ್ಷನಾಗಿ ರಾಜನ ಆಪತ್ತನ್ನು ನಿವಾರಿಸಿದ್ದಲ್ಲದೆ ಆತನಿಗೆ ಸಕಲೈಶ್ವರ್ಯಗಳನ್ನೂ ಅನುಗ್ರಹಿಸಿದನು. ಜತೆಗೆ ಈ ದಿನವು ಅಕ್ಷಯ ತೃತೀಯಾ ಎಂದು ಪ್ರಸಿದ್ಧವಾಗಲೆಂದು ಅನುಗ್ರಹಿಸಿ ದನು. ಹಾಗಾಗಿ ಇದು ಲಕ್ಷ್ಮೀದೇವಿಗೂ ಪ್ರಿಯ ವಾಯಿತು.
ಲಕ್ಷ್ಮೀನಾರಾಯಣರ ಆರಾಧನೆ ಯಲ್ಲಿ ತೊಡಗಿಕೊಳ್ಳುವವರಿಗೆ ಶುಭದಿನ ವಾಯಿತು. ಸಕಲೈಶ್ವರ್ಯಗಳನ್ನು ನೀಡಬಲ್ಲ ದಿನವಾದುದರಿಂದ ಸಂಪತ್ತನ್ನು ಬಯಸುವ ಮಂದಿಗೂ ಇದು ಪ್ರಿಯವಾಯಿತು. ಸಂಪತ್ತು ಎಂದೊಡನೆ ಮೊದಲಾಗಿ ಕಾಣಿಸಿಕೊಳ್ಳುವ ವಸ್ತು ಬಂಗಾರ. ಅದರ ಮೌಲ್ಯ ಕ್ಷಯಿಸದು. ಜತೆಗದು ಸುವರ್ಣ. ಮೋಡಿಯ ಬಣ್ಣ. ಪ್ರತಿಷ್ಠೆಯ ಸಂಕೇತ. ಸೌಂದರ್ಯದ ಪ್ರತೀಕ. ಈ ಹಿನ್ನೆಲೆಯಲ್ಲಿ ಇಂದು ಬಂಗಾರವನ್ನು ಕೊಳ್ಳುವ ಕ್ರಮವು ಬೆಳೆದು ಬಂದಿದೆ. ಅಕ್ಷಯ ತೃತೀಯಾದಂದು ಚಿನ್ನಾಭರಣ ಕೊಂಡರೆ ನಮ್ಮಲ್ಲಿರುವ ಸಂಪತ್ತು ವೃದ್ಧಿಯಾಗುತ್ತದೆ ಅಂದರೆ ಅಕ್ಷಯವಾಗುತ್ತದೆ ಎಂಬ ನಂಬಿಕೆ ಆಸ್ತಿಕ ಬಾಂಧವರದ್ದಾಗಿದೆ.
ಇದು ಗಂಗೆಯು ಧರೆಗಿಳಿದ ದಿನ, ಪಾಂಡವರಿಗೆ ಶ್ರೀಕೃಷ್ಣನ ಅನುಗ್ರಹದಿಂದ ಅಕ್ಷಯ ಪಾತ್ರೆಯು ದೊರೆತ ದಿನ ಎಂಬ ರೂಢಿಯ ಮಾತುಗಳಿವೆ. ಈ ದಿನ ಮಾಡಿದ ತೀರ್ಥಸ್ನಾನ, ದಾನ, ಜಪ, ಯಜ್ಞ ಮೊದಲಾದ ಶ್ರೇಯಸ್ಕರವಾದ ಕಾರ್ಯಗಳು ಅಕ್ಷಯವಾದ ಶುಭಫಲವನ್ನು ನೀಡುವವು ಎಂದು ಶಾಸ್ತ್ರ ಮತ್ತು ಪುರಾಣಗಳಲ್ಲಿ ಹೇಳಲಾಗಿದೆ. ಭಗವದನುಗ್ರಹವನ್ನು ತುಂಬಿಸಿಕೊಂಡ ಫಲವತ್ತಾದ ಕಾಲವಿದು. ಇಂದಿನ ಆಚರಣೆಗೆ ಅನಂತವಾದ ಫಲವಿದೆ ಎಂಬುದಕ್ಕೆ ಇಂದ್ರನೇ ಸಾಕ್ಷಿ. ಬಲಿ ಚಕ್ರವರ್ತಿಯಿಂದ ಪರಾಜಿತನಾದ ಇಂದ್ರನು ಇತರ ದೇವತೆಗಳಿಂದ ಒಡಗೂಡಿ ಬೃಹಸ್ಪತ್ಯಾಚಾರ್ಯರ ಮಾರ್ಗದರ್ಶನದಂತೆ ಭಗವಂತನನ್ನು ಈ ಪರ್ವ ದಿನದಲ್ಲಿ ಆರಾಧಿಸಿದನು. ಕೇವಲ ಒಂದು ದಿನದ ಆರಾಧನೆಯಿಂದ ಆತನು ಅಕ್ಷಯವಾದ ಭಗವದನುಗ್ರಹವನ್ನು ಸಂಪಾದಿಸಿ, ಮರಳಿ ಇಂದ್ರ ಪದವಿಯನ್ನು ಹೊಂದಿದನು. ಅಂದಿನಿಂದ ಎಲ್ಲ ಶುಭ ಕಾರ್ಯಗಳಿಗೂ ಈ ದಿನವು ಪ್ರಶಸ್ತವಾದ ದಿನವೆಂದು ಪರಿಗಣಿತವಾಯಿತು. ಈ ದಿನವು ಜೈನರಿಗೂ ಪವಿತ್ರವಾದ ದಿನ. ತೀರ್ಥಂಕರರಲ್ಲಿ ಮೊದಗಲಿನಾದ ವೃಷಭ ದೇವನು ತನ್ನ ಉಪವಾಸ ವ್ರತವನ್ನು ಸಮಾಪ್ತಿಗೊಳಿಸಿ, ಭಕ್ತರನ್ನು ಅನುಗ್ರಹಿಸಿದ ದಿನವಾಗಿದೆ.
ಈ ದಿನಕ್ಕೆ ಇನ್ನೊಂದು ಮಹತ್ವವಿದೆ. ದುಷ್ಟ ಕ್ಷತ್ರಿಯರ ಸಂಹಾರಕ್ಕಾಗಿ ಭಗವಂತನು ಪರಶುರಾಮನಾಗಿ ಅವತರಿಸಿದ ದಿನವಿದು. ಪರಶುರಾಮ ಜಯಂತಿ. ಕ್ಷಯಿಸುತ್ತಿದ್ದ ಸಜ್ಜನ ವೃಂದಕ್ಕೆ ಶಸ್ತ್ರಶಾಸ್ತ್ರಗಳಿಂದ ಅಕ್ಷಯಾಭಯವು ದೊರೆತ ಸುದಿನ. ಜಗತ್ತನ್ನು ಪೀಡಿಸುತ್ತಿರುವ ದುಷ್ಟರ ನಿಗ್ರಹದಲ್ಲಿ ತೊಡಗಿದವರಿಗೆ ಬಲ ವನ್ನು ನೀಡು ಎಂದು ಎಲ್ಲರೂ ಭಗವಂತ ನನ್ನು ಪ್ರಾರ್ಥಿಸಬೇಕಾದ ದಿನವಿದು. ನಮ್ಮ ಸರ್ವಾಂಗೀಣ ಅಭಿವೃದ್ಧಿಗೆ ಈ ದಿನ ಮುನ್ನುಡಿಯನ್ನು ಬರೆಯುವಂತಾಗಲಿ. ಬೆಳಗ್ಗೆ ಬೇಗನೆ ಎದ್ದು ಗಂಗೆಯನ್ನು ಸ್ಮರಿಸಿ ತೀರ್ಥಸ್ನಾನವನ್ನು ಮಾಡೋಣ. ಬಳಿಕ ಜಪ, ಅನುಷ್ಠಾನ, ಪೂಜೆ, ದೇವರ ದರ್ಶನ, ಗುರುಗಳ ಸಂದರ್ಶನ, ಆಶೀರ್ವಾದ, ನಿರ್ಗತಿಕರಿಗೆ ದಾನ, ಪುರಾಣಾದಿಗಳ ಶ್ರವಣ, ಶ್ರೇಯಸ್ಕರವಾದ ಕಾರ್ಯಗಳ ಆರಂಭ – ಹೀಗೆ ವಿವಿಧ ಕಾರ್ಯಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳೋಣ. ಕೆಟ್ಟದ್ದು ಕ್ಷಯಿಸಲಿ. ಒಳಿತು ಅಕ್ಷಯವಾಗಲಿ.
ಡಾ| ಅಮೃತೇಶ ಆಚಾರ್ಯ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.