Proba 3 Mission: ಕೃತಕ ಸೂರ್ಯ ಗ್ರಹಣಕ್ಕೆ ಸಿದ್ಧತೆ! ಏನಿದು ಪ್ರೋಬಾ 3 ಯೋಜನೆ?

ಡಿಸೆಂಬರ್ 4ಕ್ಕೆ ಪ್ರೋಬಾ3 ಉಡಾವಣೆಗೆ ಕ್ಷಣಗಣನೆ: ಸೂರ್ಯನ ಕೊರೋನಾ  ಅಧ್ಯಯನ

Team Udayavani, Dec 3, 2024, 11:24 AM IST

Proba 3 Mission: ಕೃತಕ ಸೂರ್ಯ ಗ್ರಹಣಕ್ಕೆ ಮುಹೂರ್ತ! ಏನಿದು ಪ್ರೋಬಾ 3 ಯೋಜನೆ

ಜಗತ್ತು ಮುಂದಿನ ಸೂರ್ಯ ಗ್ರಹಣ ಯಾವಾಗ ಎಂದು ಕುತೂಹಲದಿಂದ ಎದುರು ನೋಡುತ್ತಿದ್ದರೆ, ವಿಜ್ಞಾನಿಗಳು ಒಂದು ವಿಭಿನ್ನವಾದ, ಅಂದರೆ ‘ಕೃತಕವಾದ’ ಸೂರ್ಯ ಗ್ರಹಣವನ್ನು ಉಂಟುಮಾಡಲು ಸಿದ್ಧತೆ ನಡೆಸುತ್ತಿದ್ದಾರೆ! ಕೃತಕ ಸೂರ್ಯ ಗ್ರಹಣವೇ? ಅದು ಹೇಗೆ ಸಾಧ್ಯ? ಮತ್ತು ಅದು ಯಾಕೆ ಎಲ್ಲರ ಗಮನ ಸೆಳೆಯುತ್ತಿದೆ? ಇದಕ್ಕೆಲ್ಲ ಉತ್ತರ ಇಲ್ಲಿದೆ.

ಯುರೋಪಿಯನ್ ಸ್ಪೇಸ್ ಏಜೆನ್ಸಿ (ಇಎಸ್ಎ) ಕಳೆದ 14 ವರ್ಷಗಳಿಂದ ಪ್ರೋಬಾ 3 (ಪ್ರಾಜೆಕ್ಟ್ ಫಾರ್ ಆನ್‌ಬೋರ್ಡ್ ಅಟಾನಮಿ ಎಂಬುದರ ಹೃಸ್ವರೂಪ) ಎಂಬ ಯೋಜನೆಗಾಗಿ ಸಿದ್ಧತೆ ನಡೆಸುತ್ತಾ ಬಂದಿತ್ತು. ಈ ಸುದೀರ್ಘ ಯೋಜನೆಯನ್ನು ಅತ್ಯಂತ ಜಾಗರೂಕವಾಗಿ ಯೋಜಿಸಿ, ಅಭಿವೃದ್ಧಿ ಪಡಿಸಲಾಗಿದ್ದು, ಇದು ವರ್ಷಗಳ ಶ್ರದ್ಧೆ ಮತ್ತು ಆಧುನಿಕ ವೈಜ್ಞಾನಿಕ ಪ್ರಯತ್ನಗಳ ಫಲವಾಗಿದೆ.

ಪ್ರೋಬಾ 3 ಯೋಜನೆ ಡಿಸೆಂಬರ್ 4, 2024ರಂದು ಭಾರತೀಯ ಕಾಲಮಾನದಲ್ಲಿ ಸಂಜೆ 4:08ಕ್ಕೆ ಉಡಾವಣೆಗೊಳ್ಳಲಿದೆ. ಪ್ರೋಬಾ 3ನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (ಎಸ್‌ಡಿಎಸ್‌ಸಿ) ಇಸ್ರೋದ ಪಿಎಸ್ಎಲ್‌ವಿ   ಎಕ್ಸ್ಎಲ್ ರಾಕೆಟ್ ಬಳಸಿ ಉಡಾವಣೆಗೊಳಿಸಲಾಗುತ್ತದೆ. ಈ ರಾಕೆಟ್‌ಗೆ ಅಧಿಕ ಥ್ರಸ್ಟ್ ಒದಗಿಸುವ ಸಲುವಾಗಿ ಹೆಚ್ಚುವರಿ ಬೂಸ್ಟರ್‌ಗಳನ್ನು ಅಳವಡಿಸಲಾಗುತ್ತದೆ. ಪ್ರೋಬಾ 3 ಯೋಜನೆ ಸೂರ್ಯನ ವಾತಾವರಣದ ಅತ್ಯಂತ ಹೊರಗಿನ, ಮಬ್ಬಾದ ಪದರವಾದ ಕೊರೋನಾವನ್ನು ಪರಿಣಾಮಕಾರಿಯಾಗಿ ಅಧ್ಯಯನ ನಡೆಸುವ ಗುರಿ ಹೊಂದಿದೆ.

ಪ್ರೋಬಾ 3 ಯೋಜನೆ ಏನು?

ಪ್ರೋಬಾ 3 ಯೋಜನೆ ಎರಡು ಪ್ರತ್ಯೇಕ, ಮೂರು ಅಕ್ಷಗಳಲ್ಲಿ ಸ್ಥಿರವಾಗಿರುವ ಬಾಹ್ಯಾಕಾಶ ನೌಕೆಗಳನ್ನು ಹೊಂದಿದೆ. ಅವೆಂದರೆ, 340 ಕೆಜಿ ತೂಕದ ಕೊರೋನಾಗ್ರಾಫ್ ಬಾಹ್ಯಾಕಾಶ ನೌಕೆ (ಸಿಎಸ್‌ಸಿ) ಮತ್ತು 200 ಕೆಜಿ ತೂಕದ ಒಕಲ್ಟರ್ ಬಾಹ್ಯಾಕಾಶ ನೌಕೆ (ಒಎಸ್‌ಸಿ). ಇವೆರಡೂ ಬಾಹ್ಯಾಕಾಶ ನೌಕೆಗಳು ಭೂಮಿಯ ಸುತ್ತಲಿನ ಅತ್ಯಂತ ದೀರ್ಘವೃತ್ತಾಕಾರದ ಕಕ್ಷೆಯಲ್ಲಿ ಒಂದಕ್ಕೊಂದು ಬಹಳಷ್ಟು ಸನಿಹದಲ್ಲಿ ಚಲಿಸಲಿವೆ. ಈ ಕಕ್ಷೆಯ ಭೂಮಿಗೆ ಅತ್ಯಂತ ಸನಿಹದ ಬಿಂದುವಾದ ಪೆರಿಜೀಯಲ್ಲಿ ಈ ಬಾಹ್ಯಾಕಾಶ ನೌಕೆಗಳು ಭೂಮಿಯಿಂದ 600 ಕಿಲೋಮೀಟರ್ ದೂರದಲ್ಲಿದ್ದರೆ, ಭೂಮಿಯಿಂದ ಅತ್ಯಂತ ದೂರದ ಬಿಂದುವಾದ ಅಪೊಜೀಯಲ್ಲಿ ಅವುಗಳು 60,530 ಕಿಲೋಮೀಟರ್ ದೂರದಲ್ಲಿರುತ್ತವೆ. ಈ ಕಕ್ಷೆ 59 ಡಿಗ್ರಿ ವಾಲುವಿಕೆ ಹೊಂದಿದೆ. ಅಂದರೆ, ಅದು ಭೂಮಿಯ ಸಮಭಾಜಕ ವೃತ್ತದ ಕಡೆಗೆ 59 ಡಿಗ್ರಿ ಕೋನದಲ್ಲಿ ವಾಲಿರುತ್ತದೆ.

ಇಂತಹ ಕಕ್ಷೆಯಲ್ಲಿ ಚಲಿಸುವಾಗ, ಬಾಹ್ಯಾಕಾಶ ನೌಕೆ ಭೂಮಿಯ ಸುತ್ತಲೂ ಒಂದು ಪೂರ್ಣ ಪರಿಭ್ರಮಣೆ ನಡೆಸಲು 19.7 ಗಂಟೆ ತಗಲುತ್ತದೆ.

ಪ್ರೋಬಾ 3 ಹೇಗೆ ಕಾರ್ಯಾಚರಿಸುತ್ತದೆ?

ಪ್ರೋಬಾ 3 ಒಂದು ವಿಶೇಷ ಯೋಜನೆಯಾಗಿದ್ದು, ಇದು ಒಂದು ಪರಿಪೂರ್ಣ ವಿನ್ಯಾಸದಲ್ಲಿ ಹಾರಾಟ ನಡೆಸುವ, ಕಕ್ಷೆಯಲ್ಲಿ ಪರಸ್ಪರ ಕೇವಲ 150 ಮೀಟರ್ ಅಂತರದಲ್ಲಿ ಸಂಚರಿಸುವ ಎರಡು ಬಾಹ್ಯಾಕಾಶ ನೌಕೆಗಳನ್ನು ಒಳಗೊಂಡಿದೆ.

‘ಒಕಲ್ಟರ್’ ಅನ್ನು ಸೂರ್ಯನ ಪ್ರಖರ ಬೆಳಕನ್ನು ತಡೆಯುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ. ಇದು 1.4 ಮೀಟರ್ ಅಗಲವಿರುವ, ಸೂರ್ಯನ ಬೆಳಕಿಗೆ ಲಂಬವಾಗಿರುವ ಬಿಲ್ಲೆಯನ್ನು ಬಳಸಿ, ಒಂದು ಕೃತಕ ಸೂರ್ಯ ಗ್ರಹಣವನ್ನು ಉಂಟುಮಾಡುತ್ತದೆ.

ಈ ಬಿಲ್ಲೆ 150 ಮೀಟರ್ ದೂರದಲ್ಲಿ, ಬಹುತೇಕ 8 ಸೆಂಟಿಮೀಟರ್ ಅಗಲವಿರುವ ನೆರಳನ್ನು ಸೃಷ್ಟಿಸುತ್ತದೆ.

ಇನ್ನು ಕೊರೋನಾಗ್ರಾಫ್ ಎಂದು ಕರೆಯಲಾಗುವ ಎರಡನೇ ಬಾಹ್ಯಾಕಾಶ ನೌಕೆ ಸೂರ್ಯನ ಕೊರೋನಾವನ್ನು ಅತ್ಯಂತ ವಿಸ್ತೃತವಾಗಿ ಅಧ್ಯಯನ ನಡೆಸುವ ಸಲುವಾಗಿ ನಿರ್ಮಿತವಾಗಿದೆ. ಕೊರೋನಾ ಎನ್ನುವುದು ಸೂರ್ಯನ ಅತ್ಯಂತ ಹೊರಗಿನ ಪದರವಾಗಿದ್ದು, ಸಾಮಾನ್ಯವಾಗಿ ಸೂರ್ಯ ಗ್ರಹಣದ ಸಂದರ್ಭದಲ್ಲಿ ಮಾತ್ರವೇ ಗೋಚರಿಸುತ್ತದೆ. ಕೊರೋನಾಗ್ರಾಫ್ ಬಾಹ್ಯಾಕಾಶ ನೌಕೆ (ಸಿಎಸ್‌ಸಿ) 5 ಸೆಂಟಿಮೀಟರ್‌ಗಳ ದ್ಯುತಿ ರಂಧ್ರ (ಅಪರ್ಚರ್) ಹೊಂದಿರುವ ಒಂದು ವೈಜ್ಞಾನಿಕ ದೂರದರ್ಶಕವನ್ನು (ಟೆಲಿಸ್ಕೋಪ್) ಹೊಂದಿರುತ್ತದೆ.

ನೈಸರ್ಗಿಕ ಸೂರ್ಯ ಗ್ರಹಣದ ಸಂದರ್ಭದಲ್ಲಿ, ವಿಜ್ಞಾನಿಗಳಿಗೆ ಸೂರ್ಯನ ಕೊರೋನಾವನ್ನು ಬಹುತೇಕ 10 ನಿಮಿಷಗಳ ಕಾಲ ಅಧ್ಯಯನ ನಡೆಸಲು ಅವಕಾಶ ಲಭಿಸುತ್ತದೆ. ಸಾಮಾನ್ಯವಾಗಿ ವರ್ಷದಲ್ಲಿ ಒಂದೋ ಎರಡೋ ನೈಸರ್ಗಿಕ ಸೂರ್ಯ ಗ್ರಹಣಗಳು ಸಂಭವಿಸುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ, ಪ್ರೋಬಾ 3 ವಿಜ್ಞಾನಿಗಳಿಗೆ ಆರು ಗಂಟೆಗಳಷ್ಟು ವೀಕ್ಷಣಾ ಸಮಯವನ್ನು ಕಲ್ಪಿಸುತ್ತದೆ. ಇದು ಐವತ್ತು ನೈಸರ್ಗಿಕ ಸೂರ್ಯ ಗ್ರಹಣಗಳ ವೀಕ್ಷಣೆಯ ಅವಧಿಗೆ ಸಮನಾಗಿರುತ್ತದೆ. ಇಷ್ಟೊಂದು ಸುದೀರ್ಘ ಅವಧಿಯ ವೀಕ್ಷಣೆಯ ಕಾರಣದಿಂದ, ವಿಜ್ಞಾನಿಗಳಿಗೆ ಹಿಂದೆಂದಿಗಿಂತಲೂ ಉತ್ತಮವಾಗಿ ಸೂರ್ಯನ ಕೊರೋನಾವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಸೂರ್ಯನ ಕೊರೋನಾವನ್ನು ಏಕೆ ಅಧ್ಯಯನ ಮಾಡಬೇಕು?

ಸೂರ್ಯನ ಮೇಲ್ಮೈ ತಾಪಮಾನಕ್ಕೆ ಹೋಲಿಸಿದರೆ, ಆಶ್ಚರ್ಯಕರವಾಗಿ ಸೂರ್ಯನ ಕೊರೋನಾದ ತಾಪಮಾನ ಒಂದು ಮಿಲಿಯನ್ ಡಿಗ್ರಿ ಸೆಲ್ಸಿಯಸ್‌ಗೂ ಹೆಚ್ಚು ಬಿಸಿಯಾಗಿರುತ್ತದೆ. ಇದು ಸೂರ್ಯನ ತಿರುಳಿನಿಂದ ಅಪಾರ ದೂರದಲ್ಲಿದ್ದರೂ, ಇದು ಸೂರ್ಯನ ಮೇಲ್ಮೈಗಿಂತ ಹೆಚ್ಚಿನ ತಾಪವನ್ನು ಹೊಂದಿದೆ. ಇಂತಹ ವಿಚಿತ್ರ ತಾಪಮಾನ ವ್ಯತ್ಯಾಸ ವಿಜ್ಞಾನಿಗಳಲ್ಲಿ ಹಲವಾರು ವರ್ಷಗಳ ಕಾಲ ಆಶ್ಚರ್ಯ ಮೂಡಿಸಿದ್ದು, ಅವರು ಇನ್ನೂ ಕೊರೋನಾದ ಉಷ್ಣತೆ ಯಾಕೆ ಹೆಚ್ಚು ಎಂದು ಅಧ್ಯಯನ ನಡೆಸುತ್ತಿದ್ದಾರೆ.

ವಿಜ್ಞಾನಿಗಳು ಸೂರ್ಯನ ಕೊರೋನಾವನ್ನು ಅರ್ಥ ಮಾಡಿಕೊಳ್ಳಲು ಬಹಳಷ್ಟು ಪರಿಶ್ರಮ ಪಡುತ್ತಿದ್ದಾರೆ. ಇದು ಕೇವಲ ಸೂರ್ಯನ ಕುರಿತು ತಿಳಿದುಕೊಳ್ಳಲು ಮಾತ್ರ ಸೀಮಿತವಾಗಿಲ್ಲ. ಬಾಹ್ಯಾಕಾಶಕ್ಕೆ ಅಪಾರ ಪ್ರಮಾಣದ ಶಕ್ತಿಯ ಸ್ಫೋಟವನ್ಜು ಕಳುಹಿಸುವ ಸೌರ ಮಾರುತ, ಸೌರ ಸ್ಫೋಟಗಳು, ಕೊರೋನಲ್ ಮಾಸ್ ಇಜೆಕ್ಷನ್‌ಗಳಂತಹ ಸೌರ ಪ್ರಕ್ರಿಯೆಗಳನ್ನು ಅರ್ಥೈಸಿಕೊಳ್ಳಲು ಇದು ನೆರವಾಗುತ್ತದೆ. ಈ ರೀತಿ ಬಿಡುಗಡೆಯಾದ ಶಕ್ತಿ ಭೂಮಿಯನ್ನು ತಲುಪಿದಾಗ, ಅದು ಉಪಗ್ರಹಗಳು, ಸಂವಹನ ವ್ಯವಸ್ಥೆಗಳನ್ನು ಹಾಳುಗೆಡವಿ, ವಿದ್ಯುತ್ ವ್ಯತ್ಯಯವೂ ಉಂಟಾಗುವಂತೆ ಮಾಡಬಲ್ಲದು. ಆದರೆ ಸೂರ್ಯನ ಕೊರೋನಾವನ್ನು ಅಧ್ಯಯನ ಮಾಡುವುದರಿಂದ, ಇಂತಹ ಪ್ರಕ್ರಿಯೆಗಳಿಗೆ ಸಿದ್ಧವಾಗಿ, ಅವುಗಳ ಪರಿಣಾಮದಿಂದ ವ್ಯವಸ್ಥೆಗಳನ್ನು ಸುರಕ್ಷಿತವಾಗಿಡಲು ಸಾಧ್ಯವಾಗುತ್ತದೆ.

ಯೋಜನೆ ಪೂರ್ಣಗೊಂಡ ಬಳಿಕ ಇವೆರಡು ಉಪಗ್ರಹಗಳಿಗೆ ಏನಾಗುತ್ತದೆ?

ಪ್ರೋಬಾ 3 ಯೋಜನೆ ಎರಡು ವರ್ಷಗಳ ಕಾಲ ನಡೆಯುವ ನಿರೀಕ್ಷೆಗಳಿವೆ.

ಒಂದು ಬಾರಿ ಪ್ರೋಬಾ 3 ಯೋಜ‌ನೆ ಪೂರ್ಣಗೊಂಡ ಬಳಿಕ, ಸೂರ್ಯ ಮತ್ತು ಚಂದ್ರರ ಗುರುತ್ವಾಕರ್ಷಣಾ ಸೆಳೆತದ ಪರಿಣಾಮವಾಗಿ, ಈ ಉಪಗ್ರಹಗಳ ಕಕ್ಷೆ ಕಾಲಕ್ರಮೇಣ ಸಣ್ಣದಾಗುತ್ತಾ ಹೋಗುತ್ತದೆ. ಇದರಿಂದಾಗಿ, ಎರಡೂ ಉಪಗ್ರಹಗಳು ನೈಸರ್ಗಿಕವಾಗಿ ಉಡಾವಣೆಯ ಐದು ವರ್ಷಗಳ ಬಳಿಕ ಭೂಮಿಯ ವಾತಾವರಣವನ್ನು ಪ್ರವೇಶಿಸುತ್ತವೆ. ಇದಕ್ಕೆ ಬಾಹ್ಯಾಕಾಶದಲ್ಲಿ ತ್ಯಾಜ್ಯಗಳನ್ನು ಬಿಡಬಾರದು ಎನ್ನುವ ಇಎಸ್ಎಯ ಶೂನ್ಯ ತ್ಯಾಜ್ಯ ನೀತಿಯೂ ಕಾರಣವಾಗಿದೆ.

ಈ ಯೋಜನೆಗೆ ಇಎಸ್ಎಯ ಯಾವೆಲ್ಲ ಸದಸ್ಯ ರಾಷ್ಟ್ರಗಳು ಹಣ ಹೂಡಿವೆ? ಯೋಜನೆಯ ಒಟ್ಟು ಮೊತ್ತವೆಷ್ಟು?

ಪ್ರೋಬಾ 3 ಯೋಜನೆಗೆ ಇಎಸ್ಎಯ 13 ಸದಸ್ಯ ರಾಷ್ಟ್ರಗಳು ಹಣಕಾಸಿನ ಹೂಡಿಕೆ ಮಾಡಿವೆ.

ಸ್ಪೇನ್ ಅತಿಹೆಚ್ಚು ಹಣ ಹೂಡಿಕೆ ನಡೆಸಿದ್ದು, ಅದು ಒಟ್ಟು ಯೋಜನಾ ವೆಚ್ಚದ 38% ಒದಗಿಸಿದೆ. ಬೆಲ್ಜಿಯಂ ಯೋಜನೆಯ 34% ಮೊತ್ತವನ್ನು ನೀಡಿದೆ. ಪೋಲೆಂಡ್ ಮತ್ತು ರೊಮಾನಿಯಗಳು ತಲಾ 4% ಹೂಡಿಕೆ ಮಾಡಿದ್ದರೆ, ಆಸ್ಟ್ರಿಯಾ, ಲಕ್ಸೆಂಬರ್ಗ್, ಸ್ವಿಜರ್ಲ್ಯಾಂಡ್ ಮತ್ತು ಯುಕೆಗಳು ತಲಾ 3% ಹಣ ಒದಗಿಸಿವೆ. ಇಎಸ್ಎಯ ಜನರಲ್ ಸಪೋರ್ಟ್ ಟೆಕ್ನಾಲಜಿ ಪ್ರೋಗ್ರಾಂ (ಜಿಎಸ್‌ಟಿಪಿ) ಅಡಿಯಲ್ಲಿ ಈ ಯೋಜನೆಯ ಒಟ್ಟು ಬಜೆಟ್ 200 ಮಿಲಿಯನ್ ಯೂರೋ ಆಗಿದೆ.

ಯೋಜನೆಯ 200 ಮಿಲಿಯನ್ ಯೂರೋವನ್ನು ವಿವಿಧ ಕಾರಣಗಳಿಗೆ ವೆಚ್ಚ ಮಾಡಲಾಗಿದೆ:

* ಉಡಾವಣೆ: 30 ಮಿಲಿಯನ್ ಯೂರೋ

* ಕಾರ್ಯಾಚರಣೆ ಮತ್ತು ಭೂ ಕೇಂದ್ರಗಳ ನಿರ್ವಹಣೆ: 15 ಮಿಲಿಯನ್ ಯೂರೋ

* ವೈಜ್ಞಾನಿಕ ಪೇಲೋಡ್‌ಗಳ ಅಭಿವೃದ್ಧಿ ಮತ್ತು ಕಾರ್ಯಾಚರಣೆ: 15 ಮಿಲಿಯನ್ ಯೂರೋ

* ಎರಡು ಬಾಹ್ಯಾಕಾಶ ನೌಕೆಗಳ ಅಭಿವೃದ್ಧಿ ಮತ್ತು ರಚನಾತ್ಮಕ ಹಾರಾಟ (ಫಾರ್ಮೇಶನ್ ಫ್ಲೈಯಿಂಗ್) ತಂತ್ರಜ್ಞಾನ: 140 ಮಿಲಿಯನ್ ಯೂರೋ

ಪ್ರೋಬಾ 3 ಯಾಕೆ ಭಾರತದಿಂದ ಉಡಾವಣೆಗೊಳ್ಳುತ್ತಿದೆ?

ಭಾರತದ ಪಿಎಸ್ಎಲ್‌ವಿ   ಎಕ್ಸ್ಎಲ್ ರಾಕೆಟ್ ಪ್ರೋಬಾ 3ರ ಉಪಗ್ರಹಗಳ ಒಟ್ಟು ಭಾರವನ್ನು (550 ಕೆಜಿ) ಯಶಸ್ವಿಯಾಗಿ ನಿರ್ವಹಿಸಿ, ಅವುಗಳನ್ನು ಉದ್ದೇಶಿತ ದೀರ್ಘವೃತ್ತಾಕಾರದ ಕಕ್ಷೆಯಲ್ಲಿ ಅಳವಡಿಸುವ ಸಾಮರ್ಥ್ಯ ಹೊಂದಿರುವುದರಿಂದ ಅದನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇಎಸ್ಎಯ ವೆಗಾ ಸಿ ರಾಕೆಟ್ ಈ ಯೋಜನೆಗೆ ಅವಶ್ಯಕವಾದ ಸಾಮರ್ಥ್ಯ ಹೊಂದಿಲ್ಲ. ಇನ್ನು ನಿರ್ದಿಷ್ಟ ಯೋಜನಾ ಬಜೆಟ್ ಹೊಂದಿರುವ ಈ ತಂತ್ರಜ್ಞಾನ ಪ್ರದರ್ಶಕ ಯೋಜನೆಯನ್ನು ಉಡಾವಣೆಗೊಳಿಸಲು ಶಕ್ತಿಶಾಲಿ ಅರಿಯಾನ್ 6 ರಾಕೆಟ್ ಬಳಸುವುದು ಬಹಳಷ್ಟು ವೆಚ್ಚದಾಯಕವಾಗಲಿದೆ.

ಇಲ್ಲಿಯ ತನಕ ಇಎಸ್ಎ ಮೂರು ಪ್ರೋಬಾ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ. ಅವೆಂದರೆ: 2001ರಲ್ಲಿ ಪ್ರೋಬಾ 1, 2009ರಲ್ಲಿ ಪ್ರೋಬಾ 2, ಹಾಗೂ 2012ರ ಪ್ರೋಬಾ V.

ಪ್ರೋಬಾ 1 ಯೋಜನೆಯನ್ನು ಅಕ್ಟೋಬರ್ 22, 2001ರಂದು ಶ್ರೀಹರಿಕೋಟಾದಿಂದ ಭಾರತದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ಎಲ್‌ವಿ) ನಲ್ಲಿ ಎರಡನೇ ಪೇಲೋಡ್ ಆಗಿ ಉಡಾವಣೆಗೊಳಿಸಲಾಗಿತ್ತು.

ಪ್ರೋಬಾ 3 ಯೋಜನೆಯಿಂದ ಭಾರತಕ್ಕೆ ಏನು ಪ್ರಯೋಜನಗಳು ಲಭಿಸಲಿವೆ?

ಪ್ರೋಬಾ 3 ಯೋಜನೆ ಇಎಸ್ಎಯ ತಂತ್ರಜ್ಞಾನ ಪ್ರದರ್ಶಕ ಯೋಜನೆಯಾಗಿದೆ. ಇದರ ಉಡಾವಣೆ ನಡೆಸುವ ಜವಾಬ್ದಾರಿಯನ್ನು ಇಸ್ರೋಗೆ ವಹಿಸಿರುವುದು ಉಡಾವಣಾ ಸೇವೆಗಳಲ್ಲಿ ಭಾರತ ಸಂಪಾದಿಸಿರುವ ನಂಬಿಕೆ ಮತ್ತು ಕ್ಷಿಪ್ರವಾಗಿ ಬೆಳೆಯುತ್ತಿರುವ ಭಾರತೀಯ ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಸಾಕ್ಷಿಯಾಗಿದೆ. ಈ ಯೋಜನೆ ಕಡಿಮೆ ವೆಚ್ಚದಾಯಕ ಉಡಾವಣಾ ಆಯ್ಕೆಗೆ ಉದಾಹರಣೆಯಾಗಿದ್ದು, ಜಾಗತಿಕ ಬಾಹ್ಯಾಕಾಶ ಯೋಜನೆಗಳಿಗೆ ಕಡಿಮೆ ಬೆಲೆಗೆ ನಂಬಿಕಾರ್ಹ ಉಡಾವಣೆಗಳನ್ನು ಒದಗಿಸಬಲ್ಲ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸಿದೆ.

ಭಾರತೀಯ ಸೌರ ಭೌತಶಾಸ್ತ್ರಜ್ಞರಿಗೆ ಪ್ರೋಬಾ 3 ಯೋಜನೆಯ ಮಾಹಿತಿಗಳು ನೇರವಾಗಿ ಲಭ್ಯವಾಗುವ ಸಾಧ್ಯತೆಗಳಿವೆ. ಈ ಯೋಜನೆಯ ನಿರ್ದಿಷ್ಟ ಗುರಿಗಳನ್ನು ವಿನ್ಯಾಸಗೊಳಿಸಲು ಬೆಲ್ಜಿಯನ್ ಸಂಶೋಧಕರೊಡನೆ ಭಾರತೀಯ ವಿಜ್ಞಾನಿಗಳೂ ಜೊತೆಯಾಗಿ ಕಾರ್ಯ ನಿರ್ವಹಿಸಿದ್ದರು.

ಪ್ರೋಬಾ 3 ಉಡಾವಣೆ ನೆರವೇರಿದ ಕೆಲ ಸಮಯದಲ್ಲಿ, ಭಾರತ ಇಎಸ್ಎಯ ಪ್ರೋಬಾ 3 ತಂಡದೊಡನೆ ಒಂದು ಸಭೆ ನಡೆಸುವ ಯೋಜನೆ ಹೊಂದಿದೆ. ಪ್ರೋಬಾ 3 ಮತ್ತು 2023ರಲ್ಲಿ ಉಡಾವಣೆಗೊಂಡ ಭಾರತದ ಮೊದಲ ಸೌರ ಅನ್ವೇಷಣಾ ಯೋಜನೆಯಾದ ಆದಿತ್ಯ ಎಲ್1 ಯೋಜನೆಗಳಿಂದ ಲಭಿಸುವ ಮಾಹಿತಿಗಳನ್ನು ಜಂಟಿ ಸಂಶೋಧನೆಗಳಿಗೆ ಬಳಸುವ ಕುರಿತು ಈ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಈ ಸಹಯೋಗ, ಭಾರತೀಯ ವಿಜ್ಞಾನಿಗಳಿಗೆ ಸೂರ್ಯನ ಕುರಿತ ನೂತನ ಅನ್ವೇಷಣೆಗಳಿಗೆ ಕೊಡುಗೆ ನೀಡುವ ಅವಕಾಶ ಕಲ್ಪಿಸಲಿದೆ.

*ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಟಾಪ್ ನ್ಯೂಸ್

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು

Delhi; Roads should be like Priyanka Gandhi’s cheeks: BJP leader’s statement criticized

Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karnatakaದಿಂದ ಕಕ್ಷೆಗೆ: ISRO ಸ್ಪೇಡೆಕ್ಸ್ ಜೊತೆ ನಭಕ್ಕೆ ಚಿಮ್ಮಲಿವೆ ಆದಿಚುಂಚನಗಿರಿ SJC

Explainer: Karnatakaದಿಂದ ಕಕ್ಷೆಗೆ-ಬಾಹ್ಯಾಕಾಶದಲ್ಲಿ ಡಾಕಿಂಗ್‌ ಕಸರತ್ತು…ISRO ಸಾಹಸ

Vijay Diwas:ಕೋಲ್ಕತ್ತಾಗೆ ಮರಳಲಿದೆ ಬಾಂಗ್ಲಾ ಸ್ವಾತಂತ್ರ್ಯ ಹಬ್ಬ-ಇಂದಿನ ಸ್ಥಿತಿಗತಿ ಹೇಗಿದೆ

Vijay Diwas:ಕೋಲ್ಕತ್ತಾಗೆ ಮರಳಲಿದೆ ಬಾಂಗ್ಲಾ ಸ್ವಾತಂತ್ರ್ಯ ಹಬ್ಬ-ಇಂದಿನ ಸ್ಥಿತಿಗತಿ ಹೇಗಿದೆ

Cool Moon: ಇದು ಚಂದ್ರನ ಕೂಲ್‌ ಅವತಾರ: ಚಂದಮಾಮ ಬಾರೋ ಚಕ್ಕುಲಿ ಮಾಮ ಬಾರೋ

Cool Moon: ಇದು ಚಂದ್ರನ ಕೂಲ್‌ ಅವತಾರ: ಚಂದಮಾಮ ಬಾರೋ ಚಕ್ಕುಲಿ ಮಾಮ ಬಾರೋ

ನೂರು ವರ್ಷ ಬದುಕುತ್ತೇನೆ ಎಂಬುದು ಗಮ್ಯವೇ?…ಎಲ್ಲದರ ಗಮ್ಯ ಒಂದೇ…ಆದರೂ ಒಂದೇ ಅಲ್ಲ !

ನೂರು ವರ್ಷ ಬದುಕುತ್ತೇನೆ ಎಂಬುದು ಗಮ್ಯವೇ?…ಎಲ್ಲದರ ಗಮ್ಯ ಒಂದೇ…ಆದರೂ ಒಂದೇ ಅಲ್ಲ !

BSF Raising Day 2024:ಭಾರತೀಯ ಗಡಿ ರಕ್ಷಕರ ಸ್ಮರಣೆ- ಭಾರತದ ಶಕ್ತಿಯ ಪ್ರತೀಕ ಬಿಎಸ್ಎಫ್

BSF Raising Day 2024:ಭಾರತೀಯ ಗಡಿ ರಕ್ಷಕರ ಸ್ಮರಣೆ- ಭಾರತದ ಶಕ್ತಿಯ ಪ್ರತೀಕ ಬಿಎಸ್ಎಫ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

5

Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.