ISRO ಡಾಕಿಂಗ್ ಪ್ರಯೋಗ ಯಶಸ್ವಿ: ಭಾರತೀಯ ಬಾಹ್ಯಾಕಾಶ ಅನ್ವೇಷಣೆಯಲ್ಲೊಂದು ಬೃಹತ್ ಹೆಜ್ಜೆ
ಅತ್ಯಂತ ನಿಖರವಾಗಿ ಡಾಕಿಂಗ್ ನಡೆಸುವ ಸಾಮರ್ಥ್ಯ ಅತ್ಯಂತ ಮುಖ್ಯವಾಗಿದೆ.
Team Udayavani, Jan 16, 2025, 12:31 PM IST
ಜನವರಿ 16, ಗುರುವಾರದಂದು, ಭಾರತ ತನ್ನ ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್ (ಸ್ಪೇಡೆಕ್ಸ್) ಯೋಜನೆಯಡಿ ಕಕ್ಷೆಯಲ್ಲಿರುವ ಎರಡು ಉಪಗ್ರಹಗಳನ್ನು ಒಂದಕ್ಕೊಂದು ಯಶಸ್ವಿಯಾಗಿ ಡಾಕಿಂಗ್ ನಡೆಸಿ (ಜೋಡಿಸಿ), ಬಾಹ್ಯಾಕಾಶ ಇತಿಹಾಸದ ಪುಟಗಳಲ್ಲಿ ತನ್ನ ಹೆಸರನ್ನು ಅಚ್ಚಳಿಯದಂತೆ ಛಾಪಿಸಿತು. ಈ ಸಾಧನೆಯ ಮೂಲಕ, ಭಾರತ ಸಂಕೀರ್ಣವಾದ ಡಾಕಿಂಗ್ ತಂತ್ರಜ್ಞಾನವನ್ನು ಸಾಧಿಸಿರುವ ಕೇವಲ ನಾಲ್ಕನೇ ರಾಷ್ಟ್ರವಾಗಿ ಹೊರಹೊಮ್ಮಿದ್ದು, ಅಮೆರಿಕಾ, ರಷ್ಯಾ, ಮತ್ತು ಚೀನಾಗಳ ಸಾಲಿಗೆ ಸೇರ್ಪಡೆಗೊಂಡಿದೆ.
ಸ್ಪೇಡೆಕ್ಸ್ ಯೋಜನೆ ಎಂದರೇನು?
ಸ್ಪೇಡೆಕ್ಸ್ ಎನ್ನುವುದು ಎರಡು ಉಪಗ್ರಹಗಳಾದ ಚೇಸರ್ (ಎಸ್‌ಡಿಎಕ್ಸ್01) ಮತ್ತು ಟಾರ್ಗೆಟ್ (ಎಸ್‌ಡಿಎಕ್ಸ್02) ಗಳನ್ನು ಒಳಗೊಂಡಿರುವ ಬಾಹ್ಯಾಕಾಶ ಯೋಜನೆಯಾಗಿದ್ದು, ಡಿಸೆಂಬರ್ 30, 2024ರಂದು ಉಡಾವಣೆಗೊಂಡಿತ್ತು. ಈ ಯೋಜನೆ ಭಾರತದ ಸ್ವಾಯತ್ತ ಉಪಗ್ರಹ ಡಾಕಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸುವ ಗುರಿ ಹೊಂದಿತ್ತು. ಈ ಸಾಮರ್ಥ್ಯ ಭವಿಷ್ಯದ ಮಹತ್ವಾಕಾಂಕ್ಷಿ ಬಾಹ್ಯಾಕಾಶ ಯೋಜನೆಗಳಿಗೆ ಅತ್ಯಂತ ಅವಶ್ಯಕ ಮತ್ತು ಅನಿವಾರ್ಯವಾಗಿದೆ.
ಡಾಕಿಂಗ್ ಪ್ರಕ್ರಿಯೆ: ಬಾಹ್ಯಾಕಾಶದ ಸೂಕ್ಷ್ಮ ನೃತ್ಯ!
ಬಾಹ್ಯಾಕಾಶದಲ್ಲಿ ಎರಡು ವಾಹನಗಳು ಅತ್ಯಂತ ಹೆಚ್ಚಿನ ವೇಗದಲ್ಲಿ ಚಲಿಸುತ್ತಿರುವುದನ್ನು ಊಹಿಸಿಕೊಳ್ಳಿ. ಅವುಗಳನ್ನು ಅತ್ಯಂತ ನಿಖರವಾಗಿ ಒಂದಕ್ಕೊಂದು ಜೋಡಿಸಬೇಕಾಗಿರುವುದನ್ನು ಊಹಿಸಿ. ಬಾಹ್ಯಾಕಾಶ ಡಾಕಿಂಗ್ ಪ್ರಕ್ರಿಯೆ ಎಂದರೆ ಇದೇ ರೀತಿಯಲ್ಲಿ ಎರಡು ಉಪಗ್ರಹಗಳನ್ನು ಒಂದಕ್ಕೊಂದು ಜಾಗರೂಕವಾಗಿ ಜೋಡಿಸುವುದು. ಇಸ್ರೋ ಇಂತಹ ಸಂಕೀರ್ಣ ಪ್ರಕ್ರಿಯೆಯನ್ನು ಬಹಳ ಜಾಗರೂಕವಾಗಿ ಪೂರ್ಣಗೊಳಿಸಿದೆ.
ಟಾರ್ಗೆಟ್ ಉಪಗ್ರಹದ ಬಳಿಗೆ ಚೇಸರ್ ಪಯಣ: ಟಾರ್ಗೆಟ್ ಉಪಗ್ರಹದಿಂದ 15 ಮೀಟರ್‌ಗಳಷ್ಟು ದೂರದಲ್ಲಿದ್ದ ಚೇಸರ್ ಉಪಗ್ರಹವನ್ನು ಜಾಗರೂಕವಾಗಿ 3 ಮೀಟರ್‌ಗಳಷ್ಟು ಸನಿಹಕ್ಕೆ ಕೊಂಡೊಯ್ಯಲಾಯಿತು.
ನಿಖರ ಹೊಂದಿಸುವಿಕೆ: ಲೇಸರ್ ರೇಂಜ್ ಫೈಂಡರ್, ಮತ್ತು ಡಾಕಿಂಗ್ ಸೆನ್ಸರ್‌ಗಳಂತಹ ಆಧುನಿಕ ಸೆನ್ಸರ್‌ಗಳನ್ನು ಬಳಸಿ, ಚೇಸರ್ ಉಪಗ್ರಹ ಟಾರ್ಗೆಟ್ ಉಪಗ್ರಹದ ಡಾಕಿಂಗ್ ವ್ಯವಸ್ಥೆಯೊಡನೆ ತನ್ನನ್ನು ತಾನು ನಿಖರವಾಗಿ ಹೊಂದಿಸಿಕೊಂಡಿತು.
ಸೆರೆ ಹಿಡಿಯುವಿಕೆ ಮತ್ತು ಸಂಪರ್ಕ: ಎರಡೂ ಉಪಗ್ರಹಗಳಲ್ಲಿರುವ ಡಾಕಿಂಗ್ ವ್ಯವಸ್ಥೆಗಳು ಅತ್ಯಂತ ನಿಖರವಾದ ಆ್ಯಂಡ್ರೋಜಿನಸ್ (ಉಭಯಲಿಂಗಿ) ಯಾಂತ್ರಿಕ ವ್ಯವಸ್ಥೆಯನ್ನು ಹೊಂದಿದ್ದು, ಅವುಗಳು ಒಂದನ್ನೊಂದು ಸಂಪರ್ಕಿಸಿ, ಜೋಡಣೆಗೊಂಡವು.
ಸರಪಳಿಯನ್ನು ಭದ್ರಪಡಿಸುವುದು: ಒಂದು ಬಾರಿ ಎರಡು ಉಪಗ್ರಹಗಳು ಸಂಪರ್ಕಿಸಿದ ಬಳಿಕ, ಡಾಕಿಂಗ್ ಯಾಂತ್ರಿಕ ವ್ಯವಸ್ಥೆಗಳು ಹಿಂದಕ್ಕೆ ಸರಿದು, ಉಪಗ್ರಹಗಳನ್ನು ಇನ್ನಷ್ಟು ಸನಿಹಕ್ಕೆ ಸೆಳೆದು, ಅವುಗಳು ಭದ್ರವಾಗಿ ಹಿಡಿದುಕೊಳ್ಳುವಂತೆ ಮಾಡಿತು. ಆ ಬಳಿಕ, ಸ್ಥಿರವಾದ ಸಂಪರ್ಕವನ್ನು ಕಲ್ಪಿಸುವ ಸಲುವಾಗಿ, ವ್ಯವಸ್ಥೆಯನ್ನು ಅದರ ಸ್ಥಾನದಲ್ಲಿ ಲಾಕ್ ಮಾಡಲಾಯಿತು.
ಆ್ಯಂಡ್ರೋಜಿನಸ್ ಡಾಕಿಂಗ್ ಸಿಸ್ಟಮ್: ಒಂದು ಸರಳ ಡಾಕಿಂಗ್ ವಿಧಾನ
ಭಾರತದ ಡಾಕಿಂಗ್ ಪ್ರಕ್ರಿಯೆಯ ಯಶಸ್ಸಿನ ಒಂದು ಮುಖ್ಯ ಅಂಶವೆಂದರೆ, ಆ್ಯಂಡ್ರೋಜಿನಸ್ (ಉಭಯಲಿಂಗಿ) ಡಾಕಿಂಗ್ ವ್ಯವಸ್ಥೆಯ ಬಳಕೆ. ಬಾಹ್ಯಾಕಾಶ ನೌಕೆಗಳ ವಿಚಾರದಲ್ಲಿ ‘ಆ್ಯಂಡ್ರೋಜಿನಸ್’ ಎಂದರೆ, ಡಾಕಿಂಗ್ ಪ್ರಕ್ರಿಯೆಯಲ್ಲಿ ಬಳಕೆಯಾದ ಎರಡೂ ಬಾಹ್ಯಾಕಾಶ ನೌಕೆಗಳು ಒಂದೇ ರೀತಿಯ ಡಾಕಿಂಗ್ ಪ್ರಕ್ರಿಯೆಯನ್ನು ಒಳಗೊಂಡಿವೆ ಎನ್ನುವುದಾಗಿದೆ. ಒಂದೇ ರೀತಿಯ ಎರಡು ಪ್ಲಗ್ಗುಗಳು ಯಾವುದೇ ಸಮಸ್ಯೆಯಿಲ್ಲದೆ ಒಂದಕ್ಕೊಂದು ಸಂಪರ್ಕಿಸುವುದನ್ನು ಊಹಿಸಿಕೊಳ್ಳಿ. ಇದು ಅದೇ ರೀತಿಯ ವ್ಯವಸ್ಥೆಯಾಗಿದೆ. ಇದು ಬಾಹ್ಯಾಕಾಶ ನೌಕೆಗಳು ಒಂದು ‘ಪುರುಷ’ ಭಾಗ ಮತ್ತು ಒಂದು ‘ಸ್ತ್ರೀ’ ಭಾಗವನ್ನು ಹೊಂದಿರುತ್ತಿದ್ದ ಹಿಂದಿನ ವ್ಯವಸ್ಥೆಗಳಿಗಿಂತ ಬಹಳಷ್ಟು ಭಿನ್ನವಾಗಿದೆ.
ಯಾಕೆ ಆ್ಯಂಡ್ರೋಜಿನಸ್ ವ್ಯವಸ್ಥೆಯನ್ನು ಬಳಸಲಾಗಿದೆ?
ಹೊಂದಿಕೊಳ್ಳುವಿಕೆ: ಈ ವ್ಯವಸ್ಥೆಯನ್ನು ಹೊಂದಿರುವ ಯಾವುದೇ ಎರಡು ಬಾಹ್ಯಾಕಾಶ ನೌಕೆಗಳನ್ನು ಅವುಗಳ ನಿರ್ದಿಷ್ಟ ಪಾತ್ರಗಳ ಹೊರತಾಗಿಯೂ ಡಾಕಿಂಗ್ ನಡೆಸಲು ಅವಕಾಶ ಕಲ್ಪಿಸುತ್ತದೆ. ಇದು ಹಲವಾರು ಮಾಡ್ಯುಲ್‌ಗಳನ್ನು ಸಂಪರ್ಕಿಸಬೇಕಾಗಿರುವ ಬಾಹ್ಯಾಕಾಶ ನಿಲ್ದಾಣ ನಿರ್ಮಾಣದಂತಹ ಪ್ರಕ್ರಿಯೆಯಲ್ಲಿ ಅತ್ಯಂತ ಮುಖ್ಯವಾಗಿದೆ.
ಸರಳತೆ: ಇದು ವಿನ್ಯಾಸ ಮತ್ತು ಕಾರ್ಯಾಚರಣೆಯಲ್ಲಿನ ಸಂಕೀರ್ಣತೆಗಳನ್ನು ಕಡಿಮೆಗೊಳಿಸುತ್ತದೆ.
ಭಾರತದ ಆವಿಷ್ಕಾರ: ಕಡಿಮೆ ಮೋಟರ್‌ಗಳು – ಹೆಚ್ಚಿನ ಕಾರ್ಯದಕ್ಷತೆ
ಇಸ್ರೋದ ಆ್ಯಂಡ್ರೋಜಿನಸ್ ಡಾಕಿಂಗ್ ವ್ಯವಸ್ಥೆ ತನ್ನ ಸರಳತೆಯಿಂದಲೇ ಗುರುತಿಸಲ್ಪಡುವ ವ್ಯವಸ್ಥೆಯಾಗಿದೆ. ಇದು ಡಾಕಿಂಗ್ ಪ್ರಕ್ರಿಯೆಯ ವೇಳೆ ಬಾಹ್ಯಾಕಾಶ ನೌಕೆಗಳ ಹೊಂದಾಣಿಕೆ ಮತ್ತು ಮಾರ್ಗದರ್ಶನಕ್ಕೆ ಕೇವಲ ಎರಡು ಮೋಟರ್‌ಗಳನ್ನು ಮಾತ್ರವೇ ಬಳಸುತ್ತದೆ. ಈ ವ್ಯವಸ್ಥೆಗೆ ವ್ಯತಿರಿಕ್ತವಾಗಿ, ಇಂಟರ್ನ್ಯಾಷನಲ್ ಡಾಕಿಂಗ್ ಸಿಸ್ಟಮ್ ಸ್ಟ್ಯಾಂಡರ್ಡ್ (ಐಡಿಎಸ್ಎಸ್) ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ (ಐಎಸ್ಎಸ್) ತನ್ನ ಯೋಜನೆಗಳಲ್ಲಿ 24 ಮೋಟರ್‌ಗಳ ಡಾಕಿಂಗ್ ವ್ಯವಸ್ಥೆಯನ್ನು ಬಳಸಿಕೊಂಡಿದೆ.
ಈ ವ್ಯತ್ಯಾಸ, ಭಾರತ ಹೇಗೆ ಹೆಚ್ಚು ದಕ್ಷವಾದ ಮತ್ತು ಕಡಿಮೆ ವೆಚ್ಚದಾಯಕವಾದ ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸಲು ಗಮನ ಹರಿಸಿದೆ ಎನ್ನುವುದನ್ನು ಸಾಬೀತುಪಡಿಸಿದೆ. ಕಡಿಮೆ ಮೋಟರ್‌ಗಳನ್ನು ಬಳಸುವ ಮೂಲಕ, ಇಸ್ರೋ ಕಡಿಮೆ ಸಂಕೀರ್ಣವಾದ, ಆದರೆ ಯಶಸ್ವಿ ಡಾಕಿಂಗ್ ನಡೆಸಲು ಬೇಕದ ಅತ್ಯಂತ ನಿಖರ ವ್ಯವಸ್ಥೆಯನ್ನು ರೂಪಿಸಿದೆ.
ಮೋಟರ್‌ಗಳ ಹೋಲಿಕೆ ಮತ್ತು ವ್ಯತ್ಯಾಸಗಳು ಹೇಗಿವೆ?
ಇಸ್ರೋದ ಆ್ಯಂಡ್ರೋಜಿನಸ್ ವ್ಯವಸ್ಥೆ: 2 ಮೋಟರ್‌ಗಳು
ಇಂಟರ್ನ್ಯಾಷನಲ್ ಡಾಕಿಂಗ್ ಸಿಸ್ಟಮ್ ಸ್ಟ್ಯಾಂಡರ್ಡ್: 24 ಮೋಟರ್‌ಗಳು
ಈ ಸಾಧನೆಯ ಮೂಲಕ, ಭಾರತ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ನಾವೀನ್ಯತೆ ಸಾಧಿಸುವ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದ್ದು, ಅದರೊಡನೆ ತನ್ನ ಯೋಜನೆಗಳ ನಿರ್ದಿಷ್ಟ ಅವಶ್ಯಕತೆಗಳಿಗೆ ತಕ್ಕಂತ ಪರಿಹಾರಗಳನ್ನು ಅಭಿವೃದ್ಧಿ ಪಡಿಸಿದೆ.
ಈ ಯಶಸ್ಸು ಭಾರತಕ್ಕೆ ಏಕೆ ಮಹತ್ವದ್ದು?
ಡಾಕಿಂಗ್ ಪ್ರಯೋಗದ ಯಶಸ್ಸು ಇಸ್ರೋದ ಹೆಚ್ಚುತ್ತಿರುವ ತಾಂತ್ರಿಕ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿದ್ದು, ಭಾರತದ ಮಹತ್ವಾಕಾಂಕ್ಷಿ ಬಾಹ್ಯಾಕಾಶ ಗುರಿಗಳತ್ತ ಸಾಗಲು ದೃಢವಾದ ಹೆಜ್ಜೆಯಾಗಿದೆ.
ಭವಿಷ್ಯದ ಬಾಹ್ಯಾಕಾಶ ನಿಲ್ದಾಣ: ಭಾರತ 2035ರ ವೇಳೆಗೆ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವಾದ ‘ಭಾರತೀಯ ಅಂತರಿಕ್ಷ ಸ್ಟೇಷನ್’ ಅನ್ನು ಸ್ಥಾಪಿಸುವ ಗುರಿ ಹೊಂದಿದೆ. ಇದಕ್ಕಾಗಿ ವಿವಿಧ ಮಾಡ್ಯುಲ್‌ಗಳನ್ನು ಬಾಹ್ಯಾಕಾಶದಲ್ಲಿ ಕಕ್ಷೆಯಲ್ಲಿ ಜೋಡಿಸಬೇಕಾಗುತ್ತದೆ. ಇದಕ್ಕೆ ಅತ್ಯಂತ ನಿಖರವಾಗಿ ಡಾಕಿಂಗ್ ನಡೆಸುವ ಸಾಮರ್ಥ್ಯ ಅತ್ಯಂತ ಮುಖ್ಯವಾಗಿದೆ.
ಚಂದ್ರಾನ್ವೇಷಣಾ ಯೋಜನೆಗಳು: ಭಾರತ 2040ರ ವೇಳೆಗೆ ಚಂದ್ರನ ಅಂಗಳಕ್ಕೆ ಮಾನವರನ್ನು ಕಳುಹಿಸುವ ಗುರಿ ಹೊಂದಿದೆ. ಚಂದ್ರನ ಕಕ್ಷೆಯಲ್ಲಿ ಬಾಹ್ಯಾಕಾಶ ನೌಕೆಯನ್ನು ಇಳಿಸಲು ಮತ್ತು ಅದನ್ನು ಹಿಂದಕ್ಕೆ ತರಲು ಡಾಕಿಂಗ್ ಸಾಮರ್ಥ್ಯ ಅತ್ಯಂತ ಅವಶ್ಯಕವಾಗಿದೆ.
ಡೀಪ್ ಸ್ಪೇಸ್ ಅನ್ವೇಷಣೆ: ಅಂತರಗ್ರಹ ಪ್ರಯಾಣ ಮತ್ತು ರೋಬಾಟಿಕ್ ಅನ್ವೇಷಣೆಯಂತಹ ಅತ್ಯಂತ ಸಂಕೀರ್ಣ ಯೋಜನೆಗಳನ್ನು ಕೈಗೊಳ್ಳಲು ಡಾಕಿಂಗ್ ತಂತ್ರಜ್ಞಾನದ ಬಳಕೆ ಅನಿವಾರ್ಯವಾಗಿದೆ.
ಸದ್ಯದ ಯಶಸ್ಸನ್ನೂ ಮೀರಿ ಭವಿಷ್ಯದ ಬಳಕೆ
ಸ್ಪೇಡೆಕ್ಸ್ ಯೋಜನೆ ಕೇವಲ ಡಾಕಿಂಗ್ ತಂತ್ರಜ್ಞಾನಕ್ಕೆ ಮಾತ್ರವೇ ಸೀಮಿತವಾದುದಲ್ಲ. ಬದಲಿಗೆ, ಇದು ಬಾಹ್ಯಾಕಾಶದ ಸೀಮೆಗಳನ್ನೇ ವಿಸ್ತರಿಸುವಂತಹ ಮಹತ್ವದ ಯೋಜನೆಯಾಗಿದೆ. ಇಸ್ರೋ ಡಾಕಿಂಗ್ ನಡೆಸಿರುವ ಉಪಗ್ರಹಗಳ ನಡುವೆ ವಿದ್ಯುತ್ ಶಕ್ತಿ ಹಂಚಿಕೆ ಮತ್ತು ನಿಯಂತ್ರಿತ ಪ್ರತ್ಯೇಕಿಸುವಿಕೆಯಂತಹ ಹಲವು ಪ್ರಯೋಗಗಳನ್ನು ನಡೆಸುವ ಗುರಿ ಹೊಂದಿದೆ. ಇದು ಸ್ವಾಯತ್ತ ಡಾಕಿಂಗ್ ವ್ಯವಸ್ಥೆಗಳನ್ನು ಇನ್ನಷ್ಟು ಪರಿಷ್ಕರಿಸಲು ಅವಶ್ಯಕವಾದ ಮಾಹಿತಿಗಳನ್ನು ಒದಗಿಸಲಿದೆ.
ಭಾರತಕ್ಕೆ ಹೆಮ್ಮೆಯ ಕ್ಷಣ
ಸ್ಪೇಡೆಕ್ಸ್ ಉಪಗ್ರಹಗಳ ಯಶಸ್ವಿ ಡಾಕಿಂಗ್ ಭಾರತಕ್ಕೆ ರಾಷ್ಟ್ರೀಯ ಹೆಮ್ಮೆಯ ಕ್ಷಣವಾಗಿದೆ. ಇದು ಬಾಹ್ಯಾಕಾಶ ಅನ್ವೇಷಣೆಯಲ್ಲಿ ಆಧುನಿಕತೆ ಸಾಧಿಸುವಲ್ಲಿ ಭಾರತದ ಬದ್ಧತೆಯನ್ನು ಮತ್ತೊಮ್ಮೆ ಸಾರಿದ್ದು, ಬಾಹ್ಯಾಕಾಶ ಅನ್ವೇಷಣೆಯಲ್ಲಿ ಮುಂಚೂಣಿ ರಾಷ್ಟ್ರವೆಂಬ ಭಾರತದ ಸ್ಥಾನವನ್ನು ಇನ್ನಷ್ಟು ಬಲಪಡಿಸಿದೆ. ಈ ಸಾಧನೆ ನಕ್ಷತ್ರಗಳನ್ನು ತಲುಪಲು ಭಾರತದ ಮುಂದಿನ ತಲೆಮಾರಿನ ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳಿಗೆ ಸ್ಫೂರ್ತಿ ತುಂಬಿ, ಭಾರತದ ಬಾಹ್ಯಾಕಾಶ ಯಾತ್ರೆಗೆ ಅವರು ಹೆಚ್ಚಿನ ಕೊಡುಗೆ ನೀಡುವಂತೆ ಪ್ರೇರೇಪಿಸಲಿದೆ.
(ಈ ಲೇಖನದ ಬರಹಗಾರರು ಪ್ರಶಸ್ತಿ ಪುರಸ್ಕೃತ ವಿಜ್ಞಾನ ಬರಹಗಾರರು, ಮತ್ತು ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.)
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Army Day 2025: ಜನವರಿ 15ರಂದು ಯಾಕೆ ಸೇನಾ ದಿನ?: ಭಾರತೀಯ ಸೇನೆಯ 77 ವರ್ಷಗಳ ಹಾದಿ
ನಭದಲ್ಲಿ ಕಣ್ಣು-ನೆಲದಲ್ಲಿ ಕಾಲು: ಮೌನ ಕ್ರಾಂತಿ: ಭೂ ಸಾಮರ್ಥ್ಯ ವೃದ್ಧಿಸಿದ ಬಾಹ್ಯಾಕಾಶ ಶಕ್ತಿ
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
Explainer: Karnatakaದಿಂದ ಕಕ್ಷೆಗೆ-ಬಾಹ್ಯಾಕಾಶದಲ್ಲಿ ಡಾಕಿಂಗ್ ಕಸರತ್ತು…ISRO ಸಾಹಸ
Vijay Diwas:ಕೋಲ್ಕತ್ತಾಗೆ ಮರಳಲಿದೆ ಬಾಂಗ್ಲಾ ಸ್ವಾತಂತ್ರ್ಯ ಹಬ್ಬ-ಇಂದಿನ ಸ್ಥಿತಿಗತಿ ಹೇಗಿದೆ
MUST WATCH
ಹೊಸ ಸೇರ್ಪಡೆ
ಮಾದರಿ ಸಂಘವಾಗಿ ಗುರುತಿಸಿಕೊಂಡ ಉಡುಪಿ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ
Udupi: ಸಂಘದ ಉತ್ತಮ ಸಾಧನೆಗಾಗಿ ಉಡುಪಿ ಜಿಲ್ಲಾ ಪತ್ರಕರ್ತರ ಸಂಘಕ್ಕೆ ರಾಜ್ಯ ಪ್ರಶಸ್ತಿ ಗರಿ
Udupi: ಎರಡೇ ದಿನದಲ್ಲಿ ಬರಲಿದೆ, ವಾರಾಹಿ ನೀರು!
Udupi: ಫೆ.7ರಿಂದ 9ರವರೆಗೆ ಮಹಿಳಾ ಉದ್ಯಮಿಗಳ ಆರ್ಥಿಕ ಬಲವರ್ಧನೆಗಾಗಿ “ಪವರ್ ಪರ್ಬ 25′
Swadesh Darshan scheme: ಕೇಂದ್ರದ ಸ್ವದೇಶ್ ದರ್ಶನ್ ಯೋಜನೆಗೆ ಬೀದರ್, ಉಡುಪಿ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.