Hoax Call: ಹುಸಿ ಬಾಂಬ್ ಬೆದರಿಕೆ ಮರುಕಳಿಸದಿರಲಿ
Team Udayavani, Nov 4, 2024, 6:00 AM IST
ದೇಶಾದ್ಯಂತ ಕೆಲವು ವಾರಗಳಿಂದ ಹುಸಿ ಬಾಂಬ್ ಬೆದರಿಕೆ ಕರೆಗಳ ಮೂಲಕ ಆತಂಕದ ವಾತಾವರಣವನ್ನು ಸೃಷ್ಟಿಸಿದ ಪ್ರಕರಣವನ್ನು ಪೊಲೀಸರು ಮತ್ತು ತನಿಖಾ ಸಂಸ್ಥೆಗಳು ಕೊನೆಗೂ ಬೇಧಿಸಿದ್ದಾರೆ. ಮಹಾರಾಷ್ಟ್ರ ಮೂಲದ ಯುವ ಲೇಖಕ ಜಗದೀಶ್ ಉಯಿಕೆ ಎಂಬಾತ ಈ ಕೃತ್ಯಗಳನ್ನು ಎಸಗಿರುವುದು ಪತ್ತೆಯಾಗಿದ್ದು, ಆತ ಪೊಲೀಸರ ಅತಿಥಿ ಯಾಗಿದ್ದಾನೆ. ಇನ್ನೀಗ ಈ ಹುಸಿ ಬಾಂಬ್ ಬೆದರಿಕೆ ಕರೆಗಳ ಹಿಂದೆ ಕ್ಷುಲ್ಲಕ ಕಾರಣ ಮಾತ್ರ ಇರುವುದು ನಿಜವೇ ಅಥವಾ ಕಾಣದ ಕೈಗಳ ಕೈವಾಡ ಇದೆಯೇ ಎಂಬುದನ್ನು ಪತ್ತೆ ಹಚ್ಚಬೇಕಾಗಿದೆ. ಜತೆಗೆ ಮುಂದಿನ ದಿನಗಳಲ್ಲಿ ಇಂತಹ ಪರಿಸ್ಥಿತಿ ಏರ್ಪಡದಂತೆ ಕಟ್ಟೆಚ್ಚರ ವಹಿಸಬೇಕಾಗಿದೆ.
ಪ್ರಾಥಮಿಕ ತನಿಖೆಗಳಲ್ಲಿ ತಿಳಿದು ಬಂದಿರುವಂತೆ ಜಗದೀಶ್ ಉಯಿಕೆ ತನ್ನದೊಂದು ಕೃತಿಯನ್ನು ಪ್ರಧಾನಿ ಕಾರ್ಯಾಲಯವೇ ಪ್ರಕಟಿಸಬೇಕು ಎಂಬ ಆಗ್ರಹ ವ್ಯಕ್ತಪಡಿಸಿದ್ದು, ಅದು ಈಡೇರದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿದ್ದಾನೆ. ಮೇಲ್ನೋಟಕ್ಕೆ ಕಂಡುಬಂದಿರುವಂತೆ ಜಗದೀಶ್ ಹೊಂದಿರುವುದು ತೀರಾ ಕ್ಷುಲ್ಲಕ ಕಾರಣ. ಇಂತಹ ಯಕಶ್ಚಿತ್ ಕಾರಣ ಗಳನ್ನು ಮುಂದಿಟ್ಟುಕೊಂಡು ಆತ ವಾರಗಳ ಕಾಲ 300ಕ್ಕೂ ಹೆಚ್ಚು ಬೆದರಿಕೆ ಸಂದೇಶಗಳನ್ನು ಕಳುಹಿಸಿ ಆತಂಕದ ವಾತಾವರಣ ಸೃಷ್ಟಿಸಿದ್ದಾನೆ. ಈ ವಿಷಯ ಅತ್ಯಂತ ಕಳವಳಕಾರಿಯಾಗಿದೆ.
ತೀರಾ ವೈಯಕ್ತಿಕವಾದ ಕಾರಣ ಗಳನ್ನು ಮುಂದಿರಿಸಿಕೊಂಡು ದೇಶಾದ್ಯಂತ ಆತಂಕದ ವಾತಾವರಣವನ್ನು ಸೃಷ್ಟಿಸುವುದು, ಸಂಚಾರ ಸಾರಿಗೆಯಂತಹ ಆವಶ್ಯಕ ಸೇವೆಗಳಲ್ಲಿ ವ್ಯತ್ಯಯ ಉಂಟು ಮಾಡುವುದು ಎಷ್ಟು ಮಾತ್ರಕ್ಕೂ ಸ್ವೀಕಾರಾರ್ಹವಲ್ಲ. ಲೇಖಕ ಜಗದೀಶ್ ಉಯಿಕೆ ಕೆಲವು ವಾರಗಳಿಂದ ಈ ರೀತಿ ಬೆದರಿಕೆ ಕರೆಗಳನ್ನು ಮಾಡುತ್ತಿದ್ದರೂ ಎಲ್ಲಿಯೂ ಸುಲಭಕ್ಕೆ ತನ್ನ ಜಾಡು ತಿಳಿಯದಂತೆ ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡಿರುವುದು ವಿಶೇಷ ಮತ್ತು ಎಚ್ಚರಿಕೆಯ ಕರೆಘಂಟೆ ಆಗಬೇಕಾದ ವಿಷಯ. ತಂತ್ರಜ್ಞಾನ ಎಂಬ ನಾಣ್ಯದ ಒಳ್ಳೆಯ ಮತ್ತು ಕೆಟ್ಟ ಮುಖಗಳಿಗೆ ಇದು ಒಂದು ಒಳ್ಳೆಯ ನಿದರ್ಶನವಾಗಿದೆ. ಈ ಹಿಂದೆಯೂ ಹಲವಾರು ಬಾರಿ ಇಂತಹ ಪ್ರಕರಣ ಗಳಲ್ಲಿ ಇದು ಅನುಭವಕ್ಕೆ ಬಂದಿದೆ.
ಈ ಹಿನ್ನೆಲೆಯಲ್ಲಿ ಎಕ್ಸ್, ವ್ಯಾಟ್ಸ್ ಆ್ಯಪ್‌ನಂತಹ ಸಾಮಾಜಿಕ ಮಾಧ್ಯಮಗಳು ಇಂತಹ ಕುಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ತಾವೇ ಮುಂಚಿತವಾಗಿ ತನಿಖಾ ಸಂಸ್ಥೆಗಳ ಜತೆಗೆ ಕೈಜೋಡಿಸಬೇಕು. ಈ ವಿಷಯದಲ್ಲಿ ಸಾಮಾಜಿಕ ಮಾಧ್ಯಮಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ನೀತಿ ನಿಯಮಗಳನ್ನು ಸರಕಾರ ರೂಪಿಸಿಕೊಂಡು ಜಾರಿಗೆ ತರುವುದು ಕೂಡ ವಿಹಿತವಾದ ಕ್ರಮವಾಗಿದೆ.
ಸದ್ಯ ಇದುವರೆಗೆ ಬಂದಿರುವ ಬೆದರಿಕೆ ಕರೆಗಳೆಲ್ಲ ಹುಸಿ ಕರೆಗಳು ಆಗಿದ್ದು, ಅವುಗಳಿಂದ ಅನಾಹುತಗಳು ಸಂಭವಿಸದೆ ಇರುವುದು ಉತ್ತಮ ವಿಷಯ. ಆದರೆ ಇದರಿಂದ ಆಗಿರುವ ಆರ್ಥಿಕ ಅನಾಹುತ ಅಗಣಿತ. ಸಾವಿರಾರು ಕೋಟಿ ರೂಪಾಯಿ ನಷ್ಟವನ್ನು ವಿಮಾನಯಾನ ಸಂಸ್ಥೆಗಳು ಅನುಭವಿಸಿವೆ. ಹಾಗೆಯೇ ಸಾಮಾನ್ಯ ಗ್ರಾಹಕರೂ ಅನುಭವಿಸಿರುವ ನಷ್ಟಗಳು ಲೆಕ್ಕಕ್ಕೆ ಸಿಕ್ಕಿಲ್ಲ. ಆದರೆ ಮುಂದೆ ಇಂತಹ ಪ್ರಕರಣಗಳು ಮರುಕಳಿಸಬಾರದು. ಇದನ್ನು ನಿಗ್ರಹಿಸುವುದಕ್ಕಾಗಿ ಇಂತಹ ಕೃತ್ಯ ಎಸಗಿದವರಿಗೆ ಜೀವಾವಧಿ ಶಿಕ್ಷೆ ವಿಧಿಸುವ ಬಗ್ಗೆ ಕೆಲವು ದಿನಗಳ ಹಿಂದೆ ಕೇಂದ್ರ ಸರಕಾರ ಚಿಂತನೆ ನಡೆಸಿತ್ತು.
ಕೇಂದ್ರ ನಾಗರಿಕ ವಿಮಾನ ಯಾನ ಸಚಿವ ಕೆ. ರಾಮಮೋಹನ ನಾಯ್ದು ಈ ಬಗ್ಗೆ ಪ್ರಸ್ತಾವಿಸಿದ್ದರು. ಹುಸಿಬಾಂಬ್ ಕರೆ ಮಾಡುವ ಮೂಲಕ ವಿಮಾನ ಯಾನಗಳಲ್ಲಿ ವ್ಯತ್ಯಯ ಉಂಟು ಮಾಡುತ್ತಿರುವವರಿಗೆ ಕಠಿನ ಕಾನೂನು ಕ್ರಮ ಜಾರಿಯಾಗಲೇ ಬೇಕು. ಪ್ರಸ್ತಾವಿತ ಶಿಕ್ಷೆಯನ್ನು ಸೂಕ್ತ ನಿಯಮ ಬದಲಾವಣೆಗಳ ಮೂಲಕ ಆದಷ್ಟು ಶೀಘ್ರವಾಗಿ ಜಾರಿಗೆ ತರಲೇ ಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.