ಬರ್ಮಿಂಗ್‌ಹ್ಯಾಮ್‌ನಲ್ಲಿ ಬಲಿಷ್ಠ ತಂಡಗಳ ಮುಖಾಮುಖಿ
ಕಿತ್ತಳೆ ಬಣ್ಣದ ಜೆರ್ಸಿಯೊಂದಿಗೆ ಟೀಮ್ ಇಂಡಿಯಾ ಕಣಕ್ಕೆ
Team Udayavani, Jun 30, 2019, 9:27 AM IST
ಬರ್ಮಿಂಗ್‌ಹ್ಯಾಮ್: ಇಡೀ ಕ್ರಿಕೆಟ್ ಜಗತ್ತೇ ಕಾತರದಿಂದ ಕಾಯುತ್ತಿರುವ ವಿಶ್ವಕಪ್ ಪಂದ್ಯವೊಂದಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಅಜೇಯ ಭಾರತ ಮತ್ತು ಆತಿಥೇಯ ಇಂಗ್ಲೆಂಡ್ ತಂಡಗಳು ರವಿವಾರ ಇಲ್ಲಿನ “ಎಜ್‌ಬಾಸ್ಟನ್’ ಅಂಗಳದಲ್ಲಿ ಈ “ಹೈ-ಪ್ರೊಫೈಲ್’ ಮುಖಾಮುಖೀಗೆ ಸಾಕ್ಷಿಯಾಗಲಿವೆ. ಗೆದ್ದರೆ ಭಾರತ ಸೆಮಿಫೈನಲ್‌ಗೆ ಲಗ್ಗೆ ಇಡಲಿದೆ. ಆಗ ಆಂಗ್ಲರ ನಾಕೌಟ್ ಹಾದಿಗೆ ದೊಡ್ಡ ಕಂಟಕ ಎದುರಾಗಲಿದೆ.
ಭಾರತಕ್ಕೆ ಒಂದೇ ಅಂಕ ಸಾಕು
6 ಪಂದ್ಯಗಳಿಂದ 11 ಅಂಕ ಸಂಪಾದಿಸಿ ರುವ ಭಾರತ ದ್ವಿತೀಯ ಸ್ಥಾನಿಯಾಗಿದೆ. ಸೆಮಿಫೈನಲ್ ಅಧಿಕೃತಗೊಳ್ಳಲು ಇನ್ನು ಒಂದು ಅಂಕ ಸಿಕ್ಕಿದರೆ ಸಾಕು. ಇದೂ ಸೇರಿದಂತೆ ಒಟ್ಟು 3 ಪಂದ್ಯಗಳನ್ನು ಭಾರತ ಆಡಲಿಕ್ಕಿದೆ.
ಈ ಕೂಟದ ನೆಚ್ಚಿನ ತಂಡವೆಂದು ಭಾವಿಸಲಾಗಿದ್ದ ಇಂಗ್ಲೆಂಡ್ ಏಳರಲ್ಲಿ 3 ಪಂದ್ಯಗಳನ್ನು ಸೋತು ಕೇವಲ 8 ಅಂಕವನ್ನಷ್ಟೇ ಗಳಿಸಿದೆ. ಈ 2 ಸೋಲುಗಳು ಏಶ್ಯದ ತಂಡಗಳಾದ ಪಾಕಿಸ್ಥಾನ ಹಾಗೂ ಶ್ರೀಲಂಕಾ ವಿರುದ್ಧವೇ ಎದುರಾದದ್ದು ಮಾರ್ಗನ್ ಬಳಗವನ್ನು ಕಾಡುತ್ತಿರುವುದು ಸುಳ್ಳಲ್ಲ. ಇದರಿಂದ ಏಶ್ಯದ ಬಲಿಷ್ಠ ಹಾಗೂ ಅಜೇಯ ತಂಡವಾದ ಭಾರತವನ್ನು ಎದುರಿಸುವಾಗ ಇಂಗ್ಲೆಂಡ್ ಮಾನಸಿಕ ಒತ್ತಡಕ್ಕೆ ಎದುರಾಗುವುದರಲ್ಲಿ ಅನುಮಾನವೇ ಇಲ್ಲ. ಈ ಪಂದ್ಯದಲ್ಲಿ ವೀಕ್ಷಕರ ಅಪಾರ ಬೆಂಬಲವೂ ಟೀಮ್ ಇಂಡಿಯಾಕ್ಕೆ ಲಭಿಸಲಿದೆ. ಎಜ್‌ಬಾಸ್ಟನ್‌ನಲ್ಲಿ ಟಿಕೆಟ್ ಖರೀದಿಸಿ ದವರಲ್ಲಿ ಭಾರತದ ಅಭಿಮಾನಿಗಳದೇ ಸಿಂಹಪಾಲು. ಪಂದ್ಯಕ್ಕೆ ಮಳೆಯಿಂದ ಅಡ್ಡಿಯಾಗುವ ಯಾವುದೇ ಲಕ್ಷಣವಿಲ್ಲ.
ಭಾರತಕ್ಕೆ ಮಿಡ್ಲ್ ಆರ್ಡರ್ ಚಿಂತೆ
ಹೆಚ್ಚು ನಿರಾಳವಾಗಿರುವ ಭಾರತದ ಮುಂದಿರುವುದು ಒಂದೇ ಚಿಂತೆ, ಅದು ಮಧ್ಯಮ ಕ್ರಮಾಂಕದ ವೈಫಲ್ಯ. 4ನೇ ಸರದಿಯಲ್ಲಿ ವಿಜಯ್ ಶಂಕರ್ ವಿಫಲ ರಾಗುತ್ತಿರುವುದರಿಂದ ಇಲ್ಲಿ ಬದಲಾವಣೆಯೊಂದು ಗೋಚರಿಸಬಹುದು. ಆದರೆ ತಂಡದ ಆಡಳಿತ ಮಂಡಳಿಯಿಂದ ಈವರೆಗೆ ಇಂಥ ಯಾವುದೇ ಸೂಚನೆ ಬಂದಿಲ್ಲ. ಅಕಸ್ಮಾತ್ ವಿಜಯ್ ಶಂಕರ್ ಅವರನ್ನು ಕೈಬಿಟ್ಟಲ್ಲಿ ಈ ಸ್ಥಾನಕ್ಕೆ ಎಡಗೈ ಆಟಗಾರ ರಿಷಭ್ ಪಂತ್ ಅಥವಾ ಅನುಭವಿ ದಿನೇಶ್ ಕಾರ್ತಿಕ್ ಬರಲಿದ್ದಾರೆ. ಯಾರೇ ಆಡಿದರೂ ಮಿಡ್ಲ್ ಆರ್ಡರ್‌ನಲ್ಲಿ ಭಾರತದ ರನ್‌ಗತಿ ಇನ್ನಷ್ಟು ತೀವ್ರತೆ ಪಡೆಯಬೇಕಾದ ಅಗತ್ಯ ಎಂದಿಗಿಂತ ಹೆಚ್ಚಿದೆ. ಹಾಗೆಯೇ ಆರಂಭಿಕರು ಜೋಫ ಆರ್ಚರ್ ಅವರನ್ನು ಹೆಚ್ಚು ಎಚ್ಚರಿಕೆಯಿಂದ ನಿಭಾಯಿಸಬೇಕಾಗುತ್ತದೆ.
ಬೌಲಿಂಗ್ ವಿಭಾಗದಲ್ಲಿ ಬದಲಾವಣೆಯ ಸಾಧ್ಯತೆ ಕಂಡುಬರದು. ಭುವನೇಶ್ವರ್ ಕುಮಾರ್ ಅವರ ಚೇತರಿಕೆ ಸುದ್ದಿ ಬಂದರೂ ಮೊಹಮ್ಮದ್ ಶಮಿ ಈಗಾಗಲೇ ತಮ್ಮ ಸ್ಥಾನಕ್ಕೆ ಸಿಮೆಂಟ್ ಹಾಕಿದ್ದಾರೆ.
ಭಾರತ-ಇಂಗ್ಲೆಂಡ್ ಶತಕ
ರವಿವಾರದ ವಿಶ್ವಕಪ್ ಪಂದ್ಯ ಭಾರತ-ಇಂಗ್ಲೆಂಡ್ ಪಾಲಿಗೆ ವಿಶೇಷ ಮಹತ್ವದ್ದಾ ಗಿದೆ. ಮೊದಲನೆಯದು, ಈ ಪಂದ್ಯದ ಫಲಿತಾಂಶ ಅನೇಕ ತಂಡಗಳ ಪಾಲಿಗೆ ಸಂಜೀವಿನಿ ಆಗಲಿರುವುದು. ಇದಕ್ಕಿಂತ ಮಿಗಿಲಾದುದು ಇದು ಭಾರತ- ಇಂಗ್ಲೆಂಡ್ ನಡುವಿನ 100ನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯವಾಗಿರುವುದು! 1974ರಿಂದ ಮೊದಲ್ಗೊಂಡು ಈವರೆಗಿನ 99 ಪಂದ್ಯಗಳಲ್ಲಿ ಭಾರತ 53 ಪಂದ್ಯಗಳನ್ನು ಗೆದ್ದರೆ, ಇಂಗ್ಲೆಂಡ್ 41ರಲ್ಲಿ ಜಯ ಸಾಧಿಸಿದೆ. 2 ಪಂದ್ಯಗಳು ಟೈ ಆಗಿವೆ.
3 ಪಂದ್ಯಗಳು ರದ್ದುಗೊಂಡಿವೆ.
ವಿಶ್ವಕಪ್‌ನಲ್ಲಿ ಇತ್ತಂಡಗಳು 7 ಸಲ ಮುಖಾಮುಖೀಯಾಗಿದ್ದು, 3-3 ಸಮಬಲ ಸಾಧನೆ ದಾಖಲಿಸಿವೆ. 2011ರಲ್ಲಿ ಕೊನೆಯ ಸಲ ಬೆಂಗಳೂರಿನಲ್ಲಿ ಎದುರಾದಾಗ ಪಂದ್ಯ ರೋಚಕ ಟೈಯಲ್ಲಿ ಅಂತ್ಯ ಕಂಡಿತ್ತು. ಇಂಗ್ಲೆಂಡ್ ನೆಲದಲ್ಲಿ ಇತ್ತಂಡಗಳು 3 ವಿಶ್ವಕಪ್ ಪಂದ್ಯಗಳಲ್ಲಿ ಎದುರಾಗಿವೆ. ಭಾರತ ಎರಡರಲ್ಲಿ ಗೆದ್ದು ಮೇಲುಗೈ ಸಾಧಿಸಿದೆ. ಇಂಗ್ಲೆಂಡ್ ಗೆದ್ದದ್ದು ಒಂದರಲ್ಲಿ ಮಾತ್ರ. ವಿಶೇಷವೆಂದರೆ ಅದು ವಿಶ್ವಕಪ್ ಇತಿಹಾಸದ ಉದ್ಘಾಟನಾ ಪಂದ್ಯವಾಗಿತ್ತು. 1975ರ ಜೂನ್ 7ರಂದು ಲಾರ್ಡ್ಸ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿನ ಅಂತರ ಬರೋಬ್ಬರಿ 202 ರನ್ ಆಗಿತ್ತು!
ಇಂಗ್ಲೆಂಡಿಗೆ ಬ್ಯಾಟಿಂಗೇ ಆಸ್ತಿ
ಇಂಗ್ಲೆಂಡ್ ಬ್ಯಾಟಿಂಗ್ ಬಲವನ್ನೇ ನೆಚ್ಚಿಕೊಂಡಿರುವ ತಂಡ. ಜಾಸನ್ ರಾಯ್ ಬಂದರೆ ಇದು ಇನ್ನಷ್ಟು ಬಲಿಷ್ಠಗೊಳ್ಳಲಿದೆ. ಬೇರ್‌ಸ್ಟೊ, ರೂಟ್, ಮಾರ್ಗನ್, ಬಟ್ಲರ್, ಸ್ಟೋಕ್ಸ್.. ಹೀಗೆ ಆಂಗ್ಲರ ಬ್ಯಾಟಿಂಗ್ ಶಕ್ತಿ ಅನಾವರಣಗೊಳ್ಳುತ್ತದೆ. ಆದರೂ ಇವರನ್ನು ಕಟ್ಟಿಹಾಕಬಹುದು ಎಂಬುದನ್ನು ಶ್ರೀಲಂಕಾ ತೋರಿಸಿ ಕೊಟ್ಟಿದೆ. ಭಾರತದ ಬೌಲಿಂಗ್ ಹೆಚ್ಚು ಬಲಿಷ್ಠವಾಗಿರುವುದರಿಂದ ಆತಿಥೇಯರಿಗೆ ಕಡಿವಾಣ ಹಾಕಬಹುದು ಎಂಬುದೊಂದು ಆಶಾವಾದ.
ನೆರೆಯ ದೇಶಗಳ ಹಾರೈಕೆ!
ಭಾರತ-ಪಾಕಿಸ್ಥಾನಕ್ಕಿಂತ ಹೆಚ್ಚಿನ ಸಂಚಲನ ಮೂಡಿಸಿರುವ ಈ ಪಂದ್ಯದಲ್ಲಿ ಕೊಹ್ಲಿ ಪಡೆ ದಾಖಲಿಸುವ ಫಲಿತಾಂಶ ಏಶ್ಯದ ಉಳಿದ ಮೂರೂ ತಂಡಗಳ ಅಳಿವು-ಉಳಿವಿಗೆ ಕಾರಣವಾಗಲಿರುವುದು ವಿಶೇಷ. ಭಾರತ ಮಾರ್ಗನ್ ಪಡೆಯನ್ನು ಮಣಿಸಿದರೆ ಪಾಕಿಸ್ಥಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡಗಳಿಗೆ ಸೆಮಿಫೈನಲ್‌ನ “ತಾತ್ಕಾಲಿಕ ಹಾದಿ’ಯೊಂದು ತೆರೆದುಕೊಳ್ಳುತ್ತದೆ. ಈ ಮೂರರಲ್ಲಿ ಯಾವುದಾದರೊಂದು ತಂಡ 4ನೇ ಸ್ಥಾನಿಯಾಗಿ ನಾಕೌಟ್ ಪ್ರವೇಶಿಸುವ ಸಂಭವವಿದೆ. ಹೀಗಾಗಿ ಇವರೆಲ್ಲರ ಪ್ರಾರ್ಥನೆ ಒಂದೇ-ಕೊಹ್ಲಿ ಪಡೆ ಬ್ರಿಟಿಷರನ್ನು ಅವರದೇ ನೆಲದಲ್ಲಿ ಹಿಮ್ಮೆಟ್ಟಿಸಲಿ ಎಂಬುದು. ಟೀಮ್ ಇಂಡಿಯಾ ಕೈಯಲ್ಲಿ ಏಳನೇ ವಿಶ್ವಕಪ್ ಹೊಡೆತ ತಿಂದಿರುವ ಪಾಕಿಸ್ಥಾನ ಕೂಡ ಇದರಲ್ಲಿ ಸೇರಿರುವುದನ್ನು ಮರೆಯುವಂತಿಲ್ಲ. “ಅಖಂಡ’ ಭಾರತದ ಏಕತೆ ಎಂಬುದು ಕ್ರೀಡೆಗೆ ಹೇಗೆ ಅನ್ವಯಿಸುತ್ತದೆ ಎಂಬುದಕ್ಕೆ ಇದಕ್ಕಿಂತ ಮಿಗಿಲಾದ ನಿದರ್ಶನ ಬೇಕಿಲ್ಲ!
* 1523 ಭಾರತ-ಇಂಗ್ಲೆಂಡ್ ತಂಡಗಳ ನಡುವಿನ ಈವರೆಗಿನ ಪಂದ್ಯಗಳಲ್ಲಿ ಅತ್ಯಧಿಕ 1,523 ರನ್ ಬಾರಿಸಿದ ದಾಖಲೆ ಯುವರಾಜ್ ಸಿಂಗ್ ಹೆಸರಲ್ಲಿದೆ.
* 43 ಭಾರತ- ಇಂಗ್ಲೆಂಡ್ ನಡುವೆ ಒಟ್ಟು 43 ಶತಕಗಳು ದಾಖಲಾಗಿವೆ. ಇದರಲ್ಲಿ ಯುವರಾಜ್ ಸಿಂಗ್ 4 ಶತಕ ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ.
* 33 ಮಹೇಂದ್ರ ಸಿಂಗ್ ಧೋನಿ ಅತೀ ಹೆಚ್ಚು 33 ಸಿಕ್ಸರ್ ಬಾರಿಸಿದ್ದಾರೆ. ಹಾಗೆಯೇ ಅತ್ಯಧಿಕ 55 ವಿಕೆಟ್ ಪತನಕ್ಕೆ ಕಾರಣರಾದ ಕೀಪರ್ ಆಗಿದ್ದಾರೆ.
* 06 ಇತ್ತಂಡಗಳ ನಡುವಿನ ಅತ್ಯುತ್ತಮ ಬೌಲಿಂಗ್ ದಾಖಲೆ ನೆಹ್ರಾ ಹೆಸರ ಲ್ಲಿದೆ. 2003ರ ಪಂದ್ಯ ದಲ್ಲಿ ಅವರು 23 ರನ್ನಿತ್ತು 6 ವಿಕೆಟ್ ಹಾರಿಸಿದ್ದರು.
* 24 ಎರಡೂ ತಂಡಗಳ ನಡುವಿನ ಕ್ಯಾಚ್ ದಾಖಲೆಯಲ್ಲಿ ಮುಂದಿರುವ ಫೀಲ್ಡರ್ ಪಾಲ್ ಕಾಲಿಂಗ್‌ವುಡ್. ಅವರು 24 ಕ್ಯಾಚ್ ಪಡೆದಿದ್ದಾರೆ.
ಸಂಭಾವ್ಯ ತಂಡಗಳು
ಭಾರತ: ಕೆ.ಎಲ್. ರಾಹುಲ್, ರೋಹಿತ್ ಶರ್ಮ, ಕೊಹ್ಲಿ (ನಾಯಕ), ವಿಜಯ್ ಶಂಕರ್/ರಿಷಭ್ ಪಂತ್/ದಿನೇಶ್ ಕಾರ್ತಿಕ್, ಕೇದಾರ್ ಜಾಧವ್, ಧೋನಿ, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ಚಹಲ್, ಬುಮ್ರಾ.
ಇಂಗ್ಲೆಂಡ್: ಜೇಮ್ಸ್ ವಿನ್ಸ್/ಜಾಸನ್ ರಾಯ್, ಜಾನಿ ಬೇರ್‌ಸ್ಟೊ, ಜೋ ರೂಟ್, ಇಯಾನ್ ಮಾರ್ಗನ್, ಬೆನ್ ಸ್ಟೋಕ್ಸ್, ಜಾಸ್ ಬಟ್ಲರ್, ಕ್ರಿಸ್ ವೋಕ್ಸ್, ಮೊಯಿನ್ ಅಲಿ, ಆದಿಲ್ ರಶೀದ್, ಜೋಫ ಆರ್ಚರ್, ಮಾರ್ಕ್ ವುಡ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.