ರೆಪೋ ದರ ಇಳಿಕೆ ಗೃಹ ಸಾಲ ಅಗ್ಗ?
ಆರ್‌ಬಿಐನಿಂದ ಮಹತ್ವದ ನಿರ್ಧಾರ
Team Udayavani, Jun 7, 2019, 6:10 AM IST
ಮುಂಬೈ: ದೇಶದ ಗೃಹ ಮತ್ತು ವಾಹನ ಸಾಲ ಬಳಕೆದಾರರಿಗೆ ಸಿಹಿ ಸುದ್ದಿ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸತತ ಮೂರನೇ ಬಾರಿಗೆ ರೆಪೋ ದರವನ್ನು ಇಳಿಕೆ ಮಾಡಿದ್ದು, ಶೀಘ್ರದಲ್ಲೇ ನಿಮ್ಮ ಇಎಂಐ ಇಳಿಕೆಯಾಗಲಿದೆ.
ಗುರುವಾರ ಆರ್‌ಬಿಐ ಕೇಂದ್ರ ಕಚೇರಿಯಲ್ಲಿ ನಡೆದ ಈ ವಿತ್ತ ವರ್ಷದ ಮೊದಲ ತ್ತೈಮಾಸಿಕ ಸಭೆಯಲ್ಲಿ ಶೇ.0.25 ರೆಪೋದರವನ್ನು ಇಳಿಕೆ ಮಾಡಲು ನಿರ್ಧರಿಸಲಾಗಿದೆ. ತನ್ನ ‘ತಟಸ್ಥ’ ನೀತಿಯಿಂದ ‘ಹೊಂದಾಣಿಕೆ’ ನೀತಿ ಅಳವಡಿಸಿಕೊಂಡಿರುವ ಆರ್‌ಬಿಐನ 6 ಸದಸ್ಯರ ಹಣಕಾಸು ನೀತಿ ಸಮಿತಿ, ರೆಪೋ ದರ ಇಳಿಸಲು ತೀರ್ಮಾನಿಸಿದೆ. ಇದರಿಂದಾಗಿ ಹಾಲಿ ರೆಪೋ ದರ ಶೇ. 6ರಿಂದ ಶೇ. 5.75ಕ್ಕೆ ಇಳಿಕೆಯಾಗ ಲಿದೆ. 9 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಆರ್‌ಬಿಐ ತನ್ನ ರೆಪೋ ದರವನ್ನು ಶೇ.6ಕ್ಕಿಂತ ಕೆಳಕ್ಕಿಳಿಸಿದೆ. ಅಷ್ಟೇ ಅಲ್ಲ, ಕಳೆದ ಒಂದು ವರ್ಷದಲ್ಲಿ ಮೂರನೇ ಬಾರಿ ಆರ್‌ಬಿಐ ರೆಪೋ ದರ ಇಳಿಕೆ ಮಾಡುತ್ತಿದೆ.
ಈ ನಿರ್ಧಾರದಿಂದಾಗಿ ಗೃಹ, ವಾಹನ ಮತ್ತು ಇತರ ಸಾಲಗಳ ಮೇಲಿನ ಬಡ್ಡಿ ದರಗಳು ಇಳಿಕೆಯಾಗುವ ನಿರೀಕ್ಷೆ ಇದೆ. ರೆಪೋ ದರ ಕಡಿತಗೊಳಿಸಿದ ಬಳಿಕ ಮಾತನಾಡಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ಬ್ಯಾಂಕುಗಳು ಈ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಬೇಕು ಎಂದು ಹೇಳಿದ್ದಾರೆ.
ಅರ್ಥ ವ್ಯವಸ್ಥೆಗೆ ಅನುಕೂಲ: ಆರ್ಥಿಕ ಪ್ರಗತಿಯ ಕುಂಠಿತ, ಮಾರುಕಟ್ಟೆಯ ಏರಿಳಿತ, ಬ್ಯಾಂಕುಗಳ ಬಡ್ಡಿದರ ಮುಂತಾದ ಕಾರಣಗಳಿಂದಾಗಿ ಆಟೋಮೊಬೈಲ್ ಸೇರಿದಂತೆ ಹಲವಾರು ಪ್ರಮುಖ ಉದ್ಯಮಗಳು ಗ್ರಾಹಕರ ಅಭಾವದಿಂದ ಇಳಿಮುಖ ಕಾಣತೊಡಗಿತ್ತು. ಅನಿಯಂತ್ರಿಕ ಲೇವಾದೇವಿ ವ್ಯವಹಾರಗಳಿಂದಾಗಿ ಆರ್ಥಿಕತೆಯಲ್ಲಿ ಮತ್ತಷ್ಟು ಏರಿಳಿತಗಳು ಕಂಡುಬಂದಿದ್ದವು. ಈಗ, ರೆಪೋ ದರದ ಇಳಿಕೆಯಿಂದಾಗಿ ಈ ಎಲ್ಲಾ ಸಮಸ್ಯೆಗಳಿಗೆ ಏಕಕಾಲದಲ್ಲಿ ಅಲ್ಪ ಮುಕ್ತಿ ಸಿಗಬಹುದೆಂದು ಅಂದಾಜಿಸಲಾಗಿದೆ.
ಪ್ರಸಕ್ತ ವರ್ಷದಲ್ಲಿ ಭಾರತದ ಆರ್ಥಿಕತೆಯನ್ನು ಶತಾಯ ಗತಾಯ ಹೆಚ್ಚಿಸಲು ಮೋದಿ ಸರ್ಕಾರ ಪ್ರಯತ್ನಿಸುತ್ತಿದೆ. ಅದಕ್ಕೆ ರೆಪೋ ದರ ಇಳಿಕೆ ಬಹುಪಾಲು ಸಹಾಯ ಮಾಡಲಿದೆ. ಆರ್ಥಿಕ ಪ್ರಗತಿಯತ್ತ ಭಾರತ ಹೆಜ್ಜೆ ಹಾಕಿದರೆ ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಬಂಡವಾಳ ಹೂಡಿಕೆಯ ಜತೆಗೆ ಮತ್ತಷ್ಟು ಅಭಿವೃದ್ಧಿಗೆ ಪೂರಕವಾಗುವಂಥ ಅಂಶಗಳನ್ನು ಭಾರತ ನಿರೀಕ್ಷಿಸಬಹುದಾಗಿದೆ.
ಮ್ಯೂಚ್ಯುವಲ್ ಫಂಡ್ ಕ್ಷೇತ್ರಕ್ಕೆ: ದೀರ್ಘಾವಧಿ ಡೆಟ್ ಮ್ಯೂಚ್ಯುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿ ರುವವರಿಗೆ ಇದು ಶುಭದಾಯಕ. ಇದು ಮ್ಯೂಚ್ಯು ವಲ್ ಫಂಡ್ ಮಾರುಕಟ್ಟೆಯು ಹಠಾತ್ತಾಗಿ ಕುಸಿಯುವುದರಿಂದ ತಡೆಯುತ್ತದೆ. ಹಾಗಾಗಿ, ಆ ಕ್ಷೇತ್ರದ ಬೆಳವಣಿಗೆಗೆ ಇದು ಸಹಕಾರಿಯಾಗಿದೆ.
ಸಣ್ಣ ಉದ್ದಿಮೆಗಳಿಗೆ: ಸಣ್ಣ ಉದ್ದಿಮೆಗಳಿಗೂ ಇದು ಸಹಕಾರಿ. ಈಗಾಗಲೇ ಸಣ್ಣ ಉದ್ದಿಮೆಗಳ ವಿದೇಶಿ ವ್ಯವಹಾರಗಳಿಗೆ ಅನುಕೂಲವಾಗುವಂತೆ ವಿದೇಶ ವಿನಿಮಯ ವ್ಯವಹಾರ ಸಂಸ್ಥೆ ಸ್ಥಾಪಿಸುವ ಆಶ್ವಾಸನೆಯನ್ನು ಆರ್‌ಬಿಐ ನೀಡಿದೆ. ಜತೆಗೆ, ಈ ಕ್ಷೇತ್ರಕ್ಕೆ ನೆರವಾಗಲು ಅಲ್ಪ ಪ್ರಮಾಣದ ಪೇಮೆಂಟ್ ಬ್ಯಾಂಕಿಂಗ್, ಚಿಕ್ಕ ಆರ್ಥಿಕ ಬ್ಯಾಂಕ್‌ಗಳನ್ನು ಸ್ಥಾಪಿಸುವ ಇರಾದೆಯನ್ನೂ ಆರ್‌ಬಿಐ ವ್ಯಕ್ತಪಡಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.