ರಂಗು ರಂಗಿನ ಹೋಳಿ ಹಬ್ಬ: ಸಿದ್ಧತೆ ಆರಂಭ
ಇಂದಿನಿಂದ ಮರಾಠಿ ಹೋಳಿ ತಿರುಗಾಟ ಶುರು; ಮಾ.14ರಿಂದ ಕುಡುಬಿ, ಖಾರ್ವಿ ಹೋಳಿ ಆಚರಣೆಗೆ ಚಾಲನೆ
Team Udayavani, Mar 11, 2022, 8:20 AM IST
ಕುಂದಾಪುರ: ಫಾಲ್ಗುಣ ಮಾಸದ ಏಕಾದಶಿಯಿಂದ ಆರಂಭವಾಗಿ (ಫೆಬ್ರವರಿ – ಮಾರ್ಚ್ ತಿಂಗಳಲ್ಲಿ) ಹುಣ್ಣಿಮೆಯವರೆಗೆ ಎಲ್ಲೆಡೆಗಳಲ್ಲಿ ಕುಡುಬಿ, ಮರಾಠಿ ಹಾಗೂ ಖಾರ್ವಿ ಸಮುದಾಯದವರೆಲ್ಲರೂ ವಿಶಿಷ್ಟ ರೀತಿಯಲ್ಲಿ ಹೋಳಿ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸುತ್ತಾರೆ. ಕುಂದಾಪುರ ಭಾಗದಲ್ಲಿ ಈ ಬಾರಿಯ ಹೋಳಿ ಹಬ್ಬದ ಸಂಭ್ರಮಕ್ಕೆ ಸಿದ್ಧತೆಗಳು ಆರಂಭವಾಗಿವೆ. ಯಾವ- ಯಾವ ರೀತಿಯಲ್ಲಿ ಹೋಳಿ ಹಬ್ಬವನ್ನು ಆಚರಿಸುತ್ತಾರೆ ಅನ್ನುವುದರ ಮಾಹಿತಿ ಇಲ್ಲಿದೆ.
ಕುಡುಬಿ ಹೋಳಿ
ಕುಡುಬಿ ಸಮುದಾಯದ ಹೋಳಿ ಆಚರಣೆ ಸಿದ್ಧತೆ ಆರಂಭಗೊಂಡಿದ್ದು, ಈಗಾಗಲೇ ಗುಮ್ಮಟೆ ವೇಷ ಧರಿಸುವವರು ನಿರಂತರ ಅಭ್ಯಾಸ ಮಾಡುತ್ತಿದ್ದಾರೆ. ಏಕಾದಶಿಯಂದು (ಮಾ.14) ಬೆಳಗಿನ ಜಾವಕ್ಕೂ ಮುನ್ನವೇ ಎಲ್ಲ ಕೂಡು ಕಟ್ಟುಗಳ ಸದಸ್ಯರೆಲ್ಲ ಆಯಾಯ ಭಾಗದ ಗುರಿಕಾರರ ಮನೆಗೆ ಬಂದು ಸೇರುತ್ತಾರೆ. ಅಲ್ಲಿ ದೇವರ ಪ್ರತಿಷ್ಠೆ, ಹಾಡುಗಳ ಮೂಲಕವೇ ವಿಧಿ – ವಿಧಾನ ಪೂರೈಸಿ, ಅಲ್ಲಿ ಹಾಗೂ ಗ್ರಾಮ ದೇವಸ್ಥಾನದಲ್ಲಿ ಕೋಲಾಟ, ಗುಮ್ಮಟೆ ನೃತ್ಯ ಮಾಡುತ್ತಾರೆ.
ಮಾ. 15, ಮಾ.16ಕ್ಕೆ ದಿನ ಹೊರ ಗ್ರಾಮ, ಮಾ.17ಕ್ಕೆ ಅವರದೇ ಗ್ರಾಮಕ್ಕೆ ಬಂದು ಅಲ್ಲಿನ ಎಲ್ಲರ ಮನೆಗೂ ಹೋಗುತ್ತಾರೆ.
ಮಾ. 18ರಂದು ಹೋಳಿ ಹುಣ್ಣಿಮೆ ದಿನ ಮತ್ತೆ ಗುರಿಕಾರರ ಮನೆ ಸೇರಿ, ಆ ವರ್ಷದ ಕೊನೆಯ ಹೋಳಿ ಕುಣಿತ ಮಾಡುತ್ತಾರೆ. ಗೆಜ್ಜೆ, ವೇಷ ಭೂಷಣ ಕಳಚಿ, ಎಲ್ಲರೂ ಸಾಮೂಹಿಕವಾಗಿ ಸ್ನಾನ ಮಾಡುತ್ತಾರೆ. ಪರಿಕರಗಳಿಗೆಲ್ಲ ಗುರಿಕಾರರು ಪೂಜೆ ಮಾಡಿ,ಅನಂತರ ಬೆಂಕಿ (ಕಾಮದಹನ ಮಾಡುವುದು) ಹಾಯುತ್ತಾರೆ. ಬಳಿಕ ಸಾಮೂಹಿಕವಾಗಿ ಊಟ ಮಾಡಿ, ಯುವಕರು, ಮಕ್ಕಳೆಲ್ಲ ಸೇರಿ ಗ್ರಾಮದಲ್ಲಿರುವ ಮನೆ- ಮನೆಗೆ ಹೋಗಿ ಬಣ್ಣ ಹಚ್ಚುವ ಮೂಲಕ ಹೋಳಿ ಹಬ್ಬ ಮುಗಿಯಿತು ಎನ್ನುವ ಸಂದೇಶ ಸಾರುತ್ತಾರೆ.
46 ಕೂಡು ಕಟ್ಟುಗಳು
ಉಡುಪಿ ಜಿಲ್ಲೆಯಲ್ಲಿ ಕುಡುಬಿ ಸಮುದಾಯದವರ 46 ಕೂಡು ಕಟ್ಟುಗಳಿವೆ. ಮಂದಾರ್ತಿ, ಕೊಕ್ಕರ್ಣೆ, ಹಾಲಾಡಿ, ಬೆಳ್ವೆ, ಬಾರಕೂರು, ಮುದ್ದೂರು, ಯಳಂತೂರು, ಶೇಡಿಮನೆ, ಹಿಲಿಯಾಣ, ಕಕ್ಕುಂಜೆ ಕಡೆಗಳೆಲ್ಲ ಕುಡುಬಿ ಮನೆತನಗಳಿವೆ. ಕೂಡು ಕಟ್ಟು ಅಂದರೆ 1 ಗ್ರಾಮ ಅಂತ ಅರ್ಥ. ಗ್ರಾಮಕ್ಕೊಬ್ಬರು ಗುರಿಕಾರರಿರುತ್ತಾರೆ.
ಮರಾಠಿ ಹೋಳಿ
ಮಹಾರಾಷ್ಟ್ರ, ಗೋವಾದಿಂದ ವಲಸೆ ಬಂದವರು ಮರಾಠಿ ನಾಯ್ಕ ಸಮು ದಾಯದವರು. ಇವರ ಹೋಳಿ ಹಬ್ಬವು ಈ ಬಾರಿ ಮಾ. 10ರ ಸಂಜೆಯಿಂದಲೇ ಆರಂಭಗೊಂಡಿದ್ದು, ಮಾ. 13ರಂದು ತಿರುಗಾಟ ಮುಗಿದು, ಮಾ. 15ರಂದು ಪೂಜೆಯೊಂದಿಗೆ ಮುಕ್ತಾಯಗೊಳ್ಳುತ್ತದೆ.
ಇವರು ಒಬ್ಬರು ಗುರಿಕಾರರ ಮನೆಯಲ್ಲಿ ಹೋಳಿ ಕಟ್ಟೆ ಮಾಡಿ, ಅಲ್ಲಿ ಕಾಯಿಟ್ಟು ಪೂಜೆ ಮಾಡುತ್ತಾರೆ. 20-30 ಜನರ ತಂಡಗಳನ್ನು ರಚಿಸಿಕೊಂಡು, ಅಲ್ಲಿಯೇ ಚಪ್ಪರ ಹಾಕಿ, ವೇಷವನ್ನು ಧರಿಸಿ, ಅಲ್ಲಿಂದ ಹೋಳಿ ಕುಣಿತವನ್ನು ಆರಂಭಿಸುತ್ತಾರೆ. ಮಾ. 11 ಹಾಗೂ 12ರಂದು ತಮ್ಮ ಕೇರಿಗಳಲ್ಲಿ ತಿರುಗಾಟ ನಡೆಸಿ, 3ನೇ ದಿನ ಸಂಜೆ ಮತ್ತೆ ಅಲ್ಲಿ ಬಂದು ಸೇರುತ್ತಾರೆ. ಮಾ. 13ರಂದು ಸ್ನಾನ ಮಾಡಿ, ಆ ದಿನ ವೇಷ ಕಳಚುವುದರೊಂದಿಗೆ ಆಚರಣೆ ಮುಗಿಯುತ್ತದೆ. ಮರು ದಿನ ಪೂಜೆ ನೆರವೇರಿಸುತ್ತಾರೆ.
ಕುಂದಾಪುರದ ಹಳ್ಳಿಹೊಳೆ, ಅರೆಶಿರೂರು, ಗೊಳಿಹೊಳೆ, ಕೊಲ್ಲೂರು, ಕೆರಾಡಿ, ಜಡ್ಕಲ್, ಮುದೂರು, ಚಿತ್ತೂರು, ಶಂಕರನಾರಾಯಣ, ಸಿದ್ದಾಪುರ, ಹೊಸಂಗಡಿ, ಯಡಮೊಗೆ, ಕಾಲೊ¤àಡು, ಅಮಾಸೆಬೈಲು ಮತ್ತಿತರೆಡೆಗಳಲ್ಲಿ ನೆಲೆಸಿರುವ ಮರಾಠಿ ಸಮುದಾಯದವರು ಸಂಭ್ರಮದಿಂದ ಹೋಳಿ ಆಚರಿಸುತ್ತಾರೆ.
ಕೊಂಕಣ ಖಾರ್ವಿ ಹೋಳಿ
ಕೊಂಕಣ ಖಾರ್ವಿ ಸಮಾಜದ ಹೋಳಿ ಹಬ್ಬದಾಚರಣೆಗೆ ಶತಮಾನಗಳ ಇತಿಹಾಸವಿದೆ. ಈ ಬಾರಿ ಮಾ. 14ರಿಂದ ಆರಂಭಗೊಂಡು ಮಾ. 19ಕ್ಕೆ ವೈಭವದ ಓಕುಳಿ ಹಬ್ಬದ ಮೆರವಣಿಗೆಯೊಂದಿಗೆ ಸಂಪನ್ನಗೊಳ್ಳಲಿದೆ.
ಕುಂದಾಪುರ, ಗಂಗೊಳ್ಳಿ ಭಾಗಗಳಲ್ಲಿ ನೆಲೆಸಿರುವ ಕೊಂಕಣ ಭಾಷಿಗ ಖಾರ್ವಿ ಸಮುದಾಯದವರ ಬಹುದೊಡ್ಡ ಹಬ್ಬ ಹೋಳಿ. ಮಹಾಂಕಾಳಿ ದೇವಸ್ಥಾನದಿಂದ ಹೋಳಿ ಹಬ್ಬದ ಆಚರಣೆ ಆರಂಭಗೊಂಡು, ಕುಂದೇಶ್ವರನಿಗೆ ಪೂಜೆ ಸಲ್ಲಿಸುವುದರೊಂದಿಗೆ ಶುರುವಾಗುತ್ತದೆ. ಮನೆ- ಮನೆಗೆ ತೆರಳುವ ಈ ಸಮುದಾಯದ ಪುರುಷರು ಗುಮ್ಮಟೆ ಬಾರಿಸುತ್ತಾ, ನೃತ್ಯ ಮಾಡುತ್ತಾರೆ.
ಮೂರನೇ ದಿನ ವೆಂಕಟರಮಣ ದೇವರ ದರ್ಶನ ಪಡೆದು, 4ನೇ ದಿನ ಹೋಳಿ ಕಾಮ ದಹನ ಪ್ರಕ್ರಿಯೆ ವಿಶಿಷ್ಟವಾಗಿ ನಡೆಯುತ್ತದೆ. ಖಾರ್ವಿಕೇರಿಯ ಇಬ್ಬರು ಆಕರ್ಷಣೆಗೊಳ ಪಟ್ಟ ವ್ಯಕ್ತಿಗಳು ಹಳೆಕೋಟೆ ಶ್ಮಶಾನದತ್ತ ಧಾವಿಸಿ, ಮೂಳೆ ಗಳನ್ನು ಶೋಧಿಸಿ, ಹಿಂದಿರುಗುತ್ತಾರೆ. ಅವರನ್ನು ಸಾವಿರಾರು ಮಂದಿ ಹಿಂಬಾಲಿಸುತ್ತಾರೆ. ಬೆಳಕು ಹರಿಸುವಂತಿಲ್ಲ. ಹೋಳಿ ಮನೆಗೆ ಹಿಂದಿರುಗುವವರೆಗೂ ಗುಮ್ಮಟೆ ಸದ್ದು ನಿಲ್ಲಿಸು ವಂತಿಲ್ಲ. ಆ ಮೂಳೆಯನ್ನು ಗದ್ದೆಯಲ್ಲಿ ಹೂತು, ಬಳಿಕ ಹೋಳಿ ಹವನ ನಡೆಸಿ, ನರ್ತಿಸಲಾಗುತ್ತದೆ. ಹೋಳಿಯ ಬೆಂಕಿ ಮುಂದೆ ನಡೆಯುವ ನರ್ತನ ಆಕರ್ಷಕವಾಗಿರುತ್ತದೆ.
ಮರುದಿನ ಹೋಳಿ ಮನೆಯಲ್ಲಿ ಅಡಿಕೆ ಮರ ನೆಟ್ಟು, ಮುತ್ತೈದೆಯರು ಪೂಜೆ ಸಲ್ಲಿಸುತ್ತಾರೆ. ಬಳಿಕ ಆ ಮರದ ಒಂದು ಭಾಗವನ್ನು ಕುಂದೇಶ್ವರ ದೇಗುಲಕ್ಕೆ ನೀಡು ವುದರೊಂದಿಗೆ ಕೊನೆಗೊಳ್ಳುತ್ತದೆ. ಈ ಬಾರಿ ಮಾ. 19ರಂದು ಹೋಳಿ ಹಬ್ಬದ ಕೊನೆಯ ದಿನ ಓಕುಳಿಯಲ್ಲಿ ದಿನ ಯುವಕ – ಯುವತಿಯರೆಲ್ಲ ಪರಸ್ಪರ ಮುಖಕ್ಕೆ ಬಣ್ಣ ಹಚ್ಚಿಕೊಂಡು ಕುಣಿಯುತ್ತ ಹಾಡುತ್ತಾ ಮೆರವಣಿಗೆಯಲ್ಲಿ ಸಾಗುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.