ಹುಬ್ಬಳ್ಳಿ ಇನ್ಫೋಸಿಸ್ ಕಾರ್ಯಾರಂಭ ಸನ್ನಿಹಿತ? ಟ್ವಿಟರ್ ಅಭಿಯಾನದ ಫಲ
ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ, ಐಟಿ-ಬಿಟಿ ಸಚಿವರಿಗೂ ಮನವಿ ಸಲ್ಲಿಸಲಾಗಿತ್ತು.
Team Udayavani, Jul 16, 2022, 11:53 AM IST
ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಮಾಹಿತಿ-ತಂತ್ರಜ್ಞಾನದ ವೇಗೋತ್ಕರ್ಷ ನಿರೀಕ್ಷೆಯೊಂದಿಗೆ ಹುಬ್ಬಳ್ಳಿಯಲ್ಲಿ ಐಟಿ ಉದ್ಯಮದ ದೈತ್ಯ ಕಂಪೆನಿ “ಇನ್ಫೋಸಿಸ್’ ಕಾರ್ಯಾರಂಭದ ಶುಭಲಕ್ಷಣ ಗೋಚರಿಸತೊಡಗಿದೆ. ಇದಕ್ಕೆ ಪೂರಕ ಎಂಬಂತೆ ಕಂಪೆನಿ ಈ ಭಾಗದ ಐಟಿ ಉದ್ಯೋಗಿಗಳ ಸಭೆ ನಡೆಸಿದ್ದು, ಹುಬ್ಬಳ್ಳಿ ಕೇಂದ್ರ ಆರಂಭ ಯಾವಾಗ ಎಂಬುದನ್ನು ಅಧಿಕೃತ ಘೋಷಣೆ ಮಾಡಬೇಕಾಗಿದೆ.
“ಇನ್ಫೋಸಿಸ್’ ನಗರದ ಗೋಕುಲ ರಸ್ತೆಯಲ್ಲಿ ಬೃಹತ್ ಕಟ್ಟಡ ನಿರ್ಮಾಣ ಮಾಡಿದೆ. ಇದರ ಕಾರ್ಯಾರಂಭದ ಬಗ್ಗೆ ಮನವಿ-ಒತ್ತಾಯಗಳು ಕಳೆದ ಮೂರ್‍ನಾಲ್ಕು ವರ್ಷಗಳಿಂದಲೇ ಇದ್ದು, ಸರಕಾರ-ಕಂಪೆನಿ ನಡುವೆ ಈ ಕುರಿತು ಚರ್ಚೆ ನಡೆದಿತ್ತು. ಕೆಸಿಸಿಐ, ಹುಬ್ಬಳ್ಳಿ, ಐಟಿ ಉದ್ಯಮಿಗಳು ಇನ್ನಿತರರು ಕಂಪೆನಿ ಆರಂಭಕ್ಕೆ ಮನವಿ, ಸಂಪರ್ಕದ ಯತ್ನ ನಡೆಸಿದ್ದರು. ಕೆಲ ದಿನಗಳ ಹಿಂದೆಯಷ್ಟೇ “ಸ್ಟಾರ್ಟ್-ಇನ್ಫೋಸಿಸ್’ ಎಂಬ ಆನ್‌ಲೈನ್ ಅಭಿಯಾನ ಆರಂಭವಾಗಿತ್ತು. ಈ ಎಲ್ಲ ಯತ್ನಗಳಿಗೆ ಫಲ ಎನ್ನುವಂತೆ ಇನ್ಫೋಸಿಸ್ ಕಂಪೆನಿ ಹುಬ್ಬಳ್ಳಿ ಕೇಂದ್ರ ಕಾರ್ಯಾರಂಭ ನಿಟ್ಟಿನಲ್ಲಿ ಮತ್ತೂಂದು ಹೆಜ್ಜೆ ಮುಂದಿರಿಸಿದೆ ಎಂಬ ವಿಶ್ವಾಸ ಮೂಡತೊಡಗಿದೆ.
ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಐಟಿ-ಬಿಟಿ ಉದ್ಯಮಕ್ಕೆ ಪ್ರೋತ್ಸಾಹ, ಸೌಲಭ್ಯ, ನೀತಿಗಳನ್ನು ರೂಪಿಸಿದ್ದರು. ಪರಿಣಾಮ ಬೆಂಗಳೂರು ಐಟಿ-ಬಿಟಿ ವಿಷಯವಾಗಿ ಜಗತ್ತಿನ ಗಮನ ಸೆಳೆದು, ಸಿಲಿಕಾನ್ ಸಿಟಿ ಎಂಬ ಖ್ಯಾತಿಗೂ ಪಾತ್ರವಾಗಿತ್ತು. ಕೃಷ್ಣ ಅವರು ಬೆಂಗಳೂರು ಅಷ್ಟೇ ಅಲ್ಲದೆ ರಾಜ್ಯದ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಕಲಬುರಗಿ ಕಡೆಗಳಲ್ಲಿಯೂ ಐಟಿ-ಬಿಟಿ ಬೆಳೆಯಬೇಕು ಎಂಬ ಬಯಕೆ ಹೊಂದಿದ್ದರು. ಅದಕ್ಕೆ ಪೂರಕವಾಗಿ ಕೆಲವೆಡೆ ಐಟಿ ಪಾರ್ಕ್‌ಗಳ ನಿರ್ಮಾಣ ಕಾರ್ಯ ಕೈಗೊಂಡಿದ್ದರು.
ಹುಬ್ಬಳ್ಳಿಯಲ್ಲಿ ಐಟಿ ಪಾರ್ಕ್ ನಿರ್ಮಾಣವಾಗಿತ್ತು. ಕೆಲ ವರ್ಷಗಳ ನಂತರದಲ್ಲಿ ಆರ್ಯಭಟ ಟೆಕ್ ಪಾರ್ಕ್ ನಿರ್ಮಾಣವಾದರೂ ನಿರೀಕ್ಷಿತ ಐಟಿ ಬೆಳವಣಿಗೆ ಸಾಧ್ಯವಾಗಿಲ್ಲ. ಈ ನಡುವೆ ವಿಶ್ವದ ದೈತ್ಯ ಐಟಿ ಕಂಪೆನಿ ಇನ್ಫೋಸಿಸ್ ಹುಬ್ಬಳ್ಳಿಯಲ್ಲಿ ತನ್ನ ಕೇಂದ್ರ ಆರಂಭದ ಘೋಷಣೆ ಮಾಡಿದಾಗ ರಾಜ್ಯ ಸರಕಾರದ ಉನ್ನತ ಅನುಮೋದನೆ ಕಮಿಟಿ ಐಟಿ-ಎಸ್‌ಇಝಡ್‌ದಡಿ ಇದಕ್ಕೆ ಅನುಮೋದನೆ ನೀಡಿತ್ತು.
ಇನ್ಫೋಸಿಸ್ ಹುಬ್ಬಳ್ಳಿಯ ಗೋಕುಲ ರಸ್ತೆ ವಿಮಾನ ನಿಲ್ದಾಣದ ಜಾಗಕ್ಕೆ ಹೊಂದಿಕೊಂಡಿರುವಂತಿರುವ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿತ್ತು. ರಾಜ್ಯ ಸರಕಾರ 2014ರ ಜುಲೈನಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿತ್ತು. ಇನ್ಫೋಸಿಸ್‌ಗೆ 17.42 ಹೆಕ್ಟೇರ್‌ನಷ್ಟು ಭೂಮಿ ನಿಗದಿಪಡಿಸಲಾಗಿತ್ತಾದರೂ, ಅನಂತರದಲ್ಲಿ ಹಲವು ತೊಂದರೆ-ಸಮಸ್ಯೆಗಳು ಎದುರಾಗಿ ಕಂಪೆನಿ ಹಲವು ಸಂಕಷ್ಟಗಳ ನಡುವೆಯೂ ಭೂ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಿತ್ತು.
2015ರಲ್ಲಿ ಕೇಂದ್ರ ಸರಕಾರ ವಿಶೇಷ ಆರ್ಥಿಕ ವಲಯ(ಎಸ್ ಇಝಡ್)ದಡಿ ಸಿಕ್ಕ ಅನುಮೋದನೆಯಂತೆ 2016ರ ಮಾರ್ಚ್‌ನಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಆರಂಭಿಸಿತ್ತು. 2018ರ ವೇಳೆಗೆ ಕಟ್ಟಡ ಪೂರ್ಣಗೊಂಡಿತ್ತು. ಅದೇ ವರ್ಷದ ಜನೆವರಿಯಲ್ಲಿ ಕಂಪೆನಿ ಹುಬ್ಬಳ್ಳಿ ಕೇಂದ್ರ ಕಾರ್ಯಾರಂಭದ ಬಗ್ಗೆ ಘೋಷಿಸಿತ್ತು. ಮೊದಲ ಹಂತದಲ್ಲಿ ಸುಮಾರು 1,500 ಜನ ಉದ್ಯೋಗಿಗಳಿಗೆ ಅವಕಾಶ ನೀಡುವುದಾಗಿ ತಿಳಿಸಿತ್ತು. ಆದರೆ, ಕಾರ್ಯಾರಂಭ ಆಗಿರಲಿಲ್ಲ. ಮುಂದೆ ಕೋವಿಡ್ ಆವರಿಸಿದ್ದರಿಂದ ಎರಡು ವರ್ಷ ಸಾಧ್ಯವಾಗಿರಲಿಲ್ಲ. ಇನ್ಫೋಸಿಸ್ ಮೈಸೂರು, ಮಂಗಳೂರು ಕೇಂದ್ರಗಳು ನಡೆಯುತ್ತಿದ್ದು, ಹುಬ್ಬಳ್ಳಿ ಕೇಂದ್ರ ಮಾತ್ರ ಆರಂಭವಾಗಿರಲಿಲ್ಲ.
ಟ್ವಿಟರ್ ಅಭಿಯಾನ: ಐಟಿ ಉದ್ಯಮಿಗಳು, ಸಾಮಾಜಿಕ ಚಿಂತಕರು, ಉದ್ಯಮ ಸಂಸ್ಥೆಗಳು, ಜನಪ್ರತಿನಿಧಿಗಳು ಇನ್ಫೋಸಿಸ್ ಹುಬ್ಬಳ್ಳಿ ಘಟಕ ಆರಂಭಿಸುವ ಕುರಿತು ನಿರಂತರ ಮನವಿ, ಒತ್ತಾಯ ಮಾಡುತ್ತಲೇ ಇದ್ದರು, ಸೂಕ್ತ ಸ್ಪಂದನೆ ವ್ಯಕ್ತವಾಗಿರಲಿಲ್ಲ. ಕೋವಿಡ್ ನಂತರದಲ್ಲಿ ಈ ಧ್ವನಿಯೂ ಮೌನವಾಗಿತ್ತು.
ಇನ್ಫೋಸಿಸ್ ಕಂಪೆನಿ ಇದೇ ವರ್ಷದ ಜೂನ್ 20ರಂದು ಇಂದೋರ್, ಕೊಯಮತ್ತೂರ, ವಿಶಾಖಪಟ್ಟಣ, ನೋಯಿಡಾ, ಕೊಲ್ಕತ್ತಾ, ನಾಗ್ಪುರ ಸೇರಿ ಆರು ಕಡೆ ಕೇಂದ್ರ ಆರಂಭಿಸುವುದಾಗಿ ಘೋಷಿಸಿತ್ತು. ಇದನ್ನು ಗಮನಿಸಿದ ಅನೇಕರು ರಾಜ್ಯ ಸರಕಾರ ಬಿಯಾಂಡ್ ಬೆಂಗಳೂರಿಗೆ ಐಟಿ-ಬಿಟಿ ಉದ್ಯಮ ನೀತಿಯಲ್ಲಿ ಒತ್ತು ನೀಡಿದೆ. ಆದರೆ, ಹುಬ್ಬಳ್ಳಿಯಲ್ಲಿನ ತನ್ನದೇ ಕಟ್ಟಡದಲ್ಲಿ ಕಾರ್ಯಾಂಭಕ್ಕೆ ಒತ್ತು ನೀಡದೆ ಇನ್ಫೋಸಿಸ್ ಬಿಯಾಂಡ್ ಕರ್ನಾಟಕಕ್ಕೆ ಮುಂದಾಗಿದೆ
ಎಂದು “ಸ್ಟಾರ್ಟ್-ಇನ್ಫೋಸಿಸ್ ಹುಬ್ಬಳ್ಳಿ’ ಎಂಬ ಆನ್‌ಲೈನ್ ಅಭಿಯಾನ ಆರಂಭಿಸಿದ್ದರು. ಈ ಅಭಿಯಾನಕ್ಕೆ ಸುಮಾರು ಮೂರು ಸಾವಿರ ಜನರು ಸ್ಪಂದಿಸುವ ಮೂಲಕ ಒತ್ತಾಯ ಮಾಡಿದ್ದರು. ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ, ಐಟಿ-ಬಿಟಿ ಸಚಿವರಿಗೂ ಮನವಿ ಸಲ್ಲಿಸಲಾಗಿತ್ತು. ಇನ್ಫೋಸಿಸ್ ಪ್ರಮುಖರಿಗೂ ಮನವಿ ರವಾನಿಸಲಾಗಿತ್ತು.
ಹೀಗೆ ಆನ್‌ಲೈನ್ ಅಭಿಯಾನದ ಮೂಲಕ ಎದುರಾದ ಒತ್ತಾಯದ ಫಲವೋ ಅಥವಾ ಕಾರ್ಯಾರಂಭಕ್ಕೆ ಕಾಲ ಕೂಡಿ ಬಂದಿದೆ ಎಂಬ ನಿರ್ಣಯ ಕೈಗೊಂಡಿತೋ ತಿಳಿಯದು. ಆದರೆ, ಇನ್ಫೋಸಿಸ್ “ವರ್ಕ್ ಫ್ರಾಮ್ ಹೋಂ’ದಡಿ ಕಾರ್ಯನಿರ್ವಹಿಸುತ್ತಿರುವ ಕಂಪೆನಿಯ ಉತ್ತರ ಕರ್ನಾಟಕ ಮೂಲದ ಉದ್ಯೋಗಿಗಳಿಗೆ ಜು.15ರಂದು ಹುಬ್ಬಳ್ಳಿಯ ಕೇಂದ್ರದಲ್ಲಿ ಸಭೆಗೆ ಹಾಜರಾಗುವಂತೆ ಇ-ಮೇಲ್ ಸಂದೇಶ ಕಳುಹಿಸಿತ್ತು ಎನ್ನಲಾಗಿದೆ. ಅಂತೆಯೇ ಶುಕ್ರವಾರ ಸುಮಾರು 250ಕ್ಕೂ ಹೆಚ್ಚು ಉದ್ಯೋಗಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಹುಬ್ಬಳ್ಳಿ-ಧಾರವಾಡ, ಹಾವೇರಿ, ಗದಗ, ಬೆಳಗಾವಿ, ಉತ್ತರ ಕನ್ನಡ, ಕೊಪ್ಪಳ, ಬಳ್ಳಾರಿ, ರಾಯಚೂರು ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಮೂಲದ ಇನ್ಫೋಸಿಸ್ ಉದ್ಯೋಗಿಗಳು ಪ್ರಸ್ತುತ ಬೆಂಗಳೂರು, ಮೈಸೂರು, ಮಂಗಳೂರು ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಂಪೆನಿ ಹುಬ್ಬಳ್ಳಿ ಕೇಂದ್ರ ಕಾರ್ಯಾರಂಭ ಮಾಡಿದರೆ ಇಲ್ಲಿಗೆ ಬರಲು ಅನೇಕರು ತುದಿಗಾಲ ಮೇಲೆ ನಿಂತಿದ್ದಾರೆ ಎನ್ನಲಾಗುತ್ತಿದೆ. ಇನ್ಫೋಸಿಸ್ ಹುಬ್ಬಳ್ಳಿಯಲ್ಲಿ ಕಾರ್ಯಾರಂಭ ಮಾಡಿದರೆ ಉತ್ತರದಲ್ಲಿ ಐಟಿ ಉದ್ಯಮ ನೆಗೆತ ಕಾಣಲಿದ್ದು, ಪೂರಕ ಉದ್ಯಮಗಳೂ ಬೆಳೆಯಲಿವೆ. ಜತೆಗೆ ಆರ್ಥಿಕಾಭಿವೃದ್ಧಿ ಚಟುವಟಿಕೆಗಳಿಗೆ ಮಹತ್ವದ ಕೊಡುಗೆ ನೀಡಲಿದೆ ಎಂಬುದು ಸ್ಪಷ್ಟ.
ಶೀಘ್ರ ಘೋಷಣೆ ನಿರೀಕ್ಷೆ…
ಹುಬ್ಬಳ್ಳಿಯಲ್ಲಿ “ಇನ್ಫೋಸಿಸ್’ ಕಾರ್ಯಾರಂಭ ಕುರಿತು ಕಂಪೆನಿ ಅತಿ ಶೀಘ್ರವೇ ಅಧಿಕೃತ ಘೋಷಣೆ ಮಾಡುವ ನಿರೀಕ್ಷೆ ಹೊಂದಿದ್ದೇವೆ. ಟ್ವಿಟರ್ ಅಭಿಯಾನ ಮೂಲಕ ಕಂಪೆನಿಗೆ ಮನವಿ ಮಾಡಿದ್ದೇವು. ಸುಮಾರು 3,000ಕ್ಕೂ ಹೆಚ್ಚು ಜನರು ದನಿಗೂಡಿಸಿದ್ದರು. ಸುಮಾರು 15-16 ವರ್ಷಗಳಿಂದ ಇನ್ಫೋಸಿಸ್‌ನಲ್ಲಿರುವ ಉತ್ತರ ಕರ್ನಾಟಕ ಮೂಲದ ಅದರಲ್ಲೂ ಮಹಿಳಾ ಸಿಬ್ಬಂದಿ ಹುಬ್ಬಳ್ಳಿ ಕೇಂದ್ರ ಕಾರ್ಯಾರಂಭಕ್ಕೆ ಕಾತುರರಾಗಿದ್ದು, ಇಲ್ಲಿಗೆ ಬರಲು ಕಾಯುತ್ತಿರುವುದಾಗಿ ತಿಳಿಸಿದ್ದಾರೆ. ಸದ್ಯದ ಮಾಹಿತಿಯಂತೆ “ಇನ್ಫೋಸಿಸ್’ ಮಾಸಾಂತ್ಯಕ್ಕೆ ಮೊದಲ ತ್ತೈಮಾಸಿಕ ವರದಿ ಪ್ರಕಟಿಸಲಿದ್ದು, ಅದೇ ವೇಳೆಗೆ ಹುಬ್ಬಳ್ಳಿ ಕೇಂದ್ರ ಕಾರ್ಯಾರಂಭದ ಬಗ್ಗೆಯೂ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.
ಸಂತೋಷ ನರಗುಂದ, ಪ್ರಮುಖರು,
ಸ್ಟಾರ್ಟ್ ಇನ್ಫೋಸಿಸ್-ಹುಬ್ಬಳ್ಳಿ ಅಭಿಯಾನ
*ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
Negotiation: ಹೆಬ್ಬಾಳ್ಕರ್-ಸಿ.ಟಿ.ರವಿ ಪ್ರಕರಣ ಸಂಧಾನಕ್ಕೆ ಸಿದ್ಧ: ಬಸವರಾಜ ಹೊರಟ್ಟಿ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
National Emblem: ರಾಷ್ಟ್ರ ಲಾಂಛನ ದುರ್ಬಳಕೆಯ ದುಸ್ಸಾಹಸಕ್ಕೆ ಬೀಳಲಿ ಕಡಿವಾಣ
Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ
Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.