ಚೆನ್ನವೀರ ಕಣವಿ; ಹಸಿರುಗದ್ದೆಗೆ ಹಾಯುವ ಕೈಗಾಲುವೆಯ ಕಾವ್ಯ 

ಹೊಟ್ಟೆಪಾಡಿಗಾಗಿ  ಶುಗರ್‌ ಫ್ಯಾಕ್ಟರಿ ಪ್ರಾರಂಭಿಸಿದ ಮೇಲಂತೂ ಹೋಳಿಗೆ ಹಿತಶತ್ರುವೇ ಆಗಿಬಿಟ್ಟಿದೆ!

Team Udayavani, Feb 16, 2022, 2:44 PM IST

ಚೆನ್ನವೀರ ಕಣವಿ; ಹಸಿರುಗದ್ದೆಗೆ ಹಾಯುವ ಕೈಗಾಲುವೆಯ ಕಾವ್ಯ 

ನಲ್ನುಡಿ, ಮೆಲುನಡೆ, ತಿಳಿನಗೆ ಒಟ್ಟಿಗೇ ಕಾಣುವ ತ್ರಿವೇಣಿ ಸಂಗಮಸ್ಥಾನ ಯಾವುದೆಂದರೆ ಯಾರೂ ಥಟ್ಟನೆ ಚೆನ್ನವೀರ ಕಣವಿ ಎಂದಾರು. ನಸು ಬಾಗಿದ ನೀಲಕಾಯದ ಕಣವಿಯವರು ಕವಿಯಾಗಿ, ವ್ಯಕ್ತಿಯಾಗಿ ನನಗೆ ತುಂಬ ಪ್ರಿಯರಾದ ಹಿರಿಯ ಮನುಷ್ಯರು. ಕಣವಿ ತಮ್ಮ ತಾಳ್ಮೆ ಕಳೆದುಕೊಂಡದ್ದನ್ನು , ಯಾರ ಬಗ್ಗೆಯಾದರೂ ಕಟುವಾಗಿ ನುಡಿದಿದ್ದನ್ನು ನಾನಂತೂ ಈವರೆಗೆ ಕಂಡಿಲ್ಲ. ಕೋಪತಾಪ ಅವರಿಗೂ ಇದ್ದಾವು. ಅದನ್ನು ಸಾರ್ವಜನಿಕವಾಗಿ ತೋರುಗೊಡದ ಅಗ್ನಿವ್ರತ ಅವರದ್ದು. ಅರಳು ಸಂಡಿಗೆಯನ್ನು ಮರಳುವ ಎಣ್ಣೆಗೆ ಹಾಕಿದರೂ ಅದು ನಿರ್ಮಲವಾಗಿ ನಗುವುದು. ಪಾಡು ನನಗಿರಲಿ; ಹಾಡು ನಿಮಗಿರಲಿ ಎನ್ನುವ ಬೇಂದ್ರೆಯ ತಣ್ತೀ ಹೀಗೆ ಕಣವಿಯವರಲ್ಲಿ ಮೂರ್ತಗೊಂಡಿದೆ.

ಮೂವತ್ತು ವರ್ಷಗಳ ಹಿಂದೆ ಬನಶಂಕರಿಯಲ್ಲಿ ಸಂಭವಿಸಿದ ಒಂದು ಶುಭ್ರ ಮುಂಜಾನೆಯನ್ನು ನಾನು ಯಾವತ್ತೂ ಮರೆಯಲಾರೆ. ಕಣವಿ ದಂಪತಿಗಳು ಆವತ್ತು ಜಿ. ಎಸ್‌. ಶಿವರುದ್ರಪ್ಪನವರ ಮನೆಗೆ ಬಂದಿದ್ದಾರೆ. ನಾನು ಆಗ ಜೀಎಸ್ಸೆಸ್‌ ಮನೆಯ ಎದುರಲ್ಲೇ ಒಂದು ಬಾಡಿಗೆ ಮನೆಯಲ್ಲಿ ಇದ್ದೆ! ಅಂಗಳದಲ್ಲಿ ಪಾರಿವಾಳ ಸಾಕಣೆಯ ಪ್ರಯೋಗ ಮಾಡುತ್ತಿದ್ದ ನನ್ನ ಕೊನೆಯ ಹುಡುಗ ಓಡಿ ಬಂದು, “”ಯಾರೋ ದೊಡ್ಡೋರು ಬಂದಿದ್ದಾರೆ” ಎಂದು ಕೈಹಿಡಿದು ಜಗ್ಗಿದ. ಯಾರಿರಬಹುದು ಎಂದು ನಾನು ಬಾಗಿಲ ಸಮೀಪ ಬಂದರೆ ಆಗಾಗ ಆಕಾಶ ಮಾರ್ಗದಲ್ಲಿ ಸಕೀìಟು ಮಾಡುವ ಶಿವಪಾರ್ವತಿಯರ ಹಾಗೆ ಕಣವಿ ದಂಪತಿಗಳು ನಿಂತಿದ್ದಾರೆ. “”ಸರ್‌! ಏನಾಶ್ಚರ್ಯ! ಬನ್ನಿ ಬನ್ನಿ”- ಎಂದೆ ನಾನು, ಅವರಿಗೆ ನಮಸ್ಕರಿಸುತ್ತ.

ಶಾಂತಾದೇವಿ ಮತ್ತು ಚೆನ್ನವೀರ ಕಣವಿ ನಮ್ಮ ಮನೆಯ ಒಳಗೆ ಬಂದರು. ರಂಗವನ್ನೂ ಅಂತರಂಗವನ್ನೂ ನೀಲಾಂಜನೆ ಪ್ರವೇಶಿಸಿದಳು ಎಂದು ಆದಿಪುರಾಣದಲ್ಲಿ ಪಂಪ ಬಣ್ಣಿಸುತ್ತಾನೆ. ಆ ಪಂಕ್ತಿ ನೆನಪಾಯಿತು ನನಗೆ. “”ಮಗನ ಮನೆಗೆ ಬಂದಿದ್ದೆವು. ಜೀಎಸ್ಸೆಸ್‌ ಭೆಟ್ಟಿ ಮಾಡೋಣು ಅಂತ ಬಂದೆವು. ನಿಮ್ಮ ಮನೆ ಎದುರಲ್ಲೇ ಇದೆ ಅಂದರು ಜೀಎಸ್ಸೆಸ್‌. ಹಾಗಾದರೆ ಎಚ್ಚೆಸ್ವಿಯನ್ನು ನೋಡಿಕೊಂಡು ಬರುತ್ತೇವೆ ಅಂತ ನಿಮ್ಮ ಮನೆಗೆ ಬಂದ್ವಿ” ಎಂದರು ಕಣವಿ ಮುಖದಲ್ಲಿ ಸಹಜವಾದ ನಿಷ್ಕಪಟ ನಗೆ ಅರಳಿಸಿ. “”ನೀವು ಹೇಳಿ ಕಳಿಸಿದ್ದರೆ ನಾನೇ ಜೀಎಸ್ಸೆಸ್‌ ಮನೆಗೆ ಬರುತ್ತ ಇದ್ದೆ” ಎಂದೆ. “”ನಿಜ. ನೀವೇ ಬರುತ್ತಾ ಇದ್ದಿರಿ. ಒಬ್ಬರೇ ಬರುತ್ತಾ ಇದ್ದಿರಿ! ನಿಮ್ಮ ಮನೆಯವರು, ಮಕ್ಕಳನ್ನು ನಾವು ನೋಡಬೇಕಾಗಿತ್ತಲ್ಲ? ಅದಕ್ಕೇ ನಾವೇ ಬಂದದ್ದು” ಎಂದರು ಕಣವಿ.

ಕಣವಿ ನನ್ನೊಡನೆ ಮಾತಾಡುವುದಕ್ಕಿಂತ ಹೆಚ್ಚಾಗಿ ನನ್ನ ಹೆಂಡತಿ, ಮತ್ತು ಅಜ್ಜಿಯರ ಜತೆ ಲೋಕಾಭಿರಾಮವಾಗಿ ಬಹು ಹೊತ್ತು ಮಾತಾಡಿದರು. ಮಕ್ಕಳನ್ನು ಕರೆದು ಅವರು ಏನು ಓದುತ್ತಿರುವರು, ಯಾವ ಕ್ಲಾಸಲ್ಲಿರುವರು ಎಲ್ಲ ವಿವರ ಕೇಳಿಕೊಂಡರು. ನನಗೆ ಸಮಾಧಾನ. ಈ ಹುಡುಗ ಯಾವ ಕ್ಲಾಸಲ್ಲಿದ್ದಾನೆ ಎಂದು ಅವರು ನನ್ನನ್ನೇ ಕೇಳಿದ್ದರೆ ನಾನು ಸಹಾಯಕ್ಕಾಗಿ ಹೆಂಡತಿಯ ಮುಖ ನೋಡುತ್ತಾ ಇದ್ದೆ! ಯಾವ ಮಗು ಯಾವ ಇಯತ್ತೆಯಲ್ಲಿ ಎನ್ನುವುದು ನನಗೆ ಕೊನೆಯವರೆಗೂ ಗೊಂದಲವೇ. ಶಾಂತಾದೇವಿ ಒಳಗೆ ಹೋಗಿ ಚಾ ತಯಾರಿಸುತ್ತಿದ್ದ ನನ್ನ ಪತ್ನಿಯೊಂದಿಗೆ ಮಾತಾಡಿಕೊಂಡು ಬಂದರು. ಚಾ ಮುಗಿದ ಮೇಲೆ ನಾನು ಅವರೊಂದಿಗೆ ಜೀಎಸ್ಸೆಸ್‌ ಮನೆಗೆ ಹೋದೆ. ಆವತ್ತಿನ ಬೆಳಗಿನ ಉಪಹಾರ ನನಗೆ ಜೀಎಸ್ಸೆಸ್‌ ಮನೆಯಲ್ಲಿ ಆಯಿತು ಎನ್ನುವದನ್ನು ಬಾಯಿಬಿಟ್ಟು ಉಲ್ಲೇಖೀಸುವ ಅಗತ್ಯವಿಲ್ಲ.

ಚೆಂಬೆಳಕಿನ ಮುಹೂರ್ತಗಳು
ಕಣವಿಯವರನ್ನು ನಾನು ಭೆಟ್ಟಿ ಮಾಡಿ ಅವರೊಂದಿಗೆ ರಸ ನಿಮಿಷಗಳನ್ನು ಕಳೆದದ್ದೆಲ್ಲ ಮುಂಜಾನೆ ಅಥವಾ ಸಂಜೆಗಳಲ್ಲೇ. ಧಾರವಾಡಕ್ಕೆ ಹೋದಾಗ ನಾನು ಮುಂಜಾನೆಯೇ ಅವರನ್ನು ಭೆಟ್ಟಿ ಆಗುವುದು. ಮುಂಜಾನೆ ಮತ್ತು ಸಂಜೆ ಎರಡೂ ಚೆಂಬೆಳಕಿನ ಮುಹೂರ್ತಗಳು. ಮುಂಜಾನೆ ಹೋದಾಗ “”ಬೆಳಗಿನ ತಿರುಗಾಟಕ್ಕೆ ಹೋಗಿದ್ದಾರ್ರಿ… ಇನ್ನೇನು ಬರ್ತಾರೆ ಕೂಡ್ರಿ” ಎನ್ನುವರು ಅವರ ಮನೆಯವರು. ಅಥವಾ ಕಣವಿ ತಮ್ಮ ಕೈದೋಟದಲ್ಲಿ ತಾವು ಅಕ್ಕರೆಯಿಂದ ಬೆಳೆಸುತ್ತಿರುವ ಮರಗಿಡಬಳ್ಳಿಗಳೊಂದಿಗೆ ಕಿರುರೈತನ ನೆಲೆಯಲ್ಲಿ ಇರುವರು. ಅವರ ಕಾವ್ಯದಲ್ಲಿ ಒಕ್ಕಲುಗಾರಿಕೆಯ ಅದೆಷ್ಟು ಪ್ರತಿಮೆಗಳು! ಇಲ್ಲಾ ತಮ್ಮ ಪ್ರೀತಿಯ ನಾಯಿಯೊಂದಿಗೆ ಸರಸ ಸಂಭಾಷಣೆಯಲ್ಲಿ ತೊಡಗಿರುವರು. “”ಓ! ಎಚ್ಚೆಸ್ವಿ… ಬರ್ರಿಬರ್ರಿ” ಎಂದು ಮೆಲುನಗೆಯೊಂದಿಗೆ ನಮ್ಮನ್ನು ಸ್ವಾಗತಿಸುವರು. ನನ್ನ ಜೊತೆಯಲ್ಲಿ ಸಾಮಾನ್ಯವಾಗಿ ರಾಘವೇಂದ್ರ ಪಾಟೀಲರೋ, ಮಲ್ಲಿಕಾರ್ಜುನ ಹಿರೇಮಠರೋ ಇರುವರು. ಮನೆಯೊಳಗೆ ಹೋದಮೇಲೆ ಶಾಂತಾದೇವಿ ಬಂದು, “”ಚಲೋ ಇದ್ದೀರಿ” ಎಂದು ಕುಶಲ ಕೇಳಿ ನಮಗೆ ಆತಿಥ್ಯ ಸಿದ್ಧಪಡಿಸಲಿಕ್ಕೆ ಒಳಗೆ ಹೋಗುವರು.

ಮುಂಜಾವು ಅಥವಾ ಮುಸ್ಸಂಜೆ ಕಣವಿಯವರಿಗೆ ಹೇಳಿಮಾಡಿಸಿದ ಕಾಲ. ಅವರ ಮುಖದ ಪ್ರಶಾಂತಿ ದ್ವಿಗುಣಗೊಳ್ಳುವುದು ಈ ಚೆಂಬೆಳಕಿನ ರನ್ನಗನ್ನಡಿಯಲ್ಲಿ. ನಾನು ನನ್ನ ಹೊಸಪುಸ್ತಕ ಅವರಿಗೆ ನೀಡುವೆ. ಅವರು ಮುಯ್ಯಿ ತೀರಿಸುವವರಂತೆ ತಮ್ಮ ಹೊಸ ಕವಿತಾ ಸಂಗ್ರಹ ಕೊಡುವರು. ಅವರೇ ಮುದ್ದಾದ ಅಕ್ಷರಗಳಲ್ಲಿ ಪುಸ್ತಕದಲ್ಲಿ ಬರೆದು ಕೊಡುವ ಅವರ ಕಾಳಜಿ ನೋಡಿ ಖುಷಿ ಪಡಬೇಕಾದದ್ದು. ಕಣವಿ ಬರೆದಿರುವ ನೂರಾರು ಪತ್ರಗಳು ನನ್ನ ಬಳಿ ಇವೆ. ಆ ಪತ್ರಗಳಲ್ಲಿ ಒಂದಾದರೂ ಕಾಟು ಚಿತ್ತು ಕಾಣದು. ಪದವಿಟ್ಟಳುಪದಗ್ಗಳಿಕೆ ಅವರದ್ದು ! ತಿದ್ದುಪಡಿಯಿಲ್ಲದ ಶುದ್ಧ ಪ್ರತಿ ಕಣವಿ. ಇಲ್ಲೇ ಊಟಮಾಡಿ ಎಂದು ಕಣವಿ ಹೇಳಿಯೇ ಹೇಳುವರು. ಹಾಗೆ ಕಣವಿಯವರ ಮನೆಯಲ್ಲಿ ಅದೆಷ್ಟೋ ಬಾರಿ ಉಂಡಿದ್ದಾಗಿದೆ. ಒಮ್ಮೆ ಜೀಎಸ್ಸೆಸ್‌, ಕಾಪ್ಸೆಯವರ ಜೊತೆಗೆ ನನಗೆ ಕಣವಿಯವರ ಮನೆಯಲ್ಲಿ ಹೋಳಿಗೆ ಊಟ. ಪ್ರಾಯಃ ಜೀಎಸ್ಸೆಸ್‌ ಅವರಿಗೆ ಹೋಳಿಗೆ ಸೀಕರಣೆ ಪ್ರಿಯ ಎಂಬುದು ಕಾರಣವಿರಬಹುದು. ಹೋಳಿಗೆ ನನಗೂ ಪ್ರಿಯವೇ. ಜೊತೆಗೆ ಧಾರವಾಡದ ಆಪೋಸು ಹಣ್ಣಿನ ರಸವತ್ತಾದ ಸೀಕರಣೆ. “ನಮ್ಮೂರಲ್ಲಿ ಮಾವಿಗೆ ಈ ರುಚಿ ಇಲ್ಲ ಬಿಡಿ’ ಎನ್ನುತ್ತೇನೆ ನಾನು.

ಪಂಪನಿಂದ ಹಿಡಿದು ಕಣವಿಯವರವರೆಗೆ ನಮ್ಮ ಅನೇಕ ಕವಿಗಳಿಗೆ ಮಾವಿನ ಮರ ಎಂದರೆ ಅದೇನು ಇಷ್ಟವೋ! ಪಂಪನಂತೂ ತನ್ನ ಕಂದ ಪದ್ಯವನ್ನು ಮಾವಿನ ಮರಕ್ಕೇ (ಮಾಕಂದ) ಹೋಲಿಸಿಕೊಂಡಿದ್ದಾನೆ. ಧಾರವಾಡವಂತೂ ಮಾವಿನ ಮರಗಳಿಗೆ ಪ್ರಸಿದ್ಧ. ಆಧುನಿಕ ನಾಗರಿಕತೆ ಕೂಡ ಧಾರವಾಡದಲ್ಲಿ ಮಾವಿನ ಮರಗಳನ್ನು ಸಂಪೂರ್ಣವಾಗಿ ವಾತಾಪಿ ಮಾಡಿಕೊಂಡಿಲ್ಲ. “ನೀವು ತರುಣರು. ಇನ್ನೂ ಒಂದು ಹೋಳಿಗೆ ನೀಡಿಸಿ ಕೊಳ್ಳಿ’ ಎನ್ನುವರು ಕಣವಿ. ಅದು ಬಹಳ ಹಿಂದಿನ ಮಾತು. ಈ ಕಾಲ ಎಂಬ ಪ್ರಾಣಿ ಕೈಗೆ ಸಿಕ್ಕರೆ ಹಿಡಿದು ಥಳಿಸಬೇಕು ಎಂದು ಕಣವಿ ಅವರಿಗೆ ಅನ್ನಿಸಿದಂತೆ ನನಗೂ ಈಗ ಅನ್ನಿಸುತ್ತಾ ಇದೆ! ನಾನು ಹೊಟ್ಟೆಪಾಡಿಗಾಗಿ  ಶುಗರ್‌ ಫ್ಯಾಕ್ಟರಿ ಪ್ರಾರಂಭಿಸಿದ ಮೇಲಂತೂ ಹೋಳಿಗೆ ಹಿತಶತ್ರುವೇ ಆಗಿಬಿಟ್ಟಿದೆ!

ಕಣವಿಯವರನ್ನು ನಾನು ಬಹುಪಾಲು ಸಂಜೆ-ಮುಂಜಾನೆಗಳಲ್ಲೆ ನೋಡಿದ್ದು ಎಂದು ಹೇಳಿದೆನಲ್ಲ. ಅದಕ್ಕೆ ಒಂದು ಅಪವಾದವಿದೆ. ಒಂದು ರಾತ್ರಿ ಮಾತ್ರ ನಾವು ಬಹಳ ಕಾಲ ಒಟ್ಟಿಗೇ ಇದ್ದೆವು ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಕಣವಿ ಅವರೊಂದಿಗೆ ತಡರಾತ್ರಿಯ ಸರಸ ಗೋಷ್ಠಿಯೇ?! ಹೌದು. ಅದು ಆದದ್ದು ಪು. ತಿ. ನರಸಿಂಹಾಚಾರ್‌ಅವರ ಮೇಲುಕೋಟೆಯಲ್ಲಿ! ಕೇವಲ ತೀರ್ಥಪ್ರಸಾದ-ಪೊಂಗಲ್ಲುಗಳಿಗೇ ವಿಶ್ವಖ್ಯಾತವಾಗಿರುವ ತಿರುನಾರಾಯಣನ ಸನ್ನಿಧಿಯಲ್ಲಿ. ಆ ರಾತ್ರಿ ಜೀಎಸ್ಸೆಸ್‌, ಕಣವಿ, ಹಿರಿಯ ಮಿತ್ರ ಅಚ್ಚುತ ಖಾದ್ರಿ, ಕಲಾವಿದ ಕಮಲ್‌ನಾಥ್‌ ಮತ್ತು ನಾನು ಮೇಲುಕೋಟೆಯ ಪುತಿನ ಸ್ವಗೃಹದ ಅಲಂಕರಣದಲ್ಲಿ ತೊಡಗಿದ್ದೆವು. ಬೆಳಗಾದರೆ ಪುತಿನ ಸ್ವಗೃಹದ ಸಾಂಸ್ಕೃತಿಕ ನೆನಪಿನ ಲೋಕಾರ್ಪಣೆ. ಯಾವ ಫೋಟೊ ಎಲ್ಲಿ ಹಾಕಬೇಕು… ಯಾವ ಉಕ್ತಿ ಯಾವ ತೊಲೆಯ ಮೇಲೆ ಬರಬೇಕು… ಇತ್ಯಾದಿ ಗಹನ ಜಿಜ್ಞಾಸೆ ನಮ್ಮ ನಡುವೆ ನಡೆಯುತ್ತ ಇದೆ. ಜೀಎಸ್ಸೆಸ್‌, ಕಣವಿ ನಮಗೆ ದಿಗªರ್ಶಕರು! “ಪತ್ನಿಯ ಬಗ್ಗೆ ಬರೆದ ಮಾತಿದೆಯಲ್ಲ ಅದು ಅಡುಗೆಮನೆ ಬಾಗಿಲವಾಡದ ಮೇಲೆ ಬರಬೇಕು ಮತ್ತ!’- ಎನ್ನುತ್ತ ಕಣವಿಯವರು ಸ್ಥಳನಿರ್ದೇಶನ ಮಾಡುತ್ತಿರುವರು. ಒಳಮನೆಯಲ್ಲಿ ಪುತಿನ ಅವರ ಗುರುಗಳ ಹಿರಿಯರ ಫೋಟೋಗಳು. ಮುಂದಿನ ಹಜಾರದಲ್ಲಿ ಅವರ ತಾಯಿ-ತಂದೆಯ ಪಟ. ಎದುರು ಗೋಡೆಯ ಬಳಿ ಅವರ ಪಂಪ ಪ್ರಶಸ್ತಿ ಸ್ಮರಣಿಕೆ. ಕೇಂದ್ರ ಸಾಹಿತ್ಯ ಅಕಾಡೆಮಿ ಸ್ಮರಣಿಕೆ. ಪರಿಷತ್ತಿನ ಸಮ್ಮೇಳನದ ಅಧ್ಯಕ್ಷರಾಗಿದ್ದಾಗ ಅವರಿಗೆ ನೀಡಿದ ಬೃಹತ್‌ ಗಾತ್ರದ ಗಜಲಕ್ಷ್ಮೀಯ ರಜತ ಸ್ಮರಣಿಕೆ. ಬೆಂಗಳೂರಲ್ಲಿ ಪುತಿನ ಇದ್ದಾಗ ಪ್ರತಿನಿತ್ಯವೂ ಆ ಸ್ಮರಣಿಕೆಗೆ ಅರಸಿನ-ಕುಂಕುಮ ಹಚ್ಚಿ ಆರತಿ ಬೆಳಗುತ್ತಿದ್ದುದನ್ನು ನಾನು ನೋಡಿದ್ದೆ. ಮಧ್ಯರಾತ್ರಿ ಆದರೂ ನಮ್ಮ ಕೈಂಕರ್ಯ ಮುಗಿದಿಲ್ಲ. “ಕಣವಿಯವರೇ, ನೀವು ಹೋಗಿ ಮಲಗಿ’ ಎನ್ನುತ್ತಾರೆ ಜೀಎಸ್ಸೆಸ್‌. “ಎಲ್ಲ ಮುಗಿಸಿಕೊಂಡು ಒಟ್ಟಿಗೇ ಹೋಗೋಣು’ ಎನ್ನುತ್ತಾರೆ ಕಣವಿ. ಅವರ ಮುಖದಲ್ಲಿ ಆಯಾಸದ ಗುರುತಿಲ್ಲ. ನಿದ್ದೆಯ ಮಬ್ಬಿಲ್ಲ. ನಗುನಗುತ್ತ ನಮ್ಮೊಂದಿಗೆ ಅವರೂ ಇರುಳ ಜಾಗರಣೆ ಮಾಡುತ್ತ ಕೂತಿದ್ದಾರೆ!

ಮರುದಿನ ಸಂಜೆ ನಮಗೆಲ್ಲ ಪೀಟೀಕೆ (ಪಿ. ಟಿ. ಕೃಷ್ಣಮಾಚಾರ್‌) ಅವರ ದಿವ್ಯವಾದ ಆತಿಥ್ಯ, ಪುತಿನ ಅವರಿಗೆ ತುಂಬ ಪ್ರಿಯವಾದ ತೊಟ್ಟಿಲು ಮಡು ಎಂಬ ಮೇಲುಕೋಟೆಯ ಅಂಚಿಗಿರುವ ವಿಹಾರ ಸ್ಥಳದಲ್ಲಿ. ಪಿಟಿಕೆ ಅವರದ್ದು ಆತಿಥ್ಯದ ಹೊಣೆ. ಪಿ. ಟಿ. ಕೃಷ್ಣಮಾಚಾರ್‌ ಪುತಿನ ಅವರ ಕಿರಿಯ ಸೋದರ. ಅವರೇ ತಮ್ಮ ಕೈಯಾರ ಮೇಲುಕೋಟೆಯ ಸಕ್ಕರೆಪೊಂಗಲ್ಲು, ಪುಳಿಯೋಗರೆ ಮುಂತಾದ ಖಾಯಷ್‌ ರುಚಿಗಳನ್ನು ತಯಾರಿಸಿದ್ದಾರೆ. ಮತ್ತೆ ಸಂಜೆಯ ಚೆಂಬೆಳಕು. ಬಂಡೆಯ ನಡುವೆ ಜುಳು ಜುಳು ಹರಿಯುವ ಕಿರು ಝರಿ. ಆವತ್ತು ನಾವು ತಿಂದ ಸಕ್ಕರೆಪೊಂಗಲ್ಲನ್ನು ನಾನು ಜನ್ಮೆàಪಿ ಮರೆಯಲಾರೆ. ತುಪ್ಪಗಮ್ಮಂತ ಪೊಂಗಲ್ಲಿನ ಮೇಲೆ ತೇಲುತ್ತ¤ ಇದೆ! ಇದು ಇಲ್ಲಿನ ವಿಶೇಷ. “ಹೊಟ್ಟೆ ತುಂಬ ತಿನ್ನಿ ಸ್ವಾಮಿ’ ಎಂದು ಪೀಟಿಕೆ ಅನುನಾಸಿಕದಲ್ಲಿ ಹಕ್ಕೊತ್ತಿನ ಉಪಚಾರ ಮಾಡುತ್ತಾ ಇದ್ದಾರೆ. ಪೊಂಗಲ್ಲನ್ನು ಚಪ್ಪರಿಸುತ್ತ ಜೀಎಸ್ಸೆಸ್‌ ಉದ್ಗರಿಸುತ್ತಾರೆ: “ಆಹಾ! ಇದು ಸ್ವೀಟಿನ ಪರಮಾವಧಿ!’ ಕಣವಿ ನಗುತ್ತಾರೆ. ಅಯ್ಯಂಗಾರರ ಮುಖದ ದಿವ್ಯ ತೇಜಸ್ಸಿಗೆ ಏನು ಕಾರಣ ಎಂಬುದು ಈವತ್ತು ನನಗೆ ಹೊಳೆಯಿತು. ಹೀಗೆ ತುಪ್ಪ ತೇಲುವ ಸಕ್ಕರೆಪೊಂಗಲ್ಲು ನಿತ್ಯವೂ ಸೇವಿಸುತ್ತ ಇದ್ದರೆ ಮುಖದ ತೇಜಸ್ಸು ಹೆಚ್ಚುವುದರಲ್ಲಿ ಸಂದೇಹವೇ ಇಲ್ಲ.

ಕಣವಿಯವರ ಬಗ್ಗೆ ನನಗೆ ಎಷ್ಟು ಗೌರವವೋ ಅದರ ಎರಡು ಪಟ್ಟು ಪ್ರೀತಿ ನನ್ನ ಮೇಲೆ ಕಣವಿ ಅವರಿಗೆ. ಕನ್ನಡ ಸಾಂಸ್ಕೃತಿಕ ಲೋಕದ ಮಾಧುರ್ಯ ಹೆಚ್ಚಿಸಿದ ಕವಿ! ಕನ್ನಡ ಮಕ್ಕಳ ಸಾಹಿತ್ಯದ ದಿಗಂತಕ್ಕೆ ಹೊಸ ಹಕ್ಕಿ ಸಾಲು ಹಾರಿಸಿದ ಕವಿ! ಸಾನೆಟ್ಟಿನ ಭಾರ ಕಮ್ಮಿ ಮಾಡಿ ಅವಕ್ಕೆ ಹಗುರಾದ ರೆಕ್ಕೆ ಹಚ್ಚಿದ ಕವಿ!- ಹೀಗೆ ಅದೆಷ್ಟೋ ಸಿಹಿಯಾದ ಮಾತುಗಳನ್ನು ಕಣವಿ ನನ್ನ ಬಗ್ಗೆ ಆಡಿದ್ದಾರೆ; ಆಡಿದ್ದು ಸಾಲದು ಎನ್ನುವಂತೆ ಬರೆದಿದ್ದಾರೆ! “ನನ್ನ ಸಾನೆಟ್‌ ಸಂಗ್ರಹಕ್ಕೆ ಬ್ಲಿರ್ಬ್ ಬರೆದು ಕೊಡಿ’ ಎಂದು ನಾನು ಪ್ರಾರ್ಥಿಸಿದರೆ ನನ್ನ ಕಾವ್ಯದ ಬಗ್ಗೆ ಸೊಗಸಾದ ಸಾನೆಟ್ಟನ್ನೇ ಬರೆದುಕೊಟ್ಟಿದ್ದಾರೆ. “ಸಿಹಿ ನನ್ನ ಆರೋಗ್ಯಕ್ಕೆ ಆಘಾತಕಾರಿ ಸರ್‌!’ ಎಂದು ನಾನು ಕಸಿವಿಸಿಪಟ್ಟರೆ “ಊಟದ ಸಿಹಿ ಬಿಡಿ; ಕವಿತೆಯ ಸಿಹಿ ಉಳಿಸಿಕೊಳ್ಳಿ’ ಎನ್ನುತ್ತಾರೆ ಕಣವಿ!

ಕಣವಿಯವರ ಆರೋಗ್ಯ ಸೂಕ್ಷ್ಮ. ಅವರ ಕವಿತೆಗಳಂತೆಯೇ. ಸೂಕ್ಷ್ಮ ಹೌದು; ಆದರೆ ದುರ್ಬಲವಲ್ಲ. ಅವರ ಕವಿತೆಯಲ್ಲಿ ಕಾಣುವ ಮುಖ್ಯ ಜೀವ ಲಕ್ಷಣಗಳು: ಹೃದಯವಂತಿಕೆ, ನಿಸರ್ಗ ಪ್ರೀತಿ, ಆಧ್ಯಾತ್ಮಿಕ ಅನುಭಾವದ ಸೆಳವು, ನವುರುತನ, ಸೂಕ್ಷ್ಮ ಕುಸುರಿಗೆಲಸ, ಆಭರಣದಲ್ಲಿ ಹರಳು ಕೂಡಿಸುವ ಚಿನ್ನಗಾರನ ಕಸಬುಗಾರಿಕೆ! ಸಮಾಜಮುಖತೆ! ಭ್ರಷ್ಟರ ಬಗ್ಗೆ ನಿಷ್ಠುರವಾದ ವ್ಯಂಗ್ಯ, ಮಖಾಮಾರೆ ನೋಡದ ಕಟು ಟೀಕೆ.ತಮ್ಮ ಮಾತಿನ ಹೆಚ್ಚಳಿಕೆಯನ್ನು ಕಳೆದುಕೊಳ್ಳಬೇಕೆಂದೇ ಅವರು ಸಾನೆಟ್ಟಿನ ದೀಕ್ಷೆ ತೆಗೆದುಕೊಂಡರೋ ಏನೋ! ಸಾನೆಟ್ಟೆಂದರೆ ಮಾತಿನ ಸಂಯಮ, ಮಾತಿನ ಸಾಣೆ, ಚಿತ್ರಾವಳಿಯ ಸುಂದರ ಕೆತ್ತನೆ, ಲಯದ ಹಗುರಾದ ಲಾಸ್ಯ! ಕಣವಿಯವರ ಸಾನೆಟ್ಟಲ್ಲಿ ಅವನ್ನು ಯಥೇತ್ಛ ಕಾಣಬಹುದು. ಬೇಂದ್ರೆಯ ನಂತರ ಸಾನೆಟ್ಟಲ್ಲಿ ಮಹತ್ವದ ಸಾಧನೆ ಮಾಡಿದವರು ಕಣವಿ. ಕೀರ್ತಿನಾಥ ಕುರ್ತಕೋಟಿ, ಜಿ. ಎಸ್‌. ಆಮೂರ, ಜೀಎಸ್ಸೆಸ್‌, ಶಾಂತಿನಾಥದೇಸಾಯಿ, ರಾಜೇಂದ್ರ ಚೆನ್ನಿ- ಕಣವಿಯವರ ಸಾನೆಟ್ಟುಗಳ ಬಗ್ಗೆ ಮುಕ್ತಕಂಠದಿಂದ ಪ್ರಶಂಸಿಸಿ ಬರೆದಿರುವುದು ನನಗೀಗ ನೆನಪಾಗುತ್ತ ಉಂಟು. ಸಾನೆಟ್ಟುಗಳಲ್ಲಿ ಅವರ ಭಾಷೆ ಎಷ್ಟು ಅಡಕ. ಅಲ್ಲಿ ಅದೆಂಥ ಚೇತೋಹಾರಿ ಚಿತ್ರಗಳು. ಎಲ್ಲಕ್ಕಿಂತ ಮುಖ್ಯವಾಗಿ ಅದೆಂಥ ಹೃದಯವಂತಿಕೆ ಅವರು ಕೊಡುವ ವ್ಯಕ್ತಿಚಿತ್ರಗಳಲ್ಲಿ.

ಕಣವಿಯವರ ಅನೇಕ ಹರಳುಗಟ್ಟಿದ ಸಾಲು ನನ್ನ ನಾಲಗೆಯ ಮೇಲೇ ಇವೆ! ಬದಲಾವಣೆಯೆ ಬಾಳಿನೊಗ್ಗರಣೆ! ಹೂವು ಹೊರಳುವುವು ಸೂರ್ಯನ ಕಡೆಗೆ ನಮ್ಮ ನೋಟ ಆ ಚಂದ್ರನ ವರೆಗೆ! ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ! ದಾಂಪತ್ಯವನ್ನು ಕುರಿತು, ಮಕ್ಕಳನ್ನು ಕುರಿತು, ನಿಸರ್ಗವನ್ನು ಕುರಿತು, ಅಷ್ಟೇಕೆ ಪ್ರಾಣಿಪಕ್ಷಿಗಳನ್ನು ಕುರಿತು ಕಣವಿಯವರು ಬರೆದಿರುವ ಕವಿತೆಗಳನ್ನು ನೋಡಿದರೆ ಅವರು ಹೇಗೆ ನವ್ಯದ ಉಬ್ಬರದ ಕಾಲದಲ್ಲೂ ತಮ್ಮದೇ  ಕಾಲುದಾರಿಯನ್ನು ಕಾಲಾರ (ಕೈಯಾರ ಎಂಬಂತೆ) ನಿರ್ಮಿಸಿಕೊಂಡು ಊರೆಗೋಲಾಸರೆಯಿಲ್ಲದೆ ದೃಢವಾದ ಹೆಜ್ಜೆಗಳೂರುತ್ತ ತಮ್ಮ ತಡೆಯಿಲ್ಲದ ನಡೆ ನಡೆಸಿದರು ಎನ್ನುವುದು ಯಾರಿಗೂ ಗೊತ್ತಾಗುತ್ತದೆ. ಅವರ ತಣ್ತೀ ಇಷ್ಟೇ:

ರೂಢಿಯಾಗಿದೆ ಒಬ್ಬೊಬ್ಬರಿಗೂ ಒಂದೊಂದು ಬಗೆಯ ನಡಿಗೆ
ಮುಖ್ಯ ಬೇಕಾದದ್ದು ಜೀವಂತಗತಿ, ಹೊಸ ನೆತ್ತರಿನ ಕೊಡುಗೆ.
ಅಂತರಂಗದ “ಗತಿಗೆ’ ಹೊರಜಗತ್ತಿನ “ಸಂಗತಿಗಳು’ ಅಪ್ರಯತ್ನಕವೆಂಬಷ್ಟು ಸಹಜವಾಗಿ ಪ್ರತೀಕಗಳಾಗುವ ಬಗೆಯೇ ಕಣವಿಯವರ ಕಾವ್ಯದ ಮಹತ್ವ. ಮಳಲು ಹಾಡುತ್ತದೆ ಎಂಬ ಅವರ ಕವಿತೆಯನ್ನು ಉದಾಹರಣೆಯಾಗಿ ನೋಡಬಹುದು:
ರಶಿಯದ ಕಾರಾಕುಮ್‌ ಮರುಭೂಮಿಯಲ್ಲಿ
ಮಳಲು ಹಾಡುತ್ತದೆ-
ಹಾಗೆಂದು ಮೊನ್ನೆ ಪತ್ರಿಕೆಯಲ್ಲಿ ಸುದ್ದಿ.
ಬಿರುಗಾಳಿ ಬೀಸಿದೊಡನೆ
ಉಸುಕಿನ ತರಂಗಗಳ ತಂತಿ ಮೀಟುತ್ತಾ
ಹಾಡಿದಂತೆ, ಗರ್ಜಿಸಿದಂತೆ
ಕೆಲವೊಮ್ಮೆ ರೋದಿಸಿದಂತೆ-ಕೇಳುತ್ತದಂತೆ.
ಮಳಲಿನ ಈ ವರ್ತನೆ
ಭೂಕಂಪಕ್ಕೆ ಮುನ್ಸೂಚನೆ ಎಂದು ವಿಜಾnನಿಗಳ ಶಂಕೆ
ಆದರೂ ಏರುತ್ತಲೇ ಇದೆ
ಅಣ್ವಸ್ತ್ರಗಳ ಸಂಖ್ಯೆ
ಈ ಸಾಲುಗಳನ್ನು ಓದುತ್ತಿರುವಂತೆಯೇ ಇಡೀ ಮರಳುಗಾಡು ಶತಮಾನಗಳಿಂದ ತುಳಿತಕ್ಕೆ ಒಳಗಾಗಿರುವ ಶೋಷಿತರಿಗೆ ಒಡ್ಡಿದ ಭೂಮ ಪ್ರತಿಮೆಯಾಗಿ ನಿಲ್ಲುವ ರೀತಿ ಆಶ್ಚರ್ಯ ಹುಟ್ಟಿಸುತ್ತದೆ. ಭೂಕಂಪವು ಅನಿವಾರ್ಯವಾದ ಕ್ರಾಂತಿಯ ಸೂಚಿಯಾಗುತ್ತದೆ. ಮಳಲ ಒಂದೊಂದು ಕಣವೂ ಅಣ್ವಸ್ತ್ರವಾಗುವ ಪರಿಯಂತೂ ಓದುಗರೆದೆಯಲ್ಲಿ ನಡುಕ ಹುಟ್ಟಿಸುತ್ತದೆ. ಕ್ರಾಂತಿ ಮತ್ತು ಬಂಡಾಯಕ್ಕೆ ಸಂಬಂಧಿಸಿದ ಯಾವುದೇ ಶಬ್ದವನ್ನು ಬಳಸದೆಯೂ ಒಂದು ಸಮಾಜಪರ ಕವಿತೆ ಹೇಗೆ ಹುಟ್ಟುತ್ತದೆ ಎಂಬುದನ್ನು ತಿಳಿಯಲು ನಾವು ಮಳಲು ಹಾಡುತ್ತದೆ  ಕವಿತೆಯನ್ನು ಅಭ್ಯಾಸ ಮಾಡಬೇಕು.
ಕಣವಿ ಅವರ ಕಾವ್ಯ ಮತ್ತು ವ್ಯಕ್ತಿತ್ವ ಆಕ್ರಮಣಕಾರಿಯಾದುದಲ್ಲ; ಆಲಿಂಗನಶೀಲವಾದುದು.  ಪ್ರಖರತೆಗಿಂತ ಪ್ರಶಾಂತಿಯೇ ಅದರ ಜೀವಗುಣ. ಸದ್ದು ಮಾಡದೆ ಗದ್ದೆಯ ಹಸಿರಿಗೆ ಹಾಯುವ ಜಲಕಾರುಣ್ಯದ ಕೈಗಾಲುವೆಯಂತೆ ಇದೆ, ಕಣವಿಯವರ ಚಿತ್ತಾಭಿರಾಮ ಕಾವ್ಯ.

ಎಚ್‌. ಎಸ್‌. ವೆಂಕಟೇಶ‌ಮೂರ್ತಿ(ಮರುಪ್ರಕಟ)

ಟಾಪ್ ನ್ಯೂಸ್

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?

Former Supreme Court Judge ವಿ.ಸುಬ್ರಹ್ಮಣಿಯನ್‌ ಎನ್‌ಎಚ್‌ಆರ್‌ಸಿ ಮುಖ್ಯಸ್ಥ

Former Supreme Court Judge ವಿ.ಸುಬ್ರಹ್ಮಣಿಯನ್‌ ಎನ್‌ಎಚ್‌ಆರ್‌ಸಿ ಮುಖ್ಯಸ್ಥ

Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್‌ ವಿವಾದಾಸ್ಪದ ಹೇಳಿಕೆ

Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್‌ ವಿವಾದಾಸ್ಪದ ಹೇಳಿಕೆ

Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್‌ ರೈಲು!

Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್‌ ರೈಲು!

ಸಿರಿಯಾ ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?

Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?

PM Modi: ಒಂದೂವರೆ ವರ್ಷದಲ್ಲಿ 10 ಲಕ್ಷ ಸರಕಾರಿ ಉದ್ಯೋಗ

PM Modi: ಒಂದೂವರೆ ವರ್ಷದಲ್ಲಿ 10 ಲಕ್ಷ ಸರಕಾರಿ ಉದ್ಯೋಗ

Allu Arjun ಮನೆಗೆ ದಾಳಿ: ಕಾಂಗ್ರೆಸ್‌ ಕೈವಾಡ?

Allu Arjun ಮನೆಗೆ ದಾಳಿ: ಕಾಂಗ್ರೆಸ್‌ ಕೈವಾಡ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

ಆಯನೂರು ಮಂಜುನಾಥ್

Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?

Former Supreme Court Judge ವಿ.ಸುಬ್ರಹ್ಮಣಿಯನ್‌ ಎನ್‌ಎಚ್‌ಆರ್‌ಸಿ ಮುಖ್ಯಸ್ಥ

Former Supreme Court Judge ವಿ.ಸುಬ್ರಹ್ಮಣಿಯನ್‌ ಎನ್‌ಎಚ್‌ಆರ್‌ಸಿ ಮುಖ್ಯಸ್ಥ

Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್‌ ವಿವಾದಾಸ್ಪದ ಹೇಳಿಕೆ

Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್‌ ವಿವಾದಾಸ್ಪದ ಹೇಳಿಕೆ

Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್‌ ರೈಲು!

Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್‌ ರೈಲು!

ಸಿರಿಯಾ ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?

Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.