ನಾರಾಯಣಪುರ ಸುತ್ತಮುತ್ತ ಧಾರಾಕಾರ ಮಳೆ : ಸೇತುವೆ ಜಲಾವೃತ, ರಸ್ತೆ ಸಂಚಾರ ಬಂದ್
Team Udayavani, Sep 21, 2021, 11:41 AM IST
ನಾರಾಯಣಪುರ: ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕು ವ್ಯಾಪ್ತಿಯ ಗೆದ್ದಲಮರಿ, ನಾರಾಯಣಪುರ ಸುತ್ತಮುತ್ತಲ ಬರುವ ಗ್ರಾಮಗಳ ವ್ಯಾಪ್ತಿಯಲ್ಲಿ ಸೋಮವಾರ ಇಡೀ ರಾತ್ರಿ ಸುರಿದ ಸಿಡಿಲು, ಗುಡುಗು ಮಿಶ್ರಿತ ಧಾರಾಕಾರ ಮಳೆಗೆ ಹಳ್ಳ ಕೊಳ್ಳಗಳು ಉಕ್ಕಿ ಹರಿದಿದ್ದು ಹುಣಸಗಿ ತಾಲೂಕಿನ ಗೆದ್ದಲಮರಿ ಗ್ರಾಮದಿಂದ ಹುಣಸಗಿ, ನಾರಾಯಣಪುರಕ್ಕೆ ಸಂಪರ್ಕ ಕಲ್ಪಿಸುವ ಹಳ್ಳದ ಸೇತುವೆ ಮೇಲಿಂದ ಅಪಾರ ಪ್ರಮಾಣದ ನೀರು ಹರಿಯುತ್ತಿದ್ದು ಸಂಚಾರ ಸ್ಥಗಿತಗೊಂಡಿದೆ.
ಮಳೆ ಅವಾಂತರದಿಂದ ಗೆದ್ದಲಮರಿ ಗ್ರಾಮದ 30 ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ಹೊಕ್ಕು ಜನಜೀವನ ಅಸ್ತವ್ಯಸ್ತವಾಗಿದ್ದು ಗ್ರಾಮದ ಸೀಮಾಂತರದಲ್ಲಿ ಬರುವ ಅಂದಾಜು 100 ಎಕರೆಗೂ ಹೆಚ್ಚು ಜಮೀನುಗಳಲ್ಲಿ ಬೆಳೆದ ನಿಂತ ಬೆಳೆ ಜಲಾವೃತವಾಗಿದೆ ಎಂದು ಗೆದ್ದಲಮರಿ ಗ್ರಾಮದ ಕರವೇ ಯುವ ಮುಖಂಡ ಶಿವು ಹೊಕ್ರಾಣಿ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದ ಮೂಲಕ ವಿಷಯವನ್ನು ಹಂಚಿಕೊಂಡಿದ್ದಾರೆ. ತಾಲೂಕಾಡಳಿತ, ಕಂದಾಯ ಇಲಾಖೆಯವರು ಮಳೆಯಿಂದ ಆಗಿರುವ ಹಾನಿಯನ್ನು ಕೂಡಲೇ ಸಮೀಕ್ಷೆ ನಡೆಸಿ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಒತ್ತಾಯ ಮಾಡಿದ್ದಾರೆ.
ಅಪಾರ ಮಳೆಯಾಗಿದ್ದರು ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಬವಿಸಿಲ್ಲಾ ಕೊಡೇಕಲ್, ನಾರಾಯಣಪುರ ಭಾಗದಲ್ಲಿ ಅಪಾರ ಮಳೆಯಾಗಿದೆ ಮಳೆಯಿಂದ ತೊಂದರೆಯಾಗಿರುವ ಪ್ರದೇಶಗಳಿಗೆ ಕೂಡಲೇ ಭೇಟಿ ನೀಡಿ ಪರಶೀಲನೆ ನಡೆಸಿ ಮಳೆಯಿಂದ ಆಗಿರುವ ಬೆಳೆ ಹಾಗೂ ಇತರೆ ಹಾನಿ ಬಗ್ಗೆ ಸಮೀಕ್ಷೆ ನಡೆಸಲಾಗುವದು ಎಂದು ಕೊಡೇಕಲ್ ನಾಡ ಕಾರ್ಯಲಯದ ಉಪ ತಹಶೀಲ್ದಾರ ಬಸವರಾಜ ಬಿರಾದಾರ ಪತ್ರಿಕೆಗೆ ತಿಳಿಸಿದ್ದಾರೆ.
ಇದನ್ನೂ ಓದಿ : ಆತ್ಮಹತ್ಯೆಗೂ ಮೊದಲು ವಿಡಿಯೊ ಮಾಡಿದ್ದರು ಮಹಾಂತ ನರೇಂದ್ರ ಗಿರಿ
ದಾಖಲೆ ಮಳೆ: ಸೋಮವಾರ ಇಡೀ ರಾತ್ರಿ ಧಾರಕಾರ ಮಳೆ ಸುರಿದಿದ್ದು, ಹವಾಮಾನ ಇಲಾಖೆಯ ಮಾಹಿತಿಯಂತೆ ಹುಣಸಗಿ ತಾಲೂಕು ಸುತ್ತಮುತ್ತ 130.2 ಮಿ.ಮಿ (13 ಸೆ.ಮಿ) ಕೊಡೇಕಲ್ ಪಟ್ಟದ ಸುತ್ತಮುತ್ತ 130 ಮಿ.ಮಿ (13 ಸೆ.ಮಿ) ನಾರಾಯಣಪುರ ಸುತ್ತಮುತ್ತಲಿನಲ್ಲಿ 110.4 ಮಿ.ಮಿ(11 ಸೆಂ.ಮಿ) ಗರಿಷ್ಠ ಪ್ರಮಾಣ ಮಳೆಯಾಗಿದೆ ಎಂದು ಹುಣಸಗಿ ತಹಶೀಲ್ದಾರ ಮಹಾದೇವಪ್ಪಗೌಡ ಬಿರಾದಾರ ಮಾಹಿತಿ ನೀಡಿದ್ದಾರೆ.
ಈ ಭಾಗದಲ್ಲಿ ಈಗಾಗಲೇ ರೈತರೂ ಸಜ್ಜೆ, ತೊಗರಿ, ಸೂರ್ಯಕಾಂತಿ, ಭತ್ತದ ಬೆಳೆ ಬೆಳಿದಿದ್ದಾರೆ ಅಲ್ಪಾವಧಿಯ ಬೆಳೆಯಾಗಿರುವ ಸಜ್ಜೆ ಕಟಾವು ಹಂತಕ್ಕೆ ಬಂದಿದೆ, ಮುಂಚಿತವಾಗಿ ಸಜ್ಜೆ ಬಿತ್ತನೆ ಮಾಡಿದ್ದ ಕೆಲವು ರೈತರೂ ಸಜ್ಜೆ ಕಟಾವು (ರಾಶಿ)ಮಾಡಿದವರಿಗೆ ಮಳೆಯಿಂದ ತೊಂದರೆಯಾಗಿದೆ ಎಂದು ಹೇಳಲಾಗುತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.