ವಿಶೇಷ ಪ್ಯಾಕೇಜ್‌ಗಾಗಿ ಕೇಂದ್ರಕ್ಕೆ ಮೊರೆ
Team Udayavani, Aug 10, 2019, 6:00 AM IST
ಬೆಂಗಳೂರು: ರಾಜ್ಯದಲ್ಲಿ ಪ್ರವಾಹದಿಂದ ಉಂಟಾಗಿರುವ ಅತೀವ ಬೆಳೆ ಹಾಗೂ ಆಸ್ತಿ-ಪಾಸ್ತಿ ನಷ್ಟ ಹಿನ್ನೆಲೆಯಲ್ಲಿ ಕೇಂದ್ರದಿಂದ ವಿಶೇಷ ಪ್ಯಾಕೇಜ್‌ಗಾಗಿ ಮೊರೆ ಇಡಲು ರಾಜ್ಯ ಸರ್ಕಾರ ಮುಂದಾಗಿದೆ.
ಒಂದೂವರೆ ಲಕ್ಷ ಹೆಕ್ಟೇರ್ ಕೃಷಿ ಹಾಗೂ ತೋಟಗಾರಿಕೆ ಬೆಳೆ ನಷ್ಟ, ಹತ್ತು ಸಾವಿರ ಕಿ.ಮೀ.ರಸ್ತೆ, 250 ಸೇತುವೆ, 10 ಸಾವಿರ ವಿದ್ಯುತ್ ಕಂಬ, ಒಂದು ಸಾವಿರಕ್ಕೂ ಹೆಚ್ಚು ಸರ್ಕಾರಿ ಕಟ್ಟಡಗಳ ಸಮೇತ ಸುಮಾರು 50 ಸಾವಿರ ಕೋಟಿ ರೂ.ನಷ್ಟವಾಗಿದೆ.
2018-19 ನೇ ಸಾಲಿನಲ್ಲಿ 156 ಬರಪೀಡಿತ ತಾಲೂಕುಗಳಲ್ಲಿ ಮುಂಗಾರು ಮತ್ತು ಹಿಂಗಾರು ಹಂಗಾಮುಗಳೆರಡಲ್ಲಿಯೂ 25 ಸಾವಿರ ಕೋಟಿ ರೂ.ಬೆಳೆ ನಷ್ಟ ಸಂಭವಿಸಿದೆ. ಹೀಗಾಗಿ, ಒಂದೆಡೆ ಬರ, ಮತ್ತೂಂದೆಡೆ ಪ್ರವಾಹದಿಂದ ರಾಜ್ಯ ಸಂಕಷ್ಟದಲ್ಲಿರುವುದರಿಂದ ಕೇಂದ್ರದಿಂದ ವಿಶೇಷ ಪ್ಯಾಕೇಜ್ ಕೋರಲು ತೀರ್ಮಾನಿಸಲಾಗಿದೆ.
15 ಜಿಲ್ಲೆಗಳು ಪ್ರವಾಹದಿಂದ ತತ್ತರಿಸಿದ್ದು, ಈ ಸಂದರ್ಭದಲ್ಲಿ ಕೇಂದ್ರದಲ್ಲೂ ಬಿಜೆಪಿ ಸರ್ಕಾರವೇ ಇರುವುದರಿಂದ ವಿಶೇಷ ಪ್ಯಾಕೇಜ್ ಮೂಲಕ ಜನರ ಸಮಸ್ಯೆಗೆ ಸ್ಪಂದಿಸಬೇಕಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗೃಹ ಸಚಿವರೂ ಆಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ದೂರವಾಣಿ ಮೂಲಕ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಕೇಂದ್ರದಿಂದ ನೆರವಿನ ಭರವಸೆ: ವಿಶೇಷ ಪ್ಯಾಕೇಜ್ ಮನವಿಗೆ ಪೂರಕವಾಗಿ ಸ್ಪಂದಿಸಿರುವ ಅಮಿತ್ ಶಾ, ಅಂಕಿ-ಅಂಶ ಸಹಿತ ಪ್ರಸ್ತಾವನೆ ಸಲ್ಲಿಸಿ, ಕೇಂದ್ರ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂಬ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿಗಳ ಮೂಲಕ ಹದಿನೈದು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನಷ್ಟದ ಅಂದಾಜು ಸಹಿತ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ. ಈ ವರದಿಯೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುಂದಿನ ವಾರ ದೆಹಲಿಗೆ ಸರ್ವಪಕ್ಷ ಅಥವಾ ಬಿಜೆಪಿ ಸಂಸದರ ನಿಯೋಗದೊಂದಿಗೆ ಪ್ರಧಾನಿ ಸೇರಿ ಕೇಂದ್ರ ಸಚಿವರನ್ನು ಭೇಟಿ ಮಾಡಿ, ವಿಶೇಷ ಪ್ಯಾಕೇಜ್‌ಗಾಗಿ ಮನವಿ ಸಲ್ಲಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಎರಡು ದಿನಗಳಿಂದ ಉತ್ತರ ಕರ್ನಾಟಕ ಭಾಗದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಯವರು ಇತರ ಜಿಲ್ಲೆಗಳಲ್ಲಿನ ಪರಿಸ್ಥಿತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ನಷ್ಟದ ಅಂದಾಜು ಹಾಗೂ ಪರಿಹಾರಕ್ಕಾಗಿ ಅವಶ್ಯಕತೆ ಇರುವ ಹಣಕಾಸು ಕುರಿತು ವರದಿ ಕೇಳಿದ್ದಾರೆ.ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿ ಬಗ್ಗೆ ಅಧ್ಯಯನ ನಡೆಸಲು ಕೇಂದ್ರದ ತಂಡ ಕಳುಹಿಸುವಂತೆ ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಕೋರಿಕೆ ಸಲ್ಲಿಸಿದ್ದಾರೆ.
ಪ್ರವಾಹ ಕಡಿಮೆಯಾಗುತ್ತಿದ್ದಂತೆ ರಸ್ತೆ, ಮನೆ ನಿರ್ಮಾಣ ಸೇರಿದಂತೆ ತುರ್ತು ಕಾಮಗಾರಿಗಳಿಗೆ ಕ್ರಿಯಾ ಯೋಜನೆ ರೂಪಿಸಿ ಕಳುಹಿಸುವಂತೆಯೂ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಕೆಲ ಇಲಾಖೆಗಳ ಅನುದಾನ ಕಡಿತ? ಪ್ರವಾಹದ ಹಿನ್ನೆಲೆಯಲ್ಲಿ ರಾಜ್ಯ ಬಜೆಟ್‌ನಲ್ಲಿ ಕೆಲವು ಇಲಾಖೆಗಳ ಅನುದಾನ ಕಡಿತಗೊಳಿಸಿ ಅಥವಾ ಸಮಾಜಕಲ್ಯಾಣ ಇಲಾಖೆ, ಕೃಷಿ, ತೋಟಗಾರಿಕೆ, ಸಹಕಾರ, ಪಶು ಸಂಗೋಪನೆ, ವಸತಿ, ಲೋಕೋಪಯೋಗಿ ಇಲಾಖೆಯ ಅನುದಾನದಡಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರಿಗೆ ಮನೆ ನಿರ್ಮಾಣ, ರಸ್ತೆ ನಿರ್ಮಾಣ ಸೇರಿದಂತೆ ಪರಿಹಾರ ಕಾಮಗಾರಿ ಕೈಗೊಳ್ಳಬಹುದೇ ಎಂಬ ಬಗ್ಗೆಯೂ ಚಿಂತನೆ ನಡೆದಿದೆ ಎಂದು ತಿಳಿದು ಬಂದಿದೆ.
100 ಕೋಟಿ ರೂ.ಬಿಡುಗಡೆ
ಪ್ರವಾಹ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯಗಳಿಗಾಗಿ ರಾಜ್ಯ ಸರ್ಕಾರ 100 ಕೋಟಿ ರೂ.ಬಿಡುಗಡೆ ಮಾಡಿದೆ. ತಾತ್ಕಾಲಿಕ ವಸತಿ ವ್ಯವಸ್ಥೆ, ಗಂಜಿ ಕೇಂದ್ರ ಸ್ಥಾಪನೆ, ಗೋಶಾಲೆ ತೆರೆಯುವುದು, ಕುಡಿಯುವ ನೀರು ಪೂರೈಕೆ ಹಾಗೂ ಆಹಾರ ವ್ಯವಸ್ಥೆ ಕಲ್ಪಿಸುವುದು, ಅಲ್ಪ, ಸ್ವಲ್ಪ ಕುಸಿದಿರುವ ಮನೆಗಳ ದುರಸ್ಥಿಗೆ ಈ ಹಣ ಬಳಕೆ ಮಾಡಲು ಸೂಚನೆ ನೀಡಲಾಗಿದೆ. ಪ್ರವಾಹ ಪೀಡಿತ ಹದಿನಾಲ್ಕು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಪಿಡಿ ಖಾತೆಗೆ 100 ಕೋಟಿ ರೂ.ಹಂಚಿಕೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಗೆ 25 ಕೋಟಿ ರೂ., ಬಾಗಲಕೋಟೆ, ಉತ್ತರ ಕನ್ನಡ ಜಿಲ್ಲೆಗಳಿಗೆ ತಲಾ 10 ಕೋಟಿ ರೂ. ಉಳಿದ 11 ಜಿಲ್ಲೆಗಳಿಗೆ ತಲಾ 5 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
ಅತಿವೃಷ್ಟಿಗೆ ಸಂಬಂಧಪಟ್ಟಂತೆ ಕೇಂದ್ರ ಗೃಹ ಸಚಿವರೊಂದಿಗೂ ಚರ್ಚಿಸಲಾಗಿದೆ. ರಾಜ್ಯದ ವಾಸ್ತವ ಚಿತ್ರಣವನ್ನು ಕೇಂದ್ರ ಸರ್ಕಾರಕ್ಕೆ ತಿಳಿಸುವ ಮೂಲಕ ಎನ್‌ಡಿಆರ್‌ಎಫ್ನಡಿ ಹೆಚ್ಚಿನ ಪರಿಹಾರ ಪಡೆಯಲು ಪ್ರಯತ್ನ ಮಾಡಲಾಗುವುದು.
-ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ
-ಎಸ್. ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.