ತಾಕತ್ತಿದ್ದರೆ ನಾನು ಹೇಳಿದ ವ್ಯಕ್ತಿಯನ್ನೇ ಸಿಎಂ ಅಭ್ಯರ್ಥಿಯೆಂದು ಘೋಷಿಸಿ: ಹೆಚ್ ಡಿಕೆ ಸವಾಲು
ಹೇಳಿಕೆ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ
Team Udayavani, Feb 7, 2023, 8:37 PM IST
ಬೆಂಗಳೂರು: ಮರಾಠಿ ಪೇಶ್ವೆಗಳ ಡಿಎನ್ ಎ ವ್ಯಕ್ತಿಯ ಬಗ್ಗೆ ನಾನು ಕೊಟ್ಟ ಹೇಳಿಕೆಯನ್ನು ವಾಪಸ್ ಪಡೆಯುವ ಪ್ರಶ್ನೆ ಇಲ್ಲ, ಕ್ಷಮೆಯನ್ನೂ ಕೇಳುವುದಿಲ್ಲ. ತಾಕತ್ತಿದ್ದರೆ, ನಾನು ಹೇಳಿದ ವ್ಯಕ್ತಿಯನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿ ಬಿಜೆಪಿಯವರು ಚುನಾವಣೆಗೆ ಹೋಗಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಸವಾಲು ಹಾಕಿದರು.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಕುಮಾರಸ್ವಾಮಿ ಅವರು, ಪ್ರಹ್ಲಾದ್ ಜೋಷಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು ಹಾಗೂ ತಮ್ಮ ಹೇಳಿಕೆಯನ್ನು ತಿರುಚಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಹರಿಹಾಯ್ದರು.
ಬಿಜೆಪಿಯಿಂದ ಯಾರು ಮುಖ್ಯಮಂತ್ರಿ ಆಗಬೇಕು ಎಂದು ನಾನು ಹೇಳಿಲ್ಲ. ಅವರು ಯಾರನ್ನು ಬೇಕಾದರೂ ಸಿಎಂ ಮಾಡಿಕೊಳ್ಳಲಿ. ಬೇಕಾದರೆ ಪ್ರಹ್ಲಾದ್ ಜೋಷಿ ಅವರನ್ನೇ ಸಿಎಂ ಮಾಡುತ್ತೇವೆ ಎಂದು ಘೋಷಣೆ ಮಾಡಲಿ ಎಂದು ಹೇಳಿದರು.
ಬ್ರಾಹ್ಮಣ, ದಲಿತ ಯಾವುದೇ ಸಮಾಜಕ್ಕೂ ಅಪಮಾನ ಮಾಡುವ ಕುಟುಂಬದಿಂದ ನಾನು ಬಂದಿಲ್ಲ. ಈ ದೇಶದ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿ, ಪ್ರಧಾನಿ ಆಗಬಹುದು. ಆದರೆ, ನಿರ್ದಿಷ್ಟವಾದ ಈ ವ್ಯಕ್ತಿಯನ್ನು ಬಿಜೆಪಿಯವರು ಸಿಎಂ ಮಾಡಲು ಹೊರಟಿದ್ದಾರೆ. ನನಗೆ ಅವರ ಬಗ್ಗೆ ತಕರಾರು ಇಲ್ಲ, ತಕರಾರು ಇರುವುದು ಅವರ ಮೂಲದ ಬಗ್ಗೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಕಳೆದ ಮೂರು ವರ್ಷದಿಂದ ನಮ್ಮ ರಾಜ್ಯದಲ್ಲಿ ನಡೆದ ಒಂದೊಂದು ಘಟನೆ ನೋಡಿ. ಕರ್ನಾಟಕಕ್ಕೂ ಸಾವರ್ಕರ್ ಗೂ ಸಂಬಂಧ ಏನು? ಸುವರ್ಣಸೌಧದಲ್ಲೂ ಸಾವರ್ಕರ್ ಫೋಟೋ ಹಾಕಾಯಿತು. ಈಗ ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸಿದ, ಶೃಂಗೇರಿ ಮಠದ ಮೇಲೆ ದಳು ನಡೆಸಿದ, ಶಿವಾಜಿ ಮತ್ತು ಗಾಂಧೀಜಿ ಅವರನ್ನು ಹತ್ಯೆ ಮಾಡಿದ ಮರಾಠಿ ಪೇಶ್ವೆಗಳ ಮೂಲದ ವ್ಯಕ್ತಿಯನ್ನು ರಾಜ್ಯದ ಮೇಲೆ ಹೇರಲು ಬಿಜೆಪಿ ಹೊರಟಿದೆ. ಅದಕ್ಕೆ ನನ್ನ ವಿರೋಧವಿದೆ ಎಂದು ಅವರು ಸ್ಪಷ್ಟಪಡಿಸಿದರು.
ಬಿಜೆಪಿ ಸಮಾಜ ಹೊಡೆಯುವ ಕೆಲಸಕ್ಕೆ ಕೈ ಹಾಕಿದೆ. ಮೀಸಲಾತಿ ವಿಚಾರದಲ್ಲೂ ಗೊಂದಲ ಸೃಷ್ಟಿ ಮಾಡಿದ್ದಾರೆ. ಮೂಗಿಗೆ ತುಪ್ಪ ಸವರುವ ಜನರನ್ನು ನಾವು ನೋಡಿದ್ದೇವೆ. ಇವರು ಈಗ ತಲೆಗೆ ತುಪ್ಪ ಸವರಿದ್ದಾರೆ, ಜನರಿಗೆ ವಾಸನೆ ಕೂಡ ಗೊತ್ತಾಗಬಾರದು ಎನ್ನುವ ಉದ್ದೇಶ ಇವರದ್ದು. ಹಿಂಬಾಗಿಲಿನಿಂದ ರಾಜಕೀಯ ಮಾಡ್ತಾ ಇದ್ದಾರೆ ಇವರು ಎಂದು ಅವರು ಟೀಕಾಪ್ರಹಾರ ನಡೆಸಿದರು.
ಕಳೆದ ಮೂರು ದಿನಗಳ ಹಿಂದೆ ನಾನು ಕೊಟ್ಟ ಒಂದು ಹೇಳಿಕೆಯನ್ನು ಅವರದ್ದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ರಾಜ್ಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಮಾಜದಲ್ಲಿ ನನ್ನ ಹೇಳಿಕೆಯನ್ನು ಒಂದೊಂದು ವಿಶ್ಲೇಷಣೆ ರೀತಿ ಮಾತಾಡ್ತಾ ಇದ್ದಾರೆ. ನಾನು ಜಾತಿ ರಾಜಕಾರಣಕ್ಕೆ ಪ್ರಾಶಸ್ತ್ಯ ಕೊಟ್ಟವನಲ್ಲ. ಜಾತಿಯ ಹೆಸರಿನಿಂದ ರಾಜಕಾರಣ ಮಾಡಿದವನಲ್ಲ. ನಮ್ಮ ಕುಟುಂಬ ಯಾವುದೇ ಸಮಾಜಕ್ಕೆ ಅಪಮಾನ ಮಾಡಿಲ್ಲ. ಅಂಥ ಸಂಸ್ಕಾರ ನಮ್ಮದಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.
ಕುಮಾರಸ್ವಾಮಿ ಹೇಳಿಕೆಯಲ್ಲಿ ಬದಲಾವಣೆ ಆಗಿದೆ ಎಂದು ಕೆಲವರು ಹೇಳಿದ್ದಾರೆ. ಯೂಟರ್ನ್ ಹೊಡೆದಿದ್ದಾರೆ ಎಂದು ಟೀಕಿಸಿದ್ದಾರೆ. ನಾನು ಯಾವ ಟರ್ನೂ ಹೊಡೆದಿಲ್ಲ, ಹೊಡೆಯೋದು ಇಲ್ಲ. ಅವರವರು ಅವರದ್ದೇ ಆದ ರೀತಿಯಲ್ಲಿ ಅರ್ಥೈಸಿಕೊಂಡಿದ್ದಾರೆ ಎಂದರು ಅವರು
ಸಿಟಿ ರವಿಗೆ ತಿರುಗೇಟು ಕೊಟ್ಟ ಮಾಜಿ ಮುಖ್ಯಮಂತ್ರಿ:
ತಮ್ಮ ಬಗ್ಗೆ ಮಾತನಾಡಿರುವ ಶಾಸಕ ಸಿಟಿ ರವಿ ಅವರಿಗೆ ತಿರುಗೇಟು ಕೊಟ್ಟ ಮಾಜಿ ಮುಖ್ಯಮಂತ್ರಿಗಳು, ನಾನು ಅವರ ಬಗ್ಗೆ ಮಾತಾಡೇ ಇಲ್ಲ. ಆದರೆ, ಅವರೇ ಕಾಲು ಕೆರೆದುಕೊಂಡು ಕಿತಾಪತಿ ಮಾಡುತ್ತಿದ್ದಾರೆ. ನಾನು ಹೇಳಿದ್ದೇನು? ಅವರು ಹೇಕುತ್ತಿರುವುದೇನು? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.
ಅಮಾಯಕ ಕುಟುಂಬದ ಮೇಷ್ಟ್ರು ಒಬ್ಬರು ಕೆಆರ್ ಎಸ್ ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡರು. ಅವರು ಯಾಕೆ ಸತ್ತರು? ಅದಕ್ಕೂ, ಸಿಟಿ ರವಿ ಅವರಿಗೆ ಇರುವ ಸಂಬಂಧ ಏನು? ಇದಕ್ಕೆ ಅವರು ಯಾಕೆ ಉತ್ತರ ಕೊಡುತ್ತಿಲ್ಲ, ಇವರೆಲ್ಲಾ ಸಚಾಗಳು, ನಾನು ಕಾಣದೇ ಇರುವವರಾ? ಎಚ್ಚರಿಕೆ ಇರಲಿ ನಮ್ಮ ಬಗ್ಗೆ ಮಾತಾಡುವಾಗ ಎಂದು ಕುಮಾರಸ್ವಾಮಿ ಕಿಡಿಕಾರಿದರು.
ಕರ್ನಾಟಕ ಪುಣ್ಯಭೂಮಿ. ಈ ನೆಲಕ್ಕೆ ತನ್ನದೇ ಆದ ಸಂಸ್ಕೃತಿ, ಪರಂಪರೆ ಇದೆ. ಶೃಂಗೇರಿಯಲ್ಲಿ ವಿದ್ಯಾರಣ್ಯರು ಕಟ್ಟಿಸಿದ್ದ ಚಂದ್ರಮೌಶೇಶ್ವರ ದೇವಸ್ಥಾನದ ಮೇಲೆ ದಾಳಿ ದಾಳಿ ಮಾಡಿದವರು ಯಾರು? ದಾಳಿ ಮಾಡಿದ ಆ ಪೇಶ್ವೆಗಳನ್ನು ಹಿಮ್ಮೆಟ್ಟಿಸಿದವರು ಯಾರು? ಗಾಂಧಿ ಕೊಂದಿದ್ದವರು, ಶಿವಾಜಿ ಕೊಂದವರು ಯಾವ ಕಡೆಯವರು? ಇದರ ಬಗ್ಗೆ ಬಿಜೆಪಿಗರು ಯಾಕೆ ಮಾತನಾಡುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.
ಶ್ರೀ ಶಂಕರರ ಫೋಟೋ ತೋರಿಸಿದ ಹೆಚ್ಡಿಕೆ:
ಯಾರ ಮನಸ್ಸಿಗೆ ನೋವಾಗುವಂತೆ ನಾನು ಮಾತಾಡಿಲ್ಲ ಎಂದು ಒತ್ತಿ ಹೇಳಿದ ಅವರು, ಈ ಕಚೇರಿಯಲ್ಲಿರುವ ಫೋಟೋಗಳನ್ನು ನೋಡಿ. ಇಲ್ಲಿ ಮಾತ್ರ ಅಲ್ಲ, ನಮ್ಮ ಮನೆ, ಬೆಡ್ ರೂಂ ನಲ್ಲೂ ಇವೇ ಫೋಟೋ ಇದೆ ಎಂದು ತಮ್ಮ ಕಚೇರಿಯಲ್ಲಿದ್ದ ಶ್ರೀ ಆದಿಶಂಕರರು ಹಾಗೂ ಶೃಂಗೇರಿ ಮಠದ ಹಿರಿಯ, ಕಿರಿಯ ಜಗದ್ಗುರುಗಳ ಫೋಟೋಗಳನ್ನು ತೋರಿಸಿದರು.
ಪೇಶ್ವೆ ಡಿಎನ್ ಎ ವಿಷಯ ಎತ್ತಿರುವುದು ಯಾವುದೇ ದಾಳ ಉರುಳಿಸುವುದಕ್ಕೆ ಅಲ್ಲ. ಮುಂದಿನ ದಿನದ ಪರಿಸ್ಥಿತಿ ಏನಾಗಲಿದೆ ಅಂತ ಹೇಳಿದ್ದು. ಹುಬ್ಬಳ್ಳಿಗೆ ಪ್ರಧಾನಿ ಮೋದಿ ಅವರು ಬಂದಾಗ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ವೇದಿಕೆಗೇ ಹತ್ತಿಸಲಿಲ್ಲ. ಅಪಮಾನ ಮಾಡಿದರು. ಯಾಕೆ ಕೂರಿಸಲಿಲ್ಲ ಅವರನ್ನು? ನನ್ನ ಮೈತ್ರಿ ಸರ್ಕಾರ ತೆಗೆದು ಸಿಎಂ ಅದ ಯಡಿಯೂರಪ್ಪ ಅವರನ್ನು ಯಾಕೆ ಇಳಿಸಿದರು? ಬಿಜೆಪಿ ಹೈಕಮಾಂಡ್ ಯಾವ ರೀತಿ ನಡೆದುಕೊಳ್ಳುತ್ತಿದೆ? ಮಾತನಾಡಿದರೆ ಇಡಿ, ಐಟಿ ಎಂದು ಹೆದರಿಸುತ್ತಾರೆ. ಅದರ ಹಿಂದೆ ಇರುವ ಕಾಣದ ಕೈಗಳು ಯಾವುವು ಎನ್ನುವ ಮಾಹಿತಿ ನನಗೂ ಇದೆ ಎಂದರು ಕುಮಾರಸ್ವಾಮಿ ಅವರು.
ಇವರೆಲ್ಲ ದೇಶದ ಸಮಸ್ಯೆಗಳು, ಬಡತನದ ಬಗ್ಗೆ ಮಾತನಾಡುತ್ತಾರೆ. ಭ್ರಷ್ಟಾಚಾರದ ಬಗ್ಗೆ ಮಾತಾಡ್ತಾರೆ. ಈ ರಾಷ್ಟ್ರ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳು ಗುಜರಾತ್ ನಿಂದಲೆ ಶುರುವಾಗಿದ್ದು. ಹವಾಲಾ, ಮಾದಕ ವಸ್ತು ಸರಬರಾಜು ಮುಂತಾದ ದಂಧಗಳ ಮೂಲ ಸ್ಥಾನ ಯಾವುದು? ಬಿಜೆಪಿಗರು ಇದಕ್ಕೆ ಉತ್ತರ ನೀಡಬೇಕಲ್ಲವೆ? ಎಂದು ಅವರು ಹೇಳಿದರು.
ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಎಮ್ ಎಲ್ ಸಿ ಭೋಜೇಗೌಡ, ಮಾಜಿ ಎಮ್ ಎಲ್ ಸಿ ಹೆಚ್.ಎಂ.ರಮೇಶ್ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ: ವಿಶ್ವದ ಅತಿ ಬುದ್ಧಿವಂತೆ ಬಾಲಕಿ ಭಾರತ ಮೂಲದ ನತಾಶಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Injustice: ಮೊಟ್ಟೆ ಕೇಳಿದ ಶಾಲಾ ವಿದ್ಯಾರ್ಥಿಗಳಿಗೆ ಸಿಕ್ಕಿದ್ದು ಚಿಕ್ಕ ಚಿಕ್ಕಿ!
Incentive: ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಪ್ರೋತ್ಸಾಹಧನ ದ್ವಿಗುಣ: ಸಚಿವ ಮಹದೇವಪ್ಪ
Mining Case: ಶಿಕ್ಷೆ ರದ್ದು ಕೋರಿ ಶಾಸಕ ಸೈಲ್ ಸೇರಿ ನಾಲ್ವರು ಹೈಕೋರ್ಟ್ಗೆ
MUST WATCH
ಹೊಸ ಸೇರ್ಪಡೆ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.