ಕೋವಿಡ್ ಪ್ರಕರಣ ಹೆಚ್ಚಳ: ಆತಂಕ ಬೇಡ, ಇರಲಿ ಮುನ್ನೆಚ್ಚರಿಕೆ
Team Udayavani, Jun 13, 2022, 6:00 AM IST
ಕರ್ನಾಟಕವೂ ಸೇರಿದಂತೆ ದೇಶದಲ್ಲಿ ಮತ್ತೆ ಕೊರೊನಾ ಕೇಸುಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ 500ಕ್ಕೂ ಹೆಚ್ಚು ಪ್ರಕರಣ ಕಾಣಿಸಿಕೊಳ್ಳುತ್ತಿವೆ. ಅದರಲ್ಲೂ ಬೆಂಗಳೂರಿನಲ್ಲಿಯೇ ಹೆಚ್ಚು ಪ್ರಕರಣ ಕಂಡು ಬರುತ್ತಿರುವುದು ಕೊಂಚ ಆತಂಕದ ವಿಚಾರ. ಮಾಸ್ಕ್ ಮರೆತಿರುವುದರಿಂದಲೇ ಹೆಚ್ಚೆಚ್ಚು ಕೊರೊನಾ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ ಎಂದು ತಜ್ಞರು ಹೇಳುತ್ತಿದ್ದು, ಒಂದು ಲೆಕ್ಕಾಚಾರದಲ್ಲಿ ಇದು ಸರಿ ಇರಬಹುದು ಎಂದೂ ಹೇಳಬಹುದಾಗಿದೆ.
ರವಿವಾರ ಬೆಳಗ್ಗೆ ಸರಕಾರ ಬಹಿರಂಗ ಪಡಿಸಿದ ವರದಿ ಪ್ರಕಾರ, ದೇಶದಲ್ಲಿ ರವಿವಾರ 8,582 ಪ್ರಕರಣ ಪತ್ತೆಯಾಗಿವೆ. ಅಲ್ಲದೆ 4 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಈಗಲೂ ಕಡಿಮೆ ಇರುವುದು ಸಮಾಧಾನಕರ. ಅಲ್ಲದೆ ಸಕ್ರಿಯ ಪ್ರಕರಣಗಳ ಸಂಖ್ಯೆ 44,513ಕ್ಕೆ ಏರಿಕೆಯಾಗಿದೆ. ಮೊನ್ನೆ ಮೊನ್ನೆವರೆಗೂ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 10 ಸಾವಿರದ ಒಳಗೆ ಇತ್ತು ಎಂಬುದನ್ನು ಗಮನಿಸಬೇಕು.
ಇನ್ನು ಮಹಾರಾಷ್ಟ್ರದಲ್ಲಿ ದಿನಂಪ್ರತಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ದೇಶದಲ್ಲಿ ಪತ್ತೆಯಾಗುತ್ತಿರುವ ಪ್ರಕರಣಗಳಲ್ಲಿ ಶೇ.50 ಇಲ್ಲಿನವೇ ಆಗಿವೆ. ಮುಂಬಯಿ ಒಂದರಲ್ಲಿಯೇ 10 ಸಾವಿರಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು ದಾಖಲಾಗಿವೆ. ಅಂತೆಯೇ ಥಾಣೆ ಜಿಲ್ಲೆಯಲ್ಲಿಯೂ ಕಳೆದ 3 ದಿನಗಳಿಂದ ನಿತ್ಯವೂ 500ಕ್ಕೂ ಹೆಚ್ಚು ಕೇಸುಗಳು ದೃಢ ಪಡುತ್ತಿವೆ.
ಮಹಾರಾಷ್ಟ್ರದಲ್ಲಿ ಕೇಸುಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಕರ್ನಾಟಕದ ಪಾಲಿಗೆ ಕೊಂಚ ಆತಂಕದ ಸಂಗತಿಯೇ ಹೌದು. ಇದು ನೆರೆ ರಾಜ್ಯವಾಗಿರುವುದಷ್ಟೇ ಅಲ್ಲ, ದಿನನಿತ್ಯವೂ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಾಡುವವರ ಸಂಖ್ಯೆಯೂ ಬಹಳಷ್ಟಿದೆ. ಹೀಗಾಗಿ ಕಟ್ಟೆಚ್ಚರದಿಂದ ಇರಬೇಕಾದ ಅಗತ್ಯತೆ ಇದೆ. ಅಲ್ಲದೆ ಗಡಿಯಲ್ಲಿ ಈಗಲೇ ನಿಗಾ ವಹಿಸುವುದೂ ಅತ್ಯಂತ ಕ್ಷೇಮಕರ.
ಒಂದು ಸಮಾಧಾನದ ವಿಚಾರವೆಂದರೆ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಇವು ಮಾರಕವಾದ ರೂಪಾಂತರಿ ಹೊಂದಿಲ್ಲ. ಅಲ್ಲದೇ ತಜ್ಞರ ಪ್ರಕಾರ, ದೇಶದಲ್ಲಿ ಹೊಸದಾಗಿ ಯಾವುದೇ ರೂಪಾಂತರಿ ಪತ್ತೆಯಾಗಿಲ್ಲ. ಜತೆಗೆ ಸಾವುಗಳ ಸಂಖ್ಯೆ ಇನ್ನೂ ಕಡಿಮೆ ಇರುವುದರಿಂದ ಅಂಥ ಆತಂಕಪಡುವ ಅಗತ್ಯವಿಲ್ಲ ಎಂದು ತಜ್ಞರು ಹೇಳುತ್ತಾರೆ.
ಇದೆಲ್ಲದರ ಜತೆಗೆ, ಈ ಹಿಂದೆ ಕೊರೊನಾ ಬಂದು ಹೋಗಿರುವುದು, ಲಸಿಕೆ ಪಡೆದಿರುವುದು ಕೊರೊನಾ ವಿರುದ್ಧದ ಹೋರಾಟದಲ್ಲಿ ಜನತೆಗೆ ಶಕ್ತಿಶಾಲಿ ಅಸ್ತ್ರ ಸಿಕ್ಕಂತಾಗಿದೆ. ಆದರೆ, ಬೂಸ್ಟರ್ ಡೋಸ್ ಪಡೆಯುವ ವಿಚಾರದಲ್ಲಿ ಜನತೆ ಹಿಂದೆ ಬಿದ್ದಿರುವುದು ಕೊಂಚ ಆತಂಕದ ವಿಷಯವೇ ಆಗಿದೆ. ಆರಂಭದಲ್ಲಿ ಸರಕಾರ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಉಚಿತವಾಗಿ ಬೂಸ್ಟರ್ ಡೋಸ್ ಕೊಟ್ಟಿದ್ದು, ಅವರ ಸಂಖ್ಯೆ ಹೆಚ್ಚಾಗಿದೆ. ಎಪ್ರಿಲ್‌ನಿಂದ ದೇಶಾದ್ಯಂತ ಬೂಸ್ಟರ್ ಅಥವಾ ಮುನ್ನೆಚ್ಚರಿಕ ಡೋಸ್ ನೀಡಲಾಗುತ್ತಿದ್ದು, ಇವರ ಪ್ರಮಾಣ ಅಲ್ಪವೇ ಇದೆ.
ಕೊರೊನಾ ಬಂದು ಹೋದ ಮೇಲೆ, ಇನ್ನೊಮ್ಮೆ ಬರಲ್ಲ. ಕೊರೊನಾ ವಿರುದ್ಧ ಹೋರಾಟ ನಡೆಸುವ ಶಕ್ತಿ ಬಂದಿದೆ ಎಂಬ ನಂಬಿಕೆಯ ಆಧಾರದ ಮೇಲೆ ಜನತೆ ಲಸಿಕೆ ಪಡೆಯಲು ಬರುತ್ತಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಆದರೂ, ಮುನ್ನೆಚ್ಚರಿಕೆ ವಹಿಸಿ, ಬೂಸ್ಟರ್ ಡೋಸ್ ಪಡೆದುಕೊಂಡು ಮುಂದೆ ಬರಬಹುದಾದ ಕೊರೊನಾ ಅಲೆಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.