ಮಂಜುಗಡ್ಡೆಯ ಖಂಡದೆಡೆಗೆ ಭಾರತ:Maitri-2: ಭಾರತದ ಮುಂದಿನ ಅಂಟಾರ್ಟಿಕಾ ಅನ್ವೇಷಣಾ ಕೇಂದ್ರ
Team Udayavani, Dec 30, 2023, 5:04 PM IST
ಕಳೆದ ಮೂರು ದಶಕಗಳಿಗೂ ಹೆಚ್ಚಿನ ಸಮಯದಿಂದ ಭಾರತ ಅಂಟಾರ್ಕ್‌ಟಿಕಾ ಖಂಡದಲ್ಲಿ ವಿವಿಧ ಅನ್ವೇಷಣಾ ಯೋಜನೆಗಳನ್ನು ಆಯೋಜಿಸುತ್ತಾ ಬಂದಿದೆ. ಭಾರತ ಸಮುದ್ರಶಾಸ್ತ್ರ, ಜೀವಶಾಸ್ತ್ರ, ಭೂವಿಜ್ಞಾನ, ಮತ್ತು ಹವಾಮಾನ ವಿಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅಂಟಾರ್ಕ್‌ಟಿಕಾ ಖಂಡದಲ್ಲಿ ಸಂಶೋಧನೆಗಳನ್ನು ನಡೆಸಿದೆ.
ಭಾರತದಿಂದ ಮಂಜುಗಡ್ಡೆಯ ಅಂಟಾರ್ಕ್‌ಟಿಕಾ ಖಂಡಕ್ಕೆ ಪಯಣ
ಅಂಟಾರ್ಕ್‌ಟಿಕಾ ಎನ್ನುವುದು ಅತ್ಯಂತ ವಿಶಾಲವಾದ, ಮಂಜುಗಡ್ಡೆಯಿಂದ ಆವೃತವಾಗಿರುವ ನೆಲವಾಗಿದ್ದು, ಭಾರತದ ದಕ್ಷಿಣ ತುದಿಯಿಂದ ಸಾಕಷ್ಟು ದೂರದಲ್ಲಿ, ಭೂಮಿಯ ದಕ್ಷಿಣ ತುದಿಯಲ್ಲಿ, ಧ್ರುವ ಪ್ರದೇಶಕ್ಕೆ ಚಾಚಿಕೊಂಡಿರುವಂತಿದೆ.
ಭಾರತದಿಂದ ಅಂಟಾರ್ಕ್‌ಟಿಕಾ ಖಂಡಕ್ಕೆ ಪ್ರಯಾಣ ಬಹಳ ಸುದೀರ್ಘವೂ, ಸಂಕೀರ್ಣವೂ ಆಗಿದ್ದು, ಅಲ್ಲಿಗೆ ತಲುಪಲು ಹಲವು ದಿನಗಳ ಪ್ರಯಾಣ ನಡೆಸಬೇಕಾಗುತ್ತದೆ. ಸಾಮಾನ್ಯವಾಗಿ ಈ ಪ್ರಯಾಣ ಅಂಟಾರ್ಕ್‌ಟಿಕಾ ಖಂಡಕ್ಕೆ ಸನಿಹದಲ್ಲಿರುವ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಅಥವಾ ಅರ್ಜೆಂಟೀನಾ ರೀತಿಯ ಯಾವುದಾದರೂ ದೇಶಕ್ಕೆ ವಿಮಾನ ಪ್ರಯಾಣದ ಮೂಲಕ ಆರಂಭವಾಗುತ್ತದೆ. ಅಲ್ಲಿಂದ ಅಂಟಾರ್ಕ್‌ಟಿಕಾ ಖಂಡಕ್ಕೆ ಸಮುದ್ರ ಪ್ರಯಾಣ ನಡೆಸಬೇಕಾಗುತ್ತದೆ.
ಅಂಟಾರ್ಕ್‌ಟಿಕಾ ಅತ್ಯಂತ ದೊಡ್ಡದಾಗಿದ್ದು, ಭಾರತದ ಗಾತ್ರಕ್ಕಿಂತಲೂ ಹಲವು ಪಟ್ಟು ಬೃಹತ್ತಾಗಿದೆ. ಇದು ಬಹುತೇಕ 14 ಮಿಲಿಯನ್ ಚದರ ಕಿಲೋಮೀಟರ್ ವ್ಯಾಪ್ತಿ ಹೊಂದಿದೆ. ಇದು ಭೂಮಿಯ ಅತ್ಯಂತ ತಣ್ಣಗಿನ ಪ್ರದೇಶವಾಗಿದ್ದು, ಇದರ ಒಳಪ್ರದೇಶದ ತಾಪಮಾನ -20 ಡಿಗ್ರಿ ಸೆಲ್ಸಿಯಸ್ ನಿಂದ -60 ಡಿಗ್ರಿ ಸೆಲ್ಸಿಯಸ್ ತನಕ ಇದ್ದು, ಕರಾವಳಿ ವಾತಾವರಣ ಕೊಂಚ ಸೌಮ್ಯವಾಗಿರುತ್ತದೆ. ಅಂಟಾರ್ಕ್‌ಟಿಕಾ ಖಂಡ ಭೂಮಿಯ 75% ದಷ್ಟು ಶುದ್ಧ ನೀರನ್ನು ಹೊಂದಿದ್ದು, ಇದರಲ್ಲಿ ಬಹುತೇಕ ನೀರು ಮಂಜುಗಡ್ಡೆಯ ರೂಪದಲ್ಲಿದೆ.
ಅಂಟಾರ್ಕ್‌ಟಿಕಾ ಖಂಡಕ್ಕೆ ತೆರಳಲು ಈ ತೀಕ್ಷ್ಣ ಹವಾಮಾನವನ್ನು ಎದುರಿಸುವ ಸಾಮರ್ಥ್ಯ ಹೊಂದಿರುವ ವಿಶೇಷ ಹಡಗುಗಳ ಅವಶ್ಯಕತೆಯಿದೆ. ಅಲ್ಲಿಗೆ ಬಹುತೇಕ ವೈಜ್ಞಾನಿಕ ಸಂಶೋಧನೆಗಳಿಗೆ ತೆರಳುವುದಾದರೂ, ಅಲ್ಲಿನ ಪ್ರಕೃತಿ ಸೌಂದರ್ಯ ಮತ್ತು ವನ್ಯಜೀವಿಗಳ ಕಾರಣದಿಂದ ಒಂದಷ್ಟು ಪ್ರವಾಸೋದ್ಯಮವೂ ಇದೆ.
ಮೈತ್ರಿ-2: ಭಾರತದ ಮುಂದಿನ ಅಂಟಾರ್ಕ್‍ಟಿಕ ಅನ್ವೇಷಣಾ ಕೇಂದ್ರ
ಭಾರತ 1988ರಲ್ಲಿ ಅಂಟಾರ್ಕ್‌ಟಿಕಾ ಖಂಡದ ಪೂರ್ವ ಭಾಗದಲ್ಲಿ ನಿರ್ಮಿಸಿರುವ ಮೈತ್ರಿ ಕೇಂದ್ರದ ಬಳಿ 2029ರ ವೇಳೆಗೆ ಮೈತ್ರಿ 2 ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವ ಗುರಿ ಹೊಂದಿದೆ. ಈ ನೂತನ ಕೇಂದ್ರ 90 ಸಂಶೋಧಕರಿಗೆ ಆಶ್ರಯ ನೀಡಬಲ್ಲದು. ಆ ಮೂಲಕ ಅಂಟಾರ್ಕ್‌ಟಿಕಾ ಸಂಶೋಧನೆಗೆ ಸಂಬಂಧಿಸಿದಂತೆ ಭಾರತದ ಸಾಮರ್ಥ್ಯಗಳನ್ನು ಹೆಚ್ಚಿಸಬಲ್ಲದು.
ಡಿಸೆಂಬರ್ 21, 2023ರಂದು ಭೂವಿಜ್ಞಾನ ಸಚಿವರಾದ ಕಿರಣ್ ರಿಜಿಜು ಅವರು ಭಾರತದ ಮೈತ್ರಿ 2 ಕೇಂದ್ರ 2029ರ ವೇಳೆಗೆ ಕಾರ್ಯಾಚರಣಾ ಸಿದ್ಧವಾಗುವ ನಿರೀಕ್ಷೆಗಳಿವೆ ಎಂದಿದ್ದರು. ಮೈತ್ರಿ 2 ಯೋಜನೆಯ ಸ್ಥಳವನ್ನು ಈಗಾಗಲೇ ಗುರುತಿಸಲಾಗಿದ್ದು, ಪ್ರಾಥಮಿಕ ಭೂ ಸಮೀಕ್ಷೆ ಈಗಾಗಲೇ ನಡೆಸಲಾಗುತ್ತಿದ್ದು, ಅಲ್ಲಿಗೆ ತೆರಳಲು ರಸ್ತೆ ನಿರ್ಮಾಣ ಕಾರ್ಯದ ಕುರಿತು ಯೋಜನೆ ರೂಪಿಸಲಾಗುತ್ತಿದೆ.
ನೂತನ ಸಂಶೋಧನಾ ಕೇಂದ್ರದ ಅಗತ್ಯತೆ
ಪ್ರಸ್ತುತ ಅಂಟಾರ್ಕ್‌ಟಿಕಾದಲ್ಲಿರುವ ಭಾರತದ ಮೈತ್ರಿ ಕೇಂದ್ರ ಹಳೆಯದಾಗಿದ್ದು, ನೂತನ ಕೇಂದ್ರದ ಅವಶ್ಯಕತೆ ಎದುರಾಗಿದೆ. ಈ ನೂತನ ಯೋಜನೆ ಅಂಟಾರ್ಕ್‌ಟಿಕಾದ ಪರಿಸರ ನಿಯಮಾವಳಿಗಳಿಗೆ ಅನಗುಣವಾಗಿರಲಿದ್ದು, ಈ ಪ್ರಾಂತ್ಯದಲ್ಲಿ ಭಾರತದ ಸಂಶೋಧನೆಗಳನ್ನು ವಿಸ್ತರಿಸುವ ಉದ್ದೇಶ ಹೊಂದಿದೆ.
ಮೈತ್ರಿ-2 ನಿರ್ಮಾಣ
ಯೋಜನೆಯ ರೂಪುರೇಷೆ ನಿರ್ಮಿಸಿ, ತಂತ್ರಜ್ಞರನ್ನು ನೇಮಿಸಲು 18 ತಿಂಗಳು ಬೇಕಾಗುತ್ತದೆ. ಕರಡು ರಚನೆ, ಗುತ್ತಿಗೆ ಪ್ರಕ್ರಿಯೆ, ಮತ್ತು ನಿರ್ಮಾಣ ಒಪ್ಪಂದ ರೂಪಿಸಲು ಮತ್ತೆ 18 ತಿಂಗಳ ಅವಧಿ ತಗಲುತ್ತದೆ.
ನಿರ್ಮಾಣ ಕಾರ್ಯಕ್ಕೆ ಅವಶ್ಯಕ ಸಾಮಗ್ರಿಗಳ ಸಂಗ್ರಹಣೆ, ತಯಾರಿಕೆ, ದಕ್ಷಿಣ ಆಫ್ರಿಕಾದ ಕೇಪ್ ಟೌನ್ ಅಥವಾ ಭಾರತದ ಗಡಿಯಿಂದ ನಿರ್ಮಾಣ ಸ್ಥಳಕ್ಕೆ ಅವುಗಳ ಸಾಗಾಟ ಇನ್ನೂ ಹೆಚ್ಚುವರಿ 18 ತಿಂಗಳು ತೆಗೆದುಕೊಳ್ಳುತ್ತದೆ. ಮೈತ್ರಿ 2 ಯೋಜನೆ 2029ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಗಳಿವೆ.
ಭಾರತದ ಅಂಟಾರ್ಕ್‌ಟಿಕ ಅನ್ವೇಷಣಾ ಯೋಜನೆಗಳು
ಅಂಟಾರ್ಕ್‌ಟಿಕದಲ್ಲಿ ಭಾರತದ ಉಪಸ್ಥಿತಿಯನ್ನು ಇಂಡಿಯನ್ ಅಂಟಾರ್ಕ್‌ಟಿಕ್ ಪ್ರೋಗ್ರಾಮ್ ನಿರ್ವಹಿಸುತ್ತದೆ. ಇದು ಮೂರು ಕೇಂದ್ರಗಳನ್ನು ಹೊಂದಿದ್ದು, ಅವುಗಳನ್ನು ದಕ್ಷಿಣ ಗಂಗೋತ್ರಿ, ಮೈತ್ರಿ ಮತ್ತು ಭಾರತಿ ಎಂದು ಹೆಸರಿಸಲಾಗಿದೆ. ದಕ್ಷಿಣ ಗಂಗೋತ್ರಿ ದಕ್ಷಿಣ ಧ್ರುವದಿಂದ 2,500 ಕಿಲೋಮೀಟರ್ ದೂರದಲ್ಲಿದ್ದು, ಮಂಜುಗಡ್ಡೆ ಮುಸುಕುವಿಕೆಯ ಕಾರಣದಿಂದ ಸಂಶೋಧನೆಗಳಿಂದ ನಿವೃತ್ತಿಗೊಳಿಸಿ, ಈಗ ಪೂರೈಕೆ ಮತ್ತು ಸಂಚಾರ ನೆಲೆಯಾಗಿ ಮಾತ್ರ ಕಾರ್ಯಾಚರಿಸುತ್ತಿದೆ. ಆ ಬಳಿಕ ಮೈತ್ರಿ ಭಾರತದ ಎರಡನೆಯ ಕೇಂದ್ರವಾಗಿ ರೂಪುಗೊಂಡಿತು.
ಮೈತ್ರಿ: ಭಾರತದ ಎರಡನೇ ಅಂಟಾರ್ಕ್‌ಟಿಕ್ ಕೇಂದ್ರ
ಭಾರತದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರಿಂದ ಮೈತ್ರಿ ಎಂದು ನಾಮಕರಣ ಮಾಡಲ್ಪಟ್ಟ ಈ ಕೇಂದ್ರ, ಡಿಸೆಂಬರ್ 1984ರಲ್ಲಿ ಡಾ. ಬಿ ಬಿ ಭಟ್ಟಾಚಾರ್ಯ ಅವರ ನೇತೃತ್ವದಲ್ಲಿ ಭಾರತದ ಅಂಟಾರ್ಕ್‌ಟಿಕ ಕಾರ್ಯಕ್ರಮದ ಭಾಗವಾಗಿ ಆರಂಭಗೊಂಡಿತು. ಈ ಕೇಂದ್ರ 1989ರಲ್ಲಿ ಪೂರ್ಣಗೊಂಡಿತು. ಇದು ಶಿರ್ಮಾಶೆರ್ ಓಯಸಿಸ್ ಬಳಿ, ರಷ್ಯಾದ ನೊವೊಲಾಜಾ಼ರೆವ್ಸ್‌ಕಾಯಾ ಕೇಂದ್ರದ ಸನಿಹದಲ್ಲಿದೆ. ಇದು 1990-91ರಲ್ಲಿ ಸ್ಥಗಿತಗೊಂಡ ಭಾರತದ ಮೊದಲ ಕೇಂದ್ರ ದಕ್ಷಿಣ ಗಂಗೋತ್ರಿಯ ಬದಲಿಗೆ ಕಾರ್ಯಾಚರಿಸತೊಡಗಿತು.
ಮೈತ್ರಿ ಕೇಂದ್ರ ಚಳಿಗಾಲದಲ್ಲಿ 25 ಜನರಿಗೆ ಆಶ್ರಯ ಒದಗಿಸಬಲ್ಲದು. ಇದು ಪ್ರಿಯದರ್ಶಿನಿ ಕೆರೆಯಿಂದ ಶುದ್ಧ ನೀರನ್ನು ಪಡೆದುಕೊಳ್ಳುತ್ತದೆ. ಈ ಕೇಂದ್ರ ಜೀವಶಾಸ್ತ್ರ ಮತ್ತು ಭೂವಿಜ್ಞಾನ ಸಂಬಂಧಿತ ವಿವಿಧ ವೈಜ್ಞಾನಿಕ ಸಂಶೋಧನೆಗಳಿಗೆ ಪೂರಕವಾಗಿದೆ.
ಅಂಟಾರ್ಕ್‌ಟಿಕ್ ಲಾಜಿಸ್ಟಿಕ್ಸ್ ಸೆಂಟರ್ ಇಂಟರ್ನ್ಯಾಷನಲ್ (ಎಎಲ್ಐಸಿ) ನಿರ್ವಹಿಸುವ ಬ್ಲೂ ಐಸ್ ರನ್‌ವೇ ಭಾರತ ಮತ್ತು ರಷ್ಯಾದ ಕೇಂದ್ರಗಳಿಂದ 10 ಕಿಲೋಮೀಟರ್ ದೂರದಲ್ಲಿದ್ದು, ಅವುಗಳಿಗೆ ವಿಮಾನ ವ್ಯವಸ್ಥೆ ಒದಗಿಸುತ್ತದೆ.
ಭಾರತಿ ಕೇಂದ್ರ: ಅಂಟಾರ್ಕ್‌ಟಿಕ ಸಂಶೋಧನೆಯ ಪ್ರವರ್ತಕ
ಅಂಟಾರ್ಕ್‌ಟಿಕದಲ್ಲಿ ಭಾರತದ ಮೂರನೇ ಸಂಶೋಧನಾ ಕೇಂದ್ರವಾದ ಭಾರತಿ ಕೇಂದ್ರ ಅಂಟಾರ್ಕ್‌ಟಿಕದಲ್ಲಿ ಸಕ್ರಿಯವಾಗಿರುವ ಭಾರತದ ಎರಡು ಕೇಂದ್ರಗಳಲ್ಲಿ ಒಂದಾಗಿದೆ. ಇದು ಭಾರತದ ಮೊದಲ ಸಂಶೋಧನೆಗೆ ಮೀಸಲಾದ ಕೇಂದ್ರವಾಗಿದ್ದು, 2012ರಲ್ಲಿ ಕಾರ್ಯಾರಂಭಗೊಳಿಸಿತು.
ಇಲೆಕ್ಟ್ರಾನಿಕ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಇಸಿಐಎಲ್) ಮತ್ತು ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ (ಎನ್ಆರ್‌ಎಸ್‌ಸಿ) ಸಂಸ್ಥೆಗಳು 230 ಕೋಟಿ ರೂಪಾಯಿ ವೆಚ್ಚದಲ್ಲಿ ಭಾರತಿ ಕೇಂದ್ರವನ್ನು ನಿರ್ಮಿಸಿದ್ದವು. 2,162 ಚದರ ಮೀಟರ್ ವ್ಯಾಪ್ತಿ ಹೊಂದಿರುವ ಈ ಕೇಂದ್ರ 127 ದಿನಗಳಲ್ಲಿ ಪೂರ್ಣಗೊಂಡಿದ್ದು.
ಭಾರತಿ ಕೇಂದ್ರದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಅಂಟಾರ್ಕ್‌ಟಿಕ ಗ್ರೌಂಡ್ ಸ್ಟೇಷನ್ ಫಾರ್ ಅರ್ತ್ ಅಬ್ಸರ್ವೇಶನ್ ಸ್ಯಾಟಲೈಟ್ಸ್ (ಎಜಿಇಒಎಸ್) ಸ್ಥಾಪಿಸಲಾಗಿದೆ. 2010ರ ದಶಕದ ಮಧ್ಯಭಾಗದಿಂದ, ಈ ಕೇಂದ್ರ ಭಾರತದ ಉಪಗ್ರಹಗಳಿಂದ ಮಾಹಿತಿಗಳನ್ನು ಪಡೆದುಕೊಂಡು, ಅವುಗಳನ್ನು ವಿಶ್ಲೇಷಣೆಗಾಗಿ ಹೈದರಾಬಾದಿಗೆ ಕಳುಹಿಸುತ್ತದೆ.
ಸಿಬ್ಬಂದಿಗಳ ವಿಚಾರಕ್ಕೆ ಬಂದರೆ, ಭಾರತಿ ಕೇಂದ್ರ ಚಳಿಗಾಲದಲ್ಲಿ 47 ಸಿಬ್ಬಂದಿಗಳು ಮತ್ತು ಬೇಸಿಗೆಯಲ್ಲಿ 73 ಸಿಬ್ಬಂದಿಗಳಿಗೆ ಆಸರೆ ನೀಡುತ್ತದೆ. ಇದರ ಪ್ರಾಥಮಿಕ ಸಂಶೋಧನೆಗಳು ಸಮುದ್ರಶಾಸ್ತ್ರ ಮತ್ತು ಭೂಖಂಡಗಳು ಹೇಗೆ ದೂರ ಚಲಿಸುತ್ತವೆ ಎಂಬ ಕುರಿತು ನಡೆಯುತ್ತವೆ. ಈ ಕೇಂದ್ರವನ್ನು ವರ್ಷಾದ್ಯಂತ ಬೇರೆ ಬೇರೆ ಸ್ಥಳಗಳಿಗೆ ಸ್ಥಳಾಂತರಿಸಿ, ನಿರಂತರ ಸಂಶೋಧನೆಗಳು ಮತ್ತು ಉಪಗ್ರಹ ಕಾರ್ಯಾಚರಣೆಗಳು ನಡೆಯುವಂತೆ ಮಾಡಲಾಗುತ್ತದೆ.
ದಕ್ಷಿಣ ಧ್ರುವ: ಅಂಟಾರ್ಕ್‌ಟಿಕಾದ ಹೃದಯ
ದಕ್ಷಿಣ ಧ್ರುವ ಅಂಟಾರ್ಕ್‌ಟಿಕ ಖಂಡದ ಕೇಂದ್ರದಲ್ಲಿದ್ದು, ಅದು ಭೂಮಿಯ ಅಕ್ಷದ ಅತ್ಯಂತ ದಕ್ಷಿಣದ ಬಿಂದುವಾಗಿದೆ. ಖಂಡದ ಈ ಹೃದಯ ಭಾಗದ ಸುತ್ತಲೂ ಅಂಟಾರ್ಕ್‌ಟಿಕ ಬಹುತೇಕ ವೃತ್ತಾಕಾರದಲ್ಲಿ ಹಬ್ಬಿದೆ.
ಎನ್‌ಸಿಪಿಒಆರ್: ಭಾರತದ ಧ್ರುವ ಅನ್ವೇಷಣಾ ರಕ್ಷಕ
ಗೋವಾದಲ್ಲಿರುವ ನ್ಯಾಷನಲ್ ಸೆಂಟರ್ ಫಾರ್ ಪೋಲಾರ್ ಆ್ಯಂಡ್ ಓಷನ್ ರಿಸರ್ಚ್ (ಎನ್‌ಸಿಪಿಒಆರ್) ಭಾರತಿ, ಹಿಮಾದ್ರಿ (ಆರ್ಕ್‌ಟಿಕ್ ಕೇಂದ್ರ) ಮತ್ತು ಮೈತ್ರಿ ಕೇಂದ್ರಗಳ ಉಸ್ತುವಾರಿ ನಿರ್ವಹಿಸುತ್ತದೆ. 1959ರಿಂದಲೂ ಅಂಟಾರ್ಕ್‌ಟಿಕ್ ಒಪ್ಪಂದಕ್ಕೆ ಸಹಿ ಹಾಕಿರುವ ಭಾರತವೂ ಇಂಡಿಯನದ ಅಂಟಾರ್ಕ್‌ಟಿಕ್ ಬಿಲ್ 2022ರ ರೀತಿಯ ನಿಯಮಗಳ ಮೂಲಕ ಧ್ರುವೀಯ ಕಾರ್ಯಾಚರಣೆಗಳನ್ನು ನಿಯಂತ್ರಿಸುತ್ತದೆ.
ಅಂಟಾರ್ಕ್‌ಟಿಕಾದ ಸಂಶೋಧನೆಗಳಲ್ಲಿ ಜಾಗತಿಕ ಉಪಸ್ಥಿತಿ
ಹಲವಾರು ರಾಷ್ಟ್ರಗಳು ಅಂಟಾರ್ಕ್‌ಟಿಕದಲ್ಲಿ ತಮ್ಮ ಶಾಶ್ವತ ಸಂಶೋಧನಾ ನೆಲೆಗಳನ್ನು ಸ್ಥಾಪಿಸಿದ್ದು, ಅವುಗಳು ಖಂಡದಾದ್ಯಂತ ಹರಡಿಕೊಂಡಿವೆ. ಈ ಕೇಂದ್ರಗಳು ಅಂಟಾರ್ಕ್‌ಟಿಕ ಪ್ರದೇಶದಲ್ಲಿ ಜಾಗತಿಕ ವೈಜ್ಞಾನಿಕ ಪ್ರಯತ್ನಗಳಿಗೆ ಅತ್ಯಂತ ಮುಖ್ಯವಾಗಿವೆ.
ಬಹಳಷ್ಟು ಸಂಶೋಧನಾ ಕೇಂದ್ರಗಳು ವರ್ಷಾದ್ಯಂತ ಕಾರ್ಯಾಚರಿಸುವ ಕೇಂದ್ರಗಳಾಗಿವೆ. 2023ರಲ್ಲಿ, ಅಂಟಾರ್ಕ್‌ಟಿಕ್ ಒಪ್ಪಂದಕ್ಕೆ ಸಹಿ ಹಾಕಿರುವ 56 ರಾಷ್ಟ್ರಗಳ ಪೈಕಿ 55 ರಾಷ್ಟ್ರಗಳು ಕಾಲಾನುಸಾರವಾದ ಮತ್ತು ವರ್ಷಪೂರ್ತಿ ಕಾರ್ಯಾಚರಿಸುವ ಕೇಂದ್ರಗಳನ್ನು ನಿರ್ವಹಿಸುತ್ತಿವೆ.
ಇಲ್ಲಿ ಕಾರ್ಯಾಚರಿಸುವ ಸಿಬ್ಬಂದಿಗಳ ಸಂಖ್ಯೆ ಋತುಮಾನಕ್ಕೆ ಅನುಗುಣವಾಗಿ ಬದಲಾಗುತ್ತಿರುತ್ತದೆ. ಬೇಸಿಗೆಯಲ್ಲಿ ಅಂದಾಜು 4,800 ಜನರು ವೈಜ್ಞಾನಿಕ ಸಂಶೋಧನೆಗಳಲ್ಲಿ ನಿರತರಾಗಿದ್ದರೆ, ಚಳಿಗಾಲದಲ್ಲಿ ಈ ಸಂಖ್ಯೆ 1,200ಕ್ಕೆ ಇಳಿಯುತ್ತದೆ.
ಅಮೆರಿಕಾ ಎರಡು ಗಮನಾರ್ಹ ಕೇಂದ್ರಗಳನ್ನು ಕಾರ್ಯಾಚರಿಸುತ್ತದೆ. ಅವೆಂದರೆ: ಅಮಂಡ್‌ಸೆನ್ – ಸ್ಕಾಟ್ ಸೌತ್ ಪೋಲ್ ಸ್ಟೇಷನ್ ಎಂಬ ದಕ್ಷಿಣ ತುದಿಯ ನೆಲೆ ಮತ್ತು ಮೆಕ್‌ಮುರ್ಡೋ ಸ್ಟೇಷನ್ ಎಂಬ ಅಮೆರಿಕಾದ ಅತ್ಯತ ದೊಡ್ಡದಾದ ಸಂಶೋಧನಾ ಕೇಂದ್ರ.
ದಕ್ಷಿಣದಲ್ಲಿ ಎರಡನೇ ಅತ್ಯಂತ ತುದಿಯಲ್ಲಿರುವ ನೆಲೆಗಳು ಹವಾಮಾನ ಅನುಸಾರ ಬದಲಾಗುತ್ತಿರುತ್ತವೆ. ಬೇಸಿಗೆಯಲ್ಲಿ ಚೀನಾದ ಕುನ್‌ಲುನ್ ಕೇಂದ್ರ ಈ ಪಟ್ಟವನ್ನು ಹೊಂದಿದ್ದರೆ, ಚಳಿಗಾಲದಲ್ಲಿ ರಷ್ಯಾದ ವೋಸ್ತೋಕ್ ಕೇಂದ್ರ ಈ ಸ್ಥಾನ ಹೊಂದುತ್ತದೆ.
ಅಂಟಾರ್ಕ್‌ಟಿಕ ಸಂಶೋಧನೆಯ ಸವಾಲುಗಳು
ಕಠಿಣ ಹವಾಮಾನ, ಏಕಾಂಗಿತನ ಮತ್ತು ಸವಾಲಿನ ಭೂ ಲಕ್ಷಣಗಳ ಸವಾಲುಗಳ ಜೊತೆಗೆ, ಭಾರತ ಅಂಟಾರ್ಕ್‌ಟಿಕಾದಲ್ಲಿ ಹೆಚ್ಚುತ್ತಿರುವ ಚೀನಾದ ಉಪಸ್ಥಿತಿಯ ಸ್ಪರ್ಧೆಯನ್ನೂ ಎದುರಿಸುತ್ತಿದೆ. ಚೀನಾ ಅಂಟಾರ್ಕ್‌ಟಿಕದಲ್ಲಿ ತನ್ನ ಐದನೇ ಕೇಂದ್ರವನ್ನು ಸ್ಥಾಪಿಸುತ್ತಿದ್ದು, 450ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನೇಮಿಸಿ, ಧ್ರುವ ಸಂಶೋಧನೆ ಮತ್ತು ಅನ್ವೇಷಣೆಯಲ್ಲಿ ಮಹತ್ವದ ದಾಪುಗಾಲಿಡುತ್ತಿದೆ. ಅಂಟಾರ್ಕ್‌ಟಿಕದಲ್ಲಿ ಹೆಚ್ಚುತ್ತಿರುವ ಚೀನಾದ ಪ್ರಭಾವ ಕಾರ್ಯತಂತ್ರದ ಸವಾಲು ಉಂಟುಮಾಡುತ್ತಿದ್ದು, ಮೈತ್ರಿ 2 ರೀತಿಯ ಯೋಜನೆಗಳ ಮೂಲಕ ಭಾರತದ ಉಪಸ್ಥಿತಿಯನ್ನು ಹೆಚ್ಚಿಸುವುದು ಅನಿವಾರ್ಯವಾಗಿಸಿದೆ.
*ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
Border Gavaskar Trophy: ಕಾಂಗರೂ ಚಾಲೆಂಜ್ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ
Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.