Desi Swara: ಜೋ..ಜೋ..ಜೋಗುಳದ ನವರೂಪ: ನಿದ್ರಾಹೀನತೆಯೆಂಬ ಹಳೇ ಸಮಸ್ಯೆ ಮತ್ತು ಹೊಸ ಪರಿಹಾರ
ಈ ಹೊಸತಿನ ಭರಾಟೆಯಲ್ಲಿ ಹಳೆಯ ಕಾಲದ ಜೋಗುಳಗಳನ್ನು ಮರೆತಿಲ್ಲ
Team Udayavani, Apr 6, 2024, 10:26 AM IST
ನಾವೆಲ್ಲರೂ ನಿದ್ದೆ ಮಾಡುತ್ತೇವೆ. ಇದು ಅತ್ಯಂತ ಸಹಜ ಕ್ರಿಯೆ. ಆದರೆ ಕೆಲವರಲ್ಲಿ, ದೇಹ ನಿದ್ದೆ ಬಯಸಿದರೂ ಮಿದುಳು ಜಾಗೃತವಾಗಿರಲು ಬಯಸಿ ಅವರನ್ನು ನಿದ್ರಾಹೀನತೆಗೆ ದೂಡುತ್ತದೆ. ಈ ಕಾರಣ ಅವರ ಮರುದಿನದ ಬೆಳಗು ನಲುಗುತ್ತದೆ. ಬದುಕಿನ ಇನ್ಯಾವುದೇ ಕೆಲಸಗಳಲ್ಲಿ ಆಸಕ್ತಿ ಕುಂದಿ, ನಿಶ್ಯಕ್ತಿ ಕಾಡಬಹುದು. ಏಕಾಗ್ರತೆ ಕುಂದಬಹುದು. ಆರೋಗ್ಯ ಏರು-ಪೇರಾಗಬಹುದು. ಇಂತಹವರಿಗೆ ನಿದ್ರೆಗೆ ಜಾರಲು ಒಂದಿಷ್ಟು ಸಹಾಯ ಬೇಕಾಗುತ್ತದೆ.
ಬಹಳ ಕಾಲದಿಂದ ಮನುಷ್ಯನನ್ನು ಕಾಡುತ್ತಿರುವ ಈ ನಿದ್ರಾಹೀನತೆ ಎನ್ನುವ ವ್ಯಾಧಿಗೆ ನಿದ್ರೆಯ ಮಾತ್ರೆಗಳು ಮಾತ್ರ ಪರಿಹಾರವಲ್ಲ. ಏಕೆಂದರೆ ಅವುಗಳ ಅಡ್ಡ ಪರಿಣಾಮಗಳು, ದುಷ್ಪರಿಣಾಮಗಳು ಬಹಳಷ್ಟು. ಈ ಕಾರಣ ವೈದ್ಯರು ಮತ್ತು ಆಪ್ತರು ನಿದ್ರೆ ಚೆನ್ನಾಗಿ ಮಾಡಲು ಹೊಸ, ಹೊಸ ಉಪಾಯಗಳನ್ನು ಹೇಳಿಕೊಡುತ್ತಲೇ ಬಂದಿದ್ದಾರೆ. ಒಬ್ಬೊಬ್ಬರಿಗೆ ಒಂದೊಂದು ಯುಕ್ತಿ ಪರಿಹಾರವಾಗುತ್ತದೆ. ಮತ್ತೆ ಕೆಲವರಿಗೆ, ಇವುಗಳಿಂದ ಲಾಭವಾಗುವುದಿಲ್ಲ. ಜತೆಗೆ, ಒಂದು,ಎರಡು, ಮೂರು… ಎಂದು ಎಣಿಸುತ್ತ ಮಲಗಲು ಯತ್ನಿಸುವ ಉಪಾಯಗಳು ಈಗ ಹಳತಾಗಿವೆ. ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಅಧ್ಯಯನದ ಪ್ರಕಾರ ನಿದ್ರೆಗೆ ಬೀಳಲು “ಕುರಿಗಳನ್ನು ಎಣಿಸುವ ಕಸರತ್ತು’, ಏನೂ ಮಾಡದಿದ್ದರೆ ಆಗುವಷ್ಟೇ ಪ್ರಯೋಜನವನ್ನು ಹೊಂದಿದೆ.
ನಿದ್ರಾಹೀನತೆಗೆ ಹಲವು ಕಾರಣಗಳಿರಬಹುದು. ಆದರೆ ನಿದ್ರೆ ಮಾಡುವುದೊಂದೇ ಅದಕ್ಕಿರುವ ಪರಿಹಾರ. ವಯಸ್ಸಾದಂತೆ, ಚಿಂತೆಗಳು, ಜವಾಬ್ದಾರಿಗಳು ಹೆಗಲೇರತೊಡಗಿದಂತೆ ಅಥವಾ ಇನ್ಯಾವುದೋ ಆರೋಗ್ಯ ಸಮಸ್ಯೆಯಿಂದಾಗಿ ನಿದ್ರಾಹೀನತೆ ಕೆಲವರನ್ನು ಕಾಡಬಹುದು. ಇತರ ಹಲವು ಕಾರಣಗಳೂ ಇವೆ.
40-50 ವಯಸ್ಸಿನ ಮಹಿಳೆಯರಲ್ಲಿ ಮುಟ್ಟಿನ ಕ್ರಿಯೆ ನಿಲ್ಲುವ ಸಮಯದಲ್ಲೂ ನಿದ್ರಾಹೀನತೆ ಕಾಡಬಹುದು.ಹಿರಿಯ ವಯಸ್ಸಿನವರಲ್ಲೂ ಈ ಸಮಸ್ಯೆ ಇರುವುದನ್ನು ಕಾಣುತ್ತೇವೆ. ಹಗಲಿನ ಹೊತ್ತು ಮಲಗದಿರುವುದು, ಮಲಗುವ ಮುನ್ನ ಬಿಸಿನೀರಿನ ಸ್ನಾನ ಮಾಡುವುದು, ಪ್ರತಿನಿತ್ಯ ಅದೇ ಸಮಯಕ್ಕೆ ಮಲಗಲು ಯತ್ನಿಸುವುದು, ಮಲಗುವ ಮುನ್ನ ಟಿ.ವಿ., ಫೋನು, ಕಂಪ್ಯೂಟರುಗಳಿಂದ ದೂರವಿರುವುದು, ಮಲಗುವ ಕೋಣೆಯನ್ನು ಪ್ರಶಾಂತವಾಗಿರುವಂತೆ ಕಾದುಕೊಳ್ಳುವುದು ಮಲಗಲು ಸಹಕಾರಿ ಎಂಬುದು ನಿಜ, ಆದರೆ ಇವೆಲ್ಲವನ್ನೂ ಮಾಡಿ, ಬೋರಾಗುವ ವರೆಗೆ ಸಂಖ್ಯೆಗಳನ್ನೋ, ದೇವರನ್ನೋ ಜಪಿಸುವುದು ಕೂಡ ಕೆಲಸಕ್ಕೆ ಬಾರದೇಹೋದಲ್ಲಿ ಇದೀಗ ಹಲವು ಹೊಸ ವಿಧಾನಗಳು ಲಭ್ಯವಿವೆ.
ಮಲಗುವವರೆಗೆ ಫೋನ್‌ಗಳು ಅಥವಾ ಕಫ್ಯೂಂಟರ್‌ಗಳಿಂದ ದೂರವಿರಲು ಸಾಧ್ಯವಾಗದಿದ್ದಲ್ಲಿ ಅವುಗಳಿಂದಲೇ ಲಾಲಿ ಹಾಡಿನಂತೆ ಮನಸ್ಸನ್ನು ಪ್ರಶಾಂತವಾಗಿಸಬಲ್ಲ ಎ.ಎಸ್.ಎಂ.ಆರ್‌ಗಳು ( Autonomous sensory meridian response ) ನಿಮ್ಮಲ್ಲಿ ಒಂದು ಹೊಸ ಅನುಭವ ಮೂಡಿಸಿ ನಿದ್ದೆಗೆ ಕಳಿಸಬಲ್ಲವು.
ಏನಿದು ಎ.ಎಸ್.ಎಂ.ಆರ್ ?
ಈ ವಿಧಾನ ಹೊಸತೇನಲ್ಲ. ಕಳೆದ ಹತ್ತು ವರ್ಷಗಳಿಂದ ಈ ಚಿಕಿತ್ಸೆ ಜಾರಿಯಲ್ಲಿದೆ. ಮುಖ್ಯವಾಗಿ ಈ ವಿಧಾನದಲ್ಲಿ ಮನಸ್ಸಿಗೆ ಮುದನೀಡುವ ನವಿರಾದ ಶಬ್ದಗಳು, ಸ್ಪರ್ಷಗಳು, ನೋಟಗಳನ್ನು (ವೀಡೀಯೊ) ಬಳಸಲಾಗುತ್ತದೆ. ಸ್ಪರ್ಷ ಮತ್ತು ವೀಡೀಯೊ ನೋಡುವುದರ ಮೂಲಕ ಅನುಭವಕ್ಕೆ ತಂದುಕೊಡಬಲ್ಲಂತಹ ಕೆಲವು ವಿಶೇಷ ಸ್ಪಂದನೆಗಳ ವಿಧಾನಗಳನ್ನು ಇದರಲ್ಲಿ ಬಳಸಲಾಗುತ್ತದೆ.
ಉದಾಹರಣೆಗೆ, ಕೆಲವು ವೀಡೀಯೋಗಳಲ್ಲಿ ಕೂದಲನ್ನು ಬಾಚುತ್ತಿರುವ, ಪುಸ್ತಕದ ಪುಟಗಳು ತಿರುವುವಾಗಿನ, ಅಡುಗೆಮನೆಯ ಸರಳ, ಹಿತವಾದ ಶಬ್ದಗಳನ್ನು ನಿಜವಾದ ಬದುಕಿನಲ್ಲಿ ನಾವು ಕೇಳುತ್ತಿರುವಂತೆ ಬಳಸಲಾಗುತ್ತಿದೆ. ನೀವು ನಿಗದಿಪಡಿಸಿಕೊಂಡ ನಿದ್ದೆಯ ಸಮಯ ಹತ್ತಿರ ಬರುವಾಗ ಫೋನಿನಲ್ಲಿ ಅಥವಾ ಕಿವಿಗೆ ಹಾಕಿಕೊಳ್ಳುವ ಇಯರ್ ಫೋನ್‌ಗಳಲ್ಲಿ ಈ ಶಬ್ದಗಳನ್ನು ಕೇಳಲು ಶುರುಮಾಡಬಹುದು. ಇದನ್ನು ಕೇಳಲು ಈ ಶಬ್ದಗಳಿಗಿಂತ ಜೋರಾದ ಯಾವುದೇ ಶಬ್ದಗಳಿರದ ವಾತಾವರಣ ಅಗತ್ಯವಿದೆ ಎಂದು ಬೇರೆ ಹೇಳಬೇಕಿಲ್ಲ. ಯಾವ ಶಬ್ದ ಅಥವಾ ಸಂವೇದನೆಗಳು ಯಾರಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬುದು ಒಬ್ಬರಿಂದ ಒಬ್ಬರಿಗೆ ಭಿನ್ನ (ಇದು ಹೇಗೆ ಕೆಲಸ ಮಾಡಬಲ್ಲದು ಎಂಬುದನ್ನು ಯೂಟ್ಯೂಬ್‌ನಲ್ಲಿ ಕೂಡ ನೋಡಬಹುದು). ನಿದ್ರಾಹೀನತೆಗೆ ಸಮ್ಮೋಹನ ಚಿಕಿತ್ಸೆ (ಹಿಪ್ರೋಸಿಸ್) ಇದಕ್ಕಾಗಿ ನೀವು ವೈದ್ಯರ ಬಳಿ ಹೋಗಲು ಸಮಯವಿಲ್ಲದಲ್ಲಿ ವೈದ್ಯರೇ ಅಂತರ್ಜಾಲದ ಮೂಲಕ ವಿತರಿಸುವ ಹಿಪ್ನಾಟಿಕ್ ಅವಧಿಯನ್ನು ಖರೀದಿಸಬಹುದು.ಈ ಥೆರಪಿಯನ್ನು ಫೋನಿನ ಮೂಲಕ ಕೇಳುತ್ತ ಮಲಗಲು ಸಿದ್ಧರಾಗಬಹುದು.
ಇದಕ್ಕೊಂದು ಉದಾಹರಣೆಯನ್ನು ಹೀಗೆ ನೀಡಬಹುದು, ಈ ಚಿಕಿತ್ಸೆಯಲ್ಲಿ ಮಾತಿನ ಮೂಲಕ ರೋಗಿಗಳಿಗೆ ಅವರ ಚಿಂತೆಗಳನ್ನು ಸಣ್ಣ ಕಲ್ಲುಗಳನ್ನಾಗಿ ಊಹಿಸಲು ಹೇಳಿ, ಅನಂತರ ಅವನ್ನು ಒಂದೊಂದಾಗಿ ಎದುರಿಗಿನ ನೀರಲ್ಲಿ ಎಸೆಯುವಂತೆ ಸಲಹೆಗಳು ದೊರೆಯುತ್ತವೆ. ಒಂದೊಂದು ಕಲ್ಲುಗಳನ್ನು ಎಸೆದಾಗಲೂ ಅವರ ಮನಸ್ಸಿನ ಒತ್ತಡಗಳು ಕಡಿಮೆಯಾಗಿ, ಜಾಗೃತಾವಸ್ಥೆ ಕ್ರಮೇಣ ಮಸುಕಾಗುತ್ತ ಹೋಗುತ್ತದೆ. ನಡುವೆಯೆಲ್ಲೋ ಅವರು ನಿದ್ರೆಗೆ ಜಾರಿರುತ್ತಾರೆ.
ಸಮ್ಮೋಹನ ಚಿಕಿತ್ಸೆಯ ಸಹಾಯವಿಲ್ಲದೆ ಇಂತಹ ಒಂದು ಅದ್ಭುತ ಕಲ್ಪನೆಗೆ ಜಾರಲು ನಮ್ಮ ಜಾಗೃತ ಮನಸ್ಸು ನಿರಾಕರಿಸಬಹುದು. ಅಂತಹವರು ಈ ಚಿಕಿತ್ಸೆಯ ಲಾಭ ಪಡೆಯಬಹುದು. ಈ ರೀತಿಯ ಹಲವು ಸಮ್ಮೊàಹನ ಚಿಕಿತ್ಸೆಗಳು ಅಂತರ್ಜಾಲದಲ್ಲಿ ಇಂದು ಲಭ್ಯವಿವೆ.
ಸಾನಿಕ್ ಶಬ್ದಗಳು
ಎ. ಎಸ್.ಎಂ.ಆರ್. ಮತ್ತು ಹಿಪ್ರೋಸಿಸ್ ಕೆಲಸ ಮಾಡಲು ಸುತ್ತಲೂ ನಿಶ್ಯಬ್ದವಿರಬೇಕು. ಆದರೆ ಅಂತಹ ವ್ಯವಸ್ಥೆ ಇಲ್ಲದವರಿಗೆ ಸಾನಿಕ್ ಶಬ್ದಗಳ ಚಿಕಿತ್ಸೆ ನೀಡಬಹುದಾಗಿದೆ. ಶಬ್ದಗಳಿಂದಾಗುವ ನಿದ್ರಾಹೀನತೆಗೆ ಶಬ್ದಗಳನ್ನೇ ಇಲ್ಲಿ ಬಳಸಲಾಗುತ್ತದೆ ಎನ್ನುವುದು ಸೋಜಿಗದ ವಿಚಾರ. ಸುತ್ತ ಮುತ್ತಲಿನವರು ಸದಾ ಮಾತಾಡುತ್ತಿರುವ ಅಥವಾ ಗಲಾಟೆ ಮಾಡುತ್ತಿರುವ ವಾತಾವರಣದಲ್ಲಿ ನೀವು ನಿದ್ರೆ ಮಾಡಲು ತೊಂದರೆಯಾಗುತ್ತಿದ್ದಲ್ಲಿ ಈ ಚಿಕಿತ್ಸೆ ಕೆಲಸ ಮಾಡಬಲ್ಲದು.
ಧ್ವನಿ ತರಂಗಗಳ ಪಟಲದ ಶಬ್ದಗಳಲ್ಲಿ ಫ್ರೀಕ್ವೆನ್ಸಿಯ ಜತೆ ಕೆಲವಕ್ಕೆ ವರ್ಣಗಳ ಹೆಸರನ್ನು ಕೊಟ್ಟು ಗುರುತಿಸಲಾಗಿದೆ. ಅದರಲ್ಲಿ ಬಿಳಿ, ಕಂದು ಮತ್ತು ಪಿಂಕ್ ಸಾನಿಕ್ ಶಬ್ದಗಳು, ಮಿಕ್ಕೆಲ್ಲ ಶಬ್ದಗಳಿಗೆ ಒಂದು ತೆರೆಯನ್ನೆಳೆಯಬಲ್ಲವು. ಈ ಶಬ್ದಗಳನ್ನು ಸತತವಾಗಿ ಮತ್ತು ಪುನರಾವರ್ತಿತವಾಗಿ ಕೇಳಲು ತೊಡಗಿದರೆ, ಇತರ ಶಬ್ದಗಳು ಗೌಣವಾಗಿ ನಿದ್ರೆಗೆ ಜಾರಬಹುದು ಎನ್ನಲಾಗಿದೆ.
ಬಿಳಿಯ ಸಾನಿಕ್ ಶಬ್ದಗಳು ಒಂದು ತಿರುಗುತ್ತಿರುವ ಫ್ಯಾನ್ ಅಥವಾ ಟೆಲೆವಿಷನ್ ಇನ್ನೂ ಓಡುತ್ತಿದ್ದು ನಿದ್ರೆಗೆ ಜಾರಿದಾಗ ಮಾಡುವಂತಹ ಶಬ್ದದ ತೆರೆಯನ್ನು ಸೃಷ್ಟಿಸಿದರೆ, ಕಂದುವರ್ಣ ಒಂದು ಜಲಪಾತ, ಅಥವಾ ಗುಡುಗಿನಂತಹ ಪುನರಾವರ್ತಿತ ಶಬ್ದಗಳನ್ನು ಹೊರಡಿಸುತ್ತದೆ. ಪಿಂಕ್ ಶಬ್ದ ನಮ್ಮ ಹೃದಯದ ಬಡಿತದ ಶಬ್ದದಂತೆ ಕೇಳಿಸುತ್ತದೆ. ಒಟ್ಟಾರೆ ನಮಗೆ ಹೊಂದುವ ಜೋಗುಳದ ಹಾಡಿನಂತೆ ಇವು ಕೆಲಸ ಮಾಡಬಲ್ಲವು.
ಮಲಗುವ ಮುನ್ನಿನ ಕಥೆಗಳು
ಮಕ್ಕಳು ಮಲಗುವ ಸಮಯಕ್ಕೆ ಸರಿಯಾಗಿ ದೂರದರ್ಶನದ ಮಕ್ಕಳ ಚಾನೆಲ್‌ಗಳು, ಮಕ್ಕಳು ನಿದ್ರೆಗೆ ಜಾರುವಂತಹ ಕಾರ್ಯಕ್ರಮವನ್ನು ಈಗಾಗಲೇ ಪ್ರಸಾರ ಮಾಡುತ್ತಿವೆ. ಇದರಲ್ಲಿ ಮೇಲೆ ಹೇಳಿದಂತೆ ದೃಶ್ಯ, ಶಬ್ದ ಮತ್ತು ನಿಜ ಬದುಕಿನ ಅನುಭವಗಳಿಗೆ ಹೋಲುವಂತಹ ವಾತಾವರಣವನ್ನು ಸೃಷ್ಟಿಸಿ ಬಿತ್ತರಿಸಲಾಗುತ್ತಿದೆ.
ಆದರೆ, ಈ ಹೊಸತಿನ ಭರಾಟೆಯಲ್ಲಿ ಹಳೆಯ ಕಾಲದ ಜೋಗುಳಗಳನ್ನು ಮರೆತಿಲ್ಲ. ಮಕ್ಕಳು ಬೇರೆ ಕೋಣೆಯಲ್ಲಿ ಮಲಗಿದ್ದು ನಡುವೆ ಎಚ್ಚರವಾದಾಗ ಅದನ್ನು ಕಂಡುಹಿಡಿದು ಸುಸ್ತಾಯ್ತು ಎಂಬ ದೂರೇ ಇಲ್ಲದಂತೆ ಮತ್ತೆ, ಮತ್ತೆ ಜೋಗುಳ ಬಿತ್ತರಿಸಬಲ್ಲ ಸಾಧನಗಳು ಇಂದು ಬಹಳಷ್ಟು ದೇಶಗಳಲ್ಲಿ ಲಭ್ಯವಿವೆ. ಕಥೆಗಳನ್ನು ಹೇಳಬಲ್ಲ ಹಲವಾರು ಅಂತರ್ಜಾಲ ತಾಣಗಳಿವೆ.
ಇದು ವಯಸ್ಸಾದವರಿಗೂ ಇಂದು ಲಭ್ಯವಿವೆ. ಆಡಿಯೋ ಪುಸ್ತಕಗಳಲ್ಲಿ ನಿದ್ರೆಯ ಸಮಯದ ಆಡಿಯೋ ಪುಸ್ತಕಗಳೇ ಬೇರೆ ಇವೆ. ಇವನ್ನು ಓದುವವರು ಕೇಳುಗರನ್ನು ನಿದ್ರೆಗೆ ಜಾರಿಸುವ ಮೆಲು ಧ್ವನಿ ಮತ್ತು ಧಾಟಿಯಲ್ಲಿ ಕಥೆಯನ್ನು ಓದುತ್ತಾರೆ.
ಕಥೆಗಳನ್ನು ಕೇಳುವ ಅಭ್ಯಾಸ ಇಲ್ಲದವರಿಗೆ ಬೇರೆ ಆಯ್ಕೆಗಳೂ ಇವೆ. ಹಾಡು, ಭಜನೆ ಅಥವಾ ಧ್ಯಾನವನ್ನು ಕೂಡ ಈ ಆಡಿಯೋಗಳ ಮೂಲಕ ಕೇಳುತ್ತ ನಿದ್ದೆಗೆ ಜಾರಬಹುದು. ಇವುಗಳು ನಮ್ಮ ಮನಸ್ಸಿನ ಆತಂಕಗಳನ್ನು ಕಡಿಮೆ ಮಾಡಿ, ಹೃದಯದ ಬಡಿತದ ವೇಗವನ್ನು ನಿಧಾನಗೊಳಿಸಿ ನಮ್ಮ ಮಿದುಳನ್ನು ನಿದ್ರೆಗೆ ಜಾರಲು ತಯಾರು ಮಾಡುತ್ತವೆ ಎನ್ನಲಾಗಿದೆ.
ಹಳೆಯ ಕಾಲದಲ್ಲಿ ನಿದ್ರೆಗೆ ಜಾರಲು,ಇಂತಹ ಹೈ-ಟೆಕ್ ಸಾಧನಗಳು ಬೇಕೇ? ಎಂದು ನಿಮ್ಮಲ್ಲಿ ಕೆಲವರು ಈಗಾಗಲೇ ಮೂಗು ಮುರಿಯುತ್ತಿರಬಹುದು. ಮೈ-ಕೈ ನೋಯುವಂತೆ ಚೆನ್ನಾಗಿ ಕೆಲಸ ಮಾಡಿದರೆ ನಿದ್ರೆ ತಾನಾಗಿ ಬರುತ್ತದೆ ಎಂದು ನಸುನಕ್ಕಿರಬಹುದು.
ನಿಮ್ಮ ಯೋಚನೆ ನಿಜ. ಇಂತಹ ಸಾಧನಗಳು ಎಲ್ಲರಿಗೂ ಬೇಕಾಗುವುದಿಲ್ಲ. ಹಳೆಯ ವಿಧಾನಗಳೇ ಅತ್ಯಂತ ಆರೋಗ್ಯಕರವೂ ಹೌದು. ಆದರೆ ಇಂದು ಬದುಕು ಮಗ್ಗಲು ಬದಲಿಸಿದೆ. ನಗರದ ಹಲವರು ಸುಸ್ತಾಗುವುದು ಸತತವಾದ ಮಾನಸಿಕ ಒತ್ತಡದ ಕೆಲಸಗಳಿಂದ. ಇಂತಹ ಕೆಲಸಗಳ ಜತೆ ಫೋನಿನ ಸಂದೇಶಗಳು, ಸಾಮಾಜಿಕ ಜಾಲತಾಣಗಳು, ಸಮಯದ ಅಭಾವ ಹೀಗೆ ಮಿದುಳು ಸತತ ಜಾಗೃತಿಯ ಸ್ಥಿತಿಗೆ ಜಾರಿ ನಿದ್ರಾಹೀನತೆ ಹೆಚ್ಚುತ್ತಿದೆ. ಇಂತಹವರು ಸಮಯದ ಅಭಾವದ ಕಾರಣ, ಅನುಕೂಲ ಇಲ್ಲದ ಕಾರಣ, ಜಿಮ್, ವಾಕ್, ಸ್ವಿಮ್ಮಿಂಗ್ ಎಂದು ಹೋಗಲು ಸಾಧ್ಯವಾಗದೇ ಇರಬಹುದು.
ಇಂತಹವರಿಗೆ ಈ ಹೊಸ ಸಾಧನಗಳು ನೆರವಾಗಬಲ್ಲವು. ಇತರ ವಿಧಾನಗಳು ಕೆಲಸ ಮಾಡುವುದನ್ನು ನಿಲ್ಲಿಸಿದ್ದಲ್ಲಿ ಈ ಹೊಸ ವಿಧಾನಗಳು ಅವರಿಗೆ ಸಹಾಯ ಮಾಡಬಲ್ಲವು, ಇಂತಹ ಸಾಮಾಜಿಕ ಜಾಲತಾಣಗಳನ್ನು ಸೃಷ್ಟಿಸಿರುವ ವೈದ್ಯರಿಗೆ ಜಗತ್ತಿನಾದ್ಯಂತ ಮಿಲಿಯನ್‌ಗಟ್ಟಳೆ ಹಿಂಬಾಲಕರಿದ್ದಾರೆ. ಈ ಆಪ್‌ಗ್ಳ ಲಾಭವನ್ನು ಪಡೆದು ತಮಗೆ ಪ್ರಯೋಜನವಾಗಿರುವ ಬಗ್ಗೆ ಇವರು ಘಂಟಾಗೋಷವಾಗಿ ಬರೆಯುತ್ತಾರೆ.
ನಿದ್ರಾಹೀನತೆಯ ಸಮಸ್ಯೆಯಿರುವವರಿಗೆ ಬೇರೆ ಯಾವ ವಿಧಾನಗಳೂ ಕೆಲಸ ಮಾಡದಿದ್ದಲ್ಲಿ,ಇಂದು ಈ ಹೊಸ ಉಪಾಯಗಳಿವೆ. ಬಳಸುವ ಟೆಕ್ನಾಲಜಿ ಗೊತ್ತಿದ್ದರೆ, ಇವುಗಳಿಗೆ ಹಣತೆತ್ತು ತೆಗೆದುಕೊಳ್ಳಬಹುದು. ಅಥವಾ ಉಚಿತವಾಗಿ ದೊರೆಯುವ ಕೆಲವು ಆಪ್‌ಗ್ಳನ್ನು ಅಗತ್ಯವಿರುವವರು ಡೌನ್‌ಲೋಡ್ ಮಾಡಿಕೊಂಡು ಪ್ರಯೋಜನ ಪಡೆಯಬಹುದು.
*ಡಾ| ಪ್ರೇಮಲತಾ ಬಿ., ಲಿಂಕನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.