ಚೀನಾ ಗಡಿಯಲ್ಲಿ ಹಿಮ ಬಂಡೆಯಂತೆ ನಿಂತ ಕನ್ನಡಿಗ ಯೋಧ
Team Udayavani, Jun 19, 2020, 10:38 AM IST
ಬೆಳಗಾವಿ: ಭಾರತದ ಗಡಿ ಭಾಗದಲ್ಲಿ ಕಾಲು ಕೆದರಿ ಜಗಳ ತೆಗೆಯುತ್ತಿರುವ ಚೀನಾ ಸೈನಿಕರಿಗೆ ತೊಡೆ ತಟ್ಟಿ, ದೇಹದ ಕಣ ಕಣವನ್ನೇ ಮಂಜುಗಡ್ಡೆಯಾಗಿಸುವ ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಬೆಳಗಾವಿ ಜಿಲ್ಲೆಯ ಯೋಧನೊಬ್ಬ ಭಾರತದ ರಕ್ಷಣೆಗಾಗಿ ಕಳೆದ ನಾಲ್ಕು ತಿಂಗಳಿಂದ ಸೇವೆ ಸಲ್ಲಿಸುತ್ತಿದ್ದಾನೆ. ಒಂದೆಡೆ ಚೀನಾ ಉಪಟಳವಾದರೆ, ಇನ್ನೊಂದೆಡೆ ಜಗಳಗಂಟ ಪಾಕಿಸ್ತಾನವನ್ನು ಹಿಮ್ಮೆಟ್ಟಿಸುವಲ್ಲಿ ಯೋಧ ನಿರತನಾಗಿದ್ದಾನೆ.
ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದ ಯೋಧ ಅರುಣ ಮಿಸಾಳೆ ಕಳೆದ ಮೂರುವರೆ ತಿಂಗಳಿಂದ ಸಿಯಾಚಿನ್ ಗ್ಲೆಸಿಯರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಇಡೀ ದೇಹವನ್ನೇ ಹೆಪ್ಪುಗಟ್ಟಿಸುವ ಮೈನಸ್ 40 ಡಿಗ್ರಿ ತಾಪಮಾನದಲ್ಲಿ ಕಣ್ಣಿಗೆ ಎಣ್ಣೆ ಹಾಕಿಕೊಂಡು ದೇಶ ಸೇವೆ ಮಾಡುತ್ತಿದ್ದಾನೆ. ಸದ್ಯ ಚೀನಾದಿಂದ ಸ್ವಲ್ಪ ದೂರದಲ್ಲಿಯೇ ಇರುವ ಯೋಧ ಅರುಣ ಅಲ್ಲಿಯ ಸದ್ಯದ ಸ್ಥಿತಿಗತಿ ಕುರಿತು “ಉದಯವಾಣಿ’ಯೊಂದಿಗೆ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾನೆ.
ಜಗತ್ತಿನ ಅತಿ ಎತ್ತರದ ಯುದ್ಧಭೂಮಿ:
ಜೀವನದಲ್ಲಿ ಒಮ್ಮೆ ಮಾತ್ರ ಸಿಯಾಚಿನ್ ಗ್ಲೆಸಿಯರ್‌ನಲ್ಲಿ ಕರ್ತವ್ಯ ನಿರ್ವಹಿಸುವ ಅವಕಾಶ ಯೋಧನಿಗೆ ಸಿಗುತ್ತದೆ. ಇದೇ ಅವಕಾಶವನ್ನೇ ಬಳಸಿಕೊಂಡು ಮಾರ್ಚ್‌ನಲ್ಲಿ ಮೈನಸ್ 30-35ರ ತಾಪಮಾನದಲ್ಲಿ ಪರ್ವತವನ್ನೇರಿದ ಯೋಧ ಅರುಣ ಗಡಿ ಕಾಯುತ್ತ ನಿಂತಿದ್ದಾನೆ. ಜಗತ್ತಿನ ಅತಿ ಎತ್ತರದ ಯುದ್ಧಭೂಮಿ, ಅಪಾಯಕಾರಿ ಹವಾಮಾನದಲ್ಲಿ ಭಾರತೀಯ ಸೇನೆ ಇಲ್ಲಿ ನಮ್ಮ ನೆಲವನ್ನು ರಕ್ಷಣೆ ಮಾಡುತ್ತಿದ್ದು, ಇದರಲ್ಲಿ ನಮ್ಮ ಕನ್ನಡಿಗ ಯೋಧ ಇರುವುದು ಹೆಮ್ಮೆಯ ವಿಷಯವಾಗಿದೆ.
ಶತ್ರುಗಳ ಗುಂಡಿಗಿಂತ ಚಳಿಯೇ ಉಗ್ರ:
ಅಪಾಯಕಾರಿ ಹವಾಮಾನದಲ್ಲಿ ಗಡಿ ಕಾಯುವುದು ಸವಾಲಿನ ಕೆಲಸವಾಗಿದೆ. ಶತ್ರುಗಳ ಗುಂಡಿಗಿಂತ ಚಳಿಯೇ ಉಗ್ರನಂತೆ ನರ್ತಿಸುತ್ತದೆ. ಈ ಹಿಮ ಪ್ರವಾಹಕ್ಕೆ ಅನೇಕ ಯೋಧರು ಪ್ರಾಣ ತೆತ್ತಿದ್ದಾರೆ. ಇಲ್ಲಿ ಕರ್ತವ್ಯ ನಿರ್ವಹಿಸಲು ಕೇವಲ ಮೂರು ತಿಂಗಳು ಮಾತ್ರ ಅವಕಾಶ ಇದೆ. ಆದರೆ ಸದ್ಯ ಲಾಕ್‌ಡೌನ್‌ದಿಂದಾಗಿ ಕೆಲವು ಯೋಧರು ಕರ್ತವ್ಯಕ್ಕೆ ಹಾಜರಾಗದಿರುವುದು, ಜತೆಗೆ
ಭಾರತ-ಚೀನಾ ಸಂಘರ್ಷ ಹಿನ್ನೆಲೆಯಲ್ಲಿ ಮತ್ತೆ ಒಂದು ತಿಂಗಳು ಯೋಧ ಅರುಣ ಮಿಸಾಳೆಯ ಸೇವೆ ಹೆಚ್ಚುವರಿಯಾಗಿದೆ.
ಮಾರ್ಚ್ ತಿಂಗಳಲ್ಲಿ ಯೋಧ ಅರುಣ ಕಾಲ್ನಡಿಗೆ ಮೂಲಕ ಹಿಮ ಪರ್ವತವನ್ನೇರುವಾಗ ಸುಮಾರು ಮೈನಸ್ 50-55 ಡಿಗ್ರಿವರೆಗೂ ಹವಾಮಾನ ಇತ್ತು. ಸದ್ಯ ಹವಾಮಾನ ತುಸು ಇಳಿಕೆಯಾಗಿದ್ದು, ಮಧ್ಯ ರಾತ್ರಿಯಲ್ಲಿ ಮೈನಸ್ 25ರವರೆಗೂ ಇರುತ್ತದೆ. ಇಂಥದರಲ್ಲಿ ಹಿಮವನ್ನೇ ಕಾಯಿಸಿ ನೀರು ಕುಡಿಯಬೇಕಾಗುತ್ತದೆ. ನಿದ್ದೆಯಂತೂ ಅಷ್ಟಕ್ಕಷ್ಟೇ ಆಗಿದ್ದು, ನಿದ್ದೆಯಲ್ಲಿದ್ದಾಗ ಆಮ್ಲಜನಕ ಪಡೆದುಕೊಳ್ಳಲು 2-3 ಬಾರಿ ಎದ್ದು ನೀರು ಕುಡಿಯಬೇಕಾಗುತ್ತದೆ ಎನ್ನುತ್ತಾರೆ ಯೋಧ ಅರುಣ ಮಿಸಾಳೆ.
ಸಿಯಾಚಿನ್‌ದಲ್ಲಿ ಸ್ನಾನ ಮಾಡದ ಯೋಧ:
ನಾಲ್ಕು ತಿಂಗಳಲ್ಲಿ ಒಮ್ಮೆಯೂ ಸ್ನಾನ ಮಾಡಿಲ್ಲ. ಬಕೆಟ್‌ನಲ್ಲಿ ನೀರು ಕಾಯಿಸಿ ತೆಗೆದುಕೊಳ್ಳುವಷ್ಟರಲ್ಲಿ ಹಿಮ ಆಗಿರುತ್ತದೆ. ನಾವು ಧರಿಸುವ ಸಮವಸ್ತ್ರಗಳೇ ನಮಗೆ ಸಂಜೀವಿನಿ ಇದ್ದಂತೆ. ಸಂಪೂರ್ಣ ದೇಹವನ್ನು ಮುಚ್ಚುವ ಈ ಸಮವಸ್ತ್ರದಿಂದ ದೇಹ ಸ್ವಲ್ಪ ಪ್ರಮಾಣದಲ್ಲಿ ಚಳಿ ತಡೆದುಕೊಳ್ಳುತ್ತದೆ. ಅತಿ ಹೆಚ್ಚು ಹಿಮಪಾತ ಆಗುವಾಗ ಹಿಮ ತೆಗೆದು ಅಲ್ಲಿ ದಿನ ಕಳೆಯುವುದೇ ಒಂದು ದೊಡ್ಡ ಸವಾಲಾಗಿದೆ. ಒಂದೆಡೆ ಹಿಮಪಾತ, ಮತ್ತೂಂದೆಡೆ ಶತ್ರುಗಳಿಂದ ರಕ್ಷಿಸಿಕೊಳ್ಳುವುದು ಎಂದರೆ ಹೋದ ಜೀವ ಮತ್ತೆ ವಾಪಸ್ ಪಡೆದುಕೊಂಡಂತೆ ಎಂಬ ಮಾತನ್ನು ಅರುಣ ಹೇಳಿಕೊಂಡರು.
ನಾಲ್ಕು ದಿನಗಳ ಹಿಂದೆ ಭಾರತ-ಚೀನಾ ಮಧ್ಯೆ ನಡೆದ ಗುಂಡಿನ ಕಾಳಗದಿಂದ ಸುಮಾರು 8-10 ಕಿ.ಮೀ. ದೂರದಲ್ಲಿರುವ ಯೋಧ ಅರುಣ ಅವರ ತಂಡವೂ ಅಲರ್ಟ್ ಆಗಿದ್ದು, ಪ್ರತಿ ಕ್ಷಣವನ್ನು ಶತ್ರುಗಳ ಹೆಜ್ಜೆಗಳತ್ತ ದೃಷ್ಟಿ ಹರಿಸಿದೆ. ಯಾವುದೇ ಕ್ಷಣದಲ್ಲಿಯೂ ಚೀನಾ ಸೈನಿಕರು ಭಾರತದ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಹೀಗಾಗಿ ದೇಶದ ಗಡಿ ಕಾಯುವಲ್ಲಿ ಇಂಥ ಅನೇಕ ತಂಡಗಳು ಸಜ್ಜಾಗಿವೆ. ಮಾಜಿ ಸೈನಿಕ, ತಂದೆ ಲಕ್ಷ್ಮಣ ಹಾಗೂ ತಾಯಿ ಜೀಜಾಬಾಯಿ ಅವರ ಕಿರಿಯ ಪುತ್ರನಾಗಿರುವ ಅರುಣ 2012ರಲ್ಲಿ ಮರಾಠಾ ಲಘು ಪದಾತಿ ದಳಕ್ಕೆ ಸೇರಿದ್ದರು. ಪತ್ನಿ ಸವಿತಾ ಕಳೆದ ವರ್ಷವೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬರುವ
ಜೂ.20ಕ್ಕೆ ಮೊದಲ ವರ್ಷದ ಜನ್ಮ ದಿನಾಚರಣೆ ಇದೆ. ಹಿರಿಯ ಸಹೋದರ ಮಂಜುನಾಥ ಕೂಡ ಸಿಐಎಸ್‌ಎಫ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ.
5-6 ಕೆ.ಜಿ. ತೂಕ ಇಳಿಕೆ
ಶತ್ರು ರಾಷ್ಟ್ರಗಳಾದ ಚೀನಾ ಹಾಗೂ ಪಾಕಿಸ್ತಾನದ ಸೈನಿಕರನ್ನು ಹಿಮ್ಮೆಟ್ಟಿಸುವಲ್ಲಿ ನಿರತನಾಗಿರುವ ಬೆಳಗಾವಿಯ ಯೋಧ ಅರುಣ ಮಿಸಾಳೆ ಸಿಯಾಚಿನ್ ಗ್ಲೆಸಿಯರ್‌ಗೆ ಹೋಗುವ ಮುನ್ನ ಅನೇಕ ತರಬೇತಿ ಪಡೆದುಕೊಂಡಿದ್ದಾನೆ.
ವೈದ್ಯಕೀಯ ವರದಿ ಸರಿಯಾಗಿ ಇದ್ದರೆ ಮಾತ್ರ ಸಿಯಾಚಿನ್‌ಗೆ ಕಳುಹಿಸಲಾಗುತ್ತದೆ. ಅರುಣ ಆಯ್ಕೆಯಾದ ಬಳಿಕ ಈ ಮೂರುವರೆ
ತಿಂಗಳಲ್ಲಿ ಈತನ ದೇಹ ತೂಕ 5ರಿಂದ 6 ಕೆ.ಜಿ ಇಳಿಕೆ ಆಗಿದೆ. ಇಲ್ಲಿ ಆಹಾರ ತಯಾರಿಸಿ ಉಣ್ಣುವುದು ಎಂದರೆ ಆಗದ ಮಾತು.
ಕೇವಲ ಒಣ ಹಣ್ಣು(ಡ್ರೈ ಫ್ರೂಟ್ಸ್)ಗಳನ್ನೇ ತಿಂದು ಬದುಕುತ್ತಿರುವ ಯೋಧರಿಗೆ ಚಳಿ ತಡೆದುಕೊಳ್ಳುವುದೇ ದೊಡ್ಡ ಸವಾಲಾಗಿದೆ.
ಸದ್ಯ ಚೀನಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವುದರಿಂದ ಇನ್ನೂ ಕೆಲವು ದಿನಗಳ ಕಾಲ ಅರುಣ ಅಲ್ಲಿಯೇ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಇದೆ.
– ಭೈರೋಬಾ ಕಾಂಬಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.