Heavy Rain; ಭಾರೀ ಮಳೆಯಿಂದ ನೆರೆ ಭೀತಿ: ನಾಲ್ವರ ಸಾವು
ಹಾವೇರಿ, ಪಿರಿಯಾಪಟ್ಟಣದಲ್ಲಿ 4 ಸಾವು ಉತ್ತರ ಕನ್ನಡ ಜಿಲ್ಲೆಯಲ್ಲಿ ನಿಲ್ಲದ ಗುಡ್ಡ ಕುಸಿತ
Team Udayavani, Jul 20, 2024, 7:00 AM IST
ಹುಬ್ಬಳ್ಳಿ/ಬೆಂಗಳೂರು: ಮಲೆನಾಡು, ಕರಾವಳಿ, ಪಶ್ಚಿಮ ಘಟ್ಟ , ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಗೆ ನದಿಗಳ ಆರ್ಭಟ ಜೋರಾಗಿದ್ದು, ಉತ್ತರ ಕರ್ನಾಟಕದಲ್ಲಿ ಮತ್ತೆ ನೆರೆ ಭೀತಿ ಎದುರಾಗಿದೆ. ಸೇತುವೆಗಳ ಮುಳುಗಡೆ, ಗುಡ್ಡ ಕುಸಿತ, ಮರಗಳು ಧರೆಗುರುಳಿ ಹಲವೆಡೆ ಸಂಪರ್ಕ ಕಡಿತವಾಗಿದೆ. ಮನೆ ಕುಸಿದು ಇಬ್ಬರು ಅವಳಿ ಮಕ್ಕಳು ಸೇರಿ ನಾಲ್ವರು ಮೃತಪಟ್ಟಿದ್ದಾರೆ.
ಹಾವೇರಿ ಜಿಲ್ಲೆ ಸವಣೂರು ತಾಲೂಕು ಮಾದಾಪುರ ಗ್ರಾಮದಲ್ಲಿ ಮನೆ ಛಾವಣಿ ಕುಸಿದು ಅವಳಿ ಮಕ್ಕಳಾದ ಅನನ್ಯ (2), ಅಮೂಲ್ಯ (2) ಹಾಗೂ ಇವರ ಅತ್ತೆ ಚೆನ್ನಮ್ಮ (30) ಮೃತಪಟ್ಟಿದ್ದಾರೆ. ಮೃತ ಮಕ್ಕಳ ತಂದೆ ಮುತ್ತು, ತಾಯಿ ಸುನೀತಾ ಪಾರಾಗಿದ್ದಾರೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕಕ್ಕುಂಡಿ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಗೃಹಿಣಿ ಹೇಮಲತಾ (22) ಸ್ಥಳದಲ್ಲೇ ಮೃತಪಟ್ಟಿದ್ದು ಆಕೆಯ ಜತೆಯಲ್ಲಿದ್ದ 2 ವರ್ಷದ ಮಗುವನ್ನು ಹೊರಗಡೆ ತಳ್ಳಿದ್ದರಿಂದ ಪಾರಾಗಿದೆ.
ಬೆಳಗಾವಿ ಜಿಲ್ಲೆ ಖಾನಾಪುರ, ಮಹಾರಾಷ್ಟ್ರದ ಸಾವಂತವಾಡಿ ಹಾಗೂ ಅಂಬೋಲಿ ಘಟ್ಟ ಪ್ರದೇಶದಲ್ಲಿ ಸುರಿದ
ಧಾರಾಕಾರ ಮಳೆಗೆ ಕೃಷ್ಣಾ, ದೂಧಗಂಗಾ, ವೇದಗಂಗಾ, ಘಟಪ್ರಭಾ, ಮಲಪ್ರಭಾ, ಮಾರ್ಕಂಡೇಯ ನದಿಗಳಿಗೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದೆ. ಹಿಡಕಲ್, ಮಲಪ್ರಭಾ, ರಕ್ಕಸಕೊಪ್ಪ, ಮಾರ್ಕಂಡೇಯ, ಆಲಮಟ್ಟಿ, ನಾರಾಯಣಪುರ ಡ್ಯಾಂಗೆ ಒಳ ಹರಿವು ಹೆಚ್ಚಳವಾಗಿದ್ದು, ಭಾರೀ ಪ್ರಮಾಣದ ನೀರು ನದಿಗಳಿಗೆ ಹರಿಸುತ್ತಿರುವುದರಿಂದ ತೀರ ಪ್ರದೇಶದಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ.
ಸೇತುವೆಗಳು ಮುಳುಗಡೆ
ದೂಧಗಂಗಾ ನದಿ ಆರ್ಭಟಕ್ಕೆ ಚಿಕ್ಕೋಡಿ ತಾಲೂಕಿನ ಹಲವು ಸೇತುವೆಗಳು ಮುಳುಗಡೆಯಾಗಿವೆ. ಖಾನಾ ಪುರ ತಾಲೂಕಿನ ಹಬ್ಟಾನಹಟ್ಟಿಯ ಆಂಜನೇಯ ದೇವಸ್ಥಾನ, ಇಟಗಿಯ ಮರುಳಶಂಕರ ದೇವಸ್ಥಾನಗಳು ಮಲಪ್ರಭಾ ನದಿಯಲ್ಲಿ ಸಂಪೂರ್ಣ ಮುಳುಗಿವೆ.
ಬೆಳಗಾವಿ-ಗೋವಾ ಹೆದ್ದಾರಿ ಭೂಕುಸಿತ
ಬೆಳಗಾವಿಯಿಂದ ಜಾಂಬೋಟಿ, ಕಣಕುಂಬಿ, ಚೋರ್ಲಾ ಮಾರ್ಗವಾಗಿ ಗೋವಾ ರಾಜ್ಯದ ಪಣಜಿಯತ್ತ ಸಾಗುವ ಚೋರ್ಲಾ ಘಾಟ್ ಮಾರ್ಗದಲ್ಲಿ ಉತ್ತರ ಗೋವಾ ಜಿಲ್ಲೆಯ ಕೇರಿಯಲ್ಲಿ ಭೂಕುಸಿತದಿಂದ ಸಂಪರ್ಕ ಕಡಿತಗೊಂಡಿದೆ. ಶಿರಸಿ-ಕುಮಟಾ ಸಂಪರ್ಕಿಸುವ ರಾ.ಹೆದ್ದಾರಿ 766ಇ ಮಾರ್ಗ ಮಧ್ಯೆ ರಾಗಿಹೊಸಳ್ಳಿ ಬಳಿಯ ಗುಡ್ಡ ಮತ್ತೆ ಕುಸಿದಿದೆ.
ಕಪಿಲಾ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ
ಕೇರಳದ ವೈನಾಡಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕಪಿಲಾ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಮುಂದು
ವರಿದಿದೆ. ನದಿಯೂ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿ 212ರಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಮುಂಜಾಗ್ರತೆಯಾಗಿ ಮೈಸೂರು-ನಂಜನ ಗೂಡು ರಸ್ತೆ ಬಂದ್ ಮಾಡಿದೆ.
ಕಬಿನಿ, ಕೆಆರ್‌ಎಸ್ ಜಲಾಶಯ ಗಳಲ್ಲಿ 70 ಸಾವಿರ ಕ್ಯುಸೆಕ್ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಕರ್ನಾಟಕ- ತಮಿಳುನಾಡು ಗಡಿಯ ಹೊಗೇನಕಲ್ ಜಲಪಾತ ಭೋರ್ಗರೆಯುತ್ತಿದ್ದು, ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ.
ನಂಜುಂಡೇಶ್ವರನಿಗೂ ಜಲಕಂಟಕ
ನಂಜನಗೂಡು: ವಿಷವನ್ನು ಉಂಡ ವಿಷಕಂಠನಿಗೂ ಜಲಕಂಟಕ ಎದುರಾಗಿದೆ. ನಂಜನಗೂಡಿನ ಧಾರ್ಮಿಕ ಕ್ಷೇತ್ರ, ದಕ್ಷಿಣ ಕಾಶಿ ನಂಜುಂಡೇಶ್ವರನ ಸನ್ನಿಧಾನವು ಸಂಪೂರ್ಣ ಜಲಾವೃತಗೊಂಡಿದೆ. ಕಪಿಲಾದ ಉಪ ನದಿ ಗುಂಡ್ಲಾ ನದಿಯು ನಂಜುಂಡೇಶ್ವರ ದೇವಾಲಯದ ಮಗ್ಗಲಲ್ಲೇ ಮೈದುಂಬಿ ಹರಿಯುತ್ತಿರುವ ಹಿನ್ನೆಲೆ ದೇಗುಲಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ದಾರಿಗಳು ಸಂಪೂರ್ಣ ಜಲಾವೃತಗೊಂಡಿದೆ.
ಸಂತೇಗುಳಿ ಬಳಿ ಗುಡ್ಡ ಕುಸಿತ
ಕುಮಟಾ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ರೌದ್ರಾವತಾರಕ್ಕೆ ಶುಕ್ರವಾರ ಕುಮಟಾ-ಸಿದ್ಧಾಪುರ ರಾಜ್ಯ ಹೆದ್ದಾರಿಯಲ್ಲೂ ಗುಡ್ಡ ಕುಸಿದಿದ್ದು ಸಂಚಾರ ಸ್ಥಗಿತಗೊಂಡಿದೆ. ಸಂತೆಗುಳಿ ಸಮೀಪದ ಉಳ್ಳೂರು ಮಠದ ಕ್ರಾಸ್ ಹತ್ತಿರ ಸುಮಾರು ಒಂದು ಎಕರೆಯಷ್ಟು ಪ್ರದೇಶದಲ್ಲಿ ಗುಡ್ಡ ಕುಸಿದಿದೆ.
ಅಪಾರ ಪ್ರಮಾಣದ ಸಸ್ಯ ಸಂಪತ್ತು ನಾಶವಾಗಿದ್ದು ಜತೆಗೆ ಬೃಹದಾಕಾರಾದ 4 ಮರಗಳು ಧರೆಗುರುಳಿವೆ. ಇದೇ ರಸ್ತೆಯ ಬೀಳಗಿ ಸಮೀಪದಲ್ಲೂ ಗುಡ್ಡ ಕುಸಿದಿದ್ದು ಸಂಚಾರಕ್ಕೆ ತೊಂದರೆಯಾಗಿದೆ. ಕುಮಟಾ-ಶಿರಸಿ ರಸ್ತೆಯ ರಾಗಿಹೊಸಳ್ಳಿ ಬಳಿ ಗುಡ್ಡ ಕುಸಿದಿದ್ದರಿಂದ ಶಿರಸಿ-ಸಿದ್ದಾಪುರದಿಂದ ಬಡಾಳ ಘಾಟಿ ಮೂಲಕ ಕುಮಟಾಕ್ಕೆ ವಾಹನಗಳು ಸಂಚರಿಸುತ್ತಿದ್ದವು. ಆದರೆ ಶುಕ್ರವಾರ ಇದೇ ರಸ್ತೆಯಲ್ಲಿ ಗುಡ್ಡ ಕುಸಿದಿದ್ದರಿಂದ ವಾಹನ ಸಂಚಾರ ದುಸ್ತರವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.