ಬಾಹ್ಯಾಕಾಶದೆಡೆಗೆ ಭಾರತೀಯರ ಪಯಣ: ಗಗನಯಾತ್ರಿಗಳ ಆಯ್ಕೆ ಮತ್ತು ತರಬೇತಿ ಹೇಗಿರುತ್ತೆ?
Team Udayavani, Mar 1, 2024, 1:40 PM IST
ಮಂಗಳವಾರದಂದು(ಫೆ.27) ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಮಹತ್ವಾಕಾಂಕ್ಷಿ, ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನ ಯೋಜನೆಯಾದ ಗಗನಯಾನ ಯೋಜನೆಗೆ ಆಯ್ಕೆಯಾದ ನಾಲ್ವರು ಗಗನಯಾತ್ರಿಗಳನ್ನು ದೇಶಕ್ಕೆ ಪರಿಚಯಿಸಿದರು. ಪ್ರಧಾನಿ ಮೋದಿಯವರು ಕೇರಳದ ತಿರುವನಂತಪುರಂನಲ್ಲಿರುವ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ಇಸ್ರೋ) ಸೇರಿದ ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರಕ್ಕೆ ಭೇಟಿ ನೀಡಿದ ವೇಳೆ ಈ ಘೋಷಣೆ ನೆರವೇರಿಸಲಾಯಿತು.
ರಷ್ಯಾದಲ್ಲಿ ಬಾಹ್ಯಾಕಾಶ ಯಾನಕ್ಕೆ ಸಂಬಂಧಿಸಿದ ತರಬೇತಿ ಪಡೆದಿರುವ ಭಾರತೀಯ ಗಗನಯಾತ್ರಿಗಳು, ಪ್ರಸ್ತುತ ಭಾರತದಲ್ಲಿರುವ ಒಂದು ಇಸ್ರೋದ ನೆಲೆಯಲ್ಲಿ ಯೋಜನೆಗೆ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ. 2025ರ ಆರಂಭದಲ್ಲಿ ನಡೆಸಲು ಉದ್ದೇಶಿಸಲಾಗಿರುವ ಯೋಜನೆಯ ಮೂಲಕ, ಭಾರತ ಅಮೆರಿಕಾ, ರಷ್ಯಾ, ಮತ್ತು ಚೀನಾಗಳ ನಂತರ ಬಾಹ್ಯಾಕಾಶಕ್ಕೆ ಸ್ವತಂತ್ರವಾಗಿ ಮಾನವರನ್ನು ಕಳುಹಿಸಿದ ಸಾಧನೆ ನಿರ್ಮಿಸಿರುವ ನಾಲ್ಕನೇ ದೇಶ ಎಂಬ ಸಾಧನೆಗೆ ಪಾತ್ರವಾಗುವಂತೆ ಮಾಡಲಿದೆ.
ಎಪ್ರಿಲ್ 1984ರಲ್ಲಿ, ರಷ್ಯನ್ ಸೊಯುಜ಼್ ಟಿ-11 ಬಾಹ್ಯಾಕಾಶ ನೌಕೆಯ ಮೂಲಕ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಬಾಹ್ಯಾಕಾಶ ಯಾತ್ರೆ ಕೈಗೊಂಡ ಬಳಿಕ, ಪ್ರಸ್ತುತ ಘೋಷಿಸಲಾದ ನಾಲ್ವರು ವಾಯುಸೇನಾ ಅಧಿಕಾರಿಗಳು ಬಾಹ್ಯಾಕಾಶಕ್ಕೆ ತೆರಳುವ ಭಾರತೀಯರು ಎನಿಸಲಿದ್ದಾರೆ. ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ್ ರಂತಹ ಭಾರತೀಯ ಮೂಲದ ವ್ಯಕ್ತಿಗಳು ಬಾಹ್ಯಾಕಾಶ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರಾದರೂ, ಈ ನಾಲ್ವರು ಅಧಿಕಾರಿಗಳು ಭಾರತವೇ ಸ್ವತಂತ್ರವಾಗಿ ಅಭಿವೃದ್ಧಿ ಪಡಿಸಿ, ಉಡಾವಣೆಗೊಳಿಸುತ್ತಿರುವ ಬಾಹ್ಯಾಕಾಶ ಯೋಜನೆಯ ಭಾಗವಾಗಿರಲಿದ್ದಾರೆ.
ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್, ಅಂಗದ್ ಪ್ರತಾಪ್, ಅಜಿತ್ ಕೃಷ್ಣನ್, ಮತ್ತು ಶುಭಾಂಶು ಶುಕ್ಲಾ ಅವರನ್ನು ಭಾರತದ ಮೊದಲ ಮಾನವ ಸಹಿತ ಬಾಹ್ಯಾಕಾಶ ಯೋಜನೆಯ ಗಗನಯಾತ್ರಿಗಳು ಎಂದು ಆಯ್ಕೆ ಮಾಡಿಕೊಳ್ಳಲಾಗಿದೆ. ಭಾರತೀಯ ವಾಯುಪಡೆಯಲ್ಲಿ ವಿಂಗ್ ಕಮಾಂಡರ್‌ಗಳಾಗಿ ಅಥವಾ ಗ್ರೂಪ್ ಕ್ಯಾಪ್ಟನ್‌ಗಳಾಗಿ ಕಾರ್ಯ ನಿರ್ವಹಿಸುತ್ತಿರುವ ನಾಲ್ವರು ಅಧಿಕಾರಿಗಳು ಟೆಸ್ಟ್ ಪೈಲಟ್‌ಗಳಾಗಿ ಅಪಾರ ಅನುಭವ ಹೊಂದಿದ್ದಾರೆ. ಇಂತಹ ಹಿನ್ನೆಲೆಯ ಕಾರಣದಿಂದ, ಯಾವುದಾದರೂ ಅನಿರೀಕ್ಷಿತ ಸವಾಲು ಎದುರಾದರೆ, ಅದನ್ನು ಎದುರಿಸಲು, ಅದಕ್ಕೆ ಹೊಂದಿಕೊಳ್ಳಲು ಅವರಿಗೆ ಸಾಧ್ಯವಾಗಲಿದೆ. ಇದು ಮುಂಬರುವ ಬಾಹ್ಯಾಕಾಶ ಯೋಜನೆಗೆ ಅತ್ಯಂತ ಮಹತ್ವದ ಕೌಶಲವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೋ ಮುಖ್ಯಸ್ಥರಾದ ಎಸ್ ಸೋಮನಾಥ್ ಅವರು ಗಗನಯಾತ್ರಿಗಳ ಬಟ್ಟೆಗೆ ಬಂಗಾರದ ರೆಕ್ಕೆಗಳನ್ನು ಹೊಂದಿರುವ ಬ್ಯಾಜ್‌ಗಳನ್ನು ಅಳವಡಿಸಿದರು. ಪ್ರಧಾನಿ ಮೋದಿ ಗಗನಯಾತ್ರಿಗಳನ್ನು ಭಾರತದ ಹೆಮ್ಮೆ ಎಂದು ಶ್ಲಾಘಿಸಿದರು. ಅಂತಿಮವಾಗಿ, ಆಯ್ಕೆಗೊಂಡಿರುವ ನಾಲ್ವರಲ್ಲಿ ಮೂವರು ಗಗನಯಾತ್ರಿಗಳು ಮಾತ್ರವೇ ಗಗನಯಾನ ಯೋಜನೆಯ ಭಾಗವಾಗಿ ಬಾಹ್ಯಾಕಾಶಕ್ಕೆ ತೆರಳಲಿದ್ದಾರೆ.
ಭಾರತದ ನಾಲ್ವರು ಗಗನಯಾತ್ರಿಗಳು ಹೇಗೆ ಈ ಮಹತ್ತರ ಮೈಲಿಗಲ್ಲನ್ನು ಸಾಧಿಸಿದರು? ಅವರ ಆಯ್ಕೆಯ ಹಿಂದೆ ಇದ್ದ ಪ್ರಕ್ರಿಯೆ ಏನು? ಅವರು ಗಗನಯಾನ ಯೋಜನೆಯನ್ನು ಯಶಸ್ವಿಯಾಗಿ ನೆರವೇರಿಸಲು ಹೇಗೆ ಸಿದ್ಧತೆ ನಡೆಸುತ್ತಾರೆ ಎಂಬ ಪ್ರಶ್ನೆಗಳು ಎಲ್ಲರಲ್ಲೂ ಸಹಜವಾಗಿಯೇ ಮೂಡಿರುತ್ತವೆ.
ಈಗ ಆಯ್ಕೆಗೊಂಡಿರುವ ಗಗನಯಾತ್ರಿಗಳು ಭಾರತೀಯ ವಾಯುಪಡೆಯ ಸದಸ್ಯರಾಗಿದ್ದು, ಟೆಸ್ಟ್ ಪೈಲಟ್‌ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಅವರ ಆಯ್ಕೆಯ ಹಿಂದೆ ಅತ್ಯಂತ ತೀವ್ರವಾದ ಆಯ್ಕೆ ಪ್ರಕ್ರಿಯೆ ಕಾರ್ಯಾಚರಿಸಿದೆ.
ಭಾರತೀಯ ವಾಯುಪಡೆಯ ಅಡಿಯಲ್ಲಿ ಕಾರ್ಯಾಚರಿಸುವ, ಬೆಂಗಳೂರಿನಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್ (ಐಎಎಂ) ಗಗನಯಾತ್ರಿಗಳ ಆಯ್ಕೆ ಪ್ರಕ್ರಿಯೆಯನ್ನು ನೆರವೇರಿಸಿದೆ.
ಬಹಳಷ್ಟು ಸಂಖ್ಯೆಯಲ್ಲಿ ವಾಯುಪಡೆಯ ಪೈಲಟ್‌ಗಳು ಗಗನಯಾತ್ರಿಗಳಾಗಿ ಆಯ್ಕೆಗೊಳ್ಳುವ ಸಲುವಾಗಿ ಪರೀಕ್ಷೆಗಳನ್ನು ಎದುರಿಸಿದರು. ಸೆಪ್ಟೆಂಬರ್ 2019ರ ಆರಂಭಿಕ ಹಂತದ ಅಯ್ಕೆ ಪ್ರಕ್ರಿಯೆಯ ಬಳಿಕ, ಒಟ್ಟು 12 ಜನರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.
ಆರಂಭಿಕ ಆಯ್ಕೆ ಪ್ರಕ್ರಿಯೆಯ ಬಳಿಕ, 12 ಆಯ್ಕೆಗೊಂಡ ಅಭ್ಯರ್ಥಿಗಳು ವಿವಿಧ ವೈದ್ಯಕೀಯ, ಏರೋಮೆಡಿಕಲ್, ಮತ್ತು ಮಾನಸಿಕ ಮೌಲ್ಯಮಾಪನಗಳಿಗೆ ಒಳಗಾದರು.
ವಿವಿಧ ಹಂತಗಳ ಆಯ್ಕೆ ಪ್ರಕ್ರಿಯೆಯ ಬಳಿಕ, ಇನ್ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್ (ಐಎಎಂ) ಆರಂಭದ ಹಂತದಲ್ಲಿ ಆಯ್ಕೆಗೊಂಡಿದ್ದ 12 ಜನರಲ್ಲಿ ನಾಲ್ವರನ್ನು ಗುರುತಿಸಿತು. ಈ ರೀತಿ ಆಯ್ಕೆಗೊಂಡ ನಾಲ್ವರನ್ನು ಬಳಿಕ ತರಬೇತಿ ಪಡೆಯುವ ಸಲುವಾಗಿ ರಷ್ಯಾಗೆ ಕಳುಹಿಸಲಾಯಿತು.
ಫೆಬ್ರವರಿ 2020ರಿಂದ ಮಾರ್ಚ್ 2021ರ ತನಕ, ನಾಲ್ವರು ಗಗನಯಾತ್ರಿಗಳು ರಷ್ಯಾದ ಯೂರಿ ಗಗಾರಿನ್ ಕಾಸ್ಮೋನಾಟ್ ಟ್ರೈನಿಂಗ್ ಸೆಂಟರ್‌ನಲ್ಲಿ 13 ತಿಂಗಳ ಅವಧಿಯ ತರಬೇತಿ ಪಡೆದರು.
ಇದರೊಡನೆ, ಅವರಿಗೆ ರಷ್ಯಾದಲ್ಲಿ ಸರ್ವೈವಲ್ ಟ್ರೈನಿಂಗ್ (ಬದುಕುಳಿಯುವ ತರಬೇತಿ) ಒದಗಿಸಲಾಯಿತು. ಇದು ಲ್ಯಾಂಡಿಂಗ್ ಸಂದರ್ಭದಲ್ಲಿ ಎದುರಾಗಬಹುದಾದ ವಿವಿಧ ಸನ್ನಿವೇಶಗಳನ್ನು ಎದುರಿಸಲು ಅವರನ್ನು ಸಿದ್ಧಗೊಳಿಸುವಂತಿತ್ತು. ಈ ತರಬೇತಿ ಅವರನ್ನು ಪರ್ವತ ಪ್ರದೇಶಗಳು, ಅರಣ್ಯಗಳು, ಮರುಭೂಮಿ ಅಥವಾ ಸಮುದ್ರದಂತಹ ಅತ್ಯಂತ ವಿಭಿನ್ನವಾದ ಪರಿಸರಗಳಲ್ಲಿ ಬದುಕುಳಿಯಲು ಸಿದ್ಧಪಡಿಸುವಂತಿದ್ದು, ಅವರು ಎಂತಹ ಪರಿಸರದಲ್ಲಿ ಭೂಮಿಗೆ ಮರಳಿದರೂ, ಆ ಪರಿಸ್ಥಿತಿಯನ್ನು ಎದುರಿಸಲು ಅವರಿಗೆ ತರಬೇತಿ ನೀಡಲಾಯಿತು.
ನಾಲ್ವರು ಗಗನಯಾತ್ರಿಗಳು ಭೂಮಿಯ ಮೇಲೆ ಬಹುತೇಕ 400 ಕಿಲೋಮೀಟರ್‌ಗಳ ಎತ್ತರದಲ್ಲಿ ಕುಶಲ ಚಲನೆಗಳನ್ನು ಎದುರಿಸುವ ಸವಾಲಿಗೆ ಸಮರ್ಥವಾಗಿ ಸಿದ್ಧಗೊಳ್ಳುವ ನಿಟ್ಟಿನಲ್ಲಿ, ನಿರಂತರವಾಗಿ ಏರೋಬ್ಯಾಟಿಕ್ ಹಾರಾಟದ ಅಭ್ಯಾಸದಲ್ಲಿ ತೊಡಗಿಕೊಂಡರು. ಈ ತರಬೇತಿ ಅವರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಿದ್ಧಗೊಳಿಸಲಿದ್ದು, ಅವರು ಬಾಹ್ಯಾಕಾಶದಲ್ಲಿ ಯಾವುದೇ ತೊಂದರೆಗಳು ಎದುರಾಗದೆ ಏರೋಬ್ಯಾಟಿಕ್ ಹಾರಾಟದ ಸಂಕೀರ್ಣತೆಗಳನ್ನು ಎದುರಿಸಲು ಸಾಧ್ಯವಾಗಿಸುತ್ತದೆ.
ಏರೋಬ್ಯಾಟಿಕ್ ಹಾರಾಟ ಎನ್ನುವುದು ಒಂದು ವಿಮಾನದಲ್ಲಿ ಕೈಗೊಳ್ಳುವ ಅತ್ಯಂತ ಕುಶಲ ಚಲನೆಯಾಗಿದ್ದು, ಇದು ವೈಮಾನಿಕ ಪ್ರದರ್ಶನಗಳಲ್ಲಿ ನಡೆಸುವ ಲೂಪ್, ರೋಲ್ಸ್, ಸ್ಪಿನ್ಸ್‌ನಂತಹ ಚಲನೆಗಳನ್ನು ಒಳಗೊಂಡಿರುತ್ತದೆ. ಇದು ಪೈಲಟ್‌ಗಳ ಕೌಶಲಗಳು ಮತ್ತು ನಿಖರತೆಗಳನ್ನು ಹೆಚ್ಚಿಸುತ್ತದೆ.
ಪ್ರಸ್ತುತ ಗಗನಯಾತ್ರಿಗಳು ಇಸ್ರೋದ ಬೆಂಗಳೂರು ನೆಲೆಯಲ್ಲಿದ್ದು, ಈ ಯೋಜನೆಗಾಗಿ ವಿವಿಧ ಸಿದ್ಧತಾ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ ಎಂದು ಇಸ್ರೋ ಮಾಹಿತಿ ನೀಡಿದೆ. ಅವರ ತರಬೇತಿ ಪ್ರಕ್ರಿಯೆಯಲ್ಲಿ ಸಿಮ್ಯುಲೇಶನ್ ತರಬೇತಿಗಳು, ದೈಹಿಕ ಮತ್ತು ವೈದ್ಯಕೀಯ ಕ್ಷಮತೆಯ ಅವಧಿಗಳು, ಯೋಗಾಭ್ಯಾಸಗಳು, ಮತ್ತು ತಮ್ಮ ಬಾಹ್ಯಾಕಾಶ ಸೂಟ್‌ಗಳನ್ನು ಧರಿಸುವ ಮತ್ತು ನಿರ್ವಹಿಸುವ ತರಬೇತಿಗಳು ಸೇರಿವೆ.
ಗಗನಯಾನ ಯೋಜನೆ ಭೂಮಿಯಿಂದ 400 ಕಿಲೋಮೀಟರ್‌ಗಳಷ್ಟು ಎತ್ತರದಲ್ಲಿರುವ ಕಕ್ಷೆಗೆ ಮೂರು ದಿನಗಳ ಅವಧಿಗೆ ಗಗನಯಾತ್ರಿಗಳನ್ನು ಕಳುಹಿಸಿ, ಆ ಮೂಲಕ ಭಾರತದ ಮಾನವ ಸಹಿತ ಬಾಹ್ಯಾಕಾಶ ಅನ್ವೇಷಣಾ ಸಾಮರ್ಥ್ಯವನ್ನು ಪ್ರದರ್ಶಿಸುವ ಗುರಿ ಹೊಂದಿದೆ. ಈ ಯೋಜನೆ ಪೂರ್ಣಗೊಂಡ ಬಳಿಕ, ಗಗನಯಾತ್ರಿಗಳು ಸುರಕ್ಷಿತವಾಗಿ ಭೂಮಿಗೆ ಮರಳಲಿದ್ದು, ಈ ಮೊದಲೇ ನಿರ್ಧರಿಸಲಾಗಿರುವಂತೆ ಭಾರತದ ಸೀಮೆಯ ಕರಾವಳಿಯ ಬಳಿ ಸಮುದ್ರದಲ್ಲಿ ಸುರಕ್ಷಿತವಾಗಿ ಇಳಿಯಲಿದ್ದಾರೆ.
ಸೋವಿಯತ್ ಒಕ್ಕೂಟ ಮತ್ತು ಅಮೆರಿಕಾ 1961ರಲ್ಲಿ ಭೂಮಿಯ ಕೆಳ ಕಕ್ಷೆಯಲ್ಲಿ ತಮ್ಮ ಮಾನವ ಸಹಿತ ಚಟುವಟಿಕೆಗಳನ್ನು ಕೈಗೊಳ್ಳಲು ಆರಂಭಿಸಿದ ಸುದೀರ್ಘ ಅವಧಿಯ ಬಳಿಕ ಭಾರತ ಬಾಹ್ಯಾಕಾಶ ಯಾನ ಕೈಗೊಳ್ಳುತ್ತಿದೆಯಾದರೂ, ಗಗನಯಾನ ಯೋಜನೆ ಈಗಾಗಲೇ ಭಾರತದಲ್ಲಿ ಸಾಕಷ್ಟು ಉತ್ಸಾಹ ಮೂಡಿಸಿದೆ. ಚೀನಾ 2003ರಲ್ಲಿ ಯಶಸ್ವಿಯಾಗಿ ಮಾನವ ಸಹಿತ ಬಾಹ್ಯಾಕಾಶ ಯಾನ ಕೈಗೊಂಡ ಬಳಿಕ, ಈ ಸಾಧನೆ ನಡೆಸಿದ ಮೂರನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 21 ಗಂಟೆಗಳ ಅವಧಿಯ ಚೀನಾದ ಯೋಜನೆ ಭೂಮಿಗೆ 14 ಪರಿಭ್ರಮಣೆ ನಡೆಸಿತು. ಅದರೊಡನೆ, ಅಮೆರಿಕಾ ಮತ್ತು ಚೀನಾಗಳು ಈಗಾಗಲೇ ಭೂಮಿಯ ಕೆಳ ಕಕ್ಷೆಯಲ್ಲಿ ಸಂಪೂರ್ಣವಾಗಿ ಕಾರ್ಯಾಚರಿಸುವ ಬಾಹ್ಯಾಕಾಶ ನಿಲ್ದಾಣಗಳನ್ನು ಸ್ಥಾಪಿಸಿವೆ.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Border Gavaskar Trophy: ಕಾಂಗರೂ ಚಾಲೆಂಜ್ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ
Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…
Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್: 21 ವರ್ಷದ ಹಿಂದೆ ನಡೆದಿದ್ದೇನು?
ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.