India People Census: ಜನಗಣತಿ ವಿಳಂಬ ಸಲ್ಲದು ಸರಕಾರ ಬದ್ಧತೆ ತೋರಲಿ
Team Udayavani, Aug 23, 2024, 6:00 AM IST
ಆಡಳಿತ ಮತ್ತು ಸರಕಾರದ ನೀತಿ ನಿರೂಪಣ ನಿರ್ಧಾರಗಳಲ್ಲಿ ಪ್ರಮುಖ ಪಾತ್ರ ವಹಿಸುವ ಜನಗಣತಿ ಪ್ರಕ್ರಿಯೆಯನ್ನು ಕಳೆದ ಮೂರು ವರ್ಷಗಳಿಂದ ಕೇಂದ್ರ ಸರಕಾರ ವಿವಿಧ ಕಾರಣಗಳಿಂದಾಗಿ ಮುಂದೂಡುತ್ತಲೇ ಬಂದಿದೆ.
ಕೊನೆಯ ಜನಗಣತಿ 2011-12ರಲ್ಲಿ ನಡೆದಿದ್ದು ನಿಗದಿಯಂತೆ 10 ವರ್ಷಗಳ ತರುವಾಯ 2021- 22ರಲ್ಲಿ ಜನಗಣತಿ ಪ್ರಕ್ರಿಯೆ ಪೂರ್ಣಗೊಂಡು ವರದಿ ಬಿಡುಗಡೆ ಯಾಗಬೇಕಿತ್ತು. ಆದರೆ ಈ ಅವಧಿಯಲ್ಲಿ ಕೊರೊನಾ ಮಹಾಮಾರಿ ದೇಶಾದ್ಯಂತ ಇನ್ನಿಲ್ಲದಂತೆ ಬಾಧಿಸಿದ ಪರಿಣಾಮ ಸರಕಾರ ಅನಿವಾರ್ಯವಾಗಿ ಜನಗಣತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಿತ್ತು. ಆದರೆ ಆ ಬಳಿಕದ ವರ್ಷಗಳಲ್ಲಿ ವಿವಿಧ ರಾಜ್ಯಗಳಲ್ಲಿ ಚುನಾವಣೆ, ತಾಂತ್ರಿಕ ಮತ್ತು ಕಾನೂನಿನ ಅಡೆತಡೆಗಳು ಹಾಗೂ ಪ್ರಸಕ್ತ ವರ್ಷದ ಬೇಸಗೆಯಲ್ಲಿ ಸಾರ್ವತ್ರಿಕ ಚುನಾವಣೆ ಎದುರಾಗಿದ್ದರಿಂದ ಜನಗಣತಿ ಪ್ರಕ್ರಿಯೆ ಅಕ್ಷರಶಃ ನನೆಗುದಿಗೆ ಬಿದ್ದಿತ್ತು. ಕೊನೆಗೂ ಈಗ ಜನಗಣತಿಗೆ ಮುಹೂರ್ತ ಕಂಡುಬಂದಂತೆ ಗೋಚರಿಸುತ್ತಿದೆ.
ಮುಂದಿನ ತಿಂಗಳಿನಿಂದಲೇ ಜನಗಣತಿ ಪ್ರಕ್ರಿಯೆ ಪುನರಾರಂಭಗೊಳ್ಳುವ ಸಾಧ್ಯತೆ ಇದೆ. ಆದರೆ ಇಡೀ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ ಒಂದೂವರೆ ವರ್ಷ ಅಗತ್ಯವಿದ್ದು 2026ರ ಮಾರ್ಚ್ ವೇಳೆಗಾಗಲಷ್ಟೇ ಸಮಗ್ರ ವರದಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಹೀಗಾದಲ್ಲಿ ಇಡೀ ಜನಗಣತಿ ಪ್ರಕ್ರಿಯೆ 5 ವರ್ಷಗಳಷ್ಟು ವಿಳಂಬ ವಾದಂತಾಗಲಿದೆ. ದೇಶದ ಪ್ರಗತಿಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುವ ಜನಗಣತಿ ನಡೆಸಲು ಸರಕಾರ ಮೀನಮೇಷ ಎಣಿಸುತ್ತಲೇ ಬಂದಿರುವುದು ವಿಪರ್ಯಾಸವೇ ಸರಿ.
ಸರಕಾರಿ ಯೋಜನೆಗಳು, ಕಾರ್ಯಕ್ರಮಗಳ ಅನುಷ್ಠಾನಕ್ಕೆ ಜನಗಣತಿಯ ದತ್ತಾಂಶಗಳು ಅತ್ಯವಶ್ಯಕವಾಗಿವೆ. ಪ್ರಸ್ತುತ 2011-12ರ ಜನಗಣತಿಯ ವರದಿ ಯನ್ನು ಆಧರಿಸಿಯೇ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿವೆ. ಕಳೆದ 13 ವರ್ಷಗಳ ಅವಧಿಯಲ್ಲಿ ಜನಸಂಖ್ಯೆ ಹೆಚ್ಚಳವಾಗುವುದರ ಜತೆಯಲ್ಲಿ ಒಟ್ಟಾರೆ ಜನಜೀವನ, ಸಾಮಾಜಿಕ ಸ್ಥಿತಿಗತಿಯಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ.
ಇದೇ ವೇಳೆ ಗ್ರಾಮೀಣ ಮತ್ತು ನಗರ ಪ್ರದೇಶ ಗಳಲ್ಲಿನ ಜನಸಂಖ್ಯೆಯಲ್ಲೂ ಏರುಪೇರುಗಳಾಗಿವೆ. ಇದ್ಯಾವುದನ್ನೂ ಪರಿಗಣಿಸದೆ 13 ವರ್ಷಗಳ ಹಿಂದಿನ ಜನಗಣತಿಯ ಅಂಕಿಅಂಶಗಳನ್ನೋ ಅಥವಾ ಅವುಗಳ ಸರಾಸರಿಯನ್ನು ಆಧರಿಸಿಯೋ ಸರಕಾರ, ಹೊಸ ಯೋಜನೆಗಳ ಘೋಷಣೆ, ಅನುಷ್ಠಾನಗೊಳಿಸಿ, ಇವುಗಳನ್ನೇ ತನ್ನ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದೆ. ಆದರೆ ಇವು ದೇಶದ ಪ್ರಸ್ತುತ ಚಿತ್ರಣವಲ್ಲ ಎಂಬುದು ತಜ್ಞರ ಆಕ್ಷೇಪ.
ತಜ್ಞರ ಈ ಆಕ್ಷೇಪ, ಅಸಮಾಧಾನ ಎಲ್ಲವೂ ವಾಸ್ತವವೇ. ಸಮರ್ಪಕ ಮತ್ತು ನೈಜ ದತ್ತಾಂಶಗಳಿಲ್ಲದೆ ಸರಕಾರ ತನ್ನ ಧೋರಣಾತ್ಮಕ ನಿರ್ಧಾರಗಳು, ಜನಕಲ್ಯಾಣ ಕಾರ್ಯಕ್ರಮ, ಯೋಜನೆಗಳನ್ನು ಅನುಷ್ಠಾನಗೊಳಿಸಿದರೆ ಅವುಗಳ ಪ್ರಯೋಜನ ನೈಜ ಫಲಾನುಭವಿಗಳಿಗೆ ಲಭಿಸದೆ ಅನ್ಯರ ಪಾಲಾಗುತ್ತದೆ. ಕಳೆದ 13 ವರ್ಷಗಳಲ್ಲಿ ದೇಶದಲ್ಲಿ ಸಾಕಷ್ಟು ಏಳುಬೀಳುಗಳಾಗಿದ್ದು, ಇವೆಲ್ಲವನ್ನು ಪರಿಗಣಿಸದೆ ಯಾವುದೋ ಹಳೆಯ ಅಥವಾ ಊಹನಾತ್ಮಕ ಅಂಕಿಅಂಶಗಳನ್ನು ಮುಂದಿಟ್ಟು ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಿದರೆ ಅದರ ನೈಜ ಉದ್ದೇಶ ಈಡೇರುವುದು ಕಷ್ಟಸಾಧ್ಯ.
ಅಭಿವೃದ್ಧಿ, ಜನಕಲ್ಯಾಣ ಯೋಜನೆಗಳ ಫಲ ದೇಶದ ತಳಹಂತದ ಜನವರ್ಗಕ್ಕೆ ತಲುಪಿದಾಗ ಮಾತ್ರ ಅವು ಯಶಸ್ಸು ಕಾಣಲು ಸಾಧ್ಯ. ಅಷ್ಟು ಮಾತ್ರವಲ್ಲದೆ ಜನಗಣತಿ ಪ್ರಕ್ರಿಯೆ ಕೇವಲ ದೇಶದ ಜನಸಂಖ್ಯೆಯನ್ನು ಲೆಕ್ಕ ಹಾಕುವುದಕ್ಕಷ್ಟೇ ಸೀಮಿತವಾಗದೆ ಜನತೆಯ ಸಮಗ್ರ ಜೀವನದ ಸ್ಥಿತಿಗತಿಯ ಚಿತ್ರಣವನ್ನು ಕಟ್ಟಿಕೊಡುತ್ತದೆ. ಇದನ್ನು ಅಧರಿಸಿ ಸರಕಾರ ತನ್ನ ಭಾವೀ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಿ, ಸಾಮಾಜಿಕ ನ್ಯಾಯದಡಿ ದೇಶವನ್ನು ಮುನ್ನಡೆಸಲು ಸಾಧ್ಯ. ಇನ್ನಾದರೂ ಕೇಂದ್ರ ಸರಕಾರ ಕಾಲಹರಣ ಮಾಡದೆ ಜನಗಣತಿ ಪ್ರಕ್ರಿಯೆಯನ್ನು ಕ್ಷಿಪ್ರಗತಿಯಲ್ಲಿ ಪೂರ್ಣಗೊಳಿಸಿ ವರದಿಯನ್ನು ಬಿಡುಗಡೆಗೊಳಿಸಲು ಇಚ್ಛಾಶಕ್ತಿ ಮತ್ತು ಬದ್ಧತೆಯನ್ನು ತೋರಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Updated: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Madikeri: ಶ್ರೀಗಂಧದ ಮರ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ
Max movie review: ಮಾಸ್ ಮನಸುಗಳಿಗೆ ʼಮ್ಯಾಕ್ಸ್ʼ ಅಭಿಷೇಕ
Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ
Shirva ಹಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.