ಭ್ರೂಣ ಪತ್ತೆ: ಸಕ್ಷಮ ಪ್ರಾಧಿಕಾರದ ದೂರುಗಳು ಮಾತ್ರ ವಿಚಾರಣೆಗೆ ಅರ್ಹ: ಹೈಕೋರ್ಟ್ ಆದೇಶ
Team Udayavani, Mar 3, 2022, 5:41 AM IST
ಬೆಂಗಳೂರು: ಭ್ರೂಣ ಲಿಂಗ ಪತ್ತೆ ನಿಷೇಧಿಸುವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ತಂತ್ರಜ್ಞಾನ (ನಿಯಂತ್ರಣ ಮತ್ತು ದುರ್ಬಳಕೆ ತಡೆ) ಕಾಯ್ದೆ 1994ರಡಿ’ ಅಧಿಕೃತ ಸಕ್ಷಮ ಪ್ರಾಧಿಕಾರಿಗಳು ದಾಖಲಿಸಿದ ದೂರುಗಳನ್ನು ಮಾತ್ರ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳು ವಿಚಾರಣೆಗೆ ಅಂಗೀಕರಿಸಬೇಕು ಎಂದು ಹೈಕೋರ್ಟ್ ಹೇಳಿದೆ.
ಪ್ರಕರಣ ರದ್ದುಪಡಿಸುವಂತೆ ಕೋರಿ ಗೋಕಾಕ್‌ನ ಶ್ರೀ ದೋಂಡಿಬಾ ಅಣ್ಣ ಜಾದವ್ ಮೆಮೋರಿಯಲ್ ಆಸ್ಪತ್ರೆ ಮತ್ತದರ ವೈದ್ಯ ಪದ್ಮ ನಿತಿನ್ ಜಾದವ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನ್ಯಾಗಪ್ರಸನ್ನ ಅವರ ಏಕಸದಸ್ಯ ನ್ಯಾಯಪೀಠ, ಅರ್ಜಿಯನ್ನು ಪುರಸ್ಕರಿಸಿ ಭ್ರೂಣ ಲಿಂಗ ಪತ್ತೆ ನಿಷೇಧಿಸುವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ತಂತ್ರಜ್ಞಾನ (ನಿಯಂತ್ರಣ ಮತ್ತು ದುರ್ಬಳಕೆ ತಡೆ) ಕಾಯ್ದೆ 1994ರಡಿ’ ರಾಜ್ಯ ಅಥವಾ ಕೇಂದ್ರ ಸರ್ಕಾರದ ಸಕ್ಷಮ ಪ್ರಾಧಿಕಾರ ದೂರುಗಳನ್ನು ಮಾತ್ರ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳು ವಿಚಾರಣೆಗೆ ಅಂಗೀಕರಿಸಬೇಕು ಎಂದು ಆದೇಶಿಸಿದೆ.
ಅಲ್ಲದೆ, ಭ್ರೂಣ ಲಿಂಗ ಪತ್ತೆ ನಿಷೇಧಿಸುವ “ಪ್ರಸವ ಪೂರ್ವ ಲಿಂಗ ಪತ್ತೆ ತಂತ್ರಜ್ಞಾನ (ನಿಯಂತ್ರಣ ಮತ್ತು ದುರ್ಬಳಕೆ ತಡೆ) ಕಾಯ್ದೆ 1994ರಡಿ’ ದಾಖಲೆಗಳನ್ನು ನಿರ್ವಹಣೆ ಮಾಡಿಲ್ಲ. ಆಸ್ಪತ್ರೆಯಲ್ಲಿ ಭ್ರೂಣ ಲಿಂಗ ಪತ್ತೆ ಮಾಡುವ ಉಪಕರಣಗಳನ್ನು ಅಳವಡಿಸಲಾಗಿದೆ ಎಂಬ ಆರೋಪದ ಮೇಲೆ ಗೋಕಾಕ್ ತಾಲೂಕು ಆರೋಗ್ಯ ಅಧಿಕಾರಿ, ಕಾಯ್ದೆಯ ಸೆಕ್ಷನ್ 28ರ ಆಡಿಯಲ್ಲಿ ದಾಖಲಿಸಿದ ದೂರಿನ ಆಧರಿಸಿ ವಿಚಾರಣೆಗೆ ಅಂಗೀಕರಿಸಿದ್ದ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ಪ್ರಕರಣ ಸಂಬಂಧ ತಾಲೂಕು ಆರೋಗ್ಯ ಅಧಿಕಾರಿಯು ಕಾಯ್ದೆಯಡಿ ದೂರು ದಾಖಲಿಸಲು ಸಕ್ಷಮ ಪ್ರಾಧಿಕಾರದ ಅಧಿಕಾರಿಯಲ್ಲ. ತಪಾಸಣೆ ನಡೆಸಲು ಆರೋಗ್ಯಾಧಿಕಾರಿಗೆ ಅಧಿಕಾರವೂ ಇಲ್ಲ. ಆದ್ದರಿಂದ ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋàರಿದ್ದರು.
ಕಾಯ್ದೆಯ ಸೆಕ್ಷನ್ 17(2) ಮತ್ತು ಕಾಯ್ದೆಯಡಿ ಸೂಕ್ತ ಪ್ರಾಧಿಕಾರವನ್ನು ನೇಮಕ ಮಾಡಿ ಸರ್ಕಾರ ಹೊರಡಿಸಿರುವ ಅಧಿಸೂಚನೆ ಪರಿಶೀಲಿಸಿದ ಹೈಕೋರ್ಟ್ ಅರ್ಜಿದಾರರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಿದೆ.
1994ರ ಕಾಯ್ದೆಯಡಿ ಭ್ರೂಣ ಲಿಂಗ ಪತ್ತೆ ಆರೋಪ ಸಂಬಂಧ ಕಾಯ್ದೆಯಡಿ ದೂರು ದಾಖಲಿಸಲು ಆಯಾ ಜಿಲ್ಲೆಗಳ ಉಪ ವಿಭಾಗಾಧಿಕಾರಿಗಳು ಸಕ್ಷಮ ಪ್ರಾಧಿಕಾರ (ಅಧಿಕಾರಿ) ಆಗಿರುತ್ತಾರೆ. ಸೆಕ್ಷನ್ 28ರ ಅಡಿಯಲ್ಲಿ ಸಕ್ಷಮ ಪ್ರಾಧಿಕಾರ ದಾಖಲಿಸುವ ದೂರು ಆಧರಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್ ಕಾಗ್ನಿಜೆನ್ಸ್ ತೆಗೆದುಕೊಳ್ಳುವುದು ಕಡ್ಡಾಯ ಮಾಡಲಾಗಿದೆ. ಹಾಗಾಗಿ, ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ತಾಲೂಕು ಆರೋಗ್ಯ ಅಧಿಕಾರಿ ದಾಖಲಿಸಿರುವ ದೂರು ಕಾನೂನು ಬಾಹಿರವಾಗಿದೆ. ಪ್ರಕರಣ ಸಂಬಂಧ ಗೋಕಾಕ್ ಪ್ರಧಾನ ಸಿವಿಲ್ ಮತ್ತು ಜೆಎಫ್ಎಂಸಿ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲಾಗುತ್ತಿದೆ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.