ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
ನೇರಾ-ನೇರ: ನನಗೆ ತಿಳಿದಂತೆ ಪೊಲೀಸರು ಸದನಕ್ಕೆ ಬರುವಂತಿಲ್ಲ, ಈ ಬಗ್ಗೆ ಮತ್ತೊಮ್ಮೆ ಚರ್ಚಿಸುತ್ತೇನೆ ಘಟನೆ ವೇಳೆ ನಾನು ಇದ್ದಿದ್ದರೆ ಹೀಗಾಗುತ್ತಿರಲಿಲ್ಲ
Team Udayavani, Dec 25, 2024, 7:25 AM IST
ಬೆಳಗಾವಿ ಚಳಿಗಾಲದ ಅಧಿವೇಶನ ಮುಗಿದು ವಾರವಾಗುತ್ತಾ ಬಂದರೂ ಸಿ.ಟಿ.ರವಿ ಹೇಳಿದ್ದಾರೆನ್ನಲಾಗಿರುವ ಅಶ್ಲೀಲ ಪದ ಸೃಷ್ಟಿಸಿದ ವಿವಾದದ ಕಿಚ್ಚು ಮಾತ್ರ ಇನ್ನೂ ಧಗಧಗಿಸುತ್ತಿದೆ. ಘಟನೆಗೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸಭಾಪತಿ ತಮ್ಮ ನಿರ್ಧಾರ ಪ್ರಕಟಿಸಿದ ನಂತರವೂ ನಡೆದ ಹಲವು ಬೆಳವಣಿಗೆಗಳು ಆ ವಿವಾದದ ಸುತ್ತ ಗಿರಕಿ ಹೊಡೆಯುತ್ತಿವೆ. ಒಂದೆಡೆ, ವಿಧಾನಸಭಾ ಅಧ್ಯಕ್ಷರು ಇದೇ ಘಟನೆ ಯನ್ನು ಹಕ್ಕುಬಾಧ್ಯತಾ ಸಮಿತಿಗೆ ನೀಡಿದ್ದಾರೆ.
ಮತ್ತೊಂದೆಡೆ ಪೊಲೀಸರು, ಘಟನಾ ಸ್ಥಳದ ಅಂದರೆ ಮೇಲ್ಮನೆಯ ಮಹಜರು ಮಾಡಲು ನಿರ್ಧರಿಸಿದ್ದಾರೆ. ಇದೆಲ್ಲದರ ನಡುವೆ ಇಡೀ ಮೇಲ್ಮನೆಯ ಮುಖ್ಯಸ್ಥರಾಗಿರುವ ತಮ್ಮ ಹಕ್ಕಿಗೆ ಚ್ಯುತಿ ಬಂದಿರುವ ಬಗ್ಗೆ ಸಭಾಪತಿ ಬಸವರಾಜ ಹೊರಟ್ಟಿ ಅನುಮಾನ ವ್ಯಕ್ತಪಡಿಸಿದ್ದಾರೆ. ಆ ನಿಟ್ಟಿನಲ್ಲಿ ಕಾನೂನು ತಜ್ಞರು ಮತ್ತು ಕಾರ್ಯದರ್ಶಿಗಳೊಂದಿಗೆ ಸಮಾಲೋಚನೆ ನಡೆಸಲು ನಿರ್ಧರಿಸಿದ್ದಾರೆ. ಒಟ್ಟಾರೆಯಾಗಿ, ಈ ಪ್ರಕರಣದ ವಿವಿಧ ಆಯಾಮಗಳ ಪರಿಶೀಲನೆಯಲ್ಲಿ ವ್ಯಸ್ತರಾಗಿರುವ ಸಭಾಪತಿ ಬಸವರಾಜ ಹೊರಟ್ಟಿ “ಉದಯವಾಣಿ‘ಯೊಂದಿಗೆ ನೇರಾ-ನೇರ ಮಾತನಾಡಿದ್ದಾರೆ.
1. ಮೇಲ್ಮನೆಯ ಕಸ್ಟೋಡಿಯನ್ ನೀವು. ನಿಮ್ಮ ಉಪಸ್ಥಿತಿಯಲ್ಲೇ ಇಂಥದ್ದೊಂದು ಘಟನೆ ನಡೆದಿದೆ. ಇದೊಂದು ಕಪ್ಪುಚುಕ್ಕೆ ಆಯಿತಲ್ಲವೇ?
ಕಪ್ಪುಚುಕ್ಕೆ ಹೇಗೆ ಆಗುತ್ತದೆ? ಸದನ ಮುಂದೂಡಿದ ಅವಧಿಯಲ್ಲಿ ನಡೆದ ಘಟನೆ ಇದಾಗಿದೆ. ಆದಾಗ್ಯೂ ನಾನು ಎರಡೂ ಕಡೆಯವರನ್ನು ಕರೆಸಿ ವಿಚಾರಣೆ ನಡೆಸಿ ರೂಲಿಂಗ್ ಕೊಟ್ಟಿದ್ದೇನೆ. ಅದರ ನಂತರ ಹೊರಗಡೆ ನಡೆದ ಬೆಳವಣಿಗೆಗಳಿಗೂ ನನಗೂ ಮತ್ತು ನಾನು ಕಸ್ಟೋಡಿಯನ್ ಆಗಿರುವ ಸದನಕ್ಕೂ ಸಂಬಂಧ ಇಲ್ಲ.
2. ನೀವು ರೂಲಿಂಗ್ ಕೊಟ್ಟ ನಂತರವೂ ಕೆಳಮನೆಯಲ್ಲಿ ಅದೇ ಘಟನೆಗೆ ಸಭಾಧ್ಯಕ್ಷರು ಹಕ್ಕುಬಾಧ್ಯತಾ ಸಮಿತಿಗೆ ನೀಡಿ ರೂಲಿಂಗ್ ಕೊಟ್ಟಿದ್ದಾರೆ. ಅದರ ಬಗ್ಗೆ ಏನು ಹೇಳುತ್ತೀರಿ?
ನೋಡಿ, ಇಬ್ಬರ ನಡುವೆ ವಾಕ್ಸಮರ ನಡೆದಿದೆ. ಒಬ್ಬರು ಮೇಲ್ಮನೆ ಸದಸ್ಯರಾಗಿದ್ದರೆ, ಮತ್ತೊಬ್ಬರು ಕೆಳಮನೆ ಸದಸ್ಯರಾಗಿದ್ದಾರೆ. ಹಾಗಾಗಿ, ಕೆಳಮನೆಯಲ್ಲೂ ಅದು ಪ್ರಸ್ತಾಪವಾಗಿ ರೂಲಿಂಗ್ ನೀಡಲಾಗಿದೆ. ಅದಕ್ಕೆ ಅವರು (ಸಭಾಧ್ಯಕ್ಷರು) ಅಂತಿಮವಾಗಿದ್ದರೆ, ಅಲ್ಲಿ ನಡೆದಿದ್ದಕ್ಕೆ ಮತ್ತು ಅದನ್ನು ಆಧರಿಸಿ ನೀಡುವ ತೀರ್ಪಿಗೆ ಅವರು ಸ್ವತಂತ್ರರಾಗಿದ್ದಾರೆ. ಆದರೆ, ಇಲ್ಲಿ ಮಾತ್ರ (ಮೇಲ್ಮನೆಯಲ್ಲಿ) ನಾನೇ ಫೈನಲ್.
3. ಮೇಲ್ಮನೆ ನಿಮ್ಮ ಅಧೀನದಲ್ಲೇ ಇರುವ ಆವರಣ. ನೀವೇ ಹೇಳಿದಂತೆ ರೂಲಿಂಗ್ ಕೂಡ ಕೊಟ್ಟಾಗಿತ್ತು. ನಿಮ್ಮ ಮಾತನ್ನು ಮೀರಿ ಎರಡೂ ಕಡೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಅದು ಸಭಾಪತಿ ಹಕ್ಕುಚ್ಯುತಿ ಆಗುವುದಿಲ್ಲವೇ?
ಪೊಲೀಸರಿಗೆ ಕೊಟ್ಟ ದೂರಿನಲ್ಲಿ ವಿಧಾನ ಪರಿಷತ್ತಿನಲ್ಲಿ ನಡೆದ ಘಟನೆ ಅಂತ ಉಲ್ಲೇಖೀಸಲಾಗಿದೆ. ಪರಿಷತ್ತಿನಲ್ಲಿ ಎಂದು ಉಲ್ಲೇಖೀಸಿರುವುದೇ ತಪ್ಪು. ಮತ್ತೂಂದೆಡೆ ನಾನು ರೂಲಿಂಗ್ ನೀಡಿದ ಘಟನೆ ಬಗ್ಗೆಯೇ ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಸಭಾಪತಿ ಹಕ್ಕಿಗೆ ಚ್ಯುತಿ ಬಂದಿದೆಯೇ ಎಂಬುದರ ಕುರಿತು ಕಾನೂನು ತಜ್ಞರೊಂದಿಗೆ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ.
4.ಈಗ ಸ್ಥಳ ಮಹಜರು ಮಾಡಲು ಅವಕಾಶ ಇಲ್ಲ ಅನ್ನುತ್ತಿದ್ದೀರಿ. ಹಾಗಿದ್ದರೆ, ತನಿಖೆಗೆ ಅಡ್ಡಿಪಡಿಸಿದಂತೆ ಆಗುವುದಿ ಲ್ಲವೇ? ಅಷ್ಟಕ್ಕೂ ಪೊಲೀಸರು ಸದನದ ಮಹಜರು ಮಾಡಲು ನಿಯಮಗಳಲ್ಲಿ ಅವಕಾಶ ಇದೆಯೇ?
ನನಗೆ ಗೊತ್ತಿರುವಂತೆ ನಿಯಮದಲ್ಲಿ ಇದಕ್ಕೆ ಅವಕಾಶ ಇದ್ದಂತಿಲ್ಲ. ಸದನದೊಳಗೆ ಪೊಲೀಸರು ಬರುವಂತಿಲ್ಲ. ಒಂದು ವೇಳೆ ಬಂದರೆ ಪೊಲೀಸರೇ ಜೈಲಿಗೆ ಹೋಗುತ್ತಾರೆ. ಆದಾಗ್ಯೂ ಮತ್ತೊಮ್ಮೆ ಈ ವಿಚಾರದಲ್ಲಿ ನಾನು ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ, ನಿಯಮಗಳು ಏನು ಹೇಳುತ್ತವೆ ಅಂತ ನೋಡಿ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇನೆ.
5. ಇಡೀ ಘಟನೆ ಮತ್ತು ನಂತರದ ಬೆಳವಣಿಗೆಗಳ ಬಗ್ಗೆ ನೀವು ಕೊಟ್ಟ ತೀರ್ಪು ತೃಪ್ತಿ ತಂದಿದೆಯೇ?
ಇಲ್ಲಿ ಮತ್ತೂಮ್ಮೆ ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ. ಮುಖ್ಯವಾಗಿ ಈ ಘಟನೆ ನಡೆಯಬಾರದಿತ್ತು, ನಡೆದು ಹೋಗಿರುವುದು ವಿಷಾದನೀಯ. ಘಟನೆ ನಡೆದಾಗ ನಾನು ಇರಲಿಲ್ಲ. ಒಂದು ವೇಳೆ ನಾನು ಇದ್ದಿದ್ದರೆ, ಅಷ್ಟೆಲ್ಲಾ ವಾಗ್ವಾದಕ್ಕೆ ಅವಕಾಶವನ್ನೂ ಕೊಡುತ್ತಿರಲಿಲ್ಲ. ಘಟನೆ ನಡೆದ ತಕ್ಷಣ ನನಗೆ ಲಭ್ಯವಾದ ಮಾಹಿತಿಯನ್ನು ಆಧರಿಸಿ ಸೂಚನೆ ನೀಡಿದ್ದೇನೆ.
6. ವಿಚಾರಣೆ ನಡೆಸಿರುವುದಾಗಿ ಹೇಳಿದಿರಿ. ಹಾಗಿದ್ದರೆ, ಆ ವೇಳೆ ಸಿ.ಟಿ. ರವಿ ತಮ್ಮ ಮೇಲಿನ ಆರೋಪವನ್ನು ಒಪ್ಪಿಕೊಂಡರಾ?
ಮೊದಲು ಸಚಿವರು ತಮ್ಮ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿರುವುದಾಗಿ ರವಿ ವಿರುದ್ಧ ನನ್ನ ಬಳಿ ದೂರು ಕೊಟ್ಟರು. ತಕ್ಷಣ ನಾನು ರವಿಯನ್ನು
ಕರೆಸಿ, ನಿನ್ನ ಮೇಲೆ ಇಂಥದ್ದೊಂದು ಕಂಪ್ಲೇಂಟ್ ಬಂದಿದೆ ಅಂತ ಕೇಳಿದಾಗ, “ನನಗೂ ಅವರು (ಸಚಿವರು) ಅವಹೇಳನಕಾರಿಯಾಗಿ ಬೈದಿದ್ದಾರೆ ಸರ್, ಬೇಕಿದ್ದರೆ ಕರೆದು ಕೇಳಿ’ ಅಂದರು. ನಾನು ಆಗ ಮಾಹಿತಿ ತರಿಸಿಕೊಂಡೆ. ಇದಿಷ್ಟೇ ನನಗೆ ಗೊತ್ತಿರುವುದು.
7. ಚಿಂತಕರ ಚಾವಡಿಯಲ್ಲಿ ಇತ್ತೀಚೆಗೆ ಇಂಥ ಅಹಿತಕರ ಘಟನೆಗಳಿಗೆ ಸಾಕ್ಷಿಯಾಗುತ್ತಲೇ ಇದೆ. ಹಾಗಿದ್ದರೆ, ಇನ್ನಷ್ಟು ಕಠಿಣ ನಿಯಮ ಗಳನ್ನು ರೂಪಿಸುವ ಅವಶ್ಯಕತೆ ಇದೆಯೇ?
ಈಗಿರುವ ನಿಯಮಗಳೆಲ್ಲವೂ ಸರಿಯಾಗಿವೆ. ಆದರೆ, ಅದರಂತೆ ನಡೆದುಕೊಳ್ಳುವುದು ಕಡಿಮೆ ಆಗುತ್ತಿದೆ ಎಂಬುದೇ ಬೇಸರದ ಸಂಗತಿ. ನನ್ನ ಪ್ರಕಾರ ನಿಯಮಗಳ ಬದಲಾವಣೆ ಅವಶ್ಯಕತೆ ಇಲ್ಲ. ಹಿರಿಯರ ಮನೆ ಅದು. ಅದರ ಘನತೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳುವ ಕರ್ತವ್ಯ ನಮ್ಮೆಲ್ಲರದ್ದಾಗಿದೆ. ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ಮರುಕಳಿಸದಂತೆ ಎಲ್ಲರೂ ಎಚ್ಚರವಹಿಸಬೇಕು.
8. ಉತ್ತರ ಕರ್ನಾಟಕದಲ್ಲಿ ನಡೆದ ಈ ಬಾರಿಯ ಅಧಿವೇಶನ ತೃಪ್ತಿ ತಂದಿದೆಯೇ?
ಖಂಡಿತ ತೃಪ್ತಿ ತಂದಿದೆ. ನಡಾವಳಿಯ ಬಹುತೇಕ ವಿಷಯಗಳನ್ನು ಪೂರ್ಣಗೊಳಿಸಿದ್ದೇವೆ. ಜಿಲ್ಲಾಡಳಿತವೂ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿತ್ತು. ವಿಶೇಷವಾಗಿ ಮೂರು ದಿನಗಳು ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತು ಚರ್ಚೆ ನಡೆದಿದೆ. ರಾತ್ರಿ 10.30ರವರೆಗೆ ಮೇಲ್ಮನೆ ಕಲಾಪಗಳು ನಡೆದಿದ್ದು, ಸದಸ್ಯರೆಲ್ಲರೂ ಅದರಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಇದೆಲ್ಲವೂ ನನಗೆ ವೈಯಕ್ತಿಕವಾಗಿ ತೃಪ್ತಿ ತಂದಿದೆ. ಆದರೆ, ಕೊನೆಯ ದಿನ ನಡೆದ ಘಟನೆಯು ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ ಮಾಡಿಬಿಟ್ಟಿತು.
ಉದಯವಾಣಿ ಸಂದರ್ಶನ: ವಿಜಯಕುಮಾರ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
ಗಾಂಧಿ ಭಾರತ್ ಕಾರ್ಯಕ್ರಮದ ಬಗ್ಗೆ ಶೆಟ್ಟರ್ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ
Congress ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ದೇಶದ ಇತಿಹಾಸದ ಒಂದು ಐತಿಹಾಸಿಕ ಕಾರ್ಯಕ್ರಮ
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
Haveri: ಕಾರುಗಳ ನಡುವೆ ಭೀಕರ ಅಪಘಾತ; ನಾಲ್ವರ ದುರ್ಮರಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.