‘ಪ್ರಧಾನಿಯಾದುದು ನನ್ನ ಸುಯೋಗ’: ದೇವೇಗೌಡರು ಪ್ರಧಾನಿಯಾಗಿ 25 ವರ್ಷ
Team Udayavani, Jun 1, 2021, 7:20 AM IST
ಬೆಂಗಳೂರು: ಸಾಮಾನ್ಯ ರೈತ ಕುಟುಂಬದಿಂದ ಬಂದ ನಾನು ಈ ದೇಶದ ಚುಕ್ಕಾಣಿ ಹಿಡಿಯುತ್ತೇನೆ ಎಂದು ಕನಸು ಮನಸಿನಲ್ಲಿಯೂ ಭಾವಿ ಸಿರಲಿಲ್ಲ. ಅಂತಹ ಸುಯೋಗ ಲಭಿಸಿದ್ದು ನನ್ನ ಪುಣ್ಯ…
– ದೇಶದ ಪ್ರಧಾನಿಯಾಗಿ ಹತ್ತು ತಿಂಗಳ ಅತ್ಯಲ್ಪ ಅವಧಿಯಲ್ಲೇ ವಿಶ್ವ ಗುರುತಿಸುವ ಸಾಧನೆ ಮಾಡಿ ಕರ್ನಾಟಕಕ್ಕೆ ಹೆಮ್ಮೆ ತಂದ ಎಚ್.ಡಿ. ದೇವೇಗೌಡರ ಮಾತುಗಳಿವು.
ದೇಶದ ಪ್ರಧಾನಿಯಾಗಿ 25 ವರ್ಷ ಸಂದ ಸಂದರ್ಭದಲ್ಲಿ “ಉದಯವಾಣಿ’ಗೆ ವಿಶೇಷ ಸಂದರ್ಶನ ನೀಡಿದ ಅವರು, ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಗೌರವ ದೊರೆಯಲು ಕಾರಣರಾದ ರಾಜ್ಯದ ಜನತೆಗೆ ನಾನು ಚಿರಋಣಿ. ಬದುಕಿರುವವರೆಗೂ ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ಅನುಭವದ ಆಧಾರದ ಮೇಲೆ ಮಾರ್ಗದರ್ಶನ ನೀಡಲು ಸದಾ ಸಿದ್ಧ ಎಂದು ಭಾವುಕರಾಗಿ ಹೇಳಿದರು.
ಆರ್ಥಿಕ ಸ್ಥಿತಿ ಸುಧಾರಣೆ
94 ಶತಕೋಟಿ ಡಾಲರ್ ವಿದೇಶೀ ಸಾಲ, 3.50 ಲಕ್ಷ ಕೋಟಿ ರೂ. ಸ್ವದೇಶಿ ಸಾಲ ಇತ್ತು. ಇದನ್ನೆಲ್ಲ ನಿಭಾಯಿಸಿ ಅಭಿವೃದ್ಧಿಗೆ ಒತ್ತು ನೀಡಲಾಯಿತು. ಪಂಜಾಬ್‌ನಲ್ಲಿ ಭತ್ತ ಬೆಳೆದ ರೈತರಿಗೆ ಸಂಕಷ್ಟ ಬಂದಾಗ ಅವರ ನೆರವಿಗೆ ಧಾವಿಸಿದ್ದರಿಂದ ನನ್ನ ಗೌರವಾರ್ಥ ಭತ್ತದ ತಳಿಗೆ ನನ್ನ ಹೆಸರಿಟ್ಟರು. ಪ್ರಧಾನಿಯಾಗಿದ್ದಾಗ ಜಮ್ಮು ಕಾಶ್ಮೀರ, ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡಿ ಅಲ್ಲಿನ ಅಭಿವೃದ್ಧಿಗೆ ಶ್ರಮಿಸಿದೆ ಎಂದು ಗೌಡರು ಹೇಳಿದರು.
ಜೆಡಿಎಸ್ ಬಲವರ್ಧನೆ
ರಾಜ್ಯದಲ್ಲಿ ಪ್ರಬಲ ಶಕ್ತಿಯಾಗಿ ಜೆಡಿಎಸ್ ಕಟ್ಟುವ ಸಂಕಲ್ಪ ನಮ್ಮದು. ಲಕ್ಷಾಂತರ ಕಾರ್ಯಕರ್ತರು ಪಕ್ಷ ಕಟ್ಟುವ ಕೆಲಸದಲ್ಲಿ ಜತೆಗೂಡಿದ್ದಾರೆ. ಇತರ ರಾಜ್ಯಗಳಲ್ಲೂ ನಮ್ಮದೇ ಆದ ಶಕ್ತಿ ಹೊಂದಿದ್ದೇವೆ. ನಾಡಿನ ಹಿತಾಸಕ್ತಿ ವಿಚಾರದಲ್ಲಿ ನಾವೆಂದೂ ಯಾರ ಜತೆಯೂ ರಾಜಿ ಪ್ರಶ್ನೆಯೇ ಇಲ್ಲ.
ದೇಶದಲ್ಲಿ ಪ್ರಾದೇಶಿಕ ಪಕ್ಷಗಳನ್ನು ಯಾರಾದರೂ ಒಗ್ಗೂಡಿಸಿ ಐಕ್ಯತೆ ಮೂಡಿಸಿಕೊಂಡು ಮುನ್ನಡೆಸಿದರೆ ರಾಜಕೀಯ ಬದಲಾವಣೆ ಸಾಧ್ಯವಿದೆ. ನಾನಂತೂ ಯಾರ ಬಳಿಯೂ ಹೋಗುವುದಿಲ್ಲ. ನಾನು ಮಾರ್ಗದರ್ಶನ ನೀಡುವಂತಹ ಸನ್ನಿವೇಶ ಬರಬಹುದು ಅಥವಾ ಬರದೇ ಹೋಗಬಹುದು.
– ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.