Independence Day 2024:ತ್ರಿವರ್ಣ ಧ್ವಜದ ರೂವಾರಿ ಝಂಡಾ ವೆಂಕಯ್ಯ-ದಾಖಲೆಯಲ್ಲಿ ಹೆಸರೇ ಇಲ್ಲ!
ಆಂಧ್ರ ರಾಜ್ಯ ಕಲಾಶಾಲೆಯಲ್ಲಿ ಅಧ್ಯಾಪಕರಾಗಿ ಕೆಲವು ಕಾಲ ಕೆಲಸ ಮಾಡಿದರು.
Team Udayavani, Aug 14, 2024, 12:08 PM IST
1906, ಕೋಲ್ಕತಾದ ಕಾಂಗ್ರೆಸ್ ಅಧಿವೇಶನದ ಆರಂಭದಲ್ಲಿ ಅಧ್ಯಕ್ಷ ದಾದಾಭಾಯಿ ನವರೋಜಿ, ಯೂನಿಯನ್ ಜ್ಯಾಕ್ ಧ್ವಜವನ್ನು ಹಾರಿಸಿದಾಗ, ಹಲವು ದೇಶಾಭಿಮಾನಿಗಳ ಮನಸ್ಸು ಮುದುಡಿತ್ತು. ನಮ್ಮ ದೇಶಕ್ಕೊಂದು ರಾಷ್ಟ್ರ ಧ್ವಜ ಇಲ್ಲದೆ ಹೋಯಿತೇ ಎಂದು ಅವರು ಮರುಗಿದರು. ಎಲ್ಲರಿಗಿಂತ ಹೆಚ್ಚು ನೊಂದವರು ಕಾಂಗ್ರೆಸ್ ಕಾರ್ಯಕಾರಣಿಯ ಸದಸ್ಯ
ಪಿಂಗಳಿ ವೆಂಕಯ್ಯ. ಭಾರತಕ್ಕೊಂದು ರಾಷ್ಟ್ರೀಯ ಧ್ವಜ ಮಾಡಿಯೇ ತೀರುತ್ತೇನೆ ಎಂದು ಅವರು ಸಂಕಲ್ಪ ತೊಟ್ಟರು. ಇವರ ಸತತ ಪ್ರಯತ್ನದ ಫಲವೇ ನಮ್ಮ ರಾಷ್ಟ್ರ ಧ್ವಜ!
ಯಾರೀ ವೆಂಕಯ್ಯ?
1878ರಲ್ಲಿ ಕೃಷ್ಣಾ ಜಿಲ್ಲೆಯ ಭಾಟ್ಲಪೆನುಮಾರು ಗ್ರಾಮದಲ್ಲಿ ವೆಂಕಯ್ಯನವರ ಜನನ. ಮಚಲೀಪಟ್ಟಣದ ಹಿಂದೂ ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಸೈನ್ಯ ಸೇರಿದರು. ಸೇನೆ ಅವರನ್ನು ಬೋಯರ್‌ಗಳನ್ನು ಎದುರಿಸಲು ದಕ್ಷಿಣ ಆಫ್ರಿಕಾಕ್ಕೆ ಕಳುಹಿಸಿತು. ದಕ್ಷಿಣ ಆಫ್ರಿಕಾದಲ್ಲಿ ಬಿಳಿಜನರ ದೌರ್ಜನ್ಯ ನೋಡಿ ಅವರ ರಕ್ತ ಕುದಿಯಿತು. ಭಾರತಕ್ಕೆ ಮರಳಿದ ಬಳಿಕ ವೆಂಕಯ್ಯನವರು ಕೆಲವು ಕಾಲ ಬಳ್ಳಾರಿಯಲ್ಲಿ ಪ್ಲೇಗ್ ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡಿದರು. ಅನಂತರ ಹೆಚ್ಚಿನ ಶಿಕ್ಷಣ
ಪಡೆಯಲು ಸಿಲೋನ್(ಶ್ರೀಲಂಕಾ)ಗೆ ತೆರಳಿದರು. ಕೊಲಂಬೋ ಕಾಲೇಜಿಗೆ ಸೇರಿ, ರಾಜಕೀಯ ಶಾಸ್ತ್ರ ಮತ್ತು ಅರ್ಥಶಾಸ್ತ್ರ ವ್ಯಾಸಂಗ ಮಾಡಿ, ಪದವಿ ಪಡೆದರು.
ಸಿಲೋನ್ (ಶ್ರೀಲಂಕಾ)ನಿಂದ ಮರಳಿದ ವೆಂಕಯ್ಯನವರು ಸರಕಾರಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದರು. ಕಾಂಗ್ರೆಸ್ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಂತೆಯೇ ಅವರ ವಿದ್ಯಾರ್ಜನೆಯೂ ಮುಂದುವರಿಯಿತು. ಕೃಷಿ ಕ್ಷೇತ್ರದಲ್ಲಿ ಅಧ್ಯಯನ ಮಾಡಿ “ಕಾಂಬೋಡಿಯಾ ಹತ್ತಿ ತಳಿ’ ಎಂಬ ಹೊಸ ಸಸ್ಯ ತಳಿಯನ್ನು ರೂಪಿಸಿದರು. ಈ ಪ್ರಯತ್ನ ಅವರಿಗೆ ಲಂಡನ್ ಅಗ್ರಿಕಲ್ಚರಲ್ ಸೊಸೈಟಿಯ ಫೆಲೋಶಿಪ್ ದಕ್ಕಿಸಿಕೊಟ್ಟಿತು. ವೆಂಕಯ್ಯನವರು ಕಲೆಯ ಅಭ್ಯಾಸ ಮಾಡಿ, ಆಂಧ್ರ ರಾಜ್ಯ ಕಲಾಶಾಲೆಯಲ್ಲಿ ಅಧ್ಯಾಪಕರಾಗಿ ಕೆಲವು ಕಾಲ ಕೆಲಸ ಮಾಡಿದರು.
ಭಾರತೀಯ ಧ್ವಜದ 30 ಮಾದರಿ!
ಪಿಂಗಳಿ ವೆಂಕಯ್ಯ , ಹತ್ತು ವರ್ಷಗಳ ಪ್ರಯತ್ನ ಬಳಿಕ ಭಾರತೀಯ ಧ್ವಜದ 30 ವಿವಿಧ ಮಾದರಿಗಳನ್ನು ತಯಾರಿಸಿದರು. 1916ರಲ್ಲಿ “ಮನ ಜಾತೀಯ ಪತಾಕಮು’ ಎಂಬ ಪುಸ್ತಕದಲ್ಲಿ ಆ ಚಿತ್ರಗಳನ್ನು ಪ್ರಕಟಿಸಿದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್(ಇಂಡಿಯನ್ ನ್ಯಾಷನಲ್ ಕಾಂಗ್ರೆಸ್-ಐಎನ್‌ಸಿ) ಅಧ್ಯಕ್ಷೆ ಆ್ಯನಿ ಬೆಸೆಂಟ್ ವೆಂಕಯ್ಯನವರ ಸಾಧನೆಯನ್ನು ಅಭಿನಂದಿಸಿದರು. ಕಾಂಗ್ರೆಸ್‌ನಲ್ಲಿ ಸ್ವದೇಶಿ ಧ್ವಜದ ಬಗ್ಗೆ ಒಮ್ಮತವಿರಲಿಲ್ಲ. ವೆಂಕಯ್ಯನವರು ಧ್ವಜದ ಪ್ರತಿಪಾದನೆ ಮಾಡುತ್ತ ತಿರುಗಿದರು. ವೆಂಕಯ್ಯನವರಿಗೆ “ಝಂಡಾ ವೆಂಕಯ್ಯ’ ಎಂದೇ ಅಡ್ಡ ಹೆಸರು ಬಂತು.
ಎಪ್ರಿಲ್ 1921ರಲ್ಲಿ ಮಹಾತ್ಮಾಗಾಂಧಿಯವರ ಆದೇಶದ ಮೇರೆಗೆ ವೆಂಕಯ್ಯ ಮೂರು ಗಂಟೆಗಳಲ್ಲಿ ತ್ರಿವರ್ಣ ಧ್ವಜವನ್ನು ರಚಿಸಿಕೊಟ್ಟರು. ಗಾಂಧೀಜಿಯವರ ಸಲಹೆಯಂತೆ ಧ್ವಜದ ನಡುವೆ ನೂಲುವ ಚರಕದ ವಿನ್ಯಾಸ ಕೂರಿಸಿದರು. ಐಎನ್‌ಸಿ
ಈ ಧ್ವಜವನ್ನು ರಾಷ್ಟ್ರೀಯ ಧ್ವಜವನ್ನಾಗಿ ಒಪ್ಪಿಕೊಂಡಿತು.
ಡಿಸೆಂಬರ್31, 1929ರಂದು ಲಾಹೋರ್ ಅಧಿವೇಶನದಲ್ಲಿ ರಾವಿ ನದೀ ತೀರದಲ್ಲಿ ಭಾರತದ ತ್ರಿವರ್ಣ ಧ್ವಜ ಮೊದಲ ಬಾರಿಗೆ ಆಕಾಶದಲ್ಲಿ ರಾರಾಜಿಸಿತು. ಈ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ಯದ ಘೋಷಣೆ ಆಯಿತು. ಅಧಿವೇಶನದ ನಿರ್ಣಯದ ಪ್ರಕಾರ 1930, ಜನವರಿ 26ರಂದು ದೇಶದಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಭಾರತೀಯರ ಮನೆಗಳ, ಕಟ್ಟಡಗಳ ಮೇಲೆ ತ್ರಿವರ್ಣ ಧ್ವಜ ಹೆಮ್ಮೆಯಿಂದ ಹಾರಿದಾಗ ವೆಂಕಯ್ಯನವರು ಅಭಿಮಾನದಿಂದ ಎದೆಯುಬ್ಬಿಸಿಕೊಂಡರು.
1947 ಜುಲೈ 22ರಂದು ಸಂವಿಧಾನ ಘಟನಾ ಸಮಿತಿ, ಪ್ರಧಾನಿ ಜವಾಹರಲಾಲ್ ನೆಹರೂ ಅವರ ಸಲಹೆಯಂತೆ ರಾಷ್ಟ್ರಧ್ವಜದ ನಡುವಿನ ಚರಕದ ಬದಲು ಅಶೋಕ ಚಕ್ರದ ಲಾಂಛನವನ್ನು ಅಳವಡಿಸಿಕೊಂಡಿತು. ಇದೇ ಭಾರತದ ಅಧಿಕೃತ ರಾಷ್ಟ್ರಧ್ವಜವಾಯಿತು. ಭಾರತಕ್ಕೆ ಸ್ವಾತಂತ್ರ್ಯ ದೊರೆತಾಗ ವೆಂಕಯ್ಯನವರು ಹಾಸಿಗೆ ಹಿಡಿದಿದ್ದರು. ವಯೋವೃದ್ಧ ಸ್ವಾತಂತ್ರ್ಯ ಪ್ರೇಮಿಯ ನೆನಪು ಯಾರಿಗೂ ಉಳಿದಿರಲಿಲ್ಲ. ವೆಂಕಯ್ಯನವರ ಹೆಸರು ಭಾರತ ಸರಕಾರದ ದಾಖಲೆಗಳಲ್ಲಿ ಇರಲಿಲ್ಲ.
ಸರಕಾರದಿಂದ ಪಿಂಚಣಿ ಕೂಡ ದೊರೆಯಲಿಲ್ಲ. ಅವರ ಕುಟುಂಬ ಕಡು ಬಡತನದಲ್ಲಿ ಮುಳುಗಿತು.
ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದ ವೆಂಕಯ್ಯ “ಕೆಂಪು ಕೋಟೆಯ ಮೇಲೆ ನನ್ನ ತಿರಂಗಾ ಹಾರುವುದನ್ನೊಮ್ಮೆ ನೋಡಬೇಕು’ ಎಂದು ಹೇಳುತ್ತಲೇ 1963, ಜುಲೈ 4ರಂದು ಅಸುನೀಗಿದರು. ದೇಶಕ್ಕೆ ಗೌರವದ ಧ್ವಜ ಕೊಟ್ಟು ಬರಿಗೈಯಲ್ಲಿ ಇಹಲೋಕ ತ್ಯಜಿಸಿದ ವೆಂಕಯ್ಯನವರ ದಾರುಣ ಕಥೆ ಪತ್ರಿಕೆಗಳಲ್ಲಿ ಬಂದ ಬಳಿಕ ಆಂಧ್ರಸರಕಾರ ಎಚ್ಚೆತ್ತಿತು. ವಿಜಯವಾಡದ ಒಂದು ರಸ್ತೆಗೆ ಅವರ ಹೆಸರು ಕೊಟ್ಟಿತು. ಹುಸೇನ್ ಸಾಗರ ಕೆರೆಯ ಸುತ್ತ ಇರುವ ಆಂಧ್ರ ವೀರರ ಪ್ರತಿಮೆಗಳ ಜತೆಗೆ ಅವರ ಪ್ರತಿಮೆಯನ್ನೂ ಸೇರಿಸಿತು.
*ಅಶ್ವಿನಿ
(ಕೃಪೆ ತರಂಗ ವಾರಪತ್ರಿಕೆ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.